samachara
www.samachara.com
‘ತನಿಖಾ ಪತ್ರಿಕೋದ್ಯಮ ಹೆಸರಿನಲ್ಲಿ’: ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ ಫೈಟ್‌ನ ಅಂತರಾಳ!
COVER STORY

‘ತನಿಖಾ ಪತ್ರಿಕೋದ್ಯಮ ಹೆಸರಿನಲ್ಲಿ’: ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ ಫೈಟ್‌ನ ಅಂತರಾಳ!

ಇದು ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎರಡು ಕಾರ್ಪೊರೇಟ್ ಮಾಧ್ಯಮ ಸಂಸ್ಥೆಗಳ ‘ಮಾರ್ಕೆಟ್ ಕಲಹ’ದ ಅಂತರಂಗದ ಕತೆ. ರೋಗಗ್ರಸ್ಥ ಟಿವಿಗಳ ತನಿಖಾ ಪತ್ರಿಕೋದ್ಯಮ ಮುಂದೆ ಮಾಡಿರುವ ವ್ಯಥೆ.

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

ಇಲ್ಲಿ ಪತ್ರಕರ್ತರೇ ಆರೋಪಿಗಳಾದರೆ, ಮಾಧ್ಯಮಗಳ ಆಡಳಿತ ಮಂಡಳಿಯ ಪ್ರಮುಖರು ಹಿನ್ನೆಲೆಯಲ್ಲಿ ಅಖಾಡಕ್ಕಿಳಿದಿದ್ದಾರೆ. ಟಿಆರ್‌ಪಿ ಎಂಬ ಅಸ್ಪಷ್ಟ ಸಂಗತಿಯೊಂದರ ಬೆನ್ನಿಗೆ ಬಿದ್ದ ಸುದ್ದಿವಾಹಿನಿಗಳ ಒಳಗೆ ಏನೆಲ್ಲಾ ನಡೆಯುತ್ತವೆ ಮತ್ತು ಅವುಗಳ ಪರಿಣಾಮ ಏನು ಎಂಬುದನ್ನು ಜನರ ಮುಂದಿಟ್ಟ ಹೊಸ ಬೆಳವಣಿಗೆ ಇದು.

ಅಂದಹಾಗೆ, ಈ ಕತೆ ಆರಂಭವಾಗುವುದು ಸುವರ್ಣ ನ್ಯೂಸ್‌ ಮಾತೃ ಸಂಸ್ಥೆ ಏಶಿಯಾನೆಟ್‌ನ ಆಪರೇಷನ್ ವಿಭಾಗದ ಉಪಾಧ್ಯಕ್ಷ ಅನಂತ ನಾರಾಯಣ ಎಂಬುವವರು ಸೈಬರ್ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡುವ ಮೂಲಕ. ಅದು ನವೆಂಬರ್ 29ನೇ ತಾರೀಖು. ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಸುವರ್ಣ ನ್ಯೂಸ್ ದಾಖಲಿಸಿದ ದೂರನ್ನು ಪೊಲೀಸರು ಸ್ವೀಕರಿಸಿ ಪ್ರಥಮ ಮಾಹಿತಿ ವರದಿಯನ್ನು ತಯಾರಿಸುತ್ತಾರೆ. ‘ವಿಜಯಲಕ್ಷ್ಮಿ ಶಿಬರೂರು, ಸಿದ್ದು ಕಾಳೋಜಿ, ಸ್ವರೂಪ್ ಮುರಗೋಂಡ್ ಹಾಗೂ ಶೇಖರ್ ಪೂಜಾರಿ ನ್ಯೂಸ್ 18ನ ದಕ್ಷಿಣ ಭಾರತ ಮುಖ್ಯಸ್ಥ ಕಾರ್ತಿಕ್ ಸುಬ್ಬರಾಮನ್ ಪ್ರಚೋದನೆಯಿಂದ ತಮ್ಮ ಬೌದ್ಧಿಕ ಆಸ್ತಿಗಳನ್ನು ಕದ್ದಿದ್ದಾರೆ’ ಎಂಬುದು ದೂರಿನ ಸಾರಾಂಶ.

‘ತನಿಖಾ ಪತ್ರಿಕೋದ್ಯಮ ಹೆಸರಿನಲ್ಲಿ’: ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ ಫೈಟ್‌ನ ಅಂತರಾಳ!

ದೂರು ದಾಖಲಾದ ಬೆನ್ನಿಗೇ ವೃತ್ತಿಪರವಾಗಿ ಎಡಿಟ್ ಮಾಡಲಾದ ಒಂದಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತದೆ. ‘ಇದು ತನಿಖಾ ಪತ್ರಿಕೋದ್ಯಮವಾ?’ ಎಂಬ ಶೀರ್ಷಿಕೆಯೊಂದಿಗೆ ಪತ್ರಕರ್ತೆ ವಿಜಯಲಕ್ಷ್ಮಿ ಅಂದು (ಸುವರ್ಣ ನ್ಯೂಸ್‌ನಲ್ಲಿದ್ದಾಗ) ಮತ್ತು ಇಂದು (ನ್ಯೂಸ್ 18 ಕನ್ನಡದಲ್ಲಿರುವಾಗ) ನಿರೂಪಿಸಿದ ಕಾರ್ಯಕ್ರಮಗಳ ಸಾಮ್ಯತೆಯನ್ನು ಇವು ಬಯಲಿಗಿಟ್ಟಿವೆ. ಉದಾಹರಣೆಗೆ, 2016ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆಲೆಮನೆಯಲ್ಲಿ ರಾಸಾಯನಿಕ ಬೆರೆಸಿ ಬೆಲ್ಲ ತಯಾರಿಸುತ್ತಿದ್ದ ‘ಕವರ್ ಸ್ಟೋರಿ’ಯನ್ನು ವಿಜಯಲಕ್ಷ್ಮಿ ‘ತನಿಖೆ’ ನಡೆಸಿದ್ದರು. ಅಂದಿನ ಆ ಎಪಿಸೋಡಿನಲ್ಲಿ ಬಳಸಲಾದ ತಜ್ಞರ ಹೇಳಿಕೆ, ರೈತರ ಮಾತುಗಳನ್ನು ಈಗ ನ್ಯೂಸ್ 18 ಕನ್ನಡದಲ್ಲಿ ‘ಸರ್ಜಿಕಲ್ ಸ್ಟ್ರೈಕ್’ ಹೆಸರಿನಲ್ಲಿ ಬಿತ್ತರಿಸಿದ್ದಾರೆ ಎಂಬುದನ್ನು ವಿಡಿಯೋ ಕ್ಲಿಪ್ಪಿಂಗ್‌ಗಳು ಸಾಬೀತು ಮಾಡಲು ಹೊರಟಿದ್ದವು.

ಮೇಲ್ನೋಟಕ್ಕೆ ಅಂದು ಮತ್ತು ಇಂದು ‘ತನಿಖಾ ವರದಿ’ ಹೆಸರಿನಲ್ಲಿ ಪ್ರಸಾರವಾದ ಕಾರ್ಯಕ್ರಮಗಳ ಸಾಮ್ಯತೆ, ಅದಕ್ಕಾಗಿ ದೃಶ್ಯಾವಳಿಗಳ ಮರುಬಳಕೆಯ ವಿಚಾರವಾಗಿ ಕಾಣಿಸುತ್ತಿದೆ. ಆದರೆ, ಪ್ರಕರಣದಲ್ಲಿ ಇನ್ನಷ್ಟು ಆಳಕ್ಕಿಳಿದರೆ ಎರಡು ಕಾರ್ಪೊರೇಟ್ ಮಾಧ್ಯಮ ಸಂಸ್ಥೆಗಳು ಟಿಆರ್‌ಪಿಗಾಗಿ ನಡೆಸುತ್ತಿರುವ ಕಾಳಗವೊಂದರ ಆಂತರಿಕ ಚಿತ್ರಣ ಲಭ್ಯವಾಗುತ್ತದೆ.

ಆಪರೇಶನ್ ನ್ಯೂಸ್ 18 ಕನ್ನಡ:

ಮಾಧ್ಯಮಗಳು ಹೆಚ್ಚಾದಂತೆ ತಳಮಟ್ಟದಲ್ಲಿ ಕೊಡುಕೊಳ್ಳುವಿಕೆಯ ಸಂಸ್ಕೃತಿಯೊಂದು ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಶುರುಮಾಡಿದೆ. ನಿತ್ಯ ಅಸೈನ್‌ಮೆಂಟ್‌ಗೆ ಹೋಗುವ ವರದಿಗಾರರು ತಮಗೆ ಲಭ್ಯವಾದ ದೃಶ್ಯಾವಳಿಗಳನ್ನು ಇನ್ನೊಂದು ವಾಹಿನಿಯ ವರದಿಗಾರರ ಜತೆ ಹಂಚಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿರುವ ದಿನಗಳಿವು. ವಾಟ್ಸಾಪ್‌ ಬಳಕೆ ಬಂದ ಮೇಲೆ, ವರದಿಗಳನ್ನೂ ಹಂಚಿಕೊಳ್ಳುವ ಪರಿಪಾಠವೊಂದು ಚಾಲ್ತಿಯಲ್ಲಿದೆ. ಆದರೆ, ಅದೇ ದೃಶ್ಯಾವಳಿಗಳು ವಾಹಿನಿಯೊಂದರಲ್ಲಿ ಪ್ರಸಾರವಾದ ಮೇಲೆ ಇನ್ನೊಂದು ವಾಹಿನಿಗೆ ತಲುಪಿದ ಉದಾಹರಣೆಗಳು ಕಡಿಮೆ, ಮತ್ತು ಅಂತಹದೊಂದು ಸಾಧ್ಯತೆಯನ್ನು ಕೆಲವರಷ್ಟೆ ಕಂಡುಕೊಂಡಿದ್ದರು.

ಈ ನಡುವೆ, ಮುಖೇಶ್ ಅಂಬಾನಿ ಒಡೆತನದ, ದೇಶದ ಬೃಹತ್‌ ಜಾಲ ಎಂದು ಹೇಳಿಕೊಳ್ಳುವ ನ್ಯೂಸ್ 18 ಕನ್ನಡ ಕನ್ನಡದ ಸುದ್ದಿವಾಹಿನಿ ಮಾರುಕಟ್ಟೆಯಲ್ಲಿ ಕನಿಷ್ಟ ಮೂರನೇ ಸ್ಥಾನಕ್ಕೇರುವ ಒತ್ತಡಕ್ಕೆ ಬಿದ್ದಿತ್ತು. ಅದಕ್ಕಾಗಿ ಅದರ ಮೊದಲ ಟಾರ್ಗೆಟ್ ಇದ್ದಿದ್ದು ಸುವರ್ಣ ನ್ಯೂಸ್. ವೃತ್ತಿಪರ ಪೈಪೋಟಿಯ ಭಾಗವಾಗಿಯೇ ಸುವರ್ಣ ನ್ಯೂಸ್‌ನಲ್ಲಿದ್ದ ವಿಜಯಲಕ್ಷ್ಮಿ ಹಾಗೂ ಮೇಲೆ ಆರೋಪಿ ಸ್ಥಾನದಲ್ಲಿ ನಿಂತಿರುವ ಪತ್ರಕರ್ತರನ್ನು ನ್ಯೂಸ್ 18 ಖರೀದಿಸಿತು. ಅವರು ಹೊಸ ವಾಹಿನಿಗೆ ಕೆಲಸಕ್ಕೆ ಬಂದ ಮೇಲೂ ಸುವರ್ಣ ನ್ಯೂಸ್‌ನ ತಮ್ಮ ಹಳೆಯ ಸಹೋದ್ಯೋಗಿಗಳ ಜತೆ ಸಂಪರ್ಕದಲ್ಲಿದ್ದರು.

“ಇಲ್ಲಿಂದಲೇ ಸ್ಕ್ರಿಪ್ಟ್‌ಗಳನ್ನು ತರಿಸಿಕೊಳ್ಳುವ ಪರಿಪಾಠವನ್ನು ಅವರು ಆರಂಭಿಸಿದರು. ಕೆಲವೊಮ್ಮೆ ನಾವು ಕಾರ್ಯಕ್ರಮವೊಂದನ್ನು ತಯಾರಿಸಿ, ಬಿತ್ತರಿಸಲು ಸಮಯ ನಿಗದಿ ಮಾಡಿರುತ್ತಿದ್ದೆವು. ಆದರೆ ಅರ್ಧ ಗಂಟೆ ಮುಂಚೆ ನ್ಯೂಸ್ 18 ಕನ್ನಡದಲ್ಲಿ ಅದೇ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಇದರಿಂದ ಅನಿವಾರ್ಯವಾಗಿ ಆಡಳಿತ ಮಂಡಳಿ ಗಮನಕ್ಕೆ ತಂದೆವು,’’ ಎನ್ನುತ್ತಾರೆ ಸುವರ್ಣ ನ್ಯೂಸ್‌ನ ಸಂಪಾದಕೀಯ ವಿಭಾಗದ ಹಿರಿಯ ಪತ್ರಕರ್ತರೊಬ್ಬರು.

‘ಸಮಾಚಾರ’ಕ್ಕೆ ಲಭ್ಯ ಮಾಹಿತಿ ಪ್ರಕಾರ, ಏಷಿಯಾನೆಟ್ ಸಂಸ್ಥೆಯ ಆಡಳಿತ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿತು. ಕೇವಲ ಸ್ಕ್ರಿಪ್ಟ್‌ ಮಾತ್ರ ಅಲ್ಲ, ಸುವರ್ಣ ನ್ಯೂಸ್‌ ಕಲಾಕಾರರೊಬ್ಬರಿಂದ ಬರೆಸಿದ ಕನ್ನಡದ ವಿಶೇಷ ಫಾಂಟ್‌ಗಳು, ಸುವರ್ಣ ನ್ಯೂಸ್‌ನ ಪಿಸಿಆರ್‌ (ಪ್ಯಾನಲ್ ಕಂಟ್ರೂಲ್ ರೂಮ್‌)ನ ಹಿನ್ನೆಲೆಯನ್ನು ಇಟ್ಟುಕೊಂಡು ತಯಾರಿಸಲಾದ ಬಿಜಿ (ಬ್ಯಾಕ್‌ ಗ್ರೌಂಡ್‌)ಯನ್ನು ನ್ಯೂಸ್ 18 ಕನ್ನಡ ಬಳಸಲಾರಂಭಿಸಿತು. ಇಂತಹ ಕ್ರೀಯಾಶೀಲ ಕೆಲಸ ಸೋರಿಕೆಯಾಗಿದ್ದು ಹೇಗೆ ಎಂಬುದನ್ನು ತನಿಖೆ ನಡೆಸಲು ಏಷಿಯಾನೆಟ್ ಸಂಸ್ಥೆಯ ಆಡಳಿತ ಮಂಡಳಿ ಹೊರಗಿನ ಸಂಸ್ಥೆಯೊಂದಕ್ಕೆ ತನಿಖೆ ನಡೆಸಲು ಹೊರಗುತ್ತಿಗೆ ನೀಡಿತ್ತು. ಹೆಚ್ಚು ಕಡಿಮೆ ಒಂದು ತಿಂಗಳ ಅಂತರದಲ್ಲಿ ಸುಮಾರು 80ಕ್ಕೂ ಹೆಚ್ಚು ಸಾಕ್ಷಿಗಳನ್ನು (ದೂರವಾಣಿ ಕರೆಗಳು, ಮೇಲ್ ಸಂಪರ್ಕ, ಇತ್ಯಾದಿ)ಗಳನ್ನು ಕಲೆ ಹಾಕಿದ ನಂತರವೇ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ನ್ಯೂಸ್ 18 ಆಡಳಿತ ಮಂಡಳಿಯ ಪ್ರಮುಖ ಸದಸ್ಯರೂ ಸೇರಿದಂತೆ ನಾಲ್ವರು ಹಿರಿಯ ಪತ್ರಕರ್ತರ ವಿರುದ್ಧ ದೂರು ದಾಖಲಿಸಲಾಯಿತು.

ರೇಟಿಂಗ್ ಪೈಪೋಟಿ:

ಇತ್ತಿಚೀನ ದಿನಗಳಲ್ಲಿ ಸುವರ್ಣ ನ್ಯೂಸ್ ಹಾಗೂ ನ್ಯೂಸ್ 18 ಕನ್ನಡ ವಾಹಿನಿಗಳ ನಡುವೆ ವ್ಯತ್ಯಾಸ ಅಂತ ಕಾಣಿಸುತ್ತಿದ್ದದ್ದು ಅವುಗಳ ಲೋಗೋ ಮಾತ್ರ ಎಂಬಂತಾಗಿತ್ತು. ಒಂದೇ ಹೋಲಿಕೆಯಲ್ಲಿರುವ ಕಲರ್ ಕಾಂಬಿನೇಶನ್, ಒಂದೇ ರೀತಿಯ ಕಾರ್ಯಕ್ರಮಗಳು, ಅದೇ ಫಾಂಟ್‌ಗಳು ಎರಡೂ ವಾಹಿನಿಗಳಲ್ಲಿ ಕಾಣಿಸುತ್ತಿತ್ತು. ‘ಒಂದು ಝೆರಾಕ್ಸ್‌ ಆದರೆ ಇನ್ನೊಂದು ಅದರ ಕಲರ್ ಝೆರಾಕ್ಸ್‌’ ಎಂದು ಮಾಧ್ಯಮ ವಲಯ ಮಾತನಾಡಿಕೊಳ್ಳುತ್ತಿತ್ತು.

‘ತನಿಖಾ ಪತ್ರಿಕೋದ್ಯಮ ಹೆಸರಿನಲ್ಲಿ’: ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ ಫೈಟ್‌ನ ಅಂತರಾಳ!

ಸಾಮಾನ್ಯವಾಗಿ ಒಂದು ವಾಹಿನಿಯೊಂದರ ಒಂದು ತಂಡ ಇನ್ನೊಂದು ವಾಹಿನಿಗೆ ಹೋದಾಗ ಸಹಜವಾಗಿ ಇಂತಹ ಸಾಮ್ಯತೆ ಕಾಣಿಸಲಾರಂಭಿಸುತ್ತದೆ. ಆದರೆ, ಇಲ್ಲಿ ಅದಕ್ಕಿಂತಲೂ ಒಂದು ಹೆಚ್ಚು ಮುಂದೆ ಹೋದ ಪತ್ರಕರ್ತರು ನಿತ್ಯವೂ ಅಲ್ಲಿನ ಕಾರ್ಯಕ್ರಮಗಳು ಇಲ್ಲಿ ಬರುವಂತೆ ನೋಡಿಕೊಳ್ಳುವ ಅಪರೂಪದ ‘ವೃತ್ತಿ ಪರತೆ’ಯನ್ನು ಪ್ರದರ್ಶಿಸಿದ್ದು ಸ್ಕ್ರೀನ್‌ ಮೇಲೆ ಢಾಳಾಗಿ ಕಾಣಿಸುತ್ತಿತ್ತು.

ಎರವಲು ಸೇವೆ:

ಯಾವಾಗ ದೂರು ದಾಖಲಾಗಿ, ವಿಡಿಯೋ ಕ್ಲಿಪ್ಪಿಂಗ್‌ಗಳು ಹರಿದಾಡತೊಡಗಿದವೋ ನ್ಯೂಸ್ 18 ಕನ್ನಡದ ಒಳಗೆ ಬೆಳವಣಿಗೆಗಳು ನಡೆಯಲಾರಂಭಿಸಿದವು. “ನಮ್ಮಲ್ಲಿಗೆ ಬಂದ ಪತ್ರಕರ್ತರನ್ನು ಸುವರ್ಣ ವಾಹಿನಿ ಎರವಲು ಸೇವೆ (ಕನ್ಸಲ್ಟೆಂಟ್)ಗೆ ಬಳಸಿಕೊಂಡಿತ್ತು. ಅವರು ಅಲ್ಲಿನ ಉದ್ಯೋಗಿಗಳಾಗಿರಲಿಲ್ಲ. ಹೀಗಾಗಿ ಅವರು ಅಲ್ಲಿ ತಯಾರಿಸಿದ ಕಾರ್ಯಕ್ರಮಗಳ ಹಕ್ಕುಸ್ವಾಮ್ಯ ಅವರದ್ದೇ ಆಗಿತ್ತು. ಅದನ್ನು ಇಲ್ಲಿಗೆ ಬಂದ ನಂತರ ವರದಿಗಳಿಗೆ ಪೂರಕವಾಗಿ ಬಳಸಿದ್ದಾರೆ ಅಷ್ಟೆ,’’ ಎಂಬುದು ಈಗ ನ್ಯೂಸ್ 18 ಕನ್ನಡ ನೀಡುತ್ತಿರುವ ಸಮಜಾಯಿಷಿ. ಜತೆಗೆ, ಸುವರ್ಣ ನ್ಯೂಸ್ ವಿರುದ್ಧ ಕಾನೂನು ಹೋರಾಟ ನಡೆಸಲು ನ್ಯೂಸ್ 18 ಕನ್ನಡದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂಬ ಮಾಹಿತಿ ಇದೆ.

ಈ ಎರವಲು ಸೇವೆಯ ಲಾಜಿಕ್ ವಿಜಯಲಕ್ಷ್ಮಿ ಶಿಬರೂರು ‘ಸರ್ಜಿಕಲ್ ಸ್ಟ್ರೈಕ್’ ಕಾರ್ಯಕ್ರಮಕ್ಕೆ ಮಾತ್ರವೇ ಅನ್ವಯವಾಗುತ್ತದೆ. ಉಳಿದಂತೆ ಸ್ಕ್ರಿಪ್ಟ್, ಫಾಂಟ್‌ಗಳು, ಬಿಜಿಗಳ ವಿಚಾರದಲ್ಲಿ ನ್ಯೂಸ್ 18 ಕನ್ನಡದ ಪ್ರತಿಕ್ರಿಯೆ ಕೇಳಿದರೆ, “ಅವರು ದೂರು ನೀಡಿದ್ದು ಒಂದು ಕಾರ್ಯಕ್ರಮದ ವಿಚಾರದಲ್ಲಿ ಮಾತ್ರ. ಹೋಲಿಕೆಯ ವಿಡಿಯೋಗಳನ್ನು ಅವರೇ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ನಾವು ನ್ಯಾಯಾಲಯದಲ್ಲಿ ಉತ್ತರ ನೀಡುತ್ತೀವಿ,’’ ಎನ್ನುತ್ತವೆ ಸಂಸ್ಥೆಯ ಉನ್ನತ ಮೂಲಗಳು.

ಒಟ್ಟಾರೆ ವಿಚಾರಕ್ಕೆ ಸಂಬಂಧಿಸಿದಂತೆ, ‘ಸಮಾಚಾರ’ ಎರಡೂ ಮಾಧ್ಯಮ ಸಂಸ್ಥೆಗಳ ಪ್ರಮುಖರ ಜತೆ ಮಾತುಕತೆ ನಡೆಸಿತ್ತಾದರೂ ಯಾರೊಬ್ಬರು ‘ಆನ್‌ ರೆಕಾರ್ಡ್‌’ ಬರಲು ಒಪ್ಪಲಿಲ್ಲ.

ಏನಿದು ಬೌದ್ಧಿಕ ಹಕ್ಕು?:

ಬಿಸಿಸಿಎಲ್‌ನಂತಹ ಪುರಾತನ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನವೇ ‘ಬೌದ್ಧಿಕ ಹಕ್ಕಿ’ನ ಕುರಿತು ಒಪ್ಪಂದವೊಂದಕ್ಕೆ ಸಹಿ ಮಾಡಿಸಿಕೊಳ್ಳುತ್ತವೆ. ಒಮ್ಮೆ ಕೆಲಸಕ್ಕೆ ಸೇರಿದ ನಂತರ ಅಲ್ಲಿ ಅವರು ಬರೆಯುವ ಪ್ರತಿ ಅಕ್ಷರ, ಸುದ್ದಿ, ಚಿತ್ರಗಳು ಹೀಗೇ ಏನೇ ಕ್ರೀಯಾಶೀಲ ಅಭಿವ್ಯಕ್ತಿಗಳಿರಲಿ, ಅವುಗಳ ಮೇಲೆ ಬೌದ್ಧಿಕ ಹಕ್ಕು ಅಥವಾ ಕಾಪಿರೈಟ್‌ ಸಂಸ್ಥೆಯದ್ದಾಗಿರುತ್ತವೆ. ಇದು ಎರವಲು ಸೇವೆಯ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡಾಗಲೂ ಅನ್ವಯವಾಗುತ್ತಾ? ಉತ್ತರ ಸ್ಪಷ್ಟವಿಲ್ಲ.

“ಭಾರತದಲ್ಲಿ ಬೌದ್ಧಿಕ ಹಕ್ಕು ಅಥವಾ ಕಾಪಿರೈಟ್ ವಿಚಾರದಲ್ಲಿ ಸ್ಪಷ್ಟವಾದ ಕಾನೂನು ಇನ್ನೂ ರೂಪುಗೊಂಡಿಲ್ಲ. ಪೇಟೆಂಟ್‌ ವಿಚಾರದಲ್ಲಿ ಕೆಲವೊಂದು ಮಾರ್ಗಸೂಚಿಗಳು ಇವೆಯಾದರೂ ಕಾಪಿರೈಟ್‌ ವಿಚಾರದಲ್ಲಿ ಅಷ್ಟು ಸುಲಭವಾಗಿಲ್ಲ,’’ ಎನ್ನುತ್ತಾರೆ ಹೈಕೋರ್ಟ್‌ ವಕೀಲ ಜೆ. ಡಿ. ಕಾಶೀನಾಥ್.

“ಮಾಧ್ಯಮಗಳಲ್ಲಿ ಕೊಡುಕೊಳ್ಳುವಿಕೆ, ಐಡಿಯಾ ಕಳ್ಳತನ ಸಾಮಾನ್ಯ. ಕ್ರೀಯಾಶೀಲತೆಯ ವಿಚಾರ ಆದ್ದರಿಂದ ಇದಕ್ಕೆ ಕಡಿವಾಣ ಕೂಡ ಕಷ್ಟ. ಇಂತಹ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವುದು ಕಷ್ಟವೇ ಆದರೂ, ಒಂದು ಸ್ಪಷ್ಟ ಕಾನೂನಿನ ಚೌಕಟ್ಟು ಹಾಕಲು ಇವು ನೆರವಾಗುತ್ತದೆ,’’ ಎಂದವರು ವಿವರಿಸುತ್ತಾರೆ.

ಸದ್ಯ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ನ್ಯಾಯಾಲಯದಲ್ಲಿ ತಾರ್ಕಿಕ ಅಂತ್ಯ ಕಾಣಲು ಹಲವು ವರ್ಷಗಳು ಬೇಕಾಗಬಹುದು. ಆದರೆ, ಕನ್ನಡ ಟಿವಿ ವಾಹಿನಿಗಳಲ್ಲಿ ತನಿಖಾ ಪತ್ರಿಕೋದ್ಯಮ ಅಂತ್ಯ ಕಂಡಿದೆ ಎಂಬುದರ ಮುನ್ಸೂಚನೆಯನ್ನಂತೂ ಈ ಬೆಳವಣಿಗೆ ಸ್ಪಷ್ಟವಾಗಿ ನೀಡಿದೆ. ಬೆಲ್ಲ ತಯಾರಿಸುವ ಕುರಿತು 2016ರ ತನಿಖೆಯೇ 2018ರಲ್ಲೂ ನಡೆಯುತ್ತದೆ. ಇದು ಬೌದ್ಧಿಕ ದಾರಿದ್ರ್ಯವಲ್ಲದೆ ಮತ್ತೇನೂ ಅಲ್ಲ. ‘ಜಳಕಿ ಚೆಕ್‌ಪೋಸ್ಟ್‌’ನಿಂದ ಆರಂಭಗೊಂಡ ಇಂತಹದೊಂದು ಕನ್ನಡ ಸುದ್ದಿವಾಹಿನಿಗಳ ತನಿಖಾ ಪತ್ರಿಕೋದ್ಯಮ ರೋಗಗ್ರಸ್ಥ ಸ್ಥಿತಿ ತಲುಪಿದೆ ಎಂಬುದಕ್ಕೆ ಇದು ಸಾಕ್ಷಿ.

ಅಲ್ಲಿ ಅಮೆರಿಕಾ, ಯುಕೆಗಳಲ್ಲಿ ಪನಾಮ ಪೇಪರ್‌, ಯುರೋಪಿನಲ್ಲಿ ‘ಫೂಟ್‌ಬಾಲ್‌ ಲೀಕ್ಸ್‌’ ತನಿಖಾ ವರದಿಗಳು ಸದ್ದು ಮಾಡುತ್ತಿರುವ ಹೊತ್ತಿದು. ನಮ್ಮಲ್ಲಿ ಮಾತ್ರ ಬೆಲ್ಲದ ತಯಾರಕರ ಬೆನ್ನಿಗೆ ಬಿದ್ದ ಸುದ್ದಿಯೇ ತನಿಖಾ ವರದಿ ಮತ್ತು ಅದರಲ್ಲೂ ಕೃತಿ ಚೌರ್ಯದ ಆರೋಪ. ಸುದ್ದಿ ವಾಹಿನಿಗಳ ತನಿಖೆಯ ಕುರಿತು ನಿರೀಕ್ಷೆಯನ್ನೂ ಇನ್ನೂ ಯಾರಾದರೂ ಇಟ್ಟುಕೊಂಡಿದ್ದರೆ, ಅವರಿಗಿಂತ ಮೂರ್ಖ ಪ್ರೇಕ್ಷಕ ಇನ್ನೊಬ್ಬ ಇರಲಾರ.