samachara
www.samachara.com
ಗೌರಿ ಹಂತಕರ ‘ಓಂ ನಮಃ ಶಿವಾಯ’: ನ್ಯಾಯಾಧೀಶರ ಎದುರೇ ಮಂತ್ರೋಚ್ಛಾರಣೆ ಕಲಾಪ
COVER STORY

ಗೌರಿ ಹಂತಕರ ‘ಓಂ ನಮಃ ಶಿವಾಯ’: ನ್ಯಾಯಾಧೀಶರ ಎದುರೇ ಮಂತ್ರೋಚ್ಛಾರಣೆ ಕಲಾಪ

ಆರೋಪಿ ಪರ ವಕೀಲರು ಪೊಲೀಸರಿಂದ ಆರೋಪಿಗಳಿಗೆ ಕಿರುಕುಳವಾಗುತ್ತಿದೆ ಎಂದು ಆರೋಪಿಸಿದರು. ನ್ಯಾಯಾಧೀಶರು ಹೆಚ್ಚಿನ ಮಾಹಿತಿ ಕೇಳಿದಾಗ, ಮಂತ್ರೋಚ್ಛಾರಣೆ ಸಂಗತಿಯನ್ನು ವಕೀಲರು ಪೀಠದ ಗಮನಕ್ಕೆ ತಂದರು.

Team Samachara

ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಕೆಯಾದ ಮಾರನೇ ದಿನವೇ ಮಂತ್ರೋಚ್ಛಾರಣೆಯ ಸುತ್ತ ಕಲಾಪವೊಂದಕ್ಕೆ ಕೋಕಾ ವಿಶೇಷ ನ್ಯಾಯಾಲಯ ಸಾಕ್ಷಿಯಾಯಿತು.

ನಡೆದಿದ್ದೇನು?:

ಶನಿವಾರ ಮುಂಜಾನೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ಒಂದನೇ ಸಿಸಿಎಚ್‌ಗೆ ಗೌರಿ ಹತ್ಯೆ ಆರೋಪಿಗಳನ್ನು ಪೊಲೀಸರು ಕರೆತಂದರು. ಈ ಸಮಯದಲ್ಲಿ ಆರೋಪಿಗಳ ಪರ ವಕೀಲರು ಅವರನ್ನು ಮಾತನಾಡಿಸಲು ಮುಂದಾದರು. ಪೊಲೀಸರು ಮೇಲಾಧಿಕಾರಿಗಳು ಅನುಮತಿ ನೀಡದೆ ಇರುವುದರಿಂದ ಯಾವುದೇ ಮಾತುಕತೆಗೆ ಅವಕಾಶ ಇಲ್ಲ ಎಂದರು. ಈ ಸಮಯದಲ್ಲಿ ಮತ್ತೊಬ್ಬರು ವಕೀಲರು ಗಟ್ಟಿ ದನಿಯಲ್ಲಿ, ‘‘ಇದು ನಮ್ಮ ಜಾಗ, ಇಲ್ಲಿಗೆ ಬಂದು ಮಾತನಾಡಬೇಡಿ ಎಂದರೆ ಬಾಯಿ ಕಟ್ಟಿಕೊಳ್ಳುತ್ತೇವೆ ಬಿಡಿ,’’ ಎಂದರು. ಈ ಸಮಯದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು.

ಇದನ್ನು ನೋಡಿದ ಆರೋಪಿಗಳಲ್ಲಿ ಕೆಲವರು ಗಟ್ಟಿಯಾಗಿ ನಗಲು ಶುರುಮಾಡಿದರು. ಕೊನೆಗೆ ಪಹರೆಗೆ ಬಂದಿದ್ದ ಪೊಲೀಸರು ಗದರಿಸಿದ ನಂತರ ಸುಮ್ಮನಾದರು.

ಕೋರ್ಟ್‌ ಹಾಲ್‌ ಮುಂದೆ ಇಂತಹದೊಂದು ಘಟನೆ ನಂತರ ಕಲಾಪ ಆರಂಭವಾಯಿತು. ಈ ಸಮಯದಲ್ಲಿ ಪ್ರಾಸಿಕ್ಯೂಶನ್ ಪರ ವಕೀಲ ಬಾಲನ್, “ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆ ತರುವುದು ಕಷ್ಟವಾಗುತ್ತಿದೆ. ಅವರು ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ. ಇದರಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ವಿಚಾರಣೆ ನಡೆಸುವುದು ಸೂಕ್ತ,’’ ಎಂದು ನ್ಯಾಯಾಧೀಶರಿಗೆ ತಿಳಿಸಿದರು.

ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಆರೋಪಿ ಪರ ವಕೀಲರು ಪೊಲೀಸರಿಂದ ಆರೋಪಿಗಳಿಗೆ ಕಿರುಕುಳವಾಗುತ್ತಿದೆ ಎಂದು ಆರೋಪಿಸಿದರು. ನ್ಯಾಯಾಧೀಶರು ಹೆಚ್ಚಿನ ಮಾಹಿತಿ ಕೇಳಿದಾಗ, ಮಂತ್ರೋಚ್ಛಾರಣೆ ಸಂಗತಿಯನ್ನು ವಕೀಲರು ಪೀಠದ ಗಮನಕ್ಕೆ ತಂದರು.

“ಆರೋಪಿಗಳು ಮಂತ್ರೋಚ್ಛಾರಣೆ ಮಾಡುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಬೂಟು ಗಾಲಿನಲ್ಲಿ ಒದೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಮಂತ್ರ ಹೇಳಲು ಅವಕಾಶ ಇಲ್ಲ ಎಂದರೆ ಎತ್ತ ಸಾಗುತ್ತಿದೆ ವಿಚಾರಣೆ,’’ ಎಂದು ನ್ಯಾಯಾಧೀಶರ ಮುಂದೆ ಆರೋಪಿ ಪರ ವಕೀಲರು ಅವಲತ್ತುಕೊಂಡರು.

ಈ ಸಮಯದಲ್ಲಿ ಎದುರಿಗಿದ್ದ ಆರೋಪಿಗಳೂ ಕೂಡ ಇದೇ ಮಾತನ್ನು ಪುನರುಚ್ಚರಿಸಿದರು. “ನಾವು ಓಂ ನಮಃ ಶಿವಾಯ ಎಂದು ನಿಧಾನವಾಗಿ ಹೇಳಿಕೊಳ್ಳುತ್ತಿದ್ದೆವು. ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ ಎಂದು,” ಹತ್ಯೆ ಪ್ರಕರಣದ ಎರಡನೇ ಆರೋಪಿ ಪರಶುರಾಮ್ ವಾಗ್ಮೋರೆ ನ್ಯಾಯಾಧೀಶರ ಗಮನಕ್ಕೆ ತರುವ ಪ್ರಯತ್ನ ಮಾಡಿದ.

ಈ ಹಂತದಲ್ಲಿ ನ್ಯಾಯಾಧೀಶರು ಜೈಲಿನಿಂದ ಕರೆ ತಂದ ಪೊಲೀಸ್ ಅಧಿಕಾರಿಯ ವಿವರಣೆ ಕೇಳಿದರು. “ಅವರು ಮಂತ್ರೋಚ್ಛಾರಣೆ ಹೆಸರಿನಲ್ಲಿ ಗದ್ದಲ ಮಾಡುತ್ತಿದ್ದರು. ಇವರ ಜತೆಗಿದ್ದ ಇತರರಿಗೆ ತೊಂದರೆಯಾಗುತ್ತಿದ್ದರಿಂದ ನಾವು ಸುಮ್ಮನಿರಲು ತಿಳಿಸಿದೆವು,’’ ಎಂದು ಅಧಿಕಾರಿ ಹೇಳಿದರು.

ಎರಡೂ ಕಡೆಯಿಂದ ಮಾಹಿತಿ ಪಡೆದುಕೊಂಡ ನ್ಯಾಯಾಧೀಶರು ಮುಂದಿನ ವಿಚಾರಣೆಗೆ ದಿನಾಂಕ ನಿಗದಿ ಮಾಡಿದರು. ಕಲಾಪ ಮುಗಿಸಿ ಹೊರ ಬಂದ ನಂತರವೂ ಆರೋಪಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಮುಂದುವರಿಯಿತು.

“ಜೈಲಿನಲ್ಲಿಯೂ ಇದೇ ಸಮಸ್ಯೆಯಾಗುತ್ತಿದೆ. ಇವರಲ್ಲಿ ಬಹುತೇಕರಿಗೆ ಹತ್ಯೆ ಪ್ರಕರಣದ ಆರೋಪಿಗಳು ಎಂಬ ಚಿಕ್ಕ ಅಳಕು ಕೂಡ ಇಲ್ಲ. ಮಂತ್ರೋಚ್ಛಾರಣೆ ಮಾಡುತ್ತೀವಿ ಎಂದು ವಾತಾವರಣವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ತಂತ್ರ ಅನುಸರಿಸುತ್ತಾರೆ. ತನಿಖೆ ಹಂತದಲ್ಲೂ ಇವರಿಂದ ಸಾಕಷ್ಟು ತೊಂದರೆಗಳಾಗಿದ್ದವು,’’ ಎಂದು ಜತೆಯಲ್ಲಿದ್ದ ಜೈಲಿನ ಪೊಲೀಸ್‌ ಸಿಬ್ಬಂದಿಯೊಬ್ಬರು ‘ಸಮಾಚಾರ’ಕ್ಕೆ ಪ್ರತಿಕ್ರಿಯೆ ನೀಡಿದರು.

ವರದಿಗೆ ತಡೆ:

ಕೋಕಾ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ವರದಿ ಮಾಡದಂತೆ ತಡೆಯಾಜ್ಞೆ ನೀಡಲಾಗಿದೆ. ಆರೋಪಿಗಳು ತನಿಖೆ ವೇಳೆಯಲ್ಲಿ ಒಮ್ಮೆ ಮಾಧ್ಯಮಗಳ ಜತೆ ಮಾತನಾಡಿದ್ದರು. ‘ಪೊಲೀಸರು ಹಣದ ಆಮಿಷ ನೀಡಿ ತಪ್ಪೊಪ್ಪಿಗೆ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಇದಾದ ನಂತರ ಸರಕಾರದ ಪರ ವಕೀಲರು ಮಾಧ್ಯಮ ವರದಿಗಳಿಗೆ ಕಡಿವಾಣ ಹಾಕುವಂತೆ ಕೋಕಾ ವಿಶೇಷ ಕಾಯ್ದೆಯಲ್ಲಿ ಇರುವ ಅವಕಾಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. “ಇದು ತನಿಖೆಯನ್ನು ದಾರಿ ತಪ್ಪಿಸುವ ಕೆಲಸ. ಹೊರಗೆ ಜನಾಭಿಪ್ರಾಯ ರೂಪಿಸಲು ಇಂತಹ ತಂತ್ರ ಅನುಸರಿಸಲಾಗುತ್ತದೆ. ಹೀಗಾಗಿ ನಾವು ವರದಿಗಳಿಗೆ ತಾತ್ಕಾಲಿಕ ತಡೆ ನೀಡಲು ಕೇಳಿಕೊಂಡೆವು,’’ ಎಂದು ಸರಕಾರದ ಪರ ವಕೀಲ ಬಾಲನ್‌ ಹೇಳುತ್ತಾರೆ.

ಪ್ರತಿಗಾಗಿ ಕಾಯುವಿಕೆ:

ಶುಕ್ರವಾರವಷ್ಟೆ ಗೌರಿ ಹತ್ಯೆ ಪ್ರಕರಣದಲ್ಲಿ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಮಾಹಿತಿ ಪ್ರಕಾರ ಇದು ಸುಮಾರು 9 ಸಾವಿರ ಪುಟಗಳಷ್ಟಿದೆ. ಸದ್ಯ ಒಂದೇ ಒಂದು ಪ್ರತಿಯನ್ನು ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದೆ. “ಆರೋಪಿಗಳಿಗೆ ಒಂದೊಂದು ಪ್ರತಿಯನ್ನು ನೀಡಬೇಕು. ಅದಕ್ಕೆ ಇನ್ನಷ್ಟು ಸಮಯ ಬೇಕು ಎಂದು ಹೇಳಿದ್ದಾರೆ. ದೋಷಾರೋಪ ಪಟ್ಟಿ ಬರುವವರೆಗೂ ಎಸ್‌ಐಟಿ ಹೊರಿಸಿದ ಆರೋಪಗಳು ಏನು ಎಂಬುದು ಸ್ಪಷ್ಟವಾಗಿ ಅರ್ಥವಾಗುವುದಿಲ್ಲ. ಹೀಗಾಗಿ ನಮ್ಮ ಪ್ರತಿಗಾಗಿ ಕಾಯುತ್ತಿದ್ದೇವೆ,’’ ಎಂದು ಆರೋಪಿಗಳ ಪರ ವಕೀಲ ಸದಾನಂದ ‘ಸಮಾಚಾರ’ಕ್ಕೆ ತಿಳಿಸಿದರು.

ಕೋಕಾ ವಿಶೇಷ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಈವರೆಗೆ ಒಟ್ಟು 14 ಕಲಾಪಗಳನ್ನು ನ್ಯಾಯಾಲಯ ನಡೆಸಿದೆ. ಒಟ್ಟು 17 ಆರೋಪಿಗಳ ಪೈಕಿ ಇಬ್ಬರು ಇನ್ನೂ ಭೂಗತರಾಗಿದ್ದಾರೆ. ಉಳಿದವರಲ್ಲಿ ಕೆಲವರನ್ನು ಮಹಾರಾಷ್ಟ್ರದ ವಿಚಾರವಾದಿಗಳ ಹತ್ಯೆ ಪ್ರಕರಣದಲ್ಲಿಯೂ ವಿಚಾರಣೆಗೆ ಒಳಪಡಿಸಲಾಗಿದೆ. ಉಳಿದವರ ವಿಚಾರಣೆ ಆರಂಭವಾಗಿದೆ. ದೋಷಾರೋಪ ಪಟ್ಟಿಯೂ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಇನ್ನೇನಿದ್ದರೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬೆಳವಣಿಗೆ ನ್ಯಾಯಾಲಯದ ಅಂಗಳದಲ್ಲಿಯೇ ನಡೆಯಬೇಕಿದೆ.

ಈ ನಡುವೆ, ಗೌರಿ ಹತ್ಯೆ ಪ್ರಕರಣದ ಆರೋಪಿಗಳ ಪಟ್ಟಿ ಬದಲಾಗಿದೆ. ಹೆಸರುಗಳು ಹೀಗಿವೆ:

ಎ-1: ಅಮೋಲ್ ಕಾಳೆ, ಎ-2: ಪರಶುರಾಮ್ ವಾಗ್ಮೋರೆ, ಎ-3: ಗಣೇಶ್ ಮಿಸ್ಕಿನ್ , ಎ-4: ಅಮಿತ್ ರಾಮಚಂದ್ರ ಬಡ್ಡಿ, ಎ-5: ಅಮಿತ್ ದೇಗ್ವೇಕರ್, ಎ-6: ಭರತ್ ಕುರ್ಣೆ, ಎ-7: ಸುರೇಶ್ ಎಚ್. ಎಲ್, ಎ-8: ರಾಜೇಶ್ ಡಿ ಬಂಗೇರ, ಎ-9: ಸುಧನ್ವ ಗೋಂಡಲೇಕರ್‌, ಎ-10: ಶರದ್ ಕಲಾಸ್ಕರ್, ಎ-11: ಮೋಹನ್ ನಾಯಕ್, ಎ-12: ವಾಸುದೇವ್ ಭಗವಾನ್ ಸೂರ್ಯವಂಶಿ, ಎ-13: ಸುಚಿತ್ ಕುಮಾರ್, ಎ-14: ಮನೋಹರ್ ಡುಂಡಪ್ಪ, ಎ-15: ವಿಕಾಸ್ ಪಾಟೀಲ್, ಎ-16: ಶ್ರೀನಾಥ್ ಜಗನ್ನಾಥ್ ಪಂಗಾರ್‌ಕರ್, ಎ-17: ನವೀನ್ ಕುಮಾರ್ ಕೆ. ಟಿ.

Join Samachara Official. CLICK HERE