samachara
www.samachara.com
ತಮ್ಮದೇ ಪಕ್ಷದ ಹಿರಿಯರನ್ನು ಕಂಡರೆ ಪ್ರಧಾನಿ ಮೋದಿಗೇಕೆ ಈ ಪರಿ ಅಸಮಾಧಾನ?
COVER STORY

ತಮ್ಮದೇ ಪಕ್ಷದ ಹಿರಿಯರನ್ನು ಕಂಡರೆ ಪ್ರಧಾನಿ ಮೋದಿಗೇಕೆ ಈ ಪರಿ ಅಸಮಾಧಾನ?

ಗುಜರಾತ್‌ ರಾಜ್ಯಪಾಲ ಕೊಹ್ಲಿಯವರ ಜ್ಞಾನ, ಪಾಂಡಿತ್ಯ, ಇನ್ನೊಂದು ಕಡೆ ಅವರ ವಯಸ್ಸು ಎರಡನ್ನೂ ಗಮನಿಸದ ಮೋದಿ ಅಲಕ್ಷ್ಯದ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ.

ಸಂಸ್ಕೃತಿ, ಸಂಸ್ಕಾರ, ಶಿಸ್ತಿನ ಬಗ್ಗೆ ಮಾತನಾಡುತ್ತದೆ ವಿಶ್ವದ ಅತಿ ದೊಡ್ಡ ಹಿಂದೂ ಸಂಘಟನೆ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್‌. ಇದೇ ಆರ್‌ಎಸ್‌ಎಸ್‌ನ ಸೃಷ್ಟಿ ನರೇಂದ್ರ ಮೋದಿ ಇಂದು ಭಾರತದ ಪ್ರಧಾನಿಯಾಗಿದ್ದಾರೆ. ಇಂಥಹ ಉನ್ನತ ಹುದ್ದೆಯಲ್ಲಿರುವ ಮೋದಿ, ಇದೇ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದ ಮತ್ತೊಬ್ಬ ಹಿರಿಯ ವ್ಯಕ್ತಿ ಜತೆ ಸರ್ದಾರ್‌ ಪಟೇಲ್‌ ಪ್ರತಿಮೆ ಅನಾವರಣದ ದಿನ ನಡೆದುಕೊಂಡ ರೀತಿ ಈಗ ಟೀಕೆಗೆ ಗುರಿಯಾಗಿದೆ.

ಆಗಿದ್ದಿಷ್ಟೆ; ಅಕ್ಟೋಬರ್‌ 31ರಂದು ಗುಜರಾತ್‌ನಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ‘ಏಕತಾ ಪ್ರತಿಮೆ’ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿತ್ತು. ಇದರ ಉದ್ಘಾಟನೆಗೆ ಬಂದಿದ್ದ ಪ್ರಧಾನಿ ಮೋದಿ ಫೋಟೋವೊಂದಕ್ಕೆ ಪೋಸ್‌ ನೀಡಬೇಕಾಗಿತ್ತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ, ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ಮೊದಲಾದವರ ಜತೆ ಪ್ರಧಾನಿ ನಿಂತುಕೊಂಡು ‘ಅವರಿಗಾಗಿ’ ಕಾಯುತ್ತಿದ್ದರು. ವಿಶೇಷ ಚೇತನರಾಗಿರುವ ಅವರು ಬರಲು ಒಂದಷ್ಟು ತಡವಾಯಿತು.

ಅವರನ್ನು ಗುಜರಾತ್‌ ಉಪ ಮುಖ್ಯಮಂತ್ರಿ ನಿತಿನ್‌ ಭಾಯ್‌ ಪಟೇಲ್‌ ಕರೆದುಕೊಂಡು ಬರುತ್ತಿದ್ದರೆ ಪ್ರಧಾನಿ ಅಸಹನೆಯಿಂದಲೇ ಗಮನಿಸುತ್ತ ನಿಂತಿದ್ದರು. ಅಷ್ಟರಲ್ಲಿ ಅವರು ಬಂದು ಪ್ರಧಾನಿ ಬಳಿ ನಿಂತರೂ ಮೋದಿ ಮುಖ ತಿರುಗಿಸಲಿಲ್ಲ. ಮರುಕ್ಷಣವೇ ಮೋದಿ ಅಲ್ಲಿಂದ ಹೊರಟರು. ಸೌಜನ್ಯಕ್ಕೆ ಪ್ರಧಾನಿಯತ್ತ ಆ ವೃದ್ಧರು ನೋಟ ಬೀರಿದರೂ ಒಂದು ಸಲ ಮುಖವನ್ನೂ ನೋಡದರೆ ನಿರ್ಲಕ್ಷದ ದೃಷ್ಟಿ ಬೀರುತ್ತಾ ಮೋದಿ ಕಾಲ್ಕಿತ್ತರು. ಅವರು ಜನಸಾಮಾನ್ಯರೇನೂ ಆಗಿರಲಿಲ್ಲ. ಬದಲಿಗೆ ಗುಜರಾತ್‌ನ ರಾಜ್ಯಪಾಲರಾಗಿದ್ದರು. ವಯಸ್ಸಿನಲ್ಲಿ ಮೋದಿಗಿಂತ ದೊಡ್ಡವರು. ಅವರದೇ ಪಕ್ಷದ ಹಿರಿಯರಾಗಿದ್ದರು.

ಅಂದಹಾಗೆ ಈ ರಾಜ್ಯಪಾಲರ ಹೆಸರು ಓಂ ಪ್ರಕಾಶ್ ಕೊಹ್ಲಿ. ಅವರೂ ಬಿಜೆಪಿಯಲ್ಲಿ ಬೆಳೆದು ಬಂದವರಾಗಿದ್ದರು. ಮಾಜಿ ರಾಜ್ಯಸಭಾ ಸದಸ್ಯರೂ ಆದ ಅವರು 1999 ರಿಂದ 2000ನೇ ಇಸವಿವರೆಗೆ ದೆಹಲಿ ಬಿಜೆಪಿಯ ಅಧ್ಯಕ್ಷರೂ ಆಗಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭ ಹೋರಾಟಕ್ಕೆ ಇಳಿದು ಜೈಲಿಗೂ ಹೋಗಿ ಬಂದಿದ್ದರು. ಹಿಂದಿ ಭಾಷೆಯಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು 37 ವರ್ಷಗಳ ಕಾಲ ಕಾಲೇಜು ಪ್ರಾಧ್ಯಾಪಕರಾಗಿದ್ದರು. ಮೂರು ಪುಸ್ತಕಗಳ ಲೇಖಕರೂ ಆದ ಅವರನ್ನು ಸ್ವತಃ ಮೋದಿ ಪ್ರಧಾನಿಯಾಗುತ್ತಿದ್ದಂತೆ ಗುಜರಾತ್‌ ರಾಜ್ಯದ ರಾಜ್ಯಪಾಲರಾಗಿ ನೇಮಿಸಿದ್ದರು. 2016ರಿಂದ ಮಧ್ಯ ಪ್ರದೇಶದ ರಾಜ್ಯಪಾಲರಾಗಿ ಹೆಚ್ಚುವರಿ ಹೊಣೆಯನ್ನೂ ಅವರು ನಿರ್ವಹಿಸುತ್ತಿದ್ದಾರೆ.

ಅಂದ ಹಾಗೆ ಅವರಿಗೆ ಈಗ 83 ವರ್ಷ. ಒಂದು ಕಡೆ ಕೊಹ್ಲಿಯವರ ಜ್ಞಾನ, ಪಾಂಡಿತ್ಯ, ಇನ್ನೊಂದು ಕಡೆ ವಯಸ್ಸು ಎರಡನ್ನೂ ಗಮನಿಸದ ಮೋದಿ ಅವರನ್ನು ಅಲಕ್ಷಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. ಯಾಕೆ ಪ್ರಧಾನಿ ಹೀಗೆ ನಡೆದುಕೊಂಡರು?

ಹಾಗೆ ನೋಡಿದರೆ, ಮೋದಿ ಹಿರಿಯರನ್ನು ತುಚ್ಛವಾಗಿ ನಡೆಸಿಕೊಳ್ಳುವುದು ಇದೇ ಮೊದಲೇನೂ ಅಲ್ಲ. ಸ್ವತಃ ತಮ್ಮ ಗುರು, 2002ರ ಗುಜರಾತ್‌ ಗಲಭೆಯ ಸಂದರ್ಭದಲ್ಲಿ ತಮ್ಮ ಮುಖ್ಯಮಂತ್ರಿ ಹುದ್ದೆಯನ್ನು ರಕ್ಷಿಸಿದ್ದ ಬಿಜೆಪಿಯ ಮೇರು ನಾಯಕ ಎಲ್‌. ಕೆ. ಅಡ್ವಾಣಿಯವರನ್ನೂ ಮೋದಿ ಹಿಂದೊಮ್ಮೆ ಇದೇ ರೀತಿ ನಡೆಸಿಕೊಂಡಿದ್ದರು.

2017ರ ಮಾರ್ಚ್‌ 9ರಂದು ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್ ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಿದ್ದರು ಮೋದಿ. ಈ ವೇಳೆ ವೇದಿಕೆಯಲ್ಲಿದ್ದ ರಾಜ್ಯದ ನಿರ್ಗಮಿತ ಮುಖ್ಯಮಂತ್ರಿ, ಬಿಜೆಪಿಯ ಬದ್ಧ ವೈರಿ ಪಕ್ಷ ಕಮ್ಯೂನಿಸ್ಟ್‌ಗೆ ಸೇರಿದ ಮಾಣಿಕ್‌ ಸರ್ಕಾರ್‌ರನ್ನು ಆತ್ಮೀಯವಾಗಿ ಮಾತನಾಡಿಸಿದ್ದರು. ಅವರ ಜತೆ ಅಗತ್ಯಕ್ಕಿಂತ ಹೆಚ್ಚೇ ವಿನಯದಿಂದ ನಡೆದುಕೊಂಡಿದ್ದರು. ಆದರೆ ಅಲ್ಲೇ ಪಕ್ಕದಲ್ಲಿದ್ದ ಅಡ್ವಾಣಿಯತ್ತ ಮುಖ ತಿರುಗಿಸಿಯೂ ನೋಡಿರಲಿಲ್ಲ.

ತಮ್ಮ ಶಿಷ್ಯನಾದರೂ, ಪ್ರಧಾನಿ ಎಂಬ ಗೌರವದಿಂದ ಎರಡೆರಡು ಬಾರಿ ನಮಸ್ಕರಿಸಲು ಅಡ್ವಾಣಿ ಎದ್ದು ನಿಂತಾಗಲೂ ಮೋದಿ ತಿರಸ್ಕಾರದ ನೋಟವನ್ನಷ್ಟೇ ಬೀರಿದರು. ಹಾಗಂಥ ಎಲ್ಲಾ ಸಂದರ್ಭಗಳಲ್ಲೂ ಮೋದಿ ಹೀಗೆಯೇ ನಡೆದುಕೊಳ್ಳುತ್ತಾರೆ ಎಂದೇನಿಲ್ಲ. ಅಗತ್ಯಕ್ಕೆ ತಕ್ಕಂತೆ ಅವರ ನಡವಳಿಕೆಗಳು ಬದಲಾಗುತ್ತವೆ ಎನ್ನುವುದಕ್ಕೆ ಹಲವು ವಿಡಿಯೋಗಳು ಉದಾಹರಣೆಯಾಗಿ ಕಾಣಿಸಿಕೊಳ್ಳುತ್ತವೆ.

ಕಾರ್ಯಕ್ರಮಗಳಲ್ಲಿ ಬುಡಕಟ್ಟು ಮಹಿಳೆಗೆ ಚಪ್ಪಲಿ ತೊಡಿಸಿದ, ಮಕ್ಕಳನ್ನು ಮುದ್ದಾಗಿ ಮಾತನಾಡಿಸುವಂತ ಪ್ರಧಾನಿಯ ವಿನಯವಂತಿಕೆಯ ನೂರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿವೆ. ಗಮನಿಸಬೇಕಾದ ಅಂಶವೆಂದರೆ ಅವೆಲ್ಲಾ ಕ್ಯಾಮೆರಾಗಳಲ್ಲಿ ಸೂಕ್ತವಾಗಿ ಸೆರೆಯಾಗಿವೆ. ಇದೇ ಕ್ಯಾಮೆರಾಗಳ ಮುಂದೆ ಹಿಂದೊಮ್ಮೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆಯೂ ಮೋದಿ ಬಲು ಆತ್ಮೀಯತೆಯಿಂದ ನಡೆದುಕೊಂಡಿದ್ದರು. 2014ರ ಚುನಾವಣೆ ವೇಳೆ ನಡೆದ ಈ ಘಟನೆಯಲ್ಲಿ ಮೋದಿ ಬಲವಂತವಾಗಿ ನಾಯ್ಡು ಕೈ ಹಿಡಿದು ನಾಯ್ಡುವನ್ನು ಪಕ್ಕಕೆಳೆದು ಕೂರಿಸಿಕೊಂಡಿದ್ದರು. ಅದೇ ನಾಯ್ಡು ಇವತ್ತು ಮೋದಿಯಿಂದ ದೂರ ಸರಿದಿದ್ದಾರೆ ಎನ್ನುವುದು ಬೇರೆ ಮಾತು.

ನಾಯ್ಡು ಮತ್ತು ಇತರ ಕೆಲವು ಸಂದರ್ಭದಲ್ಲಿ ಹೀಗೆ ಅತಿ ಸೌಜನ್ಯದ ನಡವಳಿಕೆ ತೋರುವ ‘ಹಿಂದೂ ಹೃದಯ ಸಾಮ್ರಾಟ’ ಮೋದಿ, ತಮ್ಮದೇ ಪಕ್ಷದ, ತಮ್ಮದೇ ಸೈದ್ಧಾಂತಿಕ ನೆಲೆಯ ಹಿರಿಯರೆಡೆಗಿನ ನಡವಳಿಕೆ ಕೆಲವೊಮ್ಮೆ ವಿಕ್ಷಿಪ್ತವಾಗಿ ಕಾಣುತ್ತದೆ. ಇದಕ್ಕೆ ಓಪಿ ಕೊಹ್ಲಿ ಮತ್ತು ಅಡ್ವಾಣಿಯದು ಕೇವಲ ಉದಾಹರಣೆಗಳಷ್ಟೇ. ಇದನ್ನು ‘ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ’ ಎನ್ನುತ್ತೀರೋ, ‘ಅಧಿಕಾರದ ಮದ, ಅಹಂ’ ಎನ್ನುತ್ತೀರೋ, ಇಲ್ಲ ನಮ್ಮವರೇ ನಮಗೆ ಮಿತ್ರರಲ್ಲ ಎಂಬ ಅಸಮಾಧಾನವಾ? ತೀರ್ಮಾನ ನಿಮಗೆ ಬಿಟ್ಟಿದ್ದು.

Join Samachara Official. CLICK HERE