samachara
www.samachara.com
ರಾಮನಷ್ಟೇ ಅಲ್ಲ, ಹನುಮನೂ ಚುನಾವಣಾ ವಸ್ತು; ಆಂಜನೇಯ ದಲಿತನಾದರೆ ‘ಭಕ್ತ’ರಿಗೇಕೆ ಸಿಟ್ಟು?
COVER STORY

ರಾಮನಷ್ಟೇ ಅಲ್ಲ, ಹನುಮನೂ ಚುನಾವಣಾ ವಸ್ತು; ಆಂಜನೇಯ ದಲಿತನಾದರೆ ‘ಭಕ್ತ’ರಿಗೇಕೆ ಸಿಟ್ಟು?

ರಾಮನ ವಿಚಾರದಲ್ಲಿ ಒಗ್ಗಟ್ಟಾಗಿದ್ದ ಬಿಜೆಪಿ ಈಗ ಹನುಮಂತನ ವಿಚಾರದಲ್ಲಿ ಒಡೆದುಹೋಗಿದೆ. ‘ಮುಖ್ಯಪ್ರಾಣ’ ಹನುಮಂತನನ್ನು ಸಾಮಾನ್ಯ ವಾನರ ರೂಪದಲ್ಲಿ ಕಲ್ಪಿಸಿಕೊಳ್ಳಲು ವೈದಿಕ ಮನಸ್ಸುಗಳಿಗೆ ಸಾಧ್ಯವಾಗುತ್ತಿಲ್ಲ.

Team Samachara

ರಾಮ ಭಕ್ತ ಹನುಮಂತ ಆದಿವಾಸಿ, ದಲಿತ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿರುವುದಕ್ಕೆ ‘ಭಕ್ತ ಸಮೂಹ’ ಯೋಗಿ ವಿರುದ್ಧ ತಿರುಗಿ ಬಿದ್ದಿದೆ. ಅದರಲ್ಲೂ ಬ್ರಾಹ್ಮಣ ಸಮುದಾಯ ಆದಿತ್ಯನಾಥ್‌ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದೆ. ಆಂಜನೇಯ ದಲಿತ ಎಂಬ ಒಂದು ಹೇಳಿಕೆಯನ್ನೂ ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ‘ಭಕ್ತ’ ಸಮುದಾಯವಿದೆ.

ಈವರೆಗೆ ಚುನಾವಣೆಗಳ ಸಂದರ್ಭದಲ್ಲಿ ರಾಮನನ್ನು ತರುತ್ತಿದ್ದ ಬಿಜೆಪಿ ಈ ಬಾರಿ ಹನುಮಂತನನ್ನೂ ಚುನಾವಣಾ ವೇದಿಕೆಗೆ ಎಳೆದಿದೆ. ಹನುಮಂತ ಆದಿವಾಸಿ, ದಲಿತ ಎಂದು ಹೇಳುವ ಮೂಲಕ ರಾಮನ ಹೆಸರಿನ ಮತಗಳ ಜತೆಗೆ ಆದಿವಾಸಿ, ದಲಿತರ ಮತಗಳನ್ನೂ ಸೆಳೆಯುವ ಆದಿತ್ಯನಾಥ್‌ ಅಸ್ತ್ರ ಅವರಿಗೇ ಈಗ ತಿರುಗುಬಾಣವಾಗಿದೆ. ಹನುಮಂತನನ್ನು ಆದಿವಾಸಿ, ದಲಿತ ಎಂದು ಒಪ್ಪಲು ಸಿದ್ಧವಿಲ್ಲದ ವೈದಿಕರು ಈಗ ಕ್ಷತ್ರಿಯ ಸಮುದಾಯದಿಂದ ಬಂದ ಆದಿತ್ಯನಾಥ್‌ ವಿರುದ್ಧವೇ ತಿರುಗಿ ಬಿದ್ದಾರೆ.

ಹನುಮಂತ ಆದಿವಾಸಿ, ದಲಿತ ಎಂಬ ಹೇಳಿಕೆಯ ವಿಚಾರದಲ್ಲಿ ಆದಿತ್ಯನಾಥ್‌ ವಿರುದ್ಧ ಸಿಟ್ಟಾಗಿರುವ ವೈದಿಕರು ಬಿಜೆಪಿ ಎಂಬ ಪಕ್ಷಕ್ಕಿಂತ ಜಾತೀಯತೆಯೇ ತಮಗೆ ಮುಖ್ಯ ಎಂಬುದನ್ನು ಪರೋಕ್ಷವಾಗಿ ಪ್ರಚುರ ಪಡಿಸಿದ್ದಾರೆ. ರಾಮನ ವಿಚಾರದಲ್ಲಿ ಒಗ್ಗಟ್ಟಾಗಿದ್ದ ಬಿಜೆಪಿ ಈಗ ಹನುಮಂತನ ವಿಚಾರದಲ್ಲಿ ಒಡೆದುಹೋಗಿದೆ. ‘ಮುಖ್ಯಪ್ರಾಣ’ ಹನುಮಂತನನ್ನು ಸಾಮಾನ್ಯ ವಾನರ ರೂಪದಲ್ಲಿ ಕಲ್ಪಿಸಿಕೊಳ್ಳಲು ವೈದಿಕ ಮನಸ್ಸುಗಳಿಗೆ ಸಾಧ್ಯವಾಗುತ್ತಿಲ್ಲ.

ಹನುಮಂತ ಭಾರತದ ದಕ್ಷಿಣ ಭಾಗದ ವಾನರ ಸಮುದಾಯಕ್ಕೆ ಸೇರಿದವನು ಎಂದು ರಾಮಾಯಣವೇ ಹೇಳುತ್ತದೆ. ಸೀತೆಯನ್ನು ಹುಡುಕಿಕೊಂಡು ರಾಮ ದಕ್ಷಿಣಕ್ಕೆ ಅಲೆಯುತ್ತಾ ಬಂದಾಗ ಕಿಷ್ಕಿಂದೆಯಲ್ಲಿ ಸಿಕ್ಕಿದ್ದು ವಾನರ ರೂಪಿ ಹನುಮಂತನೇ ಹೊರತು ಮಾನವ ರೂಪಿ ಆರ್ಯನಲ್ಲ ಎಂಬುದನ್ನು ಸ್ವತಃ ರಾಮಾಯಣ ಸ್ಪಷ್ಟಪಡಿಸುತ್ತದೆ. ಆದರೆ, ಹನುಮಂತನ ಸುತ್ತಾ ಹುಟ್ಟಿಕೊಂಡ ಪುರಾಣಗಳು ಆತನ ವಾನರ ರೂಪಕ್ಕೆ ಬೇರೆಯದೇ ಕಥೆ ಸೃಷ್ಟಿಸಿವೆ.

ಹನುಮಂತನಿಗೂ ಸೂರ್ಯನಿಗೂ ಸೇರಿಸಿ ಕಟ್ಟಿರುವ ಕಥೆಯಲ್ಲಿ ಸೂರ್ಯನನ್ನು ಹಣ್ಣು ಎಂದು ಭಾವಿಸಿದ ಹನುಮಂತ ಸೂರ್ಯನನ್ನು ಹಿಡಿಯಲು ಹೋಗಿ ಮುಖ ಊದಿಸಿಕೊಳ್ಳಬೇಕಾಯಿತು ಎಂಬುದೊಂದು ಕಥೆ. ಒಬ್ಬ ಹನುಮಂತ ಸೂರ್ಯನನ್ನು ಹಿಡಿಯಲು ಹೋಗಿ ಮುಖ ಊದಿಸಿಕೊಂಡ ಎಂಬುದನ್ನು ಒಪ್ಪಬಹುದು. ಆದರೆ, ಹನುಮಂತನ ಜತೆಗಿದ್ದ ಅವನ ಕುಲದ ಎಲ್ಲರ ಮುಖಗಳೂ ಊದಿಕೊಳ್ಳಲು ಕಾರಣವೇನು? ಇಂಥ ಪ್ರಶ್ನೆಗಳ ಬಗ್ಗೆ ಪುರಾಣಗಳು ತರ್ಕಬದ್ಧವಾದ ಉತ್ತರ ಕೊಡುವುದಿಲ್ಲ.

ರಾಮ, ಲಕ್ಷ್ಮಣರ ಜತೆಗೆ ವಾನರ ರೂಪಿ ಹನುಮಂತ ಹಾಗೂ ವಾನರ ಪಡೆ
ರಾಮ, ಲಕ್ಷ್ಮಣರ ಜತೆಗೆ ವಾನರ ರೂಪಿ ಹನುಮಂತ ಹಾಗೂ ವಾನರ ಪಡೆ

‘ಊರು ಸುಟ್ಟರೂ ಹನುಮಪ್ಪ ಹೊರಗೆ’ ಎಂಬ ಗಾದೆ ಇದೆ. ಸಾಮಾನ್ಯವಾಗಿ ಗ್ರಾಮೀಣ ಜನರ ಜನಪದ ಹನುಮಂತ ಪುರಾಣಗಳ ಹನುಮಂತನಿಗಿಂತ ತುಂಬಾ ಭಿನ್ನ. ಊರ ಹೊರಗಿನ ಜನಪದ ದೈವವಾಗಿದ್ದ ಹನುಮಂತನಿಗೆ ದಿನ ಕಳೆದಂತೆ ಕೇಸರಿ ಬಣ್ಣ ಬಳಿದು ವೈದಿಕನನ್ನಾಗಿ ಮಾಡಲಾಗಿದೆ. ಊರು, ಕೇರಿಗಳ ಜನಪದ ದೈವಗಳನ್ನೂ ಕೇಸರಿಮಯವಾಗಿಸುತ್ತಿರುವ ‘ಭಕ್ತಗಣ’ ಈಗಾಗಲೇ ಹನುಮಂತನನ್ನು ಕೇಸರಿ ಐಕಾನ್‌ ಆಗಿಸಿ ಆಟೊ, ಕಾರುಗಳ ಮೇಲೆ ಕೇಸರಿ ಬಣ್ಣದಲ್ಲಿ ಕೂರಿಸಿದೆ.

ನಗರ, ಪಟ್ಟಣ, ಅರೆಪಟ್ಟಣಗಳಲ್ಲಿರುವ ಹನುಮಂತನನ್ನು ವೈದಿಕನನ್ನಾಗಿ ಮಾಡಿಕೊಂಡಿರುವ ವೈದಿಕರು ಈಗ ಹನುಮಂತ ಆದಿವಾಸಿ, ಅರಣ್ಯವಾಸಿ, ದಲಿತ ಎಂಬುದನ್ನು ಹೇಗೆ ತಾನೇ ಒಪ್ಪಲು ಸಾಧ್ಯ. ಆದರೆ, ವೈದಿಕರ ಕೈಗೆ ಸಿಗದ ಅದೆಷ್ಟೋ ಹನುಮಪ್ಪನ ಗುಡಿಗಳಲ್ಲಿ ಇಂದಿಗೂ ಹನುಮಂತ ಆದಿವಾಸಿಗಳ, ಅರಣ್ಯವಾಸಿಗಳ, ದಲಿತರ ಹನುಮಂತನೇ ಆಗಿ ಉಳಿದಿದ್ದಾನೆ.

ದಕ್ಷಿಣ ಕರ್ನಾಟಕದ ಅದರಲ್ಲೂ ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಹಲವು ಕಡೆ ಹನುಮಂತನಿಗೆ ಮಾಂಸದ ಎಡೆ ಮಾಡುವ ಪದ್ಧತಿ ಇದೆ. ದಾಸಪ್ಪಗಳ ಪರಂಪರೆಯಲ್ಲಿ ಮಾಂಸದ ಅಡುಗೆ ಮಾಡಿ ಹನುಮಂತನಿಗೆ ನೈವೇದ್ಯ ಮಾಡುವ ರೂಢಿ ಇಂದಿಗೂ ಇದೆ. ಮಂಡ್ಯ, ತುಮಕೂರು ಭಾಗದ ಹಲವು ಕಡೆ ಹನುಮಪ್ಪನ ಪರಿಷೆಗೆ ಕುರಿ, ಕೋಳಿ ಕಡಿದು ಮಾಂಸದ ಅಡುಗೆ ಮಾಡಿ ಅದನ್ನೇ ಪ್ರಸಾದವಾಗಿ ಊಟ ಮಾಡುತ್ತಾರೆ. ಹನುಮಂತನಿಗಷ್ಟೇ ಅಲ್ಲ ಕುಣಿಗಲ್‌, ನಾಗಮಂಗಲ, ತುರುವೇಕೆರೆ ತಾಲ್ಲೂಕುಗಳ ದಾಸಪ್ಪಗಳ ಪರಂಪರೆಯ ಮನೆಗಳಲ್ಲಿ ತಿರುಪತಿ ಒಕ್ಕಲಿನವರು ತಿಮ್ಮಪ್ಪನಿಗೂ ಎಡೆ ಮಾಡುವುದು ಮಾಂಸಾಹಾರವನ್ನೇ. ಹರಿಸೇವೆಯ ಹೆಸರಿನಲ್ಲಿ ನಡೆಯುವ ತಿಮ್ಮಪ್ಪನ ಉತ್ಸವದಲ್ಲಿ ಮಾಂಸಾಹಾರವೇ ಮೊದಲು.

ಹೀಗೆ ಬಹುರೂಪಿಯಾಗಿರುವ ಸಂಸ್ಕೃತಿಯನ್ನು ಏಕರೂಪಿಯಾಗಿಸಲು ಹೊರಟಿರುವ ಭಕ್ತಗಣ ಹನುಮಂತನನ್ನು ಅವೈದಿಕನನ್ನಾಗಿ ಒಪ್ಪಿಕೊಳ್ಳಲು ಈಗ ಸಿದ್ಧವಿಲ್ಲ. ಹನುಮಂತ ಬ್ರಾಹ್ಮಣನೋ, ದಲಿತನೋ ಎಂಬ ಜಾತಿಯ ವಿಚಾರಕ್ಕಿಂತ ಮುಖ್ಯವಾಗಿ ಗಮನಿಸಬೇಕಿರುವುದು ಬಹುಸಂಸ್ಕೃತಿಯನ್ನು ಒಪ್ಪಲು ವೈದಿಕ ಮನಸ್ಸುಗಳಿಗೆ ಇಷ್ಟವಿಲ್ಲ ಎಂಬುದನ್ನು. ಆಹಾರದ ಕಾರಣಕ್ಕೆ, ಆಚರಣೆಗಳ ಕಾರಣಕ್ಕೆ, ಭಾಷೆಯ ಕಾರಣಕ್ಕೆ ಆದಿವಾಸಿ, ಅರಣ್ಯವಾಸಿ, ದಲಿತ, ತಳ ಸಮುದಾಯಗಳನ್ನು ದೂರವೇ ಇಟ್ಟಿರುವ ವೈದಿಕರು ತಮ್ಮ ‘ಮುಖ್ಯಪ್ರಾಣ’ ಆ ತಳ ಸಮುದಾಯಗಳ ಪ್ರತಿನಿಧಿ ಎಂಬುದನ್ನು ಒಪ್ಪಲು ಸಿದ್ಧವಿಲ್ಲ.

ಆದರೆ, ಇಡೀ ಭಾರತಕ್ಕೆ ಒಂದೇ ರೀತಿಯಾದ ಭಾಷೆ ಇಲ್ಲ, ಒಂದೇ ರೀತಿಯಾದ ಆಚರಣೆಯಿಲ್ಲ, ಒಂದೇ ಬಗೆಯ ವೇಷಭೂಷಣಗಳಿಲ್ಲ, ಒಂದೇ ರೀತಿ ನೀತಿಗಳಿಲ್ಲ, ಒಂದೇ ಸಂಸ್ಕೃತಿ ಇಲ್ಲ. ಇಂತಹ ಬಹುತ್ವದ ಭಾರತಕ್ಕೆ ಒಬ್ಬ ರಾಮನಿಲ್ಲ, ಒಬ್ಬನೇ ಹನುಮಂತನೂ ಇಲ್ಲ. ಆಯಾ ಸಮುದಾಯಗಳಿಗೆ ತಕ್ಕಂತೆ ರಾಮ, ಹನುಮರೂ ಬೇರೆ ಬೇರೆಯೇ ಆಗಿದ್ದಾರೆ, ಅವರನ್ನು ಆರಾಧಿಸುವ ಆಚರಣೆಗಳೂ ಬೇರೆಯಾಗಿರುತ್ತವೆ ಎಂಬ ಸತ್ಯವನ್ನು ವೈದಿಕ ಮನಸ್ಸುಗಳು ಇನ್ನಾದರೂ ಒಪ್ಪಿಕೊಂಡು ಬಹುತ್ವವನ್ನು ಗೌರವಿಸುವ ಉದಾರತೆ ಬೆಳೆಸಿಕೊಳ್ಳಲಿ.