ರೋಹಿತ್‌ ವೇಮುಲ ಮರೆತ ತೆಲಂಗಾಣ ಚುನಾವಣೆ; ದಲಿತರು ಈಗ ವಿಪಕ್ಷಗಳಿಗೂ ಬೇಕಾಗಿಲ್ಲ
COVER STORY

ರೋಹಿತ್‌ ವೇಮುಲ ಮರೆತ ತೆಲಂಗಾಣ ಚುನಾವಣೆ; ದಲಿತರು ಈಗ ವಿಪಕ್ಷಗಳಿಗೂ ಬೇಕಾಗಿಲ್ಲ

ವೇಮುಲ ಸಾವು ಹಾಗೂ ದಲಿತ ವಿಚಾರಗಳು ವಿಧಾನಸಭಾ ಚುನಾವಣೆಗಿಂತ 2019ರ ಲೋಕಸಭಾ ಚುನಾವಣೆಯಲ್ಲಿ ಫಲಕೊಡುವುದೇ ಹೆಚ್ಚು ಎಂಬ ಲೆಕ್ಕಾಚಾರದಲ್ಲಿ ವಿರೋಧ ಪಕ್ಷಗಳು ಇರುವಂತಿದೆ.

ನೆರೆಯ ರಾಜ್ಯ ತೆಲಂಗಾಣದ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಟಾರ್ ಕ್ಯಾಂಪೇನರ್‌ಗಳ ಮೂಲಕ ಭರ್ಜರಿ ಪ್ರಚಾರ ನಡೆಸುತ್ತಿದೆ. ಪಕ್ಷಗಳು ಚುನಾವಣಾ ಪ್ರಚಾರ ಶುರುವಿಟ್ಟುಕೊಂಡ ಆರಂಭದಿಂದಲೂ ಆರೋಪ- ಪ್ರತ್ಯಾರೋಪ, ಟೀಕೆ- ತಿರುಗೇಟುಗಳಲ್ಲೇ ಮುಳುಗಿವೆ. ಎರಡು ವರ್ಷಗಳ ಹಿಂದೆ ಭಾರೀ ಸದ್ದು ಮಾಡಿದ್ದ ರೋಹಿತ್‌ ವೇಮುಲ ಆತ್ಮಹತ್ಯೆಯಾಗಲೀ, ದಲಿತ, ಹಿಂದುಳಿದ ವರ್ಗಗಳ ಸಮಸ್ಯೆಗಳಾಗಲೀ ತೆಲಂಗಾಣ ಚುನಾವಣೆಯಲ್ಲಿ ಮುನ್ನೆಲೆಯಲ್ಲಿಲ್ಲ.

ರೋಹಿತ್‌ ವೇಮುಲ ಸಾವು ಅಸಮಾನತೆಯ ಕಾರಣಕ್ಕೆ ನಡೆದ ಆತ್ಮಹತ್ಯೆ ಎಂಬ ಕಾರಣಕ್ಕೆ 2016ರಲ್ಲಿ ವಿಪಕ್ಷಗಳು, ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ತಿರುಗಿ ಬಿದ್ದಿದ್ದವು. ರೋಹಿತ್‌ ವೇಮುಲ ಸಾವಿಗೆ ಪರೋಕ್ಷವಾಗಿ ಕೇಂದ್ರದಲ್ಲಿದ್ದ ಬಿಜೆಪಿ ಸರಕಾರವೇ ಕಾರಣ ಎಂದು ಆರೋಪಿಸಿದ್ದ ವಿಪಕ್ಷಗಳು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದಲಿತ ವಿಚಾರವನ್ನು ಪ್ರಸ್ತಾಪಿಸುತ್ತಲೇ ಇಲ್ಲ.

ಹೈದರಾಬಾದ್‌ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್‌ ವೇಮುಲ 2016ರ ಜನವರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ವಿಶ್ವವಿದ್ಯಾಲಯಗಳಲ್ಲಿ ಮೇಲ್ಜಾತಿಯ ಬೋಧಕರು ಹಾಗೂ ವಿದ್ಯಾರ್ಥಿಗಳಿಂದ ಆಗುವ ತಾರತಮ್ಯವೇ ಈ ಆತ್ಮಹತ್ಯೆಗೆ ಕಾರಣ ಎಂದು ಆಗ ಆರೋಪಿಸಿದ್ದ ವಿಪಕ್ಷಗಳು ಇದಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವನ್ನು ನೇರ ಗುರಿಯಾಗಿಸಿದ್ದವು.

ಆದರೆ, ಚುನಾವಣಾ ಸಂದರ್ಭದಲ್ಲಿ ವಿಪಕ್ಷಗಳು ರೋಹಿತ್‌ ವೇಮುಲ ಸಾವು, ದಲಿತರ ಸಮಸ್ಯೆಗಳು ಹಾಗೂ ಹಿಂದುಳಿದ ವರ್ಗಗಳ ವಿಚಾರವಾಗಿ ಮೌನಕ್ಕೆ ಶರಣಾಗಿವೆ. ಬಿಜೆಪಿ ಹಿಂದುತ್ವವನ್ನಷ್ಟೇ ಚುನಾವಣಾ ವಿಷಯವಾಗಿಸಿಕೊಂಡರೆ ಅದಕ್ಕೆ ವಿರೋಧ ಎಂಬಂತೆ ಮಾತ್ರ ವಿಪಕ್ಷಗಳು ಚುನಾವಣಾ ರ್ಯಾಲಿ ನಡೆಸುತ್ತಿವೆ. ವಿಪಕ್ಷಗಳ ಸ್ಥಾನದಲ್ಲಿರುವ ಕಾಂಗ್ರೆಸ್‌ ಹಾಗೂ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಅಪ್ಪಿತಪ್ಪಿಯೂ ವೇಮುಲ, ದಲಿತ ಹಾಗೂ ಹಿಂದುಳಿದ ವರ್ಗಗಳ ವಿಚಾರವನ್ನು ಚುನಾವಣಾ ಸಭೆಗಳಲ್ಲಿ ಪ್ರಸ್ತಾಪ ಮಾಡುತ್ತಿಲ್ಲ.

ವಾಸ್ತವವಾಗಿ ತೆಲಂಗಾಣದಲ್ಲಿ ಬಿಜೆಪಿ ಕೇವಲ ಸದ್ದು ಮಾಡುತ್ತಿದೆಯೇ ಹೊರತು ಆ ಸದ್ದಿಗೆ ತಕ್ಕಷ್ಟು ಮತಗಳು ಬಿಜೆಪಿ ಒಲಿಯುವುದರಲ್ಲಿ ಅನುಮಾನವಿದೆ. ತೆಲಂಗಾಣದಲ್ಲಿ ನಿಜವಾಗಿಯೂ ಜಿದ್ದಾಜಿದ್ದಿ ಇರುವುದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮತ್ತು ಕಾಂಗ್ರೆಸ್‌ ನಡುವೆ ಎನ್ನಲಾಗುತ್ತಿದೆ. ಹಾಗೆಂದು ಭರ್ಜರಿ ಪ್ರಚಾರದಿಂದ ಬಿಜೆಪಿಯೇನೂ ಹಿಂದೆ ಉಳಿದಿಲ್ಲ. ಹಿಂದೂ – ಮುಸ್ಲಿಂ ಧರ್ಮಗಳ ಆಧಾರದಲ್ಲಿ ಸಾಂಪ್ರದಾಯಿಕ ಮತಬ್ಯಾಂಕ್‌ ಒಡೆಯುವ ಪ್ರಯತ್ನಕ್ಕೆ ಇಲ್ಲಿ ಬಿಜೆಪಿ ಕೈ ಹಾಕಿದೆ.

ಟಿಆರ್‌ಎಸ್‌ ಮತ್ತು ಬಿಜೆಪಿಯನ್ನು ಕಟ್ಟಿಹಾಕುವ ಕಾರಣಕ್ಕಾದರೂ ಕಾಂಗ್ರೆಸ್‌ ತೆಲಂಗಾಣದಲ್ಲಿ ರೋಹಿತ್‌ ವೇಮುಲ ವಿಚಾರವನ್ನಾಗಲೀ, ದಲಿತ, ಹಿಂದುಳಿದ ವರ್ಗದ ವಿಚಾರವನ್ನಾಗಲೀ ಪ್ರಸ್ತಾಪಿಸುತ್ತಿಲ್ಲ. ದಲಿತ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಸಂಘ ಪರಿವಾರದ ಅಸಮಾನತೆಯನ್ನು ಹಣಿಯುವ ಅವಕಾಶವಿದ್ದರೂ ಈವರೆಗೆ ಕಾಂಗ್ರೆಸ್‌ ಆ ಪ್ರಯತ್ನವನ್ನೇ ನಡೆಸಿಲ್ಲ.

ಪಕ್ಷಗಳಿಗೆ ದಲಿತರ ವಿಚಾರ ರಾಜಕೀಯ ಲಾಭಕ್ಕಾಗಿ ಮಾತ್ರ ಎಂಬಂತಾಗಿದೆ. ಯಾವ ಪಕ್ಷಗಳೂ ದಲಿತರ ವಿಚಾರದಲ್ಲಿ ಗಂಭೀರವಾಗಿಲ್ಲ. ದಲಿತರ ಸಮಸ್ಯೆಗಳ ವಿಚಾರದಲ್ಲಿ ಯಾವ ಪಕ್ಷಗಳಿಗೂ ಬದ್ಧತೆ ಇಲ್ಲ. ಇದು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಣುತ್ತಿದೆ.
- ಪ್ರೊ. ವಿಶ್ವೇಶ್ವರ್‌ ರಾವ್‌, ಪ್ರಾಧ್ಯಾಪಕರು, ಉಸ್ಮಾನಿಯಾ ವಿಶ್ವವಿದ್ಯಾಲಯ

ದಲಿತರು ಹಾಗೂ ಹಿಂದುಳಿದ ವರ್ಗದ ವಿಚಾರಗಳನ್ನು ಚುನಾವಣಾ ವಿಷಯವಾಗಿಸಿಕೊಳ್ಳುವ ಅವಕಾಶವನ್ನು ತೆಲಂಗಾಣದಲ್ಲಿ ಕಾಂಗ್ರೆಸ್‌ ಕೈಚೆಲ್ಲಿ ಕೂತಿದೆ. ಕಾಂಗ್ರೆಸ್‌ ಮಾತ್ರವಲ್ಲ ಮತ್ತೊಂದು ಪ್ರಮುಖ ವಿಪಕ್ಷವಾಗಿರುವ ಟಿಡಿಪಿ ಕೂಡಾ ದಲಿತರ ವಿಚಾರಗಳನ್ನು ಮರೆತಂತೆ ವರ್ತಿಸುತ್ತಿದೆ.

ಬಹುತೇಕ ರಾಜಕೀಯ ಪಕ್ಷಗಳಿಗೆ ಈಗ ದಲಿತರ ವಿಚಾರ ಬೇಕಾಗಿಲ್ಲ. ದಲಿತರ ವಿಚಾರದಲ್ಲಿ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಅಗತ್ಯ. ಆದರೆ, ವೇಮುಲ ಸಾವಿನ ಸಂದರ್ಭದಲ್ಲಿ ಅದನ್ನು ರಾಜಕೀಯಕ್ಕೆ ಬಳಸಿಕೊಂಡ ವಿಪಕ್ಷಗಳೂ ಈಗ ಚುನಾವಣಾ ವಿಷಯವಾಗಿ ಅದನ್ನು ಮುನ್ನೆಲೆಗೆ ತರುತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದಲಿತರು ರಾಜಕೀಯ ಪಕ್ಷಗಳಿಗೆ ಕೇವಲ ಓಟ್‌ ಬ್ಯಾಂಕ್‌ ಅಷ್ಟೇ. ಅವರ ಸಮಸ್ಯೆಗಳ ಬಗ್ಗೆ ಯಾರಿಗೂ ಗಮನವಿಲ್ಲ.

ವೇಮುಲ ಸಾವು ಕೇವಲ ಒಂದು ಸಾವಿನ ಪ್ರಕರಣವಲ್ಲ. ಅದು ಇಡೀ ದಲಿತರು, ಹಿಂದುಳಿದ ವರ್ಗಗಳ ಸಮಸ್ಯೆಗಳ ಸಂಕೇತ. ವೇಮುಲ ಸಾವಿನ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ಮೂಲಕ ದಲಿತ ಸಮುದಾಯಕ್ಕೆ ಹೆಚ್ಚಿನ ಗಮನ ಹರಿಸುವ ಅವಕಾಶ ಚುನಾವಣಾ ಸಂದರ್ಭದಲ್ಲಿದೆ. ತೆಲಂಗಾಣದಲ್ಲಿ 5ರಿಂದ 9ನೇ ತರಗತಿಯ ಸುಮಾರು 90% ದಲಿತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ ಎನ್ನಲಾಗಿದೆ. ಇಂಥ ಗಂಭೀರವಾದ ದಲಿತರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳೂ ಈ ಬಾರಿ ಚುನಾವಣಾ ವಿಷಯಗಳಾಗುತ್ತಿಲ್ಲ.

ರೋಹಿತ್‌ ವೇಮುಲ ಆತ್ಮಹತ್ಯೆಗೆ ಬಿಜೆಪಿಯನ್ನೇದೂಷಿಸಲಾಗಿತ್ತು. ಟಿಆರ್‌ಎಸ್‌ ಮತ್ತು ಕಾಂಗ್ರೆಸ್‌ ಇದನ್ನು ಸ್ಥಳೀಯ ವಿಷಯವಾಗಿಸುವುದಕ್ಕಿಂತ ರಾಷ್ಟ್ರೀಯ ವಿಷಯವಾಗಿಸುವ ಪ್ರಯತ್ನದಲ್ಲಿವೆ. ಹೀಗಾಗಿ ವಿಧಾನಸಭಾ ಚುನಾವಣೆಗೆ ವೇಮುಲ ಹೆಸರನ್ನೇ ಇವು ಎತ್ತುತ್ತಿಲ್ಲ.
- ಪಲವಾಯ್‌ ರಾಘವೇಂದ್ರ ರೆಡ್ಡಿ, ರಾಜಕೀಯ ವಿಶ್ಲೇಷಕ, ಹೈದರಾಬಾದ್

ವೇಮುಲ ಆತ್ಮಹತ್ಯೆ ಹಾಗೂ ದಲಿತರ ಸಮಸ್ಯೆಗಳು ವಿಧಾನಸಭಾ ಚುನಾವಣೆಯ ವಿಷಯಗಳಾಗದಿದ್ದರೂ 2019ರ ಲೋಕಸಭಾ ಚುನಾವಣೆಗೆ ವಿಪಕ್ಷಗಳಿಗೆ ಪ್ರಮುಖ ವಿಚಾರಗಳಾಗಲಿವೆ. ವಿಧಾನಸಭಾ ಚುನಾವಣೆಯಲ್ಲಿ ಈ ವಿಷಯಗಳ ರಾಜಕೀಯ ಲಾಭ ಕಡಿಮೆ ಎಂದು ಭಾವಿಸಿರುವಂತಿರುವ ವಿಪಕ್ಷಗಳು ಈ ವಿಚಾರಗಳನ್ನು ಲೋಕಸಭಾ ಚುನಾವಣೆಯ ವೇಳೆಗೆ ರಾಷ್ಟ್ರೀಯ ವಿಷಯವಾಗಿ ರಾಜಕೀಯಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ರೋಹಿತ್‌ ವೇಮುಲ ಸಾವು, ದಲಿತ, ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ವಿಧಾನಸಭಾ ಚುನಾವಣೆಗಿಂತ ಲೋಕಸಭಾ ಚುನಾವಣೆಯಲ್ಲಿ ಫಲಕೊಡುವುದೇ ಹೆಚ್ಚು ಎಂಬ ಲೆಕ್ಕಾಚಾರದಲ್ಲಿರುವ ವಿಪಕ್ಷಗಳು ಸದ್ಯಕ್ಕೆ ದಲಿತ ವಿಚಾರಗಳಿಗೆ ಹೆಪ್ಪು ಹಾಕಿಕೊಂಡು ಕಾದು ಕುಳಿತಿವೆ.

ಮಾಹಿತಿ ಮೂಲ: ದಿ ಪ್ರಿಂಟ್