ಸಿಸಿಬಿ ಮೇಲೆ ಸರಕಾರಕ್ಕೆ ಉಕ್ಕಿದ ಮಮಕಾರ: ನಾಟಕ ನಿಲ್ಲಿಸಿ, ಆರ್ಥಿಕ ಅಪರಾಧಗಳ ದುಸ್ಥಿತಿ ಹೇಗಿದೆ ನೋಡಿ...
COVER STORY

ಸಿಸಿಬಿ ಮೇಲೆ ಸರಕಾರಕ್ಕೆ ಉಕ್ಕಿದ ಮಮಕಾರ: ನಾಟಕ ನಿಲ್ಲಿಸಿ, ಆರ್ಥಿಕ ಅಪರಾಧಗಳ ದುಸ್ಥಿತಿ ಹೇಗಿದೆ ನೋಡಿ...

ಅದೇಶ, ನಡಾವಳಿಗಳು ಪೊಲೀಸ್ ಇಲಾಖೆಯ ವಿಶೇಷ ತನಿಖಾ ಘಟಕವೊಂದರ ಬಗೆಗೆ ಸಮ್ಮಿಶ್ರ ಸರಕಾರ ಹೊಂದಿರುವ ಆಸಕ್ತಿಯನ್ನು ಎತ್ತಿ ತೋರಿಸುತ್ತಿದೆ. ಇದು ರಾಜಕೀಯ ಅಲ್ಲ ಎಂದರೆ ನಂಬಲು ಜನ ಕೂಡ ಮೂರ್ಖರಲ್ಲ.

ಜೆಡಿಎಸ್‌ನ ಎಚ್. ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನ ಡಾ. ಜಿ. ಪರಮೇಶ್ವರ್ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಸಿಸಿಬಿ ಮೇಲೆ ಮಮಕಾರ ಉಕ್ಕಿ ಹರಿಯಲು ಆರಂಭವಾಗಿದೆ.

ಕಳೆದ 24 ಗಂಟೆಗಳ ಅಂತರದಲ್ಲಿ ‘ಕೇಂದ್ರ ಅಪರಾಧ ದಳ’ವನ್ನು ಗಮನದಲ್ಲಿ ಇಟ್ಟುಕೊಂಡು ಒಂದು ವರ್ಗಾವಣೆ ಆದೇಶ, ಮತ್ತೊಂದು ನಡಾವಳಿ ಹೊರಬಿದ್ದಿದೆ. ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಂಧಿಸಿ 4 ದಿನಗಳ ಮಟ್ಟಿಗೆ ಜೈಲಿಗೆ ಬಿಟ್ಟು ಬಂದಿತ್ತು ಸಿಸಿಬಿ. ಇದರ ಬೆನ್ನಲ್ಲೇ ಹೊರಬಿದ್ದಿರುವ ಅದೇಶ, ನಡಾವಳಿಗಳು ಪೊಲೀಸ್ ಇಲಾಖೆಯ ವಿಶೇಷ ತನಿಖಾ ಘಟಕವೊಂದರ ಬಗೆಗೆ ಸಮ್ಮಿಶ್ರ ಸರಕಾರ ಹೊಂದಿರುವ ಆಸಕ್ತಿಯನ್ನು ಎತ್ತಿ ತೋರಿಸುತ್ತಿದೆ. ಇದು ರಾಜಕೀಯ ಅಲ್ಲ ಎಂದರೆ ನಂಬಲು ಜನ ಕೂಡ ಮೂರ್ಖರಲ್ಲ, ಇರಲಿ.

ಬುಧವಾರ ಹೊರಬಿದ್ದ ಆದೇಶ ಸಿಸಿಬಿಯಲ್ಲಿ ‘ಆರ್ಥಿಕ ಅಪರಾಧ’ಗಳ ತನಿಖೆಗೆ ಇರುವ ವಿಭಾಗದ ಮುಖ್ಯಸ್ಥರನ್ನೇ ಬದಲಿಸಿದೆ ಎಂಬುದು ಗಮನಾರ್ಹ. ಎಸಿಪಿ ಮಂಜುನಾಥ್ ಚೌಧರಿ ಜಾಗಕ್ಕೆ ಎಸಿಬಿಯಲ್ಲಿದ್ದ ಬಿ. ಬಾಲರಾಜ್‌ರನ್ನು ಕರೆತರಲಾಗಿದೆ. 20ನೇ ಶತಮಾನದ ಅಂತ್ಯದಲ್ಲಿ ನಕ್ಸಲ್‌ ವಿರೋಧಿ ಕಾರ್ಯಚರಣೆಯಲ್ಲಿ ಹೆಸರು ಮಾಡಿದ್ದವರು ಬಾಲರಾಜ್. ನಂತರದ ದಿನಗಳಲ್ಲಿ ಸಿಸಿಬಿಯಲ್ಲಿಯೇ ರೌಡಿಗಳ ನಿಗ್ರಹಕ್ಕೆ ಮುಂದಾಗಿದ್ದರು. ಅಲ್ಲಿಂದ ಎಸಿಬಿಗೆ ವರ್ಗಾವಣೆಯಾದ ನಂತರ ಭ್ರಷ್ಟಾಚಾರ ತಡೆಯಲು ನಿಂತಿದ್ದರು.

‘ದಿಗ್ವಿಜಯ ನ್ಯೂಸ್‌’ ಕುಟುಕು ಕಾರ್ಯಾಚರಣೆಯಲ್ಲಿ ಬಿಬಿಎಂಪಿಯ ಸದಸ್ಯರುಗಳು ಲಂಚದ ಬೇಡಿಕೆ ಇಟ್ಟಿದ್ದು ಬಯಲಾಗಿತ್ತು. ಈ ಪ್ರಕರಣದ ತನಿಖಾಧಿಕಾರಿಯಾಗಿದ್ದವರು ಬಿ. ಬಾಲರಾಜ್. ಪ್ರಕರಣ ಈಗಾಗಲೇ ಹಳ್ಳ ಹಿಡಿದಿದೆ ಎಂದು ಎಸಿಬಿ ಮೂಲಗಳು ಹೇಳುತ್ತಿವೆ. ಹೀಗಿರುವಾಗ ಬಿ. ಬಾಲರಾಜ್ ಸಿಸಿಬಿಗೆ ವರ್ಗಾವಣೆಯಾಗಿ ‘ಆರ್ಥಿಕ ಅಪರಾಧ’ಗಳನ್ನು ತಡೆಯುವ, ವಿಚಾರಣೆಗೆ ಒಳಪಡಿಸುವ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ.

ಸಿಸಿಬಿಗೆ ನಡೆದ ಹಠಾತ್ ಸರ್ಜರಿ. ಆರ್ಥಿಕ ಅಪರಾಧ ತಡೆ ವಿಭಾಗವೇ ಟಾರ್ಗೆಟ್. 
ಸಿಸಿಬಿಗೆ ನಡೆದ ಹಠಾತ್ ಸರ್ಜರಿ. ಆರ್ಥಿಕ ಅಪರಾಧ ತಡೆ ವಿಭಾಗವೇ ಟಾರ್ಗೆಟ್. 

ಆರ್ಥಿಕ ಅಪರಾಧಗಳು- ಅಂಕಿ ಅಂಶಗಳು:

ಗಾಲಿ ಜನಾರ್ದನ ರೆಡ್ಡಿ ಈ ಬಾರಿ ಜೈಲು ಪಾಲಾಗಲು ಕಾರಣವಾಗಿದ್ದು ಆಂಬಿಡೆಂಟ್ ಹೆಸರಿನಲ್ಲಿ ನಡೆದ ಆರ್ಥಿಕ ಅಪರಾಧ. ಜನರಿಗೆ ಆಮಿಷ ಒಡ್ಡಿ ಹಣ ಸಂಗ್ರಹಿಸಿ ಕೊನೆಗೆ ವಂಚಿಸುವ ಪ್ರಕರಣಗಳು ಅಂತಿಮವಾಗಿ ಸಾಮಾಜಿಕ ಆರ್ಥಿಕ ತಳಹದಿಯನ್ನು ಹಾಳು ಮಾಡುತ್ತವೆ. ಇಂತಹ ಪ್ರಕರಣಗಳು ರಾಜ್ಯಮಟ್ಟದಲ್ಲಿ ವರದಿಯಾದರೆ ತನಿಖೆಗಾಗಿ ಸಿಐಡಿಯಲ್ಲಿಯೇ ಒಂದು ವಿಶೇಷ ಘಟಕ ಇದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದರೆ ತನಿಖೆಗೆ ಸಿಸಿಬಿಯಲ್ಲಿ ಪ್ರತ್ಯೇಕ ವಿಭಾಗ ಮಾಡಲಾಗಿದೆ.

‘ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ’ 2016ರಲ್ಲಿ ನೀಡಿದ ವರದಿ ಪ್ರಕಾರ, 2014ರಲ್ಲಿ ಕರ್ನಾಟಕದಲ್ಲಿ ವರದಿಯಾದ ಆರ್ಥಿಕ ಅಪರಾಧಗಳ ಸಂಖ್ಯೆ 7,772; 2015ರಲ್ಲಿ 8,386 ಹಾಗೂ 2016ರಲ್ಲಿ ಒಟ್ಟು 7,980 ಪ್ರರಕಣಗಳು ವರದಿಯಾಗಿದ್ದವು. ಅಂದರೆ ದೇಶದಲ್ಲಿ ಇಂತಹ ಅಪರಾಧಗಳು ಹೆಚ್ಚು ನಡೆಯುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 7ನೇ ಸ್ಥಾನದಲ್ಲಿದೆ.

ಈ ಕುರಿತು ಇನ್ನಷ್ಟು ಆಳಕ್ಕಿಳಿದರೆ ಸಮ್ಮಿಶ್ರ ಸರಕಾರ ನಾಚಿಕೆ ಪಟ್ಟುಕೊಳ್ಳುವಂತಹ ಅಂಶಗಳು ಎಡತಾಕುತ್ತವೆ. ಇದೇ ಎನ್‌ಸಿಆರ್‌ಬಿ ಮಾಹಿತಿಯ ಪ್ರಕಾರ, 2016ರ ಹೊತ್ತಿಗೆ ವಿಚಾರಣೆ ಬಾಕಿ ಉಳಿದಿದ್ದ ಇಂತಹ ಪ್ರಕರಣಗಳ ಸಂಖ್ಯೆಯೇ 9,151. ಇದರ ಜತೆಗೆ ಅದೇ ವರ್ಷ ಇನ್ನೂ 7,980 ಹೊಸ ಆರ್ಥಿಕ ಅಪರಾಧಗಳು ಸೇರ್ಪಡೆಯಾದವು. ಹೀಗಾಗಿ, ಒಟ್ಟಾರೆ ವಿಚಾರಣೆ ನಡೆಸಬೇಕಿದ್ದ ಪ್ರಕರಣ ಸಂಖ್ಯೆಯೇ 17,131ರಷ್ಟಾಗಿತ್ತು.

ಇದರಲ್ಲಿ ಗಂಭೀರ, ಗಂಭೀರವಲ್ಲದ ಪ್ರಕರಣಗಳು ಅಂತ ತೀರ್ಮಾನ ಮಾಡಿ, ಕೊನೆಗೆ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ಪ್ರಕರಣಗಳ ಸಂಖ್ಯೆ ಕೇವಲ 2,830. ಉಳಿದ 6,731 ಪ್ರಕರಣಗಳನ್ನು ಸಾಗ ಹಾಕಲಾಯಿತಾದರೂ 2016ರ ಕೊನೆಯಲ್ಲಿ ಕರ್ನಾಟಕದಲ್ಲಿ ಇನ್ನೂ 10,400 ಆರ್ಥಿಕ ಅಪರಾಧ ಪ್ರಕರಣಗಳ ಕನಿಷ್ಟ ವಿಚಾರಣೆಯೂ ನಡೆದಿರಲಿಲ್ಲ.

ಹೋಗಲಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾದ ಪ್ರಕರಣಗಳಲ್ಲಿ ನ್ಯಾಯ ಸಿಕ್ಕಿದ್ದೆಷ್ಟು ಎಂದು ನೋಡಿದರೆ ಕರ್ನಾಟಕ ಪೊಲೀಸರ ಸಾಧನೆ ಶೇ. 4.4 ಅಷ್ಟೆ. ಅಂದರೆ ದಾಖಲಾಗುವ ಪ್ರತಿ 200 ಆರ್ಥಿಕ ಪ್ರಕರಣಗಳಲ್ಲಿ ಶಿಕ್ಷಯಾಗುತ್ತಿರುವುದು 9 ಪ್ರಕರಣಗಳಲ್ಲಿ ಮಾತ್ರ. ಮಿಝೋರಾಂನಂತಹ ಪುಟ್ಟ ರಾಜ್ಯದಲ್ಲಿ ಇಂತಹದ್ದೇ ಅಪರಾಧ ಪ್ರಕರಣಗಳ ಶಿಕ್ಷೆ ಪ್ರಮಾಣ ಶೇ. 96.2ರಷ್ಟಿದೆ. ಇದು ಗೃಹ ಸಚಿವ ಜಿ. ಪರಮೇಶ್ವರ್ ಗಮನಕ್ಕೆ.

ವಿನಿವಿಂಕ್‌ನಿಂದ ಆಂಬಿಡೆಂಟ್‌ವರೆಗೆ:

ಇದಿಷ್ಟು ಕರ್ನಾಟಕದಲ್ಲಿ ನಡೆದುಕೊಂಡು ಬರುತ್ತಿರುವ ಆರ್ಥಿಕ ಅಪರಾಧಗಳು ಹಾಗೂ ಅವುಗಳ ತನಿಖೆಯ ಪ್ರಗತಿ ಮತ್ತು ಅಂತಿಮವಾಗಿ ನ್ಯಾಯದಾನದ ನಿಖರ ಚಿತ್ರಣ.

ವರ್ಷದಲ್ಲಿ ‘ಐಪಿಸಿ 420’ ಅಡಿಯಲ್ಲಿ ದಾಖಲಾಗುವ ಸಾಮಾನ್ಯ ಪ್ರಕರಣಗಳಿಂದ ಹಿಡಿದು ದೊಡ್ಡ ಹಗರಣಗಳವರೆಗೆ ಆರ್ಥಿಕ ಅಪರಾಧಗಳು ಜನರ ಹಣವನ್ನು ಸುಲಿದು ತಿನ್ನುತ್ತಲೇ ಇವೆ. ಇದನ್ನು ತಡೆಯಲು ಜನ ತಮ್ಮ ತೆರಿಗೆ ಹಣದಲ್ಲಿ ಎರಡೆರಡು ವಿಶೇಷ ತನಿಖಾ ವಿಭಾಗಗಳನ್ನು ಸಾಕುತ್ತಿದ್ದಾರೆ. ಪೊಲೀಸ್ ಇಲಾಖೆ ತಮ್ಮ ರಕ್ಷಣೆಗೆ ಇದೆ ಎಂದು ಭಾವಿಸಿದ್ದಾರೆ.

ರಾಜ್ಯದಲ್ಲಿ ವಿನಿವಿಂಕ್ ಶಾಸ್ತ್ರಿ ಹಗರಣ, ಗುರು ಟೀಕ್ ಹಗರಣ, ತೆಲಗಿ ಛಾಪಾ ಕಾಗದ ಹಗರಣ, ಸಚಿನ್ ನಾಯಕ್ ರಿಯಲ್ ಎಸ್ಟೇಟ್ ಹಗರಣ ಮತ್ತು ಇತ್ತೀಚಿನ ಆಂಬಿಡೆಂಟ್ ವಂಚನೆ ಹಗರಣವರೆಗೆ ಸಾಲು ಸಾಲು ಆರ್ಥಿಕ ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತು ದೊಡ್ಡ ಮಟ್ಟದ ಪ್ರಚಾರಗಳೂ ನಡೆದಿವೆ. ಆರಂಭ ಶೂರತ್ವದ ವಿಚಾರಣೆಯೂ ನಡೆದಿದೆ. ಆದರೆ ಅಂತಿಮವಾಗಿ ನ್ಯಾಯ ಸಿಕ್ಕಿದವರೆಷ್ಟು, ಕಳೆದುಕೊಂಡ ಹಣವನ್ನು ಮರಳಿ ಪಡೆದವರೆಷ್ಟು ಎಂದು ನೋಡಿದರೆ ಸರಕಾರ ಹಾಗೂ ಪೊಲೀಸ್ ಇಲಾಖೆಯ ಸಾಧನೆ ಶೇ. 4.4ರಷ್ಟಿದೆ. ಈ ನಡುವೆ ‘ಸರಕಾರ ಉಳಿಸಿದ’ ಅನಧಿಕೃತ ಸಾಧನೆಯೊಂದನ್ನು ಇಲಾಖೆ ಮಾಡಿದೆ.

ಸಿಸಿಬಿ ವರ್ಗಾವಣೆ ಬೆನ್ನಲ್ಲೇ ವಿನಾಯಿತಿ ಘೋಷಿಸಿ ಹೊರಡಿಸಿದ ನಡಾವಳಿ. ಸರಕಾರದ ತೀರ್ಮಾನಕ್ಕೆ  ಸಮರ್ಥನೆಯನ್ನೂ ಇದು ಒಳಗೊಂಡಿದೆ. 
ಸಿಸಿಬಿ ವರ್ಗಾವಣೆ ಬೆನ್ನಲ್ಲೇ ವಿನಾಯಿತಿ ಘೋಷಿಸಿ ಹೊರಡಿಸಿದ ನಡಾವಳಿ. ಸರಕಾರದ ತೀರ್ಮಾನಕ್ಕೆ ಸಮರ್ಥನೆಯನ್ನೂ ಇದು ಒಳಗೊಂಡಿದೆ. 

ಇಂತಹ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರಕಾರ ಹಾಗೂ ಅದರ ನೇತೃತ್ವವಹಿಸಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಿಸಿಬಿಯ ಅಧಿಕಾರಿಗಳಿಗೆ ಮಾತ್ರವೇ ವರ್ಗಾವಣೆಯಲ್ಲಿ ವಿನಾಯಿತಿ ನೀಡಿ ನಡಾವಳಿ ಹೊರಡಿಸುತ್ತಾರೆ. ಪ್ರಕರಣವಾರು ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ‘ಸಕ್ಷಮ ಪ್ರಾಧಿಕಾರ’ಕ್ಕೆ ನೀಡುತ್ತಾರೆ. ಇದಕ್ಕೆ, ‘ನಗರಗಳು ವೇಗವಾಗಿ ಬೆಳೆಯುತ್ತಿದ್ದು, ಅದರಲ್ಲೂ ಬೆಂಗಳೂರು ನಗರವು ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ನಗರದಲ್ಲಿನ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಹಾಗೂ ವಿಚಾರಣೆ ನಡೆಸುವ ಅಗತ್ಯವಿದೆ’ ಎಂಬ ಸಮಜಾಯಿಷಿಯನ್ನು ಅವರು ನೀಡುತ್ತಾರೆ. ಯಾರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಇದು?

ರಾಷ್ಟ್ರದ ರಾಜಧಾನಿ ದಿಲ್ಲಿಯನ್ನು ಹೊರತುಪಡಿಸಿದರೆ ಅಪರಾಧ ಪ್ರಕರಣಗಳ ವಿಚಾರದಲ್ಲಿ ಎರಡನೇ ಸ್ಥಾನದಲ್ಲಿರುವ ನಗರ ಬೆಂಗಳೂರು ಎಂಬುದನ್ನು ಎನ್‌ಸಿಆರ್‌ಬಿ ವರದಿ ಹೇಳಿ 2 ವರ್ಷ ಕಳೆದಿದೆ. ಇಂತಹ ಸ್ಥಿತಿಯಲ್ಲಿ, ಪೊಲೀಸ್ ಇಲಾಖೆಯ ಸಿಸಿಬಿ ಎಂಬ ಒಂದು ವಿಭಾಗಕ್ಕೆ ವಿಶೇಷ ಮಮಕಾರ ತೋರಿಸಲು ಸರಕಾರ ಹೊರಟಿದೆ. ಒಂದು ವರ್ಗಾವಣೆ ಆದೇಶ, ಮತ್ತೊಂದು ನಡಾವಳಿಯ ಅದಕ್ಕೆ ಸಾಕ್ಷಿ. ಇಂತಹ ಕಣ್ಕಟ್ಟು ಕೆಲಸಗಳನ್ನು ಪಕ್ಕಕ್ಕಿಟ್ಟು, ನಿಜವಾದ ಸುಧಾರಣೆ ಕಡೆಗೆ ಕುಮಾರಸ್ವಾಮಿ ಆಲೋಚನೆ ಮಾಡದೆ ಹೋದರೆ, ಜನರೆದುರು ಹಾಕಿದ ಕಣ್ಣೀರಿಗೆ ಇತಿಹಾಸ ಖಂಡಿತಾ ಕೃತಜ್ಞತೆ ಸಲ್ಲಿಸುವುದಿಲ್ಲ.

Join Samachara Official. CLICK HERE