‘ಬ್ಯಾಡ್ ಮೋದಿನಾಮಿಕ್ಸ್‌’: ಆರ್‌ಬಿಐ ಮೀಸಲು ನಿಧಿಗೂ ಕೈ ಇಟ್ಟ ಕೇಂದ್ರ ಸರಕಾರ!
COVER STORY

‘ಬ್ಯಾಡ್ ಮೋದಿನಾಮಿಕ್ಸ್‌’: ಆರ್‌ಬಿಐ ಮೀಸಲು ನಿಧಿಗೂ ಕೈ ಇಟ್ಟ ಕೇಂದ್ರ ಸರಕಾರ!

ಆರ್‌ಬಿಐ ಬಳಿ ಆಪತ್ಕಾಲದಲ್ಲಿ ಬೇಕಾಗುತ್ತದೆ ಎಂದು ತೆಗೆದಿಟ್ಟ ಮೀಸಲು ನಿಧಿ 9.59 ಲಕ್ಷ ಕೋಟಿ ರೂಪಾಯಿ ಇದೆ. ಆದರೆ ಇಷ್ಟೆಲ್ಲಾ ಹಣ ಅಗತ್ಯವಿಲ್ಲ; ಹೆಚ್ಚುವರಿ ನಿಧಿಯನ್ನು ನಮಗೆ ನೀಡಿ ಎಂದು ಕೇಂದ್ರ ಸರಕಾರ ಕೇಳಿಕೊಂಡಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರದ ನಡುವೆ ಸಂಘರ್ಷ ಕಳೆದ ಕೆಲವು ದಿನಗಳಿಂದ ಜಾರಿಯಲ್ಲಿದೆ. ಇದರ ಹೃದಯ ಭಾಗದಲ್ಲಿರುವುದು ‘3.6 ಲಕ್ಷ ಕೋಟಿ ರೂಪಾಯಿ’ ಹಣದ ಕಥೆ.

ಆರ್‌ಬಿಐ ಬಳಿ ಆಪತ್ಕಾಲದಲ್ಲಿ ಬೇಕಾಗುತ್ತದೆ ಎಂದು ತೆಗೆದಿಟ್ಟ ಮೀಸಲು ನಿಧಿ 9.59 ಲಕ್ಷ ಕೋಟಿ ರೂಪಾಯಿ ಇದೆ. ಆಪತ್ಕಾಲದಲ್ಲಿ ಇಷ್ಟೆಲ್ಲಾ ಹಣ ಬೇಕಾಗುವುದಿಲ್ಲ, ಇದರಲ್ಲಿರುವ ಹೆಚ್ಚುವರಿ ನಿಧಿಯನ್ನು ನಮಗೆ ವರ್ಗಾವಣೆ ಮಾಡಿ ಎಂದು ಕೇಂದ್ರ ಸರಕಾರ ಕೇಳಿಕೊಂಡಿದೆ. ಅದರ ಮೊತ್ತವೇ 3.6 ಲಕ್ಷ ಕೋಟಿ ರೂಪಾಯಿ.

ಈ ಹಣವನ್ನು ನಾವಿಬ್ಬರು ಒಟ್ಟಾಗಿ ಖರ್ಚು ಮಾಡೋಣ ಎಂಬ ಆಫರನ್ನೂ ಸರಕಾರ ಆರ್‌ಬಿಐ ಮುಂದಿಟ್ಟಿದೆ. ಆದರೆ ಇದಕ್ಕೆ ಆರ್‌ಬಿಐ ಒಪ್ಪಿಕೊಂಡಿಲ್ಲ. ತನ್ನ ಮೀಸಲು ನಿಧಿಯನ್ನು ಸರಕಾರ ಬಳಸಿಕೊಳ್ಳುವುದರಿಂದ ಸ್ಥೂಲ ಆರ್ಥಿಕತೆಯ ಸ್ಥಿರತೆಯ ಮೇಲೆ ಪರಿಣಾಮ ಬೀರಲಿದೆ ಎಂಬುದು ಆರ್‌ಬಿಐ ವಾದವಾಗಿದೆ. ಹೀಗಾಗಿ ಸರಕಾರದ ಪ್ರಸ್ತಾಪವನ್ನು ಆರ್‌ಬಿಐ ಒಪ್ಪಿಕೊಂಡಿಲ್ಲ.

ಇದಕ್ಕೆ ಸಡ್ಡು ಹೊಡೆದಿರುವ ಕೇಂದ್ರ ಸರಕಾರ ಮೀಸಲು ನಿಧಿ ಮತ್ತು ಇದರ ವರ್ಗಾವಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಆರ್‌ಬಿಐನ ನಿಯಮಗಳೇ ಸರಿ ಇಲ್ಲ ಎಂದು ವಾದಿಸಿದೆ. ಈ ನೀತಿ ನಿಯಮಗಳನ್ನು 2017ರ ಜುಲೈನಲ್ಲಿ ಆರ್‌ಬಿಯ ರೂಪಿಸಿತ್ತು. ಈ ಸಂದರ್ಭ ನಡೆದ ಮಂಡಳಿಯ ಸಭೆಗೆ ಕೇಂದ್ರದ ಇಬ್ಬರೂ ಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ತೆಗೆದುಕೊಂಡ ತೀರ್ಮಾನ ಸರಿ ಇಲ್ಲ ಎಂದು ಆರೋಪಿಸಿದೆ. ಈ ಸಭೆಯಲ್ಲಿ ತನಗೆ ಹೆಚ್ಚಿನ ಮೀಸಲು ನಿಧಿಯ ಅಗತ್ಯವಿದೆ ಎಂದು ಆರ್‌ಬಿಐ ಲೆಕ್ಕಾಚಾರ ಹಾಕಿತ್ತು. ಅಸಲಿಗೆ ಅಷ್ಟೊಂದು ಮೀಸಲು ನಿಧಿ ಕೇಂದ್ರ ಬ್ಯಾಂಕ್‌ಗೆ ಅಗತ್ಯವೇ ಇಲ್ಲ ಎನ್ನುವುದು ಸರಕಾರದ ಪ್ರತಿವಾದವಾಗಿದೆ.

ಹೀಗಾಗಿ ನಾವಿಬ್ಬರೂ ಜತೆಯಾಗಿ ಈ ಹಣವನ್ನು ಬ್ಯಾಂಕುಗಳ ನಿಧಿಯ ಮರುಸೃಷ್ಟಿ, ಬ್ಯಾಂಕ್‌ಗಳು ನೀಡುವ ಸಾಲದ ವಿಸ್ತರಣೆ ಮೊದಲಾದ ಯೋಜನೆಗಳಿಗೆ ಬಳಸಿಕೊಳ್ಳೋಣ ಎಂದು ಆರ್‌ಬಿಐಗೆ ಹೇಳಿದೆ. ಆದಾಗ್ಯೂ, ಕೇಂದ್ರ ಬ್ಯಾಂಕುಗಳ ಮೀಸಲು ನಿಧಿಯನ್ನು ಬಳಸಿಕೊಳ್ಳುವುದು ಅಪಾಯಕಾರಿ ತೀರ್ಮಾನ ಎಂದು ಆರ್‌ಬಿಐ ಹೇಳಿದೆ.

‘ಇದರಿಂದ ಯಾವುದೇ ಹೊಸ ಆದಾಯ ಹುಟ್ಟುವುದಿಲ್ಲ. ಮತ್ತು ಸರ್ಕಾರದ ಖರ್ಚಿಗೆ ನಿಧಿಯನ್ನು ಒದಗಿಸಲು ಬೇಕಾದ ಭದ್ರತೆಯನ್ನು ಈ ಹಣದಲ್ಲೇ ನೀಡಬೇಕಾಗುತ್ತದೆ. ಸರಕಾರದ ಈ ತೀರ್ಮಾನ ಹಣಕಾಸಿನ ಮಾರುಕಟ್ಟೆಗಳ ವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ’ ಎಂದು ಅದು ಸಮಜಾಯಿಷಿ ನೀಡಿದೆ.

ಹೆಚ್ಚುವರಿ ಆದಾಯ ಮತ್ತು ವರ್ಗಾವಣೆ

ಪ್ರತೀ ವರ್ಷ ಆರ್‌ಬಿಐ ಒಂದಷ್ಟು ಆದಾಯವನ್ನು ಬೇರೆ ಬೇರೆ ರೂಪಗಳಿಂದ ಪಡೆದುಕೊಳ್ಳುತ್ತದೆ. ಇದರಲ್ಲಿ ಮೀಸಲು ನಿಧಿಗೆ ಎಷ್ಟು ಅಗತ್ಯ ಎಂಬುದನ್ನು ನೋಡಿ, ಅದಕ್ಕೆ ಬೇಕಾದ ಹಣವನ್ನು ತೆಗೆದಿಟ್ಟು ಉಳಿಕೆಯಾದ ಹಣವನ್ನು ಕೇಂದ್ರ ಸರಕಾರಕ್ಕೆ ವರ್ಗಾವಣೆ ಮಾಡುತ್ತದೆ. 2017-18ರಲ್ಲಿ ಆರ್‌ಬಿಐ ಇದೇ ರೀತಿ 50,000 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರಕ್ಕೆ ವರ್ಗಾವಣೆ ಮಾಡಿತ್ತು. 2016-17ರಲ್ಲಿ 30,659 ಕೋಟಿ ರೂಪಾಯಿಗಳನ್ನು ಇದೇ ರೀತಿಯಲ್ಲಿ ಕೇಂದ್ರಕ್ಕೆ ನೀಡಿತ್ತು.

ಜಾಗತಿಕ ಬ್ಯಾಂಕುಗಳಿಗೆ ಹೋಲಿಸಿದರೆ ಆರ್‌ಬಿಐ ಮೀಸಲಿಟ್ಟ ಹಣದ ಪ್ರಮಾಣ ತೀರಾ ಹೆಚ್ಚಾಗಿದೆ. ಆರ್‌ಬಿಐನ ಒಟ್ಟಾರೆ ಆಸ್ತಿಗೆ ಹೋಲಿಸಿದರೆ ಇದರ ಪ್ರಮಾಣ ಜಾಸ್ತಿ ಇದೆ ಎನ್ನುತ್ತಿದೆ ಸರಕಾರ. ಆದರೆ ಇದು ಪೂರ್ತಿ ನಿಜವಲ್ಲ. ಒಟ್ಟಾರೆ ಆಸ್ತಿಗೆ ಹೋಲಸಿದರೆ ಅಮೆರಿಕಾ, ಇಂಗ್ಲಂಡ್‌, ಅರ್ಜೆಂಟೀನಾ, ಫ್ರಾನ್ಸ್‌, ಸಿಂಗಾಪುರಗಳ ಕೇಂದ್ರ ಬ್ಯಾಂಕುಗಳು ಕಡಿಮೆ ಪ್ರಮಾಣದ ಮೀಸಲು ನಿಧಿಯನ್ನು ಹೊಂದಿವೆ. ಆದರೆ ಮಲೇಷ್ಯಾ, ನಾರ್ವೆ ಮತ್ತು ರಷ್ಯಾದಂಥ ದೇಶಗಳು ಭಾರತಕ್ಕಿಂತಲೂ ಹೆಚ್ಚಿನ ಮೀಸಲು ನಿಧಿಯನ್ನು ಹೊಂದಿವೆ ಎಂಬುದನ್ನೂ ಇಲ್ಲಿ ಗಮನಿಸಿಬೇಕಿದೆ.

ಏನಿದು ಮೀಸಲು ನಿಧಿ?

ಆರ್‌ಬಿಐನ ಕೆಲಸ ಭಾರತದ ಆರ್ಥಿಕತೆಯನ್ನು ನಿರ್ವಹಣೆ ಮಾಡುವುದು. ಮ್ಯಾನೇಜರ್‌ ರೀತಿಯ ವಿಶೇಷ ಜವಾಬ್ದಾರಿ ಇದು. ಈ ಸಂದರ್ಭದಲ್ಲಿ ಒದಗಿ ಬರಬಹುದಾದ ಅನಿರೀಕ್ಷಿತ ಅಪಾಯಗಳನ್ನು ಎದುರಿಸಲೆಂದೇ ಆರ್‌ಬಿಐ ಮೀಸಲು ನಿಧಿಗಳನ್ನು ಇಟ್ಟುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಸೃಷ್ಟಿಯಾಗಬಹುದಾದ ಅಪಾಯಗಳು, ಕಾರ್ಯಾಚರಣೆಯ ಅಪಾಯಗಳು, ಸಾಲಗಳ ಮೇಲಿನ ಅಪಾಯಗಳು, ಆಕಸ್ಮಿಕ ಅಪಾಯಗಳನ್ನು ಮೆಟ್ಟಿ ನಿಲ್ಲಲು ಈ ಹಣವನ್ನು ಬಳಕೆ ಮಾಡಲಾಗುತ್ತದೆ.

2018ರ ಜೂನ್‌ ಅಂತ್ಯಕ್ಕೆ ಆರ್‌ಬಿಐ ಬಳಿ ಈ ರೀತಿ ನಗದು ಮತ್ತು ಚಿನ್ನದ ರೂಪದಲ್ಲಿ 6.91 ಲಕ್ಷ ಕೋಟಿ ರೂಪಾಯಿಗಳ ಮೀಸಲು ನಿಧಿ ಇದೆ. ಇನ್ನು ಆಕಸ್ಮಿಕ ಅಪಾಯಗಳ ನಿಧಿ ಎಂದು 2.32 ಲಕ್ಷ ಕೋಟಿ ರೂಪಾಯಿಗಳನ್ನು ಹೊಂದಿದೆ. ಆರ್‌ಬಿಐ ಅನಿರೀಕ್ಷಿತ ಘಟನೆಗಳು ನಡೆದ ಸಂದರ್ಭದಲ್ಲಿ ಆಕಸ್ಮಿಕ ಅಪಾಯಗಳ ನಿಧಿಯನ್ನು ಬಳಸಿಕೊಂಡರೆ, ನಗದು ಮತ್ತು ಚಿನ್ನದ ಮೀಸಲು ನಿಧಿಯನ್ನು ಮಾರುಕಟ್ಟೆಯಲ್ಲಿ ಒದಗಿಬರುವ ನಷ್ಟ ಮತ್ತು ಲಾಭದ ಸಂದರ್ಭದ ಏರುಪೇರನ್ನು ಸರಿದೂಗಿಸಲು ಬಳಸುತ್ತದೆ.

ಇಂಥಹದ್ದೊಂದು ಅತ್ಯಗತ್ಯ ಹಣವನ್ನು ಸರಕಾರಕ್ಕೆ ವರ್ಗಾವಣೆ ಮಾಡಲು ಆರ್‌ಬಿಐಗೆ ಒಂದಿಂಚೂ ಮನಸಿಲ್ಲ. ಅಕ್ಟೋಬರ್‌ 26ರಮಂದ ತಾವು ಮಾಡಿದ ಜನಪ್ರಿಯ ಬಾಷಣದಲ್ಲಿ ಆರ್‌ಬಿಐ ಉಪ ಗವರ್ನರ್‌ ವಿರಲ್‌ ಆಚಾರ್ಯ ಇದನ್ನು ಸ್ಪಷ್ಟವಾಗಿ ಹೇಳಿದ್ದರು. ಹೆಚ್ಚುವರಿ ಹಣವನ್ನು ಸರಕಾರಕ್ಕೆ ವರ್ಗಾವಣೆ ಮಾಡುವ ತೀರ್ಮಾನ ದುರಂತಕ್ಕೆ ಎಡೆ ಮಾಡಿಕೊಡಲಿದೆ ಎಂದಿದ್ದ ಅವರು, ಇದಕ್ಕೆ ಅರ್ಜೆಂಟೀನಾದ ಉದಾಹರಣೆ ನೀಡಿದ್ದರು. ಅಲ್ಲಿ 6.6 ಬಿಲಿಯನ್‌ ಡಾಲರ್‌ ಮೊತ್ತವನ್ನು ಕೇಂದ್ರ ಬ್ಯಾಂಕ್‌ನ ರಾಷ್ಟ್ರೀಯ ಖಜಾನೆಗೆ ವರ್ಗಾವಣೆ ಮಾಡಿದ ನಂತರ ಕೆಟ್ಟ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಯಿತು ಎಂದು ವಿವರಿಸಿದ್ದರು.

ಆದರೆ ಆರ್‌ಬಿಐ ಬಳಿ ಅಗತ್ಯಕ್ಕಿಂತ ಹೆಚ್ಚು ಹಣ ಇದೆ ಎಂದು ಕೇಂದ್ರ ಸರಕಾರ ಈ ಹಿಂದಿನಿಂದಲೂ ವಾದಿಸುತ್ತಲೇ ಬಂದಿದೆ. 2016-17ರಲ್ಲಿಯೂ ಆಗಿನ ಮುಖ್ಯ ಹಣಕಾಸು ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್‌ ಆರ್‌ಬಿಐ ಬಳಿ ಹೆಚ್ಚಿನ ನಿಧಿ ಇದೆ. ಇದರಲ್ಲಿ 4 ಲಕ್ಷ ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ವರ್ಗಾವಣೆ ಮಾಡಬಹುದು ಎಂದಿದ್ದರು.ಇದಕ್ಕೆ ಅಂದಿನ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಹಾಗೆ ನೋಡಿದೆ 2013ರಲ್ಲೇ ಮಲೆಗಂ ಸಮಿತಿ ಆರ್‌ಬಿಐ ಬಳಿ 1.49 ಲಕ್ಷ ಕೋಟಿ ರೂಪಾಯಿ ಅಗತ್ಯಕ್ಕಿಂತ ಹೆಚ್ಚುವರಿ ಹಣ ಇದೆ ಎಂದು ತಿಳಿಸಿತ್ತು. ಹೀಗಿದ್ದೂ ಅಂದಿನಿಂದ ಇಂದಿನವರೆಗೆ ಯಾವೊಬ್ಬ ಗವರ್ನರ್‌ ಕೂಡ ಈ ಹಣವನ್ನು ವರ್ಗಾವಣೆ ಮಾಡಲು ಮುಂದಾಗಿಲ್ಲ. ಜತೆಗೆ ಸರಕಾರವೂ ಆ ಹಣದ ಬಗ್ಗೆ ಆಸಕ್ತಿ ತಾಳಿದ್ದಿಲ್ಲ.

ಇದೀಗ ನರೇಂದ್ರ ಮೋದಿ ಸರಕಾರ ಈ ಹಣದ ವರ್ಗಾವಣೆಗೆ ಪಟ್ಟು ಹಿಡಿದು ಕುಳಿತಿದೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ದೇಶದ ಆರ್ಥಿಕತೆ ಸುಭದ್ರವಾಗಿತ್ತು. ಇವತ್ತಿಗೂ ಸುಭದ್ರವಾಗಿದೆ ಎಂದೇ ಸರಕಾರ ಪದೇ ಪದೇ ವಾದಿಸುತ್ತಿದೆ. ಹೀಗಿರುವಾಗ ಈ ಹಣದ ಅಗತ್ಯವೇನು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಹಾಗಿದ್ದರೆ ದೇಶದ ಖಜಾನೆ ಬರಿದಾಯಿತಾ? ಈ ಪ್ರಶ್ನೆಗೆ ಪ್ರಧಾನ ಸೇವಕರೇ ಉತ್ತರ ನೀಡಬೇಕಿದೆ.

ಮಾಹಿತಿ ಮೂಲ: ಇಂಡಿಯನ್‌ ಎಕ್ಸ್‌ಪ್ರೆಸ್.

Join Samachara Official. CLICK HERE