ಕುಸಿಯುತ್ತಿದೆ ಈರುಳ್ಳಿ ಬೆಲೆ; ರಾಜ್ಯದ ರೈತರ ಕೈ ಹಿಡಿಯಲಿದೆಯೇ ‘ಭಾವಾಂತರ’ ಯೋಜನೆ?
COVER STORY

ಕುಸಿಯುತ್ತಿದೆ ಈರುಳ್ಳಿ ಬೆಲೆ; ರಾಜ್ಯದ ರೈತರ ಕೈ ಹಿಡಿಯಲಿದೆಯೇ ‘ಭಾವಾಂತರ’ ಯೋಜನೆ?

ಸದ್ಯ ಈರುಳ್ಳಿ ಬೆಳೆಗಾರರು ಬೆಲೆ ಕುಸಿತದ ಆತಂಕದಲ್ಲಿದ್ದಾರೆ. ಈ ಹೊತ್ತಿನಲ್ಲಿ ರಾಜ್ಯ ಸರಕಾರ ಕೊಟ್ಟಹಾಗೂ ಇಲ್ಲ ಬಿಟ್ಟಹಾಗೂ ಇಲ್ಲ ಎಂಬಂಥ ಆದೇಶವೊಂದನ್ನು ಹೊರಡಿಸಿದೆ.

ಆ ರೈತ ಬೆಳೆದ ಬೆಳೆಗೆ ಸಿಕ್ಕಿದ್ದು ‘ಭರ್ಜರಿ’ ಎನ್ನುವಂಥ ಬೆಲೆ! ಬೆಳೆಗೆ ಸಿಕ್ಕ ಈ ಭರ್ಜರಿ ಬೆಲೆಯಿಂದಾದ ಸಂತೋಷ ತಾಳಲಾರದೆ ಆ ರೈತ ‘ಲಾಭ’ದ ಹಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನಿ ಆರ್ಡರ್‌ ಮಾಡಿದ್ದ. ಬೆಳೆಗೆ ಸಿಕ್ಕ ಬೆಲೆಯ ‘ಲಾಭ’ ಎಷ್ಟಿತ್ತೆಂದರೆ ಇನ್ನು ಮುಂದೆ ಆ ರೈತ ಮತ್ತೆ ಆ ಬೆಳೆಯನ್ನು ಬೆಳೆಯುವ ಅಗತ್ಯವೇ ಇರಲಿಲ್ಲ!

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರಿವಾರ ಪಠಿಸುವ ಅಚ್ಛೇದಿನ್‌ ‘ಆ ಒಬ್ಬ’ ರೈತನ ಪಾಲಿಗಾದರೂ ಸಾಕಾರವಾಯಿತು ಎಂದುಕೊಳ್ಳುತ್ತಿದ್ದೀರಾ? ಈಗಲೂ ನೀವು ಅಚ್ಛೇದಿನ್‌ ಬಗ್ಗೆ ಕನಸು ಕಾಣುತ್ತಿದ್ದರೆ ಮತ್ತೊಮ್ಮೆ ಮೂರ್ಖರಾದಂತೆಯೆ. ಆ ರೈತ ಬೆಳೆದ ಬೆಳೆಯ ಹೆಸರು ಈರುಳ್ಳಿ ಮತ್ತು ಸಿಕ್ಕ ಭರ್ಜರಿ ಬೆಲೆ ಕೆ.ಜಿ.ಗೆ ಒಂದು ರೂಪಾಯಿ!

ಮೊನ್ನೆ ಇನ್ನೂ ಕನಿಷ್ಠ ಬೆಂಬಲ ಬೆಲೆಯ ಕಾನೂನಿಗೆ ಒತ್ತಾಯಿಸಿ ರೈತರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ರೈತರ ಸಂಕಷ್ಟವನ್ನು ಕೇಂದ್ರ ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದರು. ಈಗ ಮಹಾರಾಷ್ಟ್ರದ ನಾಸಿಕ್‌ನ ರೈತ ಈರುಳ್ಳಿ ಬೆಳೆಗೆ ಸಿಕ್ಕ ಹಣವನ್ನು ಪೂರ್ತಿಯಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಿಸಿದ್ದಾರೆ. ಈ ಮೂಲಕ ಈರುಳ್ಳಿ ಬೆಳೆಗಾರರ ಸಂಕಟದ ಬಗ್ಗೆ ಪ್ರಧಾನಿಯ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ನಾಸಿಕ್‌ ಜಿಲ್ಲೆಯ ನಿಫಾದ್‌ ತಾಲ್ಲೂಕಿನ ರೈತ ಸಂಜಯ್‌ ಸಾಠೆ 750 ಕೆ.ಜಿ. ಈರುಳ್ಳಿ ಬೆಳೆದಿದ್ದರು. ಬೆಳೆ ಕೈಗೆ ಬರುವ ಹೊತ್ತಿಗೆ ಸಿಕ್ಕ ಬೆಲೆ ಕೆ.ಜಿ.ಗೆ 1 ರೂಪಾಯಿ. ಅಂತೂ ಇಂತೂ ದಳ್ಳಾಳಿಗಳ ಬಳಿ ಚೌಕಾಶಿ ಮಾಡಿದ ಮೇಲೆ ಸಿಕ್ಕ ಬೆಲೆ ಕೆ.ಜಿ.ಗೆ 1 ರೂಪಾಯಿ 40 ಪೈಸೆ. ಸಂಜಯ್‌ ಬೆಳೆದ ಒಟ್ಟು ಈರುಳ್ಳಿಗೆ ಸಿಕ್ಕ ಹಣ 1,064 ರೂಪಾಯಿ. ಈ ಹಣವನ್ನು ಮೋದಿಗೆ ಮನಿ ಆರ್ಡರ್‌ ಮಾಡುವ ಮೂಲಕ ಸಂಜಯ್‌ ರೈತರ ಪರವಾಗಿ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ.

ಇದು ಕೇವಲ ನಾಸಿಕ್‌ನ ಸಂಜಯ್‌ ಒಬ್ಬರ ಕಥೆಯಲ್ಲ, ದೇಶದ ಎಲ್ಲಾ ರೈತರ ವ್ಯಥೆಯೂ ಇಂಥದ್ದೇ. ಬೆಳೆ ಬೆಳೆಯಲು ಹಾಕಿದ ಕನಿಷ್ಠ ಬೆವರ ಕೂಲಿಯೂ ಹುಟ್ಟದ ಪರಿಸ್ಥಿತಿ ಬಹುತೇಕ ಬೆಳೆಗಳಿಗೆ ಇದೆ. ಈರುಳ್ಳಿ ಬೆಳೆದ ರೈತರ ಸ್ಥಿತಿಯಂತೂ ಈಗ ಚಿಂತಾಜನಕವಾಗಿದೆ. ಬಹುತೇಕ ರೈತರು ಬೆಳೆ ಕಟಾವಿಗೆ ಕೈಹಾಕದೆ ಈರುಳ್ಳಿಯನ್ನು ಉಳುಮೆ ಮಾಡಿ ಮಣ್ಣು ಸೇರಿಸಿದ್ದಾರೆ. ಈರುಳ್ಳಿ ಹೆಚ್ಚುವಾಗ ಮಾತ್ರವಲ್ಲ ಬೆಳೆದ ಮೇಲೂ ಕಣ್ಣೀರು ಹಾಕುವ ಸ್ಥಿತಿಯಲ್ಲಿ ರೈತರಿದ್ದಾರೆ.

ಭಾರತದ ಈರುಳ್ಳಿ ಉತ್ಪಾದನೆಯ ಶೇಕಡ 50ರಷ್ಟು ಈರುಳ್ಳಿ ಮಹಾರಾಷ್ಟ್ರದ ನಾಸಿಕ್‌ನಲ್ಲೇ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಬಾಗಲಕೋಟೆಯಿಂದ ಚಿತ್ರದುರ್ಗದವರೆಗೂ ಬಯಲು ಸೀಮೆಯ ಪ್ರಮುಖ ಬೆಳೆಗಳಲ್ಲಿ ಈರುಳ್ಳಿಯೂ ಒಂದು. ಕೆಲವೊಮ್ಮೆ ಬಂಪರ್‌ ಬೆಲೆ ಗಿಟ್ಟಿಸಿಕೊಳ್ಳುವ ಈರುಳ್ಳಿ ಈ ಬಾರಿ ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಚೀಲಕ್ಕೆ ತುಂಬುವ ಕೂಲಿಯೂ ಗಿಟ್ಟದಂಥ ಮಟ್ಟಿಕ್ಕೆ ಬೆಲೆ ಕುಸಿತವಾಗಿರುವುದರಿಂದ ಈರುಳ್ಳಿ ಬೆಳೆದ ರೈತರು ಕಂಗಾಲಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ರಸ್ತೆಗೆ ಈರುಳ್ಳಿ ಚೆಲ್ಲಿ ರೈತರ ಪ್ರತಿಭಟನೆ
ಮಹಾರಾಷ್ಟ್ರದಲ್ಲಿ ರಸ್ತೆಗೆ ಈರುಳ್ಳಿ ಚೆಲ್ಲಿ ರೈತರ ಪ್ರತಿಭಟನೆ

ಭರ್ಜರಿ ಬೆಲೆ ಸಿಕ್ಕಿದ್ದ ದಿನಗಳವು:

ಈರುಳ್ಳಿ ಬೆಳೆದ ರೈತರು ಈಗ ನಷ್ಟದ ಆತಂಕದಲ್ಲಿದ್ದಾರೆ. ಆದರೆ, ಮೂರ್ನಾಲ್ಕು ವರ್ಷಗಳ ಹಿಂದೆ ಈರುಳ್ಳಿ ಬೆಲೆ ಶತಕ ದಾಟಿತ್ತು. ಕೆ.ಜಿ. ಈರುಳ್ಳಿ 100 ರೂಪಾಯಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿತ್ತು. ಆಗ ಉತ್ತಮ ಇಳುವರಿ ಪಡೆದಿದ್ದ ಈರುಳ್ಳಿ ಬೆಳೆಗಾರರು ಒಂದೇ ಬೆಳೆಯಲ್ಲಿ ಲಕ್ಷಾದೀಶ್ವರರಾಗಿದ್ದರು. ಆದರೆ, ಅದೇ ಕೊನೆ, ಅಲ್ಲಿಂದ ಈಚೆಗೆ ಈರುಳ್ಳಿ ಬೆಳೆಗಾರರಿಗೆ ಆ ಬಗೆಯ ಭರ್ಜರಿ ಬೆಲೆ ಕನಸಾಗಿಯೇ ಉಳಿದಿದೆ. ಬೆಳೆ ಬೆಳೆಯಲು ಹಾಕಿದ ಬಂಡವಾಳದ ಮೇಲೆ ಒಂದಷ್ಟು ಲಾಭ ಸಿಕ್ಕರೆ ರೈತರು ಅದರಲ್ಲೇ ತೃಪ್ತಿಪಟ್ಟುಕೊಳ್ಳುವ ಸ್ಥಿತಿ ಈಗಿದೆ.

“ಈರುಳ್ಳಿಗೆ ಒಳ್ಳೆಯ ಬೆಲೆ ಸಿಕ್ಕು ಆಗಲೇ ಮೂರ್ನಾಲ್ಕು ವರ್ಷಗಳಾದವು. ಫಲವತ್ತಾದ ಭೂಮಿ, ಹದವಾದ ಮಳೆ, ಉತ್ತಮ ಬೇಸಾಯ ಇದ್ದರೆ ಒಂದು ಎಕರೆ ಜಮೀನಿನಲ್ಲಿ ನೂರು ಕ್ವಿಂಟಾಲ್‌ವರೆಗೆ ಈರುಳ್ಳಿ ಬೆಳೆಯಲು ಸಾಧ್ಯ. ಒಂದು ಎಕರೆ ಈರುಳ್ಳಿ ಬೆಳೆಯಲು ಕನಿಷ್ಠ 30 ಸಾವಿರ ರೂಪಾಯಿ ಖರ್ಚಾಗುತ್ತದೆ. ಕೆ.ಜಿ. ಈರುಳ್ಳಿಗೆ ಕನಿಷ್ಠ 10 ರೂಪಾಯಿ ಬೆಲೆಯಾದರೂ ಸಿಕ್ಕರೆ ಬೆಳೆದ ರೈತನಿಗೆ ನೆಮ್ಮದಿ. ಅದಕ್ಕಿಂತ ಕಡಿಮೆ ಬೆಲೆ ಸಿಕ್ಕರೆ ಏನೂ ಪ್ರಯೋಜನವಿಲ್ಲ. ಅಲ್ಲಿ ಹಾಕಿದ್ದು ಅಲ್ಲಿಗೆ ಸರಿಹೋಗುತ್ತದೆ. ಆ ಸಂಪತ್ತಿಗೆ ಬೆಳೆಯನ್ನೇಕೆ ಬೆಳೆಯಬೇಕು” ಎಂಬ ಪ್ರಶ್ನೆ ಚಿತ್ರದುರ್ಗ ಭಾಗದ ರೈತರೊಬ್ಬರದ್ದು.

“ಈರುಳ್ಳಿಗೆ ಹೇಗೆ ಯಾವಾಗಲೂ ಒಂದೇ ರೀತಿಯ ಬೆಲೆ ಇರುವುದಿಲ್ಲವೋ ಅದೇ ರೀತಿ ಒಂದೇ ರೀತಿಯ ಇಳುವರಿಯೂ ಸಿಗುವುದಿಲ್ಲ. ಬೀಜ ಹಾಕಿದ ಮೇಲೆ ಹದವಾದ ಮಳೆ ಸಿಗದಿದ್ದರೆ ಇಳುವರಿ ಕಡಿಮೆಯಾಗುತ್ತದೆ. ಕಳೆ ಹೆಚ್ಚಾದರೆ, ಮಳೆ ಹೆಚ್ಚಾದರೆ, ಕೀಳಿಸಿದ ಮೇಲೆ ಮಳೆ ಬಂದರೆ ರೈತನಿಗೆ ನಷ್ಟ ತಪ್ಪಿದ್ದಲ್ಲ. ಅಂತಿಮವಾಗಿ ಬೆಳೆ ಚೀಲಕ್ಕೆ ತುಂಬಿ ಮಾರಾಟಗಾರರಿಂದ ನಮಗೆ ಹಣ ಬಂದ ಮೇಲೆಯೇ ಬೆಳೆಯ ಲೆಕ್ಕ. ಹೀಗಾಗಿ ರೈತ ಸದಾ ಆತಂಕದಲ್ಲೇ ಬದುಕುವ ಸ್ಥಿತಿ ಇದೆ” ಎನ್ನುತ್ತಾರೆ ಅವರು.

ಇತರೆ ಬೆಳಗಳಂತೆ ಈರುಳ್ಳಿ ವಾರಕ್ಕೆಲ್ಲಾ ಕೊಳೆಯುವ ಕೃಷಿ ಉತ್ಪನ್ನವಲ್ಲ. ಹಳ್ಳಿಗಳಲ್ಲಿ ತಿಂಗಳುಗಟ್ಟಲೆ, ಸರಿಯಾಗಿ ಒಣಗಿಸಿದರೆ ವರ್ಷಗಟ್ಟಲೆ ಈರುಳ್ಳಿ ಸಂಗ್ರಹಿಸಿಟ್ಟುಕೊಳ್ಳುವ ಪರಿಪಾಠವಿದೆ. ಆದರೆ, ರಾಶಿ ರಾಶಿ ಈರುಳ್ಳಿಯನ್ನು ಸರಿಯಾಗಿ ಸಂಗ್ರಹಿಸಿಟ್ಟುಕೊಂಡು ಬೆಲೆ ಸಿಕ್ಕಾಗ ಮಾರುವ ವೈಜ್ಞಾನಿಕ ವ್ಯವಸ್ಥೆ ನಮ್ಮಲ್ಲಿನ್ನೂ ಜಾರಿಗೆ ಬಂದಿಲ್ಲ. ವೈಜ್ಞಾನಿಕವಾಗಿ ಸಂಗ್ರಹಿಸುವ ವ್ಯವಸ್ಥೆ ಬರುವವರೆಗೂ ರೈತರಿಗೆ ಈ ಬಗೆಯ ಆತಂಕ ತಪ್ಪಿದ್ದಲ್ಲ.

“ಜುಟ್ಟು ಕುಯ್ದ ಈರುಳ್ಳಿಯನ್ನು ಹೆಚ್ಚೆಂದರೆ ಒಂದು ತಿಂಗಳವರೆಗೆ ಸಂಗ್ರಹಿಸಿಟ್ಟುಕೊಳ್ಳಬಹುದು. ಆದರೆ, ಒಂದು ತಿಂಗಳ ನಂತರ ಈಗಿದ್ದ ಬೆಲೆಗಿಂತಲೂ ಬೆಲೆ ಕುಸಿತವಾದರೆ ಎಂಬ ಆತಂಕದಿಂದ ರೈತರು ಹೊಲದ ಮೇಲೆಯೇ ಬೆಳೆ ಮಾರಾಟ ಮುಗಿಸುತ್ತಾರೆ. ಬೆಳೆದ ರೈತರು ಮತ್ತು ಬಳಸುವ ಗ್ರಾಹಕರಿಗಿಂತ ಹೆಚ್ಚಿನ ಲಾಭ ಮಾಡಿಕೊಳ್ಳುವುದು ಮಧ್ಯವರ್ತಿಗಳು ಮಾತ್ರ. ಕೃಷಿ ಉತ್ಪನ್ನಗಳ ಬೆಲೆ ನಿಗದಿಯ ಮೇಲೆ ಸರಕಾರಕ್ಕಿಂತ ಮಧ್ಯವರ್ತಿಗಳ ನಿಯಂತ್ರಣವೇ ಹೆಚ್ಚು. ಬೆಲೆ ಹೆಚ್ಚಾಗಲಿ, ಕಡಿಮೆಯಾಗಲಿ ಮಧ್ಯವರ್ತಿಗಳಿಗಂತೂ ನಷ್ಟವಾಗುವುದಿಲ್ಲ” ಎನ್ನುತ್ತಾರೆ ರೈತರು.

ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 7 ರೂಪಾಯಿಗಿಂತ ಕಡಿಮೆಯಾಗದಂತೆ ತಡೆಯಲು ಪ್ರಾಯೋಗಿಕವಾಗಿ ಭಾವಾಂತರ ಯೋಜನೆಯನ್ನು ಪರಿಚಯಿಸಲಾಗಿದೆ. ಈರುಳ್ಳಿ ಬೆಲೆ ಪ್ರತಿ ಕ್ವಿಂಟಾಲ್‌ಗೆ 550 ರೂಪಾಯಿ ಆದಲ್ಲಿ ಉಳಿದ 150 ರೂಪಾಯಿಯನ್ನು ಸರಕಾರ ಭರಿಸುತ್ತದೆ. ರೈತರಿಗೆ ಪೂರ್ತಿಯಾಗಿ ನಷ್ಟವಾಗುವುದನ್ನು ತಡೆಯಲು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಈರುಳ್ಳಿ ಹೆಚ್ಚಾಗಿ ಬೆಳೆಯುವ ಗದಗ, ಧಾರವಾಡ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಿಗೆ ಅನ್ವಯಿಸಲಾಗಿದೆ.
- ಪ್ರಕಾಶ್‌ ಕಮ್ಮರಡಿ, ಅಧ್ಯಕ್ಷರು, ಕರ್ನಾಟಕ ಕೃಷಿ ಬೆಲೆ ನಿಯಂತ್ರಣ ಆಯೋಗ

ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಈರುಳ್ಳಿಗೆ ಹಾಗೂ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ ಎಂದು ಈ ಕುರಿತ ಸರಕಾರದ ಆದೇಶ ಹೇಳುತ್ತದೆ. ಅಲ್ಲದೆ, ಈರುಳ್ಳಿ ಬೆಲೆ ಒಂದು ವೇಳೆ ಪ್ರತಿ ಕೆ.ಜಿ.ಗೆ 1 ರೂಪಾಯಿಗೆ ಬಂದು ನಿಂತರೆ ಸರಕಾರದಿಂದ ಗರಿಷ್ಠ 2 ರೂಪಾಯಿ ಸಿಗಲಿದೆ. ಹೀಗಾಗಿ ಪ್ರತಿ ಕೆ.ಜಿ. ಈರುಳ್ಳಿಯ ಮಾರುಕಟ್ಟೆ ಬೆಲೆ 1 ರೂಪಾಯಿಗೆ ಕುಸಿತವಾದರೂ ರೈತರಿಗೆ 3 ರೂಪಾಯಿ ಬೆಲೆ ಸಿಗುತ್ತದೆ.

ನವೆಂಬರ್‌ 27ರಂದು ಸರಕಾರ ಹೊರಡಿಸಿದ ಆದೇಶ ಹೀಗಿದೆ:

ಕುಸಿಯುತ್ತಿದೆ ಈರುಳ್ಳಿ ಬೆಲೆ; ರಾಜ್ಯದ ರೈತರ ಕೈ ಹಿಡಿಯಲಿದೆಯೇ ‘ಭಾವಾಂತರ’ ಯೋಜನೆ?
ಕುಸಿಯುತ್ತಿದೆ ಈರುಳ್ಳಿ ಬೆಲೆ; ರಾಜ್ಯದ ರೈತರ ಕೈ ಹಿಡಿಯಲಿದೆಯೇ ‘ಭಾವಾಂತರ’ ಯೋಜನೆ?
ಕುಸಿಯುತ್ತಿದೆ ಈರುಳ್ಳಿ ಬೆಲೆ; ರಾಜ್ಯದ ರೈತರ ಕೈ ಹಿಡಿಯಲಿದೆಯೇ ‘ಭಾವಾಂತರ’ ಯೋಜನೆ?

2018-19 ಸಾಲಿಗೆ ಸದ್ಯ ಈರುಳ್ಳಿ ಬೆಳೆಗೆ ಮಾತ್ರ ರಾಜ್ಯ ಸರಕಾರ ಈ ಆದೇಶ ಹೊರಡಿಸಿದೆ. ಆದರೆ, ಇದು ನಾಲ್ಕು ಜಿಲ್ಲೆಗಳಿಗಷ್ಟೇ ಸೀಮಿತವಾಗಿರುವುದು ಹಾಗೂ ಕ್ವಿಂಟಾಲ್‌ಗೆ ಗರಿಷ್ಠ 200 ರೂಪಾಯಿ ಮಾತ್ರ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿರುವುದು ಈ ಆದೇಶದ ಮಿತಿ. ಈ ಆದೇಶ ಇಡೀ ರಾಜ್ಯಕ್ಕೆ ಅನ್ವಯವಾಗಬೇಕು ಎಂಬುದು ರೈತ ಮುಖಂಡರ ಒತ್ತಾಯ.

“ಈರುಳ್ಳಿಗೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ 1000 ರೂಪಾಯಿ ಬೆಲೆ ನಿಗದಿಯಾಗಬೇಕು. ಬೆಲೆ ಕುಸಿದ ಸಂದರ್ಭದಲ್ಲಿ ಉಳಿದ ನಷ್ಟದ ಮೊತ್ತವನ್ನು ಸರಕಾರ ಭರಿಸಬೇಕು. ಈ ಆದೇಶವನ್ನು ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಿರುವುದು ಸರಿಯಲ್ಲ. ರಾಜ್ಯದ ವಿವಿಧ ಭಾಗಗಳಲ್ಲೂ ಸಾಕಷ್ಟು ರೈತರು ಈರುಳ್ಳಿ ಬೆಳೆಯುತ್ತಾರೆ. ಹೀಗಾಗಿ ಇದೊಂದು ಅವೈಜ್ಞಾನಿಕ ಆದೇಶ” ಎಂಬುದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್‌ ಅವರ ಅಭಿಪ್ರಾಯ.

“ಪ್ರತಿ ಕ್ವಿಂಟಾಲ್‌ ಈರುಳ್ಳಿ ಬೆಲೆ 100 ರೂಪಾಯಿಗೆ ಕುಸಿತವಾದರೆ ಉಳಿದ 900 ರೂಪಾಯಿಯನ್ನು ಸರಕಾರ ಪ್ರೋತ್ಸಾಹ ಧನವಾಗಿ ಭರಿಸಬೇಕು. ಅದನ್ನು ಬಿಟ್ಟು ಸರಕಾರವೇ ಕ್ವಿಂಟಾಲ್‌ ಈರುಳ್ಳಿಯ ಮೂಲ ಬೆಲೆ 700 ರೂಪಾಯಿ ಎಂದು ಘೋಷಿಸಿ ಗರಿಷ್ಠ 200 ರೂಪಾಯಿಯನ್ನು ಮಾತ್ರ ಪ್ರೋತ್ಸಾಹ ಧನವಾಗಿ ಕೊಡುತ್ತೇವೆ ಎಂದು ಹೇಳುವುದು ಸರಿಯಲ್ಲ. ಈ ಆದೇಶವನ್ನು ಮರು ಪರಿಶೀಲಿಸಿ ಇಡೀ ರಾಜ್ಯಕ್ಕೆ ಅನ್ವಯವಾಗುವಂಥ ವೈಜ್ಞಾನಿಕ ಆದೇಶ ಹೊರಡಿಸಬೇಕು” ಎಂಬ ಒತ್ತಾಯ ಮಾಲಿ ಪಾಟೀಲ್‌ ಅವರದ್ದು.

ಅತ್ತ ನೆರೆಯ ಮಹಾರಾಷ್ಟ್ರದಲ್ಲಿ ರೈತರು ಈರುಳ್ಳಿಯನ್ನು ಬೀದಿಗೆ ಚೆಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲೂ ಬೆಲೆ ಕುಸಿತದ ಆತಂಕ ಸೃಷ್ಟಿಯಾಗಿದೆ. ಈ ಹೊತ್ತಿನಲ್ಲಿ ರಾಜ್ಯ ಸರಕಾರ ಕೊಟ್ಟಹಾಗೂ ಇಲ್ಲ ಬಿಟ್ಟಹಾಗೂ ಇಲ್ಲ ಎಂಬಂಥ ಆದೇಶವೊಂದನ್ನು ಹೊರಡಿಸಿದೆ. ಈ ಮೂಲಕ ಮತ್ತೊಮ್ಮೆ ಅಮಾಯಕ ರೈತರ ಕಣ್ಣೊರೆಸುವ ತಂತ್ರಕ್ಕೆ ರಾಜ್ಯ ಸರಕಾರ ಮುಂದಾಗಿದೆ.