‘ದಿಲ್ಲಿ ಚಲೋ’: ವಿಶೇಷ ಅಧಿವೇಶನಕ್ಕೆ ಒತ್ತಾಯಿಸಿ ಸಂಸತ್‌ನತ್ತ ಅನ್ನದಾತರ ನಡಿಗೆ
COVER STORY

‘ದಿಲ್ಲಿ ಚಲೋ’: ವಿಶೇಷ ಅಧಿವೇಶನಕ್ಕೆ ಒತ್ತಾಯಿಸಿ ಸಂಸತ್‌ನತ್ತ ಅನ್ನದಾತರ ನಡಿಗೆ

ರೈತರ ಈ ಪ್ರತಿಭಟನೆಗೆ ಸರಕಾರ ಮಣಿಯಲಿದೆಯಾ? ವಿಶೇಷ ಅಧಿವೇಶವನ್ನು ಸರಕಾರ ಕರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಪದೇ ಪದೇ ರೈತರು ಹೀಗೆ ಬೀದಿಗೆ ಬರುತ್ತಿರುವುದು ಒಳ್ಳೆಯ ಸಮಾಜದ ಲಕ್ಷಣವಂತೂ ಅಲ್ಲ.

‘ದಿಲ್ಲಿ ಚಲೋ’ ಹೆಸರಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ದೇಶದ ವಿವಿಧ ಭಾಗಗಳಿಂದ ಬಂದ ರೈತರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಜಮಾವಣೆಯಾಗಿದ್ದರು. ಇಂದು ಅವರೆಲ್ಲಾ ಸಂಸತ್‌ನತ್ತ ಜಾಥಾ ಹೊರಟಿದ್ದಾರೆ. ಸುಮಾರು 30,000 ಕ್ಕೂ ಅಧಿಕ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ರೈತರನ್ನು ಸಾಲದ ಸುಳಿಯಿಂದ ರಕ್ಷಿಸಲು, ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಒದಗಿಸಲು ಹಾಗೂ ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು 21 ದಿನಗಳ ಸಂಸತ್ತಿನ ವಿಶೇಷ ಜಂಟಿ ಅಧಿವೇಶನ ನಡೆಸಬೇಕು ಎಂಬುದು ರೈತರ ಒತ್ತಾಯವಾಗಿದೆ.

‘ಅಖಿಲ ಭಾರತೀಯ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ’ ಹೆಸರಿನ ರೈತ ಒಕ್ಕೂಟದಡಿ ದೇಶದ ವಿವಿಧ ಭಾಗಗಳ ಸುಮಾರು 200 ರೈತ ಸಂಘಟನೆಗಳು ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಭಾಗವಹಿಸಿವೆ.

ರೈತ ಸಮಾವೇಶವನ್ನು ಬೆಂಬಲಿಸಿರುವ ವಿದ್ಯಾರ್ಥಿಗಳು, ಕಲಾವಿದರು, ಸಾಹಿತಿಗಳು, ವೈದ್ಯರು, ಪತ್ರಕರ್ತರು, ಛಾಯಾಗ್ರಾಹಕರು, ಚಿಂತಕರು ಹಾಗೂ ದೆಹಲಿಯ ನಾಗರಿಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. “ರೈತರ ಸಮಸ್ಯೆಗಳು ರೈತರ ಸಮಸ್ಯೆಗಳು ಮಾತ್ರವಲ್ಲ, ಅವು ಎಲ್ಲರ ಸಮಸ್ಯೆಗಳು. ಹೀಗಾಗಿ ಎಲ್ಲರೂ ಈ ಸಮಾವೇಶದಲ್ಲಿ ಭಾವಹಿಸಿ ಬೆಂಬಲಿಸಬೇಕು” ಎಂದು ಪತ್ರಕರ್ತ ಪಿ.ಸಾಯಿನಾಥ್‌, ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ಸ್ವರಾಜ್ ಅಭಿಯಾನದ ಮುಖ್ಯಸ್ಥ ಯೋಗೇಂದ್ರ ಯಾದವ್‌ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ.

ಗುರುವಾರ ರಾಮಲೀಲಾ ಮೈದಾನಕ್ಕೆ ತೆರಳಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಕೂಡ ರೈತರ ಪ್ರತಿಭಟನೆಗೆ ಧ್ವನಿಗೂಡಿಸಿದ್ದು, ‘ರೈತರಿಲ್ಲದೆ ಯಾವ ಸರಕಾರವೂ ಉಳಿಯಲಾರದು’ ಎಂದು ಹೇಳಿದ್ದಾರೆ.

ದೆಹಲಿಯ ಚಳಿಯ ನಡುವೆಯೇ ರಾಮಲೀಲಾ ಮೈದಾನದಲ್ಲಿ ರಾತ್ರಿ ಕಳೆದ ರೈತರು.
ದೆಹಲಿಯ ಚಳಿಯ ನಡುವೆಯೇ ರಾಮಲೀಲಾ ಮೈದಾನದಲ್ಲಿ ರಾತ್ರಿ ಕಳೆದ ರೈತರು.

ದೇಶದ ವಿವಿಧ ಭಾಗಗಳಿಂದ ಹೊರಟು ಬಂದಿದ್ದ ರೈತರು ಗುರುವಾರ ಬೆಳಗಿನ ಜಾವ ದೆಹಲಿಯ ರೈಲ್ವೇ ನಿಲ್ದಾಣವನ್ನು ತಲುಪಿ ಅಲ್ಲಿಂದ ಮೆರವಣಿಗೆಗಳಲ್ಲಿ ಹೊರಟು ರಾಮಲೀಲಾ ಮೈದಾನ ಸೇರಿದ್ದರು. ಅಲ್ಲಿ ರಾತ್ರಿಯನ್ನು ಕಳೆದ ರೈತರು ಇಂದು ಸಂಸತ್‌ ಭವನದತ್ತ ಜಾಥಾ ಹೊರಟಿದ್ದಾರೆ.

ಕರ್ನಾಟಕದಿಂದಲೂ ಸುಮಾರು 2 ಸಾವಿರ ಮಂದಿ ರೈತರು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ದೇಶದ ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳ ಕೃಷಿಕರು ಹಾಗೂ ಕೃಷಿ ಕೂಲಿಕಾರ್ಮಿಕರು ಮತ್ತು ಅವರ ಬೆಂಬಲಕ್ಕೆ ಜನಸಾಮಾನ್ಯರು ಧಾವಿಸಿದ್ದು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಸ್ವಾಮಿನಾಥನ್‌ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಜತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ‘ನಮಗೆ ರಾಮ ಮಂದಿರ ಬೇಡ ಬದಲಿಗೆ ಸಾಲ ಮನ್ನಾ ಬೇಕು’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ.

‘ಅಖಿಲ ಭಾರತೀಯ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ’ಯ ವತಿಯಿಂದ ಈಗಾಗಲೇ ಎರಡು ಖಾಸಗಿ ಮಸೂದೆಳನ್ನು ಸಂಸತ್‌ನಲ್ಲಿ ಮಂಡಿಸಲಾಗಿದೆ. ‘ಫಾರ್ಮರ್ಸ್‌ ಫ್ರೀಡಂ ಫ್ರಂ ಇಂಡೆಬ್ಟ್‌ಡ್‌ನೆಸ್‌ ಬಿಲ್‌-2018’ ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸುವ ಎರಡನೇ ಮಸೂದೆಯನ್ನು ಮಂಡಿಸಲಾಗಿದ್ದು ಚರ್ಚೆಯನ್ನು ನಡೆಸಬೇಕಾಗಿದೆ. ವಿಶೇಷ ಅಧಿವೇಶನದಲ್ಲಿ ಇವುಗಳ ಬಗ್ಗೆ ಚರ್ಚೆ ನಡೆಸಬೇಕು ಜತೆಗೆ ನೀರಿನ ಸಮಸ್ಯೆ ಬಗ್ಗೆಯೂ ಚರ್ಚೆಯಾಗಬೇಕು. ಕುಡಿಯುವ ನೀರನ್ನು ಮೂಲಭೂತ ಹಕ್ಕು ಎಂದು ಘೋಷಣೆ ಮಾಡಬೇಕು ಎಂಬ ಬೇಡಿಕೆಗಳೂ ರೈತರಿಂದ ಕೇಳಿ ಬಂದಿವೆ.

ರೈತರ ಈ ಪ್ರತಿಭಟನೆಗೆ ಸರಕಾರ ಮಣಿಯಲಿದೆಯಾ? ವಿಶೇಷ ಅಧಿವೇಶವನ್ನು ಸರಕಾರ ಕರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಪದೇ ಪದೇ ರೈತರು ಹೀಗೆ ಬೀದಿಗೆ ಬರುತ್ತಿರುವುದು ಒಳ್ಳೆಯ ಸಮಾಜದ ಲಕ್ಷಣವಂತೂ ಅಲ್ಲ.