samachara
www.samachara.com
ಕಿಲ್ಲಿಂಗ್‌ ಮಡಿಕೇರಿ: ಕಸದ ಸಮಸ್ಯೆಗೆ ನ್ಯಾಯಾಲಯದಲ್ಲಿ ಸಿಗುತ್ತಾ ಮುಕ್ತಿ?
COVER STORY

ಕಿಲ್ಲಿಂಗ್‌ ಮಡಿಕೇರಿ: ಕಸದ ಸಮಸ್ಯೆಗೆ ನ್ಯಾಯಾಲಯದಲ್ಲಿ ಸಿಗುತ್ತಾ ಮುಕ್ತಿ?

ಮಡಿಕೇರಿ ನಗರ ಸಭೆಯು ಕಸವನ್ನು ಹಾಕಲು ಸ್ಥಳವಿಲ್ಲದೆ ಸ್ಟುವರ್ಟ್‌ ಹಿಲ್‌ಗೆ ತಂದು ಸುರಿಯುತ್ತಿದೆ. ಈ ಕಸದ ರಾಶಿಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ದುರ್ಗಂಧ ಮತ್ತು ನೊಣಗಳ ಸಮಸ್ಯೆ ಎದುರಿಸುವಂತಾಗಿದೆ.

ವಸಂತ ಕೊಡಗು

ವಸಂತ ಕೊಡಗು

ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಜಿಲ್ಲೆ ಕೊಡಗು. ಜಿಲ್ಲೆ ಪುಟ್ಟದಾದರೂ ಪ್ರತಿನಿತ್ಯ ಸುಮಾರು 5 ರಿಂದ 8 ಸಾವಿರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹೀಗೆ ವರ್ಷವೊಂದಕ್ಕೆ ಜಿಲ್ಲೆಗೆ ಬರುವ ಹೊರಗಿನವರ ಸಂಖ್ಯೆಯೇ ಬರೋಬ್ಬರಿ 15 ರಿಂದ 18 ಲಕ್ಷ ಎನ್ನುತ್ತದೆ ಪ್ರವಾಸೋದ್ಯಮ ಇಲಾಖೆಯ ಮಾಹಿತಿ.

ಈ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಸದ ಸಮಸ್ಯೆಯೂ ಜಾಸ್ತಿಯಾಗುತ್ತಿದೆ. ಅದರಲ್ಲೂ ಮಡಿಕೇರಿ ನಗರದ ಕಸದ ಸಮಸ್ಯೆ ಸ್ಥಳೀಯ ನಗರ ಸಭೆಯನ್ನೂ ಕಂಗೆಡಿಸಿದೆ.

ಆರಂಭದಲ್ಲಿ ಇಲ್ಲಿನ ಗಿರಿ ಕಂದರಗಳು, ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುವ ಹಸಿರ ಸೊಬಗು ಮಡಿಕೇರಿಗೆ ಆಗಮಿಸುವ ಪ್ರವಾಸಿಗರ ಮನಸ್ಸಿಗೆ ಮುದ ನೀಡುತಿದ್ದವು. ಮಡಿಕೇರಿಗೆ ಆಗಮಿಸುವ ಜನರನ್ನು ಸ್ವಾಗತ ಬೆಟ್ಟ ಸ್ವಾಗತಿಸಿದರೆ ಕರ್ಣಂಗೇರಿ ಉಕ್ಕುಡ ಮತ್ತು ಸ್ಟುವರ್ಟ್ ಹಿಲ್‌ನ ಮನಮೋಹಕ ದೃಶ್ಯಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಈಗ ಸ್ಟುವರ್ಟ್ ಹಿಲ್‌ಗೆ ಬಂದರೆ ಕಸದ ರಾಶಿ ಪ್ರವಾಸಿಗರಿಗೆ ಎದುರಾಗುತ್ತದೆ.

ನಗರ ಸಭೆಯು ಕಸವನ್ನು ಹಾಕಲು ಸ್ಥಳವಿಲ್ಲದೆ ಸ್ಟುವರ್ಟ್‌ ಹಿಲ್‌ಗೆ ತಂದು ಸುರಿಯುತ್ತಿದೆ. ಈ ಕಸದ ರಾಶಿಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ದುರ್ಗಂಧ ಮತ್ತು ನೊಣಗಳ ಸಮಸ್ಯೆ ಎದುರಿಸುವಂತಾಗಿದೆ.

ಕಿಲ್ಲಿಂಗ್‌ ಮಡಿಕೇರಿ: ಕಸದ ಸಮಸ್ಯೆಗೆ ನ್ಯಾಯಾಲಯದಲ್ಲಿ ಸಿಗುತ್ತಾ ಮುಕ್ತಿ?

ಒಂದೂವರೆ ದಶಕದ ಪ್ರಯತ್ನ

ಮಡಿಕೇರಿಯಲ್ಲಿ ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಇಂದಲ್ಲ ಸುಮಾರು 17 ವರ್ಷ ಕೆಳಗೆಯೇ ಆಲೋಚನೆ ಮಾಡಲಾಗಿತ್ತು. 2001 ನೇ ಇಸವಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಎಂ. ನಾಣಯ್ಯ ಪ್ರಯತ್ನದಿಂದಾಗಿ ಅಂದಿನ ಪುರಸಭೆಯ ಕಸ ವಿಲೇವಾರಿಗೆ ಅರಣ್ಯ ಇಲಾಖೆಗೆ ಸೇರಿದ 6 ಎಕರೆ ಜಾಗವನ್ನು ಗುರುತಿಸಲಾಗಿತ್ತು. ನಂತರ ಕಸವನ್ನು ಇಲ್ಲಿಯೇ ವಿಲೇವಾರಿ ಮಾಡುವುದು ಆರಂಭಗೊಂಡಿತು.

ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಮೊದ ಮೊದಲು ಘನ ತ್ಯಾಜ್ಯದ ಉತ್ಪಾದನೆ ಕಡಿಮೆ ಇದ್ದುದರಿಂದ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಈಗ ದಿನನಿತ್ಯ ಉತ್ಪಾದನೆ ಆಗುವ ಕಸದ ಪ್ರಮಾಣ ಗಣನೀಯವಾಗಿ ಏರಿಕೆ ಆಗಿರುವುದರಿಂದ ಭಾರೀ ಸಮಸ್ಯೆ ಸೃಷ್ಟಿಯಾಗಿದೆ.

ಕಸದ ಪ್ರಮಾಣ ಗಣನೀಯವಾಗಿ ಏರಿಕೆಯಾದಾಗ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗಾಗಿ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಯಂತ್ರೋಪಕರಣಗಳನ್ನು ಇಲ್ಲಿ ಸ್ಥಾಪಿಸಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಅವುಗಳು ತುಕ್ಕು ಹಿಡಿಯುತ್ತಿವೆ.

ವಿಲೇವಾರಿ ಸಮಸ್ಯೆ

ಇದೀಗ ಮಡಿಕೇರಿ ನಗರದಲ್ಲಿ ನಿತ್ಯ ಸುಮಾರು 12 ಟನ್‌ಗಳಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇವುಗಳನ್ನು ಹಸಿ ಹಾಗೂ ಒಣ ಕಸ ಎಂದು ವಿಂಗಡಿಸಿ ವಿಲೇವಾರಿ ಮಾಡಬೇಕು. ಆದರೆ ಪೌರ ಕಾರ್ಮಿಕರು ಅಷ್ಟೆಲ್ಲಾ ಗಮನ ಹರಿಸದೆ ಟ್ರಾಕ್ಟರ್, ಲಾರಿಯಲ್ಲಿ ತಂದು ಸ್ಟುವರ್ಟ್‌ ಹಿಲ್‌ನಲ್ಲಿ ಸುರಿಯುತ್ತಿದ್ದಾರೆ. ಹೀಗಾಗಿ ಇಲ್ಲಿ ಕಸದ ಕೊಂಪೆ ನಿರ್ಮಾಣವಾಗಿದೆ.

ಕಿಲ್ಲಿಂಗ್‌ ಮಡಿಕೇರಿ: ಕಸದ ಸಮಸ್ಯೆಗೆ ನ್ಯಾಯಾಲಯದಲ್ಲಿ ಸಿಗುತ್ತಾ ಮುಕ್ತಿ?

ಇಲ್ಲಿ ತ್ಯಾಜ್ಯದ ರಾಶಿ ಹೆಚ್ಚಾಗುತ್ತಿದ್ದಂತೆ ಒಣ ಕಸಕ್ಕೆ ನಗರಸಭೆಯ ನೌಕರರು ಬೆಂಕಿ ಕೊಡುತ್ತಿದ್ದಾರೆ. ಆದರೆ ಹಸಿ ಕಸ ಬೆಂಕಿಯಲ್ಲಿ ಸುಡದೇ ಇಲ್ಲೇ ಕೊಳೆಯುತ್ತಿದೆ. ‘ಇದರಿಂದ ರೋಗ ರುಜಿನಗಳು ಉಲ್ಪಣಿಸುತ್ತಿವೆ,’ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಪ್ಪಣ್ಣ.

“ಕಸದಿಂದಾಗಿ ಸ್ಟುವರ್ಟ್ ಹಿಲ್‌ಗೆ ಹೊಂದಿಕೊಂಡಂತಿರುವ ಸುಬ್ರಮಣ್ಯ ನಗರದ ನಿವಾಸಿಗಳು ಯಾತನೆ ಅನುಭವಿಸುತ್ತಿದ್ದಾರೆ. 2013 ರಿಂದಲೂ ಕಸದ ವಾಸನೆ ಹಾಗೂ ನೊಣಗಳ ಹಾವಳಿಯಿಂದ ಇಲ್ಲಿನ ನಿವಾಸಿಗಳು ಕಂಗೆಟ್ಟಿದ್ದಾರೆ. ಇದೀಗ ಕಸದ ವೈಜ್ಞಾನಿಕ ವಿಲೇವಾರಿಗೆ ಮುಂದಾಗದ ನಗರಸಭೆಯ ವಿರುದ್ದ ನ್ಯಾಯಾಲಯದಲ್ಲಿ ದಾವೆ ಹೂಡಲು ತೀರ್ಮಾನಿಸಿದ್ದೇವೆ,” ಎಂಬ ಮಾಹಿತಿ ನೀಡುತ್ತಾರೆ ಅಪ್ಪಣ್ಣ. ಕಸದ ಸಮಸ್ಯೆಯಿಂದಾಗಿ ನೀಲಿ ಬಣ್ಣದ ದೊಡ್ಡ ಗಾತ್ರದ ನೊಣಗಳ ಸಂತತಿ ಹೆಚ್ಚಾಗಿದೆ. ಇವೆಲ್ಲಾ ಮನೆಗಳಿಗೆ ಬಂದು ಆಹಾರ ಪದಾರ್ಥಗಳ ಮೇಲೂ ಕೂರುತ್ತಿವೆ ಎಂದು ದೂರುತ್ತಾರೆ ಅವರು.

ನಿದ್ದೆಯಿಂದ ಏಳದ ನಗರಸಭೆ

ಹೀಗೆ ಜನರ ಪ್ರತಿರೋಧ ಹೆಚ್ಚಾಗುತ್ತಿದ್ದಂತೆ ನಗರಸಭೆ ಕಸ ವಿಲೇವಾರಿಗೆ ಮೈಸೂರಿನ ತಜ್ಞ ಡಾ. ಪ್ರಕಾಶ್ ಕುಲಕರ್ಣಿ ಅವರ ಸಲಹೆ ಪಡೆದುಕೊಳ್ಳಲು ತೀರ್ಮಾನಿಸಿದೆ. ಅವರು ಕಳೆದ ವಾರ ಮಡಿಕೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸದ ಪ್ರಮಾಣ ಸಣ್ಣದೇ ಅಗಿದ್ದು ಎರಡು ಎಕರೆಗಳಷ್ಟು ಸಮತಟ್ಟಾದ ಜಾಗ ಒದಗಿಸಿದರೆ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸುವುದಾಗಿ ಅವರು ಹೇಳಿದ್ದಾರೆ. ಜತೆಗೆ ಕಲ್ಯಾಣ ಮಂಟಪ, ಲಾಡ್ಜ್ , ಹೋ ಸ್ಟೇ ಗಳಿಂದ ಉತ್ಪಾದನೆ ಆಗುವ ಕಸವನ್ನು ಅವರೇ ವಿಂಗಡಿಸಿಕೊಡಬೇಕು. ಕಸ ಸಾಗಿಸಲು ಶುಲ್ಕ ವಿಧಿಸಿ, ಕಡಿಮೆ ಖರ್ಚಿನಲ್ಲಿ ಅವುಗಳನ್ನು ವಿಲೇವಾರಿ ಮಾಡಿ ಗೊಬ್ಬರವನ್ನೂ ತಯಾರಿಸಬಹುದಾಗಿದೆ ಎಂಬ ಯೋಜನೆಯನ್ನು ಅವರು ಮುಂದಿಟ್ಟಿದ್ದಾರೆ.

ಈ ಕುರಿತು ನಗರಸಭೆಯ ಸದಸ್ಯರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕಸ ವಿಲೇವಾರಿಗೆ ಸೂಕ್ತ ಸ್ಥಳವನ್ನು ಒದಗಿಸುವಂತೆ ಮನವಿ ಮಾಡಲಿದೆ ಎನ್ನುವ ಮಾಹಿತಿ ನೀಡುತ್ತಾರೆ ನಗರಸಭಾ ಅದ್ಯಕ್ಷೆ ಕಾವೇರಮ್ಮ ಸೋಮಣ್ಣ.

ಅಲ್ಲಿಯವರೆಗೂ ಸುಬ್ರಮಣ್ಯನಗರದ ಜನತೆ ಕಸದ ಜತೆಯೇ ಬದುಕಬೇಕಾಗಿದೆ.