samachara
www.samachara.com
ಶಿವಮೊಗ್ಗ  ಉಪ ಚುನಾವಣೆ: ಪರ್ಯಾಯವಿಲ್ಲದ ಕ್ಷೇತ್ರದಲ್ಲಿ ಹಳೇ *** ಓಕೆ ಅಂದ ಮತದಾರ!
COVER STORY

ಶಿವಮೊಗ್ಗ ಉಪ ಚುನಾವಣೆ: ಪರ್ಯಾಯವಿಲ್ಲದ ಕ್ಷೇತ್ರದಲ್ಲಿ ಹಳೇ *** ಓಕೆ ಅಂದ ಮತದಾರ!

ಐದು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ನಾಲ್ಕು ಕ್ಷೇತ್ರಗಳಲ್ಲಿ ಜನ ಸರಕಾರದ ಕೈಹಿಡಿದರೆ, ಒಂದು ಕಾಲದಲ್ಲಿ ಸಮಾಜವಾದಿ ನೆಲೆ ಎನ್ನಿಸಿಕೊಂಡಿದ್ದ ಶಿವಮೊಗ್ಗದ ಜನ ಬಿಜೆಪಿ ಗೆಲ್ಲಿಸಿದ್ದಾರೆ. ಯಾಕೆ?

ಸಜ್ಜನ, ಪ್ರಾಮಾಣಿಕ ರಾಜಕಾರಣಿಗಳನ್ನು ನಾಡಿಗೆ ನೀಡಿದ, ಸಮಾಜವಾದಿ ನೆಲ ಎನ್ನಿಸಿಕೊಂಡು, ‘ಮಾದರಿ ರಾಜಕಾರಣ’ವನ್ನು ಕಟ್ಟಲು ಹೊರಟ ಕುರುಹುಗಳನ್ನು ಸೃಷ್ಟಿಸಿದ ಶಿವಮೊಗ್ಗದ ಜನ ಇವತ್ತು ಬಿಜೆಪಿ ಜತೆ ನಿಂತಿದ್ದಾರೆ!

ಮಂಗಳವಾರ ಹೊರಬಿದ್ದಿರುವ ಪಂಚ ಕ್ಷೇತ್ರಗಳ ಚುನಾವಣಾ ಫಲಿತಾಂಶ ಇದನ್ನು ಸ್ಪಷ್ಟವಾಗಿ ರಾಜ್ಯದ ಮುಂದಿಟ್ಟಿದೆ. ಒಟ್ಟು ಐದು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ಇದು. ಉಳಿದ ನಾಲ್ಕೂ ಕ್ಷೇತ್ರಗಳಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಗೆದ್ದಿದ್ದರೆ, ಶಿವಮೊಗ್ಗದಲ್ಲಿ ಮಾತ್ರವೇ ಬಿಜೆಪಿ ತನ್ನ ಲೋಕಸಭಾ ಸ್ಥಾನವನ್ನು ಉಳಿಸಿಕೊಂಡಿದೆ. ಈ ಮೂಲಕ, ಸೋಲಿನ ನಡುವೆಯೂ ಸಮಾಧಾನ ಪಟ್ಟುಕೊಳ್ಳಲು ಅವಕಾಶವನ್ನು, ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳಿಗೂ ಅವಕಾಶ ಇರಬೇಕು ಎಂಬ ತೀರ್ಮಾನವನ್ನು ಅಲ್ಲಿನ ಮತದಾರರು ನೀಡಿದ್ದಾರೆ.

ಯಾಕಿರಬಹುದು?

ಚುನಾವಣೆಗಳು ಎಂದರೇನೇ ಆಯಾ ಕಾಲಘಟ್ಟದಲ್ಲಿ, ಒಂದು ಸೀಮಿತ ಪ್ರದೇಶದಲ್ಲಿ ಮತದಾರರನ್ನು ಪ್ರತಿನಿಧಿಸಲು ವ್ಯಕ್ತವಾಗುವ ಜನಾಭಿಪ್ರಾಯಗಳು. ಇವನ್ನೇ ಕೆಲವೊಮ್ಮೆ ಹಿನ್ನೋಟಗಳ ಮೂಲಕ ವಿಶ್ಲೇಷಿಸುತ್ತ, ಇನ್ನು ಕೆಲವೊಮ್ಮೆ ದಿಕ್ಸೂಚಿಗಳಾಗಿ ನೋಡುವ ಪರಿಪಾಠ ನಡೆದುಕೊಂಡು ಬಂದಿದೆ.

ಈ ಬಾರಿಯೂ ಅದೇ ನಡೆದಿದೆ. ಶಿವಮೊಗ್ಗ ಪಕ್ಕಕ್ಕಿಟ್ಟು, ಉಳಿದ ಕ್ಷೇತ್ರಗಳಲ್ಲಿನ ಗೆಲುವು ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಅದೂ ಕಾಂಗ್ರೆಸ್- ಜೆಡಿಎಸ್‌ ಪರ ಅಲೆಯನ್ನು ಸೃಷ್ಟಿಸುವಷ್ಟು ಶಕ್ತಿಶಾಲಿಯಾಗಿದೆ. ಇವತ್ತೋ, ನಾಳೆಯೋ ಎಂಬ ಅನಿಶ್ಚಿತತೆಯನ್ನು ಎದುರಿಸಿಕೊಂಡು ಬಂದಿದ್ದ ಸಮ್ಮಿಶ್ರ ಸರಕಾರ ಹಾಗೂ ಉಭಯ ಪಕ್ಷಗಳ ಸಂಬಂಧಕ್ಕೊಂದು ವಿಶ್ವಾಸಾರ್ಹತೆ ಸಿಕ್ಕಂತಾಗಿದೆ. ರಾಷ್ಟ್ರಮಟ್ಟದಲ್ಲಿ ಲೋಕಸಭೆಗೆ ಮಹಾ ಮೈತ್ರಿಯೊಂದನ್ನು ರಚಿಸಿಕೊಂಡರೆ, ಪರ್ಯಾಯದ ಲಾಭ ಗೆಲುವೇ ಆಗಿರುತ್ತದೆ ಎಂಬ ಸಂದೇಶವನ್ನು ಈ ಫಲಿತಾಂಶ ನೀಡಿದೆ.

ಸಹಜವಾಗಿಯೇ ಕಾಂಗ್ರೆಸ್- ಜೆಡಿಎಸ್‌ ನಾಯಕರು, ಕಾರ್ಯಕರ್ತರು ಸಂತೋಷಗೊಂಡಿದ್ದಾರೆ. ಇದೇ ವೇಳೆ, ನಾಲ್ಕು ಗೆಲುವುಗಳ ಸಂಭ್ರಮವನ್ನೂ ಮೀರಿ, ಶಿವಮೊಗ್ಗದ ಒಂದು ಸೋಲು ಕೂಡ ಲೋಕಸಭೆಗೆ ದಿಕ್ಸೂಚಿಯಾಗಬಹುದು ಎಂಬುದನ್ನು ಎರಡೂ ಪಕ್ಷಗಳು ಗಮನಿಸಬೇಕಿದೆ.

ಶಿವಮೊಗ್ಗದ ಅಂತಿಮ ಫಲಿತಾಂಶವನ್ನು ಗಮನಿಸಿದರೆ ಈ ಬಾರಿ ಬಿಜೆಪಿ ತೆಗೆದುಕೊಂಡಿದ್ದು 52,148 ಮತಗಳ ಮುನ್ನಡೆ ಅಷ್ಟೆ. ಕಳೆದ ಲೋಕಸಭೆಯಲ್ಲಿ ಇಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ಬಿ. ಎಸ್. ಯಡಿಯೂರಪ್ಪ ತೆಗೆದುಕೊಂಡಿದ್ದು 6,06,216 ಮತಗಳು, ಈ ಬಾರಿ ಮಗ ರಾಘವೇಂದ್ರಗೆ ಮತ ಚಲಾಯಿಸಿದವರ ಸಂಖ್ಯೆ 5,43,306. ಅಂದರೆ, ಈ ಬಾರಿ ಗೆಲುವಿನ ಅಂತರ ಎಷ್ಟಿದೆಯೋ, ಅದರಷ್ಟೆ ಮತಗಳು ಕಡಿಮೆಯಾಗಿವೆ. ಇನ್ನಷ್ಟು ಆಳಕ್ಕಿಳಿದರೆ ಈ 52 ಸಾವಿರ ಅಂತರದ ಗೆಲುವಿನಲ್ಲಿ ಅರ್ಧದಷ್ಟು ಮತಗಳು ಬಂದಿದ್ದು, ಶಿವಮೊಗ್ಗ ನಗರದಿಂದ. ಬಿಟ್ಟರೆ, ಇಡೀ ಜಿಲ್ಲೆ ಇನ್ನರ್ಧ ಹೆಚ್ಚುವರಿ ಮತಗಳನ್ನು ನೀಡಿದೆ. ಇಷ್ಟವಿಲ್ಲದಿದ್ದರೂ ಗೆಲ್ಲಿಸಿ ಕೊಡುವುದು ಎಂದರೆ ಇದೇ ಅಲ್ಲವೇ?

ಇಷ್ಟಕ್ಕೂ ಯಾಕೆ ಶಿವಮೊಗ್ಗ ಜನ ಬಿಜೆಪಿಯನ್ನು ಗೆಲ್ಲಿಸಿ ಕಳುಹಿಸಿದರು? ಮೋದಿ ಅಲೆನಾ, ಯಡಿಯೂರಪ್ಪ ಮೇಲೆ ಪ್ರೀತಿನಾ, ಬಿಜೆಪಿಯ ಸಂಘಟನಾ ಶಕ್ತಿಯಾ... ಅಥವಾ ಇವೆಲ್ಲವುಗಳಿಂದ ಹೆಚ್ಚಾಗಿ ಉಳಿದ ಎರಡು ಪಕ್ಷಗಳಲ್ಲಿ ಜಿಲ್ಲೆಯಲ್ಲಿ ನಾಯಕತ್ವದ ಕೊರತೆ ಕಾಣಿಸುತ್ತಿದೆಯಾ?

“ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಜಿಲ್ಲೆಯಲ್ಲಿ ನಂಬಿಕಸ್ಥ ನಾಯಕ ಇಲ್ಲ. ಜನ ಯಾರನ್ನು ನಂಬಬೇಕು ಎಂಬ ಗೊಂದಲದಲ್ಲಿದ್ದಾರೆ,’’ ಎನ್ನುತ್ತಾರೆ ಶಿವಮೊಗ್ಗದ ‘ಜನ ಹೋರಾಟ’ ಸ್ಥಳೀಯ ಪತ್ರಿಕೆ ಸಂಪಾದಕ ಶೃಂಗೇಶ್. ಶಿವಮೊಗ್ಗದ ರಾಜಕಾರಣದಲ್ಲಿ ಸಮಾಜವಾದಿಗಳ ನಂತರದ ತಲೆಮಾರು ಜನರಿಂದ ದೂರವಾದ ಪರಿಣಾಮಗಳನ್ನು ಕಾಂಗ್ರೆಸ್- ಜೆಡಿಎಸ್‌ ಪಕ್ಷಗಳು ಎದುರಿಸುತ್ತಿವೆ ಎಂದವರು ವಿವರಿಸುತ್ತಾರೆ.

“ಶಿವಮೊಗ್ಗ ಫಲಿತಾಂಶ ಸ್ಪಷ್ಟವಾಗಿ ದೇಶದ ಭಾವನೆಗಳನ್ನೇ ಬಿಂಬಿಸುತ್ತಿದೆ. ಆಡಳಿತ ನಡೆಸುವವರ ಬಗ್ಗೆ ಸಮಾಧಾನ ಇಲ್ಲ. ಹಾಗಂತ, ಪರ್ಯಾಯವಾಗಿ ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡುವುದು ಎಂಬ ಗೊಂದಲ ಇದೆ. ಇಲ್ಲಿಯೂ ಕೂಡ ನಡೆದಿದ್ದು ಅಷ್ಟೆ. ಬಿಜೆಪಿ ಬದಲಿಗೆ ಅರ್ಹ ನಾಯಕ ಯಾರು ಎಂಬ ಆಯ್ಕೆ ಬಂದಾಗ ಜನ ಯಡಿಯೂರಪ್ಪ ಜತೆಗೇ ನಿಂತಿದ್ದಾರೆ. ಸಂಘಪರಿವಾರ, ಮೇಲ್ವರ್ಗವೊಂದು ಬಿಜೆಪಿಯಿಂದ ಅಂತರ ಕಾಯ್ದುಕೊಂಡರೂ ಜನ ಗೆಲ್ಲಿಸಿ ಕಳುಹಿಸಿದ್ದಾರೆ. ಇಷ್ಟು ಕಡಿಮೆ ಅಂತರದ ಗೆಲುವು ಹಾಗೆ ನೋಡಿದರೆ ಬಿಜೆಪಿಗೆ ಗೆಲುವೇ ಅಲ್ಲ,’’ ಎನ್ನುತ್ತಾರೆ ಶೃಂಗೇಶ್.

ಇದರ ಜತೆಗೆ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಆಂತರಿಕ ಕಚ್ಚಾಟದಲ್ಲಿ ಮುಳುಗಿ ಹೋಗಿದೆ. ಪಕ್ಷದ ಕೆಲಸಗಳಿಗಿಂತ ಕಾಲೆಳೆಯುವ ಕೆಲಸಗಳೇ ಮೇಲಾಟದಲ್ಲಿವೆ ಎನ್ನುತ್ತವೆ ಪಕ್ಷದ ಮೂಲಗಳು. ಇನ್ನು ಜೆಡಿಎಸ್‌ ಇಲ್ಲಿ ತಾತ್ಕಾಲಿಕ ನಾಯಕರನ್ನು ನಂಬಿಕೊಂಡು ಹೈರಾಣಾಗಿದೆ. ಇಂತಹ ಸನ್ನಿವೇಶದಲ್ಲಿ ಸಮ್ಮಿಶ್ರ, ದೋಸ್ತಿ ಅಂತ ಹೊರಟರೂ ಚುನಾವಣಾ ಅಖಾಡದಲ್ಲಿ ಬಿಜೆಪಿ ಅನುಕೂಲವಾಗಿದೆ. ಈ ಸೋಲಿನ ಪಾಠವನ್ನೂ ಮುಂದಿನ ಲೋಕಸಭೆಗೆ ದೋಸ್ತಿ ಪಕ್ಷಗಳು ಎತ್ತಿಕೊಳ್ಳುವುದು ಒಳ್ಳೆಯದು.