ಅಲ್ಲಿ ಮಂದಿರ ನಿರ್ಮಾಣ, ಇಲ್ಲಿ ಅಂಬರೀಶ್‌ ನಿಧನ; ಸಾವಲ್ಲೂ ಕಾಂಗ್ರೆಸ್‌ ಋಣ ತೀರಿಸಿದ ರೆಬಲ್‌ ಸ್ಟಾರ್!
COVER STORY

ಅಲ್ಲಿ ಮಂದಿರ ನಿರ್ಮಾಣ, ಇಲ್ಲಿ ಅಂಬರೀಶ್‌ ನಿಧನ; ಸಾವಲ್ಲೂ ಕಾಂಗ್ರೆಸ್‌ ಋಣ ತೀರಿಸಿದ ರೆಬಲ್‌ ಸ್ಟಾರ್!

ಬಿಜೆಪಿ ಎಷ್ಟೇ ಪ್ರಯತ್ನ ನಡೆಸಿದರೂ ಅಂಬರೀಶ್‌ ಕಾಂಗ್ರೆಸ್‌ ಬಿಡಲಿಲ್ಲ. ಕಾಂಗ್ರೆಸ್‌ನಲ್ಲಿ ಎಷ್ಟೆಲ್ಲಾ ಏಳು ಬೀಳುಗಳನ್ನು ಕಂಡ ಅಂಬರೀಶ್‌ ಕಡೆಗೂ ಕಾಂಗ್ರೆಸ್ಸಿಗರಾಗಿಯೇ ಉಳಿದು, ಸಾವಿನಲ್ಲೂ ಕಾಂಗ್ರೆಸ್‌ ಋಣ ತೀರಿಸಿದ್ದಾರೆ.

ದೇಶದಾದ್ಯಂತ ಈ ಭಾನುವಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ವಿಎಚ್‌ಪಿ ನಡೆಸುತ್ತಿರುವ 'ಧರ್ಮ ಸಂಸತ್‌'ನದ್ದೇ ಸದ್ದು- ಗದ್ದಲ. ಆದರೆ, ನಟ, ರಾಜಕಾರಣಿ ಅಂಬರೀಶ್‌ ಸಾವು ರಾಮ ಮಂದಿರದ ಈ ಗದ್ದಲವನ್ನು ಕರ್ನಾಟಕದ ಮಟ್ಟಿಗೆ ಇಲ್ಲವಾಗಿಸಿದೆ. ರಾಜ್ಯದ ವಿಚಾರದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ರಾಮ ಮಂದಿರದ ಗದ್ದಲ ವಾರದ ಮಟ್ಟಿಗಂತೂ ಮುಂದಕ್ಕೆ ಹೋಗಿದೆ. ಈ ಮೂಲಕ ಅಂಬರೀಶ್‌ ಸಾವಿನಲ್ಲೂ ಅಪ್ಪಟ ಕಾಂಗ್ರೆಸ್ಸಿಗರಾಗಿ ಉಳಿದಿದ್ದಾರೆ.

ಉತ್ತರ ಭಾರತಕ್ಕೆ ಅಯೋಧ್ಯೆ ಹಾಗೂ ದಕ್ಷಿಣ ಭಾರತಕ್ಕೆ ಅಯ್ಯಪ್ಪನನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ಸದ್ಯ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ದಾಳವನ್ನು ಜೋರಾಗಿಯೇ ಉರುಳಿಸುತ್ತಿದೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್‌ಗೆ ಸುಮಾರು ಎರಡು ಲಕ್ಷ ಮಂದಿ ಜಮಾಯಿಸಿದ್ದಾರೆ. ಧರ್ಮ ಸಂಸತ್‌ನಲ್ಲಿ ನೂರಕ್ಕೂ ಹೆಚ್ಚು ಮಂದಿ ಸ್ವಾಮೀಜಿಗಳು ರಾಮ ಮಂದಿರ ನಿರ್ಮಾಣಕ್ಕೆ ದನಿಗೂಡಿಸಿದ್ದಾರೆ. ಈ ಮೂಲಕ ಬಿಜೆಪಿ ಧರ್ಮದ ನೆಲೆಯ ರಾಜಕಾರಣವನ್ನು ಧಾರ್ಮಿಕ ಮುಖಂಡರುಗಳಿಂದ ಮಾಡಿಸಿಕೊಳ್ಳುತ್ತಿದೆ.

ಮತ್ತೊಂದೆಡೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗುಜರಾತ್‌ನಲ್ಲಿ ನಿರ್ಮಾಣವಾಗಿರುವ ಸರದಾರ್‌ ಪಟೇಲ್‌ ಪ್ರತಿಮೆಗಿಂತಲೂ ದೊಡ್ಡದಾದ ರಾಮನ ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಒಂದು ಕಡೆ ರಾಜ್ಯ ಸರಕಾರದ ಮೂಲಕ ರಾಮ ಪ್ರತಿಮೆ ನಿರ್ಮಾಣ, ಮತ್ತೊಂದು ಕಡೆ ಕೇಂದ್ರ ಸರಕಾರದ ಮೂಲಕ ರಾಮ ಮಂದಿರ ನಿರ್ಮಾಣದ ಘೋಷಣೆಗಳ ಮೂಲಕ ಬಿಜೆಪಿ ಅಯೋಧ್ಯೆ ಹಾಗೂ ರಾಮನ ವಿಚಾರಗಳನ್ನು ಚುನಾವಣೆಗೆ ಮುನ್ನೆಲೆಯಾಗಿಸುತ್ತಿದೆ.

ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಬಿಜೆಪಿ ಮಾತ್ರ ಸದ್ದು ಮಾಡುತ್ತಿಲ್ಲ. ಶಿವಸೇನೆ ಕೂಡಾ ಈಗ ರಾಮ ಮಂದಿರ ಹಾಗೂ ರಾಮ ಜಪದ ರಾಜಕಾರಣಕ್ಕೆ ಮುಂದಾಗಿದೆ. ಕಮಲ ಪಕ್ಷದ ಜತೆಗಿನ ಭಿನ್ನಮತದ ಬಳಿಕ ಬಿಜೆಪಿಯಿಂದ ರಾಮ ಮಂದಿರ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿಕೊಂಡೇ ಬರುತ್ತಿರುವ ಶಿವಸೇನೆ ಈಗ ಅಯೋಧ್ಯೆಗೇ ಕಾಲಿಟ್ಟು ಬಿಜೆಪಿಯಿಂದ ಏನೂ ಆಗದು ಎಂದು ಹೇಳುತ್ತಿದೆ.

ಕುಟುಂಬ ಸಮೇತ ಅಯೋಧ್ಯೆಗೆ ಭೇಟಿ ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, “ರಾಮ ಮಂದಿರದ ವಿಚಾರದಲ್ಲಿ ಹಿಂದೂಗಳ ಭಾವನೆಯ ಜತೆ ಆಟವಾಡಬೇಡಿ” ಎಂದು ಬಿಜೆಪಿಯನ್ನು ಎಚ್ಚರಿಸಿದ್ದಾರೆ. ಈ ಮೂಲಕ ಮಂದಿರ ನಿರ್ಮಾಣ ಕಾಮಗಾರಿಯ 'ಉಸ್ತುವಾರಿ'ಯನ್ನು ತಾನೂ ವಹಿಸಿಕೊಳ್ಳಲು ಶಿವಸೇನೆ ಬಿಡ್‌ ಕೂಗುತ್ತಿರುವಂತೆ ಕಾಣುತ್ತಿದೆ. ಶಿವಸೇನೆಯ ಈ ನಡೆಗೆ ತಿರುಗೇಟು ನೀಡಿರುವ ಬಿಜೆಪಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ನಿಜವಾಗಿ ರಾಜಕಾರಣ ಮಾಡುತ್ತಿರುವುದು ಶಿವಸೇನೆಯೇ ಹೊರತು ಬಿಜೆಪಿ ಅಲ್ಲ ಎಂದು ಹೇಳಿದೆ.

ರಾಮ ಮಂದಿರ ನಿರ್ಮಾಣ, ರಾಮನ ಅತಿ ಎತ್ತರದ ಪ್ರತಿಮೆ ನಿರ್ಮಾಣದ ವಿಷಯಗಳು ಹೀಗೆ ಭಾನುವಾರ ಉತ್ತರ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದರೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದ ಎಲ್ಲಾ ಮಾಧ್ಯಮಗಳಲ್ಲಿ ಧರ್ಮ ಸಂಸತ್‌ಗಿಂತ ಅಂಬರೀಶ್ ನಿಧನದ ಸುದ್ದಿಯೇ ರಾರಾಜಿಸುತ್ತಿದೆ. ಧರ್ಮ ಸಂಸತ್‌ ಕವರೇಜ್‌ಗೆ ಸಿದ್ಧವಾಗಿದ್ದ ಮಾಧ್ಯಮಗಳಿಗೂ ರಾಜ್ಯದಲ್ಲಿ ಮುಂದೂಡಿಕೆಯಾಗಿರುವ ಆ ಕಾರ್ಯಕ್ರಮ ಅಂಬರೀಶ್‌ ನಿಧನದ ಸುದ್ದಿಯನ್ನೇ ಮುಖ್ಯವಾಗಿಸುವ ಅನಿವಾರ್ಯ ಸೃಷ್ಟಿಯಾಗಿದೆ.

ಒಂದು ಹಂತದಲ್ಲಿ ಕಾಂಗ್ರೆಸ್‌ನಲ್ಲಿ ತಮಗೆ ಸರಿಯಾದ ಮರ್ಯಾದೆ ಸಿಗುತ್ತಿಲ್ಲ ಎಂದು ಬೇಸರ ತೋರಿದ್ದ ಅಂಬರೀಶ್‌ ಅವರನ್ನು ಸೆಳೆಯಲು ಬಿಜೆಪಿ ಯತ್ನಿಸಿತ್ತು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಂಬರೀಶ್‌ ಪಕ್ಷಕ್ಕೆ ಬರುವುದಾದರೆ ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದ ಬಿಜೆಪಿಯ ರಾಜ್ಯ ಮುಖಂಡರು, ತೆರೆಮರೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಮುಖಂಡರ ಮೂಲಕ ಅಂಬರೀಶ್‌ ಅವರನ್ನು ಪಕ್ಷಕ್ಕೆ ಸೆಳೆಯುವ ಹುಸಿ ಪ್ರಯತ್ನ ನಡೆಸಿದ್ದರು. ಒಂದೊಮ್ಮೆ ಅಂಬರೀಶ್‌ ಬಿಜೆಪಿ ಸೇರಿದ್ದೇ ಆಗಿದ್ದರೆ ಹಳೇ ಮೈಸೂರು ಭಾಗದ ಸಾಕಷ್ಟು ಒಕ್ಕಲಿಗ ಮತಗಳು ಜೆಡಿಎಸ್‌ ಬಿಟ್ಟು ಬಿಜೆಪಿ ಕಡೆಗೆ ಹರಿಯದೇ ಇರುತ್ತಿರಲಿಲ್ಲ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಬಗ್ಗೆ ತುಸು ಬೇಸರ ಹೊಂದಿದ್ದ ಅಂಬರೀಶ್‌ ಮಂಡ್ಯದಲ್ಲಿ ಜೆಡಿಎಸ್‌ಗೆ ಬೆಂಬಲವಾಗಿ ನಿಂತಿದ್ದರು ಎಂಬ ಮಾತುಗಳಿವೆ. ಆದರೆ, ಆ ಹೊತ್ತಿಗೆ ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲೇ ಆಸಕ್ತಿ ಕಳೆದುಕೊಂಡಿದ್ದ ಅಂಬರೀಶ್‌ ಬಿಜೆಪಿಗೆ ಹೋಗಿ ಆ ಪಕ್ಷದಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕಿಕೊಳ್ಳುವ ಲೆಕ್ಕಾಚಾರದಲ್ಲಿ ಇರಲಿಲ್ಲ. ಹೀಗಾಗಿ ಬಿಜೆಪಿ ಎಷ್ಟೇ ಪ್ರಯತ್ನ ನಡೆಸಿದರೂ ಅಂಬರೀಶ್‌ ಕಾಂಗ್ರೆಸ್‌ ಬಿಡಲಿಲ್ಲ. ಕಾಂಗ್ರೆಸ್‌ನಲ್ಲಿ ಎಷ್ಟೆಲ್ಲಾ ಏಳು ಬೀಳುಗಳನ್ನು ಕಂಡ ಅಂಬರೀಶ್‌ ಕಡೆಗೂ ಕಾಂಗ್ರೆಸ್ಸಿಗರಾಗಿಯೇ ಉಳಿದು, ಸಾವಿನಲ್ಲೂ ಕಾಂಗ್ರೆಸ್‌ ಋಣ ತೀರಿಸಿದ್ದಾರೆ.