samachara
www.samachara.com
ಜೆ.ಎಚ್‌. ಪಟೇಲ್‌ ಹಾದಿಯಲ್ಲಿ ನಾಯ್ಡು, ದೀದಿ: ಕೇಂದ್ರ v/s ರಾಜ್ಯ ಸಂಘರ್ಷದಲ್ಲಿ ದಾಳವಾಗಿದ್ದು ಸಿಬಿಐ
COVER STORY

ಜೆ.ಎಚ್‌. ಪಟೇಲ್‌ ಹಾದಿಯಲ್ಲಿ ನಾಯ್ಡು, ದೀದಿ: ಕೇಂದ್ರ v/s ರಾಜ್ಯ ಸಂಘರ್ಷದಲ್ಲಿ ದಾಳವಾಗಿದ್ದು ಸಿಬಿಐ

ಇನ್ನು ಮುಂದೆ ರಾಜ್ಯ ಸರಕಾರದ ಪೂರ್ವಾನುಮತಿ ಇಲ್ಲದೆ ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಬಿಐ ಯಾವುದೇ ತನಿಖೆ, ದಾಳಿಗಳನ್ನು ನಡೆಸಲು ಸಾಧ್ಯವಿಲ್ಲ.

Team Samachara

‘ಕೇಂದ್ರ ತನಿಖಾ ದಳಕ್ಕೆ ಅನುಮತಿ ಇಲ್ಲದೆ ನಮ್ಮ ರಾಜ್ಯಕ್ಕೆ ಪ್ರವೇಶವಿಲ್ಲ’ ಎಂಬ ಬೋರ್ಡ್‌ ನೇತು ಹಾಕಿದ್ದಾರೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. ಇದು ಕೇಂದ್ರ ಮತ್ತು ಬಿಜೆಪಿಯೇತರ ರಾಜ್ಯಗಳ ನಡುವಿನ ಸಂಘರ್ಷವನ್ನು ಮತ್ತೊಂದು ಆಯಾಮಕ್ಕೆ ಕೊಂಡೊಯ್ದಿದೆ.

‘ದೆಹಲಿ ವಿಶೇಷ ಪೊಲೀಸ್‌ ಸ್ಥಾಪನೆ ಕಾಯ್ದೆ 1946’ರ ಅಡಿಯಲ್ಲಿ ಸ್ಥಾಪಿತವಾಗಿರುವ ಸಂಸ್ಥೆ ಸಿಬಿಐ. ಯಾವುದೇ ರಾಜ್ಯವನ್ನು ಸಿಬಿಐ ಅಧಿಕಾರಿಗಳು ಪ್ರವೇಶಿಸುವ ಮುನ್ನ ಅಲ್ಲಿನ ಸ್ಥಳೀಯ ಸರಕಾರದ ಅನುಮತಿಯನ್ನು ಪಡೆದುಕೊಳ್ಳಬೇಕು ಎಂಬುದು ಇರುವ ನಿಯಮ. ‘ಸಿಬಿಐ ನಮ್ಮ ರಾಜ್ಯಕ್ಕೆ ಪ್ರವೇಶಿಸಲು ನಮ್ಮದೇನೂ ಅಭ್ಯಂತರವಿಲ್ಲ’ ಎಂದು ಪ್ರತಿ ರಾಜ್ಯಗಳೂ ಆರಂಭದಲ್ಲೇ ‘ಸಾಮಾನ್ಯ ಒಪ್ಪಿಗೆ’ ನೀಡಿವೆ. ಪ್ರತಿ ವರ್ಷ ಇದನ್ನು ರಾಜ್ಯಗಳು ನವೀಕರಣ ಮಾಡುತ್ತಾ ಬಂದಿವೆ. ಹೀಗೊಂದು ಪರಂಪರೆ ನಡೆದು ಬಂದಿರುವುದರಿಂದ ಇಂಥಹದ್ದೊಂದು ನಿಯಮ ಇದೆ ಎನ್ನುವುದೂ ಹೆಚ್ಚಿವರಿಗೆ ತಿಳಿದಿರಲಿಲ್ಲ.

ಆದರೆ ಅದನ್ನು ಸೂಕ್ತ ಸಮಯದಲ್ಲಿ ನೆನಪಿಸಿದ್ದಾರೆ ಚಂದ್ರಬಾಬು ನಾಯ್ಡು. ರಾಜಕೀಯವನ್ನು ಅರೆದು ಕುಡಿದಿರುವ ನಾಯ್ಡು ಈ ನಿಯಮವನ್ನೀಗ ಕೇಂದ್ರದ ವಿರುದ್ಧ ದಾಳವಾಗಿ ಉರುಳಿಸಿದ್ದಾರೆ.

ಸರಕಾರ ಉರುಳಿಸುವ ಭಯ

ಇತ್ತೀಚೆಗೆ ಟಿಡಿಪಿ ಸಂಸದ ಸಿಎಂ ರಮೇಶ್‌ ಆಪ್ತರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆನ್ನಿಗೆ ಗುರುವಾರ ಮಾತನಾಡಿದ್ದ ಚಂದ್ರಬಾಬು ನಾಯ್ಡು, ‘ವಿರೋಧ ಪಕ್ಷದ ನಾಯಕ ವೈಎಸ್‌ ಜಗನ್‌ಮೋಹನ್‌ ರೆಡ್ಡಿ ಜತೆ ಸೇರಿ, ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ತಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ,’ ಎಂದು ದೂರಿದ್ದರು. ಇದಾದ ಬಳಿಕ ಶುಕ್ರವಾರ ಅವರು ಸಿಬಿಐಗೆ ನೀಡಿದ್ದ ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಪರಿಣಾಮ ಇನ್ನು ಮುಂದೆ ರಾಜ್ಯ ಸರಕಾರದ ಪೂರ್ವಾನುಮತಿ ಇಲ್ಲದೆ ಆಂಧ್ರ ಪ್ರದೇಶದಲ್ಲಿ ಸಿಬಿಐ ಯಾವುದೇ ತನಿಖೆ, ದಾಳಿಗಳನ್ನು ನಡೆಸಲು ಸಾಧ್ಯವಿಲ್ಲ. ಸಿಬಿಐ ಅಧಿಕಾರಿಗಳು ರಾಜ್ಯಕ್ಕೆ ಕಾಲಿಡಬೇಕಿದ್ದರೆ ಚಂದ್ರಬಾಬು ನಾಯ್ಡು ಸರಕಾರದ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ.

ಚಂದ್ರಬಾಬು ನಾಯ್ಡು ನಡೆಯನ್ನು ಬಿಜೆಪಿ ವಿರೋಧಿ ಪಕ್ಷಗಳು ಸ್ವಾಗತಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, “ಚಂದ್ರಬಾಬುಜೀ ಸರಿಯಾದ ಕೆಲಸ ಮಾಡಿದ್ದಾರೆ. ಮೋದಿ ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ,” ಎಂದು ದೂರಿದ್ದಾರೆ.

ಒಂದು ಹೆಜ್ಜೆ ಮುಂದೆ ಹೋಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ರಾಜ್ಯದೊಳಗೆ ಸಿಬಿಐ ಪ್ರವೇಶಿಸಲು ಬಿಡುವುದಿಲ್ಲ ಎನ್ನುವ ಮೂಲಕ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸರಿಯಾದ ನಿರ್ಧಾರ ತೆಗೆದಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲೂ ನಾವು ಇದೇ ರೀತಿ ಮಾಡಲಿದ್ದೇವೆ. ನಾವು ಕಾನೂನುಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಅವರು (ಬಿಜೆಪಿ) ತಮ್ಮ ಪಕ್ಷದ ಕಚೇರಿಯಿಂದ ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಸಿಬಿಐನಿಂದ ಆರ್‌ಬಿಐವರೆಗೆ ಸಂಸ್ಥೆಗಳನ್ನು ಅವರು ದುರಂತಕ್ಕೀಡು ಮಾಡಿದ್ದಾರೆ,” ಎಂದು ಟಿಎಂಸಿ ಕಾರ್ಯಕರ್ತರನ್ನು ಉದ್ದೇಶಿಸಿ ಶುಕ್ರವಾರ ಸಂಜೆ ಹೇಳಿದ್ದರು. ನಂತರ ಆಂಧ್ರ ಪ್ರದೇಶ ಸರಕಾರದ ತೀರ್ಮಾನವನ್ನು ಅವರೂ ಅನುಸರಿಸಿದ್ದಾರೆ.

ಈ ಬಗ್ಗೆ ಸದ್ಯಕ್ಕೆ ಸಿಬಿಐ ಪ್ರತಿಕ್ರಿಯೆ ನೀಡಿಲ್ಲವಾದರೂ, “ ಒಪ್ಪಿಗೆಯನ್ನು ಹಿಂಪಡೆದುಕೊಳ್ಳುವುದೆಂದರೆ, ರಾಜ್ಯದ ಒಪ್ಪಿಗೆ ಇಲ್ಲದೆ ಸಿಬಿಐ ಅಧಿಕಾರಿಗಳು ರಾಜ್ಯ ಪ್ರವೇಶ ಮಾಡಿದರೆ ಅವರು ಪೊಲೀಸ್‌ ಅಧಿಕಾರಿಗಳ ಶಕ್ತಿಯನ್ನು ಕಳೆದುಳ್ಳುತ್ತಾರೆ,” ಎಂದು ಮಾಜಿ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಚಂದ್ರಬಾಬು ನಾಯ್ಡು ಮತ್ತು ಮಮತಾ ಬ್ಯಾನರ್ಜಿ ತೀರ್ಮಾನಕ್ಕೆ ಬಿಜೆಪಿ ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಜಿವಿಎಲ್‌ ನರಸಿಂಹ ರಾವ್‌, “ಇದು ಅಧಿಕಾರದ ಸ್ಪಷ್ಟ ದುರ್ಬಳಕೆ,” ಎಂದಿದ್ದಾರೆ. ಜತೆಗೆ “ಕಡು ಭ್ರಷ್ಟ ಪಕ್ಷಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮಹಾ ಮೈತ್ರಿಕೂಟವನ್ನು ರಚಿಸಿಕೊಂಡಿವೆ,” ಎಂದು ಕಿಡಿಕಾರಿದ್ದಾರೆ.

ಹಿಂದೆಯೂ ನಡೆದಿತ್ತು

ಸ್ಥಳೀಯ ಸರಕಾರದ ಒಪ್ಪಿಗೆ ಪಡೆಯದೆ ಸಿಬಿಐ ತನಿಖೆ ನಡೆಸಬಹುದಾ ಎಂಬುದರ ಬಗ್ಗೆ ಈ ಹಿಂದೆಯೇ ವಿವಾದಗಳು ಎದ್ದಿದ್ದವು. ಛತ್ತೀಸ್‌ಗಢದ ಭ್ರಷ್ಟಾಚಾರ ಪ್ರಕರಣವೊಂದರ ತನಿಖೆ ಸಂಬಂಧ ಸಿಬಿಐ ಪೊಲೀಸರು ಆ ರಾಜ್ಯಕ್ಕೆ ಕಾಲಿಟ್ಟಾಗ ಸರಕಾರ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರದಲ್ಲಿ ಅಕ್ಟೋಬರ್‌ 11, 2018ರಲ್ಲಿ ತೀರ್ಪು ನೀಡಿದ್ದ ದೆಹಲಿ ಹೈಕೋರ್ಟ್‌, “ಒಂದೊಮ್ಮೆ ಪ್ರಕರಣ ಒಂದು ರಾಜ್ಯದ ಹೊರಗೆ ದಾಖಲಾಗಿದ್ದರೆ, ಈ ಸಂದರ್ಭದಲ್ಲಿ ಆ ರಾಜ್ಯದ ಒಪ್ಪಿಗೆ ಇಲ್ಲದೆ ತನಿಖೆಯನ್ನು ಸಿಬಿಐ ಮುಂದುವರಿಸಬಹುದು,” ಎಂದು ಹೇಳಿತ್ತು.

ಆದರೆ ಈ ಬಾರಿ ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಸಾಮಾನ್ಯ ಒಪ್ಪಿಗೆಯನ್ನೇ ಹಿಂಪಡೆದಿವೆ. ಹೀಗೊಂದು ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂಪಡೆಯುವ ಪ್ರಯತ್ನ ಮೊದಲ ಬಾರಿಗೆ ಕರ್ನಾಟಕದಿಂದಲೇ ಆರಂಭಗೊಂಡಿತ್ತು ಎಂಬುದು ವಿಶೇಷ. 1998ರಲ್ಲಿ ಜನತಾದಳದ ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿ ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂಪಡೆದಿದ್ದರು. ಮುಂದೆ 1999ರಲ್ಲಿ ಎಸ್‌.ಎಂ. ಕೃಷ್ಣ ಸರಕಾರ ಅಧಿಕಾರಕ್ಕೆ ಬಂತು. ಆಗ ಗೃಹ ಮಂತ್ರಿಯಾದ ಮಲ್ಲಿಕಾರ್ಜುನ ಖರ್ಗೆ ಪಟೇಲ್‌ ಸಂಪ್ರದಾಯವನ್ನೇ ಮುಂದುವರಿಸಿದರು. “ಇದರಿಂದ 8 ವರ್ಷಗಳ ಕಾಲ ಕರ್ನಾಟಕಕ್ಕೆ ರಾಜ್ಯ ಸರಕಾರದ ಅನುಮತಿ ಪಡೆದೇ ಕಾಲಿಡಬೇಕಾಗಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ಅಂದಿನ ಸಿಬಿಐ ಅಧಿಕಾರಿಯೊಬ್ಬರು. ಪ್ರತಿ ಪರಿಶೀಲನೆ, ಪ್ರಕರಣವನ್ನು ದಾಖಲಿಸಿಕೊಳ್ಳಲೂ ರಾಜ್ಯ ಸರಕಾರದ ಒಪ್ಪಿಗೆ ಪಡೆದುಕೊಳ್ಳಬೇಕಿತ್ತು. ಏಕಾ ಏಕಿ ದಾಳಿಗಳನ್ನು ನಡೆಸಲು ಸಾಧ್ಯವೇ ಆಗುತ್ತಿರಲಿಲ್ಲ ಎನ್ನುತ್ತಾರೆ ಅವರು. ವಿಶೇಷವೆಂದರೆ ಅವತ್ತೂ ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿತ್ತು.

ಇದೀಗ ಕೇಂದ್ರ ತನಿಖಾ ದಳಕ್ಕೆ 1998ರ ಪರಿಸ್ಥಿತಿಯನ್ನು ನೆನಪು ಮಾಡಿಕೊಟ್ಟಿದ್ದಾರೆ ಚಂದ್ರಬಾಬು ನಾಯ್ಡು ಮತ್ತು ಮಮತಾ ಬ್ಯಾನರ್ಜಿ. ದೇಶದಲ್ಲಿ ಇನ್ನೂ ಹಲವು ಬಿಜೆಪಿಯೇತರ ಸರಕಾರಗಳಿದ್ದು, ಇದೇ ಹಾದಿಯಲ್ಲಿ ಉಳಿದ ರಾಜ್ಯಗಳೂ ತೀರ್ಮಾನಗಳನ್ನು ತೆಗೆದುಕೊಂಡರೆ ಕೇಂದ್ರ ಸರಕಾರ ಭಾರೀ ಮುಜುಗರಕ್ಕೀಡಾಗಲಿದೆ.

ಪೂರಕ ಮಾಹಿತಿ: ಇಂಡಿಯನ್‌ ಎಕ್ಸ್‌ಪ್ರೆಸ್‌