‘ನಾನು ಸತ್ತಿಲ್ಲ ಬದುಕಿದ್ದೇನೆ’- ನೈಜೀರಿಯಾ ಅಧ್ಯಕ್ಷರಿಗೀಗ ‘ನಕಲಿ-ಅಸಲಿ’ ಪೀಕಲಾಟ!
COVER STORY

‘ನಾನು ಸತ್ತಿಲ್ಲ ಬದುಕಿದ್ದೇನೆ’- ನೈಜೀರಿಯಾ ಅಧ್ಯಕ್ಷರಿಗೀಗ ‘ನಕಲಿ-ಅಸಲಿ’ ಪೀಕಲಾಟ!

ಈಗಿರುವ ಅಧ್ಯಕ್ಷರು ಅಸಲಿಯಾ ನಕಲಿಯಾ ಎಂಬ ಗೊಂದಲ ನೈಜೀರಿಯಾ ಜನರಲ್ಲಿ ಹುಟ್ಟಿದೆ. ಪರಿಣಾಮ ‘ನಾನೇ ಅಸಲಿ ಅಧ್ಯಕ್ಷ’ ಎಂದು ಸಾಬೀತು ಮಾಡಲು ಅಧ್ಯಕ್ಷರು ಪರದಾಡುತ್ತಿದ್ದಾರೆ.

ಆ ದೇಶಕ್ಕೊಬ್ಬ ಅಧ್ಯಕ್ಷ. ಆತ ಸರ್ವಾಧಿಕಾರಿ. ಅದೊಂದು ದಿನ ಸಾಮಾನ್ಯ ಉಡುಪಿನಲ್ಲಿ ಆತ ಬಾತುಕೋಳಿಗಳ ಬೇಟೆಗೆ ಹೋಗಿ ತನ್ನದೇ ದೇಶದ ಸೈನಿಕರಿಂದ ಬಂಧಿತನಾಗುತ್ತಾನೆ. ಆಗ ಜೈಲಿನಿಂದ ಯೂನಿಫಾರ್ಮ್‌ ತೊಟ್ಟು ಪರಾರಿಯಾದ ಆತನದೇ ಪ್ರತಿರೂಪದಂತಿರುವ ಇನ್ನೋರ್ವ ಅಧ್ಯಕ್ಷನಾಗುತ್ತಾನೆ… ಇದು ಚಾರ್ಲಿ ಚಾಪ್ಲಿನ್‌ ನಟನೆಯ ‘ದಿ ಗ್ರೇಟ್‌ ಡಿಕ್ಟೇಟರ್’ ಎಂಬ ಸಿನಿಮಾದಲ್ಲಿ ಬರುವ ಒಂದು ದೃಶ್ಯ.

ಇದೇ ರೀತಿಯ ದೃಶ್ಯವೊಂದು ರಾಜ್‌ ಕುಮಾರ್‌ ನಟನೆಯ ‘ಎರಡು ನಕ್ಷತ್ರಗಳು’ ಸಿನಿಮಾದಲ್ಲಿಯೂ ಬರುತ್ತದೆ. ಅದರಲ್ಲಿ ತನ್ನಂತೆಯೇ ಇರುವವನೊಬ್ಬನನ್ನು ಅರಮನೆಯಲ್ಲಿ ಕೂರಿಸಿ ಯುವರಾಜ (ಪುನೀತ್‌ ರಾಜ್‌ಕುಮಾರ್‌) ಪರಾರಿಯಾಗುತ್ತಾನೆ. ಮತ್ತೆ ಅರಮನೆಗೆ ಬರುವ ಯುವರಾಜ ‘ನಾನೇ ಯುವರಾಜ’ ಎಂದು ಸಾಬೀತುಪಡಿಸಲು ಒದ್ದಾಡುತ್ತಾನೆ. ಇದು ಕಥೆ.

ಇದೀಗ ಇಂತಹದ್ದೇ ನೈಜ ಪೀಕಲಾಟಕ್ಕೆ ನೈಜೀರಿಯಾ ಅಧ್ಯಕ್ಷರು ಸಿಲುಕಿದ್ದಾರೆ. ಈಗಿರುವ ಅಧ್ಯಕ್ಷರು ಅಸಲಿಯಾ ನಕಲಿಯಾ ಎಂಬ ಗೊಂದಲ ಜನರಲ್ಲಿ ಹುಟ್ಟಿದ್ದೇ ಇದಕ್ಕೆಲ್ಲಾ ಕಾರಣ. ಪರಿಣಾಮ ‘ನಾನೇ ಅಸಲಿ ಅಧ್ಯಕ್ಷ’ ಎಂದು ಸಾಬೀತು ಮಾಡಲು ಅಧ್ಯಕ್ಷರು ಪರದಾಡುತ್ತಿದ್ದಾರೆ.

ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಸತ್ತಿದ್ದಾರೆ. ಅವರ ಜಾಗಕ್ಕೆ ಅವರಂತೆಯೇ ಕಾಣುವ ಒಬ್ಬರನ್ನು ಕರೆ ತಂದಿದ್ದಾರೆ ಎಂಬ ಗಾಳಿ ಸುದ್ದಿ ನೈಜೀರಿಯಾದಲ್ಲಿ ದಟ್ಟವಾಗಿ ಹಬ್ಬಿದೆ. ಈ ಗಾಳಿ ಸುದ್ದಿಯನ್ನು ಸ್ವತಃ ಅಲ್ಲಗಳೆಯಲು ಭಾನುವಾರ ಅಧ್ಯಕ್ಷರೇ ಟ್ಟೀಟ್‌ ಮಾಡಬೇಕಾಗಿ ಬಂದಿದೆ.

ಇದಕ್ಕೆಲ್ಲಾ ಕಾರಣವಾಗಿದ್ದು ಅವರ ವೈದ್ಯಕೀಯ ಚಿಕಿತ್ಸೆ. 2017ರಿಂದ ಬುಹಾರಿ ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಿ ಬರುತ್ತಿದ್ದರು. ಆದರೆ ಕಳೆದ ವರ್ಷ ದೀರ್ಘ ಅವಧಿಗೆ ಚಿಕಿತ್ಸೆ ಪಡೆಯಲು ಲಂಡನ್‌ನಲ್ಲಿದ್ದರು. ಸುಮಾರು ಮೂರು ತಿಂಗಳು ಅವರು ಆಸ್ಪತ್ರೆಯಲ್ಲಿದ್ದಾಗ ಯಾರೋ ಕಿಡಿಗೇಡಿಗಳು ‘ಅಧ್ಯಕ್ಷರು ಸತ್ತಿದ್ದಾರೆ’ ಎಂಬ ಸುದ್ದಿ ಹಬ್ಬಿಸಿದರು.

ಆದರೆ ಚಿಕಿತ್ಸೆ ಮುಗಿಸಿ ಅಧ್ಯಕ್ಷರು ವಾಪಸಾದರು. ಆಗ ಗಾಳಿ ಸುದ್ದಿ ಹರಡಿಸಿದವರು ‘ಇದು ಅವರಲ್ಲ. ಅವರಂತೆಯೇ ಇರುವ ಇನ್ನೋರ್ವ ವ್ಯಕ್ತಿ’ ಎಂದು ಇನ್ನೊಂದು ಸುದ್ದಿ ಹರಿಯಬಿಟ್ಟರು. ಪರಿಣಾಮ ಅಧ್ಯಕ್ಷರಿಗೀಗ ಪೀಕಲಾಟ ಶುರುವಾಗಿದೆ.

ಹೋದಲ್ಲಿ ಬಂದಲ್ಲಿ ಅವರೀಗ ‘ನಾನೇ ನಿಜವಾದ ಅಧ್ಯಕ್ಷ’ ಎಂದು ಸಾಬೀತುಪಡಿಸಿಕೊಳ್ಳಬೇಕಾಗಿ ಬಂದಿದೆ. “ನಾನು ನಿಮಗೆಲ್ಲಾ ಭರವಸೆ ನೀಡುತ್ತೇನೆ. ಇದು ನಿಜವಾದ ನಾನು. ಈ ತಿಂಗಳ ಅಂತ್ಯದಲ್ಲಿ ನಾನು ನನ್ನ 76ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವವನಿದ್ದೇನೆ. ನಾನು ಇನ್ನೂ ಗಟ್ಟಿಯಾಗಿದ್ದೇನೆ,” ನನ್ನನ್ನು ನಂಬಿ ಎನ್ನುತ್ತಿದ್ದಾರೆ.

ಭಾನುವಾರವಂತೂ ಅವರು ಮುಜುಗರದ ಕ್ಷಣಗಳನ್ನು ಎದುರಿಸಬೇಕಾಗಿ ಬಂತು. ಅಧ್ಯಕ್ಷರು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾಗವಹಿಸಲು ಪೋಲೆಂಡ್‌ನ ಕ್ರಕೊವ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲೋರ್ವ ನೈಜೀರಿಯಾದ ಪ್ರಜೆ ಅಧ್ಯಕ್ಷರ ಬಳಿಯಲ್ಲೇ, ‘ನೀವು ಬುಹಾರಿಯ ಅಥವಾ ನಿಮ್ಮಂತೆಯೇ ಇರುವ ಸುಡಾನ್‌ನ ಜುಬ್ರಿ ಎನ್ನುತ್ತಿದ್ದಾರೆ. ಅವರಾ?” ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತರಾದ ಅಧ್ಯಕ್ಷರು ತಮ್ಮನ್ನು ತಾವು ನಿಜ ವ್ಯಕ್ತಿ ಎಂದು ಸಾಬೀತುಪಡಿಸಲು ಟ್ಟೀಟ್‌, ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡುವುದರಲ್ಲಿ ನಿರತರಾಗಿದ್ದಾರೆ.

ನೈಜೀರಿಯಾ ಆಫ್ರಿಕಾದ ಅತೀ ದೊಡ್ಡ ಆರ್ಥಿಕತೆಯಾಗಿದ್ದು ಮತ್ತು ಅತೀ ದೊಡ್ಡ ತೈಲ ಉತ್ಪಾದನಾ ದೇಶವಾಗಿ ಗುರುತಿಸಿಕೊಂಡಿದೆ. ಸೇನಾ ಮುಖ್ಯಸ್ಥರಾಗಿದ್ದ ಬುಹಾರಿ 1983ರಲ್ಲಿ ಸೇನಾ ಕ್ರಾಂತಿ ಮೂಲಕ ಅಧಿಕಾರಕ್ಕೇರಿದ್ದರು. ಆದರೆ ಎರಡೇ ವರ್ಷದಲ್ಲಿ ಅವರ ಸರಕಾರವನ್ನು ಮತ್ತದೇ ಸೇನಾ ಕ್ರಾಂತಿ ಕೆಳಗಿಳಿಸಿತ್ತು. ಇದೀಗ 2015ರಿಂದ ಅವರು ಅಧ್ಯಕ್ಷರಾಗಿದ್ದಾರೆ. ರಾಜಕಾರಣಿಗಳಿಗೆ ಕ್ಷುಲ್ಲಕ ಕಾರಣಗಳಿಗೆ ಸವಾಲುಗಳು ಎದುರಾಗುವುದು ಹೊಸದೇನೂ ಅಲ್ಲ. ಆದರೆ ಈ ನೈಜೀರಿಯಾ ಅಧ್ಯಕ್ಷರಿಗೆ ತಮ್ಮ ಅಸ್ತಿತ್ವವನ್ನೇ ಸಾಬೀತುಪಡಿಸಬೇಕಾಗಿ ಬಂದಿದೆ. ಇದು ಪಿಂಚಣಿ ಪಡೆಯಲು ‘ಲಿವಿಂಗ್‌ ಸರ್ಟಿಫಿಕೇಟ್‌’ ಹೊಂದಬೇಕಾದ ನಮ್ಮದೇ ಹಿರಿಯರ ಪೀಕಲಾಟಗಳನ್ನು ನೆನಪಿಸುತ್ತಿದೆ.