samachara
www.samachara.com
ಉತ್ತರ ಕನ್ನಡ ರೈತರ ನಿದ್ದೆಗೆಡಿಸಿದ ವನ್ಯಮೃಗಗಳು; ಕೈಗೆ ಬಂದ ತುತ್ತು ಬಾಯಿಗಿಲ್ಲ!
COVER STORY

ಉತ್ತರ ಕನ್ನಡ ರೈತರ ನಿದ್ದೆಗೆಡಿಸಿದ ವನ್ಯಮೃಗಗಳು; ಕೈಗೆ ಬಂದ ತುತ್ತು ಬಾಯಿಗಿಲ್ಲ!

ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಕಟಾವಿಗೆ ಬಂದಿರುವ ಬೆಳೆ ಹಾನಿಯಾಗುತ್ತಿದೆ. ಆದರೆ, ಸರಕಾರ ಕೊಡುತ್ತಿರುವ ಬೆಳೆನಷ್ಟ ಪರಿಹಾರ ಮಾತ್ರ ಅತ್ಯಲ್ಪ.

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆ ಕಟಾವಿಗೆ ಸಿದ್ಧವಾಗುತ್ತಿರುವ ಹಂತದಲ್ಲಿ ಕಾಡು ಪ್ರಾಣಿಗಳು ರೈತರ ಹೊಲ, ತೋಟಗಳಿಗೆ ನುಗ್ಗುತ್ತಿವೆ. ಇಲ್ಲಿನ ರೈತರು ಬೆಳೆ ನಷ್ಟದಿಂದ ತೀವ್ರ ಹಾನಿ ಅನುಭವಿಸುತ್ತಿದ್ದಾರೆ. ಮುಂದೇನು ಎಂದು ತೋಚದೇ ಮಂಕಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯು ಕರಾವಳಿ, ಮಲೆನಾಡು ಮತ್ತು ಅರೆ ಮಲೆನಾಡೆಂಬ ಭೌಗೋಳಿಕ ಲಕ್ಷಣ ಹೊಂದಿದೆ. ಭತ್ತ, ಕಬ್ಬು, ಜೋಳ, ತರಕಾರಿ ಮುಂತಾದವುಗಳು ಪ್ರಮುಖ ಕೃಷಿ ಬೆಳೆಗಳಾದರೆ, ಅಡಿಕೆ, ಕಾಳುಮೆಣಸು, ಬಾಳೆ, ಏಲಕ್ಕಿ, ಜಾಯಿಕಾಯಿ ಮತ್ತು ಲವಂಗ ಪ್ರಮುಖ ತೋಟಗಾರಿಕೆ ಬೆಳೆಗಳು.

ಭತ್ತ ಜಿಲ್ಲೆಯ ಪ್ರಮುಖ ಆಹಾರ ಬೆಳೆ. ಈಗ ಭತ್ತ ಕಟಾವು ಮಾಡುವ ಸಮಯ. ಮುಂಡಗೋಡ ತಾಲೂಕು ಜಿಲ್ಲೆಯ ಭತ್ತದ ಕಣಜವೆಂದರೂ ತಪ್ಪಿಲ್ಲ. ಆದರೆ ಕಾಡಾನೆ ಹಿಂಡು ಇಲ್ಲಿನ ರೈತರ ನಿದ್ದೆ ಕಸಿದಿದೆ. ರಾತ್ರಿ ಯಾವುದೋ ಸಮಯದಲ್ಲಿ ಗುಂಪು ಗುಂಪಾಗಿ ಭತ್ತದ ಗದ್ದೆಗೆ ಇಳಿಯುವ ಕಾಡಾನೆಗಳು ಜಪ್ಪಯ್ಯ ಅಂದರೂ ಕಾಲು ಕೀಳುತ್ತಿಲ್ಲ. ಜಾಗಟೆ, ಪಟಾಕಿಯಂಥ ಎಲ್ಲ ಪ್ರಯೋಗಗಳಿಗೂ ಜಗ್ಗದ ಕಾಡಾನೆ ಹಿಂಡು ಹತ್ತಿರ ಹೋದರೆ ರೈತರನ್ನೇ ಬೆನ್ನಟ್ಟಿ ಬರುತ್ತಿವೆ.

ಚವಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಕರವಳ್ಳಿ ಹಳ್ಳಿಗೆ ನುಗ್ಗಿ ಭತ್ತದ ಗದ್ದೆಗಳನ್ನು ನಾಶಪಡಿಸಿ, ಬಾಳೆ ತೋಟವನ್ನೂ ನಜ್ಜುಗುಜ್ಜಾಗಿಸಿವೆ. ಸುಮಾರು 25-30 ದಿನಗಳಿಂದ ಒಂದಲ್ಲ ಒಂದು ಹಳ್ಳಿಯಲ್ಲಿ ಕಾಡಾನೆಗಳ ಇಂಥ ಉಪಟಳ ನಡೆದೇ ಇದೆ! ಮರಿಗಳನ್ನೂ ಸೇರಿ ಏಳಕ್ಕೂ ಹೆಚ್ಚು ಆನೆಗಳಿರಬಹುದೆಂಬುದು ಮುಂಡಗೋಡ ರೈತರ ಅಭಿಪ್ರಾಯ. ಹೊಲಗಳಲ್ಲಿ ಬೆಳೆ ಖಾಲಿಯಾದ ನಂತರ ನಾಡಿಗೇ ದಾಂಗುಡಿ ಇಡಬಹುದೆಂಬ ಆತಂಕವೂ ಅವರದ್ದು.

ಕಾಡು ಹಂದಿ ಕಾಟ!
ಕರಾವಳಿಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ ಮತ್ತು ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನ ಭತ್ತದ ರೈತರನ್ನು ಕಾಡು ಹಂದಿ ಹಿಂಡು ಕಾಡುತ್ತಿದೆ. 50-70% ಭತ್ತದ ಕಾಳು ಭೂಮಿ ಪಾಲಾಗುತ್ತಿದೆ. ಮುಂದೆ ಜಾನುವಾರು ಮೇವಾಗಿ ಉಪಯೋಗಿಸಲ್ಪಡುತ್ತಿದ್ದ ಭತ್ತದ ಹುಲ್ಲು ಸಹ ಕಾಡು ಹಂದಿಗಳ ಓಡಾಟದಿಂದ ಮಣ್ಣು ಪಾಲಾಗುತ್ತಿದೆ. ಇದರಿಂದ ಮೇವು ದೊರೆಯುವುದೂ ದುಸ್ತರ ಎನ್ನಲಾಗಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಮೇವನ್ನೂ ಕೊಂಡು ತರಬೇಕು ಅಥವಾ ಜಾನುವಾರುಗಳನ್ನೇ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲ ಸೂಚನೆಗಳೂ ಕಾಣುತ್ತಿವೆ. ಅಲ್ಲದೇ ಕಾಡುಕೋಳಿ, ಕಡ, ಜಿಂಕೆ, ಕಾನುಕುರಿ, ನವಿಲು, ಮಂಗಗಳ ಹಿಂಡು, ಕಾಡೆಮ್ಮೆಯ ದಾಳಿಗಳಂತೂ ನಡೆದೇ ಇವೆ. ಹೀಗೇ ಮುಂದುವರೆದಲ್ಲಿ ಜೀವನೋಪಾಯಕ್ಕೆ ಕೂಲಿ ಅರಸಿ ಬೇರೆಡೆಗೆ ಗುಳೆ ಹೋಗಬೇಕಾಗುತ್ತದೆ ಎಂದು ಹಲವು ರೈತರು ಹೇಳುತ್ತಾರೆ. ಆದರೆ ಈ ರೀತಿ ಗುಳೆ ಹೋದಲ್ಲಿ ಸಾಮಾಜಿಕ ಮತ್ತು ಕೌಟುಂಬಿಕ ಭದ್ರತೆ ಇನ್ನಿಲ್ಲದಂತೆ ಹಾಳಾಗುತ್ತದೆ.

ಹಗಲಿನಲ್ಲೇ ರೈತನ ಮೇಲೆ ಕರಡಿ ದಾಳಿ
ಜಿಲ್ಲೆಯ ಹಳಿಯಾಳ, ದಾಂಡೇಲಿ ಭಾಗಗಳಲ್ಲಿ ಕಾಡಾನೆ, ಕಾಡು ಕೋಣ, ಕಾಡು ಹಂದಿಯೇ ಮುಂತಾದ ಪ್ರಾಣಿಗಳ ಹಿಂಡುಗಳ ಜೊತೆ ಕರಡಿಯೂ ಸೇರಿಕೊಂಡಿದೆ. ಈ ಭಾಗಗಳಲ್ಲಿ ಒಬ್ಬೊಬ್ಬರೇ ಹೊಲಕ್ಕೆ ಹೋಗಲೂ ರೈತರು ಹೆದರುತ್ತಾರೆ. ಮೊನ್ನೆಯಷ್ಟೆ ಜೋಯ್ಡಾದ ವಿರ್ನೂಲಿ ಸಮೀಪದ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಏರಂಜೋಳ ಮಜಿರೆಯಲ್ಲಿ ಬಾಬು ಲಾಂಬೋರೆ ಎಂಬ ರೈತನ ಮೇಲೆ ಕರಡಿ ದಾಳಿ ನಡೆಸಿದೆ. ಮನೆಯ ಹತ್ತಿರದ ಕೆರೆಯ ಸಮೀಪ ಮೇಯುತ್ತಿದ್ದ ದನಕರುಗಳನ್ನು ದೊಡ್ಡಿಗೆ ಕರೆತರುವ ಸಮಯದಲ್ಲಿ ಹಾಡುಹಗಲೇ ಕರಡಿ ದಾಳಿ ಮಾಡಿ ತೊಡೆಯನ್ನು ಕಚ್ಚಿದೆ. ಈತನ ಕೂಗು ಕೇಳಿ ಕೆಲವು ರೈತರು ಸೇರಿ ಕರಡಿಯನ್ನು ಕಾಡಿಗೆ ಓಡಿಸಿದ್ದಾರೆ. ಗಾಯಾಳುವನ್ನು ದಾಂಡೇಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಪ್ರಾಣಕ್ಕೆ ಅಪಾಯವಿಲ್ಲ ಎನ್ನಲಾಗಿದೆ.

ಮನೆಯ ಬಾಗಿಲಿಗೇ ಬಂದ ಹುಲಿ!
ಶಿರಸಿ ತಾಲೂಕಿನ ದೇವನಳ್ಳಿ ಗ್ರಾ.ಪಂ. ವ್ಯಾಪ್ತಿಯ ದೇವನ ಮನೆ, ದುಂಡ್ಲ ಮನೆ, ಮತ್ತೀಘಟ್ಟ ಮತ್ತು ದೇವನಳ್ಳಿ ಹಳ್ಳಿಗಳು ಮತ್ತು ಸುತ್ತಲಿನ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಹುಲಿಯೊಂದು ಕಾಣಿಸಿಕೊಂಡಿದ್ದು ಈಗಾಗಲೇ 6 ಹಸುಗಳನ್ನು ಬಲಿ ತೆಗೆದುಕೊಂಡಿದೆ. ಹಗಲಿನಲ್ಲಿಯೇ ಊರ ಸಮೀಪ ಕಾಣಿಸಿಕೊಂಡಿದ್ದು ಅದರ ಆರ್ಭಟಕ್ಕೆ ಗ್ರಾಮಸ್ಥರೆಲ್ಲ ಭಯಭೀತರಾಗಿದ್ದಾರೆ.

“ಮನೆಯ ಬಾಗಿಲಿಗೇ ಹುಲಿ ಬರುತ್ತಿದೆ. ಓಡಾಡಲೂ ಭಯ, ಕೊಟ್ಟಿಗೆಯ ಬಳಿಯೇ ಬರುತ್ತಿದೆ. ರಕ್ಷಣೆ ಬೇಕಾಗಿದೆ. ಮಕ್ಕಳು, ಹೆಂಗಸರು ಒಂಟಿಯಾಗಿ ಮನೆಯಲ್ಲಿರುತ್ತಾರೆ” ಎನ್ನುತ್ತಾರೆ ಚಂದ್ರಶೇಖರ ನಾಯ್ಕ. ಈ ಪ್ರದೇಶದ ಹಲವು ರೈತರು ಸೇರಿ ಹುಲಿ ಹಿಡಿದು ಬೇರೆಡೆ ದಟ್ಟ ಕಾಡಿಗೆ ಬಿಡುವಂತೆ ಶಿರಸಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿಯೂ ಆಗಿದೆ. ಪರಿಣಾಮ ಕಾದು ನೋಡಬೇಕಿದೆ. ಮುಂಡಗೋಡಿನ ಆನೆ ದಾಳಿ ವಿಷಯದಲ್ಲಂತು ಆನೆಗಳಿಗೆ ತೊಂದರೆ ಕೊಡದಂತೆ ರೈತರಿಗೆ ಅರಣ್ಯ ಇಲಾಖೆ ಸೂಚಿಸಿದೆಯಂತೆ.

ರೈತರಿಗೆ ಅಲ್ಪ ಪರಿಹಾರ!
ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ ಡಿ.ಸಿ.ಎಫ್. ಅವರಲ್ಲಿ ರೈತರು ಮನವಿ ನೀಡಿದಾಗ, “ಕಳೆದ ವರ್ಷ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಹಾನಿಗೀಡಾದ 254 ರೈತರಿಗೆ 4.76ಲಕ್ಷ ರೂ. ಪರಿಹಾರ ನೀಡಲಾಗಿದೆ. ವನ್ಯ ಮೃಗ ದಾಳಿಯಿಂದ ಹಸುವೊಂದು ಮೃತಪಟ್ಟಲ್ಲಿ 10 ಸಾವಿರ ರೂ. ನೀಡಲಾಗುತ್ತಿದೆ. ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ” ಎಂದು ಮಾಹಿತಿ ನೀಡಿದರು.

ಆದರೆ ರೈತರಿಗೆ ಈ ಮೊತ್ತ ಸರಾಸರಿ 1,875 ರೂ.ಗಳಷ್ಟು ಹಣ ದೊರೆಯುತ್ತದೆ. ವರ್ಷಕ್ಕಾಗುವಷ್ಟು ಊಟದ ಭತ್ತ, ಜಾನುವಾರು ಮೇವು ಕಳೆದುಕೊಂಡ ರೈತನಿಗೆ ಈ ಅಲ್ಪ ಮೊತ್ತ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾದಂತಾಗುತ್ತದೆ. ಈ ಅಲ್ಪ ಮೊತ್ತ ಪಡೆಯಲೂ ಸಹ ಹಲವಾರು ಬಾರಿ ಇಲಾಖೆಗಳ ಬಾಗಿಲಿಗೆ ಕೂಲಿನಾಲಿ ಬಿಟ್ಟು ಎಡತಾಕಬೇಕು. ಈ ಮೊತ್ತ ಪಡೆಯುವಲ್ಲಿ ಆಗುವ ಖರ್ಚಿಗೂ, ಪಡೆದ ಪರಿಹಾರ ಮೊತ್ತಕ್ಕೂ ಸರಿ ಹೋಗುತ್ತದೆ. ಅದಕ್ಕಿಂತ ಬೇರೆಡೆ ಕೂಲಿಗೆ ಹೋದರೆ ಇನ್ನೂ ಒಳ್ಳೆಯದು ಎನ್ನತ್ತಾರೆ ನೊಂದ ರೈತರು.

ಒಟ್ಟಾರೆ ರೈತನಿಗೆ ಕಾಡಿನ ಪ್ರಾಣಿಗಳಿಂದಾಗುವ ನಷ್ಟವನ್ನು ವೈಜ್ಞಾನಿಕವಾಗಿ ಅಂದಾಜು ಮಾಡಲಾಗುತ್ತಿಲ್ಲ. ಆಗುವ ಬೆಳೆ ನಷ್ಟದ ಮೊತ್ತಕ್ಕೂ, ದೊರೆಯುವ ಪರಿಹಾರ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬೆಳೆ ನಷ್ಟಕ್ಕೆ ದೊರಕುವ ಮೊತ್ತ ಮುಂದಿನ ಬೆಳೆಗೆ ಅಗತ್ಯವಿರುವ ಬಿತ್ತನೆ ಬೀಜ ಖರೀದಿಗೂ ಸಾಲುತ್ತಿಲ್ಲ. ಇನ್ನು ಜೀವನೋಪಾಯದ ಪ್ರಶ್ನೆಯಂತೂ ದೂರವೇ ಉಳಿಯಿತು ಎನ್ನುತ್ತಾರೆ ರೈತರು.

ತಳಹಂತದಲ್ಲಿ ಇಷ್ಟೊಂದು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತನಿಗೆ ಆಡಳಿತಾತ್ಮಕ ಬೆಂಬಲ ದೊರಕುತ್ತಿರುವುದು ಕಡಿಮೆ. ಇನ್ನಾದರೂ ರೈತರಿಗೆ ಆಗುತ್ತಿರುವ ನಷ್ಟಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಅಗತ್ಯ ಪರಿಹಾರ ಮೊತ್ತ ನಿಗದಿ ಮಾಡಿ, ಸಾಲದ ಕೂಪದೆಡೆ ಸಾಗುತ್ತಿರುವ ರೈತ ಕುಟುಂಬಗಳನ್ನು ರಕ್ಷಿಸುವ ಕಾರ್ಯವನ್ನು ಸರಕಾರ ಮಾಡಬೇಕಿದೆ.