samachara
www.samachara.com
26/11 ಮುಂಬೈ ದಾಳಿ & ಈ ದಶಕದ ಅಂತರದಲ್ಲಿ ಬೆಳವಣಿಗೆ ಕಂಡ ಸಾಮಾಜಿಕ ಜಾಲತಾಣಗಳ ಸುತ್ತ...
COVER STORY

26/11 ಮುಂಬೈ ದಾಳಿ & ಈ ದಶಕದ ಅಂತರದಲ್ಲಿ ಬೆಳವಣಿಗೆ ಕಂಡ ಸಾಮಾಜಿಕ ಜಾಲತಾಣಗಳ ಸುತ್ತ...

ಕಳೆದೊಂದು ದಶಕದ ಹಿಂದೆ ಭಾರತದಲ್ಲಿ ಸದ್ದು ಮಾಡಿದ ಸಾಮಾಜಿಕ ಜಾಲತಾಣಗಳು ಅಲ್ಲಿಂದ ಇಲ್ಲಿಯವರೆಗೆ ತಮ್ಮ ಸಾಮಾಜಿಕ ಪ್ರಭಾವವನ್ನು ಹೆಚ್ಚಿಸುತ್ತಲೇ ಬರುತ್ತಿವೆ.

Team Samachara

26/11 ಮುಂಬೈ ದಾಳಿ ನಡೆದು ಇಂದಿಗೆ ಸರಿಯಾಗಿ ಹತ್ತು ವರ್ಷ. ಮುಂಬೈ ದಾಳಿಯ ನಂತರ ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಭಾರಿ ಸುಧಾರಣೆಯಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಬೆಳವಣಿಗೆಯ ವಿಚಾರದಲ್ಲಿ ಒಂದು ದಶಕದ ಹಿನ್ನೋಟ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಿದೆ.

ಮುಂಬೈ ದಾಳಿ ಸಂದರ್ಭದಲ್ಲಿ ಭಾರತದಲ್ಲಿ ಆಗಿನ್ನೂ ಕಾಲೂರಿದ್ದ ಟ್ವಿಟರ್‌ ಪ್ರಭಾವಿ ಸಾಮಾಜಿಕ ಜಾಲತಾಣವಾಗಿತ್ತು. ಭಾರತ ಸೇರಿದಂತೆ ಜಗತ್ತಿನಾದ್ಯಂತ ಟ್ವಿಟರ್‌ ಆಗ ಹೆಚ್ಚು ಸದ್ದು ಮಾಡುತ್ತಿತ್ತು. ಜನ ಸಾಮಾನ್ಯರೇ ಸುದ್ದಿಯನ್ನು ಬಿತ್ತರಿಸುವ ಕಿರು ಜಾಲತಾಣವಾಗಿದ್ದ ಟ್ವಿಟರ್‌, ಮುಂಬೈ ದಾಳಿಯ ಸಂದರ್ಭದಲ್ಲಿ ಸುದ್ದಿ ಸಂಸ್ಥೆಗಳಿಗಿಂತಲೂ ವೇಗವಾಗಿ ಉಗ್ರರ ದಾಳಿಯ ಸುದ್ದಿಯನ್ನು ಬ್ರೇಕ್‌ ಮಾಡಿತ್ತು.

ಜಾಹೀರಾತು ಉದ್ಯಮದಲ್ಲಿದ್ದ ಮುಂಬೈನ ಕಪಿಲ್‌ ಭಾಟಿಯ (@kapilb) 2008ರ ನವೆಂಬರ್‌ 26ರ ರಾತ್ರಿ 10.25ಕ್ಕೆ ಉಗ್ರರ ದಾಳಿ ಸುದ್ದಿಯನ್ನು ಟ್ವಿಟರ್‌ ಮೂಲಕ ಬ್ರೇಕ್‌ ಮಾಡಿದ್ದರು. ಮುಂದಿನ ಕೆಲವೇ ನಿಮಿಷಗಳಲ್ಲಿ ಮುಂಬೈ ದಾಳಿಯ ಅಪ್‌ಡೇಟ್‌ಗಳು ಟ್ವಿಟರ್‌ನಲ್ಲಿ ಶುರುವಾಗಿದ್ದವು. ದಾಳಿ ನಡೆದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ಸ್ಫೋಟದ ಸದ್ದು, ಗುಂಡಿನ ಸದ್ದು ಕೇಳಿದ್ದಾಗಿ ಟ್ವೀಟ್‌ ಮಾಡುತ್ತಿದ್ದರು. ಮುಂದಿನ 60 ಗಂಟೆಗಳಲ್ಲಿ ದೇಶದ ಮಾಧ್ಯಮಗಳಲ್ಲಿ ಮುಂಬೈ ದಾಳಿ ಸದ್ದು ಮಾಡಿದ್ದಕ್ಕಿಂತ ತುಸು ಹೆಚ್ಚೇ ಸದ್ದನ್ನು ಟ್ವಿಟರ್‌ ಮಾಡಿತ್ತು.

ಟ್ವಿಟರ್‌ ಮೂಲಕ ಮುಂಬೈ ದಾಳಿಯ ಸುದ್ದಿ, ಗಡಿ ಮೇರೆಗಳನ್ನು ಮೀರಿ ಜಗತ್ತಿಗೆ ತಲುಪಿತ್ತು. ತಮ್ಮ ಬೆರಳ ತುದಿಯಿಂದಲೇ ಸುದ್ದಿ ಹಂಚುವಿಕೆಯ ವೇಗವನ್ನು ದೊಡ್ಡಮಟ್ಟದಲ್ಲಿ ಭಾರತೀಯರು ಅನುಭವಿಸಿದ್ದು ಆಗಲೇ. ಮುಂಬೈ ದಾಳಿ ಸುದ್ದಿಯ ನೇರ ಪ್ರಸಾರಕ್ಕೆ ಇಳಿದಿದ್ದ ಸುದ್ದಿ ವಾಹಿನಿಗಳು ಯಾವುದನ್ನು ಪ್ರಸಾರ ಮಾಡಬೇಕು, ಯಾವುದನ್ನು ಪ್ರಸಾರ ಮಾಡಬಾರದು ಎಂಬ ವಿವೇಚನೆಯೂ ಇಲ್ಲದಂತೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನೂ ನೇರ ಪ್ರಸಾರ ಮಾಡಿದ್ದವು. 2008ರ ನವೆಂಬರ್‌ 26ರ ರಾತ್ರಿಯಿಂದ 29ರ ಬೆಳಿಗ್ಗೆವರೆಗೆ ದೇಶದ ಬಹುತೇಕ ಎಲ್ಲಾ ಸುದ್ದಿ ವಾಹಿನಿಗಳೂ ದಾಳಿ, ಪ್ರತಿದಾಳಿ ಎಲ್ಲವನ್ನೂ ನೇರ ಪ್ರಸಾರಕ್ಕೆ ತೆರೆದಿಟ್ಟಿದ್ದವು.

ಮಾಧ್ಯಮಗಳ ಸ್ವನಿಯಂತ್ರಣ ವಿಷಯವೂ ಇದೇ ಸಂದರ್ಭದಲ್ಲಿ ಮುನ್ನೆಲೆಗೆ ಬಂತು. ಎಲ್ಲವನ್ನೂ ನೇರ ಪ್ರಸಾರದಲ್ಲಿ ತೋರಿಸಿದರೆ ದಾಳಿಕೋರರಿಗೆ ಮುಂದಿನ ಯೋಜನೆಗಳನ್ನು ಬದಲಿಸಿಕೊಳ್ಳಲು ಅವಕಾಶ ಕೊಟ್ಟಂತಾಗುತ್ತದೆ. ಹೀಗಾಗಿ ಮಾಧ್ಯಮಗಳಿಗೆ ನೀತಿ ಸಂಹಿತೆಯೊಂದನ್ನು ರೂಪಿಸಬೇಕು ಎಂದು ನಾಗರಿಕರು ಆನ್‌ಲೈನ್‌ ಮನವಿಗಳ ಮೂಲಕ ನ್ಯಾಯಾಂಗವನ್ನು ಒತ್ತಾಯಿಸಲು ಮುಂದಾದರು. smallchange.in ಹೆಸರಿನ ವೆಬ್‌ಸೈಟ್‌ ಮೂಲಕ ಆರಂಭವಾದ ಈ ಆನ್‌ಲೈನ್‌ ಪಿಟಿಷನ್‌ ಲಕ್ಷಾಂತರ ಜನರನ್ನು ತಲುಪಿತು. ಇದೇ ಪಿಟಿಷನ್‌ ಆಧಾರದಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಯಿತು. ಆದರೆ, ಆ ಅರ್ಜಿ ತಾರ್ಕಿಕ ಅಂತ್ಯ ಕಾಣಲಿಲ್ಲ.

ಫೇಕ್‌ ನ್ಯೂಸ್‌ ಜನನ:

ಮುಂಬೈ ದಾಳಿ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಸುದ್ದಿ ಪ್ರಸಾರಕ್ಕೆ ಅನುಕೂಲಕರವಾದಂತೆ, ಸುಳ್ಳು ಸುದ್ದಿ, ಗಾಳಿ ಸುದ್ದಿ ಹರಡಲೂ ವೇದಿಕೆಯಾದವು. 2008ರ ನವೆಂಬರ್‌ 27ರಂದು ಭಾರತ ಸರಕಾರ ಎಲ್ಲಾ ಟ್ವಿಟರ್‌ ಲೈವ್‌ ಅಪ್‌ಡೇಟ್‌ಗಳನ್ನು ನಿಲ್ಲಿಸುವಂತೆ ಹೇಳಿದೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಆದರೆ, ನಿಜವಾಗಿ ಸರಕಾರ ಇಂಥ ಯಾವುದೇ ಸೂಚನೆಯನ್ನೂ ನೀಡಿರಲಿಲ್ಲ. ಆದರೆ, ಟ್ವಿಟರ್‌ನಲ್ಲಿ ಹಬ್ಬಿದ್ದ ಈ ಗಾಳಿ ಸುದ್ದಿಯನ್ನು ಆಧರಿಸಿ ಬಿಬಿಸಿ ಕೂಡಾ ವರದಿ ಮಾಡಿತ್ತು. ಬಳಿಕ ಇದಕ್ಕಾಗಿ ಬಿಬಿಸಿ ಕ್ಷಮೆಯನ್ನೂ ಯಾಚಿಸಿತ್ತು.

ಮುಂಬೈ ದಾಳಿ ವೇಳೆ ಜನಪ್ರಿಯ ಸಾಮಾಜಿಕ ಜಾಲತಾಣವಾಗಿದ್ದ ಟ್ವಿಟರ್ ಸ್ಥಾನವನ್ನು ಈಗ ಫೇಸ್‌ಬುಕ್‌ ಆವರಿಸಿಕೊಂಡಿದೆ. ‘ರಾಯ್ಟರ್ಸ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸ್ಟಡಿ ಆಫ್‌ ಜರ್ನಲಿಸಂ’ ನಡೆಸಿರುವ ಅಧ್ಯಯನದ ಪ್ರಕಾರ ಜಗತ್ತಿನಾದ್ಯಂತ 40 ವರ್ಷಕ್ಕಿಂತ ಕಡಿಮೆ ವಯೋಮಾನದ ಬಹುತೇಕರು ಸುದ್ದಿಗಾಗಿ ಮೊದಲು ಸಾಮಾಜಿಕ ಜಾಲತಾಣಗಳನ್ನು ಅದರಲ್ಲೂ ಮುಖ್ಯವಾಗಿ ಫೇಸ್‌ಬುಕ್‌ ನೋಡುತ್ತಾರೆ. ಇಂಟರ್‌ನೆಟ್‌ ಬಳಕೆದಾರರ ಪೈಕಿ ಶೇಕಡ 44ರಷ್ಟು ಮಂದಿ ಫೇಸ್‌ಬುಕ್‌ ಅನ್ನೇ ತಮ್ಮ ಸುದ್ದಿ ಮೂಲವಾಗಿಸಿಕೊಂಡಿದ್ದಾರೆ. ಉಳಿದ ಶೇಕಡ 19ರಷ್ಟು ಬಳಕೆದಾರರು ಸುದ್ದಿಗಾಗಿ ಯೂಟ್ಯೂಬ್‌ ಅವಲಂಬಿಸಿದರೆ, ಶೇಕಡ 10ರಷ್ಟು ಬಳಕೆದಾರರು ಟ್ವಿಟರ್‌ ನೋಡುತ್ತಾರೆ.

ಸಾಮಾಜಿಕ ಜಾಲತಾಣಗಳು ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಪ್ರಭಾವಶಾಲಿ ಮಾಧ್ಯಮಗಳಾಗಿ ಬೆಳೆಯುತ್ತಿವೆ. ಒಸಾಮ ಬಿನ್‌ ಲಾಡೆನ್‌ ಸಾವಿನ ಸುದ್ದಿಯಿಂದ ಅಮೆರಿಕ ಅಧ್ಯಕ್ಷರ ಚುನಾವಣೆವರೆಗೆ, ಚೆನ್ನೈ ಪ್ರವಾಹದಿಂದ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗುವವರೆಗೆ, ಅಣ್ಣಾ ಹಜಾರೆ ಹೋರಾಟದಿಂದ ದೆಹಲಿಯಲ್ಲಿ ಎಎಪಿ ಸರಕಾರ ರಚನೆಯಾಗುವವರೆಗೆ ಸಾಮಾಜಿಕ ಜಾಲತಾಣಗಳ ಪ್ರಭಾವವಿದೆ. ಸಾಮಾಜಿಕ ಜಾಲತಾಣಗಳ ಬಳಕೆ ಇಲ್ಲದ ಚುನಾವಣೆಗಳನ್ನು ಇಂದು ಊಹಿಸಿಕೊಳ್ಳುವುದೂ ಕಷ್ಟ. ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿವೆ.

ಜನಾಭಿಪ್ರಾಯ ರೂಪಿಸಲು, ಜನರನ್ನು ಒಂದು ಕಡೆಗೆ ಸೇರಿಸಲು, ಜನರನ್ನು ಹೋರಾಟಕ್ಕೆ ಅಣಿಗೊಳಿಸಲು ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿವೆ. ಆದರೆ, ಜನರ ದಾರಿ ತಪ್ಪಿಸಲೂ ಸಾಮಾಜಿಕ ಜಾಲತಾಣಗಳು ದುರ್ಬಳಕೆಯಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ ಭಾಷಣ, ಸುಳ್ಳು ಸುದ್ದಿ, ನಕಲಿ ಚಿತ್ರಗಳ ಪ್ರಸಾರವನ್ನು ತಡೆಯಲು ಸರಕಾರ ಪ್ರಯತ್ನಿಸುತ್ತಲೇ ಇದೆ. ಚುನಾವಣೆಯ ಕೊನೆಯ ಕ್ಷಣದಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ನಡೆಸಬಾರದು ಎಂದು ಭಾರತದ ಚುನಾವಣಾ ಆಯೋಗ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರುವ ಪ್ರಯೋಗವನ್ನೂ ನಡೆಸಿದೆ. ಆದರೆ, ಈ ಪ್ರಯತ್ನಗಳೆಲ್ಲಾ ಇನ್ನೂ ಪೂರ್ತಿಯಾಗಿ ಫಲಿಸಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿ ಗಲಭೆಗಳು ನಡೆಯದಂತೆ ತಡೆಯಲು ಕಾಶ್ಮೀರದಲ್ಲಿ ಮೇಲಿಂದ ಮೇಲೆ ಇಂಟರ್‌ನೆಟ್‌ ಸೇವೆಯನ್ನೇ ನಿಲ್ಲಿಸುವ ಕೆಲಸಗಳನ್ನೂ ಸರಕಾರ ಮಾಡುತ್ತಿದೆ. ಆದರೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಅಭಿವ್ಯಕ್ತಿಗೆ ಕಡಿವಾಣ ಹಾಕಲು ಸರಕಾರವೇ ಮುಂದಾಗುವುದು ಸರಿಯಲ್ಲ ಎಂಬ ವಾದಗಳೂ ಇವೆ. ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆಪ್‌ಗಳು ಸುಳ್ಳು ಸುದ್ದಿ ಕಡಿವಾಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿವೆ. ಆದರೆ, ಪೂರ್ತಿಯಾಗಿ ಸುಳ್ಳು ಸುದ್ದಿಗಳನ್ನು ಶೋಧಿಸುವ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ.

ಬೇಕೋ ಬೇಡವೋ ಸದ್ಯ ಭಾರತದಲ್ಲಿ ಬಹುತೇಕ ಎಲ್ಲಾ ರಾಜಕಾರಣಿಗಳ ವೈಯಕ್ತಿಕ ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಿವೆ. ಸಿನಿಮಾ ತಾರೆಯರು ಟ್ವಿಟರ್‌, ಫೇಸ್‌ಬುಕ್‌ , ಈಗ ಇನ್‌ಸ್ಟಾಗ್ರಾಮ್‌ಗೆ ಶಿಫ್ಟ್‌ ಆಗಿದ್ದಾರೆ. ಕೇವಲ ಫೋಟೊ ಹಾಕಲು, ಅಪ್‌ಡೇಟ್‌ ನೀಡಲು ಮಾತ್ರ ಸಾಮಾಜಿಕ ಜಾಲತಾಣಗಳ ಬಳಕೆ ಸೀಮಿತಗೊಂಡಿಲ್ಲ. ಇತ್ತೀಚೆಗೆ ಸಂಭವಿಸಿದ ಕೇರಳ, ಕೊಡಗು ಪ್ರವಾಹ ಸಂದರ್ಭದಲ್ಲಿ ನೆರವಿಗಾಗಿ ಮನವಿ ಮಾಡಲು ಸಾಮಾಜಿಕ ಜಾಲತಾಣಗಳು ಬಳಕೆಯಾಗಿವೆ. ಇದರಿಂದ ಪ್ರವಾಹ ಸಂತ್ರಸ್ತರಿಗೆ ದಾನಿಗಳ ಉದಾರ ನೆರವೂ ಹರಿದಿದೆ.

ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳು, ಕಡಿಮೆ ಬೆಲೆಯಲ್ಲಿ ಇಂಟರ್‌ನೆಟ್‌ನ ಲಭ್ಯತೆ ಹೆಚ್ಚಾದಂತೆಲ್ಲಾ ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯೂ ಹೆಚ್ಚುತ್ತಾ ಬಂದಿದೆ. ಹಿಂದೆ ದಿನಕ್ಕೆ ಎಂಬಿಗಳ ಲೆಕ್ಕದಲ್ಲಿ ಓಡುತ್ತಿದ್ದ ಡೇಟಾ ಪ್ಲಾನ್‌ಗಳು, ನೆಟ್‌ವರ್ಕ್‌ ಕಂಪೆನಿಗಳ ದರ ಸಮರದಿಂದ ಈಗ ಜಿಬಿಗಳಿಗೆ ಬಂದು ನಿಂತಿವೆ. ಡೇಟಾ ಲಿಮಿಟ್‌ ಬಗ್ಗೆ ಈಗ ಬಳಕೆದಾರರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ಒಳಿತಿನ ಹಿಂದೆ ಕೆಡುಕೂ ಇರುವಂತೆ ಸಾಮಾಜಿಕ ಜಾಲತಾಣಗಳ ಅನುಕೂಲದ ಜತೆಗೆ ಅನನುಕೂಲಗಳೂ ಇವೆ.

ಹತ್ತು ವರ್ಷದ ಹಿಂದೆ ಮುಂಬೈ ದಾಳಿಯ ಸಂದರ್ಭದಲ್ಲಿ ಸುದ್ದಿ ಮಾಧ್ಯಮಗಳಿಗೆ ಪರ್ಯಾಯವಾಗಿ ಭಾರತದಲ್ಲಿ ಕಾಲೂರಿದ ಸಾಮಾಜಿಕ ಜಾಲತಾಣಗಳು ಇಂದು ಜನಾಭಿಪ್ರಾಯ ರೂಪಿಸುವಷ್ಟು ಪ್ರಭಾವಶಾಲಿಯಾಗಿ ಬೆಳೆದಿವೆ. ಇದು ದೇಶ ಅನುಭವಿಸಿದ ಭಯಾನಕ ದಾಳಿಯ ಹಿನ್ನೋಟದಲ್ಲಿ ಎದ್ದು ಕಾಣಿಸುವ ಮಹತ್ವದ ಬೆಳವಣಿಗೆ.