‘ತುಳಸಿ ಪ್ರಜಾಪತಿ ಕೊಲೆಯಲ್ಲಿ ಅಮಿತ್ ಶಾ ಸಂಚು’: ಇದು ಕ್ರಿಮಿನಲ್- ರಾಜಕಾರಣ- ಪೊಲೀಸ್‌ರ ಕ್ರೈಂ ಸಿಂಡಿಕೇಟ್ ಕತೆ
COVER STORY

‘ತುಳಸಿ ಪ್ರಜಾಪತಿ ಕೊಲೆಯಲ್ಲಿ ಅಮಿತ್ ಶಾ ಸಂಚು’: ಇದು ಕ್ರಿಮಿನಲ್- ರಾಜಕಾರಣ- ಪೊಲೀಸ್‌ರ ಕ್ರೈಂ ಸಿಂಡಿಕೇಟ್ ಕತೆ

ಅಮಿತ್‌ ಶಾ ‘ಕ್ರಿಮಿನಲ್‌-ರಾಜಕಾರಣಿ-ಪೊಲೀಸ್‌ ತಂಡ’ದ ಭಾಗವಾಗಿದ್ದಾರೆ. ಪ್ರಜಾಪತಿ, ಅವರ ಸಹಚರರಾದ ಸೊಹ್ರಾಬುದ್ದೀನ್‌ ಶೇಖ್‌, ಆತನ ಪತ್ನಿ ಕೌಸರ್‌ ಬಿಯನ್ನು ಇದೇ ಸಂಚುಕೋರರ ತಂಡದ ಆದೇಶದ ಮೇರೆಗೆ ಕೊಲ್ಲಲಾಗಿದೆ.

ತುಳಸಿ ಪ್ರಜಾಪತಿ ನಕಲಿ ಎನ್‌ಕೌಂಟರ್‌ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪ್ರಧಾನ ಸಂಚುಕೋರ. ಹೀಗಂತ 2006ರಲ್ಲಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿದ್ದ ಮುಖ್ಯ ತನಿಖಾಧಿಕಾರಿ ಸಂದೀಪ್‌ ತಮ್‌ಗಡ್ಗೆ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಶಾ, ಐಪಿಎಸ್‌ ಅಧಿಕಾರಿ ಡಿ.ಜಿ. ವಂಜಾರಾ, ದಿನೇಶ್‌ ಎಂ.ಎನ್‌. ಮತ್ತು ರಾಜ್‌ಕುಮಾರ್‌ ಪಾಂಡಿಯನ್‌ ಪ್ರಕರಣದ ಪ್ರಮುಖ ಸಂಚುಕೋರರು ಎಂದು ನ್ಯಾಯಾಲಯಕ್ಕೆ ಅವರು ತಿಳಿಸಿದ್ದಾರೆ.

ಅವರ ಹೇಳಿಕೆಯನ್ನು ಬುಧವಾರ ನ್ಯಾಯಾಲಯದಲ್ಲಿ ದಾಖಲು ಮಾಡಿಕೊಳ್ಳಲಾಗಿದ್ದು 2001ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಸಂದೀಪ್‌ ಹಲವು ಸ್ಫೋಟಕ ಸತ್ಯಗಳನ್ನು ಬಾಯಿಬಿಟ್ಟಿದ್ದಾರೆ. ಶಾ ‘ಕ್ರಿಮಿನಲ್‌-ರಾಜಕಾರಣಿ-ಪೊಲೀಸ್‌ ತಂಡ’ದ ಭಾಗವಾಗಿದ್ದಾರೆ. ಪ್ರಜಾಪತಿ, ಅವರ ಸಹಚರರಾದ ಸೊಹ್ರಾಬುದ್ದೀನ್‌ ಶೇಖ್‌, ಆತನ ಪತ್ನಿ ಕೌಸರ್‌ ಬಿಯನ್ನು ಇದೇ ಸಂಚುಕೋರರ ತಂಡದ ಆದೇಶದ ಮೇರೆಗೆ ಕೊಲ್ಲಲಾಗಿದೆ ಎಂದವರು ತಿಳಿಸಿದ್ದಾರೆ.

2012ರಲ್ಲೇ ಪ್ರಕರಣದ ಕುರಿತು ಸಂದೀಪ್‌ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಅದರ ಸಂಪೂರ್ಣ ವಿವರಗಳನ್ನು ನ್ಯಾಯಾಲಯದಲ್ಲಿ ತೆರೆದಿಟ್ಟಿದ್ದಾರೆ. “ಶಾ ಮತ್ತು ಗುಲಾಬ್‌ ಚಂದ್‌ ಕಟಾರಿಯಾ (ರಾಜಸ್ಥಾನ ಗೃಹ ಸಚಿವ) ಈ ಸಂಚುಕೋರ ತಂಡದಿಂದಲೇ ಬೆಳೆದು ಬಂದವರು,” ಎಂದು ಅವರು ವಿವರಿಸಿದ್ದಾರೆ. ಸೊಹ್ರಾಬುದ್ದೀನ್‌, ಪ್ರಜಾಪತಿ ಮತ್ತು ಅವರ ಸಹಚರ ಅಜಂ ಖಾನ್‌ ಈ ಸಂಚುಕೋರ ತಂಡದ ಸದಸ್ಯರು. ರಾಜಕಾರಣಿಗಳು ಮತ್ತು ಪೊಲೀಸರ ಸಹಾಯದಿಂದ ಶೇಖ್‌ ಮತ್ತು ಪ್ರಜಾಪತಿ ಸುಲಿಗೆ ಮಾಡಿಕೊಂಡಿದ್ದರು. ಆದರೆ ಶೇಖ್‌ ತಮ್ಮ ಬಾಸ್‌ಗಳಾದ ರಾಜಕಾರಣಿಗಳ ತೀರ್ಮಾನದ ವಿರುದ್ಧ ಹೋಗುತ್ತಿದ್ದಂತೆ ಅವರನ್ನು ಕೊಲ್ಲಲು ಸಂಚು ರೂಪಿಸಲಾಯ್ತು. ಅದರಂತೆ ನವೆಂಬರ್‌ 23, 2005ರಲ್ಲಿ ಕೊಲೆ ಮಾಡಲಾಯಿತು ಎಂದವರು ವಿವರಿಸಿದ್ದಾರೆ.

ಪ್ರಕರಣದಲ್ಲಿ ಒಬ್ಬೊಬ್ಬರೇ ಸಾಕ್ಷಿಗಳು ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಹೊತ್ತಲ್ಲಿ ಸಂದೀಪ್‌ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇವರ ಹಿಂದಿನ ಐಪಿಎಸ್‌ ಅಧಿಕಾರಿ ಅಮಿತಾಬ್‌ ಠಾಕೂರ್‌ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ, “ಈ ಕೊಲೆಗಳಿಂದ ಶಾ ಮತ್ತು ಹಿರಿಯ ಐಪಿಎಸ್‌ ಅಧಿಕಾರಿಗಳು ಯಾವುದೇ ಹಣಕಾಸು ಮತ್ತು ರಾಜಕೀಯ ಲಾಭಗಳನ್ನು ಪಡೆದುಕೊಂಡಿರುವುದಕ್ಕೆ ಸಾಕ್ಷಿಗಳಿಲ್ಲ,” ಎಂದು ಹೇಳಿದ್ದರು.

ಪ್ರಕರಣದಲ್ಲಿ 35 ಆರೋಪಿಗಳನ್ನು ಆರಂಭದಲ್ಲಿ ಹೆಸರಿಸಲಾಗಿತ್ತು. ಇದರಲ್ಲಿ ಈಗಾಗಲೇ ಶಾ, ಕಟಾರಿಯಾ ಮತ್ತು ಹಿರಿಯ ಐಪಿಎಸ್‌ ಅಧಿಕಾರಿಗಳಾದ ವಂಜಾರಾ, ಪಾಂಡಿಯನ್‌ ಮತ್ತು ದಿನೇಶ್‌ರನ್ನು ಪ್ರಕರಣದಿಂದ ಕೈ ಬಿಡಲಾಗಿದೆ. ಇದೀಗ 22 ಜನರು ಉಳಿದುಕೊಂಡಿದ್ದು 21 ಜನ ಕೆಳದರ್ಜೆಯ ಪೊಲೀಸ್‌ ಅಧಿಕಾರಿಗಳು ಮತ್ತು ಕೌಸರ್‌ ಬಿಯನ್ನು ಕೊಲೆ ಮಾಡುವ ಮೊದಲು ಇಡಲಾಗಿದ್ದ ಗೆಸ್ಟ್‌ ಹೌಸ್‌ ಮಾಲಿಕರು ಅರೋಪಿಗಳ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ.

ಆರಂಭದಲ್ಲಿ ಠಾಕೂರ್‌ ತನಿಖೆಯಲ್ಲಿಯೂ ಶಾ ಹೆಸರಿತ್ತು. ಈ ಹಿನ್ನೆಲೆಯಲ್ಲಿ ಸಂದೀಪ್‌ ಧೈರ್ಯ ಮಾಡಿ ಶಾ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಹೀಗಿದ್ದೂ ಅವರನ್ನು ಸಿಬಿಐ ನ್ಯಾಯಾಧೀಶ ಎಂ. ಬಿ. ಗೋಸಾವಿ 2014ರ ಡಿಸೆಂಬರ್‌ 30ರಂದು ದೋಷ ಮುಕ್ತಗೊಳಿಸಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದೆ ವಿವಾದಾತ್ಮಕ ತೀರ್ಪನ್ನು ಸಿಬಿಐ ನ್ಯಾಯಾಲಯ ನೀಡಿತ್ತು.

ಸದ್ಯ ಅವರು ಕೊಹಿಮಾದಲ್ಲಿ ಡಿಐಜಿಯಾಗಿರುವ ಸಂದೀಪ್‌ ಈ ಪ್ರಕರಣದಲ್ಲಿ 210ನೇ ಸಾಕ್ಷಿಯಾಗಿದ್ದಾರೆ. 2011ರಿಂದ 15ರವರೆಗೆ ಸಿಬಿಐನಲ್ಲಿ ಹಲವು ಉನ್ನತ ಸ್ಥಾನಗಳನ್ನು ಅವರು ಅಲಂಕರಿಸಿದ್ದರು. ಬಹಳ ಮುಖ್ಯವಾಗಿ ಮುಂಬೈ ಸಿಬಿಐನ ಕ್ರೈಂ ಬ್ರಾಂಚ್‌ ಎಸ್‌ಪಿಯಾಗಿದ್ದರು.

ಸಾಕ್ಷಿ ವೇಳೆ ಹಲವು ಪ್ರಶ್ನೆಗಳನ್ನು ಸಂದೀಪ್‌ ಅವರಿಗೆ ಕೇಳಲಾಯಿತು. ಸುಮಾರು 9 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯಿತು. ಪ್ರತಿವಾದಿ ವಕೀಲ ಅಬ್ದುಲ್‌ ವಹಾಬ್‌ ಖಾನ್‌, ಆರೋಪಿಗಳ ಕಾಲ್‌ ಡೇಟಾ ರೆಕಾರ್ಡ್‌ ಆಧಾರದ ಮೇಲೆ ಈ ಸಂಚು ರೂಪಿಸಿದ್ದಾಗಿ ಹೇಳುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಸಂದೀಪ್, “ಅಮಿತ್‌ ಶಾ, ದಿನೇಶ್‌ ಎಂ.ಎನ್‌, ವಂಜಾರಾ, ಪಾಂಡಿಯನ್‌, ವಿಪುಲ್‌ ಅಗರ್ವಾಲ್‌, ಆಶೀಷ್‌ ಪಾಂಡ್ಯ, ಎನ್‌.ಎಚ್‌. ಧಬಿ ಮತ್ತು ಜಿ. ಶ್ರೀನಿವಾಸ್‌ ರಾವ್‌ ಸಿಡಿಆರ್‌ ನಮ್ಮ ಬಳಿಯಲ್ಲಿವೆ. ಕೊಲೆಗೂ ಮುನ್ನ ಸಂಚು ರೂಪಿಸಲಾಗಿತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ,” ಎಂದಿದ್ದಾರೆ. ಇದರಲ್ಲಿ ಪಾಂಡ್ಯ, ದಭಿ ಮತ್ತು ರಾವ್‌ ಇನ್ನೂ ವಿಚಾರಣೆ ಎದುರಿಸುತ್ತಿದ್ದಾರೆ.

ಸಿಬಿಐ ಪ್ರಕಾರ ಸೊಹ್ರಾಬುದ್ದೀನ್‌, ಕೌಸರ್‌ ಬಿ ಮತ್ತು ಪ್ರಜಾಪತಿ ಒಟ್ಟಾಗಿ ನವೆಂಬರ್‌ 23, 2005ರಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸೊಹ್ರಾಬುದ್ದೀನ್‌ ಮತ್ತು ಕೌಸರ್‌ ಬಿಯನ್ನು ಪೊಲೀಸ್‌ ತಂಡವೊಂದು ಕಿಡ್ನಾಪ್‌ ಮಾಡಿತು. ಮುಂದೆ ಇವರನ್ನು ನವೆಂಬರ್‌ 26, 2005ರಂದು ಎನ್ಕೌಂಟರ್‌ ಮಾಡಿದ್ದಾಗಿ ತೋರಿಸಲಾಯಿತು. ಕೌಸರ್‌ ಬಿ ಮೃತ ದೇಹ ಮಾತ್ರ ಇನ್ನೂ ಸಿಕ್ಕಿಲ್ಲ. ಆದರೆ ಸಾಕ್ಷ್ಯಗಳು ಮತ್ತು ಸಾಕ್ಷಿಗಳ ಹೇಳಿಕೆ ಆಧರಿಸಿ ಆಕೆಯನ್ನೂ ಕೊಲ್ಲಲಾಗಿದೆ ಎಂದು ಸಿಬಿಐ ಹೇಳಿದೆ. ಇದೇ ವೇಳ ಪ್ರಜಾಪತಿಯನ್ನು ಬಂಧಿಸಿ ಉದಯಪುರ ಜೈಲಿಗೆ ಕಳುಹಿಸಲಾಗಿತ್ತು. 2006ರ ಎನ್ಕೌಂಟರ್‌ಲ್ಲಿ ಆತನನ್ನು ಹೊಡೆದು ಮುಗಿಸಲಾಯಿತು ಎಂದು ಚಾರ್ಜ್‌ಶೀಟ್‌ ಹೇಳುತ್ತದೆ.

ಆರಂಭದಲ್ಲಿ ತನಿಖೆ ನಡೆಸಿದ್ದ ಠಾಕೂರ್‌ 2010 ಮತ್ತು 2012ರ ಮಧ್ಯೆ ಸಿಬಿಐನಲ್ಲಿದ್ದು ಮೊದಲ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಸೊಹ್ರಾಬುದ್ದೀನ್ ಶೇಖ್‌ ಮತ್ತು ಕೌಸರ್‌ ಬಿ ಪ್ರಕರಣದಲ್ಲಿ ಈ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.. 2012ರ ಏಪ್ರಿಲ್‌ನಲ್ಲಿ ತನಿಖೆ ಕೈಗೆತ್ತಿಕೊಂಡಿದ್ದ ಸಂದೀಪ್‌ ಸೆಪ್ಟೆಂಬರ್‌ನಲ್ಲಿ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ತನಿಖೆ ವೇಳೆ ಪ್ರಜಾಪತಿ ಕೊಲೆಯನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಮುಂದೆ ಎರಡೂ ಪ್ರಕರಣಗಳನ್ನು ಒಟ್ಟುಗೂಡಿಸಲಾಯಿತು.

ತನಿಖೆ ವೇಳೆ, ಮುಂದೆ ಉದಯಪುರ್‌ ಎಸ್‌ಪಿಯಾದ ದಿನೇಶ್‌ ಎಂ.ಎನ್‌. ಎಸ್ಕಾರ್ಟ್‌ ಟೀಂನಲ್ಲಿ ಒಂದಷ್ಟು ಜನರನ್ನು ಆಯ್ಕೆ ಮಾಡಿ ಹೇಗೆ ಪ್ರಜಾಪತಿ ಕೊಲೆ ನಡೆಸಿದರು ಎಂಬುದು ತಿಳಿದು ಬಂದಿತ್ತು. ಈ ಎಸ್ಕಾರ್ಟ್‌ ತಂಡಕ್ಕೆ ಪ್ರಜಾಪತಿಯನ್ನು ಕೋರ್ಟ್‌ಗೆ ಕರೆದುಕೊಂಡು ಹೋಗಿ ವಾಪಸ್‌ ಕರೆದುಕೊಂಡು ಬರುವ ಜಬಾಬ್ದಾರಿ ನೀಡಿದ್ದರು. ಕೊನೆಯ ಬಾರಿ ಕೊಲೆ ಮಾಡುವ ಮೊದಲು ತಂಡ ಎರಡು ಬಾರಿ ಅವರನ್ನು ಕೋರ್ಟ್‌ಗೆ ಕರೆದುಕೊಂಡು ಹೋಗಿ ವಾಪಸ್‌ ಕರೆದುಕೊಂಡು ಬಂದಿತ್ತು. ಸಂದೀಪ್‌ ಪ್ರಕಾರ್ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಆಶೀಷ್‌ ಪಾಂಡ್ಯ ತಮ್ಮ ಎಡಗೈಗೆ ತಾವೇ ಗುಂಡು ಹೊಡೆದುಕೊಂಡು ಎನ್‌ಕೌಂಟರ್‌ ವೇಳೆ ಗಾಯವಾಗಿತ್ತು ಎಂದು ಹೇಳಿಕೊಂಡಿದ್ದರು. ಆದರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಈ ರೀತಿಯ ಗಾಯ ತಾವೇ ಮಾಡಿಕೊಂಡರೆ ಮಾತ್ರ ಉಂಡಾಗುತ್ತದೆ ಎಂದು ಷರಾ ಬರೆದಿತ್ತು.

ಇಶ್ರತ್‌ ಜಹಾನ್‌ ಕೊಲೆ ತನಿಖೆ:

ಇದಲ್ಲದೆ ಇಶ್ರತ್‌ ಜಹಾನ್‌ ಕೊಲೆ ಪ್ರಕರಣದ ತನಿಖೆಯ ಮೇಲ್ವಿಚಾರಣೆಯನ್ನೂ ಸಂದೀಪ್‌ ನೋಡಿಕೊಳ್ಳುತ್ತಿದ್ದರು. ಅವರ ನೇತೃತ್ವದಲ್ಲೇ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಕೆ ಮಾಡಲಾಗಿತ್ತು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಗೃಹ ಸಚಿವ ಶಾ ಅವರ ಆಪ್ತರಾಗಿದ್ದ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ವಶಕ್ಕೆ ಪಡೆಯುವಲ್ಲಿ ಈ ಚಾರ್ಜ್‌ಶೀಟ್‌ಗಳು ಕೆಲಸ ಮಾಡಿದ್ದವು.

2014ರಲ್ಲಿ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕೆಲವೇ ವಾರಗಳ ಮೊದಲು ಸಂದೀಪ್‌ ಅವರನ್ನು ಗುಜರಾತ್‌ನ ಹಲವು ಎನ್‌ಕೌಂಟರ್‌ ಪ್ರಕರಣಗಳ ಮೇಲ್ವಿಚಾರಣೆಯಿಂದ ಹೊರಗಿಡಲಾಗಿತ್ತು. ಅವರನ್ನು ಮೂಲ ನಾಗಾಲ್ಯಾಂಡ್‌ ಕೇಡರ್‌ಗೆ ವಾಪಸ್‌ ಕಳುಹಿಸಲಾಗಿತ್ತು. 2015ರಲ್ಲಿ ಅವರಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಮತ್ತು ಅವರನ್ನು ಎರಡು ಪ್ರಕರಣಗಳಲ್ಲಿ ವಿಚಾರಣೆಗೆ ಒಳಪಡಿಸಲು ಸಿಬಿಐ ಯತ್ನಿಸಿತ್ತು. ಇದಕ್ಕೆ ತೀವ್ರ ಟೀಕೆಗಳು ಕೇಳಿ ಬಂದಿತ್ತು.