samachara
www.samachara.com
‘ಎಂತಾ ಸಾವು ಮೋದಿಜಿ’: ರೈತರಿಗೆ ನಾಮ; ವಿಮಾ ಕಂಪನಿಗಳಿಗೆ ಭರ್ಜರಿ ‘ಫಸಲ್’ ಬೀಮಾ!
COVER STORY

‘ಎಂತಾ ಸಾವು ಮೋದಿಜಿ’: ರೈತರಿಗೆ ನಾಮ; ವಿಮಾ ಕಂಪನಿಗಳಿಗೆ ಭರ್ಜರಿ ‘ಫಸಲ್’ ಬೀಮಾ!

ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ‘ಫಸಲ್‌ ಬಿಮಾ’ ಯೋಜನೆ ಪ್ರಕಾರ ರೈತರಿಗೆ ಸಿಗಬೇಕಾದ ವಿಮೆಯ ಮೊತ್ತ ನಿಗದಿತ ಸಮಯದೊಳಕ್ಕೆ ಸಿಗಬೇಕು. ಆದರೆ ತಳಮಟ್ಟದಲ್ಲಿ ಪರಿಸ್ಥಿತಿ ಹಾಗಿಲ್ಲ.

Team Samachara

ವಿಧಾನಸೌಧದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಸಂಬಂಧ ಮಂಗಳವಾರ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌; ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಸಭೆ ಕರೆದಿದ್ದರು. ‘ಈ ಬಾರಿ ಮತ್ತೆ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇನ್ನೂ ಹಲವು ತಾಲೂಕುಗಳು ಪಟ್ಟಿಗೆ ಸೇರಲಿವೆ’ ಎಂದು ಸಿಎಂ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಒಂದೆಡೆ ಪರಿಸ್ಥಿತಿ ಹೀಗಿದ್ದರೆ ರೈತರಿಗೆ ಕಳೆದ ಎರಡು ವರ್ಷಗಳ ವಿಮಾ ಹಣವೇ ಇನ್ನೂ ಬರಲು ಬಾಕಿ ಇದೆ.

2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಘೋಷಣೆ ಮಾಡಿದ್ದರು. ಇಡೀ ಯೋಜನೆಯಲ್ಲಿ ಮುಖ್ಯವಾಗಿ ಇದ್ದ ವಿಶೇಷತೆಯೇ ರೈತರಿಗೆ ಸಿಗಬೇಕಾದ ಪರಿಹಾರವನ್ನು ನಿಗದಿತ ಸಮಯದೊಳಕ್ಕೆ ಪಾವತಿ ಮಾಡುವುದಾಗಿತ್ತು.

ಆದರೆ ತಳಮಟ್ಟದಲ್ಲಿ ಪರಿಸ್ಥಿತಿ ಹಾಗಿಲ್ಲ ಎಂಬುದನ್ನು ಆರ್‌ಟಿಐ ಮಾಹಿತಿಗಳು ಬಹಿರಂಗಪಡಿಸುತ್ತಿವೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ರೈತರಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿರುವ ವಿಮಾ ಹಣದ ಮೊತ್ತವನ್ನು ಆರ್‌ಟಿಐ ಮೂಲಕ ‘ದಿ ವೈರ್‌’ ಪಡೆದುಕೊಂಡಿದ್ದು ಕರ್ನಾಟಕದ ರೈತರಿಗೆ ದೊಡ್ಡ ಮೊತ್ತದ ಹಣ ಬರಬೇಕಾಗಿರುವುದು ಬಹಿರಂಗಗೊಂಡಿದೆ.

ನಿಯಮಗಳ ಪ್ರಕಾರ, ಹಂಗಾಮು ಪೂರ್ಣಗೊಂಡ 2 ತಿಂಗಳೊಳಗೆ ಪರಿಹಾರದ ಹಣವನ್ನು ಕೃಷಿಕರ ಖಾತೆಗೆ ಜಮೆ ಮಾಡಬೇಕು. ಆದರೆ 2016-17ರ ಅವಧಿಯಲ್ಲಿ ವಿಮಾ ಕಂಪನಿಗಳು ರೈತರಿಗೆ ಪಾವತಿ ಮಾಡಬೇಕಿದ್ದ 546 ಕೋಟಿ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 257 ಕೋಟಿ ರೂಪಾಯಿ ಕರ್ನಾಟದ ರೈತರಿಗೆ ಬರಬೇಕಿದೆ. ಆ ವರ್ಷ ಕರ್ನಾಟಕದಲ್ಲಿ ತೀವ್ರ ಬರ ಉಂಟಾಗಿತ್ತು. 176ರಲ್ಲಿ 160 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿತ್ತು. ವಿಪರ್ಯಾಸವೆಂದರೆ, ರೈತರಿಗೆ ತುಸು ನೆಮ್ಮದಿ ನೀಡಬಹುದಾಗಿದ್ದ ವಿಮೆಯ ಹಣ ಎರಡು ವರ್ಷ ಕಳೆದರೂ ಅನ್ನದಾತರ ಕೈ ಸೇರಿಲ್ಲ. ಇದೇ ರೀತಿ 2017-18ರ ವಿಮೆಯ ಹಣವೂ ಕರ್ನಾಟಕದ ರೈತರಿಗೆ ಸಿಕ್ಕಿಲ್ಲ.

ಫಸಲ್‌ ಬಿಮಾ ಯೋಜನೆಯ ಜಾಹೀರಾತಿನಲ್ಲಿ ಪ್ರಧಾನಿ ಮೋದಿ.
ಫಸಲ್‌ ಬಿಮಾ ಯೋಜನೆಯ ಜಾಹೀರಾತಿನಲ್ಲಿ ಪ್ರಧಾನಿ ಮೋದಿ.

ಇದು ಕರ್ನಾಟಕದ ಪರಿಸ್ಥಿತಿ ಮಾತ್ರವಲ್ಲ ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶದ ರೈತರಿಗೂ ಇದೇ ರೀತಿ ದೊಡ್ಡ ಮೊತ್ತದ ಹಣ ಬರಬೇಕಾಗಿದೆ.

ಒಟ್ಟಾರೆ 2016-17 ಮತ್ತು 17-18ರ ಖಾರಿಫ್‌ ಬೆಳೆಯ ಪರಿಹಾರ ಸೇರಿ 2,829 ಕೋಟಿ ರೂಪಾಯಿ ವಿಮಾ ಮೊತ್ತವನ್ನು ಕಂಪನಿಗಳು ರೈತರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಅದರಲ್ಲೂ 2017-18ರ ರಾಬಿ ಬೆಳೆಯಲ್ಲಿ ಎಷ್ಟು ಜನ ಪರಿಹಾರ ಕೋರಿದ್ದಾರೆ, ಎಷ್ಟು ಜನರ ಪರಿಹಾರಕ್ಕೆ ಅನುಮೋದನೆ ನೀಡಲಾಗಿದೆ ಎಂಬುದರ ಬಗ್ಗೆ ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳುತ್ತಿದೆ. ಇದನ್ನೂ ಒಟ್ಟು ಗೂಡಿಸಿದರೆ ರೈತರಿಗೆ ಸಿಗಬೇಕಾದ ಹಣದ ಮೊತ್ತ 5 ಸಾವಿರ ಕೋಟಿ ರೂಪಾಯಿಗಳನ್ನು ದಾಟುತ್ತದೆ.

ದಾಖಲೆಗಳ ಪ್ರಕಾರ, 2017-18ರ ರಾಬಿ ಬೆಳೆಗೆ ಸಂಬಂಧಿಸಿದಂತೆ ಕೇವಲ ಶೇಕಡಾ 1ರಷ್ಟು ರೈತರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಜತೆಗೆ ಹಳೇ ಬಾಕಿಗಳು ಹಾಗೆಯೇ ಉಳಿದುಕೊಂಡಿವೆ. ಬೆಳೆಗಳ ಕಟಾವು ಅವಧಿ ಮುಗಿದ ಎರಡು ತಿಂಗಳ ಒಳಗೆ ಪರಿಹಾರ ನೀಡಬೇಕು ಎಂಬುದು ಕಾಗದದ ಮೇಲಿರುವ ನಿಯಮ. ಎಷ್ಟೇ ತಡ ಎಂದುಕೊಂಡರೂ 2017ರ ಮೇಗೆ ಆ ವರ್ಷದ ಕೃಷಿ ಹಂಗಾಮು ಮುಗಿಯುತ್ತದೆ. ಅಲ್ಲಿಂದ ಇಲ್ಲಿವರೆಗೆ ಒಂದೂವರೆ ವರ್ಷ ಕಳೆದಿದೆ. ಆದರೆ ಇನ್ನೂ ಹಣ ಪಾವತಿಯಾಗಿಲ್ಲ.

ಇನ್ನು 2017-18ರ ಖಾರಿಫ್‌ ಬೆಳೆಗೆ ಸಂಬಂಧಿಸಿದಂತೆ ಪರಿಹಾರ ಕೋರಿರುವ 2,282 ಕೋಟಿ ರೂಪಾಯಿ ಮೊತ್ತದ ಅರ್ಜಿಗಳು ಇನ್ನೂ ಕೊಳೆಯುತ್ತಿವೆ. 20017ರ ಖಾರಿಫ್‌ ಋತು ಡಿಸೆಂಬರ್‌ಗೆ ಕೊನೆಯಾಗಿದ್ದು ಇದೀಗ ಇನ್ನೊಂದು ಡಿಸೆಂಬರ್‌ ಸಮೀಪಿಸಿದೆ. ಆದರೂ ಪರಿಹಾರದ ಸುಳಿವಿಲ್ಲ. ಹೀಗೆ ನಿರಂತರವಾಗಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ನಿಯಮಾವಳಿಯನ್ನು ಗಾಳಿಗೆ ತೂರಲಾಗಿದೆ.

ಒಟ್ಟಾರೆ 2016-17, ಮತ್ತು 17-18ರಲ್ಲಿ ರೈತರು 34,441 ಕೋಟಿ ರೂಪಾಯಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಕಂಪನಿಗಳು 31,612 ಕೋಟಿ ರೂಪಾಯಿಗಳನ್ನು ವಿಮಾ ರೂಪದಲ್ಲಿ ನೀಡಿದ್ದರೆ ಇನ್ನು 2,829 ಕೋಟಿ ರೂಪಾಯಿಗಳನ್ನು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿವೆ.

ರಿಲಯನ್ಸ್‌ ಜನರಲ್‌ ಇನ್ಶೂರೆನ್ಸ್‌, ಐಸಿಐಸಿಐ ಲೊಂಬಾರ್ಡ್‌, ಎಸ್‌ಬಿಐ ಜನರಲ್‌ ಇನ್ಶೂರೆನ್ಸ್‌, ಅಗ್ರಿಕಲ್ಚರ್ ಇನ್ಶೂರೆನ್ಸ್‌ ಕಂಪನಿ (ಎಐಸಿ) ಆಫ್‌ ಇಂಡಿಯಾ, ನ್ಯೂ ಇಂಡಿಯಾ ಅಶುರೆನ್ಸ್‌ ಕಂಪನಿಗಳು ಬೆಳೆ ವಿಮಾ ಉದ್ಯಮದಲ್ಲಿ ತೊಡಗಿಸಿಕೊಂಡ ಪ್ರಮುಖ ಕಂಪನಿಗಳಾಗಿವೆ.

ಇದರಲ್ಲಿ ಸರಕಾರಿ ಸ್ವಾಮ್ಯದ ‘ಎಐಸಿ’ಯೇ ಹೆಚ್ಚಿನ ಮೊತ್ತದ ವಿಮೆ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. 2016-17ರಲ್ಲಿ 154 ಕೋಟಿ ರೂಪಾಯಿ ಮತ್ತು 2016-17ರಲ್ಲಿ 907 ಕೋಟಿ ರೂಪಾಯಿ ಸೇರಿ ಒಟ್ಟಾರೆ 1,061 ಕೋಟಿ ರೂಪಾಯಿಗಳನ್ನು ಇದು ರೈತರಿಗೆ ನೀಡಬೇಕಿದೆ. ಇನ್ನು 2017-18ರ ರಾಬಿ ಬೆಳೆಯ ಲೆಕ್ಕ ಬೇರೆಯದೇ ಇದೆ. ಅಂದಾ ಹಾಗೆ 2018ರ ಮಾರ್ಚ್‌ ಅಂತ್ಯಕ್ಕೆ ‘ಎಐಸಿ’ ಬೆಳೆ ವಿಮೆಯಿಂದ ಗಳಿಸಿದ ಲಾಭವೇ 703 ಕೋಟಿ ರೂಪಾಯಿ.

ಇದೇ ಅವಧಿಯಲ್ಲಿ ಎಚ್‌ಡಿಎಫ್‌ಸಿ 300 ಕೋಟಿ ರೂಪಾಯಿ, ಐಸಿಐಸಿಐ 260 ಕೋಟಿ ರೂಪಾಯಿಗಳ ಮೊತ್ತವನ್ನು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿವೆ.

2017-18ಕ್ಕೆ ಬಂದಾಗ ಹಿಮಾಚಲ ಪ್ರದೇಶದ ರೈತರ ಶೇಕಡಾ 91ರಷ್ಟು ವಿಮಾ ಮೊತ್ತವನ್ನು ಪಾವತಿ ಮಾಡಿಲ್ಲ. ತಮಿಳುನಾಡಿನ ರೈತರಿಗೆ ಬರಬೇಕಾದ 144 ಕೋಟಿ ರೂಪಾಯಿಗಳಲ್ಲಿ 124 ಕೋಟಿ ರೂಪಾಯಿಗಳು ಅಂದರೆ ಶೇಕಡಾ 86ರಷ್ಟು ಹಣ ಪಾವತಿಗೆ ಬಾಕಿ ಉಳಿದಿದೆ. ಕರ್ನಾಟಕದ ಪರಿಸ್ಥಿತಿಯೂ ಇದಕ್ಕಿಂತ ಏನು ಭಿನ್ನವಾಗಿಲ್ಲ.

ಇನ್ನು 2017-18ರ ರಾಬಿ ಬೆಳೆಯದ್ದಂತೂ ಎಷ್ಟು ಅರ್ಜಿ ಸಲ್ಲಿಕೆಯಾಗಿದೆ, ಎಷ್ಟು ಪಾವತಿಯಾಗಿದೆ ಎಂಬ ಮಾಹಿತಿಗಳೇ ಇಲ್ಲ. ಹೀಗೆ ಎರಡು ವರ್ಷದ ವಿಮೆ ಪರಿಹಾರಕ್ಕಾಗಿ ಕರ್ನಾಟಕದ ರೈತರು ಕಾಯುತ್ತಾ ಕುಳಿತಿದ್ದಾರೆ. ಇದರ ನಡುವೆಯೇ 2018-19ರ ಬರ ರೈತರನ್ನು ಸ್ವಾಗತಿಸುತ್ತಿದೆ.

ಕೃಪೆ: ದಿ ವೈರ್‌

CLICK HERE to join Samachara official.