samachara
www.samachara.com
57 ಕೆ.ಜಿ. ಚಿನ್ನದ ಗಟ್ಟಿಯ ‘ರೋಚಕ ಕಥೆ’; ಗಾಲಿ ರೆಡ್ಡಿ ಸಂಜೆ ಹೊತ್ತಿಗೆ ಪೊಲೀಸರಿಗೆ ಶರಣು?
COVER STORY

57 ಕೆ.ಜಿ. ಚಿನ್ನದ ಗಟ್ಟಿಯ ‘ರೋಚಕ ಕಥೆ’; ಗಾಲಿ ರೆಡ್ಡಿ ಸಂಜೆ ಹೊತ್ತಿಗೆ ಪೊಲೀಸರಿಗೆ ಶರಣು?

ಒಂದು ವೇಳೆ ರೆಡ್ಡಿ ತಪ್ಪು ಮಾಡಿರುವುದು ನಿಜ ಎಂಬುದು ನ್ಯಾಯಾಲಯದಲ್ಲಿ ಸಾಬೀತಾದರೆ ರೆಡ್ಡಿಗೆ ಶಿಕ್ಷೆಯಾಗುವುದು ಅನಿವಾರ್ಯ. ಆದರೆ, ಅಲ್ಲಿಯವರೆಗೂ ಈ ‘ರೋಚಕ ಕಥೆ’ಯಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ.

ಒಂದು ಕಾಲದಲ್ಲಿ ಸಿಡಿ ಬಿಡುಗಡೆ, ರೆಸಾರ್ಟ್‌ ರಾಜಕಾರಣ, ಆಪರೇಷನ್‌ ಕಮಲದ ಮೂಲಕ ರೋಚಕತೆಯನ್ನು ಸೃಷ್ಟಿಸಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇಂದು ರೋಚಕ ಕಥೆಯೊಂದಕ್ಕೆ ತಾವೇ ಆರೋಪಿಯ ಪಾತ್ರಧಾರಿ. ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮತ್ತೊಂದು ಆಪರೇಷನ್ ಕಮಲದ ಸಿದ್ಧತೆಯಲ್ಲಿದ್ದರೆ, ರೆಡ್ಡಿ ವಿರುದ್ಧದ ಪ್ರಕರಣದ ಮೂಲಕ ಬಿಜೆಪಿಯ ಆಪರೇಷನ್‌ಗೆ ವಿರಾಮ ಹಾಕಲಾಗಿದೆ.

ಆಪರೇಷನ್‌ ಕಮಲಕ್ಕೆ ಪ್ರತಿತಂತ್ರವಾಗಿ ರೆಡ್ಡಿಯನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ, ಇದೆಲ್ಲವೂ ರಾಜಕೀಯ ಷಡ್ಯಂತ್ರ ಎಂಬ ವಾದಗಳೂ ಕೇಳಿಬಂದಿವೆ. ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳ ಜತೆಗೆ ‘ವ್ಯವಹಾರ’ ನಡೆಸಲಾಗಿದೆ ಎಂಬ ಪ್ರಕರಣದಲ್ಲಿ ಸದ್ಯ ನಾಪತ್ತೆಯಾಗಿರುವ ರೆಡ್ಡಿ ಶುಕ್ರವಾರ ಸಂಜೆಯ ಹೊತ್ತಿಗೆ ಪೊಲೀಸರಿಗೆ ಶರಣಾಗಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ರೆಡ್ಡಿ ಶರಣಾಗತಿಗೆ ಅವರ ಆತ್ಮೀಯ ಬಿ. ಶ್ರೀರಾಮುಲು ಮಧ್ಯಸ್ಥಿಕೆ ವಹಿಸಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ‘ರೆಡ್ಡಿ ಶೋಧ ಕಾರ್ಯಾಚರಣೆ’ ಶುಕ್ರವಾರ ಹೊಸ ಬೆಳವಣಿಗೆ ಕಂಡಿದೆ.

Also read: ‘ನಾಪತ್ತೆ ಆಸಾಮಿ’ ಜನಾರ್ದನ ರೆಡ್ಡಿ; ಗಣಿನಾಡಿನ ‘ಕಪ್ಪುಕುಳ’ಕ್ಕೆ ಹೊಸ ಡ್ಯಾಮೇಜ್‌ ಭೀತಿ!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 57 ಕೆ.ಜಿ. ಚಿನ್ನದ ಗಟ್ಟಿಯ ಶೋಧವೂ ಸೇರಿಕೊಂಡು ರೆಡ್ಡಿ ಪ್ರಕರಣ ರೋಚಕ ಕಥೆಯ ಸ್ವರೂಪ ಪಡೆದುಕೊಳ್ಳುತ್ತಿದೆ. ಅತ್ತ ರೆಡ್ಡಿ ಪತ್ತೆಗಾಗಿ ವಿಶೇಷ ಪೊಲೀಸ್‌ ತಂಡ ಬಳ್ಳಾರಿ, ಹೈದರಾಬಾದ್‌ ಸುತ್ತುತ್ತಿದ್ದರೆ, ಇತ್ತ ರೆಡ್ಡಿ ಪರ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಈ ಪ್ರಕರಣದ ತನಿಖಾಧಿಕಾರಿಗಳನ್ನು ಬದಲಿಸುವಂತೆ ಹಾಗೂ ತಮ್ಮ ವಿರುದ್ಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ರೆಡ್ಡಿ ತಮ್ಮ ವಕೀಲರ ಮೂಲಕ ಹೈಕೋರ್ಟ್‌ಗೆ ರಿಟ್‌ ಸಲ್ಲಿಸಿದ್ದಾರೆ.

ಬಳ್ಳಾರಿಯ ರಾಜಮಹಲ್‌ ಜ್ಯುವೆಲ್ಸ್‌ನ ರಮೇಶ್ ರೆಡ್ಡಿ ಆಪ್ತ ಅಲಿಖಾನ್‌ಗೆ ಕೊಟ್ಟಿದ್ದಾರೆ ಎನ್ನಲಾಗುತ್ತಿರುವ 57 ಕೆ.ಜಿ. ಚಿನ್ನದ ಗಟ್ಟಿ ಈಗ ಎಲ್ಲಿಗೆ ಎಂಬುದು ಖುದ್ದು ಸಿಸಿಬಿ ಪೊಲೀಸರಿಗೂ ಗೊತ್ತಾಗಿಲ್ಲ. ರೆಡ್ಡಿಗಾಗಿ ಶೋಧ ನಡೆಸುತ್ತಿರುವಂತೆಯೇ ಪೊಲೀಸರು ಈ ಅರ್ಧ ಕ್ವಿಂಟಾಲ್‌ ಚಿನ್ನದ ಪತ್ತೆಗಾಗಿಯೂ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರೆಡ್ಡಿಗೆ ಸೇರಿದ ಬೆಂಗಳೂರಿನ ಪಾರಿಜಾತ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌, ಬಳ್ಳಾರಿ ನಿವಾಸ, ಅಲಿಖಾನ್‌ ನಿವಾಸ ಎಲ್ಲಾ ಕಡೆಯೂ ಪೊಲೀಸರ ತಂಡಗಳು ಚಿನ್ನಕ್ಕಾಗಿ ತಡಕಾಡಿವೆ. ಒಂದು ವೇಳೆ 57 ಕೆ.ಜಿ. ಚಿನ್ನದ ಗಟ್ಟಿ ಪತ್ತೆಯಾಗಿದ್ದೇ ಆದಲ್ಲಿ ಅದು ಈ ಪ್ರಕರಣಕ್ಕೆ ನಿಜಕ್ಕೂ ‘ಗಟ್ಟಿ’ಯಾದ ಆಧಾರವಾಗಲಿದೆ.

Also read: ಜನಾರ್ದನ ರೆಡ್ಡಿ ‘ಪಾಪ’, ‘ಮೈನಿಂಗ್‌ ಮಾಫಿಯಾ’ ಪ್ರತಾಪ; ಸಿದ್ದರಾಮಯ್ಯ ಟ್ವೀಟ್ ನೆನಪಿಸಿದ್ದೇನು?

ರಾಜಕೀಯ ಒತ್ತಡದ ಆರೋಪ:

ಸಿಸಿಬಿ ತನಿಖಾಧಿಕಾರಿಗಳು ರಾಜಕೀಯ ಒತ್ತಡದಿಂದ ತನಿಖೆ ನಡೆಸುತ್ತಿದ್ದಾರೆ ಎಂದು ದೂರಿರುವ ರೆಡ್ಡಿ ಪರ ವಕೀಲರು, ಈ ಪ್ರಕರಣ ರಾಜಕೀಯ ಪ್ರೇರಿತ ಎಂದಿದ್ದಾರೆ. ಬಳ್ಳಾರಿಯಲ್ಲಿ ಬಿಜೆಪಿ ಸೋಲಿನ ಹಿಂದೆಯೇ ಜನಾರ್ದನ ರೆಡ್ಡಿಗೆ ಮುಳುವಾಗಿರುವ ಈ ಪ್ರಕರಣ ರೆಡ್ಡಿ ಆಪ್ತ ಸ್ನೇಹಿತ ಶ್ರೀರಾಮುಲು ಅವರನ್ನು ಕುಗ್ಗಿಸಿದೆ. ಬಳ್ಳಾರಿ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಶ್ರೀರಾಮುಲುಗೆ ರೆಡ್ಡಿ ಪ್ರಕರಣ ಸದ್ಯಕ್ಕೆ ದಿಕ್ಕುತಪ್ಪುವಂತೆ ಮಾಡಿರುವುದಂತೂ ಸುಳ್ಳಲ್ಲ. ಸೋದರಿಯ ಸೋಲಿನ ಜತೆಗೆ ಆಪ್ತ ಸ್ನೇಹಿತನ ಬಂಧನದ ಭೀತಿ ಶ್ರೀರಾಮುಲು ಕಂಗೆಡುವಂತೆ ಮಾಡಿದೆ.

ಬಳ್ಳಾರಿಯಲ್ಲಿ ಕಾಂಗ್ರೆಸ್‌ ಗೆಲುವಿನ ಜತೆಗೆ ಪುನರಾರಂಭವಾಗುತ್ತಿದ್ದ ಜನಾರ್ದನ ರೆಡ್ಡಿ ಅಧ್ಯಾಯವನ್ನು ಮುಚ್ಚಿಹಾಕುವ ಪ್ರಯತ್ನಕ್ಕೆ ಮುಂದಾಗಿರುವಂತಿದೆ. ಉಪ ಚುನಾವಣೆಗೂ ಮೊದಲು ಡಿ.ಕೆ. ಶಿವಕುಮಾರ್‌ ಸಿಡಿಸಲಿದ್ದಾರೆ ಎಂಬ ‘ಬಾಂಬ್‌’ ರೆಡ್ಡಿ ವಿರುದ್ಧದ ಈ ಪ್ರಕರಣವೇ ಎಂಬ ಮಾತುಗಳೂ ಇವೆ. ರಾಜಕೀಯ ದುರುದ್ದೇಶದಿಂದ ಸಿಸಿಬಿ ಛೂ ಬಿಟ್ಟು ರೆಡ್ಡಿಯನ್ನು ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗುತ್ತಿದೆ ಎಂಬ ವಾದಗಳನ್ನು ರೆಡ್ಡಿ ಪರ ವಕೀಲರು ಮುಂದಿಡುತ್ತಿದ್ದಾರೆ.

ಮತ್ತೊಂದೆಡೆ ಬೆಂಗಳೂರು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಅಲೋಕ್‌ ಕುಮಾರ್‌ ತಮ್ಮ ಮೇಲಿನ ಕಳಂಕ ತೊಳೆದುಕೊಳ್ಳಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಲಾಟರಿ ದಂಧೆ ಪ್ರಕರಣದಲ್ಲಿ ಮೂರು ವರ್ಷಗಳ ಹಿಂದೆ ಅಮಾನತುಗೊಂಡು, ಲಾಟರಿ ದಂಧೆ ಆರೋಪಿ ಪಾರಿ ರಾಜನ್‌ ಜತೆಗೆ ಸಂಪರ್ಕದ ಕಳಂಕ ಹೊಂದಿದ್ದ ಅಲೋಕ್‌ ಕುಮಾರ್‌ ಈ ಪ್ರಕರಣದ ಮೂಲಕ ಕಳಂಕ ತೊಳೆದುಕೊಂಡು ಮತ್ತೆ ತಾವು ಖಡಕ್‌ ಪೊಲೀಸ್‌ ಅಧಿಕಾರಿ ಎಂಬುದನ್ನು ನಿರೂಪಿಸಲು ಯತ್ನಿಸುತ್ತಿರುವಂತಿದೆ.

Also read: ಕರ್ನಾಟಕದ ಕಳಂಕ: ಗಣಿ ಉದ್ಯಮಿ ಗಾಲಿಯನ್ನು ‘ಮಧ್ಯವರ್ತಿ’ಯಾಗಿ ಬದಲಿಸಿತಾ  ಜೈಲೂಟ?

ಆದರೆ, ಇವಿಷ್ಟೇ ಕಾರಣಕ್ಕೆ ರೆಡ್ಡಿಯನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಬೆಂಕಿ ಇಲ್ಲದೆ ಹೊಗೆ ಏಳಿಸುವ ಕೆಲಸವನ್ನು ಯಾರಿಂದಲೂ ಮಾಡಲಾಗದು. ಆದರೆ, ಇರುವ ಬೆಂಕಿಯ ಮೂಲಕ ರೆಡ್ಡಿಯನ್ನು ತಕ್ಕಷ್ಟು ಸುಡುವ ಕೆಲಸವಂತೂ ನಡೆಯುತ್ತಿದೆ. ಅಕ್ರಮದ ಬೆನ್ನು ಬಿದ್ದರೆ ಜೈಲು ವಾಸದ ಭಯ ಅನಿವಾರ್ಯ ಎಂಬುದನ್ನು ರೆಡ್ಡಿ ಪ್ರಕರಣ ಇಲ್ಲಿಯವರೆಗೂ ತೆರೆದಿಟ್ಟಿದೆ.

ಗಾಲಿ ಜನಾರ್ದನ ರೆಡ್ಡಿ ಎಂಬ ‘ನಾಪತ್ತೆ ಆಸಾಮಿ’ಯ ರೋಚಕೆ ಕಥೆಯಲ್ಲಿ ಸದ್ಯ ಇಷ್ಟೆಲ್ಲಾ ಘಟನೆಗಳು ಪುಟ ತಿರುಗಿಸಿಕೊಂಡಿವೆ. ಇನ್ನಷ್ಟು ರೋಚಕ ಘಟನೆಗಳು ಮುಂದೆ ನಡೆಯಬಹುದು. ಜನಾರ್ದನ ರೆಡ್ಡಿ ಬಂಧನವಾಗಬಹುದು, ಇಲ್ಲವೇ ರೆಡ್ಡಿ ಪೊಲೀಸರಿಗೆ ಶರಣಾಗಬಹುದು. ಆದರೆ, ಏನೇ ರಾಜಕೀಯ ಷಡ್ಯಂತ್ರಗಳಿದ್ದರೂ, ಎಷ್ಟೇ ರಾಜಕೀಯ ಒತ್ತಡಗಳಿದ್ದರೂ ಅಂತಿಮವಾಗಿ ಈ ಪ್ರಕರಣ ಬಂದು ನಿಲ್ಲಬೇಕಾದ್ದು ನ್ಯಾಯಾಲಯದಲ್ಲಿ. ಒಂದು ವೇಳೆ ರೆಡ್ಡಿ ತಪ್ಪು ಮಾಡಿರುವುದು ನಿಜ ಎಂಬುದು ನ್ಯಾಯಾಲಯದಲ್ಲಿ ಸಾಬೀತಾದರೆ ರೆಡ್ಡಿಗೆ ಶಿಕ್ಷೆಯಾಗುವುದು ಅನಿವಾರ್ಯ. ಆದರೆ, ಅಲ್ಲಿಯವರೆಗೂ ಈ ‘ರೋಚಕ ಕಥೆ’ಯಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ.

Join Samachara Official. CLICK HERE