ಕನಕಪುರ ರಸ್ತೆಯಿಂದ ದುಬೈವರೆಗೆ:   ಕಾರ್ಪೊರೇಟ್‌  ಆಧ್ಯಾತ್ಮದ ಬಿಳಿಯಾನೆ ರವಿಶಂಕರ್‌!  
COVER STORY

ಕನಕಪುರ ರಸ್ತೆಯಿಂದ ದುಬೈವರೆಗೆ: ಕಾರ್ಪೊರೇಟ್‌ ಆಧ್ಯಾತ್ಮದ ಬಿಳಿಯಾನೆ ರವಿಶಂಕರ್‌!  

‘ಸುದರ್ಶನ ಕ್ರಿಯೆ’ ಇಷ್ಟೊಂದು ಹಣದ ಪ್ರವಾಹವನ್ನೇ ಸೃಷ್ಟಿಸುತ್ತದೆ, ಅಂದಿಗೆ ಬರೀ ರವಿ ಶಂಕರ್‌ ಆಗಿದ್ದ ಹೆಸರು, ಭವಿಷ್ಯದಲ್ಲಿ 155 ದೇಶಗಳನ್ನು ವ್ಯಾಪಿಸಿಕೊಳ್ಳುತ್ತದೆ ಎಂಬ ಅಂದಾಜು ಬಹುಶಃ ಯಾರಿಗೂ ಇದ್ದಿರಲಿಕ್ಕಿಲ್ಲ. 

ಅದು 1982. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರವಿ ಶಂಕರ್‌ ಎಂಬ ವ್ಯಕ್ತಿ ಮೌನ ವ್ರತಕ್ಕೆ ಜಾರಿದ್ದರು. ಭದ್ರಾ ನದಿ ದಂಡೆಯಲ್ಲಿ ಬರೋಬ್ಬರಿ 10 ದಿನಗಳ ಕಾಲ ಈ ಧ್ಯಾನ ಪ್ರಕ್ರಿಯೆ ನಡೆಯಿತು. ಈ ಧ್ಯಾನದಲ್ಲಿ ಸುಂದರ ಪರಿಸರದ ನಟ್ಟ ನಡುವೆ ಅವರೊಂದು ‘ಉಸಿರಾಟದ ತಂತ್ರ’ವನ್ನು ಕಂಡುಕೊಂಡರಂತೆ. ಅದೇ ‘ಸುದರ್ಶನ ಕ್ರಿಯೆ’. ಹೀಗೆ ಆರಂಭವಾಗುತ್ತದೆ ಇವತ್ತಿನ ಟಿಪಿಕಲ್‌ ಕಾರ್ಪೋರೇಟ್‌ ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ ಎಂಬ ಹೆಸರಿನ ವ್ಯಕ್ತಿಯ ಧಾರ್ಮಿಕ ಚರಿತ್ರೆ.

ಅವತ್ತಿಗೆ ಮುಂದೊಂದು ದಿನ ಈ ‘ಸುದರ್ಶನ ಕ್ರಿಯೆ’ ಇಷ್ಟೊಂದು ಹಣದ ಪ್ರವಾಹವನ್ನೇ ಸೃಷ್ಟಿಸುತ್ತದೆ, ಅಂದಿಗೆ ಬರೀ ರವಿ ಶಂಕರ್‌ ಆಗಿದ್ದ ಹೆಸರು, ಭವಿಷ್ಯದಲ್ಲಿ 155 ದೇಶಗಳನ್ನು ವ್ಯಾಪಿಸಿಕೊಳ್ಳುತ್ತದೆ ಎಂಬ ಅಂದಾಜು ಬಹುಶಃ ಯಾರಿಗೂ ಇದ್ದಿರಲಿಕ್ಕಿಲ್ಲ; ಆಧ್ಯಾತ್ಮಕ ಜೀವಿ ರವಿ ಶಂಕರ್‌ಗೂ ಅಂತಹ ಕಲ್ಪನೆಗಳು ಇತ್ತೋ ಇಲ್ಲವೋ ಗೊತ್ತಿಲ್ಲ.

ಆದರೆ, ಇವತ್ತು ಅದೇ ರವಿಶಂಕರ್‌ ಯಾವ ಪರಿ ಬೆಳೆದು ಬಿಟ್ಟಿದ್ದಾರೆ ಎಂದರೆ ಇನ್ನೂ ಕೆಲವೇ ದಿನಗಳಲ್ಲಿ ಸಿಬಿಐ ಕೇಂದ್ರ ಕಚೇರಿಗೂ ಅವರು ಕಾಲಿಡಲಿದ್ದಾರೆ. ಆರೋಪಿಯಾಗಲ್ಲ; ಬದಲಿಗೆ ಒತ್ತಡದಲ್ಲಿರುವ ಸಿಬಿಐ ಅಧಿಕಾರಿಗಳ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡಲು, ತಮ್ಮ ಸುದರ್ಶನ ಕ್ರಿಯೆಯನ್ನು ದೇಶದ ಪ್ರಮುಖ ತನಿಖಾ ಸಂಸ್ಥೆಯ ಅಧಿಕಾರಿಗಳ ಮೇಲೆ ಪ್ರಯೋಗಿಸಲು;

ಇತ್ತೀಚೆಗೆ ಯುಎಇನ ಪುಜಹೈರಾಹ್‌ ಸಿಟಿಯಲ್ಲಿ ರವಿಶಂಕರ್‌ ಹಮ್ಮಿಕೊಂಡಿದ್ದ ಧ್ಯಾನ ಶಿಬಿರದಲ್ಲಿ 10,645 ಜನ ಭಾಗವಹಿಸಿದ್ದರು. ಈ ಮೂಲಕ ಮಧ್ಯ ಪ್ರಾಚ್ಯ ದೇಶದಲ್ಲಿ ಮೊದಲ ಧ್ಯಾನ ಶಿಬಿರ ಹಮ್ಮಿಕೊಂಡು ಮುಸ್ಲಿಂ ಬಾಹುಳ್ಯದ ದೇಶಗಳಿಗೂ ಅವರು ಕಾಲಿಟ್ಟಿದ್ದಾರೆ. ಒಟ್ಟು 4 ದಿನಗಳ ಪ್ರವಾಸ ಇನ್ನೂ ಮುಂದುವರಿದಿದ್ದು, ದುಬೈನಲ್ಲಿಯೂ ರವಿಶಂಕರ್ ಪ್ರವಚನ ಕಾರ್ಯಕ್ರಮ ನಡೆಯಲಿದೆ.

1956ರಲ್ಲಿ ಹುಟ್ಟಿದ ರವಿ ಶಂಕರ್‌ ಸುತ್ತ ಇಂತಹ ಹೈಪ್ರೊಫೈಲ್‌ ಕತೆಗಳು ನೂರಾರಿವೆ. ತಮಿಳುನಾಡಿನ ಪಾಪನಾಶಂನಲ್ಲಿ ಜನಿಸಿದ ಅವರು ನಾಲ್ಕು ವರ್ಷಕ್ಕೇ ಭಗವದ್ಗೀತೆ ಓದುತ್ತಿದ್ದರಂತೆ. ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಬೆಂಗಳೂರಿಗೆ ಬಂದ ರವಿಶಂಕರ್‌, ಬೆಂಗಳೂರು ವಿವಿಯಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದುಕೊಂಡರು. (ಅವರ 17ನೇ ವಯಸ್ಸಿಗೆ ಶಾಲೆ ಬಿಟ್ಟರು, ಪದವಿ ಪಡೆಯಲಿಲ್ಲ ಎಂಬ ವಾದವೂ ಇದೆ) ಅಷ್ಟರಲ್ಲಾಗಲೇ ಆಧ್ಯಾತ್ಮದತ್ತ ಮನಸ್ಸು ಹರಿಸಿದ್ದ ಅವರಿಗೆ ಸುಧಾಕರ ಚತುರ್ವೇದಿ ಮೊದಲ ಗುರುವಾಗಿದ್ದರು. ಬೆಂಗಳೂರಿಗೆ ಬಂದು ಓದು ಮುಗಿಸಿದ ಅವರು ಇದೇ ಆಧ್ಯಾತ್ಮದ ಬೆನ್ನು ಹತ್ತಿ ದೂರದ ಕೆನಡಾಗೆ ಹೊರಟು ನಿಂತರು.

ಮೂಲಗಳ ಪ್ರಕಾರ, ಅವತ್ತಿಗೆ ಬೆಂಗಳೂರಿನ ಬಸವನಗುಡಿಯ ಋಷಿ ಪ್ರಭಾಕರ್‌ ಕೆನಡಾದಲ್ಲಿ ಅಣು ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಧ್ಯಯನಕ್ಕೆ ತೆರಳಿದ್ದರು. ಅವರು ಅಲ್ಲಿ ಮಹರ್ಷಿ ಮಹೇಶ್‌ ಯೋಗಿಯ ಆಧ್ಯಾತ್ಮ ಸೆಳೆತಕ್ಕೆ ಸಿಕ್ಕಿದ್ದರು. ಅವತ್ತಿಗೆ ಮಹರ್ಷಿ ಮಹೇಶ್‌ ಯೋಗಿ ಎಂಬುದು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು. ಟೈಮ್‌ ಮ್ಯಾಗಜೀನ್ ಮುಖಪುಟದಲ್ಲಿ ಅವರ ಚಿತ್ರ ಪ್ರಕಟವಾಗಿತ್ತು. ಸ್ಟ್ಯಾನ್‌ಫೋರ್ಡ್‌ನಂಥ ಖ್ಯಾತನಾಮ ಯುನಿವರ್ಸಿಟಿಯಲ್ಲಿ ಅವರ ಕೋರ್ಸ್‌ಗಳಿತ್ತು. ಇದೇ ಮಹರ್ಷಿ ಯೋಗಿಯನ್ನು ತಮ್ಮ ಎರಡನೇ ಗುರುವಾಗಿ ಸ್ವೀಕರಿಸಿದ ರವಿಶಂಕರ್‌, ಅಣು ವಿಜ್ಞಾನಿ ಪ್ರಭಾಕರ್‌ ಸಹಾಯದಿಂದ ಕೆನಡಾ ತಲುಪಿದ್ದರು.

ಮಹರ್ಷಿ ಮಹೇಶ್‌ ಯೋಗಿ ಜತೆ ರವಿಶಂಕರ್‌.
ಮಹರ್ಷಿ ಮಹೇಶ್‌ ಯೋಗಿ ಜತೆ ರವಿಶಂಕರ್‌.

ಅಷ್ಟೊತ್ತಿಗಾಗಲೇ ಪ್ರಭಾಕರ್‌ ಕೆನಡಾದಲ್ಲಿ ಯೋಗಿಯವರ ಅಚ್ಚು ಮೆಚ್ಚಿನ ಶಿಷ್ಯರಾಗಿದ್ದರು. ಹೋದಲ್ಲಿ ಬಂದಲ್ಲೆಲ್ಲಾ ಯೋಗಿಗೆ ಅವರೇ ಸಾಥ್‌ ನೀಡುತ್ತಿದ್ದರು. ಇದೇ ವೇಳೆಗೆ ರವಿಶಂಕರ್‌ ವೇದ ಅಧ್ಯಯನದಲ್ಲಿ ವಿಶೇಷ ಆಸಕ್ತಿಗಳನ್ನು ತೋರಿಸಲು ಆರಂಭಿಸಿದರು. ಬೆನ್ನಿಗೆ, ‘ನಿಮ್ಮ ಜತೆ ನಾನು ಬರುತ್ತೇನೆ’ ಎಂದು ಗುರುಗಳಿಗೆ ತಿಳಿಸಿ ಅವರ ಜತೆ ಒಡನಾಟ ಆರಂಭಿಸಿದರು. ಆದರೆ ಅವರ ಟೀಕಾಕಾರರು ಮಾತ್ರ, ‘ರವಿಶಂಕರ್‌ ಮಹೇಶ್‌ ಯೋಗಿ ಹಿಂದೆ ಸೂಟ್‌ಕೇಸ್‌ ಹಿಡಿದು ಹೋಗುತ್ತಿದ್ದರಷ್ಟೇ. ಅವರೆಂದೂ ಮೆಚ್ಚಿನ ಶಿಷ್ಯರೇನಲ್ಲ’ ಎನ್ನುತ್ತಾರೆ. ಏನೇ ಇರಲಿ, ಕೊನೆಗೆ ರವಿಶಂಕರ್‌ ಮತ್ತು ಪ್ರಭಾಕರ್‌ ಹಾಗೂ ಗುರುವಿನಿಂದ ಬೇರೆಯಾಗಿ ತಮ್ಮ ದಾರಿಗಳನ್ನು ಕಂಡುಕೊಂಡರು.

ಕರ್ನಾಟಕದ ಮಕ್ಕಳಿಗೆ ವೇದಾಧ್ಯಯನ ತರಗತಿಯೊಂದನ್ನು ಹಮ್ಮಿಕೊಳ್ಳುವ ಸಂಬಂಧ ಯೋಗಿ ಜತೆ ರವಿಶಂಕರ್‌ಗೆ ಮನಸ್ತಾಪ ಉಂಟಾಗಿತ್ತು. ಅವತ್ತು ಅನಿವಾರ್ಯವಾಗಿ ರವಿಶಂಕರ್‌ ತಮ್ಮದೇ ಸ್ವಂತ ವೇದ ತರಗತಿಯನ್ನು ನಡೆಸಬೇಕಾಯಿತು. ಅಲ್ಲಿಗೆ ಯೋಗಿ ಮತ್ತು ರವಿಶಂಕರ್‌ ಸಂಬಂಧ ಶಾಶ್ವತವಾಗಿ ಹಳಸಿತು. ರವಿಶಂಕರ್‌ ಬೇಡಿಕೊಂಡರೂ ಮಹರ್ಷಿ ಮಹೇಶ್‌ ಯೋಗಿ ಮುಖ ನೋಡಲೂ ಸಿದ್ಧವಿರಲಿಲ್ಲ. ನೋವಿನಲ್ಲೇ ರವಿಶಂಕರ್‌ ತಮ್ಮದೇ ಹಾದಿ ಹಿಡಿಯುವ ಖಚಿತ ತೀರ್ಮಾನ ಮಾಡಿದರು. ಕರ್ನಾಟಕಕ್ಕೆ ವಾಪಸಾದರು; ಖಚಿತವಾಗಿ ಕರ್ನಾಟಕದ ಮಲೆನಾಡಿಗೆ ಬಂದರು.

ಕರ್ನಾಟಕಕ್ಕೆ ಬಂದವರೇ ಶಿವಮೊಗ್ಗದ ಭದ್ರಾ ನದಿ ದಂಡೆಗೆ ತೆರಳಿದರು ರವಿಶಂಕರ್‌. ಮೊದಲೇ ಹೇಳಿದಂತೆ ಸುದರ್ಶನ ಕ್ರಿಯೆ ಇಲ್ಲಿ ಹುಟ್ಟಿಕೊಂಡಿತು. ಅಲ್ಲಿಂದ ನೇರ ರವಿಶಂಕರ್‌ ಹಾರಿದ್ದು ಸ್ವಿಟ್ಜರ್‌ಲ್ಯಾಂಡ್‌ಗೆ. ಅಲ್ಲಿ ತಮ್ಮ ಮೊದಲ ಶಿಬಿರವನ್ನು ನಡೆಸಿ ಕ್ಯಾಲಿಫೋರ್ನಿಯಾದಲ್ಲಿ ಮತ್ತೊಂದು ಶಿಬಿರ ನಡೆಸಿದರು.

ಅಷ್ಟೊತ್ತಿಗಾಗಲೇ ಕನಕಪುರ ರಸ್ತೆಯಲ್ಲಿ ಬರಡು ನೆಲವೊಂದನ್ನು ಗುರುತಿಸಿ ಅವರ ತಂದೆ ಅದನ್ನು ಮಗನಿಗಾಗಿ ಖರೀದಿಸಿದ್ದರು. ಇದನ್ನು ಕೃಷಿ ಮಾಡಲೆಂದು ಒಬ್ಬರು ಖರೀದಿಸಿ ಅದು ಯಶಸ್ವಿಯಾಗದ ಹಿನ್ನೆಲೆಯಲ್ಲಿ ಹಾಗೇ ಇಟ್ಟುಕೊಂಡಿದ್ದರು. “ಅಲ್ಲೇ ಪಕ್ಕದಲ್ಲಿ ಕನ್ನಡ ಧ್ವಜ ನೀಡಿದ ಮಾ. ರಾಮಮೂರ್ತಿ ಬಾವಿ ತೋಡಲು ಹೋಗಿ ಮಣ್ಣು ಕುಸಿದು ಮಗನ ಸಮೇತ ಸಮಾಧಿಯಾಗಿದ್ದರು. ಹಾಗಾಗಿ ಆ ಜಮೀನನ್ನು ಖರೀದಿಸಲು ಯಾರೂ ಮನಸ್ಸು ಮಾಡಿರಲಿಲ್ಲ,” ಎನ್ನುತ್ತಾರೆ ರವಿಶಂಕರ್‌ ತಂದೆಯವರು ಅಂದು ನಡೆಸಿದ ಈ ಭೂ ಖರೀದಿಯನ್ನು ಹತ್ತಿರದಿಂದ ಬಲ್ಲವರು. ಕೊನೆಗೆ ಆ ಕೃಷಿಕರಿಂದ ಕಡಿಮೆ ಬೆಲೆಗೆ ಬೆಟ್ಟ ಗುಡ್ಡಗಳ, ಕಲ್ಲು ಮಣ್ಣಿನ ನೆಲವನ್ನು ಖರೀದಿಸಿದರು ರವಿಶಂಕರ್‌. ಈ ಜಮೀನಿನಲ್ಲಿ ಕೃಷಿ ಸಾಧ್ಯವಾಗಲಿಲ್ಲ. ಆದರೆ ಮುಂದೆ ಹುಲುಸಾದ ಆಧ್ಯಾತ್ಮದ ಬೆಳೆ ಬೆಳೆದರು ರವಿಶಂಕರ್‌.

ಇದಕ್ಕಾಗಿ ರವಿಶಂಕರ್‌ ನಾನಾ ಅವತಾರಗಳನ್ನು ತಾಳಿದರು. ‘ಸುದರ್ಶನ ಕ್ರಿಯೆ’ ಎಂದು ಶುರುವಿಟ್ಟುಕೊಂಡ ಉಸಿರಾಟ ವಿಧಾನಕ್ಕೆ ಪೇಟೆಂಟ್‌ ಪಡೆದುಕೊಂಡರು. 155 ದೇಶಗಳಿಗೆ ತಮ್ಮ ಶಾಖೆಗಳು ವಿಸ್ತರಿಸಿಕೊಂಡರು. ನೋಡ ನೋಡುತ್ತಲೇ ಕಣ್ಣೆದುರೇ ಆಗರ್ಭ ಶ್ರೀಮಂತಿಕೆಯ ಟಿಪಿಕಲ್‌ ಕಾರ್ಪೋರೇಟ್‌ ಆಧ್ಯಾತ್ಮ ಸಾಮ್ರಾಜ್ಯ ಎದ್ದು ನಿಂತಿತು. ಇದರಲ್ಲಿ ಎಲ್ಲಾ ರೀತಿಯ ಕಣ್ಕಟ್‌ ವ್ಯವಹಾರಗಳೂ ಇದ್ದವು.

ಉದಾಹರಣೆಗೆ; 2016ರ ಮಾರ್ಚ್‌ನಲ್ಲಿ ಆರ್ಟ್‌ ಆಫ್‌ ಲಿವಿಂಗ್‌ (ಎಓಎಲ್) ಯಮುನಾ ನದಿ ದಂಡೆ ಮೇಲೆ ‘ವರ್ಲ್ಡ್‌ ಕಲ್ಚರಲ್‌ ಫೆಸ್ಟಿವಲ್‌’ ಎಂಬ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಬರೋಬ್ಬರಿ 35 ಲಕ್ಷ ಜನ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಪರಿಸರ ನಾಶಕ್ಕೆ ಕಾರಣವಾಗಿದೆ ಎಂದು ಎನ್‌ಜಿಟಿ 5 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಆದರೆ ‘ದಂಡ ಕಟ್ಟಲು ನನ್ನಲ್ಲಿ ಹಣವೇ ಇಲ್ಲ’ ಎಂದಿದ್ದರು ಅಂದಾಜು ನೂರು ಕೋಟಿ ಆಸುಪಾಸಿನಲ್ಲಿ ಹಣ ಸುರಿದು ಸಮಾವೇಶ ಹಮ್ಮಿಕೊಂಡಿದ್ದ ರವಿಶಂಕರ್.

ಯಮುನಾ ನದಿ ದಂಡೆ ಮೇಲೆ ಹಮ್ಮಿಕೊಂಡಿದ್ದ ಅದ್ಧೂರಿ  ‘ವರ್ಲ್ಡ್‌ ಕಲ್ಚರಲ್‌ ಫೆಸ್ಟಿವಲ್‌’ ವೇದಿಕೆಯಲ್ಲಿ ರವಿಶಂಕರ್‌ ಮೋದಿ ಮತ್ತು ವಿಶ್ವದ ಖ್ಯಾತ ಗಣ್ಯರು.
ಯಮುನಾ ನದಿ ದಂಡೆ ಮೇಲೆ ಹಮ್ಮಿಕೊಂಡಿದ್ದ ಅದ್ಧೂರಿ  ‘ವರ್ಲ್ಡ್‌ ಕಲ್ಚರಲ್‌ ಫೆಸ್ಟಿವಲ್‌’ ವೇದಿಕೆಯಲ್ಲಿ ರವಿಶಂಕರ್‌ ಮೋದಿ ಮತ್ತು ವಿಶ್ವದ ಖ್ಯಾತ ಗಣ್ಯರು.
/ಶ್ರೀಶ್ರೀರವಿಶಂಕರ್‌ ಡಾಟ್‌ ಆರ್ಗ್.

ಈ ಸಂದರ್ಭದಲ್ಲಿ ಇವರ ಆರ್ಥಿಕ ವ್ಯವಹಾರಗಳ ಬೆನ್ನಿಗೆ ಬಿದ್ದಿತ್ತು ‘ಕ್ಯಾರವಾನ್’. ತನಿಖೆ ಇಳಿದಾಗ ಕ್ಯಾರವಾನ್‌ಗೆ ರವಿ ಶಂಕರ್ ಸಂಸ್ಥೆಯ ಅಗಾಧತೆ ಅರಿವಿಗೆ ಬಂದಿತ್ತು. ನಾಲ್ಕಾರು ಟ್ರಸ್ಟ್‌ಗಳು, ಅವುಗಳ ಹತ್ತಾರು ಉಪ ಟ್ರಸ್ಟ್‌ಗಳು, ನೂರಾರು ದೇಶಗಳನ್ನು ವ್ಯಾಪಿಸಿಕೊಂಡ ಆಧ್ಯಾತ್ಮ ಉದ್ಯಮದ ಗಾತ್ರ ಬೆಚ್ಚಿ ಬೀಳಿಸುವಂತಿತ್ತು. ಕೊನೆಗೂ ಸಂಸ್ಥೆಗಳ ಎಲ್ಲಾ ವ್ಯವಹಾರಗಳನ್ನು ಜಾಲಾಡಲು ಸಾಧ್ಯವಾಗಲಿಲ್ಲವಾದರೂ ಒಂದಷ್ಟು ಖಚಿತ ಒಳನೋಟಗಳು ಸಿಕ್ಕಿತ್ತು.

ತನ್ನಲ್ಲಿ ಕಟ್ಟಲು 5 ಕೋಟಿ ರೂಪಾಯಿಯಷ್ಟೂ ಹಣವಿಲ್ಲ ಎನ್ನುವ ಮೂಲಕ ಆರ್ಟ್‌ ಆಫ್‌ ಲಿವಿಂಗ್‌ (ಎಒಎಲ್‌) ಸುಳ್ಳು ಹೇಳುತ್ತಿದೆ. ‘ಅಮೆರಿಕಾ. ಬ್ರಿಟನ್‌, ನೆದರ್ಲೆಂಡ್‌, ಜರ್ಮನಿಯಲ್ಲಿ ಸಂಸ್ಥೆಗೆ ಬೇಕಾದಷ್ಟು ಹಣವಿದೆ’ ಎಂದು ಮ್ಯಾಗಜಿನ್‌ ವರದಿ ಮಾಡಿತ್ತು. ಜತೆಗೆ ಎಒಎಲ್‌ನ ಮೂರು ಸಂಸ್ಥೆಗಳು ಸ್ವಿಟ್ಜರ್ಲೆಂಡ್‌ನಲ್ಲಿತ್ತು. ಇವುಗಳೂ ಶ್ರೀಮಂತವಾಗಿದ್ದವು. ಆದರೆ ಅದರ ಪ್ರಮಾಣ ಮಾತ್ರ ತಿಳಿದಿರಲಿಲ್ಲ ಅಷ್ಟೆ.

ಇದರ ಜತೆಗೆ ಲಾಭಕ್ಕಾಗಿ ‘ಎಒಎಲ್‌’ ನಡೆಸುತ್ತಿಲ್ಲ ಎಂದು ಹೇಳುತ್ತಲೇ ರವಿಶಂಕರ್‌ 234 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದರು. ಮತ್ತು ಅಮೆರಿಕಾ. ಬ್ರಿಟನ್‌, ನೆದರ್ಲೆಂಡ್‌ ದೇಶಗಳಿಂದಲೇ 2015-16ರಲ್ಲಿ 81 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದರು. 155 ದೇಶಗಳಲ್ಲಿ ಇವರ ಶಾಖೆಗಳಿದ್ದು ಈ ದೇಶಗಳ ಆದಾಯಗಳು ಮತ್ತಷ್ಟು ಪ್ರಮಾಣದಲ್ಲಿರುವ ಸಾಧ್ಯತೆಗಳಿವೆ. ಇಲ್ಲೆಲ್ಲಾ ಪ್ರತ್ಯೇಕ ಟ್ರಸ್ಟ್‌ಗಳನ್ನು, ಕಂಪನಿಗಳನ್ನು ಸಂಸ್ಥೆ ನಡೆಸುತ್ತದೆ. ಇವುಗಳಲ್ಲಿ ರವಿ ಶಂಕರ್‌ ಕುಟುಂಬಸ್ಥರು, ಬೃಹತ್‌ ಉದ್ಯಮಗಳಲ್ಲಿ ತೊಗಿಸಿಕೊಂಡಿರುವವರ ಬಂಧುಗಳು ಸದಸ್ಯರಾಗಿರುವುದು ತಿಳಿದು ಬಂದಿತ್ತು.

ಭಾರತದಲ್ಲೇ ರವಿಶಂಕರ್‌ ಕಡೆಯಿಂದ ವೇದ ವಿಜ್ಞಾನ ಮಹಾ ವಿದ್ಯಾಪೀಠ, ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಹ್ಯುಮನ್‌ ವ್ಯಾಲ್ಯೂಸ್‌ (ಐಎಎಚ್‌ವಿ), ಶ್ರೀ ಶ್ರೀ ರವಿಶಂಕರ್‌ ಟ್ರಸ್ಟ್‌, ಶ್ರೀ ಶ್ರೀ ವಿದ್ಯಾ ಮಂದಿರ ಟ್ರಸ್ಟ್‌ ಎಂಬ ನಾಲ್ಕು ಟ್ರಸ್ಟ್‌ಗಳು ಅಸ್ತಿತ್ವದಲ್ಲಿವೆ. ಅಂತರಾಷ್ಟ್ರೀಯ ವ್ಯವಹಾರಗಳನ್ನೂ ಇವು ಹೊಂದಿವೆ. ಇವುಗಳ ಆದಾಯಗಳು ಯಾವ ಪ್ರಮಾಣದಲ್ಲಿರುತ್ತವೆ ಎನ್ನುವುದಕ್ಕೆ ಯಾವುದಾದರೂ ಒಂದು ಟ್ರಸ್ಟ್‌ನ ವ್ಯವಹಾರಗಳ ಬಗ್ಗೆ ಕಣ್ಣಾಡಿಸಿದರೆ ಸಾಕಾಗುತ್ತದೆ.

ಐಎಎಚ್‌ವಿ 2016ರ ಮಾರ್ಚ್‌ 31ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ 5.54 ಕೋಟಿ ರೂಪಾಯಿ ದೇಣಿಗೆಯನ್ನು ಸಂಗ್ರಹಿಸಿತ್ತು. ಈ ಸಂಸ್ಥೆಗಳಿಗೆ ಹರಿದು ಬರುವ ಹಣ ಕೇವಲ ಜನರಿಂದ ಮಾತ್ರವೇ ಆಗಿರುವುದಿಲ್ಲ. ದೊಡ್ಡ ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳೂ ಉದಾರ ದೇಣಿಗೆಗಳನ್ನು ನೀಡುತ್ತವೆ. ಉದಾಹರಣೆ ಇಂಟೆಲ್‌ ಟೆಕ್ನಾಲಜಿ ಇಂಡಿಯಾ ಪ್ರೈವೇಟ್‌ ಲಿ., ಗುಡ್‌ಇಯರ್‌ ಸೌತ್‌ ಏಷ್ಯಾ ಟೈರ್ಸ್‌ ಪ್ರೈವೇಟ್‌ ಲಿ. ಮೊದಲಾದವು ಹತ್ತಾರು ಲಕ್ಷದಿಂದ ಹಲವು ಕೋಟಿಗಳ ಲೆಕ್ಕದಲ್ಲಿ ರವಿಶಂಕರ್‌ ಟ್ರಸ್ಟ್‌ಗಳಿಗೆ ಹಣ ನೀಡುತ್ತವೆ.

ದೇಶೀಯ ದೇಣಿಗೆಗಳಲ್ಲದೆ 2014ನೇ ಆರ್ಥಿಕ ವರ್ಷದಲ್ಲಿ ಈ ನಾಲ್ಕು ಟ್ರಸ್ಟ್‌ಗಳು ಒಟ್ಟಾಗಿ 110.4 ಕೋಟಿ ವಿದೇಶಿ ದೇಣಿಗೆಗಳನ್ನು ಪಡೆದಿದ್ದವು. 2017ರಲ್ಲಿ ಈ ಪ್ರಮಾಣ 121.34 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಒಟ್ಟಾರೆ 2017ರಲ್ಲಿ ಈ ಟ್ರಸ್ಟ್‌ಗಳು 331.55 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದವು.

ಇದರ ಜತೆಗೆ, ಉತ್ಪನ್ನಗಳ ಮಾರಾಟ, ಆಯುರ್ವೇದ ಔಷಧಿಗಳ ಉತ್ಪಾದನೆ, ಸಾಫ್ಟ್‌ವೇರ್‌ ಸೇವೆ, ಪ್ರವಾಸ ಮೊದಲಾದ ವ್ಯವಹಾರಗಳು ಸಂಸ್ಥೆಗಿವೆ. ವಿದ್ಯಾ ಮಂದಿರ ಟ್ರಸ್ಟ್‌ ಅಡಿಯಲ್ಲಿ 100 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಹೀಗಿದ್ದೂ ನನ್ನ ಬಳಿಯಲ್ಲಿ ಕಟ್ಟಲು 5 ಕೋಟಿ ರೂಪಾಯಿ ಹಣವಿಲ್ಲ ಎಂದಿದ್ದರು ಶ್ರೀ ಶ್ರೀ ರವಿಶಂಕರ್‌.

ಕನಕಪುರ ರಸ್ತೆಯಿಂದ ಇರಾಕ್‌ವರೆಗೆ

ರವಿ ಶಂಕರ್‌ ಬೆಳೆದು ಬಂದ ದಾರಿಯತ್ತ ಕಣ್ಣಾಡಿಸಿದರೆ ಕಾಲಕ್ಕೆ ತಕ್ಕಂತೆ ಬದಲಾದ ಕಾರ್ಯವಿಧಾನಗಳು ಕಣ್ಣಿಗೆ ರಾಚುತ್ತವೆ. ‘ಸುದರ್ಶನ ಕ್ರಿಯೆ’ ಎಂದು ಹೇಳುತ್ತಲೇ ಶಾಂತಿ ಮಂತ್ರ ಜಪಿಸಲು ಆರಂಭಿಸಿದ ಅವರು ಬೆಂಗಳೂರಿನ ಕನಕಪುರ ರಸ್ತೆಯಿಂದ ನೇರ ಭಯೋತ್ಪಾದಕರು, ಬಂಡುಕೋರ ಸಂಘಟನೆಗಳ ಅಂಗಳಕ್ಕೂ ಕಾಲಿಟ್ಟರು.

ಯುದ್ಧ ಪೀಡಿತ ಇರಾಕ್‌ನಲ್ಲಿ ರವಿಶಂಕರ್‌ ಶಾಂತಿ ಮಾತುಕತೆ
ಯುದ್ಧ ಪೀಡಿತ ಇರಾಕ್‌ನಲ್ಲಿ ರವಿಶಂಕರ್‌ ಶಾಂತಿ ಮಾತುಕತೆ
/ರೆಡಿಫ್‌

ಇರಾಕ್‌ನಲ್ಲಿ ಸೋ ಕಾಲ್ಡ್‌ ಶಾಂತಿ ಮಾತುಕತೆ ನಡೆಸಿದರು. ಕೊಲಂಬಿಯಾ ಸರಕಾರ ಮತ್ತು ಬಂಡುಕೋರ ಸಂಘಟನೆಗಳ ಜತೆ ಸಂಧಾನಕಾರರಾಗಿ ಅಲ್ಲಿನ ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡರು. 2016ರಲ್ಲಿ ಬುರ್ಹಾನ್‌ ವನಿ ಸಾವಿನ ನಂತರ ‘ಕಾಶ್ಮೀರ ಶಾಂತಿ ಕಾರ್ಯಕ್ರಮ’ ಹಮ್ಮಿಕೊಂಡರು. ಈಶಾನ್ಯ ಭಾರತಕ್ಕೂ ಕಾಲಿಟ್ಟ ರವಿಶಂಕರ್‌ ಅಲ್ಲಿಯೂ 67 ಬಂಡುಕೋರ ಸಂಘಟನೆಗಳ ಸಮಾವೇಶ ನಡೆಸಿ ಬೀಗಿದರು. 2017ರಲ್ಲಿ ಅಯೋಧ್ಯೆ ವಿವಾದಕ್ಕೆ ಅಂತ್ಯ ಹಾಡುತ್ತೇನೆ ಎಂದು ಅಖಾಡಕ್ಕೆ ಧುಮುಕಿದರು. ಇದರಲ್ಲಿ ಯಾವುದು ಎಷ್ಟು ಯಶಸ್ವಿಯಾಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇದೇ ಅವಧಿಯಲ್ಲಿ ಅವರ ಸಾಮ್ರಾಜ್ಯ ಬೆಳೆದಿದ್ದೆಷ್ಟು ಎಂಬುದು ಮಾತ್ರ ನಮ್ಮ ಕಣ್ಣ ಮುಂದಿದೆ.

ಹೊರಗಡೆ ಅಗಾಧ ಜ್ಞಾನಿಯಂತೆ ಬಿಂಬಿಸಿಕೊಂಡಿರುವ ರವಿಶಂಕರ್‌, ಹಿಂದೊಮ್ಮೆ ‘ಸರಕಾರಿ ಶಾಲೆಗಳಿಂದಲೇ ನಕ್ಸಲರು ಹುಟ್ಟಿಕೊಳ್ಳುತ್ತಾರೆ’ ಎಂದಿದ್ದರು. ಅದಕ್ಕಾಗಿ ಶಾಲೆಗಳನ್ನು ಖಾಸಗಿಯವರೇ ನಡೆಸಬೇಕು ಎಂದಿದ್ದರು ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವ ಅರಿವಿನ ವ್ಯಾಪಾರಿ ರವಿಶಂಕರ್‌.

ಇದೇ ರವಿ ಶಂಕರ್‌ ಈಗ ಸಿಬಿಐ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆಂತರಿಕ ಕಲಹದಿಂದ ಬೀದಿಗೆ ಬಂದು ಮಾನ ಮರ್ಯಾದೆ ಕಳೆದುಕೊಂಡಿರುವ ಸಿಬಿಐನಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಮಾರ್ಗದರ್ಶಕರು ‘ಆರೋಗ್ಯಕರ ವಾತಾವರಣ’ ಸೃಷ್ಟಿ ಮಾಡಲಿದ್ದಾರಂತೆ. 150 ಅಧಿಕಾರಿಗಳಿಗೆ ಮೂರು ದಿನಗಳ ಶಿಬಿರ ನಡೆಸಿ ಸಕಾರಾತ್ಮಕ ಭಾವ ಮೂಡಿಸಲಿದ್ದಾರಂತೆ. ಸಿಬಿಐ ನಿರ್ದೇಶಕ ಎಂ. ನಾಗೇಶ್ವರ್‌ ರಾವ್‌ ಸಹಿತ ಎಲ್ಲಾ ಉನ್ನತ ಅಧಿಕಾರಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಹಾಗಂಥ ಭಾರತದಲ್ಲಿ ಇವುಗಳೆಲ್ಲಾ ಹೊಸದೇನೂ ಅಲ್ಲ. “ನಮ್ಮ ದೇಶದ ಸಾಧು ಸಂತರ ಮೂಲ ಸಮಸ್ಯೆಯೇ ಇದು. ತಮ್ಮಲ್ಲಿರುವ ಕಳಂಕವನ್ನು ಮುಚ್ಚಿಹಾಕಲು ಇವರು ಆಧ್ಯಾತ್ಮದ ಅತ್ಯುತ್ತಮ ಹೊದಿಕೆ ಹಾಕಿಕೊಳ್ಳುತ್ತಾರೆ. ಹೀಗಾಗಿ ಆಧ್ಯಾತ್ಮದ ಹೆಸರಿನಲ್ಲಿ ವಂಚನೆಗಳು ಬೇಗ, ಸುಲಭವಾಗಿ ನಡೆದು ಹೋಗುತ್ತವೆ. ಒಂದೊಂದು ವಂಚನೆಗೂ ಹೊಸ ಹೊಸ ಆಯಾಮಗಳನ್ನು ಕೊಟ್ಟುಕೊಂಡು ಹೋಗುತ್ತಾರೆ,” ಎನ್ನುತ್ತಾರೆ ರವಿ ಶಂಕರ್ ಆಶ್ರಮದ ಪಕ್ಕದಲ್ಲಿಯೇ ಕೃಷಿ ಭೂಮಿ ಹೊಂದಿರುವ ಬೆಂಗಳೂರಿನ ಖ್ಯಾತ ಮನೋವಿಜ್ಞಾನಿಯೊಬ್ಬರು.

Join Samachara Official. CLICK HERE