samachara
www.samachara.com
 ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ಕಸರತ್ತು; ಮತ್ತೆ ಚಿಗುರಿದೆ ಬಿಜೆಪಿಯ ‘ರಾಷ್ಟ್ರೀಯ ಕನಸು’!
COVER STORY

ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ಕಸರತ್ತು; ಮತ್ತೆ ಚಿಗುರಿದೆ ಬಿಜೆಪಿಯ ‘ರಾಷ್ಟ್ರೀಯ ಕನಸು’!

ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಏಳುವ ಅತೃಪ್ತರ ಅಸಮಾಧಾನಗಳು ಸರಕಾರ ಇನ್ನೇನು ಉರುಳೇ ಹೋಗುತ್ತದೆ ಎಂಬಂಥ ವಾತಾವರಣ ಸೃಷ್ಟಿ ಮಾಡುವುದು ಸಹಜ. ಅವಕಾಶ ಸಿಕ್ಕರೆ ಮೈತ್ರಿ ಸರಕಾರವನ್ನು ಕೆಡವಲು ಬಿಜೆಪಿಯೂ ತುದಿಗಾಲಲ್ಲಿ ಕುಳಿತಿದೆ.

Team Samachara

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡಲು ಮೈತ್ರಿ ಪಕ್ಷಗಳು ಕಸರತ್ತು ಆರಂಭಿಸಿವೆ. ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ನಡೆಸಲು ಮೈತ್ರಿ ಸರಕಾರದ ಸಮನ್ವಯ ಸಮಿತಿ ಮುಂದಿನ ಬುಧವಾರ ಸಭೆ ಸೇರಲು ನಿರ್ಧರಿಸಿದೆ. ಸಂಪುಟ ವಿಸ್ತರಣೆಯ ಚರ್ಚೆ ಮುನ್ನೆಲೆಗೆ ಬರುತ್ತಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಕಸರತ್ತೂ ಜೋರಾಗಿದೆ.

ಶಾಸಕರಾಗಿರುವ ಬಹುತೇಕ ಎಲ್ಲರಿಗೂ ಸದ್ಯ ಸಚಿವ ಸ್ಥಾನದ ಮೇಲೆಯೇ ಕಣ್ಣು. ಹೀಗಾಗಿ ತಮ್ಮ ಆಪ್ತ ನಾಯಕರ ಮೂಲಕ ಸಮನ್ವಯ ಸಮಿತಿಯ ಮನವೊಲಿಸುವ ಪ್ರಯತ್ನಕ್ಕೆ ಬಹುತೇಕ ಶಾಸಕರು ಮುಂದಾಗಿದ್ದಾರೆ. ಈ ಮಧ್ಯೆ ಈ ಭಾರಿಯೂ ಒಂದಷ್ಟು ಮಂದಿ ಶಾಸಕರ ಜತೆ ಬಿಜೆಪಿ ಸಂಪರ್ಕದಲ್ಲಿದೆ ಎಂಬ ಗುಸುಗುಸು ಆರಂಭವಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಚರ್ಚೆಯ ಹೆಸರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಿಜೆಪಿ ದಂಡನ್ನು ಕಟ್ಟಿಕೊಂಡು ಸಚಿವ ಡಿ.ಕೆ. ಶಿವಕುಮಾರ್‌ ನಿವಾಸಕ್ಕೆ ಭೇಟಿ ನೀಡಿರುವ ಹಿಂದೆಯೂ ಕಮಲ ಪಕ್ಷದ ಹೊಸ ಲೆಕ್ಕಾಚಾರಗಳು ಅಡಗಿವೆ ಎಂಬ ಮಾತಿದೆ.

ಸರಕಾರ ರಚನೆಗೆ ಅಗತ್ಯವಿರುವ ಶಾಸಕರನ್ನು ಸೆಳೆಯಲು ಬಿಜೆಪಿ ಜೆಡಿಎಸ್‌ಗಿಂತ ಕಾಂಗ್ರೆಸ್‌ ಪಕ್ಷದೊಳಗೇ ಗಾಳಗಳನ್ನು ಹಾಕಿಕೊಂಡು ಕೂತಿರುವುದು ಹೊಸ ವಿಚಾರವೇನಲ್ಲ. ಒಂದೊಮ್ಮೆ ಸಚಿವ ಸ್ಥಾನದ ಆಸೆಗೆ ಕಾಂಗ್ರೆಸ್‌ ಶಾಸಕರು ಬಿಜೆಪಿಯನ್ನು ಬೆಂಬಲಿಸಿ ಬಂದರೆ ಮೈತ್ರಿ ಸರಕಾರವನ್ನು ಮುರಿದು ಮತ್ತೆ ಹೊಸದಾಗಿ ಅಧಿಕಾರಕ್ಕೆ ಬರುವ ಕನಸನ್ನು ಬಿಜೆಪಿ ಇನ್ನೂ ಬಿಟ್ಟುಕೊಟ್ಟಿಲ್ಲ.

ಸಚಿವ ಸ್ಥಾನದ ಬಗ್ಗೆ ತೀವ್ರ ಆಕಾಂಕ್ಷೆ ಇಟ್ಟುಕೊಂಡಿರುವ ಶಾಸಕರು ರೆಸಾರ್ಟ್‌ ವಾಸ್ತವ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯದ ಮಟ್ಟಿಗೆ ಇವೆಲ್ಲವೂ ಊಹಾಪೋಹ ಎನ್ನುತ್ತಿರುವ ಕಾಂಗ್ರೆಸ್‌ ಮುಖಂಡರು ಒಳಗೊಳಗೇ ತಮ್ಮ ಶಾಸಕರನ್ನು ಭದ್ರವಾಗಿಟ್ಟುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಇತ್ತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರೆಸಾರ್ಟ್‌ ರಾಜಕಾರಣ ನಡೆದರೆ ನಡೆಯಲಿ ಎಂದಿದ್ದಾರೆ. ಆದರೆ, ಬಿಜೆಪಿ ಈ ಹಿಂದೆ ಸೆಳೆಯಲು ಯತ್ನಿಸಿದ್ದ ಶಾಸಕರನ್ನು ಬಿಟ್ಟು ಬೇರೆ ಬೇರೆ ಶಾಸಕರಿಗೆ ಗಾಳ ಹಾಕಿದ್ದು, ಆ ಶಾಸಕರು ಸದ್ಯ ಬೆಂಗಳೂರಿಂದ ಹೊರಗೆ ಒಟ್ಟಾಗಿ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾತುಗಳಿವೆ.

ಅಧಿಕಾರಕ್ಕೆ ಬಂದ ಆರಂಭದಿಂದಲೂ, 'ನನಗೆ ಅಧಿಕಾರದ ಆಸೆಯಿಲ್ಲ', 'ಅಧಿಕಾರ ದೇವರು ಕೊಟ್ಟ ಅವಕಾಶ', 'ಯಾವುದೇ ಕ್ಷಣದಲ್ಲೂ ರಾಜೀನಾಮೆ ನೀಡುತ್ತೇನೆ' ಎಂಬ ಮಾತುಗಳನ್ನೇ ಹೇಳುತ್ತಾ ಬರುತ್ತಿರುವ ಕುಮಾರಸ್ವಾಮಿ ಅವರಿಗೆ ಆರೋಗ್ಯದ ಸಮಸ್ಯೆಯೂ ತೀವ್ರವಾಗಿದೆ ಎಂಬ ಸುದ್ದಿಗಳಿವೆ. ದೇಹದಲ್ಲಿನ ಅತಿ ಹೆಚ್ಚಿನ ಕೊಬ್ಬನ್ನು ಕರಗಿಸುವ ಚಿಕಿತ್ಸೆಗಾಗಿ ಕುಮಾರಸ್ವಾಮಿ ಲಂಡನ್‌ಗೆ ತೆರಳುತ್ತಾರೆ ಎನ್ನಲಾಗುತ್ತಿದೆ. ಆರೋಗ್ಯ ಸಮಸ್ಯೆಯ ಕಾರಣಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಿದ್ದಾರೆ. ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಉಪ ಮುಖ್ಯಮಂತ್ರಿಯಾಗಿ, ಕಾಂಗ್ರೆಸ್‌ನ ಡಾ.ಜಿ. ಪರಮೇಶ್ವರ್‌ ಮುಖ್ಯಮಂತ್ರಿಯಾಗಿ ಮೈತ್ರಿ ಸರಕಾರ ಮುನ್ನಡೆಸಲಿದ್ದಾರೆ ಎಂಬ ಮಾತುಗಳಿವೆ.

ಕುಮಾರಸ್ವಾಮಿ ಲಂಡನ್‌ಗೆ ಹೋಗುವುದನ್ನು ಹಾಗೂ ಚಿಕಿತ್ಸೆ ಪಡೆಯುವುದನ್ನು ಜೆಡಿಎಸ್‌ ಮೂಲಗಳು ಒಪ್ಪಿಕೊಂಡರೂ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟರೂ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಪರಮೇಶ್ವರ್‌ಗಿಂತ ಎಚ್‌ಡಿಕೆ ಆಪ್ತ ಡಿ.ಕೆ. ಶಿವಕುಮಾರ್‌ ಅವರಿಗೆ ಹೆಚ್ಚಾಗಿದೆ. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ದಲಿತ ಮುಖ್ಯಮಂತ್ರಿಯ ಕನಸನ್ನು ರಾಜ್ಯದಲ್ಲಿ ನನಸು ಮಾಡಲು ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸುವ ಸಾಧ್ಯತೆಗಳೇ ಹೆಚ್ಚಾಗಿವೆ. ಆಗ ಡಿಸಿಎಂ ಪಟಕ್ಕೆ ಎಚ್‌.ಡಿ. ರೇವಣ್ಣ ಬರಲಿದ್ದಾರೆ ಎನ್ನಲಾಗುತ್ತಿದೆ.

ಸಂಪುಟ ವಿಸ್ತರಣೆಯ ಸಮೀಪದಲ್ಲೇ ಯಡಿಯೂರಪ್ಪ - ಡಿ.ಕೆ. ಶಿವಕುಮಾರ್‌ ಭೇಟಿ, ಕುಮಾರಸ್ವಾಮಿ ಆರೋಗ್ಯದ ವಿಚಾರಗಳು ಮುನ್ನೆಲೆಗೆ ಬಂದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಸಾಧ್ಯತೆಗಳ ಬೀಜವನ್ನಂತೂ ಬಿತ್ತಿವೆ. ಆದರೆ, ರಾಜಕೀಯದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುವುದು ಕಷ್ಟ. ಡಿ.ಕೆ. ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಮುಂದಾದರೆ ಕಾಂಗ್ರೆಸ್‌ ಒಳಗಿರುವ ಉಳಿದ ರಾಜ್ಯ ನಾಯಕರು ಒಪ್ಪುವುದು ಕಷ್ಟ, ಒಂದು ವೇಳೆ ದಲಿತರ ಹೆಸರಿನಲ್ಲಿ ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟರೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್‌. ಮುನಿಯಪ್ಪ ಪರೋಕ್ಷವಾಗಿಯಾದರೂ ಅಪಸ್ವರ ತೆಗೆಯದೆ ಸುಮ್ಮನಿರಲಾರಲು.

ಪ್ರತಿ ಬಾರಿ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿಯೂ ಏಳುವ ಅತೃಪ್ತರ ಅಸಮಾಧಾನಗಳು ಸರಕಾರ ಇನ್ನೇನು ಉರುಳೇ ಹೋಗುತ್ತದೆ ಎಂಬಂಥ ವಾತಾವರಣ ಸೃಷ್ಟಿ ಮಾಡುವುದು ಸಹಜ. ಆದರೆ, ವಿರೋಧ ಪಕ್ಷಗಳು ಸರಿಯಾದ ಅವಕಾಶ ಸಿಕ್ಕರೆ ಸರಕಾರವನ್ನು ಉರುಳಿಸದೇ ಬಿಡುವುದಿಲ್ಲ ಎಂಬುದೂ ನಿಜ. ಅದರಲ್ಲೂ ಬಹುಮತ ಪಡೆದ ಪಕ್ಷವಾಗಿರುವ ಬಿಜೆಪಿ ರಾಜ್ಯದಲ್ಲಿ ಅವಕಾಶ ಸಿಕ್ಕರೆ ಮೈತ್ರಿ ಸರಕಾರವನ್ನು ಕೆಡವಲು ತುದಿಗಾಲಲ್ಲಿ ಕುಳಿತಿದೆ. ಭಾರತವನ್ನು ಕಾಂಗ್ರೆಸ್‌ ಮುಕ್ತ ಮಾಡಬೇಕೆಂದು ಸಂಕಲ್ಪ ಮಾಡಿರುವ ಬಿಜೆಪಿ ಕರ್ನಾಟಕದ ಮೂಲಕ ದಕ್ಷಿಣ ಭಾರತದ ಅಧಿಪತ್ಯ ಸಾಧಿಸುವ ಪ್ರಯತ್ನವನ್ನೂ ಇನ್ನೂ ಪೂರ್ತಿಯಾಗಿ ಕೈಬಿಟ್ಟಿಲ್ಲ. ಇದಕ್ಕಾಗಿ ಕರ್ನಾಟಕದಲ್ಲಿ ಕಮಲ ಬಾವುಟ ಹಾರಿಸುವುದು ಬಿಜೆಪಿಯ ರಾಷ್ಟ್ರೀಯ ಕನಸೂ ಹೌದು.