samachara
www.samachara.com
ಕ್ಯಾನ್ಸರ್ ಮಾಫಿಯಾದ ಇನ್‌ಸೈಡ್‌ ಸ್ಟೋರಿ: ಮಾರುಕಟ್ಟೆ ನಿಯಂತ್ರಕರು ಯಾರು ಗೊತ್ತಾ?
COVER STORY

ಕ್ಯಾನ್ಸರ್ ಮಾಫಿಯಾದ ಇನ್‌ಸೈಡ್‌ ಸ್ಟೋರಿ: ಮಾರುಕಟ್ಟೆ ನಿಯಂತ್ರಕರು ಯಾರು ಗೊತ್ತಾ?

ಆರೋಗ್ಯ ಕ್ಷೇತ್ರ ಕೀಳು ಮಟ್ಟಕ್ಕಿಳಿದು ಯಾವುದೋ ಕಾಲವಾಗಿದೆ. ಕ್ಯಾನ್ಸರ್‌ ತೀರ ಕೆಟ್ಟ ಉದ್ಯಮವಾಗಿ ಬೆಳೆದು ನಿಂತಿದೆ. ಇದರಲ್ಲಿ ದೊಡ್ಡ ದೊಡ್ಡ ಕಂಪನಿಗಳೇ ಪಾಲುದಾರರು. ಕ್ಯಾನ್ಸರ್‌ ರೋಗಿಗಳೇ ಇವರ ಗ್ರಾಹಕರು.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

“ಕ್ಯಾನ್ಸರ್‌ ಸಂಶೋಧನೆ ಎಂಬುದು ದೊಡ್ಡ ಹಗರಣ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು,” ಎಂದು 1986ರಲ್ಲೇ ಹೇಳಿದ್ದರು ನೊಬೆಲ್‌ ಪ್ರಶಸ್ತಿ ವಿಜೇತ ವೈದ್ಯ ಡಾ. ಲಿನಸ್‌ ಪೌಲಿಂಗ್‌.

ಅವರು ಈ ಮಾತು ಹೇಳಿ ಸುಮಾರು 30 ವರ್ಷಗಳು ಕಳೆದಿವೆ. ಇಂದಿಗೂ ಕ್ಯಾನ್ಸರ್‌ ಸುತ್ತಾ ಸಂಶೋಧನೆಗಳು ನಡೆಯುತ್ತಲೇ ಇವೆ. ಇವತ್ತಿಗೂ ಸರಿಯಾದ ಚಿಕಿತ್ಸಾ ವಿಧಾನ, ಮದ್ದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅಮೆರಿಕಾ ಮೊದಲಾದ ಮುಂದುವರಿದ ರಾಷ್ಟ್ರಗಳಲ್ಲಿ ‘40 ವರ್ಷಗಳಿಂದ ಸಂಶೋಧನೆ ನಡೆಸಿಯೂ ಯಾಕೆ ಯಾವುದೇ ಫಲಿತಾಂಶಗಳು ಸಿಕ್ಕಿಲ್ಲ,’ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆದರೆ ಅವತ್ತಿಗೂ ಇವತ್ತಿಗೂ ಪ್ರಶ್ನೆಗಳಾಚೆಗೆ ಕ್ಯಾನ್ಸರ್‌ ವಿಚಾರದಲ್ಲಿ ಬೆಳೆದು ನಿಂತಿದ್ದು ಉದ್ಯಮ ಹೊರತು ಮತ್ತಿನ್ನೇನೂ ಅಲ್ಲ.

ಇವತ್ತಿಗೆ ಜಗತ್ತಿನಲ್ಲಿ ಕ್ಯಾನ್ಸರ್‌ಗೆ ಇರುವ ಮದ್ದು- ಚಿಕಿತ್ಸೆ ಅಂತ ಇರುವುದು ಮೂರೇ. ಒಂದು ಆಪರೇಷನ್‌, ಎರಡನೆಯದ್ದು ರೇಡಿಯೇಷನ್‌ ಥೆರಪಿ, ಮೂರನೆಯದ್ದು ಕಿಮೋಥೆರಪಿ. ಆಸಕ್ತಿಕರ ಅಂಶವೆಂದರೆ, ಯಾವುದೇ ಹೊಸ ಆರೋಗ್ಯ ಥೆರಪಿಗೆ ಕಳೆದ ನೂರು ವರ್ಷಗಳಲ್ಲಿ ಅಮೆರಿಕಾದ ಆರೋಗ್ಯ ಇಲಾಖೆ ಅನುಮತಿ ನೀಡಿಲ್ಲ. ಇದೇ ಅವಧಿಯಲ್ಲಿ ಕ್ಯಾನ್ಸರ್‌ ರೋಗಕ್ಕೆ ಹೊಸ ಚಿಕಿತ್ಸೆ ಕಂಡು ಹಿಡಿಯಲಾಗುವುದು ಎಂಬ ಭರವಸೆಯನ್ನು ಬಿತ್ತಿಕೊಂಡು ಬರಲಾಗಿದೆ. ಸಾವಿರಾರು ಜನ ಕ್ಷಣ ಕ್ಷಣಕ್ಕೂ ಕ್ಯಾನ್ಸರ್‌ ಮಾರಿಗೆ ಬಲಿಯಾಗುತ್ತಲೇ ಇದ್ದಾರೆ.

ಯಾಕೆ ಹೀಗಾಯ್ತು ಎಂದು ಕೇಳಿದರೆ, ತಜ್ಞರು ಹೇಳುವ ಒಂದೇ ಮಾತು ‘ಕ್ಯಾನ್ಸರ್‌ ಉದ್ಯಮ’.

ಆರೋಗ್ಯ ಕ್ಷೇತ್ರ ಕೀಳು ಮಟ್ಟಕ್ಕಿಳಿದು ಯಾವುದೋ ಕಾಲವಾಗಿದೆ. ಇದರ ಮಧ್ಯದಲ್ಲಿ ಕ್ಯಾನ್ಸರ್‌ ತೀರ ಕೆಟ್ಟ ಉದ್ಯಮವಾಗಿ ಬೆಳೆದು ನಿಂತಿದೆ. ಇದರಲ್ಲಿ ದೊಡ್ಡ ದೊಡ್ಡ ಕಂಪನಿಗಳೇ ಪಾಲುದಾರರು. ಕ್ಯಾನ್ಸರ್‌ ರೋಗಿಗಳೇ ಇವರ ಗ್ರಾಹಕರು.

ಬೆಳೆಯುತ್ತಿರುವ ರೋಗ, ಎದ್ದು ನಿಲ್ಲುತ್ತಿರುವ ಮಾರುಕಟ್ಟೆ ಸಾಮ್ರಾಜ್ಯ

ದಿನದಿಂದ ದಿನಕ್ಕೆ ಕ್ಯಾನ್ಸರ್‌ ಜನರಲ್ಲಿ ಹಬ್ಬುತ್ತಿರುವ ವೇಗ ಉದ್ಯಮಕ್ಕೆ ಪೂರಕವಾಗಿದೆ. 20ನೇ ಶತಮಾನದ ಆರಂಭದಲ್ಲಿ 20 ಜನರಲ್ಲಿ ಒಬ್ಬರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದರು. 1940ರ ಹೊತ್ತಿಗೆ ಈ ಪ್ರಮಾಣ 16 ರಲ್ಲಿ ಒಬ್ಬರವರೆಗೆ ಏರಿಕೆಯಾಯಿತು. 1970ಕ್ಕೆ ಬರುವಾಗ ಇದು 10ರಲ್ಲಿ ಒಬ್ಬರಿಗೆ ಮುಟ್ಟಿದ್ದು, ಸದ್ಯ ಮೂರು ಜನರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎನ್ನುತ್ತಿವೆ ಅಧ್ಯಯನಗಳು.

ಭಾರತದ ವಿಷಯಕ್ಕೆ ಬಂದರೆ ಇಲ್ಲಿ 2001ರ ವೇಳೆ 7,97,657 ಕ್ಯಾನ್ಸರ್‌ ಪ್ರಕರಣಗಳು ವರದಿಯಾಗಿದ್ದವು. 2016ರ ಹೊತ್ತಿಗೆ ಈ ಪ್ರಮಾಣ 12,19,649ಕ್ಕೆ ಏರಿಕೆಯಾಗಿದೆ. ಇವೆಲ್ಲವೂ ಆಸ್ಪತ್ರೆಗಳ ಮೆಟ್ಟಿಲು ಹತ್ತಿದ, ವರದಿಯಾದ ಪ್ರಕರಣಗಳಷ್ಟೇ. ಆಸ್ಪತ್ರೆಗಳ ಮೆಟ್ಟಿಲು ಹತ್ತದೇ, ಗ್ರಾಮೀಣ ಭಾಗದಲ್ಲೇ ಮುಗಿದು ಹೋದ ಪ್ರಕರಣಗಳು ಇನ್ನೂ ಹತ್ತಾರು ಲಕ್ಷಗಳಿವೆ.

ಇಂಥಹ ಜನರಿಗೆ ಆರೋಗ್ಯ ಸೇವೆ ನೀಡುವ ಮಾರುಕಟ್ಟೆಯ 2012ರ ಗಾತ್ರವೇ ಸುಮಾರು 12 ಸಾವಿರ ಕೋಟಿ ರೂಪಾಯಿ. ಪ್ರತಿ ವರ್ಷ ಈ ಮಾರುಕಟ್ಟೆ ಶೇಕಡಾ 15ಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಬೆಳವಣಿಗೆ ಕಾಣುತ್ತಿದ್ದು 40 ಸಾವಿರ ಕೋಟಿ ರೂಪಾಯಿ ದಾಟಿ ಮುನ್ನುಗ್ಗುತ್ತಿದೆ. ಮತ್ತು ಇದರಲ್ಲಿ ಮುಕ್ಕಾಲು ಪಾಲು ಹಣವನ್ನು ಜೇಬಿಗಿಳಿಸಿಕೊಳ್ಳುತ್ತಿರುವುದು ಕಿಮೋಥೆರಪಿ. ಕ್ಯಾನ್ಸರ್‌ ರೋಗಿಗಗಳು ಹೆಚ್ಚಿನ ಸಂದರ್ಭದಲ್ಲಿ ಬದುಕುವುದಿಲ್ಲ ಎಂದು ಗೊತ್ತಿದ್ದರೂ ಕಿಮೋಥೆರಪಿಗೆ ಯಾಕೆ ಒತ್ತಾಯಿಸಲಾಗುತ್ತದೆ ಎಂಬುದಕ್ಕೆ ಸಹಜ ಉತ್ತರ ಇಲ್ಲೇ ಸಿಗುತ್ತದೆ.

ಭಾರತದ ಬಡ ರೋಗಿಗಳು:

ಹಾಗಂಥ ಭಾರತದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡಲು ಬೇಕಾದಷ್ಟು ಪರಿಣತ ವೈದ್ಯರೂ ಇಲ್ಲ. ತಜ್ಞ ವೈದ್ಯರು ಮತ್ತು ಆಸ್ಪತ್ರೆಗಳ ಕೊರತೆ ಸಾಕಷ್ಟಿದೆ. ಕ್ಯಾನ್ಸರ್‌ ರೋಗಕ್ಕೆ ಬೇಕಾದ ಔಷಧಗಳೂ ದುಬಾರಿಯಾಗಿವೆ. ಇವುಗಳಲ್ಲಿ ಹೆಚ್ಚಿನ ಔಷಧಗಳ ಉತ್ಪಾದನೆಯೂ ಭಾರತದಲ್ಲಿ ನಡೆಯುತ್ತಿಲ್ಲ. ಏನಿದ್ದರೂ ವಿದೇಶಿ ಕಂಪನಿಗಳೇ ಏಕಸ್ವಾಮ್ಯ ಮೆರೆಯುತ್ತಿವೆ. ಜತೆಗೆ ಚಿಕಿತ್ಸೆಗೆ ಬೇಕಾದ ಉಪಕರಣಗಳು ಮೊದಲಾದವನ್ನು ವಿದೇಶದಿಂದ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪರಿಣಾಮ ಅದು ಫಲ ಕೊಡುತ್ತದೋ ಬಿಡುತ್ತದೋ ಚಿಕಿತ್ಸಾ ವೆಚ್ಚಾ ಗಗನಮುಖಿಯಾಗಿದೆ.

2016ರಲ್ಲಿ ಅಂದಾಜು ಮಾಡಿದಂತೆ ಭಾರತದಲ್ಲಿ ಕ್ಯಾನ್ಸರ್‌ ಚಿಕಿತ್ಸೆಯ ಸರಾಸರಿ ಮೊತ್ತ 10 ಲಕ್ಷ ರೂಪಾಯಿ. ಆದರೆ ಭಾರತದಲ್ಲಿರುವ ಹೆಲ್ತ್‌ ಇನ್ಶೂರೆನ್ಸ್‌ ಪಾಲಿಸಿಗಳ ನೀಡುವ ಸರಾಸರಿ ಮೊತ್ತ ಕೇವಲ 1.9 ಲಕ್ಷ ರೂಪಾಯಿ. ಈ ಕಾರಣಕ್ಕೆ ದೇಶದಲ್ಲಿ ಕ್ಯಾನ್ಸರ್‌ ಬಂದರೆ ಜನರು ಹೆದರುವ, ಜತೆಗೆ ಚಿಕಿತ್ಸೆ ಪಡೆದುಕೊಳ್ಳಲಾಗದ ವಾತಾವರಣ ಇದೆ.

ತಜ್ಞರ ಪ್ರಕಾರ ಭಾರತ ಸರಕಾರದ ಕಡೆಯಿಂದ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಪಾಲಿಸಿಗಳು ಮತ್ತು ಸೂಕ್ತ ವ್ಯವಸ್ಥೆಗಳು ಇರದೇ ಇರುವುದರಿಂದ ಸಮಸ್ಯೆ ಮತ್ತಷ್ಟು ಬಿಗುಡಾಯಿಸಿದೆ. ಭಾರತದ ಕ್ಯಾನ್ಸರ್‌ ಮಾರುಕಟ್ಟೆಯನ್ನು ಮ್ಯಾಕ್ಸ್‌, ಅಪೋಲೋ, ಫೋರ್ಟಿಸ್‌ ಮೊದಲಾದ ಆಸ್ಪತ್ರೆಗಳು ಆಳುತ್ತಿವೆ. ಜತೆಗೆ ಇದಕ್ಕೆ ಬೇಕಾದ ಔಷಧ ಮೊದಲಾದ ಸರಕುಗಳನ್ನು ಬಹುರಾಷ್ಟ್ರೀಯ ದೈತ್ಯ ಕಂಪನಿಗಳಾದ ರೋಶೆ, ಹರ್ಸೆಪ್ಟಿನ್‌, ಜಿಎಸ್‌ಕೆ, ಆಸ್ಟ್ರಾಝೆನೆಕಾ, ಸನೋಫಿ ಅವೆಂಟಿಸ್‌ ಮತ್ತು ದೇಶಿಯ ಔಷಧಿ ತಯಾರಕರಾದ ಸಿಪ್ಲಾ, ಡಾ.ರೆಡ್ಡಿಸ್‌, ನಾಟ್ಕೋ ಫಾರ್ಮ, ಬಯೋಕಾನ್‌, ಪಿರಮಲ್‌ ಮೊದಲಾದವರು ಪೂರೈಸುತ್ತಿದ್ದಾರೆ. ಇವರು ಹೊಣೆಗಾರಿಕೆ ಮೆರೆಯಬೇಕಾದ ಸಮಯ ಇದು. ಮತ್ತು ಇವರಿಗೆ ಕಡಿವಾಣ ಹಾಕಬೇಕಾದ ಹೊಣೆ ಸರಕಾರದ ಮೇಲಿದೆ.

ಆದರೆ, ಅಮೆರಿಕಾದಂಥ ದೇಶದಲ್ಲೇ ಸಂಶೋಧನೆಯಿಂದ ಹಿಡಿದು, ಔಷಧ ತಯಾರಿಕೆವರೆಗೆ ಸರಕಾರವನ್ನು ಕಡ್ಡಿ ಆಡಿಸಲೂ ಈ ‘ಕ್ಯಾನ್ಸರ್‌ ಮಾಫಿಯಾ’ ಬಿಟ್ಟಿಲ್ಲ. ಇನ್ನು ಭಾರತದಲ್ಲಿ ಇದೆಲ್ಲಾ ಸಾಧ್ಯವೋ? ಗೊತ್ತಿಲ್ಲ.