samachara
www.samachara.com
ಇದು ಸಿಬಿಐ ಬೃಹನ್ನಾಟಕ: ‘ಆಸ್ತಾನಾ ತನಿಖೆಯಲ್ಲಿ ದೋವಲ್ ಮಧ್ಯಪ್ರವೇಶ, ಕೇಂದ್ರ ಸಚಿವರಿಗೆ ಕಿಕ್‌ಬ್ಯಾಕ್‌’
COVER STORY

ಇದು ಸಿಬಿಐ ಬೃಹನ್ನಾಟಕ: ‘ಆಸ್ತಾನಾ ತನಿಖೆಯಲ್ಲಿ ದೋವಲ್ ಮಧ್ಯಪ್ರವೇಶ, ಕೇಂದ್ರ ಸಚಿವರಿಗೆ ಕಿಕ್‌ಬ್ಯಾಕ್‌’

ಅಂದುಕೊಂಡಂತೆ ನಡೆದಿದ್ದರೆ ನಾನು ರಾಕೇಶ್‌ ಅಸ್ತಾನಾ ಮನೆಯ ಮೇಲೆ ದಾಳಿ ನಡೆಸಬೇಕಾಗಿತ್ತು. ಇದಕ್ಕೆ ದೋವಲ್‌ ಅಡ್ಡಗಾಲು ಹಾಕಿದರು ಎಂದು ಸಿಬಿಐ ಜಂಟಿ ನಿರ್ದೇಶಕ ಸಿನ್ಹಾ ಹೇಳಿದ್ದಾರೆ.

ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ ಪಿಟಿಷನ್ನಲ್ಲಿ ಸಿಬಿಐ ಜಂಟಿ ನಿರ್ದೇಶಕ ಎಂ.ಕೆ. ಸಿನ್ಹಾ ಸ್ಫೋಟಕ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ದೋವಲ್‌ ಮಧ್ಯ ಪ್ರವೇಶಿಸಿದ್ದರು. ಜತೆಗೆ ಕೇಂದ್ರ ಸಚಿವರೊಬ್ಬರಿಗೆ ಕೋಟಿಗಳ ಲೆಕ್ಕದಲ್ಲಿ ಲಂಚ ಪಾವತಿಯಾಗಿತ್ತು ಎಂದವರು ಮಾಹಿತಿ ನೀಡಿದ್ದಾರೆ. ಸರ್ವೋಚ್ಛ ನ್ಯಾಯಾಲಯಕ್ಕೆ ಸವಿವರವಾದ ಪಿಟಿಷನ್‌ನ್ನು ಅವರು ಸಲ್ಲಿಸಿದ್ದು, ಸರಕಾರ, ಉನ್ನತ ಅಧಿಕಾರಿಗಳು ಮತ್ತು ಭ್ರಷ್ಟರ ನಂಟನ್ನು ತೆರೆದಿಟ್ಟಿದ್ದಾರೆ.

ಅಂದುಕೊಂಡಂತೆ ನಡೆದಿದ್ದರೆ ನಾನು ರಾಕೇಶ್‌ ಅಸ್ತಾನಾ ಮನೆಯ ಮೇಲೆ ದಾಳಿ ನಡೆಸಬೇಕಾಗಿತ್ತು. ಇದನ್ನು ದೋವಲ್‌ ತಡೆ ಹಿಡಿದರು. ಪ್ರಕರಣದಲ್ಲಿ ಮಧ್ಯವರ್ತಿಗಳಾಗಿದ್ದ ಇಬ್ಬರು ದೋವಲ್‌ ಅವರಿಗೆ ಆಪ್ತರಾಗಿದ್ದರು. ಇದೇ ವೇಳೆ ಸಿಬಿಐನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಹಾಯ ಮಾಡುವಂತೆ ಕೇಂದ್ರ ಸಚಿವ ಹರಿಭಾಯಿ ಪರ್ತಿಭಾಯಿ ಚೌಧರಿ ಅವರಿಗೆ ಕೋಟಿಗಳ ಲೆಕ್ಕದಲ್ಲಿ ಲಂಚ ಪಾವತಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಉದ್ಯಮಿ ಸನಾ ಸತೀಶ್‌ ಬಾಬು ತನಗೆ ತಿಳಿಸಿದ್ದರು ಎಂಬುದಾಗಿ ಸಿನ್ಹಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್‌ನಲ್ಲಿ ಸಿಬಿಐ ನಿರ್ದೇಶಕರಾದ ಅಲೋಕ್‌ ವರ್ಮಾ, ವಿಶೇಷ ನಿರ್ದೇಶಕ ಆಸ್ತಾನಾ ಅವರುಗಳ ಜತೆ ಸಿನ್ಹಾ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಸಿನ್ಹಾರನ್ನು ನಾಗ್ಪುರಕ್ಕೆ ವರ್ಗವಣೆ ಮಾಡಲಾಗಿದ್ದು ಇದನ್ನು ಪ್ರಶ್ನಿಸಿ ಅವರು ಸುಪ್ರಿಂ ಕೋರ್ಟ್‌ ಮೊರೆ ಹೋಗಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಅವರು ಈ ಪಿಟಿಷನ್‌ ಸಲ್ಲಿಸಿದ್ದಾರೆ.

ಸಿಬಿಐ ಜಂಟಿ ನಿರ್ದೇಶಕ ಎಂಕೆ ಸಿನ್ಹಾ
ಸಿಬಿಐ ಜಂಟಿ ನಿರ್ದೇಶಕ ಎಂಕೆ ಸಿನ್ಹಾ
/ಸ್ಟೇಟ್‌ ಟೈಮ್ಸ್‌

ಪ್ರಧಾನ ಮಂತ್ರಿ ಕಾರ್ಯಾಲಯದ ಪಾತ್ರ:

ರಾ ಅಧಿಕಾರಿ ಸಮಂತ್ ಗೋಯಲ್‌ ಅವರು ಪಾಲ್ಗೊಂಡಿದ್ದ ಸಂಭಾಷಣೆಯೊಂದರ ಮೇಲೆ ಕಣ್ಗಾವಲು ಇರಿಸಲಾಗಿತ್ತು. ಅದರಲ್ಲಿ ಅವರು, “ಸಿಬಿಐ ವಿಷಯವನ್ನು ಪಿಎಂಒ ನಿರ್ವಹಣೆ ಮಾಡಿದೆ,” ಎಂದಿದ್ದರು. ಅದೇ ರಾತ್ರಿ ಆಸ್ತಾನಾ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸಿಬಿಐ ತಂಡವನ್ನು ತೆಗೆದು ಹಾಕಲಾಯಿತು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಪಿಟಿಷನ್ನಲ್ಲಿ ಮತ್ತೊಂದು ಬಾಂಬ್‌ ಹಾಕಿರುವ ಸಿನ್ಹಾ, ಮೋಯಿನ್‌ ಖುರೇಷಿ ಪ್ರಕರಣದಲ್ಲಿ ಕೇಂದ್ರ ಜಾಗೃತ ದಳದ ಆಯುಕ್ತ ಕೆವಿ ಚೌಧರಿ ಸನಾ ಸತೀಶ್‌ ಬಾಬು ಅವರನ್ನು ಭೇಟಿಯಾಗಿದ್ದರು. ಮತ್ತು ಕೇಂದ್ರ ಕಾನೂನು ಕಾರ್ಯದರ್ಶಿ ಸುರೇಶ್‌ ಚಂದ್ರ ಅವರು ಕೂಡ ಸನಾರನ್ನು ನವೆಂಬರ್‌ 11ರಂದು ಸಂಪರ್ಕಿಸಿ ಪ್ರಭಾವ ಬೀರಲ ಯತ್ನಿಸಿದ್ದಾರೆ ಎಂದು ದೂರಿದ್ದಾರೆ. ಸಿಬಿಐ ತಿಕ್ಕಾಟದ ಬಗ್ಗೆ ಸಿವಿಸಿ ತನಿಖೆ ಆರಂಭಗೊಂಡ ಬಳಿಕ ನಡೆದ ಬೆಳವಣಿಗೆಗಳು ಇವು ಎಂದವರು ವಿವರಿಸಿದ್ದಾರೆ.

ಅಜಿತ್‌ ದೋವಲ್‌ ನಂಟು:

ಆಸ್ತಾನಾ ಪ್ರಕರಣದಲ್ಲಿ ಬಂಧಿತನಾದ ಮಧ್ಯವರ್ತಿ, “ಮನೋಜ್‌ ಪ್ರಸಾದ್‌ ಮತ್ತು ಅವರ ತಂದೆ ನಿವೃತ್ತ ರಾ ಜಂಟಿ ಕಾರ್ಯದರ್ಶಿ ದಿನೇಶ್ವರ್‌ ಪ್ರಸಾದ್‌ ಹಾಲಿ ಎನ್‌ಎಸ್‌ಎ ಅಜಿತ್‌ ದೋವಲ್‌ ಜತೆ ನಿಕಟ ಸಂಬಂಧ ಹೊಂದಿದ್ದಾರೆ. ಸಿಬಿಐ ಕೇಂದ್ರ ಕಚೇರಿಗೆ ಬಂಧಿಸಿ ಕರೆ ತಂದಾಗ ಈ ಮಾತನ್ನು ಸ್ವತಃ ಮನೋಜ್‌ ಒಪ್ಪಿಕೊಂಡಿದ್ದ. ದೋವಲ್‌ ಜತೆ ನಿಕಟ ಸಂಬಂಧ ಇದ್ದೂ ಬಂಧಿತನಾದ ಬಗ್ಗೆ ಆತ ಅಚ್ಚರಿಗೊಂಡಿದ್ದ, ಜತೆಗೆ ಕೋಪಗೊಂಡಿದ್ದ,” ಎಂದು ಸಿನ್ಹಾ ವಿವರಿಸಿದ್ದಾರೆ.

ಬಹುಮುಖ್ಯ ಖಾಸಗಿ ವಿಷಯವೊಂದರಲ್ಲಿ ಸಹೋದರ ಸೋಮೇಶ್‌ ಮತ್ತು ಸಮಂತ್‌ ಗೋಯಲ್‌ ಜತೆ ಸೇರಿ ಅಜಿತ್‌ ದೋವಲ್‌ ಅವರಿಗೆ ಮನೋಜ್‌ ಸಹಾಯ ಮಾಡಿದ್ದನಂತೆ.

ಸೆಪ್ಟೆಂಬರ್‌ ಟು ನವೆಂಬರ್‌:

ರಾಕೇಶ್‌ ಆಸ್ತಾನಾ ವಿರುದ್ಧದ ತನಿಖೆ ಸಿಬಿಐನಲ್ಲಿ ಜಾರಿಯಲ್ಲಿರುವಾಗ ಮಿಂಚಿನ ಬೆಳವಣಿಗೆಗಳು ನಡೆಯುತ್ತಿದ್ದವು. ಪಿಟಿಷನ್‌ನಲ್ಲಿ ಸಿನ್ಹಾ ಹೇಳಿರುವ ಪ್ರಕಾರ ಫ್ರಾನ್ಸ್‌ನ ಲಿಯಾನ್‌ನಲ್ಲಿ ಪ್ರತಿನಿಧಿಯೊಬ್ಬರನ್ನು ನೇಮಿಸುವ ಇಂಟರ್‌ಪೋಲ್‌ನಲ್ಲಿ ಚುನಾವಣೆ ನಡೆಯಲಿತ್ತು. ಇದಕ್ಕೆ ಇದಕ್ಕೆ ಎ.ಕೆ. ಶರ್ಮಾ ನಾಮನಿರ್ದೇಶಿತರಾಗಿದ್ದರು. ಆದರೆ ಭಾರತ ಈ ಚುನಾವಣೆಯಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿಯಿತು ಎಂದಿದ್ದಾರೆ.

ಅಂದುಕೊಂಡಂತೆ ನಡೆದಿದ್ದರೆ “ಈ ವರ್ಷದ ನವೆಂಬರ್‌ 3ನೇ ವಾರದಲ್ಲಿ ಚುನಾವಣೆ ನಡೆಯಬೇಕಾಗಿತ್ತು. ಸೆಪ್ಟೆಂಬರ್‌ನಲ್ಲಿ ಎಕೆ ಶರ್ಮಾ ಸಭೆಯೊಂದಕ್ಕೆ ವಿದೇಶಕ್ಕೆ ತೆರಳಬೇಕಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅನಿರೀಕ್ಷಿತ ರೀತಿಯಲ್ಲಿ ಟ್ರಿಪ್‌ ರದ್ದಾಯಿತು. ನಂತರ ಭಾರತದ ಸ್ಪರ್ಧೆಯಿಂದ ಹಿಂದೆ ಸರಿಯಲಿದೆ ಎಂಬ ಮಾಹಿತಿ ನೀಡಲಾಯಿತು,” ಎಂದು ಸಿನ್ಹಾ ಹೇಳಿದ್ದಾರೆ.

ಆಸ್ತಾನಾ ಮೇಲೆ ಎಫ್‌ಐಆರ್‌:

ಅಕ್ಟೋಬರ್‌ 15ರಂದು ರಾಕೇಶ್‌ ಆಸ್ತಾನಾ ಅವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿತ್ತು. ಇದಾದ ಬಳಿಕ ಅಕ್ಟೋಬರ್ 17ರಂದು ಎನ್‌ಎಸ್‌ಎಗೆ ಅಲೋಕ್‌ ವರ್ಮಾ ಎಫ್‌ಐಆರ್‌ ದಾಖಲಿಸಿರುವ ಮಾಹಿತಿ ನೀಡಿದರು. ಅದೇ ರಾತ್ರಿ ಎಫ್‌ಐಆರ್‌ ದಾಖಲಾಗಿರುವುದನ್ನು ಎನ್‌ಎಸ್‌ಎ ರಾಕೇಶ್‌ ಆಸ್ತಾನಾ ಅವರ ಗಮನಕ್ಕೆ ತಂದರು. ಅವತ್ತು ತಮ್ಮನ್ನು ಬಂಧಿಸದಂತೆ ಎನ್‌ಎಸ್‌ಎ ಬಳಿ ರಾಕೇಶ್‌ ಆಸ್ತಾನಾ ಮನವಿ ಮಾಡಿಕೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ‘ನೀಲಿ ಕಣ್ಣಿನ ಹುಡುಗ’ ರಾಕೇಶ್‌ ಆಸ್ತಾನಾ.
ಪ್ರಧಾನಿ ನರೇಂದ್ರ ಮೋದಿ ‘ನೀಲಿ ಕಣ್ಣಿನ ಹುಡುಗ’ ರಾಕೇಶ್‌ ಆಸ್ತಾನಾ.
/ಎನ್‌ಡಿಟಿವಿ

ಇದೆಲ್ಲಾ ನಡೆದ ಬಳಿಕ ಅಕ್ಟೋಬರ್‌ 20ರಂದು ಡಿವೈಎಸ್‌ಪಿ ದೇವೆಂದರ್‌ ಕುಮಾರ್‌ ಮನೆ ಮೇಲೆ ದಾಳಿ ನಡೆಸಲಾಯಿತು. ಆಗ ನಿರ್ದೇಶಕರು ತಮಗೆ ದಾಳಿ ನಿಲ್ಲಿಸುವಂತೆ ಸೂಚನೆ ನೀಡಿದರು. ಈ ಬಗ್ಗೆ ನಿರ್ದೇಶಕರನ್ನು ಕೇಳಿದಾಗ, ಈ ನಿರ್ದೇಶನ ದೋವಲ್‌ ಅವರಿಂದ ಬಂದುದಾಗಿ ಹೇಳಿದರು. ಈ ಮೂಲಕ ಆಸ್ತಾನಾ ಮನೆ ಮೇಲೆ ದಾಳಿ ನಡೆಯಲಿಲ್ಲ ಎಂದಿದ್ದಾರೆ.

ಇದಾದ ಬಳಿಕ ವಿಶೇಷ ದಳದ ಇನ್ಸ್‌ಪೆಕ್ಟರ್‌ ಒಬ್ಬರು ಕರೆ ಮಾಡಿ ಮನೋಜ್‌ ಬಂಧಿತರಾಗಿದ್ದಾರಾ ಎಂಬ ಮಾಹಿತಿ ಪಡೆದುಕೊಂಡರು. ಮುಂದೆ ಪರಿಶೀಲನೆಗೆ ಒಳಪಡಿಸಿದಾಗ ಸಂಪುಟ ಕಾರ್ಯದರ್ಶಿ ಕಡೆಯಿಂದ ಈ ಪ್ರಶ್ನೆ ಬಂದಿತ್ತು.

ನಂತರ ಅಕ್ಟೋಬರ್‌ 23ರಂದು ತಮಗೆ ಡಿಐಜಿಯೊಬ್ಬರು, “ಯಾರೋ ಒಬ್ಬರು ಸಮಂತ್‌ ಗೋಯಲ್‌ ಅವರ ಬಳಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಅದಕ್ಕೆ ಗೋಯಲ್ ‘ವಿಷಯಗಳನ್ನು ಎಎಂಒ ನಿರ್ವಹಣೆ ಮಾಡುತ್ತಿದೆ. ಮತ್ತು ಎಲ್ಲವೂ ಸರಿಯಾಗಿದೆ,’ ಎಂಬ ಮಾಹಿತಿ ನೀಡಿದ್ದರು. ಅದೇ ರಾತ್ರಿ ಸಂಪೂರ್ಣ ತನಿಖಾ ತಂಡವನ್ನೇ ವರ್ಗವಾಣೆ ಮಾಡಲಾಯಿತು,” ಎಂದು ಸಿನ್ಹಾ ಬಿಡಿ ಬಿಡಿಯಾಗಿ ವಿವರಿಸಿದ್ದಾರೆ.

“ಜೂನ್‌ 2018ರ ಮೊದಲ 15 ದಿನದಲ್ಲಿ ಯಾವುದೋ ಒಂದು ದಿನ ಕೆಲವು ಕೋಟಿಗಳಷ್ಟು ಹಣವನ್ನು ಹಾಲಿ ಕಲ್ಲಿದ್ದಲು ಮತ್ತು ಗಣಿ ಸಚಿವ ಹರಿಭಾಯಿ ಪರ್ತಿಭಾಯಿ ಚೌಧರಿಯವರಿಗೆ ನೀಡಲಾಗಿದೆ. ಸನಾ ಪ್ರಕಾರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ಮೂಲಕ ಹಿರಿಯ ಅಧಿಕಾರಿಗಳ ನಡುವೆ ಚೌಧರಿ ಮಧ್ಯಪ್ರವೇಶಿಸಿದ್ದಾರೆ. ವಿಪುಲ್‌ ಎಂಬ ಅಹಮದಾಬಾದ್‌ ವ್ಯಕ್ತಿಯ ಮೂಲಕ ಹಣವನ್ನು ಪಾವತಿ ಮಾಡಲಾಗಿದೆ. ಈ ಎಲ್ಲಾ ವಿಚಾರಗಳನ್ನು ಸನಾ ನನಗೆ ಅಕ್ಟೋಬರ್‌ 20ರ ಮುಂಜಾನೆ ಹೇಳಿದ್ದರು. ನಾನು ತಕ್ಷಣ ವಿಷಯವನ್ನು ನಿರ್ದೇಶಕರು ಮತ್ತು ಎಡಿ (ಎಕೆ ಶರ್ಮಾ) ಗಮನಕ್ಕೆ ತಂದೆ ,” ಎಂದವರು ಸಿಬಿಐನಲ್ಲಿ ನಡೆದ ಬೆಳವಣಿಗೆಯನ್ನು ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

ಸನಾ ಸತೀಶ್‌ ಬಾಬು ಮೇಲೆ ಕಣ್ಣು:

ಅಲೋಕ್‌ ವರ್ಮಾ ಮತ್ತು ಆಸ್ತಾನಾ ಇಬ್ಬರ ಮೇಲೂ ಲಂಚ ಸ್ವೀಕರಿಸಿದ ಪ್ರಕರಣವಿದ್ದು ಇದನ್ನು ತನಿಖೆಗೆ ಒಪಡಿಸುವಂತೆ ಸುಪ್ರೀಂ ಕೋರ್ಟ್‌ ಸಿವಿಸಿಗೆ ಸೂಚಿಸಿದೆ. ‘ಎರಡೂ ಪ್ರಕರಣಗಳಲ್ಲಿ ಸನಾ ಸತೀಶ್‌ ಬಾಬು ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಹೀಗಾಗಿ ಕೇಂದ್ರ ಕಾನೂನು ಕಾರ್ಯದರ್ಶಿ ಸುರೇಶ್‌ ಚಂದ್ರ ಅವರು ಸನಾ ಜತೆ ಸಂಪರ್ಕದಲ್ಲಿರಲು ಪದೇ ಪದೇ ಯತ್ನಿಸಿದ್ದಾರೆ. ಪ್ರಮುಖ ಸಾಕ್ಷ್ಯಗಳು ಮತ್ತು ದೂರದಾರರ ಮೇಲೆ ಪ್ರಭಾವ ಬೀರಲು ಯತ್ನಿಸಲಾಗಿದೆ,’ ಎಂದವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ನವೆಂಬರ್‌ 8ರಂದು ಸನಾ ಜತೆ ಸುರೇಶ್‌ ಚಂದ್ರ ಮಾತುಕತೆ ನಡೆಸಿದ್ದು ಈ ವೇಳೆ ‘ತಾನು ನೀರವ್‌ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‌ನಲ್ಲಿದ್ದೇನೆ. ಸಂಪುಟ ಕಾರ್ಯದರ್ಶಿ ಪಿಕೆ ಸಿನ್ಹಾ ಅವರ ಮೆಸೇಜನ್ನು ನಿನಗೆ ತಲುಪಸಿಲು ಕಳೆದ ನಾಲ್ಕೈದು ದಿನದಿಂದ ಯತ್ನಿಸುತ್ತಿದ್ದೆ’ ಎಂದು ಹೇಳಿದ್ದರು. ಕೇಂದ್ರ ಸರಕಾರ ನಿನಗೆ ಸಂಪೂರ್ಣ ರಕ್ಷಣೆ ನೀಡಲಿದೆ ಎಂದು ಕಾರ್ಯದರ್ಶಿಗಳು ಹೇಳಿದ್ದಾರೆ ಎಂಬ ಸಂದೇಶವನ್ನು ಸನಾಗೆ ನೀಡಿದ್ದರ. ನಂತರ ಮಂಗಳವಾರ (13)ರಂದು ದೊಡ್ಡ ಮಟ್ಟದ ಬದಲಾವಣೆಗಳಾಗಿದ್ದು , ಬುಧವಾರ (14)ರಂದು ಸನಾ ಸುರೇಶ್‌ ಚಂದ್ರರನ್ನು ಭೇಟಿಯಾಗಬೇಕು ಎಂದು ನಿರ್ಧಾರವಾಗಿತ್ತು,” ಎಂದಿದ್ದಾರೆ.

ಸಿವಿಸಿ ಮತ್ತು ಸನಾ ಭೇಟಿ:

ಸನಾ ಈ ಹಿಂದೆ ಸಿವಿಸಿ ಕೆವಿ ಚೌಧರಿಯವರನ್ನು ಮೋಯಿನ್‌ ಖುರೇಶಿ ಪ್ರಕರಣಲ್ಲಿ ಭೇಟಿಯಾಗಿದ್ದರು. ಭೇಟಿ ವೇಳೆ ಮೋಯಿನ್‌ ಖುರೇಷಿ ಪ್ರಕರಣ ಚರ್ಚೆಗೆ ಬಂದಿತ್ತು. ಅಂದೇ ಚೌಧರಿ ಆಸ್ತಾನರನ್ನು ಮನೆಗೆ ಕರೆಸಿಕೊಂಡು ಸನಾ ವಿರುದ್ಧ ಇರುವ ಸಾಕ್ಷಿಗಳ ಬಗ್ಗೆ ಆಸ್ತಾನಾ ಬಳಿ ಕೇಳಿ ತಿಳಿದುಕೊಂಡಿದ್ದರು. ಈ ವೇಳೆ ಅವರ (ಮೊಯೀನ್‌ ಖುರೇಷಿ-ಸನಾ) ಪ್ರಕರಣದಲ್ಲಿ ಹೆಚ್ಚಿನ ಸಾಕ್ಷ್ಯಗಳಿಲ್ಲ ಎಂದು ಆಸ್ತಾನಾ ತಿಳಿಸಿದ್ದರಂತೆ’ ಎಂದು ಸಿನ್ಹಾ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಇನ್ನು ಸಿಬಿಐ ವಿಶೇಷ ಘಟಕದ ಡಿಐಜಿ ಟವರ್‌ ಲೊಕೇಶನ್‌ ಪರಿಶೀಲನೆಗೆ ಒಳಪಡಿಸಿದಾಗ 2017ರ ಡಿಸೆಂಬರ್‌ 17ರಂದು ಸೋಮೇಶ್‌ ಪ್ರಸಾದ್ ಸಿಬಿಐ ಮತ್ತು ರಾ ಕಚೇರಿಗಳಿರುವ ಸಿಜಿಒ ಕಾಂಪ್ಲೆಕ್ಸ್‌ನಲ್ಲಿ ತಡರಾತ್ರಿವರೆಗೆ ಇದ್ದಿದ್ದನ್ನು ಸೂಚಿಸುತ್ತಿತ್ತು ಎಂದಿದ್ದಾರೆ. ಅಲ್ಲದೆೆ ಸೋಮೇಶ್‌ ದೆಹಲಿಗೆ ಭೇಟಿ ನೀಡಿದ್ದಾಗ ಸಮಂತ್‌ ಗೋಯಲ್‌ ಜತೆ 15, 16, 17ರಂದು ನಿರಮಂರ ಸಂಪರ್ಕದಲ್ಲಿದ್ದರು ಎಂಬ ಸತ್ಯಗಳನ್ನು ಸಿನ್ಹಾ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಪಿಟಿಷನ್‌ ಕೊನೆಯಲ್ಲಿ ತಾನು ಹೈಪ್ರೊಫೈಲ್‌ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದೆ ಎಂಬ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ. ತಮ್ಮ ವರ್ಗವಣೆ ಪ್ರೇರೇಪಿತ ಮತ್ತು ದೋಷಪೂರಿತ ಕ್ರಮ ಎಂದು ದೂರಿರುವ ಸಿನ್ಹಾ, ಪರಿಹಾರ ಸೂಚಿಸುವಂತೆ ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.

Also read: ಉದ್ಯಮಿ- ರಾ ಅಧಿಕಾರಿ-ಸಿಬಿಐ ವಿಶೇಷ ನಿರ್ದೇಶಕ: ಇದು ಬೇಲಿಯೇ ಎದ್ದು ಹೊಲ ಮೇಯಲು ಹೊರಟ ಕತೆ!

Join Samachara Official. CLICK HERE