samachara
www.samachara.com
‘ರೆಡ್ಡಿ ಡೀಲ್ ಪ್ರಕರಣ’: ನೆಲೆ ಗಟ್ಟಿಮಾಡಿಕೊಳ್ಳಲು ಹೋಗಿ ಹೊಣೆಗಾರಿಕೆ ಮರೆತರಾ ಈ ಮೂವರು ಅಧಿಕಾರಿಗಳು?
COVER STORY

‘ರೆಡ್ಡಿ ಡೀಲ್ ಪ್ರಕರಣ’: ನೆಲೆ ಗಟ್ಟಿಮಾಡಿಕೊಳ್ಳಲು ಹೋಗಿ ಹೊಣೆಗಾರಿಕೆ ಮರೆತರಾ ಈ ಮೂವರು ಅಧಿಕಾರಿಗಳು?

ಸಿಸಿಬಿ ಇಲಾಖೆಯ ಒಳಗೆ ಹಾಗೂ ಪ್ರಕರಣವನ್ನು ಹತ್ತಿರದಿಂದ ಬಲ್ಲವರು ನೀಡಿದ ಮಾಹಿತಿ ಆಧಾರದ ಮೇಲೆ ‘ಸಮಾಚಾರ’ ರೆಡ್ಡಿ ಡೀಲ್ ಪ್ರಕರಣದ ಇನ್ನೊಂದು ಆಯಾಮವನ್ನು ಇಲ್ಲಿ ತೆರೆದಿಡುತ್ತಿದೆ.

Team Samachara

ತಮ್ಮ ಸ್ಥಾನ ಮತ್ತು ಮಾನ ಗಟ್ಟಿಗೊಳಿಸಿಕೊಳ್ಳಲು ‘ಚಿನ್ನದ ಗಟ್ಟಿಯ ಕತೆ’ಗೆ ರೋಚಕತೆಯನ್ನು ಪೋಣಿಸಿದರಾ ಸಿಸಿಬಿಯ ಈ ಮೂವರು ಅಧಿಕಾರಿಗಳು? ತಮ್ಮ ನೆಲೆ ಗಟ್ಟಿಮಾಡಿಕೊಳ್ಳಲು ಹೋಗಿ ಹೊಣೆಗಾರಿಕೆ ಮರೆತರಾ ಸಿಸಿಬಿ ಅಧಿಕಾರಿಗಳು?

ಇಂತಹ ಪ್ರಶ್ನೆಗಳು ಈಗ ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಅನುರಣಿಸುತ್ತಿದೆ. ಕಳೆದ ವಾರವಿಡೀ ಮಾಧ್ಯಮಗಳನ್ನು ಆವರಿಸಿಕೊಂಡಿದ್ದ ಜನಾರ್ದನ ರೆಡ್ಡಿ ಡೀಲ್ ಪ್ರಕರಣ ಈಗ ಹಲವು ಅನುಮಾನಗಳನ್ನು, ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮೂವರು ಅಧಿಕಾರಿಗಳು ತೋರಿಸಿದ ಹೊಣೆಗೇಡಿತನದಿಂದ ಹಿರಿಯ ಪತ್ರಕರ್ತರ ತೇಜೋವಧೆಗಳೂ ನಡೆದಿವೆ.

ಈ ಹಿನ್ನೆಲೆಯಲ್ಲಿ, ಇಲಾಖೆಯ ಒಳಗೆ ಹಾಗೂ ಪ್ರಕರಣವನ್ನು ಹತ್ತಿರದಿಂದ ಬಲ್ಲವರು ನೀಡಿದ ಮಾಹಿತಿ ಆಧಾರದ ಮೇಲೆ ‘ಸಮಾಚಾರ’ ರೆಡ್ಡಿ ಡೀಲ್ ಪ್ರಕರಣದ ಇನ್ನೊಂದು ಆಯಾಮವನ್ನು ಇಲ್ಲಿ ತೆರೆದಿಡುತ್ತಿದೆ.

ವೆಂಕಟೇಶ್ ಪ್ರಸನ್ನ & ಅಲೋಕ್:

ಜನಾರ್ದನ ರೆಡ್ಡಿ ಡೀಲ್ ಪ್ರಕರಣದ ತನಿಖಾಧಿಕಾರಿ ಎಚ್. ಎನ್. ವೆಂಕಟೇಶ್ ಪ್ರಸನ್ನ. 2017ರ ಅಕ್ಟೋಬರ್‌ ತಿಂಗಳಿನಲ್ಲಿ ಪೊಲೀಸ್ ಇಲಾಖೆ ಸುಮಾರು 58 ಅಧಿಕಾರಿಗಳ ವರ್ಗಾವಣೆ ಮಾಡುತ್ತದೆ. ಇದರಲ್ಲಿ 34ನೇ ಹೆಸರು ವೆಂಕಟೇಶ್ ಪ್ರಸನ್ನ ಅವರದ್ದು. ಅವತ್ತು ಇದೇ ಸಿಸಿಬಿಯಿಂದ ಅವರನ್ನು ಎತ್ತಂಗಡಿ ಮಾಡಿ, ಇಲಾಖಾ ವಿಚಾರಣಾ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಆದರೆ, ವೆಂಕಟೇಶ್ ಪ್ರಸನ್ನ ಇದನ್ನು ಒಪ್ಪಿಕೊಳ್ಳುವುದಿಲ್ಲ. “ಶೃಂಗೇರಿ ಮಠದ ಕೃಪಾಕಟಾಕ್ಷ, ಇತ್ತ ದೇವೇಗೌಡದ ಮನೆಗೆ ಎಡತಾಕಿದ ಫಲ ವೆಂಕಟೇಶ್ ಪ್ರಸನ್ನ ಸಿಸಿಬಿಯಲ್ಲಿ ಉಳಿದುಕೊಂಡರು,’’ ಎನ್ನುತ್ತಾರೆ ಇವರ ಸಹೋದ್ಯೋಗಿ ಒಬ್ಬರು.

ವಿಶೇಷ ಅಂದರೆ, 58 ಅಧಿಕಾರಿಗಳ ವರ್ಗಾವಣೆ ಮಾಡಿದ ಸುಮಾರು 8 ತಿಂಗಳ ನಂತರ ಕೇವಲ ವೆಂಕಟೇಶ್ ಪ್ರಸನ್ನರ ಎತ್ತಂಗಡಿಯನ್ನು ಮಾತ್ರ ತಡೆ ಹಿಡಿಯಲಾಗಿದೆ ಎಂದು ಆದೇಶ ಹೊರಡಿಸುತ್ತದೆ ಸರಕಾರ. ಈ ನಡುವೆ ಏನೇನು ನಡೆದಿದೆ ಎಂಬುದನ್ನು ಇವರನ್ನು ಹತ್ತಿರದಿಂದ ಬಲ್ಲವರು ಕತೆಗಳ ರೂಪದಲ್ಲಿ ಹೇಳುತ್ತಾರೆ. ಇದನ್ನು ‘ಸಮಾಚಾರ’ ಸ್ವತಂತ್ರವಾಗಿ ಪರಿಶೀಲನೆಗೆ ಒಳಪಡಿಸಿಲ್ಲವಾದ್ದರಿಂದ ಇಲ್ಲಿ ಅವುಗಳನ್ನು ಉಲ್ಲೇಖಿಸಲು ಹೋಗುವುದಿಲ್ಲ. ಆದರೆ, 57 ಅಧಿಕಾರಿಗಳಿಗೆ ಅನ್ವಯವಾಗುವ ಸರಕಾರಿ ಆದೇಶ ವೆಂಕಟೇಶ್ ಪ್ರಸನ್ನ ಅವರಿಗೆ ಮಾತ್ರ ಅನ್ವಯವಾಗದ್ದು ಹೇಗೆ? ಮತ್ತು ಯಾಕೆ? ಎಂಬ ಪ್ರಶ್ನೆಗೆ ಸಹಜ ಊಹೆಗಳೇ ಉತ್ತರ ನೀಡುತ್ತವೆ.

ಇನ್ನು, ರೆಡ್ಡಿ ಡೀಲ್ ಪ್ರಕರಣದಲ್ಲಿ ಮತ್ತೆ ಮುನ್ನೆಲೆಗೆ ಬಂದ ಇನ್ನೊಬ್ಬ ಅಧಿಕಾರಿಯ ಹೆಸರು ಅಲೋಕ್ ಕುಮಾರ್. ಹಿಂದೆ ದಾವಣಗೆರೆಯಲ್ಲಿ ಎಸ್‌ಪಿ ಆಗಿದ್ದಾಗ ಮಹಿಳಾ ಸಂಘಟನೆಯೊಂದರ ವಿರುದ್ಧ ತಿರುಗಿ ಬಿದ್ದು ಪೌರುಷ ಮೆರೆದ ಹಿನ್ನೆಲೆ ಇವರಿತ್ತು. ಬೆಂಗಳೂರಿನಲ್ಲಿ ನಾನಾ ಆಯಕಟ್ಟಿನ ಜಾಗಗಳಲ್ಲಿ ಇದ್ದ ಅಲೋಕ್ ಕುಮಾರ್ 2015ರಲ್ಲಿ ಲಾಟರಿ ಹಗರಣ ಹೊರಬಿದ್ದಾಗ ಕಳಂಕವನ್ನು ಹೊತ್ತುಕೊಂಡರು. ನಂತರ ಬೆಂಗಳೂರಿನಿಂದ ಹೊರಗೆ ಹೋದವರು ‘ಭೀಮಾ ತೀರದಲ್ಲಿ’ ಸದ್ದು ಮಾಡುವ ಪ್ರಯತ್ನ ನಡೆಸಿದ್ದರು. ವಾಪಾಸ್ ಬೆಂಗಳೂರಿಗೆ ಬಂದವರೇ ಈಗ ಗಣಿ ಉದ್ಯಮಿ, ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಜೈಲಿಗೆ ಬಿಟ್ಟು ಬಂದಿದ್ದಾರೆ. ಈ ಮೂಲಕ ತಮ್ಮ ಅಸ್ತಿತ್ವವನ್ನು ಅವರು ಮರು ಸಾಬೀತುಪಡಿಸುವ ಪ್ರಯತ್ನದಲ್ಲಿದ್ದಾರೆ.

ಸಿಸಿಬಿಯೊಳಗೆ:

ಹೇಗೇ ನೋಡಿದರೂ, ಫರೀದ್‌ನ ‘ಆಂಬಿಡೆಂಟ್ ಪ್ರಕರಣ’ ಆರ್ಥಿಕ ಅಪರಾಧಗಳ ಅಡಿಯಲ್ಲಿ ಬರುತ್ತದೆ. ಬೆಂಗಳೂರಿನ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಒಂದೇ ವಿಚಾರದಲ್ಲಿ ಮೂರು- ನಾಲ್ಕು ದೂರುಗಳು ದಾಖಲಾದರೆ ಅಂತಹ ಪ್ರಕರಣಗಳ ಕುರಿತು ತನಿಖೆಯನ್ನು ಸಿಸಿಬಿಗೆ ವಹಿಸಲಾಗುತ್ತದೆ. ಹಾಗೆ, ಸಿಸಿಬಿಗೆ ಬಂದಿದ್ದು ಫರೀದ್ ಪ್ರಕರಣ.

ವಿಶೇಷ ಅಂದರೆ, ಸಿಸಿಬಿಯಲ್ಲಿ ಆರ್ಥಿಕ ಅಪರಾಧಗಳ ತನಿಖೆಗಾಗಿಯೇ ಪ್ರತ್ಯೇಕ ವಿಭಾಗವೊಂದಿದೆ. ಅದಕ್ಕೆ ಎಸಿಪಿಯಾಗಿರುವವರು ಮಂಜುನಾಥ್ ಚೌಧರಿ. ಇನ್ನು, ವಿಶೇಷ ಪ್ರಕರಣ ಅಂತ ಇದನ್ನು ಪರಿಗಣಿಸಿದರೂ ಅಂತಹ ಪ್ರಕರಣಗಳ ತನಿಖೆಗಾಗಿಯೇ ಪ್ರತ್ಯೇಕ ವಿಭಾಗ ಸಿಸಿಬಿಯಲ್ಲಿದೆ. ಅದಕ್ಕೆ ಎಸಿಪಿಯಾಗಿರುವವರು ಸುಬ್ರಮಣ್ಯ. ಫರೀದ್ ಪ್ರಕರಣ ಈ ಎರಡೂ ವಿಭಾಗಗಳಿಗೆ ಹೋಗಿಲ್ಲ ಎಂಬುದು ಗಮನಾರ್ಹ. ಅದಕ್ಕೆ ಕಾರಣ “ಈ ಇಬ್ಬರು ಅಧಿಕಾರಿಗಳು ಕಾನೂನು ಚೌಕಟ್ಟನ್ನು ದಾಟಿ ತನಿಖೆಗೆ ಇಳಿಯುವ ಹಿನ್ನೆಲೆ ಹೊಂದಿಲ್ಲ,’’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ಸಿಸಿಬಿಯಲ್ಲೇ ಉಳಿದುಕೊಂಡು, ‘ಮಾನವ ಹತ್ಯೆ ಹಾಗೂ ಕಳ್ಳತನ’ ಘಟಕದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಎಚ್. ಎನ್. ವೆಂಕಟೇಶ್ ಪ್ರಸನ್ನರಿಗೆ ರೆಡ್ಡಿ ಡೀಲ್ ಪ್ರಕರಣವನ್ನು ವಹಿಸಲಾಯಿತು. ಯಾಕೆ? ಇದನ್ನು ಅಲೋಕ್ ಕುಮಾರ್ ಹಾಗೂ ಎಸ್. ಗಿರೀಶ್ ಹೇಳಬೇಕಿದೆ.

ಹೊಣೆಗೇಡಿತನಗಳು:

ಇನ್ನು ಈ ಅಧಿಕಾರಿಗಳು ಯಾವ ಉದ್ದೇಶದಿಂದ ಪ್ರಕರಣಕ್ಕೆ ‘ಹೈಪ್’ ಕೊಡಲು ತೀರ್ಮಾನ ಮಾಡಿದ್ದಾರೆ ಎಂಬುದನ್ನು ಪಕ್ಕಕ್ಕಿಟ್ಟು ನೋಡಿದರೂ, ಒಟ್ಟಾರೆ ಒಂದು ವಾರದಿಂದ ನಡೆದುಕೊಂಡ ರೀತಿ ಪ್ರಶ್ನಾರ್ಹವಾಗಿದೆ. ಮಾಹಿತಿ ಸೋರಿಕೆಯ ಮೂಲಕ ರೋಚಕತೆಯನ್ನು ಹೆಚ್ಚಿಸುವ ಹಾದಿಯಲ್ಲಿ ವ್ಯಕ್ತಿಗಳ ತೇಜೋವಧೆಗೂ ಇವರು ಪರೋಕ್ಷವಾಗಿ ಕಾರಣರಾದರು. ‘ಫರೀದ್ ಪತ್ರಕರ್ತರಿಗೂ ಕೋಟಿ ಲಂಚ ಕೊಟ್ಟಿದ್ದಾನೆ’ ಎಂಬ ಮಾಹಿತಿ ಇವರುಗಳ ಕಡೆಯಿಂದ ಮೊದಲು ಸೋರಿಕೆಯಾಯಿತು.

ಸಹಜವಾಗಿಯೇ ಪತ್ರಕರ್ತರು ಯಾರು ಎಂಬ ಊಹೆ ಆರಂಭವಾಯಿತು. ಸಾಮಾಜಿಕ ಜಾಲತಾಣಗಳಲ್ಲಂತೂ ಪಬ್ಲಿಕ್ ಟಿವಿ ಸಂಸ್ಥಾಪಕ ಎಚ್‌.ಆರ್‌. ರಂಗನಾಥ್ ಹಾಗೂ ಅಜ್ಮತ್ ಸುತ್ತ ಬರಹಗಳು ಹರಿದಾಡಿದವು. ಆದರೆ ಸಿಸಿಬಿಯ ಹಿರಿಯ ಅಧಿಕಾರಿಗಳಾದ ಅಲೋಕ್ ಕುಮಾರ್, ಎಸ್. ಗಿರೀಶ್ ಹಾಗೂ ಎಚ್. ಎನ್. ವೆಂಕಟೇಶ್ ಪ್ರಸನ್ನ ಯಾವುದೇ ಸಮಜಾಯಿಷಿ ನೀಡುವ ಗೋಜಿಗೆ ಹೋಗಲಿಲ್ಲ. ತೇಜೋವಧೆಗಳು ತಾರಕಕ್ಕೇರಿದ ಸಂಗತಿಯನ್ನು ‘ಸಮಾಚಾರ’ ಗಮನಕ್ಕೆ ತಂದರೂ ಪ್ರತಿಕ್ರಿಯಿಸುವ ಹೊಣೆಗಾರಿಕೆ ಇವರ ಕಡೆಯಿಂದ ಪ್ರದರ್ಶನವಾಗಲಿಲ್ಲ.

“ನಮ್ಮಿಂದ ಸರಕಾರ ಉಳಿಯಿತು ಎಂದು ನಮ್ಮ ಹಿರಿಯ ಅಧಿಕಾರಿಗಳು ಹೇಳಿಕೊಂಡು ಓಡಾಡುತ್ತಿದ್ದಾರೆ,’’ ಎನ್ನುತ್ತಾರೆ ಸಿಸಿಬಿಯ ಸಹಾಯಕ ಅಧಿಕಾರಿಯೊಬ್ಬರು. ಇದು ಸದ್ಯದ ಪರಿಸ್ಥಿತಿ. ಆಂಬಿಡೆಂಟ್ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನ್ಯಾಯಾಲಯದಲ್ಲಿ ಸಿಗಬೇಕಿದೆ. ಆದರೆ ಅದನ್ನು ವಾರಗಳ ಮಟ್ಟಿಗೆ ಎತ್ತಾಡಿದ ಅಧಿಕಾರಿಗಳ ಉದ್ದೇಶದ ಬಗ್ಗೆ ಮಾತ್ರ ಇಲಾಖೆಯೊಳಗೇ ನಂಬಿಕೆ ಉಳಿದಿಲ್ಲ. ಜತೆಗೆ, ಮರೆತ ಹೊಣೆಗಾರಿಕೆ ಹಿರಿಯ ಪತ್ರಕರ್ತರ ಹೆಸರಿಗೂ ಕಳಂಕ ತಂದಿದೆ. ಇದು ಕರ್ನಾಟಕ ಪೊಲೀಸ್ ಇಲಾಖೆಯ ವಿಶೇಷ ಘಟಕವೊಂದು ಇವತ್ತು ಬಂದು ನಿಂತಿರುವ ಸ್ಥಿತಿಯನ್ನು ಬಿಂಬಿಸುತ್ತಿದೆ. ಯಾವುದೇ ಒಂದು ಪ್ರಕರಣದಿಂದ ಸರಕಾರ ಉಳಿಯುವುದೇ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥ ಕಳೆದುಕೊಂಡಿದೆ ಅಂತ ಅರ್ಥ ಅಷ್ಟೆ.

Join Samachara Official. CLICK HERE