samachara
www.samachara.com
ವಿಧಾನಸೌಧ ಮುತ್ತಿಗೆಗೆ ಮುಂದಾದ ರೈತರು; ಅನ್ನದಾತರೇಕೆ ಪದೇಪದೇ ಬೀದಿಗಿಳಿಯಬೇಕು?
COVER STORY

ವಿಧಾನಸೌಧ ಮುತ್ತಿಗೆಗೆ ಮುಂದಾದ ರೈತರು; ಅನ್ನದಾತರೇಕೆ ಪದೇಪದೇ ಬೀದಿಗಿಳಿಯಬೇಕು?

ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸುವ, ರೈತರನ್ನೂ ಆರ್ಥಿಕತೆಯ ಪಾಲುದಾರರು ಎಂದು ಗೌರವದಿಂದ ಕಾಣುವ ಕಣ್ಣು, ಹೃದಯ ಸರಕಾರಗಳಿಗೆ ಬರುವುದು ಯಾವಾಗ?

ದಯಾನಂದ

ದಯಾನಂದ

ಕಬ್ಬಿನ ಬಾಕಿ ಬಿಡುಗಡೆ ಹಾಗೂ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ಬೆಳಗಾವಿಯಲ್ಲಿ ಬೀದಿಗಿಳಿದಿದ್ದ ರೈತರ ಹೋರಾಟ ಈಗ ರಾಜಧಾನಿಗೆ ಬಂದು ತಲುಪಿದೆ. ಕಬ್ಬಿನ ವಿಚಾರವೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ಮುಂದಾಗಿದ್ದಾರೆ. ಇದಕ್ಕಾಗಿ ರಾಜ್ಯದ ವಿವಿಧ ಕಡೆಗಳಿಂದ ರೈತರು ಸೋಮವಾರ ಬೆಂಗಳೂರಿನಲ್ಲಿ ಜಮಾಯಿಸಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯದ ರೈತರು ನಗರ ರೈಲು ನಿಲ್ದಾಣದಿಂದ ಮೆರವಣಿಗೆ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ಕಬ್ಬಿನ ವಿಚಾರಕ್ಕೆ ಆರಂಭಗೊಂಡ ಈ ಬಾರಿಯ ರೈತ ಹೋರಾಟ ಈಗ ಶಕ್ತಿಕೇಂದ್ರ ವಿಧಾನಸೌಧದವರೆಗೂ ಬಂದು ನಿಂತಿದೆ.

ಯಾವುದೇ ಪ್ರತಿಭಟನಾಕಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರೂ ಅವರನ್ನು ಫ್ರೀಡಂ ಪಾರ್ಕ್‌ ಬಳಿ ತಡೆಯುವ 'ಸಂಪ್ರದಾಯ'ವನ್ನು ನಗರ ಪೊಲೀಸರು ಈ ಬಾರಿಯೂ ನಡೆಸಲಿದ್ದಾರೆ. ಅದಕ್ಕಾಗಿ ಪೊಲೀಸರು ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದಾರೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಡುವ ರೈತರನ್ನು ಫ್ರೀಡಂ ಪಾರ್ಕ್‌ಗೆ ಸೇರಿಸಲು ಶೇಷಾದ್ರಿ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ರಾಶಿ ಹಾಕಿಕೊಂಡಿದ್ದಾರೆ.

ರೈತರು ಘೋಷಣೆ ಕೂಗುತ್ತಾ ಮೆರವಣಿಗೆ ಬರುವುದು, ಸರಕಾರ, ಮಂತ್ರಿಗಳ ವಿರುದ್ಧ ಧಿಕ್ಕಾರ ಕೂಗುವುದು, ಹೋರಾಟ 'ತೀವ್ರ'ಗೊಂಡಾಗ ರೈತ ಮುಖಂಡರನ್ನು ವಿಧಾನಸೌಧಕ್ಕೆ ಕರೆಸಿಕೊಂಡು ಮಾತನಾಡಿ ಭರವಸೆಗಳನ್ನು ಕೊಟ್ಟು ಕಳಿಸುವುದು ಸರಕಾರಕ್ಕೆ ಮಾಮೂಲು. ಆದರೆ, ನೀಡಿದ ಭರವಸೆಗಳು ನಿಜಕ್ಕೂ ಜಾರಿಗೆ ಬರುತ್ತವೆಯೇ? ರೈತರ ಕಷ್ಟಗಳ ಪರಿಹಾರಕ್ಕೆ ನಿಜಕ್ಕೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕಾಳಜಿ ಇದೆಯೇ? ಪ್ರತಿ ಬಾರಿಯೂ ಬೆಳೆಗೆ ಸೂಕ್ತ ಬೆಲೆ ಕೊಡಿಸಿ, ಬೆಳೆ ವಿಮೆಯ ಪರಿಹಾರ ಬಿಡುಗಡೆ ಮಾಡಿಸಿ, ಬಾಕಿ ಬಿಡುಗಡೆ ಮಾಡಿಸಿ ಎಂದು ರೈತರು ಸರಕಾರದ ಮುಂದೆ ಅಂಗಲಾಚುತ್ತಲೇ ಇರಬೇಕೇ?

ಸದ್ಯದ ಪರಿಸ್ಥಿತಿ ನೋಡಿದರೆ ರೈತರು ಹೀಗೆ ತನ್ನ ಮುಂದೆ ಅಂಗಲಾಚುತ್ತಲೇ ಇರಬೇಕು ಎಂದು ಸರಕಾರ ಬಯಸುತ್ತಿದೆಯೋ ಏನೋ ಎನಿಸುತ್ತಿದೆ. ಬೆಳಗಾವಿಯಲ್ಲೇ ಇತ್ಯರ್ಥಪಡಿಸಬಹುದಾಗಿದ್ದ ಕಬ್ಬಿನ ಸಮಸ್ಯೆಯನ್ನು ಬೆಳೆಯಲು ಬಿಟ್ಟವರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ. ತಮ್ಮದೇ ಸಂಪುಟದ ಸಚಿವರ, ಸಹೋದ್ಯೋಗಿ ಶಾಸಕರ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಉಳಿದಿದ್ದರೂ, ತಾವು ಮುಖ್ಯಮಂತ್ರಿ ಎಂಬ ಹುದ್ದೆಯಲ್ಲಿದ್ದರೂ, “ಇದಕ್ಕೆಲ್ಲಾ ನಾನೇನು ಮಾಡೋಕಾಗುತ್ತೆ” ಎಂಬ ಬೇಜವಾಬ್ದಾರಿಯ ಮಾತಾಡಿರುವ ಕುಮಾರಸ್ವಾಮಿ ಈಗ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಾನೇ ಖುದ್ದು ಬೆಳಗಾವಿಗೆ ಬಂದು ಕಬ್ಬು ಬೆಳೆಗಾರರ ಜತೆಗೆ ಮಾತನಾಡುತ್ತೇನೆ ಎಂದು ಹೇಳಿ 'ಮಾತು ಮುರಿದ' ಕುಮಾರಸ್ವಾಮಿ ಮೇಲೆ ಹಾಗೂ ರೈತರ ವಿಚಾರಗಳಲ್ಲಿ ಭರವಸೆಗಳನ್ನಷ್ಟೇ ನೀಡುತ್ತಾ ಬರುತ್ತಿರುವ ಸರಕಾರದ ವಿರುದ್ಧ ಸಿಡಿದೆದ್ದಿರುವ ರೈತರು ಈಗ ರಾಜಧಾನಿಯಲ್ಲಿ ಬೀದಿಗಿಳಿದಿದ್ದಾರೆ. ರೈತರು ಹೀಗೆ ಬೀದಿಗಿಳಿಯುವುದೂ ಹೊಸದಲ್ಲ, ಸರಕಾರ ಭರವಸೆಗಳ ಬೆಣ್ಣೆ ಸವರಿ ಅವರನ್ನು ವಾಪಸ್‌ ಕಳಿಸುವುದೂ ಹೊಸದಲ್ಲ. ಇಲ್ಲಿರುವ ನಿಜವಾದ ಸಮಸ್ಯೆ ಎಂದರೆ ತಾನು ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಇಚ್ಛಾಶಕ್ತಿ ಯಾವ ಸರಕಾರಗಳಿಗೂ ಇಲ್ಲದಿರುವುದು.

ಸಾಲಮನ್ನಾ ಯೋಜನೆಯ ಶೀಘ್ರ ಅನುಷ್ಠಾನ, ಬೆಳೆನಷ್ಟ ಪರಿಹಾರ, ಫಸಲ್‌ ಭೀಮಾ ಯೋಜನೆಯಲ್ಲಿ ರೈತರಿಗೆ ಬರಬೇಕಾದ ಪರಿಹಾರ ಹಣದ ಬಾಕಿ ಬಿಡುಗಡೆ, ಮುಕ್ತ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವುದು, ಸಂಕಷ್ಟದಲ್ಲಿರುವ ರೈತರನ್ನು ಕೈ ಹಿಡಿಯಲು ವಿಶೇಷ ಪ್ಯಾಕೇಜ್‌ ಘೋಷಣೆ, ರೈತರಿಗೆ 12 ಗಂಟೆ ಗುಣಮಟ್ಟದ ವಿದ್ಯುತ್‌ ನೀಡಬೇಕು ಎಂಬ ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ವಿಧಾನಸೌಧ ಮುತ್ತಿಗೆಗೆ ಮುಂದಾಗಿದ್ದೇವೆ. ಮಂತ್ರಿಗಳು ನಮ್ಮನ್ನು ಕರೆಸಿ ಏನು ಮಾತನಾಡುತ್ತಾರೋ ನೋಡೋಣ. 
- ಚಾಮರಸ ಮಾಲಿಪಾಟೀಲ್‌, ರೈತ ಸಂಘದ ರಾಜ್ಯಾಧ್ಯಕ್ಷ

ಸರಕಾರ ಹೊರಗಿನ ಹೂಡಿಕೆದಾರರಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಿ, ಎಸಿ ರೂಮ್‌ಗಳಲ್ಲಿ ಸಭೆ ಮಾಡಿ ಜಮೀನು, ನೀರು, ವಿದ್ಯುತ್‌, ಉತ್ತಮ ರಸ್ತೆ ಎಲ್ಲವನ್ನೂ ಉಚಿತವಾಗಿ ನೀಡಿ ಕೈಗಾರಿಕೆಗೆ ಉತ್ತೇಜನ ನೀಡಿ ಆರ್ಥಿಕ ಅಭಿವೃದ್ಧಿ ಸಾಧಿಸುವ ಮಾತನಾಡುತ್ತದೆ. ಆದರೆ, ತಮ್ಮದೇ ನೆಲದಲ್ಲಿರುವ ರೈತರು ಕೂಡಾ ಆರ್ಥಿಕತೆಯ ಮುಖ್ಯ ಅಂಗ ಎಂಬುದು ಸರಕಾರಕ್ಕೆ ಗೊತ್ತಿಲ್ಲವೇ? ರೈತರ ಬೆಳೆಗಳ ಸಂಯೋಜನೆ, ಎಲ್ಲಾ ರೈತರೂ ಒಂದೇ ಬೆಳೆ ಬೆಳೆದು ಬೆಲೆ ಕುಸಿಯದಂತೆ ನೋಡಿಕೊಳ್ಳುವ, ಬೆಳೆಯೊಂದರ ಇಳುವರಿ ಹೆಚ್ಚಾದರೆ ಅದರ ಮಾರುಕಟ್ಟೆಗೆ ಪರ್ಯಾಯ ವ್ಯವಸ್ಥೆ ಮಾಡುವ, ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಆದ್ಯತೆ ನೀಡುವ, ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕೆಲಸಕ್ಕೆ ಯಾಕೆ ಸರಕಾರಗಳು ಮುಂದಾಗುತ್ತಿಲ್ಲ?

“ರೈತರು ಬೀದಿಗಳಿದು ಸರಕಾರದ ವಿರುದ್ಧ ಧಿಕ್ಕಾರ ಕೂಗಿದಾಗ ಮಾತ್ರ ಸರಕಾರಕ್ಕೆ ರೈತರು ಇರುವುದು ಕಾಣುತ್ತದೆ. ರೈತರ ಸಮಸ್ಯೆಗಳಿಗೆ ದೀರ್ಫಕಾಲಿಕ ಪರಿಹಾರಗಳನ್ನು ಹುಡುಕುವ ಮನಸ್ಸು ಯಾವ ಸರಕಾರಗಳಿಗೂ ಇಲ್ಲ. ಬೆಲೆ, ಬಾಕಿ, ನೀರಾವರಿ, ವಿದ್ಯುತ್‌ ಎಲ್ಲಾ ವಿಚಾರಗಳಲ್ಲೂ ರೈತರಿಗೆ ಆಗುತ್ತಿರುವುದು ಅನ್ಯಾಯವೇ” ಎನ್ನುತ್ತಾರೆ ರೈತ ಮುಖಂಡ ಕುರಬೂರು ಶಾಂತಕುಮಾರ್‌.

“ರಾಜ್ಯದಲ್ಲಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ಶಾಸಕರು, ಮಂತ್ರಿಗಳು. ಸರಕಾರದಲ್ಲಿ ಇರುವವರೇ ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಸರಕಾರ ರೈತರಿಗೆ ಏನೇ ಭರವಸೆಗಳನ್ನು ನೀಡಿದರೂ ಅವು ಪ್ರಾಮಾಣಿಕವಾಗಿ ಜಾರಿಗೆ ಬರುವುದಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಕಾಯುವ ಸರಕಾರಕ್ಕೆ ರೈತರ ಹಿತಾಸಕ್ತಿ ಮುಖ್ಯವಾಗುತ್ತಲೇ ಇಲ್ಲ. ಯಾವ ಸರಕಾರಗಳೂ ರೈತರ ವಿಚಾರದಲ್ಲಿ ಕೊಟ್ಟ ಮಾತುಗಳನ್ನು ಈಡೇರಿಸುತ್ತಿಲ್ಲ” ಎಂದು ದೂರುತ್ತಾರೆ ಅವರು.

“ಕಬ್ಬು ಬೆಳೆಗಾರರನ್ನು ಕಾಯಲು ಇದ್ದ ಕಬ್ಬು ಖರೀದಿ ಮತ್ತು ಸರಬರಾಜು ನಿಯಂತ್ರಣ ಕಾಯ್ದೆಯನ್ನು (ಎಸ್ಎಪಿ ಕಾಯ್ದೆ) ಸರಕಾರ ಕೈಬಿಟ್ಟಿದೆ. ಕಬ್ಬು ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿತ್ತು. ಆದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ರಕ್ಷಿಸಲು ಈ ಕಾಯ್ದೆಯನ್ನೇ ಕೈಬಿಡಲಾಗಿದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿ ನಡೆಯುತ್ತಿವೆ. ಹಲವು ಕಾರ್ಖಾನೆಗಳಲ್ಲಿ ಎಥೆನಾಲ್‌ ಉತ್ಪಾದನೆ ಹೆಚ್ಚಳಕ್ಕೆ ಅವಕಾಶವಿದೆ. ರೈತರ ವಿಚಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನಿಜಕ್ಕೂ ಬದ್ಧತೆ ಇದ್ದರೆ ಮತ್ತೆ ಎಸ್‌ಎಪಿ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಲಿ” ಎಂಬ ಆಗ್ರಹ ಅವರದ್ದು.

ರೈತರೇನೋ ಮತ್ತೆ ನ್ಯಾಯ ಸಿಗುವ ನಿರೀಕ್ಷೆಯಲ್ಲಿ ರಾಜಧಾನಿಗೆ ಬಂದಿದ್ದಾರೆ. ಒತ್ತಡ ಹೆಚ್ಚಾದರೆ ಸರಕಾರ ಮತ್ತಷ್ಟು ಬಣ್ಣ ಬಣ್ಣದ ಭರವಸೆಗಳನ್ನು ಅನ್ನದಾತರಿಗೆ ನೀಡುತ್ತದೆ. ರೈತರು ಪ್ರತಿಭಟನೆ ಮುಗಿಸಿಕೊಂಡು ತಮ್ಮ ತಮ್ಮ ಊರುಗಳಿಗೆ ಮರಳುತ್ತಾರೆ. ಆದರೆ, ರೈತರ ಸಮಸ್ಯೆಗಳೇನೂ ಇಲ್ಲಿಗೆ ನಿಲ್ಲುವುದಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸುವ, ರೈತರನ್ನೂ ಆರ್ಥಿಕತೆಯ ಪಾಲುದಾರರು ಎಂದು ಗೌರವದಿಂದ ಕಾಣುವ ಕಣ್ಣು, ಹೃದಯ ಸರಕಾರಗಳಿಗೆ ಬರುವುದು ಯಾವಾಗ?