samachara
www.samachara.com
‘ನಿಷೇಧ ನಿಮ್ದು, ಡಬಲ್‌ ರೇಟು ನಮ್ದು’; ಅಂಬರೀಶ್‌ ಹೆಸರಲ್ಲಿ ಕುಡುಕರ ಜೇಬಿಗೆ ಭರ್ಜರಿ ಕತ್ತರಿ!
COVER STORY

‘ನಿಷೇಧ ನಿಮ್ದು, ಡಬಲ್‌ ರೇಟು ನಮ್ದು’; ಅಂಬರೀಶ್‌ ಹೆಸರಲ್ಲಿ ಕುಡುಕರ ಜೇಬಿಗೆ ಭರ್ಜರಿ ಕತ್ತರಿ!

ಅಂಬರೀಶ್‌ ಸಾವಿನ ಸಂದರ್ಭದಲ್ಲಿ ಬೆಂಗಳೂರು, ಮಂಡ್ಯದಲ್ಲಿ ಮದ್ಯ ನಿಷೇಧ ಆಗಿದ್ದು ಕೇವಲ ಕಾಗದದ ಮೇಲಷ್ಟೇ. ನಡೆದಿದ್ದೆಲ್ಲಾ ಡಬಲ್ ಮೀಟರ್ ಕಸುಬು. ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಎಣ್ಣೆ ಅಂಗಡಿ ಮಾಲೀಕರು ಇದರ ಪಾಲುದಾರರು. 

Team Samachara

ನಟ, ರಾಜಕಾರಣಿ ಅಂಬರೀಶ್ ನಿಧನದ ಕಾರಣಕ್ಕೆ ಬೆಂಗಳೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಮಧ್ಯ ನಿಷೇಧ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ಈ ನಿಷೇಧದ ಆದೇಶ ಜಾರಿಗೆ ಬಂದಿದ್ದು ಕೇವಲ ಕಾಗದದ ಮೇಲಷ್ಟೇ. ಬಾರ್‌ಗಳ ಮುಂಬಾಗಿಲು ಬಂದ್‌ ಆಗಿದ್ದರೂ ಎಂದಿನಂತೆ ಹಿಂಬಾಗಿಲ ಮೂಲಕ ಭರ್ಜರಿ ಮಾರಾಟವನ್ನು ಬಾರ್‌ಗಳು ಈ ಎರಡೂ ದಿನಗಳೂ ನಡೆಸಿವೆ. ಬಾರ್‌ ಮಾಲೀಕರು, ಪೊಲೀಸರ ಜತೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳೂ ಈ ಕಳ್ಳ ಮಾರಾಟದಲ್ಲಿ ಶಾಮೀಲಾಗಿದ್ದರು.

ಅಂಬರೀಶ್‌ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅಭಿಮಾನಿಗಳು ಮದ್ಯ ಸೇವಿಸಿ ಕಾನೂನು ಸುವ್ಯವಸ್ಥೆಗೆ ಭಂಗವಾಗಬಾರದು ಎಂಬ ಕಾರಣಕ್ಕೆ ಎರಡು ದಿನಗಳ ಕಾಲ ಮದ್ಯ ನಿಷೇಧಿಸಲಾಗಿತ್ತು. ಆದರೆ, ಇದರಿಂದ ನಷ್ಟವಾಗಿದ್ದು ಸಾಮಾನ್ಯ ಕುಡುಕರಿಗೆ. ಮದ್ಯ ನಿಷೇಧವಾಗಿದ್ದರಿಂದ ಬಾರ್‌ಗಳ ಹಿಂಬಾಲಿನತ್ತ ಸುಳಿದ ಸಾಮಾನ್ಯ ಕುಡುಕರು ಮದ್ಯದ ಗರಿಷ್ಠ ಮಾರಾಟದ ದರಕ್ಕಿಂತ (ಎಂಆರ್‌ಪಿ) ಮೂರು ಪಟ್ಟು ಹೆಚ್ಚಿನ ಬೆಲೆಗೆ ಬಾಟಲಿ ಕೊಳ್ಳುವಂತಾಗಿತ್ತು.

ಕಡಿಮೆ ದರದ ವಿಸ್ಕಿಯ 180 ಎಂಎಲ್‌ ಬಾಟಲ್‌ನ ಎಂಆರ್‌ಪಿ 75 ರೂಪಾಯಿ. ಆದರೆ, ಮದ್ಯ ನಿಷೇಧವಾದ ದಿನಗಳಲ್ಲಿ 75 ರೂಪಾಯಿಯ ಇದೇ ಬಾಟಲಿಗೆ ಸಾಮಾನ್ಯ ಕುಡುಕರು 200 ರೂಪಾಯಿವರೆಗೂ ಬೆಲೆ ತೆತ್ತಿದ್ದಾರೆ. ನಿಷೇಧವಾದ ದಿನಗಳಲ್ಲಿ ಮಾರಾಟವಾದ ಎಲ್ಲಾ ಮದ್ಯಕ್ಕೂ ಮೂರು ಪಟ್ಟು ಮಾರ್ಜಿನ್‌ ಇಟ್ಟೇ ಮಾರಾಟ ಮಾಡಲಾಗಿದೆ.

ಹೊರಗಿನಿಂದ ಬಾರ್‌ಗಳ ಬಾಗಿಲು ಹಾಕಿಸಿದ್ದ ಪೊಲೀಸರು ಹಾಗೂ ಅಬಕಾರಿ ಇಲಾಖೆಯ ಸಿಬ್ಬಂದಿ ಹಿಂಬಾಗಿಲು, ಕಿಟಕಿ, ಕಿಂಡಿಗಳ ಮೂಲಕ ಮದ್ಯದ ಮಾರಾಟಕ್ಕೆ ತಾವೇ ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಮದ್ಯ ಮಾರಾಟದ ತಲಾ ಮೂರನೇ ಒಂದು ಭಾಗ ಪೊಲೀಸರಿಗೂ, ಅಬಕಾರಿ ಇಲಾಖೆ ಅಧಿಕಾರಿಗಳಿಗೂ ಸಂದಾಯವಾಗಿರುವುದನ್ನು ಖುದ್ದು ಬಾರ್‌ನ ಕ್ಯಾಷಿಯರ್‌ಗಳೇ ಒಪ್ಪಿಕೊಳ್ಳುತ್ತಾರೆ.

“ಯಾವುದೇ ಬಾರ್‌ಗಳ ಮುಂದಿನ ಬಾಗಿಲು ಸೀಲ್‌ ಮಾಡಿದ್ದರೂ ಕಿಟಕಿ, ಕಿಂಡಿಗಳು ಇದ್ದೇ ಇರುತ್ತವೆ. ಸಮಸ್ಯೆ ಆಗದ ಹಾಗೆ ಕಿಟಕಿ, ಕಿಂಡಿಗಳ ಮೂಲಕ ಮಾರಾಟ ಮಾಡಿಕೊಳ್ಳಲು ಪೊಲೀಸರು, ಅಬಕಾರಿ ಸಿಬ್ಬಂದಿಯೇ ಅವಕಾಶ ಕೊಡುತ್ತಾರೆ. ಇದಕ್ಕಾಗಿ ಅವರಿಗೆ ಮಾಮೂಲಿನ ಜತೆಗೆ ಸ್ವಲ್ಪ ಹೆಚ್ಚು ದುಡ್ಡು ಕೊಟ್ಟರೆ ನಡೆಯುತ್ತದೆ. ಬಾರ್‌ ಹತ್ತಿರ ಜನ ಹೆಚ್ಚು ಸೇರದ ಹಾಗೆ, ಬಾರ್‌ ಸಮೀಪ ಗಲಾಟೆ ಆಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಬಾರ್‌ನವರದ್ದೇ. ಬಾರ್‌ ಹತ್ತಿರವೇ ಕುಡಿದು ಗಲಾಟೆ ಮಾಡಿದರೆ ನಮ್ಮ ಕುತ್ತಿಗೆಗೆ ಬರುತ್ತದೆ” ಎನ್ನುತ್ತಾರೆ ಬೆಂಗಳೂರು ಉತ್ತರ ಭಾಗದ ಬಾರ್‌ ಒಂದರ ಕ್ಯಾಷಿಯರ್‌.

ಹೆಸರು ಬಹಿರಂಗ ಪಡಿಸಬಾರದೆಂಬ ಷರತ್ತಿನ ಮೇರೆಗೆ ‘ಸಮಾಚಾರ’ದೊಂದಿಗೆ ಮಾತನಾಡಿದ ಅವರು, “ಮದ್ಯ ನಿಷೇಧ ಎಂಬುದು ಸರಕಾರದ ಕಾಗದದ ಲೆಕ್ಕಕ್ಕೆ ಮಾತ್ರ. ಗಾಂಧಿ ಜಯಂತಿ ಇರಲಿ, ವಿಧಾನಸಭಾ ಚುನಾವಣೆಯೇ ಇರಲಿ ಮದ್ಯ ಮಾರಾಟಕ್ಕೆ ಪೂರ್ತಿಯಾಗಿ ಬ್ರೇಕ್‌ ಹಾಕುವುದು ಅಬಕಾರಿ ಇಲಾಖೆಯ ಸಿಬ್ಬಂದಿಗೇ ಬೇಕಿಲ್ಲ. ಪೊಲೀಸರು, ಅಬಕಾರಿ ಅಧಿಕಾರಿಗಳು ದುಡ್ಡು ಮಾಡಿಕೊಳ್ಳಲು ಅದೇ ಒಳ್ಳೆಯ ಸಮಯ. ಹೀಗಾಗಿ ಮುಂದೆ ಸೀಲ್‌ ಮಾಡಿದ್ದರೂ ಬಾರ್ ಒಳಗೊಬ್ಬ, ಹೊರಗೊಬ್ಬ ಹುಡುಗರನ್ನು ಇಟ್ಟು ಗುಟ್ಟಾಗಿ ಮಾರಾಟ ಮಾಡುವುದು ನಡೆದೇ ನಡೆಯುತ್ತದೆ” ಎನ್ನುತ್ತಾರೆ ಅವರು.

“ಮದ್ಯ ನಿಷೇಧ ಎಂದರೆ ಸ್ಟಾರ್‌ ಹೋಟೆಲ್‌ಗಳಲ್ಲೂ ನಿಷೇಧ ಮಾಡಬೇಕು. ಆದರೆ, ಹಲವು ರೆಸ್ಟೋರಂಟ್‌, ಸ್ಟಾರ್‌ ಹೋಟೆಲ್‌ಗಳು, ರೆಸಾರ್ಟ್‌ಗಳಲ್ಲಿ ನಿಷೇಧವಿದ್ದ ದಿನಗಳಲ್ಲೂ ಮದ್ಯ ಮಾರಾಟ ನಡೆಯುತ್ತದೆ. ಬಾರ್‌, ವೈನ್‌ಶಾಪ್‌ಗಳಲ್ಲಿ ಮುಂದೆ ಬಾಗಿಲು ಹಾಕಿಸಿ ಹಿಂದೆ ಮಾರಾಟ ಮಾಡುವುದು ನಡೆದೇ ಇದೆ. ಬೆಂಗಳೂರಿನಲ್ಲಂತೂ ನಿಷೇಧವಿದ್ದ ದಿನಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಖುದ್ದು ಅಬಕಾರಿ ಆಯುಕ್ತರು, ಅಬಕಾರಿ ಸಚಿವರಿಗೇ ತಡೆಯಲು ಸಾಧ್ಯವಿಲ್ಲ” ಎನ್ನುತ್ತಾರೆ ನಂದಿನಿ ಬಡಾವಣೆಯ ಮದ್ಯ ಪ್ರಿಯರೊಬ್ಬರು.

ಕರ್ನಾಟಕ ಮದ್ಯ ಮಾರಾಟದ ಅತಿ ಹೆಚ್ಚು ಮಾರಾಟ ಬೆಲೆ ಪಟ್ಟಿ. 
ಕರ್ನಾಟಕ ಮದ್ಯ ಮಾರಾಟದ ಅತಿ ಹೆಚ್ಚು ಮಾರಾಟ ಬೆಲೆ ಪಟ್ಟಿ. 
/ಸಮಾಚಾರ. 

ಕರ್ನಾಟಕ ಸರಕಾರ ವರ್ಷಕ್ಕೆ ಮದ್ಯ ಮಾರಾಟದಿಂದ ನಿರೀಕ್ಷೆ ಮಾಡುವ ಮೊತ್ತ ಸುಮಾರು 20 ಸಾವಿರ ಕೋಟಿ ರೂಪಾಯಿ. ಅಂದರೆ, ಕರ್ನಾಟಕದ ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ವಾರ್ಷಿಕ ಬಜೆಟ್‌ನ ಶೇಕಡ 10ರಷ್ಟು ಆದಾಯದ ಮೂಲ ಮದ್ಯ ಮಾರಾಟ. ಆದರೆ, ಅಬಕಾರಿ ಇಲಾಖೆಯ ಸೋರಿಕೆಯನ್ನು ತಡೆಯುವಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಅಬಕಾರಿ ಇಲಾಖೆಯಲ್ಲಿ ಎಗ್ಗಿಲ್ಲದೆ ಭ್ರಷ್ಟಾಚಾರ, ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ ಸರಕಾರ ಕಣ್ಣು ಮುಚ್ಚಿ ಕುಳಿತಿರುವ ಹಾಗಿದೆ.

ಒಂದು ಹಂತದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಸರಕಾರಕ್ಕೆ ನಿಯಂತ್ರಣವೇ ಇಲ್ಲವೇನೋ ಎಂಬ ಮಟ್ಟಿಗೆ ಈ ಇಲಾಖೆ ಸ್ವಚ್ಛಂದವಾಗಿ ನಡೆಯುತ್ತಿದೆ. ಕೆಲವು ಅಧಿಕಾರಿಗಳಂತೂ ಸುಖಾಸುಮ್ಮನೆ ತಮ್ಮ ವಿರುದ್ಧ ಯಾವ ಮಾಧ್ಯಮಗಳು ವರದಿ ಮಾಡಬಾರದು ಎಂದು ನ್ಯಾಯಾಲಯದಲ್ಲಿ ಅವಲತ್ತುಕೊಳ್ಳುವ ದಾರಿದ್ರ್ಯತೋರಿಸುತ್ತಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಒಟ್ಟಾಗಿ ಅಬಕಾರಿ ನಿಯಮಗಳನ್ನು ಸಾರಾಸಗಟಾಗಿ ಗಾಳಿಗೆ ತೂರುತ್ತಿದ್ದಾರೆ. ಒಂದು ಕಡೆ ನಿಷೇಧದ ಹೆಸರಲ್ಲಿ ಸಾಮಾನ್ಯ ಕುಡುಕರ ಜೇಬಿಕೆ ಕತ್ತರಿ ಬೀಳುತ್ತಿದ್ದರೆ, ಅಬಕಾರಿ ತೆರಿಗೆ ಸೋರಿಕೆಯಿಂದ ಜನ ಸಾಮಾನ್ಯರನ್ನೂ ವಂಚಿಸಲಾಗುತ್ತಿದೆ. ಆದರೆ, ಇದನ್ನೆಲ್ಲಾ ನಿಯಂತ್ರಿಸಬೇಕಾದ ಸರಕಾರ ಕಣ್ಣಿದ್ದೂ ಕುರುಡನಂತೆ, ಕಿವಿ ಇದ್ದೂ ಕಿವುಡನಂತೆ ನಡೆದುಕೊಳ್ಳುತ್ತಿದೆ. ಜನ, ‘ಮನೆಗೆ ಬಂದಿಲ್ಲ ಅಂತ ಬಯ್ಯಬೇಡಿ ನೀವು’ ಅಂತ ಆಲಾಪ ಕೇಳಿಕೊಂಡು ಮನಃಶಾಂತಿ ಮಾಡಿಕೊಳ್ಳುತ್ತಿದ್ದಾರೆ.