samachara
www.samachara.com
ಶಬರಿಮಲೆ ವಿವಾದ: ಬಾಬಾ ಬುಡನ್‌ಗಿರಿ ವಿಫಲ ಯತ್ನ; ಕೇರಳದಲ್ಲಿ ಹೊಸ ಪ್ರಯತ್ನ!
COVER STORY

ಶಬರಿಮಲೆ ವಿವಾದ: ಬಾಬಾ ಬುಡನ್‌ಗಿರಿ ವಿಫಲ ಯತ್ನ; ಕೇರಳದಲ್ಲಿ ಹೊಸ ಪ್ರಯತ್ನ!

ಇದೇ ಮೊದಲ ಬಾರಿಗೆ ಕೇರಳದಲ್ಲಿ ಕಮ್ಯೂನಿಸ್ಟ್‌ ಪಕ್ಷಗಳಿಗೆ ಸರಿ ಸಮನಾಗಿ ಫ್ಲೆಕ್ಸ್‌ಗಳನ್ನು ಕಟ್ಟಲು, ಧ್ವಜ ನೆಡಲು ಬಿಜೆಪಿಗೆ ಸಾಧ್ಯವಾಗಿದ್ದು ಶಬರಿ ಮಲೆ ವಿವಾದ ಆರಂಭವಾದ ನಂತರ ಎಂಬುದು ಗಮನಾರ್ಹ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಬಿಜೆಪಿ ಮತ್ತು ಸಂಘ ಪರಿವಾರದ ಪಾಲಿಗೆ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದಕ್ಷಿಣದ ಶ್ರೀರಾಮಚಂದ್ರನೇ?.

ಹೌದು ಎನ್ನುತ್ತಿದ್ದಾರೆ ಕೇರಳದ ಸಚಿವ ಎಸ್‌ವಿ ಸುನೀಲ್‌ ಕುಮಾರ್‌. ಪಕ್ಕದ ರಾಜ್ಯದ ಸಚಿವರ ಈ ಮಾತಿಗೆ ಪುಷ್ಠಿ ನೀಡುವಂತಹ ಬೆಳವಣಿಗೆಗಳು ಕೇರಳದಲ್ಲಿ ಹಾಗೂ ಮಂಗಳೂರಿನಲ್ಲಿ ನಡೆದಿವೆ.

ಬುಧವಾರ ಮತ್ತು ಗುರುವಾರ ಮಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 13 ಜನ ಮಾತುಕತೆ ನಡೆಸಿದ್ದಾರೆ. ಸಂಘಪರಿವಾರದ ಭಾಷೆಯಲ್ಲಿ ಅದನ್ನು ಬೈಠಕ್ ಎಂದು ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಬಲಗೊಳಿಸುವ ನಿಟ್ಟಿನಲ್ಲಿ ಹಲವು ತೀರ್ಮಾನಗಳನ್ನು ಮಾತುಕತೆ ವೇಳೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿತ್ತು.

“ಸ್ವಾತಂತ್ರ್ಯ ನಂತರ ಸುದೀರ್ಘ ಕಮ್ಯುನಿಸ್ಟ್ ಆಳ್ವಿಕೆಯನ್ನು ಕಂಡ ಕೇರಳದಲ್ಲಿ ಬಿಜೆಪಿ ನೆಲೆಯೂರುವ ಪ್ರಯತ್ನಕ್ಕೆ ತನ್ನ ಹಳೆಯ ಹಾದಿಯನ್ನು ಹಿಡಿದಿದೆ. ಸುಪ್ರಿಂ ಕೋರ್ಟ್ ತೀರ್ಪು ಹೊರಬಿದ್ದ ನಂತರ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನೇ ಬಿಜೆಪಿ ವಿವಾದ ಮಾಡಿಕೊಂಡು ಕುಳಿತಿದೆ. ಅದಕ್ಕೆ ಸಂಘಪರಿವಾರದ ಸಂಘಟನೆಗಳು ಬೆಂಬಲವಾಗಿ ನಿಂತಿವೆ. ಇದನ್ನು ಇನ್ನೊಂದು ನೆಲೆ ಕೊಂಡೊಯ್ಯುವುದು ಮಂಗಳೂರಿನಲ್ಲಿ ನಡೆದ ಬೈಠಕ್ ತೆಗೆದುಕೊಂಡು ಪ್ರಮುಖ ತೀರ್ಮಾನಗಳಲ್ಲೊಂದು,” ಎಂಬುದು ಆರ್‌ಎಸ್‌ಎಸ್‌ ಕರ್ನಾಟಕದ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ.

ಇದೇ ಮೊದಲ ಬಾರಿಗೆ ಕೇರಳದಲ್ಲಿ ಕಮ್ಯೂನಿಸ್ಟ್‌ ಪಕ್ಷಗಳಿಗೆ ಸರಿಸಮನಾಗಿ ಫ್ಲೆಕ್ಸ್‌ಗಳನ್ನು ಕಟ್ಟಲು, ಧ್ವಜ ನೆಡಲು ಬಿಜೆಪಿಗೆ ಸಾಧ್ಯವಾಗಿದ್ದು ಶಬರಿಮಲೆ ವಿವಾದ ಆರಂಭವಾದ ನಂತರ ಎಂಬುದು ಗಮನಾರ್ಹ. ಬಲ ಪಂಥೀಯ ಸಂಘಟನೆಗಳ ರಕ್ತಪಾತದ ಹೋರಾಟ, ರಾಜಕೀಯ ತ್ಯಾಗ ಬಲಿದಾನಗಳ ಇತಿಹಾಸನ್ನು ಹೊಂದಿರುವ ಇಲ್ಲಿ, ಚುನಾವಣೆ ಬಂದಾಗ ಬಿಜೆಪಿ ಗಳಿಸುವ ಮತಗಳು ನಿರಾಶಾದಾಯಕವಾಗಿತ್ತು. ಆದರೆ, ಶಬರಿಮಲೆ ವಿವಾದ ಹೊಸ ಆಶಯವನ್ನು ಸಂಘಪರಿವಾರದೊಳಗೆ ಹುಟ್ಟುಹಾಕಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಮೊದಲ ಬಾರಿಗೆ ಶಬರಿಮಲೆಯ ಬಾಗಿಲು ತೆಗೆಯುತ್ತಿದ್ದಂತೆ ಕೇರಳ ಪೊಲೀಸ್‌ ಇಲಾಖೆಯನ್ನು ಹಿಮ್ಮೆಟ್ಟಿಸಿ ಪ್ರತಿರೋಧ ಒಡ್ಡುವಲ್ಲಿ ಸಂಘ ಪರಿವಾರ ಸಫಲವಾಯಿತು. ಜತೆಗೆ ಎರಡನೇ ಹಂತದ ಹೋರಾಟವನ್ನೂ ಪೂರ್ಣ ಪ್ರಮಾಣದಲ್ಲಿ ನಡೆಸಲಾಯಿತು. ಕಾಸರಗೋಡಿನ ಪ್ರಖ್ಯಾತ ಮಧೂರು ದೇವಸ್ಥಾನದಿಂದ ನವೆಂಬರ್‌ 8ರಂದು ಹೊರಟ ‘ಶಬರಿಮಲೆ ಸಂರಕ್ಷಣಾ ರಥ ಯಾತ್ರೆ’ ಕೇರಳದ ಪ್ರಮುಖ ಜಿಲ್ಲೆಗಳನ್ನು ಹಾದು ಹೋಗಿ 13ರಂದು ಸಂಪನ್ನಗೊಂಡಿದೆ. ಇದು ಅಡ್ವಾಣಿಯ ರಾಮ ಮಂದಿರ ‘ರಥ ಯಾತ್ರೆ’ಯನ್ನು ನೆನಪಿಸುತ್ತಿದೆ.

ಕಾಸರಗೋಡಿನಲ್ಲಿ ಶಬರಿಮಲೆ ಸಂರಕ್ಷಣಾ ರಥ ಯಾತ್ರೆಗೆ ಚಾಲನೆ ನೀಡಿದ್ದ ಕರ್ನಾಟಕದ ಬಿಜೆಪಿ ನಾಯಕರು.
ಕಾಸರಗೋಡಿನಲ್ಲಿ ಶಬರಿಮಲೆ ಸಂರಕ್ಷಣಾ ರಥ ಯಾತ್ರೆಗೆ ಚಾಲನೆ ನೀಡಿದ್ದ ಕರ್ನಾಟಕದ ಬಿಜೆಪಿ ನಾಯಕರು.

ಇದೀಗ, ಮೂರನೇ ಹಂತದ ಶಕ್ತಿ ಪ್ರದರ್ಶನಕ್ಕೆ ಪರಿವಾರ ಮುಂದಾಗಿದೆ. ಗುರುವಾರ ಸಂಪನ್ನಗೊಂಡ ಮಂಗಳೂರು ಬೈಠಕ್‌ನಲ್ಲಿ ಕೇರಳದ ಹೋರಾಟವನ್ನು ತೀವ್ರಗೊಳಿಸುವ ನಿಲುವನ್ನು ಆರ್‌ಎಸ್‌ಎಸ್‌ ತೆಗೆದುಕೊಂಡಿದೆ. ಶಬರಿಮಲೆ ವಿಚಾರದಲ್ಲಿ ಕೇರಳ ಸರಕಾರ ನಡೆದುಕೊಂಡ ರೀತಿಯನ್ನು ಸಾರ್ವಜನಿಕವಾಗಿ ಪ್ರಶ್ನಿಸಲು ತೀರ್ಮಾನಿಸಲಾಗಿದೆ. ಆರ್‌ಎಸ್‌ಎಸ್‌ ಸಹ ಕಾರ್ಯವಾಹ ಭಯ್ಯಾಜಿ ಜೋಶಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಇಂತಹದ್ದೊಂದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳುತ್ತಿವೆ.

ಬಿಜೆಪಿ ದೂರಾಲೋಚನೆ:

ಶಬರಿಮಲೆ ದಕ್ಷಿಣ ಭಾರತದಲ್ಲಿ ಪರಿಣಾಮಕಾರಿ ವಿಚಾರ ಎಂಬುದನ್ನು ಬಿಜೆಪಿಗೆ ಸ್ಪಷ್ಟವಾಗಿ ಅರಿವಾಗಿದೆ. ಕೇರಳ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿಯೂ ಸಾಕಷ್ಟು ಅಯ್ಯಪ್ಪ ಸ್ವಾಮಿ ಭಕ್ತರಿದ್ದಾರೆ. ಹೀಗಾಗಿ ಹೋರಾಟವನ್ನು ಪ್ರಬಲಗೊಳಿಸಿದರೆ ಮೂರೂ ರಾಜ್ಯದಲ್ಲಿ ಲಾಭವಾಗಬಹುದು ಎಂಬ ಲೆಕ್ಕಾಚಾರಕ್ಕೆ ಪರಿವಾರದವರು ಬಂದಿದ್ದಾರೆ. ಕನಿಷ್ಟ ಮೂರು ರಾಜ್ಯಗಳಲ್ಲಿ ಅಲ್ಲವಾದರೂ, ಕಮ್ಯುನಿಸ್ಟ್ ಭದ್ರಕೋಟೆ ಕೇರಳದಲ್ಲಿ ಬಿಜೆಪಿಗೆ ಲಾಭವಾಗುವುದು ಖಚಿತವಾಗಿದೆ.

ಇದರ ಮೊದಲ ಭಾಗವಾಗಿ ಅಯ್ಯಪ್ಪ ಸ್ವಾಮಿ ಭಕ್ತರನ್ನು ಶಬರಿಮಲೆಗೆ ಕರೆದುಕೊಂಡು ಹೋಗುವ, ದೀಕ್ಷೆ ನೀಡುವ ‘ಗುರು ಸ್ವಾಮಿ’ಗಳನ್ನು ಸಂಘಟಿಸುವ ಮತ್ತು ಇವರ ಸಮಾವೇಶ ನಡೆಸುವ ನಿರ್ಧಾರಕ್ಕೆ ಬರಲಾಗಿದೆ. ಶಬರಿಮಲೆ ಋತು ಆರಂಭವಾಗುವುದಕ್ಕೆ ಮೊದಲು ಕೇರಳದ ಪಂಪೆಯಲ್ಲಿ ಬೃಹತ್‌ ಸಮಾವೇಶ ನಡೆಸುವುದು, ಇದರಲ್ಲಿ ದಕ್ಷಿಣ ಭಾರತದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ‘ಗುರುಸ್ವಾಮಿ’ಗಳನ್ನು ಭಾಗವಹಿಸುವಂತೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಇವರನ್ನು ಸಂಘಟಿಸುವ ಮತ್ತು ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅಂಗ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಹೋರಾಟಕ್ಕೊಂದು ಸಾಂಸ್ಥಿಕ ರೂಪ ನೀಡಲು ಬಿಜೆಪಿ ಮುಂದಾಗಿದೆ.

ಪ್ರತ್ಯಕ್ಷವಾದ ತೃಪ್ತಿ ದೇಸಾಯಿ:

ಒಂದು ಕಡೆ ಗುರುವಾರದ ಬೈಠಕ್‌ ಮುಗಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆ ತೃಪ್ತಿ ದೇಸಾಯಿ ಎಂಬ ಧಾರ್ಮಿಕ ಹೋರಾಟಗಾರ್ತಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಶಬರಿಮಲೆಗೆ ತಾನು ಮತ್ತು ತನ್ನ 6 ಜನರ ತಂಡ ತೆರಳಲಿದೆ. ತಮಗೆ ಸೂಕ್ತ ಭದ್ರತೆ ನೀಡುವಂತೆ ಅವರು ಶುಕ್ರವಾರ ಕೇರಳ ಸರಕಾರವನ್ನು ಕೇಳಿಕೊಂಡಿದ್ದರು. ಅದರಂತೆ ಇಂದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತೃಪ್ತಿ ದೇಸಾಯಿಯವರಿಗೆ ಪ್ರತಿಭಟನೆಯ ಸ್ವಾಗತ ಎದುರಾಯಿತು. ತೃಪ್ತಿ ದೇಸಾಯಿಯನ್ನು ವಿಮಾನ ನಿಲ್ದಾಣದಿಂದ ಹೊರ ಬರದಂತೆ ತಡೆಯುವಲ್ಲಿ ಪರಿವಾರದ ಕಾರ್ಯಕರ್ತರು ಯಶಸ್ವಿಯಾದರು.

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತೃಪ್ತಿ ದೇಸಾಯಿ.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತೃಪ್ತಿ ದೇಸಾಯಿ.
/ಹಿಂದೂಸ್ಥಾನ್‌ ಟೈಮ್ಸ್‌

ಈ ‘ತೃಪ್ತಿ ದೇಸಾಯಿ’ ಯಾರು ಎಂದು ಹುಡುಕಿಕೊಂಡು ಹೊರಟರೆ, ಸಂಘಪರಿವಾರದ ಇನ್ನೊಂದು ಮುಖ ತೆರೆದುಕೊಳ್ಳುತ್ತದೆ. ಹಲವು ದೇವಸ್ಥಾನಗಳಿಗೆ ಮಹಿಳೆಯರ ಪ್ರವೇಶ ಕಲ್ಪಿಸುವ ಸಂಬಂಧ ಹೋರಾಟ ನಡೆಸಿದವರು ತೃಪ್ತಿ ದೇಸಾಯಿ. ‘ಭೂಮಾತಾ ಬ್ರಿಗೇಡ್‌’ ಎಂಬ ಸಂಘಪರಿವಾರದ ಸಂಸ್ಥೆಯನ್ನು ಹುಟ್ಟು ಹಾಕಿದವರು ಇವರು. ಬ್ರಿಗೇಡ್‌ನ ಇತ್ತಿಚಿನ ವಿಕಿಪೀಡಿಯಾ ಪೇಜ್‌ನಲ್ಲಿ ಇದಕ್ಕೂ ಆರ್‌ಎಸ್‌ಎಸ್‌ಗೂ ನೇರ ಸಂಬಂಧ ಇದೆ ಎಂದು ಬರೆಯಲಾಗಿತ್ತು. ಆದರೆ ವಿವಾದ ಆರಂಭವಾದ ನಂತರ ಅದನ್ನು ತಿದ್ದಲಾಗಿದೆ. ಮಹಾರಾಷ್ಟ್ರದ ಶನಿ ಶಿಂಗ್ಣಾಪುರ, ಮುಂಬೈನ ಹಜಿ ಅಲಿ ದರ್ಗಾಗಳಿಗೆ ಈಕೆ ಮಹಿಳೆಯರನ್ನು ಕಟ್ಟಿಕೊಂಡು ಹೊರಟಾಗ ಆರ್‌ಎಸ್‌ಎಸ್‌ ಬಹಿರಂಗವಾಗಿ ದೇಸಾಯಿ ಬೆಂಬಲಕ್ಕೆ ನಿಂತಿತ್ತು.

ಇದೇ ದೇಸಾಯಿ ಈಗ ಶಬರಿಮಲೆ ಪ್ರವೇಶಕ್ಕೆ ಬಂದಿದ್ದಾರೆ. ಅವರನ್ನು ಅವರದೇ ಪರಿವಾರದ ಕಾರ್ಯಕರ್ತರು ತಡೆ ಹಿಡಿದ್ದಾರೆ. ಅಂದರೆ ಪ್ರತಿಭಟನೆ ಮಾಡುತ್ತಿರುವವರೂ ಪರಿವಾರದವರು, ಪ್ರವೇಶ ಕೋರಿ ಬಂದವರೂ ಪರಿವಾರದವರು. ಒಟ್ಟಾರೆ ವಿವಾದ ಸೃಷ್ಟಿಯಾಗುವ ಮೂಲಕ ಇರುವಿಕೆಯನ್ನು ಸಾಬೀತುಪಡಿಸುವ ಪ್ರಯತ್ನ ಮುಂದುವರಿದಿದೆ.

ಈ ಹಿನ್ನೆಲೆಯಲ್ಲಿಯೇ, “ಶಬರಿಮಲೆ ವಿಚಾರದಲ್ಲಿ ಬಿಜೆಪಿ ಸ್ಪಷ್ಟ ರಾಜಕಾರಣಕ್ಕೆ ಇಳಿದ ಲಕ್ಷಣಗಳಿವು. ತೃಪ್ತಿ ದೇಸಾಯಿಯನ್ನು ಶಬರಿಮಲೆಗೆ ಕಳುಹಿಸುವ ಮೂಲಕ ಬಿಜೆಪಿ ತನ್ನ ರಾಜಕೀಯ ಅಜೆಂಡಾಗಳನ್ನು ವಿಸ್ತರಿಸಲು ಮುಂದಾಗಿದೆ,” ಎಂದು ಸಚಿವ ವಿ. ಎಸ್‌ ಸುನೀಲ್‌ ಕುಮಾರ್‌ ಹೇಳಿದ್ದಾರೆ. ವಿಶೇಷ ಅಂದರೆ, ಬಾಬಾ ಬುಡನ್ ಗಿರಿಯ ವಿಫಲ ಪ್ರಯತ್ನದ ನಂತರದ ದಕ್ಷಿಣದ ಅಯೋದ್ಯೆಯನ್ನಾಗಿ ಶಬರಿಮಲೆಯನ್ನು ಮುಂದಿಡಲು ಸಂಘಪರಿವಾರ ಹೊರಟಿದೆ ಎಂಬ ಆರೋಪವನ್ನು ಈಗಾಗಲೇ ಎಡ ಪಕ್ಷಗಳು ಮಾಡಿವೆ. ವಿಶೇಷ ಅಂದರೆ, ಬಿಜೆಪಿಯನ್ನು ದೂರಿದ ಕೃಷಿ ಸಚಿವ ಸುನೀಲ್ ಕುಮಾರ್, ಕಾಂಗ್ರೆಸ್ ಕೂಡ ವಿವಾದ ಸೃಷ್ಟಿಯಲ್ಲಿ ಶಾಮೀಲಾಗಿದೆ ಎಂಬ ಗಂಭೀರ ಆರೋಪ ಮಾಡುತ್ತಾರೆ. “ಈ ಹೋರಾಟಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಕೈ ಜೋಡಿಸಿವೆ” ಎಂದು ಅವರು ಕಿಡಿಕಾರಿದ್ದಾರೆ.

ಬಾಬಾ ಬುಡನ್‌ ಗಿರಿಯಲ್ಲಿ ಬಿಜೆಪಿಯ ಹಳೆಯ ನೆನಪಿಗೆ ದಾಖಲಾದ ಅಪರೂಪದ ಚಿತ್ರ.
ಬಾಬಾ ಬುಡನ್‌ ಗಿರಿಯಲ್ಲಿ ಬಿಜೆಪಿಯ ಹಳೆಯ ನೆನಪಿಗೆ ದಾಖಲಾದ ಅಪರೂಪದ ಚಿತ್ರ.
/ಡೆಕ್ಕನ್‌ ಕ್ರಾನಿಕಲ್‌.

ಕಾಂಗ್ರೆಸ್ ಅಥವಾ ಬಿಜೆಪಿ ರಾಜಕೀಯಗಳ ಆಚೆಗೆ ಹಲವು ವರ್ಷಗಳ ನಂತರ ಇಷ್ಟು ಸುದೀರ್ಘ ಅವಧಿಗೆ ನೆರೆಯ ಕೇರಳದಿಂದ ಭಾವನಾತ್ಮಕ ಸಂಗತಿಯೊಂದು ಇಷ್ಟು ಸದ್ದು ಮಾಡುತ್ತಿದೆ. ಈವರೆಗೆ ಅಭಿವೃದ್ಧಿ, ಮತ್ತಿತರ ಜನರ ಜೀವನ ಮಟ್ಟ ಸುಧಾರಣೆಯ ವಿಚಾರಗಳನ್ನು ದೇಶದ ಮುಂದಿಟ್ಟಿದ್ದ ‘ದೇವರ ನಾಡು’ ಕೇರಳಕ್ಕೆ ಇದು ಒಳ್ಳೆಯ ಲಕ್ಷಣವಂತೂ ಅಲ್ಲ.