ರಾಮನ ಹೆಸರಿನಲ್ಲಿ: ದಿಗ್ವಿಜಯದಲ್ಲಿ ರಾಘವೇಶ್ವರ ಸ್ವಾಮಿಯ ‘ನೇರ’ ಸಂದರ್ಶನ; ‘ಸರಳ’ ಪರಿಣಾಮ
COVER STORY

ರಾಮನ ಹೆಸರಿನಲ್ಲಿ: ದಿಗ್ವಿಜಯದಲ್ಲಿ ರಾಘವೇಶ್ವರ ಸ್ವಾಮಿಯ ‘ನೇರ’ ಸಂದರ್ಶನ; ‘ಸರಳ’ ಪರಿಣಾಮ

ರಾಮ ಮಂದಿರ ನಿರ್ಮಾಣದ ವಿಚಾರ ‘ಜಸ್ಟ್‌ ಪಾಸ್’ ಆಯಿತು. ವಿಪರ್ಯಾಸ ಏನೆಂದರೆ, ಸಂದರ್ಶನ ಕೊನೆಯಲ್ಲಿ ಇವೆಲ್ಲವನ್ನೂ ನಿರೂಪಕಿ, ‘ನೇರ- ಸ್ವಷ್ಟ- ಸರಳ’ ಎಂದು ವೀಕ್ಷಕರಿಗೆ ಅರ್ಥ ಪಡಿಸುವ ಪ್ರಯತ್ನವನ್ನೂ ಮಾಡಿದರು.

ಎರಡೆರಡು ಅತ್ಯಾಚಾರ ಆರೋಪ ಪ್ರಕರಣಗಳು, ಒಂದು ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣದಲ್ಲಿ ಕರ್ನಾಟಕದ ಮಾಧ್ಯಮಗಳಿಗೆ ಕಾನೂನಿನ ಕಡಿವಾಣ ಹೇರಿದ ರಾಘವೇಶ್ವರ ಭಾರತಿ ಸ್ವಾಮಿ ಸ್ವತಃ ಮಾಧ್ಯಮ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಉದ್ಯಮಿ ವಿಜಯ್ ಸಂಕೇಶ್ವರ ಮಾಲೀಕತ್ವದ ‘ದಿಗ್ವಿಜಯ ನ್ಯೂಸ್’ ಚಾನಲ್‌ನಲ್ಲಿ ಭಾನುವಾರ ಪ್ರಸಾರವಾದ ‘ಒನ್‌ ಸೈಡೆಡ್‌’ ಅನ್ನಿಸುವ ಸಂದರ್ಶನದಲ್ಲಿ ರಾಘವೇಶ್ವರ ಭಾರತಿ, ರಾಮ ಮಂದಿರವನ್ನೇ ನ್ಯೂಸ್‌ ಪೆಗ್ ಮಾಡಿಕೊಂಡಿದ್ದರು. ‘ದುಶ್ಮನ್‌ ಬಗಲ್‌ ಮೇ ಹೇ’ ಎಂದು ಶುರುವಾದ ಅರ್ಧ ಗಂಟೆಯ ಸಂದರ್ಶನದಲ್ಲಿ ತಮ್ಮ ಮೇಲೆ ಷಢ್ಯಂತ್ರ ನಡೆಯುತ್ತಿದೆ ಎಂಬುದನ್ನೇ ರಾಮಚಂದ್ರಾಪುರ ಮಠದ ಪೀಠಾಧಿಪತಿ ಪದೇ ಪದೇ ಪ್ರಸ್ತಾಪಿಸಿದರು.

ಸಮುದಾಯದ ಒಡಕನ್ನು ಆಪಲ್ ಕಂಪನಿಯ ಲೋಗೋಗೆ ಹೋಲಿಸುವ ಬಾಲಿಷ ಪ್ರಯತ್ನವೂ ನಡೆಯಿತು. ಮುಖ್ಯವಾಗಿ ಸಮ್ಮಿಶ್ರ ಸರಕಾರ ತಮ್ಮ ವಿರುದ್ಧ ಇದೆ, ಮಠದ ಕೆಲಸದಿಂದ ಮತದಾರರ ಮೇಲೆ ಪರಿಣಾಮ ಬೀರುತ್ತದೆ, ಬಂಧನ ಯತ್ನದ ಹಿಂದೆ ರಾಜಕೀಯ ನಡೆಯುತ್ತಿದೆ, ವೇದ- ಪಿರಂಗಿ ಕಂಪನಿಯ ಟೂತ್‌ ಪೇಸ್ಟ್‌, ಗೋ ಸ್ವರ್ಗ, ಅವಿಚ್ಛನ್ನ ಪರಂಪರೆ, ಗೋ ಮಾಂಸದ ಬದಲಿಗೆ ಗೋ ಮೂತ್ರ ರಫ್ತು ಹೀಗೆ ಹಲವು ವಿಚಾರಗಳು ಅರ್ಧ ಗಂಟೆಯಲ್ಲಿ ಬಂದು ಹೋದವು. ನಡುವೆ, ರಾಮ ಮಂದಿರ ನಿರ್ಮಾಣದ ವಿಚಾರ ‘ಜಸ್ಟ್‌ ಪಾಸ್’ ಆಯಿತು. ವಿಪರ್ಯಾಸ ಏನೆಂದರೆ, ಸಂದರ್ಶನ ಕೊನೆಯಲ್ಲಿ ಇವೆಲ್ಲವನ್ನೂ ನಿರೂಪಕಿ, ‘ನೇರ- ಸ್ವಷ್ಟ- ಸರಳ’ ಎಂದು ವೀಕ್ಷಕರಿಗೆ ಅರ್ಥ ಪಡಿಸುವ ಪ್ರಯತ್ನವನ್ನೂ ಮಾಡಿದರು.

ಯಾಕೀ ಸಂದರ್ಶನ?:

ಭಕ್ತೆಯೊಬ್ಬರ ಮಗು ಜತೆ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿ. 
ಭಕ್ತೆಯೊಬ್ಬರ ಮಗು ಜತೆ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿ. 

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮರು ಆಯ್ಕೆ ಬಯಸುತ್ತಿದೆ. 2014ರಲ್ಲಿ ಅಚ್ಚೇ ದಿನ್, ಆರ್ಥಿಕ- ಆಡಳಿತ ಸುಧಾರಣೆಯಂತಹ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟು ಪ್ರಧಾನಿ ನರೇಂದ್ರ ಮೋದಿ ಮತ ಯಾಚನೆ ಮಾಡಿದ್ದರು. ಆದರೆ ಈ ಬಾರಿ ಅವೆಲ್ಲವನ್ನೂ ಪಕ್ಕಕ್ಕಿಟ್ಟು ರಾಮ ಮಂದಿರ ನಿರ್ಮಾಣವನ್ನೇ ಪ್ರಮುಖ ಅಸ್ತ್ರವಾಗಿ ಬಳಸಲು ಬಿಜೆಪಿ ಅಲೋಚನೆ ಮಾಡಿದೆ. ಅದಕ್ಕಾಗಿ ಇದೇ ತಿಂಗಳು 25ರಂದು ಮಂಗಳೂರು, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಸಂಘ ಪರಿವಾರದ ಅಂಗ ಸಂಘಟನೆ ‘ವಿಶ್ವ ಹಿಂದೂ ಪರಿಷತ್’ ನೇತೃತ್ವದಲ್ಲಿ ಏಕಕಾಲಕ್ಕೆ ಬೃಹತ್ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಕೂಡ ಈ ನಡೆಗೆ ಬೆಂಬಲ ಸೂಚಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ದಿಗ್ವಿಜಯ ನ್ಯೂಸ್ ಸಂದರ್ಶನದ ಟ್ರೈಲರ್ ಕೂಡ ಇದನ್ನೇ ಫೋಕಸ್ ಮಾಡಿತ್ತು.

2005ರಿಂದ 2010ರ ನಡುವೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗೋವಿನ ವಿಚಾರದಲ್ಲಿ ರಾಜಕೀಯ ತರಂಗಗಳನ್ನು ಎಬ್ಬಿಸಿದ್ದವರು ರಾಘವೇಶ್ವರ ಭಾರತಿ ಸ್ವಾಮಿ. ಮೊದಲ ಬಾರಿಗೆ ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ಬಿಜೆಪಿ ಅಧಿಕಾರಕ್ಕೇರಲು ಇದೂ ಕೂಡ ಕಾರಣವಾಗಿತ್ತು. ಹೆಚ್ಚು ಕಡಿಮೆ ಇದೇ ‘ಮೋಡಸ್ ಆಪರೆಂಡಿ’ ಈಗ ರಾಮ ಮಂದಿರ ವಿಚಾರದಲ್ಲಿ ಕಾಣಿಸುತ್ತಿದೆ. ವ್ಯತ್ಯಾಸ ಇಷ್ಟೆ, ಗೋ ವಿಚಾರದಲ್ಲಿ ಸಂಸತ್ ರಚಿಸಲು ಇರಾದೆ ವ್ಯಕ್ತಪಡಿಸಿದ ಸಮಯದಲ್ಲಿ ಕಾನೂನಿನ ಇಕ್ಕಳಗಳು ಇಷ್ಟು ಬಿಗಿಯಾಗಿರಲಿಲ್ಲ. ಆದರೆ ಈ ಬಾರಿ ರಾಮನ ವಿಚಾರ ಮುನ್ನೆಲೆಗೆ ಇಡುವ ಸಮಯದಲ್ಲಿ ರಾಘವೇಶ್ವರ ಭಾರತಿ ಸ್ವಾಮಿ ನ್ಯಾಯಾಲಯದಲ್ಲಿ ಬಾಲಕಿ ಮೇಲಿನ ಅತ್ಯಾಚಾರದಂತಹ ಗುರುತರ ಆರೋಪಗಳನ್ನು ಎದುರಿಸುತ್ತಿದ್ದಾರೆ. ದಿಗ್ವಿಜಯ ನ್ಯೂಸ್ ಸಂದರ್ಶನದಲ್ಲಿ ಪರೋಕ್ಷವಾಗಿ ಇದನ್ನು ಪ್ರಸ್ತಾಪಿಸಿದ ಸ್ವಾಮಿ, ಇದು ತಮ್ಮ ವಿರುದ್ಧ ರಾಜಕೀಯ ಕಾರಣಗಳಿಗಾಗಿ ನಡೆಯುತ್ತಿರುವ ಷಡ್ಯಂತ್ರ ಎಂದು ಕರೆದಿದ್ದಾರೆ. ಇದಕ್ಕಾಗಿಯೇ ಸಂದರ್ಶನದ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ.

ಗಟ್ಟಿತನವಿಲ್ಲದ ಪ್ರಶ್ನೋತ್ತರ:

ರಾಜ್ಯದಲ್ಲಿ ಅರ್ಧ ಸೆಂಚುರಿಯಷ್ಟು ಮಾಧ್ಯಮಗಳ ಮೇಲೆ ಕಾನೂನಿನ ಕಡಿವಾಣವನ್ನು ತಮ್ಮದೇ ಹೆಸರಿನಲ್ಲಿ ಹೇರಿದವರು ರಾಘವೇಶ್ವರ ಸ್ವಾಮಿ. ಅಂತವರು ಸಂದರ್ಶನವೊಂದನ್ನು ನೀಡುತ್ತಿದ್ದಾರೆ ಎಂದಾಗ ಈ ಕುರಿತು ಪ್ರಶ್ನೆಯೊಂದು ಇರಬಹುದು ಎಂಬ ನಿರೀಕ್ಷೆ ಸಹಜವಾಗಿತ್ತು. ಆದರೆ ಅಂತಹ ಚಿಕ್ಕ ಪ್ರಶ್ನೆಯೂ ಇಡೀ ಸಂದರ್ಶನದಲ್ಲಿ ಎಲ್ಲಿಯೂ ಇರದಿರುವುದು ಒಟ್ಟಾರೆ ಸಂದರ್ಶನದ ವಸ್ತು ನಿಷ್ಟತೆಯನ್ನು ಪ್ರಶ್ನಿಸಲು ಕಾರಣವಾಗಿದೆ.

ಇನ್ನು, ತಾವು ಕಟ್ಟಿದ್ದು ‘ಜಗತ್ತಿನ ಸರ್ವೋತ್ತಮ ಗೋ ಸ್ವರ್ಗ’ ಎನ್ನುತ್ತಾರೆ ರಾಘವೇಶ್ವರ ಭಾರತಿ ಸ್ವಾಮಿ. ಆದರೆ, ಸರಕಾರದ ಈ ಕುರಿತಾದ ವರದಿ ಗೋ ಶಾಲೆಗಳು ಸ್ಥಾಪನೆಯ ಉದ್ದೇಶವನ್ನೇ ಈಡೇರಿಸಿಲ್ಲ ಎಂದು ಹೇಳಿತ್ತು. ಆದರೆ ನಿರೂಪಕಿ ಎಲ್ಲಿಯೂ ಈ ವರದಿಯನ್ನು ಪ್ರಸ್ತಾಪಿಸುವ, ಮರು ಪ್ರಶ್ನಿಸುವ ಮೂಲಕ ಸತ್ಯವನ್ನು ಹುಡುಕುವ ಪ್ರಯತ್ನವನ್ನು ಮಾಡುವುದಿಲ್ಲ. ಈ ಕಾರಣಕ್ಕೆ ಇದೊಂದು ಒನ್ ಸೈಡೆಡ್‌ ಅಥವಾ ಪೂರ್ವ ನಿಯೋಜಿತ ಸಂದರ್ಶನ ಅನ್ನಿಸಿಕೊಳ್ಳುತ್ತದೆ.

ಸಮ್ಮಿಶ್ರ ಸರಕಾದ ಗಮನಕ್ಕೆ:

ಧರ್ಮ ಮತ್ತು ರಾಜಕಾರಣದ ಅಸಹ್ಯ ಸಂಬಂಧವೊಂದು ಕಣ್ಣಿಗೆ ರಾಚುತ್ತಿರುವ ಕಾಲಘಟ್ಟ ಇದು. ಇದಕ್ಕೆ ಸಾಕ್ಷಿ ಎಂಬಂತೆ, ಮೇಲಿನ ಸಂದರ್ಶನದಲ್ಲಿ ಸ್ವತಃ ರಾಘವೇಶ್ವರ ಭಾರತಿ ಸ್ವಾಮಿ, ‘ತಮ್ಮ ಮಠ ಸಾತ್ವಿಕ ವಿಚಾರವನ್ನು ಹರಡುತ್ತಿದೆ. ಇದು ಕೂಡ ಮತದಾನದ ಮೇಲೆ ಪರಿಣಾಮ ಬೀರಬಹುದು’ ಎನ್ನುತ್ತಾರೆ. ಇಲ್ಲಿ ಸಾತ್ವಿಕ ವಿಚಾರ ಮತ್ತು ಮತದಾನದ ಪರಿಣಾಮ ಬಿಜೆಪಿ ಪರವಾಗಿಯೇ ಇರುತ್ತದೆ ಎಂಬುದನ್ನು ಅವರು ‘ನೇರ’ವಾಗಿ ಹೇಳಿಲ್ಲವಾದರೂ, ‘ಸರಳ’ವಾಗಿ ಅರ್ಥ ಮಾಡಿಕೊಳ್ಳಬೇಕಿದೆ.

ಧರ್ಮ ಪ್ರಚಾರ, ಸಾತ್ವಿಕತೆಗಳನ್ನು ಮೀರಿ 2005-10ರ ನಡುವೆ ನಡೆದ ಗೋ ಹೆಸರಿನ ಸಮಾವೇಶಗಳ ಪರಿಣಾಮಗಳೇನು ಎಂಬುದನ್ನು ಇತಿಹಾಸ ದಾಖಲಿಸಿದೆ. ಹೀಗಿರುವಾಗ 2018ರಲ್ಲಿ ರಾಮ ಮಂದಿರ ನಿರ್ಮಾಣದ ಸಮಾವೇಶಗಳು ಮತ್ತು ಅದಕ್ಕೆ ಗುರುತರ ಆರೋಪ ಹೊತ್ತ ಸ್ವಾಮಿಗಳ ಬೆಂಬಲದ ಪರಿಣಾಮಗಳನ್ನು ಊಹಿಸುವುದು ಕಷ್ಟವೇನಲ್ಲ. ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದವರು ಇದನ್ನು ಗಮನಿಸಬೇಕಿದೆ.

ಇವೆಲ್ಲವುಗಳ ಆಚೆಗೆ, ಇಡೀ ಸಂದರ್ಶನ ಹೈಲೈಟ್ ಏನೆಂದರೆ, ಅದಕ್ಕೆ ನೀಡಿದ ಹಿನ್ನೆಲೆಯ ಸಂಗೀತ. ಸಂದರ್ಶನ ಕೇಳುತ್ತಿದ್ದೆವೋ, ಮಂತ್ರೊಚ್ಛಾರಣೆಗೆ ಕಿವಿಗೊಟ್ಟಿದ್ದೇವೋ ಎಂಬ ಗೊಂದಲವನ್ನು ಇದು ಹುಟ್ಟು ಹಾಕುವಂತಿತ್ತು. ಒಂದರ್ಧ ಗಂಟೆಯ ಸಂದರ್ಶನದ ಮೂಲಕ, ‘ದಿಗ್ವಿಜಯ ನ್ಯೂಸ್’ ದೇವಸ್ಥಾನದ ಫೀಲ್ ಕೊಟ್ಟಿದ್ದಂತೂ ಸುಳ್ಳಲ್ಲ.