samachara
www.samachara.com
‘ಕೈ’ಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಲ; ಬಿಜೆಪಿ ಬಾಧಿಸುತ್ತಿದೆ ನಾಯಕತ್ವದ ಕೊರತೆ!
COVER STORY

‘ಕೈ’ಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಲ; ಬಿಜೆಪಿ ಬಾಧಿಸುತ್ತಿದೆ ನಾಯಕತ್ವದ ಕೊರತೆ!

ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕತ್ವಕ್ಕೆ ಉಪ ಚುನಾವಣೆಯ ಗೆಲುವಿನ ಬಲ ಬಂದಿದ್ದರೆ, ಬಿಜೆಪಿಗೆ ಸೋಲಿನ ಜತೆಗೆ ನಾಯಕತ್ವದ ಕೊರತೆ ಕಾಡುತ್ತಿದೆ.

ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಹೆಚ್ಚೂ ಕಡಿಮೆ ಬಿಜೆಪಿಯ ನಂಬಿಕೆಯನ್ನು ಹುಸಿಯಾಗಿಸಿದೆ. ಶಿವಮೊಗ್ಗದ ಗೆಲುವು ಕೂಡಾ ಬಳ್ಳಾರಿಯ ಸೋಲನ್ನು ಮುಚ್ಚಿಹಾಕದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಬಿಜೆಪಿಗೆ ಸಮರ್ಥ ನಾಯಕತ್ವದ ಕೊರತೆ ಕಾಡುತ್ತಿರುವ ಹೊತ್ತಲ್ಲೇ ರಾಜ್ಯ ಕಾಂಗ್ರೆಸ್‌ಗೆ ನಾಯಕರ 'ಬಲ' ಹೆಚ್ಚಾಗುತ್ತಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಡಿ.ಕೆ. ಶಿವಕುಮಾರ್‌ ಗೆದ್ದ ಖುಷಿಯಲ್ಲಿ ಬೀಗುತ್ತಿದ್ದರೆ, ಅದೇ ವೇಳೆಗೆ ಈ ಗೆಲುವಿನ ಹಿಂದೆ ಸಿದ್ದರಾಮಯ್ಯ ಪಾತ್ರವೂ ಅಷ್ಟೇ ಮುಖ್ಯವಾಗಿದೆ ಎಂಬ ಜಿದ್ದಾಜಿದ್ದಿಗಳು ಕಾಂಗ್ರೆಸ್‌ ಒಳಗೇ ನಡೆಯುತ್ತಿರುವಂತಿದೆ. ಈ ಹಿಂದೆ “ನನಗೂ ಮುಖ್ಯಮಂತ್ರಿಯಾಗುವ ಆಸೆಯಿದೆ. ನಾನೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ” ಎಂದೆಲ್ಲಾ ಹೇಳಿಕೊಂಡು ತಿರುಗುತ್ತಿದ್ದ ಡಿ.ಕೆ. ಶಿವಕುಮಾರ್‌ ಬಳ್ಳಾರಿ ಉಪ ಚುನಾವಣೆಯ ಹೊತ್ತಿಗೆ ‘ಪೊಲೈಟ್‌’ ರಾಜಕಾರಣಿಯಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೆ.

ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್‌, “ಚುನಾವಣೆಯ ಸೋಲು ಗೆಲುವುಗಳಿಗಿಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ನಡೆಸುವುದಷ್ಟೇ ನಮ್ಮ ಜವಾಬ್ದಾರಿಯಾಗಿತ್ತು” ಎಂಬ ಗಂಭೀರ ಮಾತುಗಳನ್ನಾಡಿದ್ದರು. ಮಾತಿನ ಮಧ್ಯೆ ತಮಗೆ ಈ ಜವಾಬ್ದಾರಿ ನೀಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೆಸರನ್ನು ಹಲವು ಬಾರಿ ತಂದರು. ಈ ಮೂಲಕ ಹೈಕಮಾಂಡ್‌ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ ಹೆಮ್ಮೆಯ ಹಮ್ಮೂ ಡಿ.ಕೆ. ಶಿವಕುಮಾರ್‌ ಅವರಲ್ಲಿ ಕಾಣುತ್ತಿತ್ತು.

ಬಳ್ಳಾರಿಯಲ್ಲಿ ವಿ.ಎಸ್‌. ಉಗ್ರಪ್ಪ ಗೆದ್ದಿರುವುದು ಉಗ್ರಪ್ಪ ಗೆಲುವಲ್ಲ ಅದು ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಗೆಲುವು ಎಂಬ ಮಾತುಗಳೇ ಹೆಚ್ಚು ಹರಿದಾಡುತ್ತಿವೆ. ಬಳ್ಳಾರಿಯಲ್ಲಿ ಗೆಲುವಿನ ಕ್ರೆಡಿಟ್‌ ಸಿದ್ದರಾಮಯ್ಯ ಅವರಿಗೆ ಸಿಗಬೇಕೋ, ಡಿ.ಕೆ. ಶಿವಕುಮಾರ್‌ ಅವರಿಗೆ ಸಿಗಬೇಕೋ ಎಂಬ ಬಗ್ಗೆಯೇ ಕಾಂಗ್ರೆಸ್‌ ಒಳಗೊಂದು ತಿಕ್ಕಾಟ ನಡೆಯುತ್ತಿರುವಂತೆ ಕಾಣುತ್ತಿದೆ.

ಆದರೆ, ರಾಜ್ಯ ಕಾಂಗ್ರೆಸ್‌ ನಾಯಕತ್ವದ ವಿಚಾರದಲ್ಲಿ ಇಂದಿಗೂ ಸಿದ್ದರಾಮಯ್ಯ ಎರಡನೇ ಪಂಕ್ತಿಗೆ ಇಳಿದಿಲ್ಲ. ಒಂದು ಕಡೆಗೆ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಮಟ್ಟದ ಕಾಂಗ್ರೆಸ್‌ ಮುಖಂಡರಾಗಿ ಬೆಳೆದಿರುವುದರಿಂದ ಹಾಗೂ ಡಿಸಿಎಂ ಪಟ್ಟ ಡಾ.ಜಿ. ಪರಮೇಶ್ವರ್‌ಗೆ ಸಿಕ್ಕಿರುವುದರಿಂದ ದಲಿತ ನಾಯಕತ್ವದ ವಿಚಾರಗಳೂ ಈಗ ರಾಜ್ಯ ಕಾಂಗ್ರೆಸ್‌ಗೆ ಸಮಸ್ಯೆಯಾಗಿಲ್ಲ. ಹೀಗಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಇಂದಿಗೂ ನೀತಿ ನಿರ್ಣಯಗಳಲ್ಲಿ ಸಿದ್ದರಾಮಯ್ಯ ಕೈಯೇ ಮೇಲೆ.

ನಾಯಕತ್ವದ ವಿಚಾರಕ್ಕಿಂತಲೂ ಸದ್ಯ ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲೂ, ರಾಜ್ಯಮಟ್ಟದಲ್ಲೂ ಹೆಚ್ಚು ತಲೆಕೆಡಿಸಿಕೊಂಡಿರುವುದು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಬಗ್ಗೆ. ರಾಜ್ಯ ಉಪ ಚುನಾವಣೆಗಳ ಫಲಿತಾಂಶ ಒಂದು ಮಟ್ಟಕ್ಕೆ ಬಿಜೆಪಿಯನ್ನು ಚಿಂತೆಗೆ ದೂಡಿರುವುದಂತೂ ಸುಳ್ಳಲ್ಲ. ಒಂದು ಕಡೆ ರಾಷ್ಟ್ರಮಟ್ಟದಲ್ಲಿ ತೃತೀಯ ಶಕ್ತಿಗಳನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ಸೇರಿಸಿಕೊಂಡು ಬಲಗೊಳ್ಳಲು ಯತ್ನಿಸುತ್ತಿರುವಂತೇ ರಾಜ್ಯದ ಉಪ ಚುನಾವಣೆಯ ಫಲಿತಾಂಶ ಕೇಸರಿ ಪಕ್ಷಕ್ಕೆ 2019ರ ಜನಾದೇಶದ ಬಗ್ಗೆ ಕಳವಳ ಉಂಟು ಮಾಡಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಯ ನಡುವೆಯೇ ಗೆಲ್ಲಬೇಕೆಂದು ಹೊರಟಿರುವ ಬಗ್ಗೆ ಈವರೆಗೆ ಯಾವೊಬ್ಬ ಬಿಜೆಪಿ ಮುಖಂಡರೂ ಗಂಭೀರವಾಗಿ ಪ್ರತಿಕ್ರಿಯಿಸಿಲ್ಲ. ಈಗ ಒಂದಾಗಿರುವ ದೇವೇಗೌಡ- ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ- ಡಿ.ಕೆ. ಶಿವಕುಮಾರ್‌ ಬಲವನ್ನು ಕುಗ್ಗಿಸುವ ದಾರಿಗಳೂ ಸದ್ಯ ಬಿಜೆಪಿಯ ರಾಜ್ಯ ಮುಖಂಡರಿಗೆ ಕಾಣುತ್ತಿಲ್ಲ.

ತಗ್ಗಿರುವ ಮೋದಿ ಅಲೆ, ಹಳತಾಗಿರುವ ರಾಮಮಂದಿರ ನಿರ್ಮಾಣದ ಸರಕು, ಹಿಂದುತ್ವ ಬಿಟ್ಟರೆ ಬೇರೇನೂ ಸದ್ಯಕ್ಕೆ ಬತ್ತಳಿಕೆಯಲ್ಲಿಲ್ಲದ ಸಂದರ್ಭದಲ್ಲಿ ಬಿಜೆಪಿಗೆ ದಾಳವಾಗಬಲ್ಲ ಚುನಾವಣಾ ವಿಚಾರಗಳೆಂದರೆ ಕಾಶ್ಮೀರ ಹಾಗೂ ಪಾಕಿಸ್ತಾನದ ಮೇಲೆ ಯುದ್ಧ. ಆದರೆ, ಚುನಾವಣೆ ಸಮೀಪವಾಗುತ್ತಿದ್ದರೂ ಯಾವುದೇ ಮಹತ್ವದ ನಿರ್ಣಯಗಳನ್ನು ಕೈಗೊಳ್ಳದ ಮೋದಿ ಸರಕಾರ, ಸರ್ದಾರ್‌ ಪಟೇಲ್‌ ಪ್ರತಿಮೆ, ರಾಮನ ಎತ್ತರದ ಪ್ರತಿಮೆ ನಿರ್ಮಾಣ, ಊರುಗಳ ಹೆಸರು ಬದಲಾವಣೆಯಂಥ ಕೆಲಸಕ್ಕೆ ಬಾರದ ವಿಚಾರಗಳನ್ನೇ ಪ್ರಚಾರ ಮಾಡುತ್ತಾ ಬರುತ್ತಿದೆ. ಲೋಕಸಭಾ ಚುನಾವಣೆ ಘೋಷಣೆಯಾಗುವವರೆಗೂ ಇದೇ ಪರಿಸ್ಥಿತಿ ಇದ್ದರೆ ಬಿಜೆಪಿಯನ್ನು ರಾಮನೂ ಕೈಹಿಡಿಯಲು ಸಾಧ್ಯವಿಲ್ಲವೋ ಏನೋ.

ರಾಜ್ಯದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಯಾವ ವಿಷಯ ಮುಂದಿಟ್ಟು ಗೆಲ್ಲಬೇಕೆಂಬುದೇ ಗೊತ್ತಿದ್ದಂತಿಲ್ಲ. ಮೋದಿಯ ಮುಖವಾಡವನ್ನೇ ಹೊತ್ತವರಂತೆ ಎಲ್ಲಾ ಬಿಜೆಪಿ ಮುಖಂಡರೂ ನಡೆದುಕೊಳ್ಳುತ್ತಿರುವುದು ಪಕ್ಷವನ್ನು ವಿಕೇಂದ್ರೀಕರಣದ ಶಕ್ತಿಯಿಂದ ದೂರ ಉಳಿಯುವಂತೆ ಮಾಡಿದೆ. ಬಿ.ಎಸ್‌. ಯಡಿಯೂರಪ್ಪ ಸದ್ದು ಕೂಡಾ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಕೆ.ಎಸ್‌. ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ತಣ್ಣಗಾಗಿದ್ದಾರೆ. ಡಿ.ವಿ. ಸದಾನಂದಗೌಡ, ಪ್ರಹ್ಲಾದ ಜೋಶಿ ಬಿಜೆಪಿ ರಾಜ್ಯ ನಾಯಕರಾಗುವ ಲಕ್ಷಣಗಳಿಲ್ಲ.

ಇನ್ನು ಅನಂತ ಕುಮಾರ್‌ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಅನಂತ ಕುಮಾರ್‌ ಹೆಗಡೆ, ಪ್ರತಾಪ್‌ ಸಿಂಹ, ಶೋಭಾ ಕರಂದ್ಲಾಜೆ ಅವರಂಥ ‘ಘನತೆವೆತ್ತ’ ಸಂಸದರು ತಮ್ಮ ‘ಹರಿತವಾದ ನಾಲಿಗೆ’ಯಿಂದ ಪಕ್ಷಕ್ಕೆ ಎಷ್ಟು ಸಾಧ್ಯವೋ ಅಷ್ಟು ಡ್ಯಾಮೇಜ್ ಮಾಡುತ್ತಾ ಬಂದು ಸದ್ಯ ಸದ್ದಿಲ್ಲದಂತಾಗಿದ್ದಾರೆ. ಇಂಥ ಹೊತ್ತಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ.

Join Samachara Official. CLICK HERE