samachara
www.samachara.com
ವಿಶೇಷ ಅಧಿವೇಶನಕ್ಕಾಗಿ ರೈತರ ಆಕ್ರೋಶ; ವೇದಿಕೆಯಲ್ಲಿ ಎಡಪಕ್ಷಗಳ ಒಗ್ಗಟ್ಟಿನ ಸಮಾವೇಶ
COVER STORY

ವಿಶೇಷ ಅಧಿವೇಶನಕ್ಕಾಗಿ ರೈತರ ಆಕ್ರೋಶ; ವೇದಿಕೆಯಲ್ಲಿ ಎಡಪಕ್ಷಗಳ ಒಗ್ಗಟ್ಟಿನ ಸಮಾವೇಶ

ರೈತರ ವೇದಿಕೆ ಏರಿದ ಎಡಪಕ್ಷಗಳು ರೈತರೊಂದಿಗೆ ನಾವಿದ್ದೇವೆ ಎಂದು ಹೇಳುವ ಮೂಲಕ 2019ರ ಚುನಾವಣೆಯಲ್ಲಿ ನಾವೆಲ್ಲವರೂ ಒಟ್ಟಾಗಿರಲಿದ್ದೇವೆ ಎಂಬ ಸಂದೇಶವನ್ನೂ ರವಾನಿಸಿವೆ.

ದಯಾನಂದ

ದಯಾನಂದ

ರೈತರ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲೇ ಚರ್ಚೆ ನಡೆಯಬೇಕು, ಇದಕ್ಕಾಗಿ ಸಂಸತ್‌ನ ವಿಶೇಷ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿ ರೈತರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಸಿದ ರೈತ ಸಮಾವೇಶ ಅಂತಿಮವಾಗಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಯಿತು. ರೈತ ಸಮಾವೇಶದ ವೇದಿಕೆ ಏರಿದ ಎಡಪಕ್ಷಗಳ ನಾಯಕರು ರೈತರೊಂದಿಗೆ ನಾವಿದ್ದೇವೆ ಎಂದು ಹೇಳುವ ಮೂಲಕ 2019ರ ಚುನಾವಣೆಯಲ್ಲಿ ನಾವೆಲ್ಲವರೂ ಒಟ್ಟಾಗಿರಲಿದ್ದೇವೆ ಎಂಬ ಸಂದೇಶವನ್ನೂ ರವಾನಿಸಿದರು.

‘ಅಖಿಲ ಭಾರತೀಯ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ’ ಹೆಸರಿನ ರೈತ ಒಕ್ಕೂಟದಡಿ ದೇಶದ ವಿವಿಧ ಭಾಗಗಳ ಸುಮಾರು 200 ರೈತ ಸಂಘಟನೆಗಳು ನವೆಂಬರ್‌ 29 ಮತ್ತು 30ರಂದು ದೆಹಲಿಯಲ್ಲಿ ಬೃಹತ್‌ ಸಮಾವೇಶ ನಡೆಸಿದವು. ಮೊದಲ ದಿನದ ದಿಲ್ಲಿ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನ ರೈತರು ಬೇರೆ ಬೇರೆ ಮಾರ್ಗಗಳಿಂದ ರಾಜಧಾನಿಗೆ ಹರಿದುಬಂದರು. ರಾಮಲೀಲಾ ಮೈದಾನದಲ್ಲಿ ಜಮಾವಣೆಗೊಂಡ ರೈತರು ಮರು ದಿನ ಸಂಸತ್‌ ಮಾರ್ಗದಲ್ಲಿ ಸಮಾವೇಶ ನಡೆಸಿದರು.

ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕಾನೂನಿನ ಚೌಕಟ್ಟಿಗೆ ಒಳಪಡಿಸಬೇಕು. ರೈತರ ಸಾಲಮನ್ನಾ ಮಾಡಬೇಕು ಹಾಗೂ ಸ್ವಾಮಿನಾಥನ್‌ ವರದಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಬೇಕು ಎಂಬ ಮೂರು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ರೈತರು ಸಂಸತ್‌ನ ವಿಶೇಷ ಅಧಿವೇಶನಕ್ಕೆ ಆಗ್ರಹಿಸಿದರು.

ಆದರೆ, ರೈತರ ಸಮಸ್ಯೆಗಳನ್ನು ಆಲಿಸಲು ಸೌಜನ್ಯಕ್ಕಾದರೂ ಕೇಂದ್ರದ ಬಿಜೆಪಿ ಸರಕಾರ ತನ್ನ ಯಾವುದೇ ಪ್ರತಿನಿಧಿಗಳನ್ನು ಕಳಿಸಲಿಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸುವ ಮಾತು ಒಂದುಕಡೆಗಾದರೆ, ಕನಿಷ್ಠ ಪಕ್ಷ ಅವರ ಸಮಸ್ಯೆಯನ್ನು ಕೇಳುವ ಮನಸ್ಸನ್ನೂ ಅಧಿಕಾರದಲ್ಲಿರುವ ಬಿಜೆಪಿ ಮಾಡಲಿಲ್ಲ. ಅಧಿಕಾರದಲ್ಲಿರುವ ಬಿಜೆಪಿ ರೈತರ ಈ ಸಮಾವೇಶವನ್ನು ಕಡೆಗಣಿಸಿದರೆ ಎಡಪಕ್ಷಗಳು ಈ ಸಮಾವೇಶದಲ್ಲೇ ಒಗ್ಗಟ್ಟು ಪ್ರದರ್ಶಿಸಿದವು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ಆಮ್‌ ಆದ್ಮಿ ಪಕ್ಷದ ಅರವಿಂದ್‌ ಕೇಜ್ರಿವಾಲ್‌, ನ್ಯಾಷನಲ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಫಾರೂಕ್ ಅಬ್ದುಲ್ಲಾ, ಲೋಕತಾಂತ್ರಿಕ ಜನತಾದಳ (ಎಲ್‌ಜೆಡಿ) ಮುಖಂಡ ಶರದ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂಡಿ ಸೇರಿದಂತೆ ಎಡಪಕ್ಷಗಳ ಮುಖಂಡರು ರೈತ ಸಮಾವೇಶದ ವೇದಿಕೆ ಮೇಲೆ ಕೈಕೈ ಸೇರಿಸಿ ಒಗ್ಗಟ್ಟು ಪ್ರದರ್ಶನ ಮಾಡಿದರು.

Also read: ಬಿಜೆಪಿಗೆ ರಾಮ, ಎಡಪಕ್ಷಗಳಿಗೆ ರೈತ; 2019ರ ಚುನಾವಣೆಗೆ ಅನ್ನದಾತರ ಸಂಘಟನೆ

“ಅಧಿಕಾರದಲ್ಲಿರುವ ಪಕ್ಷದ ಯಾರೊಬ್ಬರೂ ರೈತರ ಸಮಸ್ಯೆಗಳನ್ನು ಕೇಳಲು ಬರಲಿಲ್ಲ. ಆದರೆ, ರೈತರು ಯಾವುದೇ ಒಂದು ಪಕ್ಷದ ಪರವಾಗಿ ಅಥವಾ ವಿರೋಧವಾಗಿ ಈ ಸಮಾವೇಶಕ್ಕೆ ಬಂದಿರಲಿಲ್ಲ. ಯಾವುದೇ ಪಕ್ಷದವರಿರಲಿ ರೈತರ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ದನಿ ಎತ್ತಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು. ಯಾರು ಯಾವುದೇ ಪಕ್ಷದಲ್ಲಿರಲಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಷ್ಟೆ” ಎಂಬುದು ದಿಲ್ಲಿ ಚಲೋ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್‌ಅವರ ಅಭಿಪ್ರಾಯ.

“ಮಹಾರಾಷ್ಟ್ರದ ಸಂಸದ ರಾಜೀವ್‌ ಶೆಟ್ಟಿ ಎಂಬುವರು ಕನಿಷ್ಠ ಬೆಂಬಲ ಬೆಲೆ, ರೈತರ ಸಾಲಮನ್ನಾ ಹಾಗೂ ಸ್ವಾಮಿನಾಥನ್‌ ವರದಿ ಜಾರಿಯ ಬಗ್ಗೆ ಸಂಸತ್‌ನಲ್ಲಿ ಖಾಸಗಿ ಮಸೂದೆ ಮಂಡಿಸಿದ್ದಾರೆ. ಆ ಮಸೂದೆಯ ಮೇಲೆ ಚರ್ಚೆ ನಡೆಸಿದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಯ್ದೆ ರೂಪಿಸಬೇಕು ಎಂಬುದು ನಮ್ಮ ಒಕ್ಕೊರಲ ಒತ್ತಾಯವಾಗಿತ್ತು. ಸಂಸತ್‌ನ ವಿಶೇಷ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿದ್ದೇ ಈ ಕಾರಣಕ್ಕೆ” ಎನ್ನುತ್ತಾರೆ ಅವರು.

“ಮುಕ್ತ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಕೃಷಿ ಉತ್ಪನ್ನಗಳು ಮಾರಾಟವಾಗಬಾರದು. ಬೆಲೆ ಕುಸಿತವನ್ನು ತಡೆಯಲು ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ತರಬೇಕು. ನೈಸರ್ಗಿಕ ವಿಕೋಪಗಳಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಸಾಲ ಮರುಪಾವತಿ ಮಾಡುವ ಶಕ್ತಿ ಇಲ್ಲ. ಹೀಗಾಗಿ ರೈತರ ಸಾಲ ಮನ್ನಾ ಮಾಡಬೇಕು. ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್‌ ಸಮಿತಿಯ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರುತ್ತೇನೆ ಎಂದು ಹೇಳಿದ್ದರು. ಆ ಮಾತನ್ನು ಅವರು ಈಗ ಉಳಿಸಿಕೊಳ್ಳಬೇಕು. ರೈತರ ಸಮಸ್ಯೆಗಳ ಬಗ್ಗೆ ಚರ್ಚೆಗಾಗಿ ವಿಶೇಶ ಅಧಿವೇಶನ ಕರೆಯಬೇಕು. ಈ ಪ್ರಮುಖ ಬೇಡಿಕೆಗಳನ್ನು ದಿಲ್ಲಿ ಚಲೋ ಸಮಾವೇಶದಲ್ಲಿ ಸರಕಾರದ ಮುಂದಿಟ್ಟಿದ್ದೇವೆ” ಎಂಬುದು ಅವರು ಮಾತು.

“ವೇದಿಕೆ ಮೇಲೆ ಬಂದು ಕೇವಲ ನಾವು ನಿಮ್ಮೊಂದಿಗಿದ್ದೇವೆ ಎಂದು ಬಾಯಿ ಮಾತಿನಲ್ಲಿ ಹೇಳುವುದಲ್ಲ. ರೈತರ ಬಗ್ಗೆ ಬದ್ಧತೆಯನ್ನು ಪ್ರದರ್ಶಿಸಬೇಕು. ಸಂಸತ್‌ನಲ್ಲಿ ರೈತರ ಪರವಾಗಿ ದನಿ ಎತ್ತಬೇಕು ಎಂದು ವಿಪಕ್ಷಗಳ ಮುಖಂಡರಿಗೂ ಆಗ್ರಹಿಸಿದ್ದೇವೆ. ಅದು ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆಯೋ ನೋಡಬೇಕು” ಎನ್ನುತ್ತಾರೆ ಅವರು.

ವಿಪಕ್ಷಗಳ ಮುಖಂಡರೇನೋ ರೈತರ ಸಮಾವೇಶದ ವೇದಿಕೆ ಮೇಲೆ ಬಂದು 2019ಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು ನಾವೆಲ್ಲವರೂ ಒಟ್ಟಾಗಿರಲಿದ್ದೇವೆ ಎಂಬ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದಾರೆ. ಆದರೆ, ವಿಪಕ್ಷಗಳ ಈ ಒಗ್ಗಟ್ಟು ಪ್ರದರ್ಶನದಿಂದ ರೈತರ ಬೇಡಿಕೆಗಳು ಸ್ವಲ್ಪಮಟ್ಟಿಗೆ ಹಿನ್ನೆಲೆಗೆ ಸರಿದಿದ್ದಂತೂ ನಿಜ. ವಿಪಕ್ಷಗಳು ಇಲ್ಲಿ ಒಗ್ಗಟ್ಟು ಪ್ರದರ್ಶನಕ್ಕಷ್ಟೇ ಸೀಮಿತವಾಗದೆ ಸಂಸತ್‌ನಲ್ಲಿ ರೈತರ ಪರವಾಗಿ ಎಷ್ಟರ ಮಟ್ಟಿಗೆ ದನಿ ಎತ್ತಲಿವೆ ಎಂಬುದು ಈಗ ಮುಖ್ಯ.