samachara
www.samachara.com
ಅಸೀಮಾ ಸಂಪಾದಕ ಸಂತೋಷ್ ತಮ್ಮಯ್ಯ ಬಂಧನ ಯಾಕೆ ಕಾನೂನು ಬದ್ಧ?
COVER STORY

ಅಸೀಮಾ ಸಂಪಾದಕ ಸಂತೋಷ್ ತಮ್ಮಯ್ಯ ಬಂಧನ ಯಾಕೆ ಕಾನೂನು ಬದ್ಧ?

ವಿಶೇಷ ಅಂದರೆ ಪೊಲೀಸರು ದೂರು ದಾಖಲಿಸುವ ಮುನ್ನ ಕಾನೂನು ಸಲಹೆಯನ್ನು ಪಡೆದುಕೊಂಡಿದ್ದರು ಎಂಬುದನ್ನು ಪ್ರಥಮ ಮಾಹಿತಿ ವರದಿ ಹೇಳುತ್ತದೆ.

ವಸಂತ ಕೊಡಗು

ವಸಂತ ಕೊಡಗು

ಬಲಪಂಥೀಯ ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ಕೊಡಗಿನ ‘ಟಿಪ್ಪು ಜಯಂತಿ’ ವಿವಾದಕ್ಕೆ ಹೊಸ ಆಯಾಮವನ್ನು ಒದಗಿಸಿದೆ.

ಕೊಡಗು ಜಿಲ್ಲೆಯ ಗೋಣಿ ಕೊಪ್ಪಲಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತೋಷ್ ಆಡಿದ ಮಾತುಗಳು ಬಂಧನಕ್ಕೆ ಕಾರಣವಾಗಿವೆ. ನ. 5ರಂದು ಪ್ರಜ್ಞಾ ಕಾವೇರಿ ಎಂಬ ಸಂಘಟನೆ ಟಿಪ್ಪು ಜಯಂತಿ ವಿರೋಧಿಸಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಮಯದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ವೇಳೆ ಸಂತೋಷ್, ‘ಟಿಪ್ಪುವಿನಂತಹ ಮತಾಂಧನ ಸೃಷ್ಟಿಯ ಹಿಂದೆ ಪ್ರವಾದಿ ಹುಟ್ಟು ಹಾಕಿದ ಅಸಹನೆ ಸಿದ್ಧಾಂತ ಕಾರಣ’ ಎಂಬರ್ಥದಲ್ಲಿ ಬೀಸು ಹೇಳಿಕೆ ನೀಡಿದ್ದರು. ಇದನ್ನು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು. ವರದಿ ಆಧಾರದ ಮೇಲೆ ಅಸ್ಕರ್ ಎಂಬುವವರು ದೂರು ನೀಡಿದ್ದರು.

ವಿಶೇಷ ಅಂದರೆ ಪೊಲೀಸರು ದೂರು ದಾಖಲಿಸುವ ಮುನ್ನ ಕಾನೂನು ಸಲಹೆಯನ್ನು ಪಡೆದುಕೊಂಡಿದ್ದರು ಎಂಬುದನ್ನು ಪ್ರಥಮ ಮಾಹಿತಿ ವರದಿ ಹೇಳುತ್ತದೆ. ಸಹಾಯಕ ಅಭಿಯೋಗ ನಿರ್ದೇಶಕರು ಸೆಕ್ಷನ್ 295 (ಎ) ಅಡಿಯಲ್ಲಿ ದೂರು ದಾಖಲಿಸಬಹುದು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಕಾನೂನಿನ ಪ್ರಕ್ರಿಯೆ ನಡೆದಿದೆ. ಉದ್ದೇಶ ಪೂರ್ವಕವಾಗಿ ಧಾರ್ಮಿಕ ನಂಬಿಕೆಗಳನ್ನು ಅಪಮಾನಿಸುವ ಮೂಲಕ ಕೋಮು ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳಿಗೆ ಸೆಕ್ಷನ್ 295 (ಎ) ಅನ್ವಯವಾಗುತ್ತದೆ.

ಪ್ರಥಮ ಮಾಹಿತಿ ವರದಿ ಪ್ರಕಾರ, ಪ್ರಕರಣದಲ್ಲಿ ಸಂತೋಷ್ ತಮ್ಮಯ್ಯ ಆರೋಪಿ ನಂಬರ್ 1 ಆದರೆ, ಸುಧಾಕರ್ ಹೊಸಳ್ಳಿ, ರಾಬರ್ಟ್ ರೊಜಾರಿಯೋ, ಅಡ್ಡಂಡ ಕಾರಿಯಪ್ಪ, ಭಾಚರಿಯಂಡ ಅಪ್ಪಣ್ಣ ಎಂಬುವವರು ಇತರೆ ಆರೋಪಿಗಳಾಗಿದ್ದಾರೆ. ಯಾಕೆ ಇವುರುಗಳ ಮೇಲೆ ಸೆಕ್ಷನ್ 295 (ಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಯಿತು? ವಿವರನ್ನು ಪ್ರಥಮ ಮಾಹಿತಿ ವರದಿಯೇ ನೀಡುತ್ತದೆ.

ವರದಿಯಲ್ಲಿ ಉಲ್ಲೇಖಿಸಿದಂತೆ; ಆರೋಪಿಗಳ ಭಾಷಣ ಹಾಗೂ ಪತ್ರಿಕಾ ವರದಿ ಕೊಡಗು ಜಿಲ್ಲೆಯಲ್ಲಿ ಕೋಮು ಗಲಭೆ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾನೂನಿನ ಅಭಿಪ್ರಾಯ ಪಡೆದು ದೂರು ದಾಖಲಿಸಿಲಾಗಿದೆ. 
ವರದಿಯಲ್ಲಿ ಉಲ್ಲೇಖಿಸಿದಂತೆ; ಆರೋಪಿಗಳ ಭಾಷಣ ಹಾಗೂ ಪತ್ರಿಕಾ ವರದಿ ಕೊಡಗು ಜಿಲ್ಲೆಯಲ್ಲಿ ಕೋಮು ಗಲಭೆ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾನೂನಿನ ಅಭಿಪ್ರಾಯ ಪಡೆದು ದೂರು ದಾಖಲಿಸಿಲಾಗಿದೆ. 

ಧರ್ಮ ಎಂಬುದು ಸೂಕ್ಷ್ಮ ವಿಷಯ. ಅದರಲ್ಲೂ ಅನ್ಯ ಧರ್ಮದ ವಿಚಾರ ಬಂದಾಗ ಎಚ್ಚರ ತಪ್ಪಿದರೂ ಭಾರಿ ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ. ಹಿಂದೂ ಧರ್ಮದಲ್ಲಿ ಹುಟ್ಟಿದವರು ಹಿಂದೂ ಧರ್ಮವನ್ನು ಒಪ್ಪುವುದು, ಬಿಡುವುದು ಅವರಿಗೆ ಬಿಟ್ಟ ಸ್ವಾತಂತ್ರ್ಯ. ಅದನ್ನು ಅಪ್ಪಿಕೊಳ್ಳುವ ಅಥವಾ ಟೀಕಿಸುವ, ವಿಮರ್ಶಿಸುವ ಹಕ್ಕು ಅವರ ಹುಟ್ಟಿನ ಕಾರಣಕ್ಕೇ ಸಿಕ್ಕಿ ಬಿಡುತ್ತದೆ. ಅದೇ ಹಿಂದೂ ಹಿನ್ನೆಲೆಯವರು ಅನ್ಯ ಧರ್ಮದ ಕುರಿತು ಮಾತನಾಡುವಾಗ ಎಚ್ಚರಿಕೆ ಅಗತ್ಯ. ಇದೇ ನಿಯಮ ಇತರೆ ಧರ್ಮದವರು ಹಿಂದೂ ಧರ್ಮದ ಕುರಿತು ಮಾತನಾಡಿದಾಗಲೂ ಅನ್ವಯವಾಗುತ್ತದೆ. ಧಾರ್ಮಿಕ ಸಾಮರಸ್ಯಗಳನ್ನು ಕದಡುವುದು ಕೂಡ ಒಂದು ರಾಜಕೀಯವೇ ಆಗಿರುವ ಈ ದೇಶದಲ್ಲಿ ಕನಿಷ್ಟ ಈ ಎಚ್ಚರಿಕೆಯನ್ನೂ ಪಾಲಿಸದೇ ಹೋದರೆ, ಕೊನೆಯ ಅಸ್ತ್ರ ಅಂತ ಇರುವುದು ಕಾನೂನು; ಮತ್ತು ಸಂತೋಷ್ ತಮ್ಮುಯ್ಯ ವಿಚಾರದಲ್ಲಿ ಕೊಡಗು ಪೊಲೀಸರು ಸರಿಯಾದ ನಡೆಯನ್ನೇ ಇಟ್ಟಿದ್ದಾರೆ.

ನಿರೀಕ್ಷೆಯಂತೆಯೇ ಬಲಪಂಥೀಯ ಸಂಘಟನೆಗಳು ಬೀದಿಗೆ ಇಳಿದಿವೆ. ಬಂಧನ ರಾಜಕೀಯ ಪ್ರೇರಿತ ಎನ್ನುತ್ತಿವೆ. ಒಂದು ವೇಳೆ, ಇಂತಹ ಬಾಲಿಷ ಭಾಷಣಗಳು ಜಿಲ್ಲೆಯ ಕೋಮು ಸಂಘರ್ಷಕ್ಕೆ ನಾಂದಿ ಹಾಡಿದ್ದರೆ ಅದರ ಹೊಣೆಯನ್ನು ಯಾರು ಹೊತ್ತುಕೊಳ್ಳಬೇಕು?

ವಿವಾದಾತ್ಮಕ ಭಾಷಣಕ್ಕೆ ವೇದಿಕೆ ಒದಗಿಸಿವ ಕಾರ್ಯಕ್ರಮದ ಆಹ್ವಾನ ಪತ್ರಿಕೆ. 
ವಿವಾದಾತ್ಮಕ ಭಾಷಣಕ್ಕೆ ವೇದಿಕೆ ಒದಗಿಸಿವ ಕಾರ್ಯಕ್ರಮದ ಆಹ್ವಾನ ಪತ್ರಿಕೆ. 

ನಮ್ಮ ಮುಖ್ಯವಾಹಿನಿಯ ಬಲಪಂಥೀಯ ಪತ್ರಕರ್ತರು ಸಂತೋಷ್ ತಮ್ಮಯ್ಯ ಬಂಧನದ ಹಿನ್ನೆಲೆಯಲ್ಲಿ ಮುಂದಿಟ್ಟಿರುವ ವಾದ ಸರಣಿಗಳು ಬಾಲಿಷವಾಗಿವೆ. ಹಿಂದೂ ಧರ್ಮದ ವಿಚಾರದಲ್ಲಿ ಭಗವಾನ್ ವಿರುದ್ಧ ದೂರುಗಳು ದಾಖಲಾಗಿವೆ, ಆದರೆ ಬಂಧನ ಯಾಕಾಗಿಲ್ಲ ಎಂಬುದು ಅವರ ಪ್ರಶ್ನೆ. ಭಗವಾನ್ ಮಾತನಾಡಿದ್ದು, ತಾವು ಬೆಳೆದು ಬಂದ ಧರ್ಮದ ಬಗೆಗೆ. ತಮ್ಮದೇ ಧರ್ಮವನ್ನು ವಿಮರ್ಶಿಸುವ ಭಗವಾನ್ ನಡೆ ಹೆಚ್ಚೆಂದರೆ ಧರ್ಮಬೀರುಗಳ ನಂಬಿಕೆಯನ್ನು ಘಾಸಿ ಮಾಡಬಹುದೇ ಹೊರತು ಧಾರ್ಮಿಕ ಸಂಘರ್ಷ ಹುಟ್ಟು ಹಾಕುವ ಕೆಲಸ ಮಾಡಿಲ್ಲ ಎಂಬುದನ್ನು ಗಮನಿಸಬೇಕಿದೆ. ಸಂತೋಷ್ ತಮ್ಮಯ್ಯ ಯಾಮಾರಿದ್ದು, ಹದ್ದು ಮೀರಿದ್ದು ಈ ವಿಚಾರದಲ್ಲಿ.

ಮೂಲಗಳ ಪ್ರಕಾರ, ಸಂತೋಷ್ ತಮ್ಮಯ್ಯ ಮೇಲೆ ಸೆಕ್ಷನ್ 153 (ಎ) ಅಡಿಯಲ್ಲಿ ಕೇಸು ದಾಖಲಿಸಲು ಪೊಲೀಸರು ಮೊದಲು ಆಲೋಚನೆ ಮಾಡಿದ್ದರು. ಇದು ಕೋಮು ಗಲಭೆಗೆ ಪ್ರಚೋದನೆ ನೀಡಿದರೆ ದಾಖಲಿಸುವ ಪ್ರಬಲ ಕಾನೂನು. ಇದನ್ನು ಹಾಕಿದರೆ ಜಾಮೀನು ಸಿಗುವುದು ಕಷ್ಟ ಇತ್ತು. ಆದರೆ ಪತ್ರಕರ್ತ ಎಂಬ ಒಂದೇ ಕಾರಣಕ್ಕೆ ಪ್ರಬಲ ಕಾನೂನಿನ ಬದಲು, ಕಾನೂನಿನ ಸಲಹೆಯಂತೆ 295 (ಎ) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇದು ಸಂತೋಷ್‌ಗೆ ಸಿಕ್ಕಿರುವ ಅವಕಾಶ ಕೂಡ.

ಕೊಡಗು ಜನ ಟಿಪ್ಪುವನ್ನು ವಿರೋಧಿಸುತ್ತಿದ್ದಾರೆ ಮತ್ತು ಅದಕ್ಕೆ ಐತಿಹಾಸಿಕ ಸಕಾರಣಗಳೂ ಇವೆ. ಆದರೆ ಅದನ್ನು ಮುಂದಿಡುವ ಭರಾಟೆಯಲ್ಲಿ ತಮ್ಮ ಮಿತಿಗಳನ್ನು ಮೀರಿದರೆ ಏನಾಗುತ್ತದೆ ಎಂಬುದಕ್ಕೆ ಆರ್‌ಎಸ್‌ಎಸ್‌ ಮುಖವಾಣಿ ಅಸೀಮಾ ಪತ್ರಿಕೆ ಸಂಪಾದಕ ಸಂತೋಷ್ ಬಂಧನ ಒಂದು ಪಾಠವಾಗಬೇಕಿದೆ.

ಕೊಡವರು ಕೂಡ ಟಿಪ್ಪುವನ್ನು ವಿರೋಧಿಸುವ ವೇಳೆಯಲ್ಲಿ ಇಂತಹ ಅತಿರೇಕಗಳನ್ನು ದೂರ ಇಡಬೇಕಿದೆ. ಇಲ್ಲವಾದರೆ, ಭವಿಷ್ಯದಲ್ಲಿ ತಮ್ಮ ಪ್ರತಿರೋಧದ ನೆಲೆಗೆ ಇರುವ ಸಾತ್ವಿಕ ಬೆಂಬಲವನ್ನೂ ಅವರು ಕಳೆದುಕೊಳ್ಳುತ್ತಾರೆ. ಈ ವಿಚಾರವನ್ನು ಕೊಡವ ಸಮುದಾಯ ಎಚ್ಚರಿಕೆಯಿಂದ ಗಮನಿಸಬೇಕಿದೆ.

Join Samachara Official. CLICK HERE