samachara
www.samachara.com
ಗೌರಿ ಲಂಕೇಶ್ ಹತ್ಯೆ ಪ್ರಕರಣ: ರೋಚಕ ಸಂಗತಿಗಳನ್ನು ಒಳಗೊಂಡ ಬೃಹತ್ ಚಾರ್ಜ್‌ಶೀಟ್
COVER STORY

ಗೌರಿ ಲಂಕೇಶ್ ಹತ್ಯೆ ಪ್ರಕರಣ: ರೋಚಕ ಸಂಗತಿಗಳನ್ನು ಒಳಗೊಂಡ ಬೃಹತ್ ಚಾರ್ಜ್‌ಶೀಟ್

“ರೋಚಕ ಸಂಗತಿಗಳು, ಕಲ್ಪನೆಗೆ ಮೀರಿದ ಭಯೋತ್ಪಾದನಾ ಜಾಲದ ನಿಖರ ಮಾಹಿತಿಯನ್ನು ಒಳಗೊಂಡಿದೆ,’’ ಎನ್ನುವ ಮೂಲಕ ಸರಕಾರಿ ಪರ ವಕೀಲ ಬಾಲನ್, ಬರುವ ದಿನಗಳಲ್ಲಿ ಗೌರಿ ಹತ್ಯೆ ಪ್ರಕರಣ ಮತ್ತೆ ಸುದ್ದಿ ಕೇಂದ್ರಕ್ಕೆ ಬರುವ ಮುನ್ಸೂಚನೆ ನೀಡಿದ್ದಾರೆ.

Team Samachara

ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ‘ವಿಶೇಷ ತನಿಖಾ ತಂಡ’ (ಎಸ್‌ಐಟಿ) ಬೃಹತ್‌ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ.

ಸುಮಾರು 9,235 ಪುಟಗಳ, ಒಟ್ಟು 15 ಸಂಪುಟಗಳನ್ನು ಒಳಗೊಂಡ ಎರಡನೇ ಹಾಗೂ ಅಂತಿಮ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಟ್ರಂಕ್‌ನಲ್ಲಿ ತಲುಪಿಸಿದರು. ಸೆ. 5, 2017ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್‌ ಟೌನ್‌ಶಿಪ್‌ನಲ್ಲಿದ್ದ ಗೌರಿ ಮನೆ ನಂಬರ್‌ 476/ಎ ಮುಂದೆಯೇ ಹತ್ಯೆ ನಡೆದಿತ್ತು. ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದ್ದ ಹತ್ಯೆ ತನಿಖೆಗಾಗಿ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅದೇ ದಿನ ‘ವಿಶೇಷ ತನಿಖಾ ತಂಡ’ವೊಂದನ್ನು ರಚಿಸಿತ್ತು. ಗೌರಿ ಹತ್ಯೆ ಸೈದ್ಧಾಂತಿಕ ಭಿನ್ನತೆಯ ಹಿನ್ನೆಲೆಯಲ್ಲಿ ನಡೆದಿರುವ ಸಾಧ್ಯತೆಯನ್ನು ಮುಂದಿಟ್ಟ ಒಡನಾಡಿಗಳು ಸಿಬಿಐ ತನಿಖೆಗಿಂತ, ಎಸ್‌ಐಟಿ ತನಿಖೆಯ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ಪ್ರಕರಣದ ಬೆನ್ನತ್ತಿ:

ಪ್ರಕರಣದ ಬೆನ್ನತ್ತಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಸುಮಾರು 40 ದಿನಗಳ ನಂತರ ಮೊದಲ ಬಾರಿ ಪತ್ರಿಕಾಗೋಷ್ಠಿ ಕರೆದಿತ್ತು. ಅಂದು ಇಬ್ಬರು ಶಂಕಿತರ ಮೂರು ರೇಖಾ ಚಿತ್ರಗಳನ್ನು ಅದು ಬಿಡುಗಡೆ ಮಾಡಿತ್ತು. ಆ ನಂತರ ಅನೇಕ ದಿನಗಳ ಕಾಲ ಪ್ರಕರಣ ನೆನೆಗುದಿಗೆ ಬಿದ್ದಂತಾಗಿತ್ತು.

ಹೀಗಿರುವಾಗಲೇ 2018ರ ಫೆಬ್ರವರಿ 18ರಂದು ಬೆಂಗಳೂರಿನ ಮೆಜೆಸ್ಟಿಕ್ ಬಳಿ ಮಂಡ್ಯ ಜಿಲ್ಲೆ ಮದ್ದೂರು ಮೂಲದ ಕೆ. ಟಿ. ನವೀನ್ ಕುಮಾರ್ ಪೊಲೀಸರ ಬಲೆಗೆ ಬಿದ್ದಿದ್ದ. ಆತ ಚಿಂತಕ, ವಿಚಾರವಾದಿ ಭಗವಾನ್ ಕೊಲೆಗೆ ಸಂಚು ರೂಪಿಸಿದ್ದು ಈ ಸಮಯದಲ್ಲಿ ಬಹಿರಂಗವಾಗಿತ್ತು. ಜತೆಗೆ, ಶಸ್ತ್ರಾಸ್ತ್ರಗಳನ್ನು ಆತ ಹೊಂದಿದ್ದ ಹಿನ್ನೆಲೆಯಲ್ಲಿ ಗೌರಿ ಪ್ರಕರಣದ ತನಿಖೆಗೆ ಇದು ಪೂಕರವಾಗಿ ಸಿಕ್ಕ ಮೊದಲ ಉಪಯುಕ್ತ ಮಾಹಿತಿ ಎನ್ನಿಸಿಕೊಂಡಿತ್ತು.

ಇದಾದ ನಂತರ ನವೀನ್ ಕುಮಾರ್ ನೀಡಿದ ಸುಳಿವಿನ ಹಿನ್ನೆಲೆಯಲ್ಲಿ ಗೌರಿ ಹತ್ಯೆ ಪ್ರಕರಣ ನಿಧಾನವಾಗಿ ತೆರೆದುಕೊಂಡಿತ್ತು. ಈ ಹಂತದಲ್ಲಿ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿಯನ್ನು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ ಗೌರಿ ಪ್ರಕರಣದ ಮೊದಲ ಆರೋಪಿಯನ್ನಾಗಿ ಕೆ. ಟಿ. ನವೀನ್‌ ಕುಮಾರ್‌ನನ್ನು ತನಿಖಾ ತಂಡ ಹೆಸರಿಸಿತ್ತು.

ಶುಕ್ರವಾರ ಸಲ್ಲಿಸಿರುವ ಎಸ್‌ಐಟಿಯ ಎರಡನೇ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಮೊದಲು ಆರೋಪಿ ಸ್ಥಾನದಲ್ಲಿದ್ದ ನವೀನ್‌ ಕುಮಾರ್‌ನನ್ನು 17ನೇ ಆರೋಪಿಯನ್ನಾಗಿಸಲಾಗಿದೆ. ಅಮೋಲ್ ಕಾಳೆ ಹಾಗೂ ಪರು‍‍ಷರಾಮ್ ವಾಗ್ಮೋರೆಯನ್ನು ಕ್ರಮವಾಗಿ ಒಂದನೇ ಹಾಗೂ ಎರಡನೇ ಆರೋಪಿಗಳನ್ನಾಗಿ ತನಿಖಾ ಸಂಸ್ಥೆ ಹೆಸರಿಸಿದೆ. ಒಟ್ಟು 18 ಜನ ಆರೋಪಿಗಳ ವಿರುದ್ಧ ಕೋಕಾ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿರುವುದಾಗಿ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ.

ಬೃಹತ್ ಗಾತ್ರ; ಹಲವು ವರ್ಷ:

ಪ್ರಮುಖ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಬೃಹತ್ ಗಾತ್ರದ ದೋಷಾರೋಪ ಪಟ್ಟಿಯನ್ನು ಸಲ್ಲಿಸುವುದು ವಿಶೇಷ ಏನಲ್ಲ. ಅದರಲ್ಲೂ ಭಯೋತ್ಪಾದನಾ ಪ್ರಕರಣಗಳು ನಡೆದಾಗ ತನಿಖಾ ಸಂಸ್ಥೆಗಳು ತಾವು ಹೊರಿಸುವ ಆರೋಪಗಳನ್ನು ಪುಟಗಳ ಲೆಕ್ಕದಲ್ಲಿಯೇ ಅಳೆಯುವುದು ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಅದು ಚಿನ್ನಸ್ವಾಮಿ ಸರಣಿ ಬಾಂಬ್ ಸ್ಫೋಟ ಪ್ರಕರಣ ಇರಲಿ, ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣ ಇರಲಿ, ತನಿಖಾ ತಂಡಗಳು ಬೃಹತ್ ಗಾತ್ರ, ಹಲವು ಸಂಪುಟಗಳನ್ನು ಒಳಗೊಂಡ ದೋಷರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿವೆ.

ಇದರಿಂದ ಆರೋಪಿಗಳು ಹಲವು ವರ್ಷಗಳ ಕಾಲ ಜೈಲಿನಲ್ಲಿಯೇ ಕೊಳೆಯಬೇಕಾಗುತ್ತದೆ ಮತ್ತು ಪ್ರಕರಣ ಇತ್ಯರ್ಥವಾಗಲು ಸಾಕಷ್ಟು ಕಾಲಾವಕಾಶದ ಅಗತ್ಯ ಬೀಳುತ್ತದೆ. ಚಿನ್ನಸ್ವಾಮಿ ಸರಣಿ ಸ್ಫೋಟ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಪತ್ರಕರ್ತರ ಹತ್ಯೆ ಸಂಚಿನ ಪ್ರಕರಣದಲ್ಲಿ ಕಾಲ ಕಳೆಯಲು ಹಿಂದೇಟು ಹಾಕಿದ ಆರೋಪಿಗಳು ತಪ್ಪೊಪ್ಪಿಕೊಂಡು ಶಿಕ್ಷೆಯ ಅವಧಿಯನ್ನು ಕಳೆಯಲು ಮುಂದಾಗಿದ್ದಾರೆ.

ಇದೀಗ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿಯೂ ತನಿಖಾ ತಂಡ ಸುಮಾರು 9,235 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ, ಇದು ಕೂಡ ಸುದೀರ್ಘ ಪ್ರಕರಣವಾಗಿ ನ್ಯಾಯಾಲಯದಲ್ಲಿ ಉಳಿಯುವುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ.

ದೋಷಾರೋಪ ಪಟ್ಟಿಯ ವಿಶೇಷತೆಗಳು:

ಸದ್ಯ ಎಸ್‌ಐಟಿ ಕೇವಲ ಒಂದು ಕಾಪಿಯನ್ನಷ್ಟೆ ನ್ಯಾಯಾಲಯಕ್ಕೆ ಸಲ್ಲಿಸಿದೆ. ಹೀಗಾಗಿ ಈಗ ಅವರು ಆರೋಪಿಗಳ ಮೇಲೆ ಹೊರಿಸಿದ ಆರೋಪಗಳ ಕುರಿತು ನಿಖರ ಮಾಹಿತಿ ಲಭ್ಯವಾಗಲು ಇನ್ನಷ್ಟು ದಿನಗಳ ಅಗತ್ಯವಿದೆ. ‘ಸಮಾಚಾರ’ಕ್ಕೆ ಲಭ್ಯ ಮಾಹಿತಿಗಳ ಪ್ರಕಾರ, ಆರೋಪಿಗಳು ಹಿಂದೂ ಚಿಂತಕರನ್ನು ಹತ್ಯೆ ಮಾಡುವ ಮೂಲಕ ವಿರೋಧಿ ದನಿಗಳನ್ನು ಹತ್ತಿಕ್ಕಲು ದೇಶಾದ್ಯಂತ ಸಂಚು ರೂಪಿಸಿದ್ದರು; 2026ರ ಹೊತ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಿತ್ತೊಗೆದು ‘ಹಿಂದೂ ರಾಷ್ಟ್ರ’ವನ್ನು ಹಿಂಸೆಯ ಮೂಲಕ ಸ್ಥಾಪಿಸಲು ಹೊರಟಿದ್ದರು ಎಂಬುದು ಎಸ್‌ಐಟಿ ಹೊರಿಸಿರುವ ಪ್ರಮುಖ ಆರೋಪ.

ಉಳಿದಂತೆ, ತನಿಖಾ ತಂಡ ‘ಸನಾತನ ಸಂಸ್ಥಾ’ದ ಜತೆ ಸಂಬಂಧ ಹೊಂದಿದ ಆರೋಪಿಗಳು ಗೌರಿ ಹತ್ಯೆಗೆ ಸಂಪೂನ್ಮೂಲ ಕ್ರೋಢೀಕರಣ ಮಾಡಿಕೊಂಡ ಬಗೆ, ರೂಪಿಸಿದ ಯೋಜನೆ, ಅದನ್ನು ಕಾರ್ಯರೂಪಕ್ಕೆ ತಂದ ಬಗೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದೆ. ಜತೆಗೆ, ದೇಶದ ಪ್ರತಿ ರಾಜ್ಯದಲ್ಲಿಯೂ ಇಬ್ಬರು ಹಿಂದೂವಾಗಿದ್ದು ವೈಚಾರಿಕ ಚಿಂತನೆ ಬಿತ್ತುವ ಕೆಲಸ ಮಾಡುವವರ ಹತ್ಯೆಗೆ ಸಂಚು ರೂಪಿಸಿದ ಅಂಶಗಳೂ ದೋಷಾರೋಪ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ ಎಂದು ಮೂಲಗಳು ಹೇಳುತ್ತಿವೆ.

ಒಟ್ಟಾರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅಂತಿಮವಾಗಿ ತನಿಖಾ ತಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಈ ಮೂಲಕ ಹಿಂದುತ್ವದ ಹೆಸರಿನಲ್ಲಿ ಈ ದೇಶದಲ್ಲಿ ಭಯೋತ್ಪಾದನಾ ಜಾಲವೊಂದು ಸಕ್ರಿಯವಾಗಿದೆ ಎಂಬುದಕ್ಕೆ ಮತ್ತೊಂದು ಸರಕಾರಿ ಸಾಕ್ಷಿಯನ್ನು ಕರ್ನಾಟಕ ನೀಡಿದಂತಾಗಿದೆ. "ಹಲವು ರೋಚಕ ಸಂಗತಿಗಳು, ಕಲ್ಪನೆಗೆ ಮೀರಿದ ಭಯೋತ್ಪಾದನಾ ಜಾಲದ ನಿಖರ ಮಾಹಿತಿಯನ್ನು ದೋಷಾರೋಪ ಪಟ್ಟಿ ಒಳಗೊಂಡಿದೆ,’’ ಎನ್ನುವ ಮೂಲಕ ಸರಕಾರಿ ಪರ ವಕೀಲ ಬಾಲನ್, ಬರುವ ದಿನಗಳಲ್ಲಿ ಗೌರಿ ಹತ್ಯೆ ಪ್ರಕರಣ ಮತ್ತೆ ಸುದ್ದಿ ಕೇಂದ್ರಕ್ಕೆ ಬರುವ ಮುನ್ಸೂಚನೆ ನೀಡಿದ್ದಾರೆ.

Join Samachara Official. CLICK HERE