samachara
www.samachara.com
ಕರ್ನಾಟಕದ ಕಳಂಕ: ಗಣಿ ಉದ್ಯಮಿ ಗಾಲಿಯನ್ನು ‘ಮಧ್ಯವರ್ತಿ’ಯಾಗಿ ಬದಲಿಸಿತಾ  ಜೈಲೂಟ?
COVER STORY

ಕರ್ನಾಟಕದ ಕಳಂಕ: ಗಣಿ ಉದ್ಯಮಿ ಗಾಲಿಯನ್ನು ‘ಮಧ್ಯವರ್ತಿ’ಯಾಗಿ ಬದಲಿಸಿತಾ  ಜೈಲೂಟ?

ಸಾಮಾನ್ಯ ರೈಲ್ವೆ ಪೊಲೀಸ್‌ ಪೇದೆಯ ಮಗ, ಗಣಿ ಉದ್ಯಮಿಯಾಗಿ ಬೆಳೆದು, ರಾಜಕೀಯ ಅಧಿಕಾರವನ್ನೂ ಹಿಡಿದ ರೆಡ್ಡಿ ಇಂತಹದೊಂದು ಡೀಲ್‌ನಲ್ಲಿ ಮತ್ತೆ ಆರೋಪಿಯಾಗಿದ್ದು ಹೇಗೆ? ಹುಡುಕಿಕೊಂಡು ಹೊರಟರೆ ರೆಡ್ಡಿ ಬದುಕಿನ ಪ್ರಮುಖ ಮೂರು ಹಂತಗಳು ಕಾಣಿಸುತ್ತವೆ.

ಅದು ಸೆ. 5, 2011. ಮುಂಜಾನೆಯೇ ಹೈದ್ರಾಬಾದ್‌ ಬಿಟ್ಟ ಐದು ಕಪ್ಪು ಇನ್ನೋವಾ ವಾಹನಗಳು ಬಳ್ಳಾರಿಯ ಗಡಿಗೆ ಕಾಲಿಟ್ಟಾಗ ಸೂರ್ಯ ಇನ್ನೂ ಹುಟ್ಟಿರಲಿಲ್ಲ; ಬೆಳಕು ಹರಿದಿರಲಿಲ್ಲ. ಬಳ್ಳಾರಿಯ ಅಂಚಿನಲ್ಲಿರುವ ಗಾಲಿ ಜನಾರ್ದನ ರೆಡ್ಡಿಯ ಐಶಾರಾಮಿ ಬಂಗಲೆಯ ಮುಂದೆ ಭದ್ರತೆ ನೇಮಿಸಿದ್ದ ಸಿಬ್ಬಂದಿ ಇನ್ನೂ ನಿದ್ದೆಯ ಮಂಪರಿನಲ್ಲಿದ್ದರು.

ಮುಂದಿನ ಅರ್ಧ ಗಂಟೆಯೊಳಗೆ ಹೈಪ್ರೊಪೈಲ್‌ ಬಂಧನ ಪ್ರಕ್ರಿಯೆಯನ್ನು ಸಿಬಿಐ ಅಧಿಕಾರಿಗಳು ಮುಗಿಸಿದ್ದರು. ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿಯನ್ನು ತುಂಬಿಕೊಂಡ ವಾಹನಗಳು ಬಳ್ಳಾರಿ ಗಡಿ ದಾಟಿ ಹೈದ್ರಾಬಾದ್‌ ಸಿಬಿಐ ಕಚೇರಿ ತಲುಪಿದವು. ಅಲ್ಲಿ ಆರೋಪಿಯ ವಿಚಾರಣೆ ಆರಂಭವಾಯಿತು.

ಇದಕ್ಕೂ ಒಂದು ತಿಂಗಳ ಮುಂಚೆ ಅಷ್ಟೆ, ಬಳೆ ಮಾರುವವರ ವೇಷದಲ್ಲಿ ಸಿಬಿಐ ಅಧಿಕಾರಿಗಳು ರೆಡ್ಡಿ ಹಾಗೂ ಅಕ್ಕಪಕ್ಕದಲ್ಲೇ ಇದ್ದ ಸಹೋದರರ ಮನೆ ಹಾಗೂ ಸ್ನೇಹಿತ ಶ್ರೀರಾಮುಲು ಮನೆಗಳ ಮೇಲೆ ನಿಗಾ ಇಟ್ಟಿದ್ದರು. ಒಂದು ವೇಳೆ, ರೆಡ್ಡಿ ಬಂಧಿಸಿದರೆ ಪರಿಣಾಮಗಳೇನಾಗಬಹುದು ಎಂಬ ಕುರಿತು ತಳಮಟ್ಟದ ವರದಿ ಸಲ್ಲಿಕೆಯಾಗಿತ್ತು. ಹೀಗೆ, ಎಲ್ಲಾ ಪೂರ್ವ ತಯಾರಿಗಳನ್ನು ಇಟ್ಟುಕೊಂಡೇ ಸಿಬಿಐ ಗಾಲಿ ಜನಾರ್ದನ ರೆಡ್ಡಿಯನ್ನು ಬಂಧಿಸಿತ್ತು, ಅದು ಅವತ್ತಿಗೆ ದೊಡ್ಡ ಸುದ್ದಿ.

ಇದಾಗಿ ಸ್ವಲ್ಪ ದಿನಗಳಲ್ಲಿ ‘ಡೀಲ್ ಫಾರ್ ಬೇಲ್’ ಪ್ರಕರಣ ಹೊರಬಿತ್ತು. ಸಿಬಿಐ ನ್ಯಾಯಾಧೀಶರಿಗೇ ಜಾಮೀನಿಗಾಗಿ ಲಂಚ ನೀಡಲು ಮುಂದಾದ ಹೊಸ ಪ್ರಕರಣದಲ್ಲಿ ರೆಡ್ಡಿ ಆರೋಪಿಯಾದರು. ಅಲ್ಲಿಗೆ, ಜಾಮೀನು ಸಿಗುವ ನಿರೀಕ್ಷೆಗಳು ಕ್ಷೀಣಿಸಿದವು. ಮುಂದಿನ ನಾಲ್ಕು ವರ್ಷ ಜೈಲೂಟ ಉಂಡ ರೆಡ್ಡಿ ಹೊರಬಂದರೂ, ಸುಧಾರಣೆಯ ಲಕ್ಷಣಗಳು ಕಾಣಿಸಲಿಲ್ಲ.

ಈ ನಡುವೆ, ರೆಡ್ಡಿ ನಡೆಸಿದ ಗಣಿ ಅಕ್ರಮ ಕಾರ್ಯಾಚರಣೆ ಐಟಿ ಅಧಿಕಾರಿಗಳಿಗೆ ಪಾಠವಾಯಿತು. ಒಬ್ಬ ವ್ಯಕ್ತಿ ಹೇಗೆ ಆರ್ಥಿಕ ಅಪರಾಧಗಳನ್ನು ಎಸಗಬಲ್ಲ, ಅದಕ್ಕೆ ಆತ ಬಳಸುವ ಆಧುನಿಕ ವಿಧಾನಗಳು ಹೇಗಿರುತ್ತವೆ ಎಂಬುದನ್ನು ಐಟಿ ಅಧಿಕಾರಿಗಳಿಗೆ ರೆಡ್ಡಿ ಪ್ರಕರಣವನ್ನು ಇಟ್ಟುಕೊಂಡು ತಿಳಿಹೇಳುವ ಕೆಲಸ ನಡೆಯಿತು. ಇಷ್ಟೆಲ್ಲಾ ನಡೆದರೂ, ತಾನೊಬ್ಬ ಸತ್ಯಸಂಧ ಶ್ರೀರಾಮಚಂದ್ರ ಎಂದೇ ರೆಡ್ಡಿ ಹೇಳಿಕೊಂಡು ಬಂದರು. ಸುತ್ತ ಪ್ರಸಿದ್ಧ ನಟರು, ವಂಧಿ ಮಾಗದರು ಜೈಕಾರ ಹಾಕುತ್ತ ಬಂದರು.

ಇವೆಲ್ಲವೂ ನಡೆದು ಇವತ್ತಿಗೆ ಸುಮಾರು 7 ವರ್ಷಗಳ ನಂತರ ಮತ್ತೆ ಗಾಲಿ ಜನಾರ್ದನ ರೆಡ್ಡಿ ಎಂಬ ವ್ಯಕ್ತಿತ್ವ ಸುದ್ದಿಕೇಂದ್ರಕ್ಕೆ ಬಂದಿದೆ. ಈ ಬಾರಿ, ಆಂಬುಡೆಂಟ್ ಮಾರ್ಕೆಟಿಂಗ್ ಹಾಗೂ ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ತನಿಖೆಯಿಂದ ತಪ್ಪಿಸಿಕೊಳ್ಳಲು ಮಧ್ಯವರ್ತಿಯಾಗಿ ಹಣದ ಚಲಾವಣೆ ನಡೆಸಿದ ಆರೋಪ ಕೇಳಿ ಬಂದಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ರೆಡ್ಡಿ ಬಂಧನದ ಸಾಧ್ಯತೆಗಳನ್ನು ಮುಂದಿಡಲಾಗುತ್ತಿದೆ.

ಒಬ್ಬ ಸಾಮಾನ್ಯ ರೈಲ್ವೆ ಪೊಲೀಸ್‌ ಪೇದೆಯ ಮಗ, ಗಣಿ ಉದ್ಯಮಿಯಾಗಿ ಬೆಳೆದು, ರಾಜಕೀಯ ಅಧಿಕಾರವನ್ನೂ ಹಿಡಿದ ರೆಡ್ಡಿ ಇಂತಹದೊಂದು ಡೀಲ್‌ನಲ್ಲಿ ಮತ್ತೆ ಆರೋಪಿಯಾಗಿದ್ದು ಹೇಗೆ? ಹುಡುಕಿಕೊಂಡು ಹೊರಟರೆ ರೆಡ್ಡಿ ಬದುಕಿನ ಪ್ರಮುಖ ಮೂರು ಹಂತಗಳು ಕಾಣಿಸುತ್ತವೆ.

ಗಾಲಿ ಜನಾರ್ದನ ರೆಡ್ಡಿ ತಮ್ಮದೇ ಹೆಸರಿನಲ್ಲೊಂದು ವೆಬ್‌ಸೈಟ್‌ ನಡೆಸುತ್ತಿದ್ದಾರೆ. ಅಲ್ಲಿ ಹೇಳಿಕೊಂಡ ಪ್ರಕಾರ, ರೆಡ್ಡಿ ಬದುಕು ಮೊದಲ ಬಾರಿಗೆ ಬದಲಾಗಿದ್ದು 1989ರಲ್ಲಂತೆ. “1989 ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ ಹೆಡ್ ಆಫೀಸ್ ಆಗಿಟ್ಟುಕೊಂಡು ಕಾರ್ಯಾರಂಭ ಮಾಡಿದೆ. ಹಂತ ಹಂತವಾಗಿ ಸಂಸ್ಥೆಯನ್ನು ವಿಸ್ತರಿಸುತ್ತಾ ಹೋದೆ. ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಒಟ್ಟಾರೆಯಾಗಿ 125 ಬ್ರಾಂಚ್‌ಗಳನ್ನು ಆರಂಭಿಸಿದೆ. ಇದರಿಂದ 4000 ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಯ್ತು. 1989 ರಿಂದ 2003 ರ ತನಕ 14 ವರ್ಷಗಳ ಕಾಲ ನನ್ನ ಫೈನಾನ್ಸ್ ಕಂಪೆನಿಯನ್ನು ಯಶಸ್ವಿಯಾಗಿ ನಡೆಸಿದೆ,” ಎಂದು ರೆಡ್ಡಿ ಹೇಳಿಕೊಳ್ಳುತ್ತಾರೆ. ಆದರೆ ಇದು ಅರ್ಧ ಸತ್ಯ ಎಂಬುದನ್ನು ಇತಿಹಾಸದಲ್ಲಿ ದಾಖಲಾಗಿರುವ ಮುಂದಿನ ಅಧ್ಯಾಯಗಳು ಸಾರಿ ಹೇಳುತ್ತಿವೆ.

ಬಳ್ಳಾರಿ ರಿಪಬ್ಲಿಕ್ ಸದಸ್ಯರು: ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು. 
ಬಳ್ಳಾರಿ ರಿಪಬ್ಲಿಕ್ ಸದಸ್ಯರು: ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು. 

ಫೈನಾನ್ಸ್‌ ಕಂಪನಿಯನ್ನು ಪಕ್ಕಕ್ಕಿಟ್ಟು ಗಣಿ ಉದ್ಯಮಕ್ಕೆ ಇಳಿದ ನಂತರವೇ ರೆಡ್ಡಿ ಕುಟುಂಬದ ಖದರ್ ಬದಲಾಗಿದ್ದು ಎರಡನೇ ಹಂತ. ಚೈನಾ ಬೂಮ್‌ ಹೆಸರಿನಲ್ಲಿ ಕಬ್ಬಿಣದ ಅದಿರಿಗೆ ಚಿನ್ನದ ಬೆಲೆ ಬರುತ್ತಿದ್ದಂತೆ, ರೆಡ್ಡಿ ಕಾನೂನು ಆಗಲೀ, ದೇವಸ್ಥಾನವನ್ನಾಗಲೀ ಗಣನೆಗೆ ತೆಗೆದುಕೊಳ್ಳುವ ಪರಿಪಾಠ ನಿಲ್ಲಿಸಿದರು. ಮುಂದೆ ನಡೆದಿದ್ದು ಹಗಲು ದರೋಡೆ, ಸಾಕ್ಷಿ ಕರ್ನಾಟಕ ಲೋಕಾಯುಕ್ತ ವರದಿ. ಮುಂದೆ ರೆಡ್ಡಿ ಬಂಧನಕ್ಕೆ ಒಳಗಾಗಿ ಜೈಲು ಪಾಲಾದರು. ಅಲ್ಲಿಂದ ಮುಂದಿನದ್ದು ಇನ್ನೊಂದು ಹಂತದ ಬದಲಾವಣೆ. ಅದರ ಪರಿಣಾಮಗಳು ಇವತ್ತು ಕಾಣಿಸುತ್ತಿವೆ.

“ಅಣ್ಣ ಜೈಲಲ್ಲಿ ಇರುವಾಗಲೇ ಸಾಕಷ್ಟು ಕರೆಗಳು ಬರುತ್ತಿದ್ದವು. ಸುಮಾರು ಜನ ನಮ್ಮನ್ನು ಬಂದು ಭೇಟಿಯಾಗುತ್ತಿದ್ದರು. ಎಲ್ಲರೂ ಕೇಸಿನಿಂದ ಹೊರಬರಲು ಏನು ಮಾಡಬೇಕು ಎಂದು ಸಲಹೆ ನೀಡುವವರೇ. ಅವರನ್ನು ನಂಬಿಕೊಂಡೇ ನಾವು ಮೋಸ ಹೋದೆವು,’’ ಎಂದು ಹಿಂದೊಮ್ಮೆ ‘ಸಮಾಚಾರ’ಕ್ಕೆ ಸೋಮಶೇಖರ್ ರೆಡ್ಡಿ ತಮ್ಮ ಮನೆಯಲ್ಲಿಯೇ ವಿವರಿಸಿದ್ದರು. ಅವತ್ತಿಗೆ ‘ಡೀಲ್ ಫಾರ್ ಬೇಲ್’ ಪ್ರಕರಣ ಹೊರಬಂದಿತ್ತು. ರೆಡ್ಡಿ ಕುಟುಂಬ ಕಾನೂನಿನ ಕುಣಿಕೆಯನ್ನು ಸಿಲುಕಿತ್ತು.

ಮೂಲಗಳ ಪ್ರಕಾರ, ಗಣಿ ಉದ್ಯಮಿಯ ಸಂಪರ್ಕಗಳು ಜೈಲಿನ ವಾತಾವರಣದಲ್ಲಿ ಬದಲಾಗಿ ಹೋಗಿದ್ದವು. ಹೊರಗೆ ಬಂದ ನಂತರ ಮಗಳ ಮದುವೆ ಹೆಸರಿನಲ್ಲಿ ಸಾಮಾಜಿಕ ಸ್ಥಾನಮಾನ ವಾಪಾಸ್ ಪಡೆದುಕೊಳ್ಳುವ ಪ್ರಯತ್ನ ನಡೆದಿತ್ತು. ಆದರೆ ಆಳದಲ್ಲಿ ರೆಡ್ಡಿ, ಮಧ್ಯವರ್ತಿಯಾಗಿ ಕೆಲಸ ಶುರುಮಾಡಿದ್ದರು. ಪರಿಣಾಮ, ಯಾವುದೇ ಸಮಸ್ಯೆ ಇದ್ದರೂ ಹಣ, ಲಂಚದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬ ಮನಸ್ಥಿತಿ ಕ್ರೀಯಾಶೀಲವಾಗಿತ್ತು.

ರಾಜಕೀಯವಾಗಿ ಬಳ್ಳಾರಿಯಲ್ಲಿ ಒಂದು ಕಾಲದ ದೂರ್ತ ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಿಡಿದು ಎದ್ದವರು ರೆಡ್ಡಿಗಳು. ಆದರೆ, “ಯಾರನ್ನು ವಿರೋಧಿಸಿಕೊಂಡು ಬಂದರೋ, ಕೆಲವೇ ವರ್ಷಗಳಲ್ಲಿ ಅವರಂತೆಯೇ ಇವರೂ ಕೂಡ ಬದಲಾದರು,” ಎನ್ನುತ್ತಾರೆ ಬಳ್ಳಾರಿ ಮೂಲದ ಪತ್ರಕರ್ತರೊಬ್ಬರು.

ಇವತ್ತಿಗೆ ಬಳ್ಳಾರಿಯಲ್ಲಿ ಹಿಂದಿನ ರಾಜಕೀಯ ಅಸ್ಥಿತ್ವವನ್ನೂ ಅವರು ಕಳೆದುಕೊಂಡಿದ್ದಾರೆ. ಮೇಲಾಗಿ, ನ್ಯಾಯಾಲಯವೇ ಗಾಲಿಗೆ ಬಳ್ಳಾರಿಗೆ ಕಾಲಿಡದಂತೆ ಹೇಳಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಕುಳಿತ ಗಾಲಿ ಜನಾರ್ದನ ರೆಡ್ಡಿ ತಮ್ಮ ಜೈಲಿನ ದಿನಗಳಲ್ಲಿ ಕಲಿತ ಪಾಠಗಳನ್ನೇ ನೆಚ್ಚಿಕೊಂಡು, ‘ಮಧ್ಯವರ್ತಿ’ಯಾಗಿ ಬದಲಾಗಿದ್ದಾರೆ ಎನ್ನುತ್ತವೆ ಅವರದ್ದೇ ಆಪ್ತ ಮೂಲಗಳು.

“ಗಾಲಿ ಜನಾರ್ದನ ರೆಡ್ಡಿ ಜೈಲಿನಿಂದ ಹೊರಬರುತ್ತಲೇ ಒಳಗಿನ ಸಂಪರ್ಕಗಳೂ ನೆರವಿಗೆ ಬರುತ್ತವೆ ಎಂಬುದನ್ನು ಕಂಡುಕೊಂಡರು. ತನಿಖಾ ಸಂಸ್ಥೆಗಳನ್ನು ಪಳಗಿಸುವ ಕಲೆ ತಮಗಿದೆ ಎಂದು ನಂಬಿಕೊಂಡಿದ್ದರು. ಅವರ ಹತ್ತಿರ ಬರುತ್ತಿದ್ದವರೂ ಕೂಡ ಇಂತಹದ್ದೇ ಸಮಸ್ಯೆ ಇಟ್ಟುಕೊಂಡು ಪರಿಹಾರ ಕೋರುತ್ತಿದ್ದರು. ಹಣ ಕೊಟ್ಟರೆ ಎಲ್ಲಾ ಸಲೀಸು ಎಂಬ ಭಾವನೆ ಇವತ್ತಿಗೂ ಅವರಿಗಿದೆ,’’ ಎನ್ನುತ್ತಾರೆ ಒಂದು ಕಾಲದಲ್ಲಿ ರೆಡ್ಡಿ ಜೈಲಲ್ಲಿ ಇದ್ದಾಗ ಯೋಗಕ್ಷೇಮ ವಿಚಾರಿಸುತ್ತಿದ್ದವರು.

ಹಣ ಮನುಷ್ಯನನ್ನು ಬದಲಾಯಿಸುತ್ತದೆ. ಅದೇ ವ್ಯಕ್ತಿ ಸಾರ್ವಜನಿಕ ಪ್ರಭಾವ ಹೊಂದಿದ್ದರೆ ಸಾಮಾಜಿಕ ಪರಿಣಾಮಗಳೂ ಭೀಕರವಾಗಿರುತ್ತವೆ. ಉದ್ಯಮಿಯಾಗಿ ನಂತರ ರಾಜಕಾರಣಿಯಾಗಿ ಬದಲಾದ ಆರೋಪಿಯೊಬ್ಬ ಇವತ್ತು ಮಧ್ಯವರ್ತಿಯಾಗಿ ಬದಲಾಗಿದ್ದರೆ ಅಚ್ಚರಿ ಏನಿಲ್ಲ. ವಿಜಯನಗರ ಸಾಮ್ರಾಜ್ಯದ ಆಧುನಿಕ ಕುಡಿ ಎಂದು ಬಿಂಬಿಸಿದ್ದ ಇದೇ ಗಾಲಿ ಜನಾರ್ದನ ರೆಡ್ಡಿ, ಇವತ್ತು ನಾನಾ ಕಾರಣಗಳಿಗಾಗಿ ಕರ್ನಾಟಕದ ಕಳಂಕವಾಗಿ ಬದಲಾಗಿದ್ದಾರೆ. ಇದನ್ನು ಅವರಿಗೆ ಅರ್ಥಪಡಿಸುವ ಕೆಲಸ ಆಗಬೇಕಿದೆ.

Join Samcahara official. CLICK HERE