samachara
www.samachara.com
ಉತ್ತರ ಕನ್ನಡದ ವಿದ್ಯಾರ್ಥಿಗಳಿಗೆ ಪ್ರತಿ ದಿನ  ‘ಬಸ್ ಪಾಸ್’ ನರಕ ದರ್ಶನ
COVER STORY

ಉತ್ತರ ಕನ್ನಡದ ವಿದ್ಯಾರ್ಥಿಗಳಿಗೆ ಪ್ರತಿ ದಿನ ‘ಬಸ್ ಪಾಸ್’ ನರಕ ದರ್ಶನ

ಎಷ್ಟೋ ನಿರ್ವಾಹಕರು ಪಾಸ್ ಉಳ್ಳ ವಿದ್ಯಾರ್ಥಿಗಳು ಬಸ್ ಏರಬೇಡಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ, ಬಾಗಿಲು ಎಳೆದುಕೊಂಡು ರೈಟ್ ಹೇಳುತ್ತಾರೆ.

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಗ್ರಾಮೀಣ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಬಸ್ ಪಾಸ್ ನೀಡಿ ಘನ ಕಾರ್ಯ ಮಾಡುತ್ತಿದ್ದೇವೆ ಎಂದು ಎಲ್ಲ ಸರಕಾರಗಳೂ ಹೇಳಿಕೊಳ್ಳುತ್ತವೆ. ಆದರೆ ಗ್ರೌಂಡ್ ರಿಯಾಲಿಟಿ ಬೇರೆಯದೇ ಇದೆ. ಉತ್ತರ ಕನ್ನಡ ಜಿಲ್ಲೆ ವಿಚಾರಕ್ಕೆ ಬಂದಾಗ ‘ದೇವರು ಕೊಟ್ಟರೂ ಪೂಜಾರಿ ಕೊಡನು’ ಎನ್ನುವಂತಾಗಿದೆ ಈ ಉಚಿತ ಬಸ್‌ ಪಾಸ್‌ನ ಪರಿಸ್ಥಿತಿ.

“ಈಗ ಬಸ್ ಹತ್ತಿದರೆ ಟಿಕೆಟ್ ತೊಗೋಬೇಕು; ಈ ಬಸ್ ಹೊರಡಲು ಇನ್ನೂ 15 ನಿಮಿಷ ತಡವಿದೆ. ಮೊದಲು ಟಿಕೆಟ್ ಪಡೆಯುವವರಿಗೆ ದಾರಿ ಬಿಡಿ. ನೀನು ಬಸ್ಸಿನ ಕೆಳಗೆ ಸೈಡ್‌ನಲ್ಲಿ ನಿಂತುಕೊ. ಬಸ್ ಹೊರಡುವಾಗ ಜಾಗವಿದ್ದರೆ ಮಾತ್ರ ಹತ್ತಬಹುದು. ಇಲ್ಲಾಂದ್ರೆ ಬೇರೆ ಬಸ್ ನೋಡ್ಕೊ,” ಎಂದು ಒಂದೇ ಸ್ವರದಲ್ಲಿ ಪಾಸ್ ತೋರಿದ ವಿಂದ್ಯಾಳೆದರು ಕಂಡಕ್ಟರ್‌ ತನ್ನ ದೌಲತ್ತು ಮೆರೆದ. ಆತನ ‘ಕಂಡಕ್ಟರ್‌ಗಿರಿ’ಗೆ ಹೆದರಿದ ವಿಂದ್ಯಾ ಇನ್ನೇನು ಕಣ್ಣಲ್ಲಿ ನೀರು ಕೆಳಗಿಳಿಯುವ ಸ್ಥಿತಿಯಲ್ಲಿ ಮಣ ಭಾರದ ಸ್ಕೂಲ್ ಬ್ಯಾಗ್ ಹಿಡಿದು ಬಸ್ಸಿಂದ ಕೆಳಗಿಳಿದಳು. ಬಿರು ಬಿಸಿಲಿನಲ್ಲಿ ಬಸ್ ಬಾಗಿಲ ಪಕ್ಕ ನಿಂತವಳಿಗೆ ಅಳು ತಡೆದುಕೊಳ್ಳಲಾಗಲಿಲ್ಲ. ಒಮ್ಮೆ ಬಿಕ್ಕಳಿಸಿ ಅತ್ತಳು.

ವಿಂದ್ಯಾ ಗ್ರಾಮೀಣ ಭಾಗದ ಬಡ ಕೂಲಿಕಾರರ ಕುಟುಂಬದವಳು. ಅಪ್ಪ, ಅಮ್ಮ ಕೂಲಿ ಮಾಡಿ ಮಗಳನ್ನು ಓದಿಸುತ್ತಿದ್ದರು. ಬಸ್ ಇಳಿದ ನಂತರ 2 ಕಿ.ಮೀ. ಮಲೆನಾಡಿನ ಕಾಡಿನ ರಸ್ತೆಯಲ್ಲಿ ನಡೆದು ಆಕೆ ಮನೆ ಸೇರಬೇಕು. ಈ ಬಸ್ ಬಿಟ್ಟರೆ ಮುಂದಿನ ಬಸ್‌ ಬರುವುದು ಒಂದು ಗಂಟೆ ತಡವಾಗಿ. ಅದರಲ್ಲಿ ಹೋದರೆ ಮನೆ ತಲುಪುವಾಗ ಬರೋಬ್ಬರಿ 6 ಗಂಟೆಯಾಗುತ್ತದೆ. ಕಾಡಿನ ದಾರಿ ಬೇರೆ. ಒಬ್ಬಳೇ ಭಯದಲ್ಲಿ ಸಾಗಬೇಕು. ಎಲ್ಲಾ ಯೋಚಿಸಿ ಆಕೆಯ ಕಣ್ಣಂಚಿನ ನೀರು ಕೆನ್ನೆ ತೋಯಿಸಿತು.

ಇದು ಸಂಜೆಯ ಗೋಳು ಮಾತ್ರವಲ್ಲ. ಬೆಳಗ್ಗೆ ಎದ್ದರೆ ಮತ್ತದೇ ಕಂಡಕ್ಟರ್‌ಗಿರಿ. ಹಾಗಂತ ಇದು ಈಕೆಯೊಬ್ಬಳ ಸಮಸ್ಯೆಯೂ ಅಲ್ಲ. ಮಲೆನಾಡಿನ ಒಳಭಾಗದ ಹಳ್ಳಿಗಳಿಂದ ಬರುವ ಎಲ್ಲ ವಿದ್ಯಾರ್ಥಿಗಳ ನಿತ್ಯ ಪಾಡು ಇದು.

‘ಬಸ್ ಪಾಸ್’ ನರಕ ದರ್ಶನ:

ಬಹುತೇಕ ಬಸ್‌ಗಳ ನಿರ್ವಾಹಕರು ಬಸ್ ಪಾಸ್ ಹೊಂದಿದ ವಿದ್ಯಾರ್ಥಿಗಳನ್ನು ಅವಹೇಳನ ಮಾಡುತ್ತಾರೆ. ಮೊದಲು ಬಸ್ ಏರಿ ಸೀಟಿನಲ್ಲಿ ಕೂತಿದ್ದರೂ ಟಿಕೆಟ್ ಪಡೆಯುವವರು ಬಂದಾಗ ವಿದ್ಯಾರ್ಥಿಗಳನ್ನು ಸೀಟಿನಿಂದ ಎಬ್ಬಿಸಿ ಕೂರಿಸುತ್ತಾರೆ. ಮಣ ಭಾರದ ಸ್ಕೂಲ್ ಬ್ಯಾಗ್ ಹೊತ್ತೂ ಇವರು ಬಸ್‌ನಲ್ಲಿ ನಿಲ್ಲಬೇಕಾಗುತ್ತದೆ. ಜೊತೆಯಲ್ಲಿ, ‘ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾರ್ಜನೆ ಮಾಡಬೇಕು. ಅಂದರೆ ಮಾತ್ರ ಜೀವನದಲ್ಲಿ ಮುಂದೆ ಬರುತ್ತೀರಿ,’ ಎಂಬ ಉಡಾಫೆಯ ಬಿಟ್ಟಿ ಸಲಹೆ ಬೇರೆ. ಬಸ್‌ನಲ್ಲಿ ಜಂಗುಳಿಯಾದರೆ ಪಾಸ್‌ನವರನ್ನು ಕೆಳಗಿಳಿಸಿದ ಪ್ರಸಂಗಗಳೂ ಬೇಕಾದಷ್ಟಿವೆ.

ಎಷ್ಟೋ ನಿರ್ವಾಹಕರು ಪಾಸ್ ಉಳ್ಳ ವಿದ್ಯಾರ್ಥಿಗಳು ಬಸ್ ಏರಬೇಡಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ, ಬಾಗಿಲು ಎಳೆದುಕೊಂಡು ರೈಟ್ ಹೇಳುತ್ತಾರೆ. ಅಂತೂ ಬಸ್ ಏರಿ, ನಿಂತು ಪ್ರಯಾಣಿಸಿ ಸ್ಕೂಲ್ ತಲುಪಿದರೆ ಮಕ್ಕಳಿಗೆ ಅವತ್ತು ಯುದ್ಧ ಗೆದ್ದ ಅನುಭವ.

ಒಂದೊಮ್ಮೆ ಬಸ್‌ ನಿಲ್ಲಲಿಲ್ಲ ಎಂದು ಪಕ್ಕದ ಊರಿನ ಬಸ್ ಹತ್ತಿ ಅದರಲ್ಲಿ ಹೋಗೋಣವೆಂದರೆ ಅದೂ ಸಾಧ್ಯವಿಲ್ಲ. ಪಕ್ಕದ ಊರಿಗೆ ಬರುವ ಬಸ್ ಹತ್ತಿದರೆ ಟಿಕೆಟ್ ತೆಗೆದುಕೊಳ್ಳಬೇಕು. ಪಾಸ್ ನಲ್ಲಿ ಉಲ್ಲೇಖಿಸಲಾದ ನಿಗದಿತ ಮಾರ್ಗದಲ್ಲಿ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಬಡ ಪಾಲಕರು ಮಕ್ಕಳಿಗೆ ಹಣ ನೀಡುವುದೇ ಕನಿಷ್ಠ. ಅದರಲ್ಲಿ ಹೀಗೆ ದಿನಾ ವೆಚ್ಚ ಮಾಡುವುದೂ ಸಾಧ್ಯವೇ ಇಲ್ಲ.

ವಿಫಲ ಯತ್ನಗಳು:

ಇಂಥಹದ್ದೊಂದು ಸಮಸ್ಯೆಯ ಪರಿಹಾರಕ್ಕೆ ಯತ್ನಗಳೇ ನಡೆದಿಲ್ಲ ಎಂದಲ್ಲ. ಹಲವು ಕಡೆ ಸಣ್ಣ ಪುಟ್ಟ ಹೋರಾಟಗಳನ್ನು ಮಾಡಲಾಗಿದೆ. ಆದರೆ ಮತ್ತೆ ವಾರ ಕಳೆದ ಮೇಲೆ ಅದೇ ಕಂಡಕ್ಟರ್‌ಗಿರಿ ಮರುಕಳುಹಿಸುತ್ತದೆ. ಕೆಲವು ಗ್ರಾಮ ಪಂಚಾಯತ್‌ಗಳು ಗ್ರಾಮ ಸಭೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೂ ಪ್ರಯೋಜನ ದೊರೆತಿಲ್ಲ. ಗ್ರಾಮ ಪಂಚಾಯತ್ ಠರಾವುಗಳನ್ನು ಸಾರಿಗೆ ಕಚೇರಿಯಲ್ಲಿ ಎಳ್ಳಷ್ಟೂ ಬೆಲೆಯಿಟ್ಟು ನೋಡುವುದಿಲ್ಲ. ಹಲವು ಕಡೆಗಳಲ್ಲಿ ಬೇಡಿಕೆಯ ಮೇರೆಗೆ ಬಸ್ ನಿಲುಗಡೆಗಳನ್ನು ಘೋಷಿಸಿದರೂ ಚಾಲಕರು, ನಿರ್ವಾಹಕರು ಅದಕ್ಕೆ ಕ್ಯಾರೇ ಅನ್ನದೇ ಬಸ್ ನಿಲ್ಲಿಸದೇ ಹೋಗುವುದೇ ಹೆಚ್ಚು.

“ಮಕ್ಕಳನ್ನು ಬಸ್ ಮೂಲಕ ಶಾಲೆಗೆ ಕಳುಹಿಸುವ ಗ್ರಾಮೀಣ ಪಾಲಕರಲ್ಲಿ ಹೆಚ್ಚಿನವರು ಕೃಷಿಕರು; ಮೇಲಾಗಿ ಅನಕ್ಷರಸ್ಥರು. ನಮಗೆ ಸಮಸ್ಯೆ ಪರಿಹಾರಕ್ಕೆ ಯಾರಲ್ಲಿ ದೂರಬೇಕೆಂಬುದೇ ತಿಳಿದಿಲ್ಲ,” ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ ಗಣಪತಿ ಗೌಡ ಸಣ್ಮನೆ.

ಅಂದ ಹಾಗೆ ಬಸ್ ಪಾಸ್‌ಗಳನ್ನು ಹೊಂದಿರುವ ವಿದ್ಯಾರ್ಥಿಗಳೇನು ಪುಕ್ಕಟೆ ಪ್ರಯಾಣಿಕರಲ್ಲ. ಸರಕಾರ ನಿಗದಿಪಡಿಸಿದ ಬೆಲೆ ನೀಡಿ ಪಾಸ್‌ ಪಡೆದಿರುತ್ತಾರೆ. ಜತೆಗೆ ಸರಕಾರವೂ ಜನರ ತೆರಿಗೆ ಹಣದಲ್ಲಿ ಒಂದಷ್ಟು ಭಾಗವನ್ನು ಕೆಎಸ್‌ಆರ್‌ಟಿಸಿಗೆ ಪಾವತಿ ಮಾಡುತ್ತದೆ. ಹೀಗಿದ್ದೂ ಬಸ್ ಪಾಸ್ ಪಡೆದು ಸ್ಕೂಲಿಗೆ ತೆರಳುವ ಸಂಭ್ರಮದಲ್ಲಿ ಅರಳು ಮನಸ್ಸಿನಿಂದ ಬರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಡಕ್ಟರ್‌ಗಿರಿ ಪ್ರಥಮ ದಿನವೇ ನರಕ ದರ್ಶನ ಮಾಡಿಸುತ್ತಿರುವುದು ಶೋಚನೀಯ.

ಇದು ಉತ್ತರ ಕನ್ನಡ ಜಿಲ್ಲೆಯೊಂದರ ಸಮಸ್ಯೆಯಲ್ಲ. ರಾಜ್ಯದ ಬಹುತೇಕ ಭಾಗಗಳಲ್ಲಿ ವಿದ್ಯಾರ್ಥಿಗಳು ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಮತ್ತು ಈ ಪರಿಸ್ಥಿತಿ ಬಹಳ ಕಾಲದಿಂದಲೂ ನಿರ್ದಯವಾಗಿ ಮುಂದುವರೆದಿದೆ. ಇದಕ್ಕೆ ಮುಕ್ತಿ ಯಾವಾಗ? ಎಂಬುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರಶ್ನೆ. ಇದಕ್ಕೆ ಉತ್ತರ ದೊರಕುವಲ್ಲಿ ಎಲ್ಲರೂ ಶ್ರಮಿಸಬೇಕಿದೆ. ಸದ್ಯಕ್ಕೆ ಇದಿಷ್ಟು ಸಾರಿಗೆ ಮಂತ್ರಿಗಳ ಗಮನಕ್ಕೆ.

ಚಿತ್ರ ಕೃಪೆ: ಸ್ಟಾರ್‌ ಆಫ್‌ ಮೈಸೂರು