samachara
www.samachara.com
ಬಾಕಿಯನ್ನೂ ಕೊಡಲಿಲ್ಲ, ರೈತರ ಸಭೆಗೂ ಬರಲಿಲ್ಲ; ಇದು ಜನಪ್ರತಿನಿಧಿ ‘ಸಾಹುಕಾರ’ರ ಬದ್ಧತೆ!
COVER STORY

ಬಾಕಿಯನ್ನೂ ಕೊಡಲಿಲ್ಲ, ರೈತರ ಸಭೆಗೂ ಬರಲಿಲ್ಲ; ಇದು ಜನಪ್ರತಿನಿಧಿ ‘ಸಾಹುಕಾರ’ರ ಬದ್ಧತೆ!

ಜಾರಕಿಹೊಳಿ ಸಹೋದರರು, ಉಮೇಶ್‌ ಕತ್ತಿ, ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿರುವ ಶಾಸಕರು, ಸಚಿವರು ರೈತರೊಂದಿಗೆ ಸಭೆಗೆ ಬಂದಿಲ್ಲ.

ದಯಾನಂದ

ದಯಾನಂದ

ಕಬ್ಬು ಬೆಳೆಗಾರರು ಬಾಕಿ ಹಣ ಪಾವತಿ ಹಾಗೂ ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದಾಯಿತು.ಬೆಳಗಾವಿಯಲ್ಲಿ ಹಚ್ಚಿದ ರೈತರ ಆಕ್ರೋಶದ ಕಿಡಿ ರಾಜಧಾನಿ ಬೆಂಗಳೂರಿಗೂ ಹಬ್ಬಿದ್ದಾಯಿತು. ಇಷ್ಟೆಲ್ಲಾ ಆದ ಮೇಲೆ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಗಳವಾರ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರ ಸಭೆ ಕರೆದಿದ್ದರು. ಆದರೆ, ಈ ಸಭೆಗೆ ಜನಪ್ರತಿನಿಧಿಗಳಾಗಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಗೈರು ಹಾಜರಾಗಿದ್ದಾರೆ.

ಬೆಳಗಾವಿ ಭಾಗದ ಬಹುತೇಕ ಶಾಸಕರು ಸಕ್ಕರೆ ಕಾರ್ಖಾನೆಗಳ ಮಾಲೀಕರು. ಸ್ವಂತ ಸಕ್ಕರೆ ಕಾರ್ಖಾನೆಗಳ ಜತೆಗೆ ಸಹಕಾರಿ ಸಂಘಗಳ ಸಕ್ಕರೆ ಕಾರ್ಖಾನೆಗಳ ಹಿಡಿತವೂ ಈ ಭಾಗದ ‘ಸಾಹುಕಾರ’ರ ಕೈಯಲ್ಲಿದೆ. ಜಾರಕಿಹೊಳಿ ಸಹೋದರರು, ಉಮೇಶ್‌ ಕತ್ತಿ, ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿರುವ ಶಾಸಕರು, ಸಚಿವರು ರೈತರೊಂದಿಗೆ ಸಭೆಗೆ ಬಂದಿಲ್ಲ. ಈ ಜನಪ್ರತಿನಿಧಿಗಳ ಪ್ರತಿಯೊಂದು ಸಕ್ಕರೆ ಕಾರ್ಖಾನೆಯೂ ರೈತರಿಗೆ ನೀಡಬೇಕಾದ ಸುಮಾರು 10 ರಿಂದ 20 ಕೋಟಿ ರೂಪಾಯಿವರೆಗಿನ ಮೊತ್ತವನ್ಉ ಬಾಕಿ ಉಳಿಸಿಕೊಂಡಿವೆ. ಆದರೆ, ಸಭೆಗೇ ಬಾರದೆ ಈ ‘ಸಾಹುಕಾರ’ರು ಜನಸೇವೆ ಹಾಗೂ ರೈತಪರ ಕಾಳಜಿಯ ಬದ್ಧತೆ ತೋರಿದ್ದಾರೆ!

ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅಧಿಕೃತವಾಗಿ ರೈತರಿಗೆ ಪಾವತಿಯಾಗಬೇಕಾದ ಬಾಕಿ ಇರುವುದು ಕೇವಲ 38 ಕೋಟಿ ರೂಪಾಯಿ ಮಾತ್ರ. ಅದನ್ನು ಕೊಡಿಸಲು ಸರಕಾರ ಬದ್ಧ ಎಂದು ಹೇಳಿದ್ದಾರೆ. ಆದರೆ, ರೈತ ಮುಖಂಡರು ಹೇಳುವ ಪ್ರಕಾರ ಬೆಳಗಾವಿ ಜಿಲ್ಲೆಯೊಂದರಲ್ಲೇ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಮೊತ್ತ 153 ಕೋಟಿ ರೂಪಾಯಿ. ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ನೀಡುವ ತಪ್ಪು ಲೆಕ್ಕ ಹಾಗೂ ಸಕ್ಕರೆ ಇಲಾಖೆಯ ಬೇಜವಾಬ್ದಾರಿತನದಿಂದ ಮುಖ್ಯಮಂತ್ರಿ ಕೇವಲ 38 ಕೋಟಿ ಬಾಕಿ ಅಷ್ಟೇ ಎನ್ನುತ್ತಿದ್ದಾರೆ. ಇದು ತಪ್ಪು ಲೆಕ್ಕ ಎಂಬುದು ರೈತ ಮುಖಂಡರ ವಾದ.

ಕಬ್ಬು ಕಟಾವಿಗೆ ಮುಂಚೆ ಪ್ರತಿ ಟನ್‌ ಕಬ್ಬಿಗೆ 2,900 ರೂಪಾಯಿ ನೀಡುವುದಾಗಿ ಹೇಳಿದ್ದ ಸಕ್ಕರೆ ಕಾರ್ಖಾನೆಗಳು ಈಗ ಆ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ‘ಹಿಂದೆ ಬೆಲೆ ನಿಗದಿಪಡಿಸಿದ ಸಂದರ್ಭದಲ್ಲಿ ಸಕ್ಕರೆ ಬೆಲೆ ಕ್ವಿಂಟಾಲ್‌ಗೆ 3600 ಇತ್ತು. ಕಬ್ಬು ಕಟಾವು ಆದ ಬಳಿಕ ಈ ಬೆಲೆ 2400ಕ್ಕೆ ಕುಸಿದಿದೆ. ಹೀಗಾಗಿ ಕಬ್ಬಿಗೆ ಹಿಂದೆ ಹೇಳಿದ್ದಷ್ಟು ದರ ಕೊಡಲು ಸಾಧ್ಯವಿಲ್ಲ’ ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಬೂಬು ಹೇಳುತ್ತಿದ್ದಾರೆ. ಅಲ್ಲದೆ ಹಿಂದೆ ಹೇಳಿದಷ್ಟು ದರ ಕೊಟ್ಟರೆ ಕಾರ್ಖಾನೆಗಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ ಎನ್ನುತ್ತಿದ್ದಾರೆ ಸಕ್ಕರೆ ಕಾರ್ಖಾನೆಗಳ ಮಾಲೀಕರು.

ಆದರೆ, ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ಎಥೆನಾಲ್‌ನ ಪ್ರಮಾಣ, ಅದರ ವರಮಾನದ ಬಗ್ಗೆ ಸಕ್ಕರೆ ಕಾರ್ಖಾನೆಗಳು ಮಾತನಾಡುತ್ತಿಲ್ಲ. ಸಕ್ಕರೆ ಕಾರ್ಖಾನೆಗಳ ಮೇಲೆ ಸಕ್ಕರೆ ಇಲಾಖೆಗೆ ಹಿಡಿತವಿಲ್ಲ. ಇಲಾಖೆಯ ಅಧಿಕಾರಿಗಳು ಕಾರ್ಖಾನೆಗಳು ನೀಡುವ ತಪ್ಪು ಲೆಕ್ಕವನ್ನು ಪರಿಶೀಲಿಸುವ ಗೋಜಿಗೂ ಹೋಗುವುದಿಲ್ಲ. ಹೀಗಾಗಿ ನೂರಾರು ಕೋಟಿ ಬಾಕಿ ಹಣ ಬರಬೇಕಿದ್ದರೂ ಸರಕಾರದ ದಾಖಲೆಗಳಲ್ಲಿ ಕೆಲವೇ ಕೋಟಿಗಳ ಬಾಕಿಯ ಲೆಕ್ಕವಿದೆ. ಇದು ಸಕ್ಕರೆ ಕಾರ್ಖಾನೆಗಳು ಹಾಗೂ ಸಕ್ಕರೆ ಇಲಾಖೆ ಅಧಿಕಾರಿಗಳು ಒಟ್ಟಾಗಿ ಸೇರಿ ರೈತರಿಗೆ ಮಾಡುತ್ತಿರುವ ದ್ರೋಹ ಎಂಬುದು ರೈತ ಮುಖಂಡರ ಆರೋಪ.

ನಿಗದಿಯಾಗಿರುವ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ದರದಂತೆ ಬಾಕಿ ಕೊಡಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಭೆಯಲ್ಲಿ ಭರವಸೆ ನೀಡಿದ್ದಾರೆ. 2018-19ನೇ ಸಾಲಿಗೆ ಟನ್ ಕಬ್ಬಿಗೆ 2,612 ರೂಪಾಯಿ ಎಫ್‌ಆರ್‌ಪಿಯನ್ನು ಸಕ್ಕರೆ ಇಲಾಖೆ ನಿಗದಿಪಡಿಸಿದೆ. ಆದರೆ, ಸಕ್ಕರೆ ಉತ್ಪಾದನೆಯ ಆಧಾರದ ಮೇಲೆ ಎಫ್‌ಆರ್‌ಪಿಗಿಂತ ಹೆಚ್ಚಿನ ದರವನ್ನು ಕಾರ್ಖಾನೆಗಳು ರೈತರಿಗೆ ನೀಡಬೇಕಿದೆ. ಶೇಕಡ 10ರಷ್ಟು ಸಕ್ಕರೆ ಉತ್ಪಾದನೆಯನ್ನು ನೀಡುವಂತಹ ಕಬ್ಬಿಗೆ ಪ್ರತಿ ಟನ್‌ಗೆ 2,750 ರೂಪಾಯಿಯನ್ನು ಸರಕಾರವೇ ನಿಗದಿಪಡಿಸಿದೆ. ಶೇಕಡ10ಕ್ಕಿಂತಲೂ ಹೆಚ್ಚು ಸಕ್ಕರೆ ಉತ್ಪಾದನೆ ನೀಡುವ ಕಬ್ಬಿಗೆ ಪ್ರತಿ ಶೇಕಡಾ ಒಂದಕ್ಕೆ ಟನ್‌ಗೆ 275ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಬೇಕಿದೆ. ಶೇಕಡ 9.5ಕ್ಕಿಂತ ಕಡಿಮೆ ಸಕ್ಕರೆ ಉತ್ಪಾದನೆ ನೀಡುವ ಕಬ್ಬಿಗೂ ಪ್ರತಿ ಟನ್‌ಗೆ2,612 ರೂಪಾಯಿ ದರ ನೀಡಬೇಕು ಎಂದು ಸಕ್ಕರೆ ಇಲಾಖೆ ಹೇಳಿದೆ.

ಆದರೆ, ಈ ಲೆಕ್ಕಾಚಾರಗಳನ್ನೆಲ್ಲಾ ಸಕ್ಕರೆ ಕಾರ್ಖಾನೆಗಳು ಬಹುತೇಕ ಮರೆತಂತಿವೆ. ಎಫ್‌ಆರ್‌ಪಿ ಹಾಗೂ ಹೆಚ್ಚುವರಿ ದರದ ವಿಚಾರದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರನ್ನು ಶೋಷಿಸುತ್ತಲೇ ಬರುತ್ತಿವೆ. ಸಕ್ಕರೆ ಉತ್ಪಾದನೆ ಹೆಚ್ಚಾಗಿರುವ ಕಬ್ಬಿಗೂ ಎಫ್‌ಆರ್‌ಪಿ ದರವನ್ನೇ ನಿಗದಿ ಮಾಡುವ ಕಾರ್ಖಾನೆಗಳು ಕಡೇ ಪಕ್ಷ ಎಫ್‌ಆರ್‌ಪಿ ಹಣವನ್ನೂ ನೀಡದೆ ಬಾಕಿ ಉಳಿಸಿಕೊಂಡು ರೈತರನ್ನು ಸತಾಯಿಸುತ್ತಿವೆ. ಹೀಗಾಗಿಯೇ ಕಬ್ಬು ದರ ಹಾಗೂ ಬಾಕಿ ವಿಚಾರದಲ್ಲಿ ರೈತರು ಪದೇ ಪದೇ ಬೀದಿಗಿಳಿದು ಪ್ರತಿಭಟನೆ ನಡೆಸುವ ಅನಿವಾರ್ಯ ಸೃಷ್ಟಿಯಾಗಿದೆ.

ಹಾಗೆ ನೋಡಿದರೆ ರೈತರ ಕಷ್ಟ ಕೇಳಬೇಕಾದ ಜನಪ್ರತಿನಿಧಿಗಳ ಕೈಯಲ್ಲೇ ಸಕ್ಕರೆ ಕಾರ್ಖಾನೆಗಳಿವೆ. ‘ಚುನಾವಣಾ ತಂತ್ರ’ಗಳನ್ನು ಬಳಸಿ ಆಯ್ಕೆಯಾಗುವ ಈ ಜನಪ್ರತಿನಿಧಿ ‘ಸಾಹುಕಾರ’ರಿಗೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲದಿರುವುದನ್ನು ರೈತರ ಸಭೆಗೆ ಗೈರಾಗಿರುವುದೇ ತಿಳಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ರೈತರಿಗೆ ಸುವರ್ಣಸೌಧದ ಗೇಟ್‌ ಬೀಗ ಮುರಿಯದೆ, ಮಂತ್ರಿ- ಮುಖ್ಯಮಂತ್ರಿಗಳಿಗೆ ಬಯ್ಯದೆ, ರಸ್ತೆ ತಡೆದು ಪ್ರತಿಭಟನೆ ನಡೆಸದೆ ಸದ್ಯ ಬೇರೆ ದಾರಿ ಕಾಣುತ್ತಿಲ್ಲ.

ತಾನು ರೈತರ ಮಗ ಎಂದು ಹೇಳಿಕೊಳ್ಳುವ ಎಚ್‌.ಡಿ. ಕುಮಾರಸ್ವಾಮಿ ಈ ಸಂದರ್ಭದಲ್ಲಿ, “ರೈತರು ಕಾನೂನು ಕೈಗೆತ್ತಿಕೊಳ್ಳುವುದನ್ನು ನಾನು ಸಹಿಸುವುದಿಲ್ಲ” ಎಂದು ಸಿಡಿಮಿಡಿಗೊಳ್ಳುವ ಬದಲು ರೈತರ ಸಂಕಷ್ಟವನ್ನು ಹಾಗೂ ಪರಿಸ್ಥಿತಿ ಅರ್ಥ ಮಾಡಿಕೊಂಡು ಈ ಸಮಸ್ಯೆಯನ್ನು ನಿಭಾಯಿಸಬೇಕಿದೆ.

ಸಾಂದರ್ಭಿಕ ಚಿತ್ರ

Also read: ವಿಧಾನಸೌಧ ಮುತ್ತಿಗೆಗೆ ಮುಂದಾದ ರೈತರು; ಅನ್ನದಾತರೇಕೆ ಪದೇಪದೇ ಬೀದಿಗಿಳಿಯಬೇಕು?