samachara
www.samachara.com
‘ಯಲ್ಲಮ್ಮನ ಜಾತ್ರೆ’ ನೆನಪಿಸಿದ ಪಟೇಲ್ ಪ್ರತಿಮೆಗೆ ಮೋದಿ ಹಣ ಹೊಂದಿಸಿದ್ದು ಹೇಗೆ ಗೊತ್ತಾ?
COVER STORY

‘ಯಲ್ಲಮ್ಮನ ಜಾತ್ರೆ’ ನೆನಪಿಸಿದ ಪಟೇಲ್ ಪ್ರತಿಮೆಗೆ ಮೋದಿ ಹಣ ಹೊಂದಿಸಿದ್ದು ಹೇಗೆ ಗೊತ್ತಾ?

ಕಾಂಗ್ರೆಸ್ ನಾಯಕ ಪಟೇಲ್‌ಗೆ, ಕಾರ್ಪೊರೇಟ್ ಋಣದ ಹಣದಲ್ಲಿ ಪ್ರತಿಮೆ, ಮಧ್ಯದಲ್ಲಿ ಮೋದಿ ಭಜನೆ. ಎತ್ತ ಸಾಗುತ್ತಿದೆ ವಿಶ್ವಗುರು ಭಾರತ?

ಅದು ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 135. ಇದರ ಪ್ರಕಾರ ಈ ಕಾಯ್ದೆ ಜಾರಿಗೆ ಬಂದ ಏಪ್ರಿಲ್ 1, 2014 ರಿಂದ ಪ್ರತಿ ಕಂಪನಿಯೂ, ಅದು ಖಾಸಗಿ ಆಗಿರಲಿ ಸಾರ್ವಜನಿಕವಾಗಿರಲಿ ಅದರ ನಿವ್ವಳ ಮೌಲ್ಯ 500 ಕೋಟಿ ರೂ. ಇದ್ದರೆ ಅಥವಾ 1,000 ಕೋಟಿ ರೂ. ವ್ಯವಹಾರ ಹೊಂದಿದ್ದರೆ ಅಥವಾ 5 ಕೋಟಿ ರೂ. ಗಿಂತ ಹೆಚ್ಚು ನಿವ್ವಳ ಲಾಭವನ್ನು ಪಡೆದುಕೊಂಡಿದ್ದರೆ, ಆ ಕಂಪನಿ ಕಳೆದ ಮೂರು ವರ್ಷಗಳ ಪಡೆದ ಸರಾಸರಿ ನಿವ್ವಳ ಲಾಭದ ಕನಿಷ್ಠ ಶೇಕಡಾ 2ರಷ್ಟು ಹಣವನ್ನು ‘ಸಿಎಸ್‌ಆರ್’ ಚಟುವಟಿಕೆಗಳಿಗೆ ವಿನಿಯೋಗಿಸಬೇಕು.

ಸಿಎಸ್‌ಆರ್‌ ಎಂದರೆ ‘ಕಾರ್ಪೊರೇಟ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ಫಂಡ್‌’. ಸರಳವಾಗಿ ಹೇಳುವುದಾದರೆ, ಕಂಪನಿಗಳು ತಮ್ಮ ಚಟುವಟಿಕೆಯಿಂದ ಬಂದ ಲಾಭವನ್ನು ಸಮಾಜಕ್ಕೆ ಉಪಯೋಗವಾಗುವ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡಬೇಕು.

ಇಂಥಹದ್ದೊಂದು ಕಾಯ್ದೆ ಜಾರಿಗೆ ಒಂದು ವರ್ಷ ಮುಂಚೆ, 2013ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಏಕಪಕ್ಷೀಯ ಕನಸಿನಂತೆ ಸರ್ದಾರ್‌ ವಲ್ಲಭಭಾಯಿ ಪಟೇಲರ ಪ್ರತಿಮೆ ನಿರ್ಮಾಣ ನರ್ಮಾದಾ ನದಿ ತಟದಲ್ಲಿ ಆರಂಭಗೊಂಡಿತು. ಸುಮಾರು 3,000 ಕೋಟಿ ರೂಪಾಯಿ ವೆಚ್ಚ ಮಾಡಿ 182 ಅಡಿ ಎತ್ತರದ ಈ ಏಕತಾ ಪ್ರತಿಮೆ ಇದೀಗ ಪೂರ್ಣಗೊಂಡು ಅದರ ಉದ್ಘಾಟನೆಯೂ ನಡೆದಿದೆ. ಇಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಪ್ರಶ್ನೆ ಎಂದರೆ ಈ ಪ್ರತಿಮೆಗೆ ಹಣ ನೀಡಿದವರು ಯಾರು?

ಪಟೇಲ್‌ ಇಡೀ ಪ್ರತಿಮೆಯನ್ನು ಜನರ ದುಡ್ಡಿನಿಂದಲೇ ನಿರ್ಮಿಸಲಾಗುವುದು ಎಂದು ಡಂಗುರ ಸಾರಲಾಗಿತ್ತು. ಅದಕ್ಕಾಗಿ ಜನರಿಂದ ಕೆಲಸಕ್ಕೆ ಬರದ ಕಬ್ಬಿಣ ಸಂಗ್ರಹಿಸಲಾಗಿತ್ತು. ಪ್ರತಿಮೆ ನಿರ್ಮಾಣಕ್ಕಾಗಿ ಗುಜರಾತ್‌ ಸರಕಾರಿ ಪ್ರಾಯೋಜಿತ ‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಏಕತಾ ಟ್ರಸ್ಟ್‌’ ಕೂಡ ರಚಿಸಲಾಯಿತು. ಹಾಗಂಥ ಇದಕ್ಕೆ ಸರಕಾರ ಯಾವುದೇ ಹಣ ನೀಡಲಿಲ್ಲ. ಸಾರ್ವಜನಿಕರಿಂದ ಬಂದ ಹಣವೂ ಸಾಕಾಗಲಿಲ್ಲ. ಆಗ ಸಾರ್ವಜನಿಕರ ಉಪಯೋಗಕ್ಕೆ ಎಂದು ಮೀಸಲಾದ ಸಿಎಸ್‌ಆರ್‌ ಹಣವನ್ನೇ ಪ್ರಧಾನಿ ಆಡಂಬರದ ಕನಸಿಗೆ ಬಳಸಿಕೊಳ್ಳಲಾಯಿತು.

‘ಯಲ್ಲಮ್ಮನ ಜಾತ್ರೆ’ ನೆನಪಿಸಿದ ಪಟೇಲ್ ಪ್ರತಿಮೆಗೆ ಮೋದಿ ಹಣ ಹೊಂದಿಸಿದ್ದು ಹೇಗೆ ಗೊತ್ತಾ?
/ಎಕ್ಸ್‌ಪ್ರೆಸ್‌ ಡಾಟ್‌ ಯುಕೆ

ಕೇಂದ್ರ ಸರಕಾರ ಮತ್ತು ಗುಜರಾತ್‌ ಸರ್ಕಾರಿ ಸ್ವಾಮ್ಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳು ತಮ್ಮ ಸಿಎಸ್‌ಆರ್‌ ಫಂಡ್‌ ಹಣವನ್ನು ಏಕತಾ ಪ್ರತಿಮೆ ನಿರ್ಮಾಣಕ್ಕೆ ಧಾರೆ ಎರೆದವು. ಅದೂ ಕೋಟಿಗಳ ಲೆಕ್ಕದಲ್ಲಿ. ಲಭ್ಯ ಇರುವ ಮಾಹಿತಿಗಳ ಪ್ರಕಾರ,

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) - 90 ಕೋಟಿ ರೂ.

ಆಯಿಲ್‌ ಮತ್ತು ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್ – 50 ಕೋಟಿ ರೂ.

ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ – 45 ಕೋಟಿ ರೂ.

ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ – 25 ಕೋಟಿ ರೂ.

ಆಯಿಲ್‌ ಇಂಡಿಯಾ – 25 ಕೋಟಿ ರೂ.

ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ – 25 ಕೋಟಿ ರೂ.

ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ - 12.5 ಕೋಟಿ ರೂ.

ಗುಜರಾತ್‌ ಮಿನರಲ್ ಡೆವಲಪ್ಮೆಂಟ್‌ ಕಾರ್ಪೊರೇಷನ್‌ – 10 ಕೋಟಿ ರೂ.

ಇಂಜಿನಿಯರ್ಸ್‌ ಇಂಡಿಯಾ - 5 ಕೋಟಿ ರೂ.

ಪೆಟ್ರೋನೆಟ್‌ ಎಲ್‌ಎನ್‌ಜಿ - 5 ಕೋಟಿ ರೂ.

ಬಾಲ್ಮರ್‌ ಲೌವ್ರಿ ಆಂಡ್‌‌ ಕೋ – 60 ಲಕ್ಷ ರೂ.

ಗುಜರಾತ್‌ ನರ್ಮದಾ ವ್ಯಾಲಿ ಫರ್ಟಿಲೈಸರ್ಸ್‌ & ಕೆಮಿಕಲ್ಸ್‌ – 10 ಲಕ್ಷ ರೂ.ಗಳಂತೆ ಟ್ರಸ್ಟ್‌ಗೆ ದೇಣಿಗೆ ನೀಡಿರುವುದು ಕಂಪನಿಗಳು ಸರಕಾರಕ್ಕೆ ಸಲ್ಲಿಸಿರುವ ಮಾಹಿತಿಗಳಿಂದ ತಿಳಿದು ಬಂದಿದೆ.

ಪ್ರತಿಮೆಯಲ್ಲಿ ಯಾವ ಸಮಾಜೋದ್ಧಾರ?

ಅಸಲಿಗೆ ಸರ್ದಾರ್‌ ಪಟೇಲ್‌ರ ಪ್ರತಿಮೆಯನ್ನು ಬುಡಕಟ್ಟು ಜನರಿಗೆ ಸರಿಯಾದ ಪರಿಹಾರ ನೀಡದೆ ಒಕ್ಕಲೆಬ್ಬಿಸಿದ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಜತೆಗೆ ಪ್ರತಿಮೆಯಿಂದ ಯಾವ ರೀತಿಯಲ್ಲೂ ಜನರಿಗೆ ಉಪಯೋಗವಿಲ್ಲ. ಇದರಲ್ಲಿ ಈ ಕಂಪನಿಗಳು ಅದ್ಯಾವ ಸಾಮಾಜಿಕ ಜವಾಬ್ದಾರಿಯನ್ನು ಕಂಡವೋ ಗೊತ್ತಿಲ್ಲ. ಹೊರಗಡೆಯೂ ಪ್ರತಿಮೆ ಇಟ್ಟುಕೊಂಡು ಪ್ರವಾಸೋದ್ಯಮದ ಬಗ್ಗೆ ಮಾತನಾಡುತ್ತಾರೆಯೇ ಹೊರತು ಸಾಮಾಜಿಕ ಅಭಿಬೃದ್ಧಿಗಳ ಬಗ್ಗೆ ಚಕಾರ ಎತ್ತುತ್ತಿಲ್ಲ.

ಇವರ ಈ ಬೇಜವಾಬ್ದಾರಿ ನಡೆಯನ್ನು ಸ್ವತಃ ಸಿಎಜಿ (ಕಂಟ್ರೋಲರ್‌ ಆಂಡ್‌ ಅಡಿಟರ್‌ ಜನರಲ್‌ ಆಫ್‌ ಇಂಡಿಯಾ) ಕೂಡ ಪ್ರಶ್ನಿಸಿದೆ. ಈ ಸಂಬಂಧ ಆಗಸ್ಟ್‌ 2018ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ವರದಿಯಲ್ಲಿ, ಸಿಎಜಿ ತಕರಾರುಗಳನ್ನು ಎತ್ತಿದ್ದು, ಸಿಎಸ್‌ಆರ್‌ ಹಣವನ್ನು ಏಕತೆಯ ಪ್ರತಿಮೆಗೆ ನೀಡುವುದಕ್ಕೆ ಅನುಮೋದನೆ ನೀಡಲಾಗದು. ಕಾರಣ ಟ್ರಸ್ಟ್‌ ಹೇಳುತ್ತಿರುವಂತೆ ಯೋಜನೆಯು ರಾಷ್ಟ್ರೀಯ ಪರಂಪರೆ, ಕಲೆ ಮತ್ತು ಸಂಸ್ಕೃತಿಯ ಭಾಗವಲ್ಲ ಎಂದು ಛಾಟಿ ಬೀಸಿತ್ತು. ಇದು ಪಾರಂಪರಿಕ ಆಸ್ತಿ ಅಲ್ಲದೆ ಇರುವ ಕಾರಣಕ್ಕೆ ಕಂಪನಿ ಕಾಯ್ದೆ 2013ರ ಪರಿಚ್ಛೇದ 7ರ ಅಡಿಯಲ್ಲಿ ಸಿಎಸ್‌ಆರ್‌ ಹಣವನ್ನು ಪ್ರತಿಮೆ ನಿರ್ಮಾಣಕ್ಕೆ ನೀಡಲು ಬರುವುದಿಲ್ಲ ಎಂದು ಸಂಸ್ಥೆ ಹೇಳಿತ್ತು.

ಈ ಸಂಬಂಧ ನೀಡಲಾದ ನೋಟಿಸ್‌ಗೆ ಹಲವು ಕಂಪನಿಗಳ ಸಮಜಾಯಿಷಿಯನ್ನು ಸಿಎಜಿಗೆ ನೀಡಿದ್ದವಾದರೂ ಪ್ರತಿಮೆ ಸ್ಥಾಪನೆ ಸಿಎಸ್‌ಆರ್‌ ಚಟುವಟಿಕೆ ಅಡಿಯಲ್ಲಿ ಬರುವುದಿಲ್ಲ ಎಂಬುದಕ್ಕೆ ಸಿಎಜಿ ಕಟ್ಟು ಬಿದ್ದಿತ್ತು. ಹೀಗಿದ್ದೂ ಸಾರ್ವಜನಿಕರಿಗೆ, ವಿಶೇಷವಾಗಿ ಬಡವರ ಅಭಿವೃದ್ಧಿಗೆ ಸೇರಬೇಕಾದ ಹಣದಲ್ಲಿ 2,989 ಕೋಟಿ ರೂಪಾಯಿ ಮೌಲ್ಯದ ಪ್ರತಿಮೆ ನಿರ್ಮಾಣಗೊಂಡಿದೆ. ಪ್ರತಿಮೆ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ ಗುತ್ತಿಗೆ ಪಡೆದುಕೊಂಡು ಈ ಹಣವನ್ನು ಎಲ್‌ & ಟಿ ಕಂಪನಿ ಜೇಬಿಗಿಳಿಸಿಕೊಂಡಿದೆ. ಈ ಕಂಪನಿ ಪ್ರತಿಮೆಯ ಒಂದಷ್ಟು ಭಾಗಗಳನ್ನು ಚೀನಾದಲ್ಲಿ ನಿರ್ಮಿಸುವುದರ ಮೂಲಕ ಈ ಹಣದ ಒಂದಷ್ಟು ಪಾಲು ಚೀನಾದ ಒಡಲು ಸೇರಿದೆ. ಅಲ್ಲಿಗೆ ಸಿಎಸ್‌ಆರ್ ಎಂಬ ಕಂಪನಿಗಳ ಸಾರ್ವಜನಿಕ ಜವಾಬ್ದಾರಿ ಸಮಾಧಿ ಕೂಡ.

ಇನ್ನೊಂದು ಕಡೆ ಭಾರತಕ್ಕೆ ನಿಯಮಿತವಾಗಿ ಆರ್ಥಿಕ ನೆರವು ನೀಡುತ್ತಾ ಬಂದ ದೇಶಗಳು ಪ್ರತಿಮೆ ನಿರ್ಮಾಣದ ಬಗ್ಗೆ ಅಪಸ್ವರಗಳನ್ನು ಎತ್ತಿವೆ. ಬ್ರಿಟನ್‌ ದೇಶದ ಜನರು, ‘ನಾವು ಭಾರತಕ್ಕೆ ನೆರವು ನೀಡಿದರೆ ಅವರು ಅಗತ್ಯವಿಲ್ಲದ ಪ್ರತಿಮೆ ನಿರ್ಮಾಣದಲ್ಲಿ ತೊಡಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಇದು ಪಟೇಲ್ ಪ್ರತಿಮೆ ನಿರ್ಮಾಣದ ಹಿಂದಿನ ಆರ್ಥಿಕತೆ ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಹೊಣೆಗಾರಿಕೆಗಳ ವಿವರ. ಕಾಂಗ್ರೆಸ್ ನಾಯಕ ಪಟೇಲ್‌ಗೆ, ಕಾರ್ಪೊರೇಟ್ ಋಣದ ಹಣದಲ್ಲಿ ಪ್ರತಿಮೆ. ಮಧ್ಯದಲ್ಲಿ ಮೋದಿ ಭಜನೆ. ಎತ್ತ ಸಾಗುತ್ತಿದೆ ವಿಶ್ವಗುರು ಭಾರತ?