samachara
www.samachara.com
ಮತ್ತಷ್ಟು ಹದಗೆಟ್ಟ ಪಾಕ್‌-ಅಮೆರಿಕಾ ಸಂಬಂಧ, 11 ಸಾವಿರ ಕೋಟಿ ನೆರವು ಸ್ಥಗಿತಗೊಳಿಸಿದ ಟ್ರಂಪ್‌
COVER STORY

ಮತ್ತಷ್ಟು ಹದಗೆಟ್ಟ ಪಾಕ್‌-ಅಮೆರಿಕಾ ಸಂಬಂಧ, 11 ಸಾವಿರ ಕೋಟಿ ನೆರವು ಸ್ಥಗಿತಗೊಳಿಸಿದ ಟ್ರಂಪ್‌

“ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ 1.66 ಬಿಲಿಯನ್‌ ಡಾಲರ್‌ (ಸುಮಾರು 11.8 ಸಾವಿರ ಕೋಟಿ ರೂಪಾಯಿ) ಭದ್ರತಾ ನೆರವು ರದ್ದುಗೊಳಿಸಲಾಗಿದೆ,” ಎಂದು ಅಮೆರಿಕಾ ಹೇಳಿದೆ.

Team Samachara

ಅಮೆರಿಕಾ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಅದಕ್ಕೆ ಸಾಕ್ಷಿಯಾಗಿ ಅಮೆರಿಕಾ ಪಾಕಿಸ್ತಾನಕ್ಕೆ ನೀಡುತ್ತಿದ್ದ ಭದ್ರತಾ ಸಹಾಯವನ್ನು ರದ್ದುಗೊಳಿಸಿದೆ. ‘ಭಯೋತ್ಪಾದನಾ ನಿಗ್ರಹದಲ್ಲಿ ಪಾಕಿಸ್ತಾನ ಅಂದುಕೊಂಡಷ್ಟು ಕೆಲಸ ಮಾಡುತ್ತಿಲ್ಲ’ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದರು. ಇದಾದ ಬೆನ್ನಿಗೆ ನೆರವನ್ನು ರದ್ದುಗೊಳಿಸಲಾಗಿದೆ.

“ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ 1.66 ಬಿಲಿಯನ್‌ ಡಾಲರ್‌ (ಸುಮಾರು 11.8 ಸಾವಿರ ಕೋಟಿ ರೂಪಾಯಿ) ಭದ್ರತಾ ನೆರವು ರದ್ದುಗೊಳಿಸಲಾಗಿದೆ,” ಎಂದು ಭದ್ರತಾ ಇಲಾಖೆ ವಕ್ತಾರ ಕೊಲೋನೆಲ್‌ ರಾಬ್‌ ಮ್ಯಾನ್ನಿಂಗ್‌ ಹೇಳಿದ್ದಾರೆ.

ನವೆಂಬರ್‌ 19ರಂದು ಪಾಕಿಸ್ತಾನದ ಮೇಲೆ ಕೆಂಡ ಕಾರಿದ್ದ ಟ್ರಂಪ್‌, ತನ್ನ ನೆಲದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಪಾಕಿಸ್ತಾನ ದಾಳಿ ನಡೆಸಿಲ್ಲ ಎಂದು ಹೇಳಿದ್ದರು. ಆಲ್‌ಖೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ ಲಾಡೆನ್ ಅಬ್ಬೊಟ್ಟಾಬಾದ್‌ನಲ್ಲಿ ಸೇನೆಯ ರಕ್ಷಣೆಯಲ್ಲಿದ್ದ ಎಂದು ದೂರಿದ್ದರು. ಜತೆಗೆ “ಡಬ್ಲ್ಯೂಟಿಸಿ ಮೇಲೆ ದಾಳಿ ನಡೆಸುವ ಮೊದಲೇ ನಾನು ಆತನ ಬಗ್ಗೆ ಎಚ್ಚರಿಸಿದ್ದೆ. ಆದರೆ ಬಿಲ್‌ ಕ್ಲಿಂಟನ್‌ ಅವಕಾಶ ಕಳೆದುಕೊಂಡರು. ನಾವು ಬಿಲಿಯನ್‌ ಡಾಲರ್‌ಗಳನ್ನು ಪಾಕಿಸ್ತಾನಕ್ಕೆ ನೀಡಿದ್ದೇವೆ. ಆದರೆ ಆತ ಅಲ್ಲಿದ್ದಾನೆ ಎಂದು ನಮಗೆ ಯಾವತ್ತೂ ಪಾಕಿಸ್ತಾನ ಹೇಳಿಲ್ಲ,” ಎಂದು ಕಿರಿಕಾರಿದ್ದರು.

“ನಮ್ಮಿಂದ ಹಣ ಪಡೆದು ನಮಗೆ ಏನೂ ಉಪಕಾರ ಮಾಡದ ದೇಶಗಳಲ್ಲಿ ಪಾಕಿಸ್ತಾನವೂ ಒಂದು. ಹೀಗಾಗಿ ನಾವು ಇನ್ನು ಯಾವತ್ತೂ ಪಾಕಿಸ್ತಾನಕ್ಕೆ ಬಿಲಿಯನ್‌ ಡಾಲರ್‌ ಹಣವನ್ನು ನೀಡುವುದಿಲ್ಲ,” ಎಂದಿದ್ದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, “ಉಗ್ರರ ವಿರುದ್ಧದ ಯುದ್ಧದಲ್ಲಿ ತ್ಯಾಗ ಮಾಡಿದ ಮತ್ತು ಸಹಾಯ ಮಾಡಿದ ಕೆಲವೇ ಕೆಲವು ಮಿತ್ರ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು,” ಎಂದಿದ್ದರು.

“ಪಾಕಿಸ್ತಾನವನ್ನು ಹರಕೆಯ ಕುರಿ ಮಾಡುವ ಬದಲು, 1,40,000 ನ್ಯಾಟೋ ಸೈನಿಕರು, 2,50,000 ಅಫ್ಘಾನಿಸ್ತಾನ ಸೈನಿಕರು, 1 ಟ್ರಿಲಿಯನ್‌ ಡಾಲರ್‌ಗೂ ಹೆಚ್ಚು ಹಣವನ್ನು ಅಫ್ಘಾನಿಸ್ತಾನ ಯುದ್ಧದ ಮೇಲೆ ವೆಚ್ಚ ಮಾಡಿಯೂ ತಾಲಿಬಾನ್‌ ಇವತ್ತು ಹಿಂದೆಂದಿಗಿಂತಲೂ ಯಾಕೆ ಹೆಚ್ಚು ಬಲಿಷ್ಠವಾಗಿದೆ.” ಎಂದು ಅಮೆರಿಕಾ ಪರಾಮರ್ಶೆ ನಡೆಸದಬೇಕಿದೆ ಎಂದು ಹೇಳಿದ್ದರು.

ಜತೆಗೆ ಪಾಕಿಸ್ತಾನದ ಯಾವುದೇ ವ್ಯಕ್ತಿ 9/11ರ ದಾಳಿಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಿದ್ದೂ ಈ ಯುದ್ಧದಲ್ಲಿ ಅಮೆರಿಕಾಗೆ ನೆರವಾಗಲು ಪಾಕಿಸ್ತಾನ ನಿರ್ಧರಿಸಿತು. ಇದರಿಂದ 75,000 ಜೀವ ಹಾನಿ ಮತ್ತು ಆರ್ಥಿಕತೆಯ ಮೇಲೆ 123 ಬಿಲಿಯನ್‌ ಡಾಲರ್‌ ಹೊಡೆತ ಬಿತ್ತು ಎಂದವರು ತಿಳಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಟ್ರಂಪ್‌ ಅಫ್ಘಾನಿಸ್ತಾನ ಮತ್ತು ದಕ್ಷಿಣ ಏಷ್ಯಾ ಪಾಲಿಸಿ ಘೋಷಣೆ ಸಂದರ್ಭ, ಪಾಕಿಸ್ತಾನ ಉಗ್ರರಿಗೆ ಮತ್ತು ಏಜೆಂಟರಿಗೆ ಸುರಕ್ಷಿತ ತಾಣವಾಗಿದೆ ಎಂದು ಜರೆದಿದ್ದರು . ಇದಾದ ಬೆನ್ನಿಗೆ ಎರಡೂ ದೇಶಗಳ ಸಂಬಂಧ ಹಳಸಲು ಆರಂಭವಾಗಿತ್ತು. ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ 300 ಮಿಲಿಯನ್‌ ಡಾಲರ್‌ ಸೇನಾ ನೆರವನ್ನು ರದ್ದುಗೊಳಿಸುತ್ತಿರುವುದಾಗಿ ಅಮೆರಿಕಾ ಹೇಳಿತ್ತು. ಇದರ ಜತೆಗೆ ಈ ವರ್ಷದ ಆರಂಭದಲ್ಲಿ ಪಾಕಿಸ್ತಾನಕ್ಕೆ 500 ಮಿಲಿಯನ್‌ ಡಾಲರ್‌ ಪ್ರತ್ಯೇಕ ನೆರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೊಂದು ನೆರವನ್ನು ಅಮೆರಿಕಾ ತಡೆ ಹಿಡಿದಿದೆ. ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ, ಖಜಾನೆ ಬರಿದಾಗಿರುವ ಪಾಕಿಸ್ತಾನಕ್ಕೆ ಇದು ಕಹಿ ಸುದ್ದಿಯಾಗಿದೆ.