samachara
www.samachara.com
‘ನಾಪತ್ತೆ ಆಸಾಮಿ’ ಜನಾರ್ದನ ರೆಡ್ಡಿ; ಗಣಿನಾಡಿನ ‘ಕಪ್ಪುಕುಳ’ಕ್ಕೆ ಹೊಸ ಡ್ಯಾಮೇಜ್‌ ಭೀತಿ!
COVER STORY

‘ನಾಪತ್ತೆ ಆಸಾಮಿ’ ಜನಾರ್ದನ ರೆಡ್ಡಿ; ಗಣಿನಾಡಿನ ‘ಕಪ್ಪುಕುಳ’ಕ್ಕೆ ಹೊಸ ಡ್ಯಾಮೇಜ್‌ ಭೀತಿ!

ಜೈಲಿನಿಂದ ಬಿಡುಗಡೆಯಾದ ಬಳಿಕ ‘ಸಮಾಜ ಸೇವೆ’ಯ ಹೆಸರಿನಲ್ಲಿ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದ ಜನಾರ್ದನ ರೆಡ್ಡಿಗೆ ಈಗ ಹೊಸ ಡ್ಯಾಮೇಜ್‌ನ ಭಯ ಶುರುವಾಗಿದೆ.

ಒಂದು ಕಾಲದಲ್ಲಿ ಚಿನ್ನದ ಕುಸುರಿಯ ಮಂಚದಲ್ಲಿ ಮಲಗಿ, ಚಿನ್ನದ ಕುರ್ಚಿಯಲ್ಲಿ ಕುಂತು, ಚಿನ್ನದ ತಟ್ಟೆಯಲ್ಲಿ ಉಂಡು, ಐಷಾರಾಮಿ ಕಾರುಗಳಲ್ಲಿ ಓಡಾಡಿಕೊಂಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಇಂದು ಪೊಲೀಸರ ಭಾಷೆಯಲ್ಲಿ ‘ನಾಪತ್ತೆ ಆಸಾಮಿ’. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸದ್ಯ ಸಿಸಿಬಿಗೆ ಬೇಕಾಗಿರುವ ರೆಡ್ಡಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಸೋಲಿನ ಬಿಸಿಯ ಜತೆಗೇ ರೆಡ್ಡಿಯ ‘ನಿರೀಕ್ಷಿತ ಬಂಧನ’ ಬಿಜೆಪಿಯನ್ನು ಸದ್ಯ ತಣ್ಣಗೆ ಮಾಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಯನ್ನು ಹುಡುಕಾಡುತ್ತಿರುವ ಪೊಲೀಸರು ಮೊಬೈಲ್‌ ಟವರ್‌ ಲೊಕೇಷನ್‌ ಆಧರಿಸಿ ರೆಡ್ಡಿ ಇರುವ ಜಾಗ ಪತ್ತೆ ಕಾರ್ಯದಲ್ಲಿದ್ದಾರೆ. ರೆಡ್ಡಿ ಹಾಗೂ ಅವರ ಆಪ್ತರು ಹೈದರಾಬಾದ್‌ನಲ್ಲಿ ಅಡಗಿಕೊಂಡಿರಬಹುದೆಂಬ ಶಂಕೆಯ ಮೇರೆಗೆ ಸಿಸಿಬಿ ಪೊಲೀಸರ ತಂಡ ಹೈದರಾಬಾದ್‌ಗೆ ತೆರಳಿದೆ ಎನ್ನಲಾಗುತ್ತಿದೆ. ತಲೆ ಮರೆಸಿಕೊಂಡಿರುವ ರೆಡ್ಡಿ ಹೈದರಾಬಾದ್‌ನಲ್ಲಿರಬಹುದೆಂಬುದು ಕೇವಲ ಪೊಲೀಸರ ಶಂಕೆ ಮಾತ್ರ. ನಿಜಕ್ಕೂ ರೆಡ್ಡಿ ಎಲ್ಲಿ ಅಡಗಿಕೊಂಡಿದ್ದಾರೋ ಈವರೆಗೂ ಗೊತ್ತಿಲ್ಲ.

ಅಕ್ರಮ ಗಣಿಗಾರಿಕೆ ಹಾಗೂ ಅದಿರು ನಾಪತ್ತೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಜನಾರ್ದನ ರೆಡ್ಡಿಗೆ ಈಗ ಮತ್ತೊಮ್ಮೆ ಬಂಧನದ ಭೀತಿ ಎದುರಾಗಿದೆ. ಸಿಸಿಬಿ ಪೊಲೀಸರು ಯಾವುದೇ ಕ್ಷಣದಲ್ಲಿ ತಮ್ಮನ್ನು ಬಂಧಿಸಬಹುದೆಂಬ ಕಾರಣಕ್ಕೆ ರೆಡ್ಡಿ ಮತ್ತು ಆಪ್ತರ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿವೆ. ಇತ್ತ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೆ ಬಳ್ಳಾರಿಯಲ್ಲಿ ಸೋಲಿನ ಭಾರವನ್ನು ತಮ್ಮ ತಲೆಯ ಮೇಲೇ ಹೊತ್ತಿಕೊಂಡ ರೆಡ್ಡಿ ಆಪ್ತ ಸ್ನೇಹಿತ ಹಾಗೂ ಬಿಜೆಪಿ ಶಾಸಕ ಬಿ. ಶ್ರೀರಾಮುಲು, “ಈ ಬಗ್ಗೆ ತಮಗೆ ಏನೇನೂ ಗೊತ್ತಿಲ್ಲ. ದೇಶದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಉಪ ಚುನಾವಣಾ ಪ್ರಕ್ರಿಯೆಯ ಕಾರಣಕ್ಕೆ ಸಿಸಿಬಿ ಪೊಲೀಸರು ರೆಡ್ಡಿ ಶೋಧವನ್ನು ಬುಧವಾರದವರೆಗೆ ತಡೆಹಿಡಿದಿದ್ದರು ಎನ್ನಲಾಗಿದೆ. ಮಂಗಳವಾರ ಚುನಾವಣಾ ಫಲಿತಾಂಶ ಹೊರ ಬಿದ್ದಿರುವುದರಿಂದ ಬುಧವಾರ ರೆಡ್ಡಿಗಾಗಿ ಶೋಧನಾ ಕಾರ್ಯ ಚುರುಕುಗೊಂಡಿದೆ. ಈ ಮೂಲಕ ‘ಲೋಕಲ್‌ ಕಳ್ಳ’ರಂತೆ ಪೊಲೀಸರಿಗೆ ಹೆದರಿ ಊರು ಬಿಟ್ಟು ಅಡಗಿ ಕುಳಿತುಕೊಳ್ಳಬೇಕಾದ ಸ್ಥಿತಿ ‘ಗಣಿಧಣಿ’ಗೆ ಬಂದಿದೆ.

2015ರಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ರೆಡ್ಡಿ ಮರು ವರ್ಷವೇ ಮಗಳ ಅದ್ಧೂರಿ ಮದುವೆ ಮಾಡಿದ್ದರು. ರೆಡ್ಡಿ ಮಗಳ ಮದುವೆಯ ಕರೆಯೋಲೆಯೇ ಸಾಕಷ್ಟು ಸುದ್ದಿಯಾಗಿತ್ತು. ವಿಡಿಯೊ ಆಮಂತ್ರಣ ಹೊಂದಿರುವ ದುಬಾರಿ ಕರೆಯೋಲೆ, ಬೆಂಗಳೂರು ಅರಮನೆ ಮೈದಾನದಲ್ಲಿ ಸಿನಿಮಾ ಸೆಟ್‌ ಮಾದರಿಯ ಮದುವೆ ಮಂಟಪ, ಸಾರೋಟಿನಲ್ಲಿ ದಿಬ್ಬಣದ ಮೆರವಣಿಗೆ – ಹೀಗೆ ವೈಭವದ ಮದುವೆಯ ಮೂಲಕ ಜೈಲು ವಾಸದ ನೆನಪುಗಳನ್ನು ಮರೆತಿದ್ದ ರೆಡ್ಡಿಗೆ ಈಗ ಮತ್ತೆ ಜೈಲಿನ ದಿನಗಳು ಭಯ ಉಂಟುಮಾಡಿವೆ.

ಬೆಂಗಳೂರಿನ ಅಂಬಿಡೆಂಟ್‌ ಹೆಸರಿನ ಕಂಪೆನಿ ಹಣ ದುಪ್ಪಟ್ಟು ಮಾಡಿಕೊಡುವ ಆಮಿಷ ತೋರಿ ನೂರಾರು ಜನರಿಗೆ ಮೋಸ ಮಾಡಿದ್ದ ಪ್ರಕರಣದ ಜತೆಗೆ ರೆಡ್ಡಿ ಹೆಸರೂ ತಳುಕು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆಗೆ ರೆಡ್ಡಿ ಮಧ್ಯವರ್ತಿಯಾಗಿದ್ದರು ಎಂಬ ಆರೋಪ ಈಗ ಅವರ ಮೇಲಿದೆ. ಈ ಕಂಪೆನಿಯ ವಂಚನೆಗೂ ಜನಾರ್ದನ ರೆಡ್ಡಿಗೂ ಸಂಬಂಧ ಕಲ್ಪಿಸಿರುವ ಪೊಲೀಸರು ಈ ಕಂಪೆನಿಯ ಮಾಲೀಕ ಫರೀದ್‌ ಬಂಧನಕ್ಕಾಗಿಯೂ ಹುಡುಕಾಟ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫರೀದ್‌ ತಮ್ಮೊಂದಿಗೆ ಈಗ ರೆಡ್ಡಿಯನ್ನೂ ಮುಳುಗಿಸುತ್ತಿದ್ದಾರೆ.

ಜನಾರ್ದನ ರೆಡ್ಡಿ ಜೈಲಿನಿಂದ ಬಂದ ನಂತರ ಸುಮ್ಮನೇನೂ ಕುಂತಿಲ್ಲ. ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳಲು ಏನೆಲ್ಲಾ ಮಾಡಬೇಕೋ ಅದಕ್ಕಿಂತ ಜಾಸ್ತಿಯೇ ರೆಡ್ಡಿ ಮಾಡಿದ್ದಾರೆ. ಒಂದು ಕಾಲದಲ್ಲಿ ತಿರುಪತಿ ತಿಪ್ಪಪ್ಪನಿಗೆ ಟೋಪಿ ಹಾಕಿದ್ದ ಇದೇ ರೆಡ್ಡಿ ಈಗ ಕರ್ನಾಟಕದ ದೇವಸ್ಥಾನಗಳಿಗೆ ಹಣ ಕೊಡುವುದು, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವುದು, ಮಠಾಧೀಶರನ್ನು ಭೇಟಿ ಮಾಡುವುದು, ಸಿಕ್ಕಸಿಕ್ಕ ವೇದಿಕೆಗಳಲ್ಲಿ ‘ಒಳ್ಳೆತನ’ದ ಬಗ್ಗೆ ಭಾ‍ಷಣ ಬಿಗಿಯುವುದನ್ನು ಮಾಡಿಕೊಂಡೇ ಬರುತ್ತಿದ್ದಾರೆ.

ಇದಿಷ್ಟೇ ಅಲ್ಲದೆ, ಸಂತರ, ಗಣ್ಯರ ಜನ್ಮದಿನಗಳು ಹಾಗೂ ವಿಶೇಷ ದಿನಗಳ ಶುಭಾಶಯ, ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಪೋಸ್ಟರ್‌ಗಳು ಜನಾರ್ದನ ರೆಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ, ಅವರ ವೈಯಕ್ತಿಕ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್‌ ಆಗುತ್ತಲೇ ಇವೆ. ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವದ ಶುಭಾಶಯ ಹಾಗೂ ನವೆಂಬರ್‌ 3ರಂದು ಮಾಜಿ ಶಾಸಕ ರವೀಂದ್ರ ನಿಧನಕ್ಕೆ ಸಂತಾಪದ ಪೋಸ್ಟರ್‌ಗಳೂ ರೆಡ್ಡಿ ವಾಲ್‌ನಲ್ಲಿವೆ. ಜೈಲಿಗೆ ಹೋಗಿ ಬಂದು ತಮ್ಮ ಮನಃಪರಿವರ್ತನೆಯಾಗಿದೆ ಎಂದು ತೆಲುಗು ಭಾಷೆಯಲ್ಲಿರುವ ಸ್ವಾಮಿ ವಿವೇಕಾನಂದರ ಪುಸ್ತಕ ಓದುತ್ತಿರುವ ಪೋಟೋ ಪೋಸ್ಟ್‌ ಮಾಡಿದ್ದ ರೆಡ್ಡಿ ಸಮಯ ಸಿಕ್ಕಾಗಲೆಲ್ಲಾ ತಾವು ‘ಸಾಚಾ’ ಎಂಬುದನ್ನು ಹೇಳಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಇತ್ತೀಚೆಗೆ ನಿಧನರಾದ ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಗದಗಿನಲ್ಲಿ ಶ್ರೀರಾಮುಲು ಜತೆಗೆ ಬೀಡು ಬಿಟ್ಟಿದ್ದ ರೆಡ್ಡಿ ಸ್ವಾಮೀಜಿ ಜತೆಗಿರುವ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಹೀಗೆ ಸಂದರ್ಭ ಸಿಕ್ಕಾಗೆಲ್ಲಾ ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನಿಸುತ್ತಲೇ ಇದ್ದ ರೆಡ್ಡಿ ಜನರ ಮನಸ್ಸಿಂದ ‘ಎಲ್ಲವನ್ನೂ’ ಮರೆಸುವ ಪ್ರಯತ್ನ ನಡೆಸಿದಂತಿತ್ತು. ಹಳೆಯ ‘ಕೆಲಸ’ಗಳನ್ನು ಜನರ ಮನಸ್ಸಿಂದ ಅಳಿಸಬಹುದು. ಕಾಲ ಜನರ ಮನಸ್ಸಿಂದ ಎಲ್ಲವನ್ನೂ ಮರೆಸುತ್ತದೆ. ಇದಕ್ಕೆ ಸಾಕ್ಷಿ ಜನಾರ್ದನ ರೆಡ್ಡಿ ಅಣ್ಣಂದಿರಾದ ಕರುಣಾಕರ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ಇಂದು ಎಲ್ಲಿದ್ದಾರೆ ಎಂಬುದು ನಾಡಿನ ಬಹುತೇಕರಿಗೆ ಗೊತ್ತಿಲ್ಲ.

ಆದರೆ, ಜನಾರ್ದನ ರೆಡ್ಡಿ ಹಾಗೆ ಜನರ ನೆನಪಿಂದ ಮರೆಯಾಗುವ ಅವಕಾಶವಿದ್ದರೂ ತನ್ನಿಂದ ಏನೂ ತಪ್ಪಾಗಿಲ್ಲ, ಮಾಡಬಾರದ ತಪ್ಪಿಗಾಗಿ ನಾನು ಶಿಕ್ಷೆ ಅನುಭವಿಸಬೇಕಾಯಿತು, ನಾನು ಜೈಲು ಸೇರಿದ್ದು ರಾಜಕೀಯ ಪಿತೂರಿ ಎಂದೆಲ್ಲಾ ಹೇಳುತ್ತಾ ಜನರ ಅನುಕಂಪದ ಆಸರೆ ಪಡೆಯುವ ಪ್ರಯತ್ನವನ್ನು ಮೊನ್ನೆಮೊನ್ನೆಯವರೆಗೂ ಮಾಡಿದ್ದಾರೆ. ಕಾಲ ಕಳೆದಂತೆ ಜನರ ಮನಸ್ಸಿಂದ ಗಣಿ ಪ್ರಕರಣವೂ ಮರೆಯಬಹುದು, ಜನಾರ್ದನ ರೆಡ್ಡಿ ಹೆಸರೂ ಮರೆಯಬಹುದು. ಆದರೆ, ಪೊಲೀಸ್‌ ದಾಖಲೆಗಳಲ್ಲಿನ ‘ಸ್ಮೃತಿ’ಯನ್ನು ರೆಡ್ಡಿ ಮರೆಸಲು ಸಾಧ್ಯವಿಲ್ಲ. ಹೀಗಾಗಿಯೇ ವರ್ಷದ ಹಿಂದೆ ಹೊತ್ತಿಕೊಂಡಿದ್ದ ಅಕ್ರಮ ಹಣ ವರ್ಗಾವಣೆ ದಂಧೆಯ ಕಿಡಿ ಈಗ ದೊಡ್ಡ ಬೆಂಕಿಯಾಗಿ ರೆಡ್ಡಿ ಸುಡಲು ಮುಂದಾಗಿದೆ.

ತಲೆಮರೆಸಿಕೊಂಡಿರುವ ರೆಡ್ಡಿಯನ್ನು ಪೊಲೀಸರು ಯಾವುದೇ ಕ್ಷಣದಲ್ಲೂ ಬಂಧಿಸಬಹುದು, ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002’ರಡಿ ರೆಡ್ಡಿಗೆ ಕನಿಷ್ಠ 3 ವರ್ಷದಿಂದ 7 ವರ್ಷದವರೆಗ ಜೈಲು ಶಿಕ್ಷೆ ಹಾಗೂ ಐದು ಲಕ್ಷ ರೂಪಾಯಿ ದಂಡ ವಿಧಿಸಬಹುದು, ನ್ಯಾಯಾಲಯ ಮೂರು ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಿದರೆ ಜಾಮೀನು ಕೂಡಾ ಸಿಗದು – ಇಷ್ಟೆಲ್ಲಾ ಸಾಧ್ಯತೆಗಳು ಸದ್ಯದ ಬೆಳವಣಿಗೆಗಳಲ್ಲಿವೆ. ಸಾರ್ವಜನಿಕವಾಗಿ ಅತಿಯಾದ ವಿನಯ ಪ್ರದರ್ಶಿಸುತ್ತಾ ಈ ಹಿಂದೆ ಆಗಿರುವ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದ ಜನಾರ್ದನ ರೆಡ್ಡಿಗೆ ಈಗ ಹೊಸ ಡ್ಯಾಮೇಜ್‌ನ ಭಯ ಶುರುವಾಗಿದೆ.

“ಫರೀದ್‌ಗೆ ಸೇರಿರುವ ಆಂಬಿಡೆಂಟ್‌ ಕಂಪೆನಿ ಹಣ ದ್ವಿಗುಣ ಮಾಡುವುದಾಗಿ ಜನರಿಂದ ಹಣ ಪಡೆದು ವಂಚಿಸಿದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನ ನಡೆಸುತ್ತಿದೆ. ಜಾರಿ ನಿರ್ದೇಶನಾಲಯದಿಂದ ಫರೀದ್‌ನನ್ನು ಪಾರು ಮಾಡಲು 57 ಕೆ.ಜಿ. ಚಿನ್ನ ಪಡೆದಿರುವ ಆರೋಪ ಜನಾರ್ದನ ರೆಡ್ಡಿ ಮೇಲಿದೆ. ರೆಡ್ಡಿ ಬಂಧನಕ್ಕೆ ವಿಶೇಷ ತಂಡ ತೆರಳಿದೆ. ಆದರೆ, ಎಲ್ಲಿಗೆ ತೆರಳಿದೆ, ಯಾವಾಗ ತೆರಳಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ” ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ. ಸುನಿಲ್‌ ಕುಮಾರ್‌ ಹೇಳಿದ್ದಾರೆ.

“ಫರೀದ್‌ ಅಂಬಿಕಾ ಜ್ಯುವೆಲರಿಯ ರಮೇಶ್‌ ಕೊಠಾರಿ ಎಂಬುವರಿಗೆ 18 ಕೋಟಿ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಯ ಮೂಲಕವೇ ವರ್ಗಾವಣೆ ಮಾಡಿದ್ದಾನೆ. ರಮೇಶ್‌ ಕೊಠಾರಿ ಬಳ್ಳಾರಿಯ ರಾಜ್‌ಮಹಲ್‌ ಜ್ಯುವೆಲರಿಯ ರಮೇಶ್‌ ಎಂಬುವರಿಗೆ 57 ಕೆ.ಜಿ. ಚಿನ್ನ ಕಳಿಸಿದ್ದಾರೆ. ಬಳ್ಳಾರಿಯ ರಮೇಶ್‌, ಜನಾರ್ದನ ರೆಡ್ಡಿ ಆಪ್ತ ಅಲಿಖಾನ್‌ಗೆ 57 ಕೆ.ಜಿ. ಚಿನ್ನ ಕೊಟ್ಟಿದ್ದಾರೆ. ಈಗ ಈ ಚಿನ್ನ ಯಾರ ಬಳಿ ಇದೆ ಎಂಬುದು ಪತ್ತೆಯಾಗಬೇಕಿದೆ. ಫರೀದ್‌ ಮತ್ತು ಬಳ್ಳಾರಿಯ ರಮೇಶ್‌ ಇಬ್ಬರನ್ನು ಬಂಧಿಸಲಾಗಿದೆ. ಜನಾರ್ದನ ರೆಡ್ಡಿ, ಬ್ರಿಜೇಶ್ ರೆಡ್ಡಿ ಮತ್ತು ಅಲಿಖಾನ್‌ ಬಂಧನಕ್ಕಾಗಿ ಹುಡುಕಾಟ ನಡೆದಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪಾತ್ರ ಏನು, ಅವರು ಹಣ ಪಡೆದಿದ್ದರೇ ಎಂಬುದು ಇನ್ನೂ ಗೊತ್ತಾಗಿಲ್ಲ” ಎಂದು ಅವರು ತಿಳಿಸಿದ್ದಾರೆ.

Join Samachara Official. CLICK HERE