samachara
www.samachara.com
ವಾಣಿಜ್ಯ ನಗರಿಗೆ ಮೋದಿ ಆಪ್ತನ ‘ವಿದ್ಯುತ್‌ ಶಾಕ್‌’, ಅದಾನಿ  ಬಿಲ್‌ ಏರಿಕೆಗೆ ಜನ ಕಂಗಾಲು
COVER STORY

ವಾಣಿಜ್ಯ ನಗರಿಗೆ ಮೋದಿ ಆಪ್ತನ ‘ವಿದ್ಯುತ್‌ ಶಾಕ್‌’, ಅದಾನಿ ಬಿಲ್‌ ಏರಿಕೆಗೆ ಜನ ಕಂಗಾಲು

ವಿದ್ಯುತ್‌ ಬಿಲ್‌ನಲ್ಲಿ ಕಂಡು ಕೇಳರಿಯದ ಏರಿಕೆಯಾಗುತ್ತಿದ್ದಂತೆ ಹಲವರು ಅದಾನಿ ಕಂಪನಿಗೆ ದೂರನ್ನೂ ನೀಡಿದ್ದಾರೆ. ಆದರೆ ಕಂಪನಿ ಇದಕ್ಕೆ ಬಳಕೆಯಲ್ಲಾದ ಏರಿಕೆ ಕಾರಣ ಎಂದು ಸಬೂಬು ಹೇಳಿದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ನಗರ ಪ್ರದೇಶಗಳೇ ಹಾಗೆ. ಅಲ್ಲಿ ಸಣ್ಣ ಜಾಗದಲ್ಲಿ ಹೆಚ್ಚಿನ ಜನರು ವಾಸವಿರುತ್ತಾರೆ. ಹೀಗಿರುವಾಗ ವಿದ್ಯುತ್‌ ಜಾಲವನ್ನು ನಿರ್ಮಿಸುವುದು ಗ್ರಾಮೀಣ ಭಾಗಗಳಿಗೆ ಹೋಲಿಸಿದರೆ ಹೆಚ್ಚು ಲಾಭದಾಯಕ ಮತ್ತು ಸರಳ. ಜತೆಗೆ ಮನೆಗಳು, ಫ್ಯಾಕ್ಟರಿಗಳ ವಿದ್ಯುತ್‌ ಬಳಕೆಯೂ ಹಳ್ಳಿಗಳಿಗಿಂತ ಹೆಚ್ಚಾಗಿರುತ್ತದೆ. ಹೀಗಾಗಿ ನಗರ ವಿದ್ಯುತ್‌ ಸರಬರಾಜು ಎನ್ನುವುದು ಖಾಸಗಿ ಕಂಪನಿಗಳಿಗೆ ‘ಚಿನ್ನದ ಮೊಟ್ಟೆ ಇಡುವ ಕೋಳಿ’.

ಮುಂಬೈ ಮಹಾನಗರದ ಇಂಥಹದ್ದೊಂದು ಚಿನ್ನದ ಮೊಟ್ಟೆ ಪ್ರಧಾನಿ ಪರಮಾಪ್ತ, ರಫೇಲ್‌ ಡೀಲ್‌ ಹಗರಣದ ಆರೋಪಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಕೈಯಲ್ಲಿತ್ತು. ಅದನ್ನೀಗ ಅವರು ಇನ್ನೋರ್ವ ಮೋದಿ ಆಪ್ತ ಗೌತಮ್‌ ಅದಾನಿ ಒಡೆತನದ ‘ಅದಾನಿ ಎಲೆಕ್ಟ್ರಿಸಿಟಿ ಮುಂಬೈ ಲಿ.’ಗೆ ಹಸ್ತಾಂತರಿಸಿದ್ದಾರೆ. ಇದೊಂದು ಆರ್ಥಿಕ ಪ್ರಕ್ರಿಯೆಯಾದರೂ ಇದರಿಂದ ನಷ್ಟಕ್ಕೆ ಗುರಿಯಾದವರು ಸಾಮಾನ್ಯ ಜನರು.

ಹೀಗೊಂದು ಮಾರಾಟ ಪ್ರಕ್ರಿಯೆ ನಡೆದ ನಂತರ ಅಕ್ಟೋಬರ್‌ನಿಂದ ವಿದ್ಯುತ್‌ ದರಗಳಲ್ಲಿ ಶೇಕಡಾ 50ರಷ್ಟು ಏರಿಕೆಯಾಗಿದೆ ಎಂದು ಕಾಂಗ್ರೆಸ್‌ ಮತ್ತು ಹಲವು ನಾಗರೀಕರು ದೂರಿದ್ದಾರೆ. ಮತ್ತು ಈ ಸಂಬಂಧ ಗುರುವಾರ ಮುಂಬೈ ಮಹಾನಗರ ಪ್ರತಿಭಟನೆಗೂ ಸಾಕ್ಷಿಯಾಗಿದೆ.

“ಈ ರೀತಿ ವಿದ್ಯುತ್‌ ಬೆಲೆ ಏರಿಕೆಯಾಗದಂತೆ ನಿಯಂತ್ರಿಸಲು ಮಂಡಳಿಯೊಂದಿದೆ. ಅದೇನು ನಿದ್ದೆ ಮಾಡುತ್ತಿದ್ದೆಯಾ?” ಎಂದು ಮಾಜಿ ಕೇಂದ್ರ ಸಚಿವ ಮಿಲಿಂದ್‌ ದೇವೋರಾ ಪ್ರಶ್ನಿಸಿದ್ದಾರೆ. “ಖಾಸಗಿಕರಣವನ್ನು ದಕ್ಷತೆಯಿಂದ ಬೆಂಬಲಿಸುವ ಬದಲು ಮೋದಿ ಸರಕಾರ ಸೃಷ್ಟಿಸಿದ ಅನುಕೂಲಕರ ವಾತಾವರಣದಲ್ಲಿ ಈ ಹಿಂದೆ ಅನಿಲ್‌ ಅಂಬಾನಿ ಜನರನ್ನು ಲೂಟಿ ಮಾಡುತ್ತಿದ್ದರು. ಈಗ ಅದಾನಿ ಲೂಟಿ ಮಾಡುತ್ತಿದ್ದಾರೆ,” ಎಂಬುದಾಗಿ ಮಹಾರಾಷ್ಟ್ರ ಹಿರಿಯ ಕಾಂಗ್ರೆಸ್ ನಾಯಕ ಸಂಜಯ್‌ ನಿರುಪಮ್‌ ಎಂದು ಕಿಡಿಕಾರಿದ್ದಾರೆ.

‘ಆಪ್ತ ಕೂಟ’ದ ಉಭಯ ಕುಶಲೋಪರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ...
‘ಆಪ್ತ ಕೂಟ’ದ ಉಭಯ ಕುಶಲೋಪರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ...
/ಎನ್‌ಡಿಟಿವಿ

ವಿದ್ಯುತ್‌ ಬಿಲ್‌ನಲ್ಲಿ ಹೀಗೊಂದು ಕಂಡು ಕೇಳರಿಯದ ಏರಿಕೆಯಾಗುತ್ತಿದ್ದಂತೆ ಹಲವರು ಅದಾನಿ ಕಂಪನಿಗೆ ದೂರನ್ನೂ ನೀಡಿದ್ದಾರೆ. ಆದರೆ ಕಂಪನಿ ಇದಕ್ಕೆ ಬಳಕೆಯಲ್ಲಾದ ಏರಿಕೆ ಕಾರಣ ಎಂದು ಸಬೂಬು ಹೇಳಿದೆ.

ಸೆಪ್ಟೆಂಬರ್‌ ನಂತರ ಬೆಲೆ ಪರಿಷ್ಕರಣೆ ಮಾಡಲಾಗಿದೆ. ಜತೆಗೆ ಅಕ್ಟೋಬರ್‌ನಲ್ಲಿ ಜನರು ಹೆಚ್ಚಿನ ವಿದ್ಯುತ್‌ ಬಳಸಿದ್ದಾರೆ. 0-100 ಯೂನಿಟ್‌ ಬಳಕೆಗೆ ಈ ಹಿಂದೆ ಪ್ರತಿ ಯೂನಿಟ್‌ಗೆ 4.42 ರೂಪಾಯಿ ಇತ್ತು. ಅದನ್ನೀಗ 4.78 ರೂಪಾಯಿಗೆ ಏರಿಕೆ ಮಾಡಲಾಗಿದೆ. 101 ರಿಂದ 300 ಯೂನಿಟ್‌ವರೆಗಿನ ವಿದ್ಯುತ್‌ ಬಳಕೆಗೆ ಈ ಹಿಂದೆ 8.04 ರೂಪಾಯಿ ಇದ್ದಿದ್ದು ಈಗ 8.58 ರೂಪಾಯಿಯಾಗಿದೆ. 301 ರಿಂದ 500 ಯೂನಿಟ್‌ವರೆಗಿನ ವಿದ್ಯುತ್‌ ಬಳಕೆಗೆ ಯೂನಿಟ್‌ಗೆ 30 ಪೈಸೆ ಏರಿಕೆ ಮಾಡಿದ್ದೇವೆ ಅಷ್ಟೇ. ಜನರು ಹೆಚ್ಚಾಗಿ ವಿದ್ಯುತ್‌ ಬಳಸಿ ಮೇಲಿನ ಸ್ಥರದಲ್ಲಿ ಗುರುತಿಸಿಕೊಂಡಿದ್ದರಿಂದ ಹೆಚ್ಚಿನ ಬಿಲ್‌ ಬಂದಿದೆ ಅಷ್ಟೇ ಎಂದು ಸಾಗಾ ಹಾಕಿದೆ. ಜತೆಗೆ ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ, ಇವೆಲ್ಲಾ ಆಧಾರ ರಹಿತ ಎಂಬುದಾಗಿ ಕಂಪನಿಯ ವಕ್ತಾರರು ಎಂದಿನ ಡೈಲಾಗ್‌ ಬಿಟ್ಟಿದ್ದಾರೆ.

18,800 ಕೋಟಿ ರೂಪಾಯಿಯ ಡೀಲ್‌:

2017ರ ಆರಂಭದಲ್ಲಿ ಅಂಬಾನಿ ಕಂಪನಿಯ ಶೇಕಡಾ 100ರಷ್ಟು ಶೇರುಗಳನ್ನು ಖರೀದಿಸಲು ಅದಾನಿ ಮುಂದೆ ಬಂದಿದ್ದರು. ವಿದ್ಯುತ್‌ ಉತ್ಪಾದನೆ, ಪೂರೈಕೆ ಮತ್ತು ಮನೆ ಮನೆಗೆ ಸರಬರಾಜು ಮಾಡುವ ಬೃಹತ್‌ ಜಾಲವನ್ನು ಕೈಗೆ ತೆಗೆದುಕೊಳ್ಳಲು ಅದಾನಿ ಒಡೆತನದ ಕಂಪನಿ ಮುಂದಾಗಿತ್ತು. ಸುಮಾರು 9 ತಿಂಗಳ ಸುದೀರ್ಘ ಪ್ರಕ್ರಿಯೆಯ ನಂತರ 2018ರ ಅಕ್ಟೋಬರ್‌ನಲ್ಲಿ ರಿಲಯನ್ಸ್‌ ಮತ್ತು ಅದಾನಿ ಟ್ರಾನ್ಸ್‌ಮಿಷನ್‌ ಲಿ. ನಡುವೆ ಡೀಲ್‌ ಕುದುರಿತ್ತು. ಈ ಮೂಲಕ 30 ಲಕ್ಷ ಗ್ರಾಹಕರಿರುವ 400 ಚದರ ಕಿಲೋಮೀಟರ್‌ ವಿಸ್ತೀರ್ಣದ ವಿದ್ಯುತ್‌ ಉದ್ಯಮವನ್ನು ಕೈಗೆ ತೆಗೆದುಕೊಂಡು ಮಹಾನಗರ ಕಾಲಿಟ್ಟರು ಅದಾನಿ.

18,800 ಕೋಟಿ ರೂಪಾಯಿ ನೀಡಿ ಮುಂಬೈ ಮತ್ತು ಮಹಾರಾಷ್ಟ್ರದ ವಿದ್ಯುತ್‌ ಸರಬರಾಜು, ದೆಹನುವಲ್ಲಿರುವ ವಿದ್ಯುತ್‌ ಉತ್ಪಾದನಾ ಘಟಕ ಮತ್ತು ಮುಂಬೈ ಉಪನಗರದಲ್ಲಿನ ಸಗಟು ವಿದ್ಯುತ್‌ ಸರಬರಾಜು ಕೇಂದ್ರಗಳನ್ನು ಅದಾನಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. “ನಷ್ಟದಲ್ಲಿದ್ದ ಅಂಬಾನಿ ಕಂಪನಿಯ ಖರೀದಿ ಹಿನ್ನೆಲೆಯಲ್ಲಿ ಗ್ರಾಹಕರ ಮೇಲೆ 2,000 ಕೋಟಿ ರೂಪಾಯಿಗಳ ಹೊರೆ ಬಿದ್ದಿದೆ. ಮೋದಿ ಮತ್ತು ಅವರ ಆಪ್ತ ಉದ್ಯಮಿಗಳು ಲೂಟಿ ಮಾಡುತ್ತಿರುವಾಗ ಮುಂಬೈನವರೇಕೆ ಅವರ ನಷ್ಟದ ಹೊಣೆ ಹೊರಬೇಕು,” ಎಂದು ನಿರುಪಮ್‌ ಪ್ರಶ್ನಿಸಿದ್ದಾರೆ.

1-100 ಯುನಿಟ್‌ ಬಳಕೆಗೆ ಇದ್ದ ಕನಿಷ್ಠ ದರವನ್ನು 55 ರೂಯಿಯಿಂದ 60 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದನ್ನು ಕಂಪನಿಯವರು ಹೇಳುತ್ತಿಲ್ಲ. ಜತೆಗೆ ವಿದ್ಯುತ್‌ ಹೊಂದಾಣಿಕೆ ವೆಚ್ಚ, ವೀಲಿಂಗ್‌ ಚಾರ್ಜ್‌, ಪ್ರತಿ ಯುನಿಟ್‌ ಎನರ್ಜಿ ವೆಚ್ಚಗಳನ್ನೂ ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಬಿಲ್‌ ಏರಿಕೆಗಿಲ್ಲ ಮೂಗುದಾರ:

ಭಾರತದಲ್ಲಿ ನಿಯಂತ್ರಣ ಆಯೋಗಳು ವಿದ್ಯುತ್‌ ಬೆಲೆಯನ್ನು ನಿರ್ಧರಿಸುತ್ತವೆ. ಅದರಂತೆ ಸೆಪ್ಟೆಂಬರ್‌ 12ರಂದು ಮಹಾರಾಷ್ಟ್ರ ವಿದ್ಯುತ್‌ ನಿಯಂತ್ರಣ ಆಯೋಗ ಸರಕಾರಿ ಸ್ವಾಮ್ಯದ ಎರಡು ಕಂಪನಿಗಳ ಮತ್ತು ಖಾಸಗಿಯವರಾದ ಟಾಟಾ ಪವರ್‌ ಕಂಪನಿ ಹಾಗೂ ಅದಾನಿ ಕಂಪನಿಯ ವಿದ್ಯುತ್‌ ಬೆಲೆ ಏರಿಕೆಗೆ ಅನುಮತಿ ನೀಡಿತ್ತು.

ಆದರೆ ನವೆಂಬರ್‌ನಲ್ಲಿ ತನ್ನ ಹಿಂದಿನ ಆದೇಶವನ್ನು ಬದಲಿಸಿದ ಆಯೋಗ, ಸರಕಾರಿ ಸ್ವಾಮ್ಯದ ವಿದ್ಯುತ್‌ ಸರಬರಾಜು ಕಂಪನಿ ಮಹವಿತರಣ್‌ ಲಿ. ನಿಂದ ಅದಾನಿ ಕಂಪನಿಗೆ ಏಕಗಂಟಿನಲ್ಲಿ 55 ರಿಂದ 60 ಕೋಟಿ ರೂಪಾಯಿ ಸಿಗುವಂತೆ ಮಾಡಿತ್ತು. ಪರಿಹಾರ ರೂಪದಲ್ಲಿ ನಾವು ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಆಯೋಗ ಹೇಳಿಕೊಂಡಿತ್ತು.

ಗೌತಮ್‌ ಅದಾನಿಯ ವಿದ್ಯುತ್‌ ಉತ್ಪಾದನಾ ಘಟಕವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ
ಗೌತಮ್‌ ಅದಾನಿಯ ವಿದ್ಯುತ್‌ ಉತ್ಪಾದನಾ ಘಟಕವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ
/ವೈದಂಬ್

ಆದರೆ ಇಷ್ಟಕ್ಕೆ ತೃಪ್ತವಾಗದ ಕಂಪನಿ ಜನರ ಜೇಬಿಗೂ ಕೈ ಹಾಕಿದೆ. ಹೀಗಿದ್ದು ತಾನು ಏರಿಕೆ ಮಾಡಿದ್ದು ಕೇವಲ ಶೇಕಡಾ 0.2ರಷ್ಟು ಮಾತ್ರ ಎಂದು ಕಂಪನಿ ಹೇಳಿಕೊಳ್ಳುತ್ತಿದೆ. ಇದು ಸುಳ್ಳು; ಕಂಪನಿ ತಾನು ಕೇವಲ ಶೇಕಡಾ 0.2ರಷ್ಟು ಮಾತ್ರ ಬೆಲೆ ಏರಿಕೆ ಮಾಡಿದ್ದೇನೆ ಎನ್ನುವುದನ್ನು ಸಾಬೀತು ಮಾಡಬೇಕು ‘ಮಹಾರಾಷ್ಟ್ರ ನವ ನಿರ್ಮಾಣ ಸೇನೆ’ ಸವಾಲನ್ನೂ ಹಾಕಿತ್ತು. ಜನರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಕಂಪನಿ ಪ್ರತಿನಿಧಿಗಳ ನಡುವೆ ಸಭೆಗಳೂ ನಡೆದಿತ್ತು. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಅಂದ ಹಾಗೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅಧಿಕಾರಕ್ಕೇರಿದ ನಂತರ ಅದಾನಿ ‘ಪವರ್‌’ ಹೆಚ್ಚಾಗಿದ್ದು ಇದೀಗ 35 ಬಲ್ಕ್‌ ಪವರ್‌ ಗ್ರಿಡ್‌ಗಳ ಮಾಲಿಕರಾಗಿದ್ದಾರೆ. 19,300 ಮೆಗಾವ್ಯಾಟ್‌ಗೆ ತಮ್ಮ ವಿದ್ಯುತ್‌ ಸರಬರಾಜಿನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ಅವರು ಈಗ ದೇಶದ ವಿದ್ಯುತ್‌ ಕ್ಷೇತ್ರದ ಅತೀ ದೊಡ್ಡ ಉದ್ಯಮಿಯಾಗಿದ್ದಾರೆ. ‘ಇದಕ್ಕೆ ಕಂಪನಿಯ ಲೂಟಿಯೇ ಕಾರಣ’ ಎಂಬುದು ಕಾಂಗ್ರೆಸ್‌ ವಾದ. ಮತ್ತದಕ್ಕೆ ಸಾಕ್ಷಿಯಾಗಿ ಜನ ಸಾಮಾನ್ಯರ ಬಿಲ್‌ಗಳನ್ನೂ ಅದು ಸಾರ್ವಜನಿಕರ ಮುಂದಿಟ್ಟಿದೆ. ಈಗ ಆರೋಪಗಳೆಲ್ಲಾ ಆಧಾರ ರಹಿತ, ಸುಳ್ಳು ಎಂಬ ಚರ್ವಿತ ಚರ್ವಣ ಸ್ಪಷ್ಟನೆಗಳನ್ನು ಬಿಟ್ಟು ಸೂಕ್ತ ಸಾಕ್ಷಿ ಮುಂದಿಡುವುದು ಅದಾನಿಯ ಕರ್ತವ್ಯ. ಓವರ್‌ ಟು ಮೋದಿ ಆಪ್ತ ಗೌತಮ್‌ ಅದಾನಿ.