samachara
www.samachara.com
ಮೋದಿ ಮರು ನಾಮಕರಣ ಅಸ್ತ್ರ: ಊರುಗಳ ಹೆಸರು ಬದಲಾವಣೆ ಪ್ರಕ್ರಿಯೆ ಹೇಗಾಗುತ್ತೆ ಗೊತ್ತಾ?
COVER STORY

ಮೋದಿ ಮರು ನಾಮಕರಣ ಅಸ್ತ್ರ: ಊರುಗಳ ಹೆಸರು ಬದಲಾವಣೆ ಪ್ರಕ್ರಿಯೆ ಹೇಗಾಗುತ್ತೆ ಗೊತ್ತಾ?

ಯಾವುದೇ ಊರು, ನಗರಗಳ ಹೆಸರು ಬದಲಾವಣೆ ಮಾಡಲು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ. ಜತೆಗೆ, ಸೂಕ್ತ ಕಾರಣವನ್ನೂ ರಾಜ್ಯ ಸರಕಾರ ಮನವಿ ಜತೆಗೆ ನೀಡಬೇಕಿದೆ.

Team Samachara

ಅನಾಣ್ಯೀಕರಣ, ಜಿಎಸ್‌ಟಿ ಹೆಸರಿನಲ್ಲಿ ದುಬಾರಿ ತೆರಿಗೆಗಳು, ಇಂಧನ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಹೀಗೆ ಹಲವು ಜ್ವಲಂತ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿರುವ ಕೇಂದ್ರದ ಬಿಜೆಪಿ ಸರಕಾರ, ‘ಮರು ನಾಮಕರಣ’ ಎಂಬ ಅಸ್ತ್ರ ಪ್ರಯೋಗವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿದೆ.

ವರದಿಗಳ ಪ್ರಕಾರ, ಇನ್ನೂ 48 ಊರುಗಳ ಮರು ನಾಮಕರಣಕ್ಕೆ ಅನುಮತಿ ಕೋರಿದ ಅರ್ಜಿಗಳ ವಿಚಾರದಲ್ಲಿ ಕೇಂದ್ರ ಗೃಹ ಇಲಾಖೆ ತೀರ್ಮಾನ ತೆಗೆದುಕೊಳ್ಳಲಿದೆ. ಇದರಲ್ಲಿ ಹಳ್ಳಿಗಳಿಂದ ಹಿಡಿದು ಜಿಲ್ಲೆಗಳು ಹಾಗೂ ನಗರಗಳು ಸೇರಿವೆ.

ಮರು ನಾಮಕರಣ ಕೋರಿ ಬಂದಿರುವ ಅರ್ಜಿಗಳು ಬಂದ ರಾಜ್ಯಗಳ ಪೈಕಿ ಬಹುಪಾಲು ಬಿಜೆಪಿ ಆಳ್ವಿಕೆಯ ರಾಜ್ಯಗಳಾಗಿವೆ. ಇದರಲ್ಲಿ ಡಿಸೆಂಬರ್‌ 7ರಂದು ಮತದಾನ ನಡೆಯಲಿರುವ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ಇಲ್ಲಿಂದ ಒಟ್ಟು 26 ಮರು ನಾಮಕರಣ ಕೋರಿದ ಅರ್ಜಿಗಳು ಬಂದಿವೆ. ಇದರಲ್ಲಿ ಮೂರಕ್ಕೆ ಇತ್ತೀಚೆಗಷ್ಟೆ ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿದೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ನಂತರದ ಸ್ಥಾನದಲ್ಲಿ ಹರಿಯಾಣ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಒರಿಸ್ಸಾ ರಾಜ್ಯಗಳಿವೆ.

ಆಗಸ್ಟ್‌ ತಿಂಗಳಿನಲ್ಲಿ, ರಾಜಸ್ಥಾನನದ ಮಿಯಾಂಕ್ ಕ ಬಾರಾ ಎಂಬ ಊರಿನ ಹೆಸರಿನ್ನು ಮಹೇಶ್ ನಗರ ಅಂತಲೂ, ಇಸ್ಲಾಂ ಪುರವನ್ನು ಪಿಚನ್ವ ಖುರ್ದ್‌ ಅಂತಲೂ, ಸಲೇಮಬಾದ್‌ ಹೆಸರನ್ನು ಶ್ರಿ ನಿಂಬಾರ್ಕ್ ತೀರ್ಥ ಅಂತಲೂ ಬದಲಾಯಿಸಲು ಅನುಮತಿ ನೀಡಲಾಗಿತ್ತು.

“ಮುಸ್ಲಿಂ ಹಿನ್ನೆಲೆಯ ಹೆಸರುಗಳನ್ನು ಹೊಂದಿರುವ ಕಾರಣಕ್ಕೆ ಈ ಊರುಗಳಿಗೆ ಹೆಣ್ಣು ಕೊಡುವವರು ಮುಂದೆ ಬರುತ್ತಿರಲಿಲ್ಲ. ಹೊರಗಿನಿಂದ ನೋಡುವವರಿಗೆ ಈ ಊರುಗಳಲ್ಲಿ ಮುಸ್ಲಿಮರೇ ತುಂಬಿದ್ದಾರೆ ಅನ್ನಿಸುತ್ತಿತ್ತು. ಹೀಗಾಗಿ ಅವುಗಳ ಮರುನಾಮಕರಣಕ್ಕೆ ಅನುಮತಿ ನೀಡಲಾಗಿದೆ,’’ ಎಂದು ಗೃಹ ಇಲಾಖೆ ಅಧಿಕಾರಿಗಳು ರಾಜಸ್ಥಾನದ ಮೇಲಿನ ಮೂರು ಹೆಸರು ಬದಲಾವಣೆಗೆ ಸಮಜಾಯಿಷಿ ನೀಡಿದ್ದರು. ಉಳಿದ 23 ಹೆಸರುಗಳ ಬದಲಾವಣೆ ಕುರಿತು ಇನ್ನೂ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಯಾವುದೇ ಊರು, ನಗರಗಳ ಹೆಸರು ಬದಲಾವಣೆ ಮಾಡಲು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ. ಜತೆಗೆ, ಸೂಕ್ತ ಕಾರಣವನ್ನೂ ರಾಜ್ಯ ಸರಕಾರ ಮನವಿ ಜತೆಗೆ ನೀಡಬೇಕಿದೆ. ರಾಜಸ್ಥಾನದ ಬಿಜೆಪಿ ಸರಕಾರ ಮದುವೆ ವಿಚಾರವನ್ನು ಮುಂದಿಟ್ಟು ಅನುಮತಿ ಕೋರಿದೆ. ಅನುಮತಿ ಕೋರಿ ಉಳಿದ ರಾಜ್ಯಗಳಿಂದ ಬಂದಿರುವ ಅರ್ಜಿಗಳಲ್ಲಿ ನಾನಾ ಕಾರಣಗಳನ್ನು ಮುಂದಿಡಲಾಗಿದೆ.

ಉದಾಹರಣೆಗೆ, ಹರಿಯಾಣದ ‘ಗಂದಾ’ ಎಂಬ ಹಳ್ಳಿ ಹೆಸರನ್ನು ಬದಲಾವಣೆ ಮಾಡಲು ರಾಜ್ಯ ಸರಕಾರ ಕೋರಿದೆ. ಕಾರಣ, ಹಿಂದಿಯಲ್ಲಿ ಗಂದಾ ಎಂದರೆ ಕೊಳೆ ಎಂಬರ್ಥವನ್ನು ನೀಡುತ್ತದೆ. ಹೀಗಾಗಿ ಈ ಹೆಸರನ್ನು ‘ಶುದ್ಧ’ ಹೆಸರಿನೊಂದಿಗೆ ಮರು ನಾಮಕರಣ ಮಾಡಲು ಅಲ್ಲಿನ ಸರಕಾರ ಅರ್ಜಿ ಸಲ್ಲಿಸಿದೆ. ಒರಿಸ್ಸಾದ ಒಂದು ಹಳ್ಳಿಯ ಹೆಸರನ್ನು ಕರ್ತವ್ಯದ ವೇಳೆ ಸಾವನ್ನಪ್ಪಿದ ಊರಿನ ಸಿಆರ್‌ಪಿಎಫ್‌ ಯೋಧನ ಹೆಸರಿಗೆ ಬದಲಾಯಿಸಲು ಕೋರಿ ಅರ್ಜಿ ಸಲ್ಲಿಸಲಾಗಿದೆ. ಹೀಗೆ, ಮರು ನಾಮಕರಣಕ್ಕೆ ನಾನಾ ರೀತಿಯ ಕಾರಣಗಳನ್ನು ಮುಂದಿಡಲಾಗುತ್ತಿದೆ. ವರದಿಗಳ ಪ್ರಕಾರ, 2017ರ ಜನವರಿಯಿಂದ 2018ರ ಫೆಬ್ರವರಿ ನಡುವೆ ಒಟ್ಟು 27 ಮರುನಾಮಕರಣ ಕೋರಿದ ಅರ್ಜಿಗಳು ಸಲ್ಲಿಕೆಯಾಗಿವೆ. ಇಂತಹ ಅರ್ಜಿಗಳು ಬಂದ ನಂತರ ಗೃಹ ಇಲಾಖೆ ಸ್ಥಳೀಯ ಅಂಚೆ ಕಚೇರಿ, ರೈಲ್ವೆ ಇಲಾಖೆಗಳನ್ನು ಸಂಪರ್ಕಿಸಿ ಸಾಧ್ಯತೆಗಳನ್ನು ಪರಿಶೀಲಿಸಬೇಕಿದೆ. ನಂತರ ಅನುಮತಿ ನೀಡುತ್ತದೆ.

ಇಂಥಹದ್ದೊಂದು ಹೆಸರುಗಳ ಮರುನಾಮಕರಣ ಪ್ರಕ್ರಿಯೆಗೆ ಚಾಲನೆ ನೀಡಿದವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌. ಅವರ ಸರಕಾರ ಕಳೆದ ವರ್ಷ ಅರ್ಜಿ ಸಲ್ಲಿಸುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು.

ಉತ್ತರ ಪ್ರದೇಶದ ಮೊಘಲ್‌ಸರಾಯಿ ರೈಲ್ವೆ ನಿಲ್ದಾಣದ ಹೆಸರನ್ನು ಜನಸಂಘದ ನಾಯಕ ದೀನ್‌ದಯಾಳ್‌ ಉಪಾಧ್ಯಾಯ ಹೆಸರಿಗೆ ಬದಲಿಸಲು ಯೋಗಿ ಸರಕಾರ ಮೊದಲು ಅರ್ಜಿ ಸಲ್ಲಿಸಿತ್ತು. ಸಹಜವಾಗಿಯೇ ಜನಸಂಘದಿಂದ ಬಿಜೆಪಿ ಆಗಿ ಬದಲಾದ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಅನುಮತಿ ನೀಡಿತ್ತು. ಅಲ್ಲಿಂದ ಮುಂದೆ ಉತ್ತರ ಪ್ರದೇಶದ ಫೈಝಾಬಾದ್‌ ಜಿಲ್ಲೆಯನ್ನು ಅಯೋಧ್ಯೆಯಾಗಿ, ಅಲಹಾಬಾದ್‌ನ್ನು ಪ್ರಯಾಗ್‌ರಾಜ್‌ ಆಗಿ ಬದಲಾಯಿಸಲು ಅನುಮತಿ ದೊರೆಯಿತು.

ಮರುನಾಮಕರಣ ವಾದ ಸರಣಿ:

ಬಿಜೆಪಿ ಸರಕಾರದ ಈ ಮರುನಾಮಕರಣ ಪ್ರಕ್ರಿಯೆ ಸಾಕಷ್ಟು ತಮಾಷೆಯನ್ನೂ ಹುಟ್ಟು ಹಾಕಿದೆ. ವಾಸ್ಗೊ ಡ ಗಾಮ ಹೆಸರನ್ನು ‘ವಾಸುದೇವ್‌ ಮಾಮ’ ಎಂದು ಬದಲಿಸಬೇಕು ಎಂಬ ತಮಾಷೆಗಳಿಂದ ಆರಂಭವಾಗಿ, ಸ್ವತಃ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ‘ಶಾ’ ಹೆಸರನ್ನು ಬದಲಾಯಿಸಿಕೊಳ್ಳಬೇಕು ಎಂಬಲ್ಲಿವರೆಗೆ ವಾದ ಸರಣಿಯನ್ನು ಈ ಪ್ರಕ್ರಿಯೆ ಹುಟ್ಟು ಹಾಕಿದೆ.

ಬಿಜೆಪಿ ಜ್ವಲಂತ ಸಮಸ್ಯೆಗಳಿಂದ ಜನರನ್ನು ದೂರ ಸೆಳೆಯಲು ಇಂತಹ ಗಿಮಿಕ್‌ಗಳನ್ನು ನಡೆಸುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಹೀಗಿದ್ದೂ, ಮರು ನಾಮಕರಣ ಪ್ರಕ್ರಿಯೆ ಅಸಾಧ್ಯ ವೇಗವೊಂದನ್ನು ಪಡೆದುಕೊಂಡಿದೆ. ವಾದ ವಿವಾದಗಳನ್ನು ಬೆನ್ನಿಗಿಟ್ಟುಕೊಂಡೇ ಕೇಂದ್ರ ಗೃಹ ಇಲಾಖೆ ತನ್ನ ಮುಂದಿರುವ ಅರ್ಜಿಗಳನ್ನು ಪರಿಶೀಲನೆಗೆ ಒಳಪಡಿಸಿದೆ. ಹೀಗಾಗಿ ಈ ವರ್ಷ ಕಳೆಯುವ ಹೊತ್ತಿಗೆ ಕನಿಷ್ಟ 48 ಊರು, ನಗರ, ಜಿಲ್ಲೆಗಳ ಹೆಸರು ಬದಲಾಗಲಿವೆ.

2014ರ ಚುನಾವಣೆ ಪ್ರಚಾರದ ಮೇಲೆ ಜನರಿಗೆ ನೀಡಿದ ‘ಅಚ್ಚೆ ದಿನ್’ ಆಶ್ವಾಸನೆ ಕಾರ್ಯರೂಪಕ್ಕೆ ಬಂದು, ದೇಶವಾಸಿಗಳ ಬದುಕು ಬದಲಾಯಿತೋ, ಇಲ್ಲವೋ ಗೊತ್ತಿಲ್ಲ. ಆದರೆ, ಮನಸ್ಸು ಮಾಡಿದರೆ ತಾವು ವಾಸಿಸುವ ಊರಿನ ಹೆಸರನ್ನು ಬದಲಾಯಿಸಿಕೊಳ್ಳಬಹುದು ಎಂಬ ಭರವಸೆಯನ್ನು ಬಿಜೆಪಿ ಸರಕಾರಗಳು ಹಾಗೂ ಕೇಂದ್ರ ಸರಕಾರ ನೀಡಿದೆ. ಅದೂ ಚುನಾವಣೆಯನ್ನು ಎದುರಿಗೆ ಇಟ್ಟುಕೊಂಡು ಎಂಬುದು ವಿಶೇಷ.

Join Samachara Official. CLICK HERE