ಸ್ಮೃತಿ ಇರಾನಿ ಸೀರೆ, ರಾಹುಲ್‌ ಗಾಂಧಿ ಬಾಳೆಗಿಡ & ಅಮೇಠಿ ಮೆಗಾ ಫೈಟ್‌
COVER STORY

ಸ್ಮೃತಿ ಇರಾನಿ ಸೀರೆ, ರಾಹುಲ್‌ ಗಾಂಧಿ ಬಾಳೆಗಿಡ & ಅಮೇಠಿ ಮೆಗಾ ಫೈಟ್‌

ದೀಪಾವಳಿ ನೆಪದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಠಿಯ ಹೆಂಗಳೆಯರಿಗೆ 10,000 ಸೀರೆಗಳನ್ನು ಹಂಚಿದ್ದಾರೆ. 

2019ರ ಲೋಕಸಭೆ ಚುನಾವಣೆಗೆ ಇನ್ನೂ ಅರ್ಧವರ್ಷಕ್ಕೂ ಹೆಚ್ಚಿನ ಸಮಯವಿದೆ. ಆದರೆ ಅದಾಗಲೇ ಉತ್ತರ ಪ್ರದೇಶದ ಪ್ರತಿಷ್ಠಿತ ಕ್ಷೇತ್ರ ಅಮೇಠಿಯಲ್ಲಿ ಪರೋಕ್ಷ ಚುನಾವಣಾ ಪ್ರಚಾರ ಚಾಲನೆ ಪಡೆದುಕೊಂಡಿದೆ. ಇದಕ್ಕೆ ಚಾಲನೆ ನೀಡಿದವರು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ. ಇದನ್ನು ಮುಂದುವರಿಸುತ್ತಿರುವವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ.

ಹೇಳಿ ಕೇಳಿ ಅಮೇಠಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಕ್ಷೇತ್ರ. ಅವರ ಚಿಕ್ಕಪ್ಪ ಸಂಜಯ್‌ ಗಾಂಧಿ, ತಂದೆ ರಾಜೀವ್‌ ಗಾಂಧಿ, ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ಕ್ಷೇತ್ರವಿದು. ಕಾಂಗ್ರೆಸ್‌, ಅದರಲ್ಲೂ ಮುಖ್ಯವಾಗಿ ನೆಹರೂ-ಗಾಂಧೀ ಕುಟುಂಬ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಕ್ಷೇತ್ರ ಅಮೇಠಿ.

2004ರಲ್ಲಿ ಇಲ್ಲಿ ರಾಹುಲ್‌ ಗಾಂಧಿ ಚುನಾವಣೆಗೆ ಸ್ಪರ್ಧಿಸಲು ಆರಂಭಿಸಿದ ನಂತರವೂ ಅವರ ಗೆಲುವಿನ ಅಂತರ ಯಾವತ್ತೂ 2-3 ಲಕ್ಷ ಮತಗಳಲ್ಲೇ ಇರುತ್ತಿತ್ತು. ಹೀಗಿರುವಾಗಲೇ 2014ರಲ್ಲಿ ಅವರ ವಿರುದ್ಧ ಈ ಭದ್ರ ಕೋಟೆಯಲ್ಲಿ ಇಬ್ಬರು ಖ್ಯಾತನಾಮರು ಸ್ಪರ್ಧೆಗೆ ಧುಮುಕಿದರು. ಒಬ್ಬರು ಹಾಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ; ಮತ್ತೊಬ್ಬರು ಹಿಂದಿ ಲೈವ್‌ ಕಾನ್ಸರ್ಟ್‌ಗಳ ಬಾದ್‌ ಷಾ ಕುಮಾರ್‌ ವಿಶ್ವಾಸ್‌. ಎಎಪಿಯ ಕುಮಾರ್‌ ವಿಶ್ವಾಸ್‌ ಅವರಂತೂ ಅಮೇಠಿಯಲ್ಲೇ ಮನೆ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಆದರೆ ಮತದಾನ ಮುಗಿದಾಗ ವಿಶ್ವಾಸ್‌ ಕೇವಲ 25 ಸಾವಿರ ಮತಗಳನ್ನು ಪಡೆದು ಠೇವಣಿಯನ್ನೂ ಕಳೆದುಕೊಳ್ಳಬೇಕಾಯಿತು.

ಆದರೆ ಸ್ಮೃತಿ ಇರಾನಿ ಪ್ರಬಲ ಸ್ಪರ್ಧೆಯನ್ನೇ ನೀಡಿದ್ದರು. ಅವರ ಪರವಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅಮೇಠಿಯಲ್ಲಿ ಭರ್ಜರಿ ಸಮಾವೇಶವನ್ನು ಉದ್ದೇಶಿಸಿ ಭಾಷಣವನ್ನೂ ನಡೆಸಿದ್ದರು. ಈ ಮೂಲಕ ಗಣ್ಯರ ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳ ನಾಯಕರು ಪ್ರಚಾರದಿಂದ ದೂರ ಉಳಿಯುವ ಅಲಿಖಿತ ನಿಯಮವನ್ನೂ ಅವರು ಮುರಿದಿದ್ದರು. ಪರಿಣಾಮ ಇರಾನಿ 3,00,748 ಮತಗಳನ್ನು ಗಳಿಸಿ ರಾಹುಲ್‌ ಗಾಂಧಿ ವಿರುದ್ಧ ಸುಮಾರು 1.08 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದರು. ಆದರೆ ಕಾಂಗ್ರೆಸ್‌ ಕೋಟೆಯಲ್ಲೇ ಇಂಥಹದ್ದೊಂದು ಪ್ರಬಲ ಸ್ಪರ್ಧೆ ನೀಡಿ ಉತ್ಸುಕರಾಗಿದ್ದ ಇರಾನಿ ಸೋಲಿನಿಂದ ಕಂಗೆಡದೆ ಕ್ಷೇತ್ರದ ಜತೆ ನಿರಂತರ ಸಂಪರ್ಕವನ್ನು ಉಳಿಸಿಕೊಂಡಿದ್ದಾರೆ. ಇದೀಗ 2019ರಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿರುವ ಅವರು ಅದಕ್ಕಾಗಿ ಮತದಾರರಿಗೆ ಕೊಡುಗೆಗಳನ್ನು ನೀಡಲು ಮುಂದಾಗಿದ್ದಾರೆ.

ದೀಪಾವಳಿ ನೆಪದಲ್ಲಿ ಅಮೇಠಿಯ 10,000 ಹೆಂಗಳೆಯರಿಗೆ ಅವರು ಸೀರೆಗಳನ್ನು ಹಂಚಿದ್ದಾರೆ. ‘ಇದು ಚುನಾವಣೆ ನೆಪಕ್ಕಾಗಿ ಅಲ್ಲ. ಹಬ್ಬದ ಸಂಭ್ರಮ ಹಂಚಿಕೊಳ್ಳಲ್ಲಷ್ಟೇ’ ಎಂದು ಬಿಜೆಪಿ ನಾಯಕರು ಇದಕ್ಕೆ ಸಮಜಾಯಿಷಿ ನೀಡುತ್ತಿರುವರಾದರೂ ಇದು ಚುನಾವಣಾ ಪೂರ್ವ ಕೊಡುಗೆಯಾಗಿಯೇ ಕಾಣುತ್ತಿದೆ.

ಒಂದು ಕಡೆ ಸ್ಮೃತಿ ಇರಾನಿ ದೀಪಾವಳಿ ನೆಪದಲ್ಲಿ ಸೀರೆ ಹಂಚಿದರೆ ರಾಹುಲ್‌ ಗಾಂಧಿ ಬಾಳೆಗಿಡ ಹಿಡಿದಿದ್ದಾರೆ. ತಮ್ಮ ಅಜ್ಜಿ ಹಾಗೂ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ 101ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರು ಸೋಮವಾರ 40,000 ಬಾಳೆ ಗಿಡಗಳ ವಿತರಣೆಗೆ ಚಾಲನೆ ನೀಡಿದ್ದಾರೆ. ಇವು ಇಸ್ರೇಲ್‌ ತಂತ್ರಜ್ಞಾನದಲ್ಲಿ ಸಿದ್ಧವಾದ ಬಾಳೆ ಗಿಡಗಳಾಗಿದ್ದು ಹೆಚ್ಚಿನ ಇಳುವರಿ ನೀಡುತ್ತವೆ.

ಕಳೆದ ಬಾರಿ ರಾಹುಲ್‌ ಗಾಂಧಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಸ್ಥಳೀಯ ರೈತರು ಇಲ್ಲಿ ಬಾಳೆ ಬೆಳೆಯುವ ಅವಕಾಶ ಇದೆ ಎಂಬುದನ್ನು ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಜಿ-9 ತಳಿಯ ಬಾಳೆ ಗಿಡಗಳನ್ನು ರೈತರಿಗೆ ವಿತರಿಸಲಾಗುತ್ತಿದೆ ಎಂದು ಪಕ್ಷದ ವಕ್ತಾರ ಅಂಶು ಅವಸ್ತಿ ಹೇಳಿದ್ದಾರೆ. ಡಿಸೆಂಬರ್‌ 9ರಂದು ಸೋನಿಯಾ ಗಾಂಧಿ ಹುಟ್ಟುಹಬ್ಬವಿದ್ದು ಅಲ್ಲಿಯವರೆಗೂ ಈ ವಿತರಣೆ ನಡೆಯಲಿದೆ.

ಸಾಮಾನ್ಯವಾಗಿ ಚುನಾವಣಾ ಸಂದರ್ಭದಲ್ಲಿ ಈ ರೀತಿಯ ಬಹಿರಂಗ ಉಡುಗೊರೆಗಳ ವಿತರಣೆಗಳಿಗೆ ನೀತಿ ಸಂಹಿತೆ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಉಭಯ ನಾಯಕರು ಚುನಾವಣೆಗೂ ಮೊದಲೇ ತಮ್ಮ ಉಡೊಗೊರೆಗಳ ಹಂಚುವಿಕೆಗೆ ಚಾಲನೆ ನೀಡಲಿದ್ದಾರೆ. ಬಹುಶಃ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಉಭಯ ನಾಯಕರು ಒಂದು ಹಂತದ ಪ್ರಚಾರ, ಕೊಡುಗೆಗಳನ್ನು ನೀಡಿ ಮುಗಿಸುವಂತೆ ಕಾಣಿಸುತ್ತಿದೆ.

ಅಷ್ಟಕ್ಕೂ ಈ ಉಡುಗೊರೆಗಳು ಫಲ ನೀಡುತ್ತವಾ ಎಂಬುದಕ್ಕೆ 2019ರ ಚುನಾವಣೆಯೇ ಉತ್ತರ ನೀಡಲಿದೆ.