samachara
www.samachara.com
‘ಆದಿ ಶಂಕರಾಚಾರ್ಯರ ಪುನರ್ಜನ್ಮ’ಕ್ಕೆ ಮಾನಹಾನಿ; ಸರ್ಕಾರಿ ‘ಪುಂಡ ಸಾಕ್ಷಿ’ ವಿರುದ್ಧ 5 ಕೋಟಿ ಮಾನನಷ್ಟ ನೋಟಿಸ್‌
COVER STORY

‘ಆದಿ ಶಂಕರಾಚಾರ್ಯರ ಪುನರ್ಜನ್ಮ’ಕ್ಕೆ ಮಾನಹಾನಿ; ಸರ್ಕಾರಿ ‘ಪುಂಡ ಸಾಕ್ಷಿ’ ವಿರುದ್ಧ 5 ಕೋಟಿ ಮಾನನಷ್ಟ ನೋಟಿಸ್‌

ಅಫಿಡವಿಟ್‌ನಲ್ಲಿ ನನ್ನ ಫಿರ್ಯಾದುದಾರರನ್ನು ‘ಅಪರಾಧದ ಚಾಳಿಕೋರ’ ಎಂದು ವಿವರಿಸಿದ್ದೀರಿ ಎಂಬುದು ವಕೀಲರ ನೋಟಿಸ್‌ನ ಹೈಲೈಟ್‌. ಅದರ ಹಿನ್ನೆಲೆ ಇಲ್ಲಿದೆ. 

Team Samachara

ರಾಘವೇಶ್ವರ ಭಾರತಿ ಸ್ವಾಮಿ ಮೇಲೆ ಕೇಳಿ ಬಂದಿರುವ ಎರಡನೇ ಅತ್ಯಾಚಾರ ಪ್ರಕರಣವೀಗ ಮಾನನಷ್ಟ ನೋಟಿಸ್‌ ನೆಗೆತವನ್ನು ಪಡೆದುಕೊಂಡಿದೆ. ಪ್ರಕರಣದ ‘ಸ್ಟಾರ್‌ ವಿಟ್ನೆಸ್’, ಸರಕಾರಿ ಸಾಕ್ಷಿ ಅಭಿರಾಮ್‌ ಹೆಗಡೆ ಬಳಿ 5 ಕೋಟಿ ರೂಪಾಯಿ ಮಾನನಷ್ಟ ಕೋರಿ ರಾಘವೇಶ್ವರ ಭಾರತಿ ಸ್ವಾಮಿ ಕಡೆಯ ವಕೀಲರು ನೊಟೀಸ್‌ ಗುರುವಾರ ಕಳಿಹಿಸಿದ್ದಾರೆ.

ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಅಭಿರಾಮ್‌ ಹೆಗಡೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ‘ತಮ್ಮ ಫಿರ್ಯಾದುದಾರರಾದ ರಾಘವೇಶ್ವರ ಭಾರತಿಯ ಸ್ವಾಮಿಯವರನ್ನು ‘ಅಪರಾಧಗಳ ಚಾಳಿಕೋರ’ ಎಂದು ಕರೆದಿದ್ದಾರೆ. ಈ ಕುರಿತು ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು,’ ಎಂದು ಹೇಳಲಾಗಿದೆ.

ಮುಂದುವರಿದು, “ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ 1300 ವರ್ಷಗಳ ಇತಿಹಾಸ ಇರುವ, ಅವಿಚ್ಛಿನ್ನ ಪರಂಪರೆ ಹೊಂದಿರುವ ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ 36ನೇ ಪೀಠಾಧಿಪತಿಗಳಾಗಿದ್ದು, ಮಠವು ಶಂಕರಾಚಾರ್ಯರ ಪರಂಪರೆಯ ಏಕೈಕ ಮತ್ತು ವಿಶಿಷ್ಟ ಮಠ,” ಎಂದು ಪಿರ್ಯಾದುರಾರರ ಹಿನ್ನೆಲೆಯನ್ನು ವಕೀಲರು ಕಟ್ಟಿಕೊಟ್ಟಿದ್ದಾರೆ. 'ಫಿರ್ಯಾದುದಾರರು ನಶಿಸಿಹೋಗುತ್ತಿರುವ ದೇಶಿ ದನಗಳ ರಕ್ಷಣೆ, ಸಂರಕ್ಷಣೆ ಮತ್ತು ಅವುಗಳ ಹಲವು ಮೌಲ್ಯಗಳ ಪ್ರಸಾರದಲ್ಲಿ ತಮ್ಮನ್ನು ಮುಡಿಪಾಗಿಟ್ಟಿದ್ದಾರೆ. ದನಗಳ ಉತ್ಪನ್ನಗಳ ವೈದ್ಯಕೀಯ ಮೌಲ್ಯಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು ಅವರು ಭಾರತದಾದ್ಯಂತ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಹಲವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಲ್ಲದೇ ಫಿರ್ಯಾದುದಾರರು ಹಲವು ಸ್ಥಳಗಳಲ್ಲಿ ಗೋಶಾಲೆಗಳನ್ನು ಸ್ಥಾಪಿಸಿದ್ದಾರೆ’ ಎಂದು ಹೇಳಿದ್ದಾರೆ.

'ಅಶನ, ವಶನ, ವಸತಿ ಮತ್ತು ಆರೋಗ್ಯ ಎಂಬ ಹೆಸರಿನಲ್ಲಿ ಸಾಮಾಜಿಕ ಯೋಜನೆಗಳನ್ನು ರೂಪಿಸಿದ್ದಾರೆ. ನಿರ್ಗತಿಕರಿಗೆ ಮನೆ, ಬಡ ವಿದ್ಯಾರ್ಥಿಗಳೆ ಶಿಕ್ಷಣಕ್ಕೆ ಸಹಾಯ, ಆರೋಗ್ಯ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಎರಡು ದಶಕಗಳಿಂದ ಅವರು ನಮ್ಮ ಗ್ರಾಹಕರಾಗಿದ್ದು ಈ ಅವಧಿಯಲ್ಲಿ ‘ಸರ್ವೇ ಜನಾ ಸುಖಿನೋ ಭವಂತು’ ಎಂಬ ಆಶಯದಲ್ಲಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ,’ ಎಂದು ನೋಟಿಸ್ ವಿವರಿಸಿದ್ದಾರೆ.

ಶಂಕರಾಚಾರ್ಯರ ಪುನರ್ಜನ್ಮ!:

‘ನನ್ನ ಫಿರ್ಯಾದುದಾರರು ಸ್ವಚ್ಛ ಮತ್ತು ಕಳಂಕ ರಹಿತ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರ ಜಾತಿ ವರ್ಗಗಳನ್ನು ಮೀರಿದ ಸಾಮಾಜಿಕ ಆಂದೋಲನಗಳಿಂದ ನೂರಾರು ಜನರು ಪ್ರಯೋಜನ ಪಡೆದುಕೊಂಡಿದ್ದಾರೆ. ಜತೆಗೆ ಕಲೆ ಮತ್ತು ಸಂಗೀತಕ್ಕೆ ಪ್ರೋತ್ಸಾಹಗಳನ್ನು ಅವರು ನೀಡುತ್ತಿದ್ದಾರೆ. ಇದಲ್ಲದೆ ಅವರು ಸಮಾಜದಲ್ಲಿ ತುಂಬಾ ಗಣ್ಯ ವ್ಯಕ್ತಿಯಾಗಿದ್ದು ಮಠದ ಭಕ್ತರು ಮತ್ತು ಅನುಯಾಯಿಗಳಿಂದ ‘ಆದಿ ಶಂಕರಾಚಾರ್ಯಯರ ಪುನರ್ಜನ್ಮ’ ಎಂದು ಗುರುತಿಸಲ್ಪಟ್ಟಿದ್ದಾರೆ’ ಎಂದು ವಕೀಲರು ಪಿರ್ಯಾದುದಾರ ರಾಘವೆಶ್ವರ ಭಾರತಿಯನ್ನು ಪರಿಚಯಿಸಿದ್ದಾರೆ.

ಜತೆಗೆ, ವಕೀಲರು ತಮ್ಮ ಫಿರ್ಯಾದುದಾರರ ಪ್ರಕರಣಗಳ ಇತಿಹಾಸವನ್ನು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿರಾಮ್‌ ಹೆಗಡೆ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದನ್ನೂ ಪ್ರಸ್ತಾಪಿಸಿದ್ದಾರೆ. 'ಎರಡನೇ ಅತ್ಯಾಚಾರ ಪ್ರಕರಣ (ಸಿಸಿ ನಂ. 26533/2018) ಇನ್ನು ವಿಚಾರಣೆ ಹಂತದಲ್ಲಿದೆ. ಈ ಹಂತದಲ್ಲಿ ನಿಮ್ಮಿಂದ ಅಫಿಡವಿಟ್‌ ಸಲ್ಲಿಸುವುದನ್ನು ಪ್ರಕರಣವು ಉತ್ತೇಜಿಸುವುದಿಲ್ಲ ಮತ್ತು ಅವಕಾಶವೂ ನೀಡುವುದಿಲ್ಲ. ಕಾರಣ ನೀವು ಪ್ರಕರಣಕ್ಕೆ ಹೊರಗಿನವರಾಗಿದ್ದೀರಿ. ಹೀಗಿದ್ದೂ ನೀವು ಅಫಿಡವಿಟ್‌ ಸಲ್ಲಿಸಿದ್ದೀರಿ. ಈ ಅಫಿಡವಿಟ್‌ನಲ್ಲಿ ನೀವು ಅಜಾಗರೂಕ, ಆಧಾರರಹಿತ, ಬೇಜವಾಬ್ದಾರಿಯ ಮತ್ತು ದುರುದ್ದೇಶಪೂರಿತ ಆರೋಪಗಳನ್ನು ತನ್ನ ಫಿರ್ಯಾದುದಾರರ ಮೇಲೆ ಹೊರಿಸಿದ್ದೀರಿ. ಅವರ ಗೌರವ, ಬದ್ಧತೆ ಮತ್ತು ಅವರ ಬಗೆಗಿರುವ ಸದಾಭಿಪ್ರಾಯಕ್ಕೆ ಹಾನಿಗೋಳಿಸುವ, ಘಾಸಿಗೊಳಿಸುವ ಮತ್ತು ನಾಶಗೊಳಿಸುವ ಉದ್ದೇಶದಿಂದ ಈ ಅರೋಪಗಳನ್ನು ಮಾಡಿದ್ದೀರಿ. ನೀವು ಅಫಿಡವಿಟ್‌ ಹಾಕಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಇದರಿಂದ ನೀವು ನನ್ನ ಫಿರ್ಯಾದುದಾರರ ಮಾನವನ್ನು ತೆಗೆಯಲೆಂದೇ ಈ ಅಫಿಡವಿಟ್‌ ಸಲ್ಲಿಸಿದ್ದೀರಿ,’ ಎಂದು ಪ್ರಕರಣದಲ್ಲಿ ಸರಕಾರದ ಪರ ಸಾಕ್ಷೀದಾರ ಅಭಿರಾಮ್‌ ಹೆಗಡೆಗೆ ಎಚ್ಚರಿಕೆ ನೀಡಲಾಗಿದೆ.

‘ಪುಂಡ ಸಾಕ್ಷಿ’:

ರಾಘವೇಶ್ವರ ಭಾರತಿ ಆರೋಪಿಯಾಗಿರುವ ಪ್ರಕರಣದಲ್ಲಿ ಸರ್ಕಾರಿ ಪರ ಸಾಕ್ಷೀದಾರ ಅಭಿರಾಮ್ ಗಣಪತಿ ಹೆಗಡೆ. 
ರಾಘವೇಶ್ವರ ಭಾರತಿ ಆರೋಪಿಯಾಗಿರುವ ಪ್ರಕರಣದಲ್ಲಿ ಸರ್ಕಾರಿ ಪರ ಸಾಕ್ಷೀದಾರ ಅಭಿರಾಮ್ ಗಣಪತಿ ಹೆಗಡೆ. 

ಕುತೂಹಲದ ಅಂಶ ಏನೆಂದರೆ, ‘ಅಫಿಡವಿಟ್‌ನಲ್ಲಿ ನೀವು ನನ್ನ ಫಿರ್ಯಾದುದಾರರನ್ನು ‘ಅಪರಾಧದ ಚಾಳಿಕೋರ’ ಎಂದು ವಿವರಿಸಿದ್ದೀರಿ. ನನ್ನ ಫಿರ್ಯದುದಾರರು ಅಪರಾಧ ಎಸಗಿದ ಯಾವುದೇ ದಾಖಲೆಗಳನ್ನು ಹೊಂದಿಲ್ಲ ಮತ್ತು ಯಾವುದೇ ಪ್ರಕರಣದಲ್ಲಿ ಅಪರಾಧಿಯಾದ ಇತಿಹಾಸವನ್ನು ಹೊಂದಿಲ್ಲ. ಅಫಿಡವಿಟ್‌ ಸಲ್ಲಿಸಿದ್ದಲ್ಲದೆ ಅದರ ಕಾಪಿಯನ್ನು ನೀವು ನ್ಯಾಯಾಲಯ ಮತ್ತು ನ್ಯಾಯಾಲಯದ ಆವರಣದಲ್ಲಿ ಹಂಚುತ್ತಿದ್ದಿದ್ದನ್ನು, ಮತ್ತು ದೊಡ್ಡ ಧ್ವನಿಯಲ್ಲಿ ಅಫಿಡವಿಟ್‌ನ ಉಲ್ಲೇಖಿಸಲಾದ ‘ಅಪರಾಧದ ಚಾಳಿಕೋರ’ (ಹೆಬಿಚುವಲ್ ಅಫೆಂಡರ್) ಎಂಬ ಪದವನ್ನು ದೊಡ್ಡ ಧ್ವನಿಯಲ್ಲಿ ಹೇಳಿದ್ದೀರಿ,’ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ. ನ್ಯಾಯಾಲಯದ ಆವರಣದಲ್ಲಿ ಈ ರೀತಿಯ ಪುಂಡಾಟಿಕೆಯ ನಡವಳಿಕೆಯನ್ನು ‘ನನ್ನ ಫಿರ್ಯಾದುದಾರರ ಪ್ರತಿನಿಧಿಗಳು ಮತ್ತು ಸಹವರ್ತಿಗಳು ನೋಡಿದ್ದಾರೆ’ ಎಂದು ವಕೀಲರು ತಿಳಿಸಿದ್ದಾರೆ.

‘ಮಾನಸಿಕ ಸಂಕಟ’:

ವಿಶೇಷ ಅಂದರೆ, ಇಂತಹ ಪುಂಡಾಟಿಕೆಯ ಪರಿಣಾಮಗಳನ್ನೂ ವಕೀಲರು ನೋಟಿಸ್‌ನಲ್ಲಿ ಕಟ್ಟಿಕೊಟ್ಟಿದ್ದಾರೆ. ‘ಈ ರೀತಿ ಮಾತನಾಡುವ ಮೂಲಕ ಮೂಲಕ ಅಲ್ಲಿ ನೆರೆದಿದ್ದವರ ಮುಖದಲ್ಲಿ ಉದ್ಗಾರ ಭಾವ ಮೂಡಿಸಿದ್ದೀರಿ. ಸಾರ್ವಜನಿಕರ ಕಣ್ಣ ಮುಂದೆ ನನ್ನ ಫಿರ್ಯಾದುದಾರರನ್ನು ಸಣ್ಣವರನ್ನಾಗಿ ಮಾಡಿದ್ದೀರಿ. ನಿಮ್ಮ ಈ ನಡವಳಿಕೆಗಳು ಐಪಿಸಿ ಕಾಯ್ದೆಗಳ ಅಡಿಯಲ್ಲಿ ನಿಮ್ಮ ಇರುದ್ಧ ಕ್ರಮ ಜರುಗಿಸಲು ಸೂಕ್ತವಾದುದಲ್ಲದೆ ಪರಿಹಾರ ಕೋರಲೂ ಶಕ್ತವಾಗಿವೆ. ನಿಮ್ಮ ಹೇಳಿಕೆಗಳಿಂದ ನನ್ನ ಫಿರ್ಯಾದುದಾರರ ಗೌರವ ಮತ್ತು ಸನ್ನಡತೆಗೆ ಹಾನಿಯಾಗಿದ್ದಲ್ಲದೆ ಅವರು ‘ಮಾನಸಿಕ ಸಂಕಟ’ವನ್ನು ಅನುಭವಿಸಿದ್ದಾರೆ,’ ಎಂದು ವಕೀಲರು ಉಲ್ಲೇಖಿಸಿದ್ದಾರೆ.

‘ಬೇಜವಾಬ್ದಾರಿಯುತ ನಡವಳಿಕೆ ತೋರಿ, ಗೌರವಕ್ಕೆ ಧಕ್ಕೆ ತಂದಿದ್ದಕ್ಕೆ ಪರಿಹಾರವಾಗಿ ನನ್ನ ಫಿರ್ಯಾದುದಾರರಿಗೆ 5 ಕೋಟಿ ರೂಪಾಯಿ ನೀಡುವಂತೆ ಸೂಚಿಸುತ್ತಿದ್ದೇವೆ. ಇದಕ್ಕೂ ಮೀರಿ ಆರ್ಥಿಕ ಮತ್ತು ಗೌರವಕ್ಕೆ ನಷ್ಟವಾಗಿದ್ದರೂ ಪರಿಹಾರವನ್ನು 5 ಕೋಟಿ ರೂಪಾಯಿಗೆ ಸೀಮಿತಗೊಳಿಸುತ್ತಿರುವುದಾಗಿ ವಕೀಲರು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಜತೆಗೆ ನೋಟಿಸ್‌ನಲ್ಲಿ ಸುಳ್ಳು ಅಫಿಡವಿಟ್‌ ಸಲ್ಲಿಸಿದ್ದಕ್ಕಾಗಿ ನನ್ನ ಫಿರ್ಯಾದುದಾರರ ಬಳಿ ಲಿಖಿತ ಷರತ್ತು ರಹಿತ ಕ್ಷಮೆ ಕೇಳುವಂತೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ. ಮತ್ತು ನೀವು ಅಫಿಡವಿಟ್‌ ಸಲ್ಲಿಸಿರುವ ನ್ಯಾಯಾಲಯಕ್ಕೂ ಇದರ ಪ್ರತಿ ಸಲ್ಲಿಸುವಂತೆ ಸೂಚಿಸುತ್ತಿದ್ದೇವೆ,’ ನೋಟಿಸ್ ಹೇಳಿದೆ.

ಈ ಹಿಂದೆ ಅಭಿರಾಮ್ ಹೆಗಡೆ ವಿರುದ್ಧ 10 ಲಕ್ಷ ರೂಪಾಯಿಗಳ ಮಾನನಷ್ಟ ಮೊಕದ್ದಮೆಯನ್ನು ರಾಘವೇಶ್ವರ ಭಾರತಿ ದಾಖಲಿಸಿದ್ದರು. ಇದೀಗ 5 ಕೋಟಿ ಮಾನನಷ್ಟದ ಬೇಡಿಕೆ ಮುಂದಿಡುವ ಸೂಚನೆ ನೀಡಿದ್ದಾರೆ. ಈ ಮೂಲಕ ಪ್ರಕರಣ ನ್ಯಾಯಾಂಗಣದಲ್ಲಿ ಸದ್ದು ಮಾಡುತ್ತಲೇ ಇದೆ.