samachara
www.samachara.com
ಕಾಣದ ‘ಅಚ್ಛೇ ದಿನ್’: ಫ್ರಾನ್ಸ್‌ ಜನರನ್ನು ಬೀದಿಗೆ ಇಳಿಸಿದ್ದು ಯೆಲ್ಲೋ ವೆಸ್ಟ್‌ ಆನ್‌ಲೈನ್ ಅಭಿಯಾನ!
/ಸಿಎನ್‌ಎನ್‌
COVER STORY

ಕಾಣದ ‘ಅಚ್ಛೇ ದಿನ್’: ಫ್ರಾನ್ಸ್‌ ಜನರನ್ನು ಬೀದಿಗೆ ಇಳಿಸಿದ್ದು ಯೆಲ್ಲೋ ವೆಸ್ಟ್‌ ಆನ್‌ಲೈನ್ ಅಭಿಯಾನ!

ಜನಪ್ರಿಯ ಭರವಸೆಗಳನ್ನು ಬಿತ್ತಿ ಅಧಿಕಾರಕ್ಕೇರಿದವರು ತಮ್ಮ ಮಾತುಗಳನ್ನು ಮರೆತರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರತಿಭಟನೆ ಸಾಕ್ಷಿಯಾಗಿದೆ. ಜನಪ್ರಿಯ ಸರಕಾರಗಳು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ದಶಕಗಳ ನಂತರ ಫ್ರಾನ್ಸ್‌ನ ಜನ ಅಲ್ಲಿನ ಸರಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ತೈಲ ಬೆಲೆ ಏರಿಕೆ ಮತ್ತು ಸರಕಾರದ ಆರ್ಥಿಕ ನೀತಿಗಳನ್ನು ವಿರೋಧಿಸಿ ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆ ಭಾನುವಾರ ಹಿಂಸಾಚಾರಕ್ಕೆ ತಿರುಗಿದೆ. ಸೋಮವಾರವೂ ಮುಂದುವರಿದಿದೆ.

ಪರಿಣಾಮ 412ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಮೂವರು ಅಸುನೀಗಿದ್ದರೆ 133ಕ್ಕೂ ಹೆಚ್ಚು ಜನರು ಗಲಭೆಯಲ್ಲಿ ಗಾಯಗೊಂಡಿದ್ದಾರೆ. ಇವರಲ್ಲಿ 23 ಭದ್ರತಾ ಸಿಬ್ಬಂದಿಗಳೂ ಸೇರಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಿಂದ ಸರಕಾರ ಕಂಗಾಲಾಗಿದ್ದು ತುರ್ತು ಪರಿಸ್ಥಿತಿಯಿಂದ ಹಿಡಿದು ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ.

ಅದು ಯೆಲ್ಲೋ ವೆಸ್ಟ್:

ಎಡವೂ ಅಲ್ಲದ ಬಲವೂ ಅಲ್ಲದ ಮಧ್ಯಮ ಪಂಥವನ್ನು ಪ್ರತಿಪಾದಿಸುತ್ತಾ ಜನಪ್ರಿಯ ರಾಜಕಾರಣದ ಮೇಲೆ 2017ರಲ್ಲಿ ಫ್ರಾನ್ಸ್‌ನಲ್ಲಿ ಅಧಿಕಾರಕ್ಕೇರಿದ್ದರು ಇಮ್ಯಾನುಯಲ್‌ ಮ್ಯಾಕ್ರನ್‌. ಅಲ್ಲಿನ ಜನರಲ್ಲಿ ಅವರು ‘ಅಚ್ಛೇ ದಿನ್‌’ ಕನಸುಗಳನ್ನು ಬಿತ್ತಿದ್ದರು. ಅದರ ನಿರೀಕ್ಷೆಯಲ್ಲಿದ್ದವರಿಗೆ ಮ್ಯಾಕ್ರನ್‌ ನೀತಿಗಳು ನಿರಾಸೆ ಹುಟ್ಟಿಸಿದವು. ಆರಂಭದಲ್ಲಿದ್ದ ನಿರಾಸೆ ನಿಧಾನಕ್ಕೆ ವಿರೋಧದ ರೂಪವನ್ನು ಪಡೆದುಕೊಳ್ಳಲು ಶುರುವಾಯಿತು. ಅದಕ್ಕೆ ವೇದಿಕೆ ನೀಡಿದ್ದೇ ‘Yellow Vest (ಹಳದಿ ಉಡುಗೆ)‘.

ಕಾಣದ ‘ಅಚ್ಛೇ ದಿನ್’: ಫ್ರಾನ್ಸ್‌ ಜನರನ್ನು ಬೀದಿಗೆ ಇಳಿಸಿದ್ದು ಯೆಲ್ಲೋ ವೆಸ್ಟ್‌ ಆನ್‌ಲೈನ್ ಅಭಿಯಾನ!
/ಸಿಎನ್‌ಎನ್‌

ಮೇನಲ್ಲಿ ಪಿಟಿಷನ್‌ ಸಲ್ಲಿಕೆಯೊಂದಿಗೆ ಆನ್‌ಲೈನ್‌ ಮೂಲಕ ಈ ಯೆಲ್ಲೋ ವೆಸ್ಟ್‌ ಎಂಬ ಅಭಿಯಾನ ಆರಂಭಗೊಂಡಿತು. ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರು ಒಂದೆಡೆ ಸೇರಲು ಇದು ವೇದಿಕೆಯಾಯಿತು. ಅಕ್ಟೋಬರ್‌ ಹೊತ್ತಿಗೆ ಯೆಲ್ಲೋ ವೆಸ್ಟ್‌ ಸೇರಿದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಯಿತು. ಈ ಆನ್‌ಲೈನ್‌ ಚಳುವಳಿ ಫ್ರಾನ್ಸ್‌ ಸರಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಸಫಲವಾಯಿತು..

ನವೆಂಬರ್‌ 17ರಂದು ಮೊದಲ ಬಾರಿಗೆ ಸಂಘಟನೆ ಬಹಿರಂಗ ಪ್ರತಿಭಟನೆಗೆ ಕರೆ ನೀಡಿತು. ಇದರಲ್ಲಿ ದೇಶದಾದ್ಯಂತ 2,82,000 ಜನರು ಪಾಲ್ಗೊಂಡಿದ್ದರು. ಇದಾದ ಬಳಿಕ ಕಳೆದ ಶನಿವಾರ ನಡೆದ ಮತ್ತೊಂದು ಪ್ರತಿಭಟನೆಯಲ್ಲಿ 1,06,000 ಜನರು ದೇಶದಾದ್ಯಂತ ಭಾಗವಹಿಸಿದ್ದರು. ಇದಾದ ಬಳಿಕ ನಡೆದಿದ್ದೇ ಭಾನುವಾರದ ಪ್ರತಿಭಟನೆ.

ಆರಂಭದಲ್ಲಿ ಶಾಂತಿಯುತ ಪ್ರತಿಭಟನೆ ನಡೆದಾಗ ಸರಕಾರ ಎಮ್ಮೆ ಚರ್ಮದಂತೆ ವರ್ತಿಸಿತ್ತು. ಇದರಿಂದ ಬೇಸತ್ತ ಪ್ರತಿಭಟನಾಕಾರರು ಶನಿವಾರ ಮತ್ತು ಭಾನುವಾರ ಹಿಂಸಾತ್ಮಕ ದಾರಿ ತುಳಿದರು. 1,000 ದಿಂದ 1,500 ಜನರು ನೇರವಾಗಿ ಪೊಲೀಸರ ಜತೆ ಮುಖಾಮುಖಿ ಸಂಘರ್ಷಕ್ಕೆ ಇಳಿದರು. ದೇಶದಾದ್ಯಂತ ಹಿಂಸಾಚಾರ ಆರಂಭಗೊಂಡಿತು. ಸರಕಾರದ ಗಮನ ಸೆಳೆಯಲು ಯೋಜನೆ ರೂಪಿಸಿದ ಪ್ರತಿಭಟನಾಕಾರರು ಆರ್ಕ್‌ ಡೆ ಟ್ರಂಫ್‌ ಸ್ಮಾರಕದ ಮೇಲೆ ದಾಳಿ ನಡೆಸಿದರು. ಇಲ್ಲಿನ ಫ್ರಾನ್ಸ್‌ ಗಣತಂತ್ರದ ಪ್ರತೀಕವಾದ ಮರಿಯಾನ್‌ ಪ್ರತಿಮೆಗಳನ್ನು ವಿರೂಪಗೊಳಿಸಿದರು.

ಸ್ಮಾರಕ ಸಣ್ಣ ವಿಚಾರವಾದರು ಇದರ ಮೇಲೆ ದಾಳಿ ನಡೆದಿದ್ದು ಆಳುವವರಿಗೆ ಬಿಸಿ ಮುಟ್ಟಿಸಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಅರ್ಜೆಂಟೀನಾದಲ್ಲಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌ ತುರ್ತಾಗಿ ದೇಶಕ್ಕೆ ವಾಪಾಸಾಗಿದ್ದು ಉನ್ನತ ಅಧಿಕಾರಿಗಳ ಜತೆ ಭಾನುವಾರವೇ ಸಭೆ ನಡೆಸಿದ್ದಾರೆ. ಪೊಲೀಸರ ಕ್ರಮವನ್ನು ಅವರು ಸಭೆಯಲ್ಲಿ ಶ್ಲಾಘಿಸಿದ್ದು ಅಪರಾಧಿಗಳೆಲ್ಲರಿಗೂ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ತೈಲ ಬೆಲೆ ಏರಿಕೆ:

ಪ್ರತಿಭಟನೆಗೆ ಮ್ಯಾಕ್ರನ್‌ ಮೇಲಿನ ಕಳೆದು ಹೋದ ಭರವಸೆಗಳು ಕಾರಣವಾದರೂ ಇದಕ್ಕೆ ಕಿಚ್ಚು ಹಚ್ಚಿದ್ದು ತೈಲ ಬೆಲೆ ಏರಿಕೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದ್ದಂತೆ ಫ್ರಾನ್ಸ್‌ನಲ್ಲೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿದೆ. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ಕಾರಣಗಳಿದ್ದರೂ ಬೇಸತ್ತಿರುವ ಜನರು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದ ಮ್ರಾಕ್ರನ್‌ ವಿರುದ್ಧ ಮುಗಿಬಿದ್ದಿದ್ದಾರೆ. ಪರಿಸರ ನೀತಿಗಳನ್ನು ಮುಂದಿಟ್ಟು ಮ್ಯಾಕ್ರನ್‌ ಇವುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ್ದು ಜನರ ಜೀವನಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದಾಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜತೆಗೆ ಆರ್ಥಿಕ ಸುಧಾರಣೆ ಹೆಸರಿನಲ್ಲಿ ಮ್ಯಾಕ್ರನ್‌ ತಂದ ನೀತಿಗಳು ಶ್ರೀಮಂತರು ಮತ್ತು ಉದ್ಯಮಿಗಳ ಪರವಾಗಿದೆ ಎಂಬುದು ಜನರ ಆರೋಪ. ಈ ಕಾರಣಕ್ಕೆ ಕೆಳ ವರ್ಗದವರು, ಬಡವರು ಮತ್ತು ಕಾರ್ಮಿಕರು ಯೆಲ್ಲೋ ವೆಸ್ಟ್‌ ಹೆಸರಿನಲ್ಲಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. 1968ರ ನಂತರ ಗಂಭೀರ ಸ್ವರೂಪದ ಹಿಂಸಾಚಾರಕ್ಕೆ ರಾಜಧಾನಿ ಪ್ಯಾರಿಸ್‌ ಸಾಕ್ಷಿಯಾಗಿದ್ದು ಮೇಲ್ವರ್ಗದ ಶ್ರೀಮಂತರು ವಾಸಿಸುವ ಬೀದಿಗಳಲ್ಲಿ ಐಷಾರಾಮಿ ಕಾರುಗಳಿಗೆ, ಬಂಗಲೆಯಂಥ ಮನೆಗಳಿಗೆ, ಲಕ್ಷುರಿ ಕೆಫೆಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಇದರ ಜತೆಗೆ 6 ಕಟ್ಟಡಗಳಿಗೆ ಪ್ರತಿಭಟನಾಕಾರರು ಬೆಂಕಿ ಹಾಕಿದ್ದಾರೆ. ಪೊಲೀಸರ ವಾಹನಗಳೂ ಬೆಂಕಿಗೆ ಆಹುತಿಯಾಗಿವೆ. ಭದ್ರತಾ ಸಿಬ್ಬಂದಿಗಳೇ ಗಾಯಗೊಂಡಿದ್ದಾರೆ.

ಕಾಣದ ‘ಅಚ್ಛೇ ದಿನ್’: ಫ್ರಾನ್ಸ್‌ ಜನರನ್ನು ಬೀದಿಗೆ ಇಳಿಸಿದ್ದು ಯೆಲ್ಲೋ ವೆಸ್ಟ್‌ ಆನ್‌ಲೈನ್ ಅಭಿಯಾನ!
/ಸಿಎನ್‌ಎನ್‌

ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಮ್ಯಾಕ್ರನ್‌, “ಶಾಂತಿಯುತ ಪ್ರತಿಭಟನೆಗೂ ಹಿಂಸಾತ್ಮಕ ಪ್ರತಿಭಟನೆಗೂ ಸಂಬಂಧವಿಲ್ಲ. ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವುದು, ಅಂಗಡಿಗಳಿಗೆ ಬೆಂಕಿ ಇಡುವುದು, ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳಿಗೆ ಕೊಳ್ಳಿ ಇಡುವುದು, ಪತ್ರಕರ್ತರ್ತರಿಗೆ ಪಾದಾಚಾರಿಗಳಿಗೆ ಬೆದರಿಸುವುದನ್ನು ಸಹಿಸಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.

ಆರಂಭದಲ್ಲಿ ಪ್ರತಿಭಟನೆಗೆ ಬಗ್ಗೆ ಮೌನವಾಗಿದ್ದ ಮ್ಯಾಕ್ರನ್‌ ಇದೀಗ ಬಿಸಿ ಏರಿಕೆಯಾಗುತ್ತಿದ್ದಂತೆ ವಿರೋಧಿ ಗುಂಪಿನ ಜತೆ ಮಾತುಕತೆ ನಡೆಸುವಂತೆ ಪ್ರಧಾನಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಪ್ಯಾರಿಸ್‌ ಸೇರಿದಂತೆ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಅಂತ್ಯ ಹಾಡುವಂತೆ ತಿಳಿಸಿದ್ದಾರೆ.

ಆದರೆ ಬೇಸತ್ತ ಜನರು ಸಂಧಾನಕ್ಕೆ ಒಪ್ಪಿಕೊಳ್ಳುತ್ತಾರಾ? ದಶಕದ ನಂತರ ಹುಟ್ಟಿಕೊಂಡ ಪ್ರತಿಭಟನೆ ಅಷ್ಟು ಸುಲಭಕ್ಕೆ ತಣ್ಣಗಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇದರಾಚೆಗೆ ಸಾಮಾನ್ಯ ಜನರಲ್ಲಿ ಭರವಸೆಗಳನ್ನು ಬಿತ್ತಿ ಅಧಿಕಾರಕ್ಕೇರಿದವರು ತಮ್ಮ ಮಾತುಗಳನ್ನು ಮರೆತರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರತಿಭಟನೆ ಸಾಕ್ಷಿಯಾಗಿದೆ. ಉದ್ಯಮಿಗಳ ಪರವಾಗಿರುವ ಜನಪ್ರಿಯ ಸರಕಾರಗಳು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.

Join Samachara Official. CLICK HERE