samachara
www.samachara.com
ಸಮಸ್ಯೆಗಳ ಬಗ್ಗೆ ಮಾತಿಲ್ಲ ಕಥೆಯಿಲ್ಲ; ಅವಸರದಲ್ಲೇ ಮುಕ್ತಾಯಗೊಂಡ ಹರಕೆಯ ‘ಸಹಕಾರಿ ಸಪ್ತಾಹ’
COVER STORY

ಸಮಸ್ಯೆಗಳ ಬಗ್ಗೆ ಮಾತಿಲ್ಲ ಕಥೆಯಿಲ್ಲ; ಅವಸರದಲ್ಲೇ ಮುಕ್ತಾಯಗೊಂಡ ಹರಕೆಯ ‘ಸಹಕಾರಿ ಸಪ್ತಾಹ’

ಹಲವು ಸಮಸ್ಯೆಗಳನ್ನು ಸಹಕಾರ ಕ್ಷೇತ್ರ, ರೈತರು ಎದುರಿಸುತ್ತಿದ್ದರೆ ಕಾರ್ಯಕ್ರಮದಲ್ಲಿ ಮಾತ್ರ “ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿಯಲ್ಲಿ ಸಹಕಾರಿ ಸಂಘಗಳ ಪ್ರಮುಖ ಪಾತ್ರ” ಎಂಬ ಚರ್ವಿತ ಚರ್ವಣ ಉಪನ್ಯಾಸ ಏರ್ಪಡಿಸಲಾಗಿತ್ತು.

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಅರುವತ್ತೈದನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಂಪನ್ನಗೊಂಡಿದೆ. ಉತ್ತರ ಕನ್ನಡದ ಶಿರಸಿಯಲ್ಲಿ ನವೆಂಬರ್ 21 ರಂದು ಆಯೋಜಿಸಲಾಗಿದ್ದ ಈ ಸಪ್ತಾಹ ಕೇವಲ ರೈತ ಸಹಕಾರಿ ಸಂಘಗಳ ಪ್ರಸ್ತುತ ಸಮಸ್ಯೆ ನಿವಾರಣೆಗೆ ಆಶ್ವಾಸನೆ ಪಡೆಯಲು ಮಾತ್ರ ಸೀಮಿತವಾಯಿತು.

ಮೊದಲೇ ಗಡಿಬಿಡಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಎಲ್ಲಾ ಪ್ರಾಥಮಿಕ ಸಹಕಾರಿ ಸಂಘಗಳಿಂದಲೂ ವಂತಿಗೆ ಸಂಗ್ರಹಿಸಿ, ಅತ್ಯಂತ ಕಾರ್ಯೋತ್ತಡದಲ್ಲಿದ್ದ ಸಹಕಾರಿ ಸಚಿವರಿಗೆ ಮನವೊಲಿಸ ಕಾರ್ಯಕ್ರಮಕ್ಕೆ ಕರೆ ತಂದು ಅಂತೂ ಹರಕೆ ಮುಗಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ್‌ ರಾಜಕಾರಣಿಗಳ ಎಂದಿನ ದಾಟಿಯಲಿ ಭಾಷಣ ಆರಂಭಿಸಿದರು. “ಸಾಲಮನ್ನಾ ವಿಷಯದಲ್ಲಿ ಯಾವ ಗೊಂದಲವೂ ಬೇಡ. 9 ಸಾವಿರ ಕೋಟಿ ಹಣ ಮೀಸಲಿರಿಸಿದ್ದೇವೆ. ರೈತರಿಂದ ದಾಖಲೆ ಸಲ್ಲಿಸಲ್ಪಟ್ಟ ತಕ್ಷಣ ರೈತರ ಸಾಲದ ಖಾತೆಗೆ ಹಣ ಜಮಾ ಮಾಡಲಾಗುವುದು. ಅಲ್ಲದೇ, ಸಹಕಾರಿ ಸಂಘಗಳಲ್ಲಿ ಉತ್ತರ ಕನ್ನಡ ಜಿಲ್ಲೆಗಷ್ಟೇ ಸೀಮಿತವಾಗಿರುವ ಸುಮಾರು 380 ಕೋಟಿಗಳಷ್ಟು ರೈತರ ಆಸಾಮಿ ಖಾತೆ ಸಾಲವಿದೆ. ಇದರ ಬಗೆಗೂ ಮುಖ್ಯಮಂತ್ರಿಗಳೊಡನೆ ಚರ್ಚಿಸಿ, ಬೆಳೆ ಸಾಲ ಮನ್ನಾ ಪೂರ್ಣಗೊಂಡ ನಂತರ ಆಸಾಮಿ ಖಾತೆ ಸಾಲ ಮನ್ನಾಕ್ಕೂ ಸೂಕ್ತ ಮನವಿ ಮಾಡಲಾಗುವುದು,” ಎಂದರು.

ಕುರಿ, ಕೋಳಿ ಹಾಗೂ ಇತರ ಕಾರ್ಯಯೋಜನೆಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಮಾತ್ರ ಸಾಲ ವಿತರಣೆಗೆ ಅವಕಾಶ ನೀಡದೆ, ಸಹಕಾರಿ ಸಂಘಗಳಿಂದಲೂ ಸಾಲ ನೀಡಲು ಅವಕಾಶ ಕಲ್ಪಿಸುವಂತೆ ಒತ್ತಡವಿದೆ. ಈ ಬಗ್ಗೆ ಕೇಂದ್ರವು ಈಗಾಗಲೇ ಪ್ರಸ್ತಾವನೆ ಕೇಳಿದ್ದು, ಶೀಘ್ರದಲ್ಲಿ ಈ ಕುರಿತು ಪ್ರಸ್ತಾವನೆ ಕಳಿಸಲಾಗುವುದು ಎಂದರು.

“ಸಹಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ವೇಗ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸಹಕಾರಿ ಸಂಘಗಳ ಸದಸ್ಯ ರೈತರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಈಗಾಗಲೇ ಸೂಕ್ತ ತೆಗೆದುಕೊಂಡಿದ್ದೇವೆ,” ಎಂಬ ಕಾಶೆಂಪುರ್‌ ಆಶ್ವಾಸನೆಗಳು ಸಮಸ್ಯೆ ಸುಳಿಯಲ್ಲಿರುವ ಸಹಕಾರಿ ಸಂಘ ಸದಸ್ಯರ ಚಪ್ಪಳೆ ಗಿಟ್ಟಿಸುವಲ್ಲಿಯೂ ವಿಫಲವಾದವು.

ರೈತರು ಹಾಗೂ ಸಹಕಾರಿ ಸಂಘಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಸಮ್ಮೇಳನದಲ್ಲಿ ಉತ್ತರವಿರಲಿಲ್ಲ. ಈ ಮೊದಲು ಸಹಕಾರಿ ಸಂಘಗಳ ಮೂಲಕ ಸದಸ್ಯರುಗಳಿಗೆ ಸರಕಾರದಿಂದ ನೀಡಲಾಗುತ್ತಿದ್ದ “ಯಶಸ್ವಿನಿ ಯೋಜನೆ” ಸ್ಥಗಿತಗೊಂಡಿದ್ದರಿಂದ ಮೊದಲೇ ಸಾಲಗಾರರಾಗಿರುವ ರೈತರು ವೈದ್ಯಕೀಯ ವೆಚ್ಚ ಭರಿಸಲಾಗದೇ ತೊಳಲಾಡುತ್ತಿರುವ ವಿಷಯವೇ ಇಲ್ಲಿ ಚರ್ಚೆಗೆ ಬರಲಿಲ್ಲ. ಈ ಕುರಿತ ರೈತರ ಅಳಲನ್ನು ಯಾರೂ ಕೇಳಿಸಿಕೊಳ್ಳಲಿಲ್ಲ ಎಂಬ ನೋವು ರೈತರಿಂದಲೂ ವ್ಯಕ್ತವಾಯಿತು.

ರೈತರಿಗೆ ಬೆಳೆ ಸಾಲದ ಕಂತು ಕಟ್ಟಲು ಗಡುವು ನೀಡುವ ಸರಕಾರ ಅರ್ಹ ಫಲಾನುಭವಿ ರೈತರ ಖಾತೆಗಳಿಗೆ ಇನ್ನೂ ವಿಮಾ ಹಣವನ್ನು ಮಾತ್ರ ಇನ್ನೂ ಜಮಾ ಮಾಡಿಲ್ಲ. ವಿಪರ್ಯಾಸವೆಂದರೆ ಈ ಬಗ್ಗೆ ಸಪ್ತಾಹದಲ್ಲಿ ಚರ್ಚೆಯೂ ನಡೆಯಲಿಲ್ಲ. ಈಗ ಫಸಲುಗಳ ಕೊಯ್ಲು ಮತ್ತು ಸಂಸ್ಕರಣೆಯ ಸಮಯ. ರೈತರ ಕೈಯಲ್ಲಿ ಹಣವಿಲ್ಲ. ವಿಮಾ ಹಣಗಳು ಜಮೆಯಾಗಿಲ್ಲ. ಸಾಲ ಮನ್ನಾವಾಗದೆ ಹೊಸ ಸಾಲ ಸಿಗುವುದಿಲ್ಲ. ಹೀಗಾಗಿ ಇದನ್ನು ನಿಭಾಯಿಸಲಾಗದೆ ಎಷ್ಟೋ ರೈತರು ‘ಫಸಲು ಗುತ್ತಿಗೆ’ ಹಾದಿ ಹಿಡಿಯಬೇಕಾಗಿ ಬಂದಿದೆ. ಗುತ್ತಿಗೆದಾರ ನಿಗದಿ ಮಾಡಿದ ದರವನ್ನು ಅನಿವಾರ್ಯವಾಗಿ ಕೊಡಬೇಕಾಗಿದೆ. ಇದರಿಂದ ಸರಿಯಾಗಿ ಬೆಳೆ ಬೆಳೆದರೂ ಅತೀವ ನಷ್ಟವಾಗುತ್ತಿದೆ ಎಂಬುದು ಹಲವು ರೈತರ ಅಳಲು. ಇದು ಕೂಡ ಚರ್ಚೆಯಿಂದ ದೂರವೇ ಉಳಿಯಿತು.

ಇಷ್ಟೆಲ್ಲಾ ಸಮಸ್ಯೆಗಳನ್ನು ಸಹಕಾರ ಕ್ಷೇತ್ರ, ರೈತರು ಎದುರಿಸುತ್ತಿದ್ದರೆ ಕಾರ್ಯಕ್ರಮದಲ್ಲಿ ಮಾತ್ರ “ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿಯಲ್ಲಿ ಸಹಕಾರಿ ಸಂಘಗಳ ಪ್ರಮುಖ ಪಾತ್ರ” ಎಂಬ ಚರ್ವಿತ ಚರ್ವಣ ಉಪನ್ಯಾಸ ಏರ್ಪಡಿಸಲಾಗಿತ್ತು.

ಇದ್ದುದರಲ್ಲಿ ಬೆಳೆಸಾಲ ಮನ್ನಾಕ್ಕೆ ದಾಖಲೆಗಳನ್ನು ಅಪ್ಲೋಡ್ ಮಾಡುವಲ್ಲಿ ಸರ್ವರ್ ಸಮಸ್ಯೆಯಾಗುತ್ತಿದೆ. ಇದರಿಂದ ಸಹಕಾರಿ ಸಂಘಗಳಿಗೆ ನಿಗಧಿತ ಸಮಯದಲ್ಲಿ ದಾಖಲೆ ಪೂರೈಸಲು ಆಗುತ್ತಿಲ್ಲ. ಈ ಗೊಂದಲ ನಿವಾರಣೆಗೆ ದಾಖಲಾತಿ ಪೂರೈಕೆ ಅವಧಿಯನ್ನು ವಿಸ್ತರಿಸಬೇಕೆಂದು ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಂತ್ರಿಗಳಲ್ಲಿ ಮಾನವಿ ಮಾಡಿದ್ದೇ ಸಪ್ತಾಹದಲ್ಲಿ ಹುಡುಕಬಹುದಾದ ಧನಾತ್ಮಕ ಅಂಶವಾಯಿತು.

ಒಟ್ಟಾರೆ ಈ ರಾಷ್ಟ್ರೀಯ ಸಹಕಾರಿ ಸಪ್ತಾಹ ಕೆಲವು ರಾಜಕಾರಣಿಗಳಿಗೆ ಜನಸಂಪರ್ಕ ಊರ್ಜಿತಗೊಳಿಸಲು ಒಂದು ವೇದಿಕೆಯಾಯಿತೆಂಬುದನ್ನು ಬಿಟ್ಟರೆ ಹೆಚ್ಚಿನದೇನೂ ಸಾಧನೆಯಾಗಲಿಲ್ಲ. ‘ಇಂಥ ಕಾರ್ಯಕ್ರಮಗಳನ್ನು ಪ್ರಸ್ತುತ ಸಮಸ್ಯೆಗಳ ನಿವಾರಣೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಅದು ಯಾವಾಗ ಸಾಧ್ಯವೋ ತಿಳಿದಿಲ್ಲ’ ಎಂದು ಕಾರ್ಯಕ್ರಮದ ನಂತರ ದೀರ್ಘ ಉಸಿರೆಳೆದುಕೊಂಡು ಗೊಣಗಿದರು ಹಿರಿಯ ಸಹಕಾರಿಯೊಬ್ಬರು. ಆದರೆ ಅದನ್ನು ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲ.