samachara
www.samachara.com
ಪೈಲಟ್ - ಪ್ರಾಧ್ಯಾಪಕ - ಪೊಯೆಟ್: ಕೆಸಿಆರ್‌ ‘ಕಾರು’ ಪಲ್ಟಿಗೆ ತ್ರಿಮೂರ್ತಿಗಳ ಸ್ಕೆಚ್!
COVER STORY

ಪೈಲಟ್ - ಪ್ರಾಧ್ಯಾಪಕ - ಪೊಯೆಟ್: ಕೆಸಿಆರ್‌ ‘ಕಾರು’ ಪಲ್ಟಿಗೆ ತ್ರಿಮೂರ್ತಿಗಳ ಸ್ಕೆಚ್!

ಮೂವರು ‘ಪಿ’ಗಳು. ಒಬ್ಬರು ಪೈಲಟ್, ಇನ್ನೊಬ್ಬರು ಪ್ರೊಫೆಸರ್ ಮತ್ತೊಬ್ಬರು ಪೋಯೆಟ್; ಜತೆಗೆ ಚಂದ್ರಬಾಬು ನಾಯ್ಡು. ಇದು ತೆಲಂಗಾಣ ಚುನಾವಣೆಯ ಕರ್ಟನ್ ರೈಸರ್. 

Team Samachara

ಇವೆಲ್ಲಾ ಕೆಲವೇ ವರ್ಷಗಳ ಹಿಂದಿನ ಕಥೆ; ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಯಶಸ್ವಿ ಹೋರಾಟ ನಡೆಸಿ ತೆಲಂಗಾಣ ರಾಜ್ಯ ಉದಯಿಸಿತ್ತು. ಅದೇ ಗೆಲುವಿನ ಅಲೆಯ ಬೆನ್ನೇರಿ ಚುನಾವಣೆಯಲ್ಲೂ ಜಯ ಸಾಧಿಸಿದ ಅವರ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೇರಿತು.

ಆದರೆ ನಾಲ್ಕೂವರೆ ವರ್ಷ ಅಧಿಕಾರ ನಡೆಸಿದ ಚಂದ್ರಶೇಖರ್ ರಾವ್ ಅವಧಿಗೂ ಮುನ್ನ ಚುನಾವಣೆಗೆ ಎದುರಿಸಲು ಮುಂದಾದರು. ತಮ್ಮ ಪಕ್ಷ ಟಿಆರ್‌ಎಸ್‌ ಪಾಲಿಗೆ ಈ ಚುನಾವಣೆ ಮಗ್ಗಲು ಬದಲಿಸಿದಷ್ಟೇ ಸುಲಭ ಎಂದು ಅವರು ಅಂದುಕೊಂಡಿದ್ದರು. ಆದರೆ ವಿಧಾನಸಭೆ ವಿಸರ್ಜನೆ ಮಾಡಿದ್ದಾಗ ಇದ್ದ ಪರಿಸ್ಥಿತಿಗಳು ಈಗಿಲ್ಲ. ಚಂದ್ರಶೇಖರ್ ರಾವ್ ಅಂದುಕೊಂಡಷ್ಟು ಗೆಲುವು ಸರಳವಾಗಿಲ್ಲ.

ವಿಧಾನಸಭೆ ವಿಸರ್ಜನೆ ಮಾಡಿ ಮಾತನಾಡಿದ್ದ ರಾವ್, “ನಾವು 119ರಲ್ಲಿ 100 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ,” ಎಂದು ಅಬ್ಬರಿಸಿದ್ದರು. ಅವರ ಆಪ್ತ ಪಕ್ಷ ಅಸಾದುದ್ದೀನ್ ಓವೈಸಿಯವರ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹುದಾಲ್ ಮುಸ್ಲಿಮೀನ್ (ಎಐಎಂಐಎಂ) ಇನ್ನೊಂದು 10 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಅವರು ಗಟ್ಟಿ ನಂಬಿಕೆಯಿಂದ ಹೇಳಿದ್ದರು.

ಆದರೆ, ಇದೀಗ ದಿನ ಕಳೆದಂತೆ ಸ್ಪಷ್ಟ ಜಯ ಸಾಧಿಸುವ ಬಗ್ಗೆಯೇ ಪಕ್ಷದಲ್ಲಿ ಅನುಮಾನಗಳು ಎದ್ದಿವೆ. ಅದಕ್ಕೆ ಕಾರಣ ಯಾರೂ ಅಂದುಕೊಳ್ಳದೆ ಇದ್ದ ವಿಪಕ್ಷಗಳ ಅಚ್ಚರಿಯ ಮೈತ್ರಿ. ಮಾಜಿ ಪೈಲಟ್, ಪ್ರಾಧ್ಯಾಪಕರು ಮತ್ತು ಕ್ರಾಂತಿಕಾರಿ ಕವಿಯೊಬ್ಬರು ಜತೆಯಾಗಿದ್ದು, ಪಕ್ಕದ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಎಂಬ ಚಾಣಾಕ್ಷನನ್ನೂ ಸೇರಿಸಿ ಇದೀಗ ರಾವ್‌ಗೆ ಮಸಾಲೆ ಅರೆಯಲು ಆರಂಭಿಸಿದ್ದಾರೆ. ಪರಿಣಾಮ ಟಿಆರ್‌ಎಸ್‌ ಪಾಳಯ ನಿದ್ದೆ ಕಳೆದುಕೊಂಡಿದೆ.

ಉಲ್ಟಾ ಹೊಡೆದ ಅವಧಿಪೂರ್ವ ಚುನಾವಣಾ ಅಸ್ತ್ರ

ತಾವು ಅವಧಿ ಪೂರ್ವ ಚುನಾವಣೆಗೆ ಹೋಗುವುದರಿಂದ ವಿರೋಧ ಪಕ್ಷಗಳು ಚುನಾವಣೆಗೆ ಸಿದ್ಧವಾಗಿರುವುದಿಲ್ಲ. ಅದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿದ್ದರು ಚಂದ್ರಶೇಖರ್ ರಾವ್. ಹೊರಗಿನಿಂದ ಕಾಂಗ್ರೆಸ್ ಕೂಡ ಅವಧಿಪೂರ್ವ ಚುನಾವಣೆಯನ್ನು ವಿರೋಧಿಸುತ್ತಾ ತಾನು ಚುನಾವಣೆಗೆ ಸಿದ್ದವೇ ಆಗಿಲ್ಲ ಎಂದು ಬಿಂಬಿಸಿಕೊಂಡಿತ್ತು. ಆದರೆ ಮೂಲಗಳ ಪ್ರಕಾರ ಚುನಾವಣೆಗೆ ಬೇಕಾದ ಎಲ್ಲಾ ಅಗತ್ಯ ಸಿದ್ಧತೆಗಳನ್ನೂ ಮುಗಿಸಿ ಕಾಂಗ್ರೆಸ್‌ ತಯಾರಾಗೇ ಕೂತಿತ್ತು.

ಇದರ ಜತೆ ಚಂದ್ರಶೇಖರ್ ರಾವ್ ತೆಗೆದುಕೊಂಡ ಇನ್ನೊಂದು ನಡೆಯೂ ಅವರಿಗೆ ಮುಳುವಾಯಿತು. ವಿಧಾನಸಭೆ ವಿಸರ್ಜಿಸುತ್ತಿದ್ದಂತೆ ಅವರು ಪಕ್ಷದ 100 ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ನೋಡ ನೋಡುತ್ತಿದ್ದಂತೆ ಪಕ್ಷದಲ್ಲಿ ಆಂತರಿಕ ಬೇಗುದಿ ಹತ್ತಿಕೊಂಡಿತು. ಪಕ್ಷಾಂತರ ಮಾಡುವವರಿಗೆ ಸಾಕಷ್ಟು ಸಮಯ ಸಿಕ್ಕಂತೆಯೂ ಆಯಿತು. ಬಲು ಬೇಗನೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರಿಂದ ಅವರೆಲ್ಲಾ ಹೆಚ್ಚಿಗೆ ಹಣ ಖರ್ಚು ಮಾಡುವ ಪ್ರಸಂಗವೂ ಒದಗಿ ಬಂತು.

ಪೈಲಟ್ - ಪ್ರಾಧ್ಯಾಪಕ - ಪೊಯೆಟ್: ಕೆಸಿಆರ್‌ ‘ಕಾರು’ ಪಲ್ಟಿಗೆ ತ್ರಿಮೂರ್ತಿಗಳ ಸ್ಕೆಚ್!

ಇನ್ನೊಂದು ಕಡೆ ವಿರೋಧ ಪಕ್ಷಗಳ ಒಡೆದ ಮನೆಯ ಲಾಭ ಪಡೆದುಕೊಳ್ಳುವುದು ಅವರ ಲೆಕ್ಕಾಚಾರವಾಗಿತ್ತು. ತೆಲಂಗಾಣದಲ್ಲಿ ಕಾಂಗ್ರೆಸ್, ಬಿಜೆಪಿ, ಟಿಡಿಪಿ ಯಾವುದೂ ಪ್ರಬಲವಾಗಿ ಇರಲಿಲ್ಲ. ಹೀಗಾಗಿ ಸೈದ್ಧಾಂತಿಕವಾಗಿ ಲೆಕ್ಕಾಚಾರ ಸರಿಯಾಗಿತ್ತು. ಬಿಜೆಪಿ-ಕಾಂಗ್ರೆಸ್ ಮೈತ್ರಿ ಸಾಧ್ಯವೇ ಇರಲಿಲ್ಲ. ಟಿಡಿಪಿ ಕೂಡ ಕಾಂಗ್ರೆಸ್ ಜತೆ ಸೇರಲು ಸಾಧ್ಯವಿಲ್ಲ ಅಂದುಕೊಂಡಿದ್ದರು ರಾವ್. ಇದನ್ನೇ ಲೆಕ್ಕಾಚಾರ ಹಾಕಿಕೊಂಡು ಅವರು ಚುನಾವಣೆಯತ್ತ ಪಾದ ಬೆಳೆಸಿದ್ದರು.

ಆದರೆ ಸಿದ್ಧಾಂತ ಪ್ರಾಯೋಗಿಕ ಹಂತಕ್ಕೆ ಬಂದಾಗ ಬದಲಾಗಿತ್ತು. ಟಿಆರ್‌ಎಸ್‌ ಬಿಜೆಪಿಯ ಗೌಪ್ಯ ಗೆಳೆಯ ಎಂಬುದನ್ನು ರಾಜ್ಯದಲ್ಲಿ ಬಿಂಬಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಪರಿಣಾಮ ರಾಜ್ಯದಲ್ಲಿದ್ದ ಮುಸ್ಲಿಂ ಮತದಾರರು ರಾವ್‌ರಿಂದ ದೂರ ಸರಿಯುವಂತೆ ಮಾಡಿತು. ಜತೆಗೆ ತನ್ನ ಸಮೀಪಕರಣಗಳೂ ಕಾಂಗ್ರೆಸ್‌ಗೆ ಫಲ ನೀಡಿದವು.

ಪರಿಣಾಮ ಇವತ್ತು ನಾಲ್ಕುವರೆ ವರ್ಷಗಳ ನಂತರ ಟಿಆರ್‌ಎಸ್‌ನ್ನು ಮತ್ತೊಮ್ಮೆ ಆರಿಸುತ್ತೀರೋ, ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟವನ್ನು ಬೆಂಬಲಿಸುತ್ತೀರೋ ಎಂಬ ಸ್ಪಷ್ಟ ಆಯ್ಕೆಯನ್ನು ಕೈ ಪಕ್ಷ ಜನರ ಮುಂದಿಟ್ಟಿದೆ. ಚುನಾವಣೆ ಘೋಷಣೆಯಾದ ಸಂದರ್ಭ ಇಂಥಹದ್ದೊಂದು ಪರ್ಯಾಯದ ಕಲ್ಪನೆಯೂ ಇರಲಿಲ್ಲ.

ಚುನಾವಣಾ ಸಮೀಕರಣ:

ಇದಕ್ಕೆಲ್ಲಾ ಕಾರಣರಾದವರು ಮೂವರು ‘ಪಿ’ಗಳು. ಒಬ್ಬರು ಪೈಲಟ್, ಇನ್ನೊಬ್ಬರು ಪ್ರೊಫೆಸರ್ ಮತ್ತೊಬ್ಬರು ಪೋಯೆಟ್; ಜತೆಗೆ ಚಂದ್ರಬಾಬು ನಾಯ್ಡು.

ಭಾರತೀಯ ವಾಯುಸೇನೆಯಲ್ಲಿ ಪೈಲಟ್ ಆಗಿದ್ದವರು ಉತ್ತಮ್ ಕುಮಾರ್ ರೆಡ್ಡಿ. ಮಿಗ್ 21 ಮತ್ತು 23 ವಿಮಾನಗಳನ್ನು ಓಡಿಸುತ್ತಿದ್ದವರು ಅಪಘಾತವೊಂದರಲ್ಲಿ ಗಾಯಗೊಂಡು ಪೈಲಟ್ ಕೆಲಸ ನಿರ್ವಹಿಸಲಾಗದ ಸ್ಥಿತಿ ತಲುಪಿದರು. ಹೀಗಿದ್ದವರು ಕಾಂಗ್ರೆಸ್ ಪಕ್ಷ ಸೇರಿಕೊಂಡರು. 2015ರಲ್ಲಿ ಅವರಿಗೆ ತೆಲಂಗಾಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಹುದ್ದೆಯನ್ನೂ ನೀಡಲಾಯಿತು.

ಮೃದು ಭಾಷಿ ರೆಡ್ಡಿ ಕಾಂಗ್ರೆಸ್ ಹೊಣೆ ಹೊತ್ತಾಗ ಅವರು ರಾವ್ ವಿರುದ್ಧ ಫೇಲವರಾಗಿ ಕಂಡಿದ್ದರು. ರಾವ್ ಎದುರಿಸುವ ತಾಕತ್ತು ಅವರಿಗಿದೆ ಎಂದು ಯಾರೂ ನಂಬಿರಲಿಲ್ಲ. ಆದರೆ ಸಣ್ಣ ಅವಧಿಯಲ್ಲೇ ರೆಡ್ಡಿ ತಾವೇನು ಎಂಬುದನ್ನು ಸಾಬೀತು ಮಾಡಿದ್ದಾರೆ. ಮೊದಲಿಗೆ ಅವರು ಪಕ್ಷದಲ್ಲಿ ಜನಪ್ರಿಯರಲ್ಲದ, ಆದರೆ ಮಹತ್ವಾಕಾಂಕ್ಷಿಯಾಗಿದ್ದ ನಾಯಕರನ್ನು ಗುರುತಿಸಿ ಒಟ್ಟು ಮಾಡಿದರು. ಅದು ಅವರ ಮೊದಲ ಯಶಸ್ಸು.

ಎರಡನೆಯದ್ದು, ಚುನಾವಣೆ ಘೋಷಣೆಯಾದ ಸಮಯದಲ್ಲಿ ಪಕ್ಕಾ ಸಮೀಕರಣಗಳನ್ನು ಹೆಣೆದರು ರೆಡ್ಡಿ. ಆಗ ಅವರಿಗೆ ಜತೆಯಾದವರೆ ಪ್ರೊಫೆಸರ್ ಮುದ್ದಾಸಾನಿ ಕೋದಂಡರಾಮ್ ಮತ್ತು ಕ್ರಾಂತಿಕಾರಿ ಕವಿ ಗುಮ್ಮಡಿ ವಿಠ್ಠಲ್ ರಾವ್ ಅಲಿಯಾಸ್ ಗದ್ದರ್. ಇವರೆಲ್ಲಾ ಒಟ್ಟಾಗಿ ಈಗ ಟಿಆರ್‌ಎಸ್‌ ಚುನಾವಣಾ ಚಿಹ್ನೆ ‘ಕಾರ್’ ಅಪ್ಪಚ್ಚಿ ಮಾಡುವ ಧಾವಂತದಲ್ಲಿದ್ದಾರೆ.

ಹಾಗೆ ನೋಡಿದರೆ, 13 ವರ್ಷಗಳ ಪ್ರತ್ಯೇಕ ತೆಲಂಗಾಣ ಹೋರಾಟದಲ್ಲಿ ರಾವ್ ಜತೆ ಗುರುತಿಸಿಕೊಂಡವರು ಕೋದಂಡರಾಮ್. ಇಡೀ ತೆಲಂಗಾಣ ಹೋರಾಟದ ಕೇಂದ್ರ ಬಿಂದುವಾಗಿದ್ದ ಒಸ್ಮಾನಿಯಾ ಯುನಿವರ್ಸಿಟಿಯ ಹೋರಾಟಗಳ ಹಿಂದೆ ಇದ್ದವರು. ಇಲ್ಲಿ ರಾಜಕೀಯಶಾಸ್ತ್ರ ಪ್ರಾಧ್ಯಾಪರಾಗಿದ್ದ ಅವರು ಯುವ ಜನಾಂಗದಲ್ಲಿ ಪ್ರತ್ಯೇಕ ರಾಜ್ಯದ ಕಿಚ್ಚು ಹಚ್ಚಿದ್ದರು. ಆದರೆ ತೆಲಂಗಾಣ ಸರಕಾರ ರಚನೆಯಾದ ಬಳಿಕ ಚಂದ್ರಶೇಖರ್ ರಾವ್ ಮತ್ತು ಅವರ ಸಂಬಂಧ ಹಳಸಿತು. ಹೊರ ಬಂದ ಕೋದಂಡರಾಮ್‌ ಹೊಸ ಪಕ್ಷ ‘ತೆಲಂಗಾಣ ಜನ ಸಮಿತಿ’ ರಚಿಸಿದ್ದಾರೆ. ಕ್ಯಾಂಪಸ್‌ಗಳ ತಮ್ಮ ಮೆಚ್ಚಿನ ಯುವಜನಾಂಗದ ಬಳಿಗೆ ಅವರೀಗ ಮತ್ತೆ ತೆರಳಿದ್ದಾರೆ.

ಇನ್ನೊಂದುಕಡೆ 70 ವರ್ಷದ ಕ್ರಾಂತಿಕಾರಿ ಕವಿ ಗದ್ದರ್ ‘ಕೈ’ ಹಿಡಿದು ನಿಂತಿದ್ದಾರೆ. ಇವರೂ ಕೂಡ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ನಕ್ಸಲೈಟ್‌ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಕ್ರಾಂತಿಕಾರಿ ಕವಿತೆಗಳು, ಹಾಡಿನ ಮೂಲಕ ಗ್ರಾಮೀಣ ಭಾಗದ ಜನರ ಮನಗೆದ್ದವರು. ಗದ್ದರ್‌ ಬರೆದ ಹಾಡೇ ಇವತ್ತು ತೆಲಂಗಾಣದ ನಾಡಗೀತೆಯೂ ಆಗಿದೆ. ಇದೇ ಗದ್ದರ್ ತಮ್ಮ ಬೆಂಬಲವನ್ನು ಕಾಂಗ್ರೆಸ್‌ಗೆ ಘೋಷಿಸಿದ್ದಾರೆ. ರಾವ್ ಬಗ್ಗೆ ಮುನಿಸಿಕೊಂಡಿರುವ ಅವರು ಟಿಆರ್‌ಎಸ್‌ ಸರಕಾರವನ್ನು ಕಿತ್ತೊಗೆಯುವ ಪಣತೊಟ್ಟಿದ್ದಾರೆ. ಕಮ್ಯೂನಿಸ್ಟ್‌ ಪಕ್ಷಗಳೂ ಕಾಂಗ್ರೆಸ್‌ ಬೆಂಬಲಕ್ಕೆ ನಿಂತಿವೆ.

ಇವರೆಲ್ಲರ ಜತೆಗೆ ಚಂದ್ರಬಾಬು ನಾಯ್ಡು ಕೂಡ ಬಂದು ಕೈ ಜೋಡಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ತೊರೆದ ನಾಯ್ಡು ಕಾಂಗ್ರೆಸ್ ನೆರಳಿಗೆ ಬಂದಿದ್ದಾರೆ. ಇವರೆಲ್ಲರನ್ನು ಜತೆಯಾಗಿಟ್ಟುಕೊಂಡು ಪೈಲಟ್‌ ಉತ್ತಮ್‌ ಕುಮಾರ್‌ ರೆಡ್ಡಿ ಚುನಾವಣಾ ಹಾರಾಟದಲ್ಲಿ ನಿರತರಾಗಿದ್ದಾರೆ.

‘ಜನರ ನಂಬಿಕೆಗಳಿಗೆ ಟಿಆರ್‌ಎಸ್‌ ದ್ರೋಹ ಬಗೆದಿದೆ. ಎರಡು ಬೆಡ್ ರೂಂಗಳ ಮನೆ ನಿರ್ಮಾಣ, ಹಿಂದುಳಿದ ವರ್ಗಗಳಿಗೆ ಮೂರು ಎಕರೆ ಭೂಮಿ, ಮುಸ್ಲಿಂ ಮತ್ತು ಬುಡಕಟ್ಟು ಜನರಿಗೆ ಮೀಸಲಾತಿ, ಶುದ್ಧ ಕುಡಿಯುವ ನೀರು ಇದ್ಯಾವುದನ್ನೂ ಸರಕಾರ ಪೂರ್ಣಗೊಳಿಸಿಲ್ಲ. ಬದಲಿಗೆ ರಾವ್ ತಮ್ಮ ಮಗ, ಮಗಳು, ಸಂಬಂಧಿಗಳಿಗೆ ಅಧಿಕಾರ ನೀಡುತ್ತಿದ್ದಾರೆ’ ಎಂದು ರೆಡ್ಡಿ ಮತ್ತು ಕಾಂಗ್ರೆಸ್‌ ಆರೋಪಿಸಿದೆ.

ಹಾಗಂಥ ಇಷ್ಟಕ್ಕೇ ಸುಮ್ಮನಾಗಿಲ್ಲ. ಜತೆಗೆ ಹೊಸ ಭರವಸೆಗಳನ್ನೂ ಜನರಲ್ಲಿ ಬಿತ್ತಿದೆ. ಅಧಿಕಾರಕ್ಕೆ ಬಂದರೆ 5 ಲಕ್ಷ ರೂಪಾಯಿಗಳಲ್ಲಿ ಮನೆ ನಿರ್ಮಾಣ, 2 ಲಕ್ಷ ರೂಪಾಯಿವರೆಗಿನ ಕೃಷಿಕರ ಸಾಲ ಮನ್ನಾ, ಮೊದಲ ವರ್ಷ 1 ಲಕ್ಷ ಉದ್ಯೋಗ ಸೃಷ್ಟಿ, ಪತ್ರಕರ್ತರ ಮೇಲೆ ದಾಳಿ ಮಾಡಿದರೆ ಜಾಮೀನು ರಹಿತ ವಾರಂಟ್‌ ಮೊದಲಾದ ಅಂಶಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಚುನಾವಣಾ ಕಣಕ್ಕಿಳಿದಿದೆ.

‘‘ಭಯೋತ್ಪಾದನೆಯ ಈ ಆಡಳಿತಕ್ಕೆ ಜನರು ಡಿಸೆಂಬರ್ 7ರಂದು ಜನರು ಅಂತ್ಯ ಹಾಡಲಿದ್ದಾರೆ,” ಎಂದು ಉತ್ತಮ ಕುಮಾರ್ ರೆಡ್ಡಿ ಮೆಲು ದನಿಯಲ್ಲಿ ಅಬ್ಬರಿಸಿದ್ದಾರೆ. ಗದ್ದರ್ ಮತ್ತು ಕೋದಂಡರಾಮ್ ಆ ಧ್ವನಿಯನ್ನು ಮತ್ತಷ್ಟು ದೊಡ್ಡದಾಗಿಸಿದ್ದಾರೆ. ಪರಿಣಾಮ ಕೆಸಿಆರ್‌ ಕಾರಿನ ಚಕ್ರಗಳು ಕಳಚಿಕೊಳ್ಳಲು ಆರಂಭಿಸಿವೆ. ಹಾಗಾದರೆ ಅಂಬಾಸಿಡರ್‌ ಕಾರಿನ ಕತೆ ಏನಾಗಲಿದೆ? ಅದಕ್ಕೆ ಡಿಸೆಂಬರ್‌ 11ರ ವರೆಗೆ ಕಾಯಬೇಕು. ಆದರೆ ಒಂದು ಮಾತ್ರ ನಿಜ, ತೆಲಂಗಾಣ ವಶ ಪಡಿಸಿಕೊಳ್ಳಲು ಕಾಂಗ್ರೆಸ್‌ಗೆ ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ.

ಪೂರಕ ಮಾಹಿತಿ: ಏಷ್ಯಾ ಟೈಮ್ಸ್‌.