‘ದೀಪಾವಳಿಗೆ ಸಮ್ಮಿಶ್ರ ಪಟಾಕಿ’: ಬಿಜೆಪಿಯ ನೀರಸ ಪ್ರದರ್ಶನಕ್ಕೆ ಕಾರಣ ಏನು? 
COVER STORY

‘ದೀಪಾವಳಿಗೆ ಸಮ್ಮಿಶ್ರ ಪಟಾಕಿ’: ಬಿಜೆಪಿಯ ನೀರಸ ಪ್ರದರ್ಶನಕ್ಕೆ ಕಾರಣ ಏನು? 

‘ಲೋಕಸಭಾ ಚುನಾವಣೆಗೂ ಒಗ್ಗಟ್ಟಾಗಿರಲಿದ್ದೇವೆ’ ಎಂದಿರುವ ಕಾಂಗ್ರೆಸ್- ಜೆಡಿಎಸ್‌ ಮೈತ್ರಿಯ ‘ಬಲ’ ಮತ್ತೊಮ್ಮೆ ರಾಷ್ಟ್ರೀಯ ಅಧಿಕಾರದ ಕನಸಿನಲ್ಲಿರುವ ಬಿಜೆಪಿಗೆ ಬಿಸಿ ಮುಟ್ಟಿಸುವ ಸಾಧ್ಯತೆಯನ್ನು ಮುಂದಿಟ್ಟಿದೆ.

ಈ ಬಾರಿಯ ದೀಪಾವಳಿ ಕಾಂಗ್ರೆಸ್‌- ಜೆಡಿಎಸ್‌ ಪಾಲಿಗೆ ಗೆಲುವಿನ ಸಿಹಿ ತಂದಿದ್ದರೆ, ಬಿಜೆಪಿಗೆ ಮೊದಲು ಮುಖಭಂಗ, ಈಗ ಸೋಲಿನ ಕಹಿಯನ್ನು ಉಣಿಸಿದೆ. ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿಗೆ ಭಾರೀ ಗೆಲುವು ಲಭಿಸಿದೆ. ಬಿಜೆಪಿಗೆ ಮತದಾರರು ಹೀನಾಯ ಸೋಲಿನ ಪಾಠ ಕಲಿಸಿದ್ದಾರೆ. ‘ಲೋಕಸಭಾ ಚುನಾವಣೆಗೂ ಒಗ್ಗಟ್ಟಾಗಿರಲಿದ್ದೇವೆ’ ಎಂದಿರುವ ಕಾಂಗ್ರೆಸ್- ಜೆಡಿಎಸ್‌ ಮೈತ್ರಿಯ ‘ಬಲ’ ಮತ್ತೊಮ್ಮೆ ರಾಷ್ಟ್ರೀಯ ಅಧಿಕಾರದ ಕನಸಿನಲ್ಲಿರುವ ಬಿಜೆಪಿಗೆ ಬಿಸಿ ಮುಟ್ಟಿಸುವ ಸಾಧ್ಯತೆಯನ್ನು ಮುಂದಿಟ್ಟಿದೆ.

ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶದಲ್ಲಿ ನಿರೀಕ್ಷೆಯಂತೆಯೇ ಮತದಾರರು ತೀರ್ಪು ನೀಡಿದ್ದಾರೆ. ಚುನಾವಣಾ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳಿಗೆ ತಲಾ ಒಂದೊಂದು ಲೋಕಸಭಾ ಸ್ಥಾನ ಹಾಗೂ ವಿಧಾನಸಭಾ ಸ್ಥಾನಗಳು ಸಿಕ್ಕಿವೆ. ಒಂದು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಎಲ್‌.ಆರ್‌. ಶಿವರಾಮೇಗೌಡ, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿ.ಎಸ್‌. ಉಗ್ರಪ್ಪ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆನಂದ್‌ ನ್ಯಾಮಗೌಡ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ.ವೈ. ರಾಘವೇಂದ್ರ ಗೆಲುವು ಸಾಧಿಸಿದ್ದಾರೆ.

ಮಂಡ್ಯ, ರಾಮನಗರ ಕ್ಷೇತ್ರಗಳಲ್ಲಿ ಡಮ್ಮಿ ಕ್ಯಾಂಡಿಡೇಟ್‌ಗಳನ್ನು ಹಾಕಿದ್ದ ಬಿಜೆಪಿ ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಜಮಖಂಡಿಯಲ್ಲಿ ಅನುಕಂಪವೇ ಮೇಲುಗೈ ಸಾಧಿಸುವ ಬಗ್ಗೆ ಗೊತ್ತಿದ್ದ ಬಿಜೆಪಿ ಆ ಕ್ಷೇತ್ರವನ್ನೂ ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಗಂಭೀರವಾಗಿ ತೆಗೆದುಕೊಂಡಿದ್ದ ಕ್ಷೇತ್ರಗಳಲ್ಲೂ ಬಿಜೆಪಿಗೆ ಮುಖಭಂಗವಾಗಿದೆ.

ಬಳ್ಳಾರಿ ಮತ್ತು ಶಿವಮೊಗ್ಗ ಎರಡೂ ಕ್ಷೇತ್ರಗಳಲ್ಲಿ ಈ ಹಿಂದೆ ಬಿಜೆಪಿಯೇ ಅಧಿಕಾರದಲ್ಲಿತ್ತು. ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಳ್ಳಾರಿಯಲ್ಲಿ ಬಿಜೆಪಿಯ ಬಿ. ಶ್ರೀರಾಮುಲು ಸಂಸದರಾಗಿದ್ದರು. ಹಿಂದಿನ ಗೆಲುವಿನ ಬಲ ಹಾಗೂ ನಾಯಕ ಸಮುದಾಯದ ಮೇಲಿನ ಹಿಡಿತ ಉಪ ಚುನಾವಣೆಯಲ್ಲೂ ಕೈ ಹಿಡಿಯಬಹುದೆಂಬ ಕೇಸರಿ ಪಕ್ಷದ ನಂಬಿಕೆ ಹುಸಿಯಾಗಿದೆ.

ಬಳ್ಳಾರಿಯಲ್ಲಿ ಈಗ ನೆಲಕ್ಕೆ ಬಿದ್ದಿರುವ ಬಿಜೆಪಿಯ ಗಡ್ಡ ಮೀಸೆಗಳೆಲ್ಲವೂ ಮಣ್ಣಾಗಿವೆ. ‘ವಲಸೆ ಬಂದ ಅಭ್ಯರ್ಥಿ’ ಎಂಬ ಅಣಕಗಳೆಲ್ಲವನ್ನೂ ಮೀರಿ ಕಾಂಗ್ರೆಸ್‌ನ ಉಗ್ರಪ್ಪ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶ್ರೀರಾಮುಲು ಸೋದರಿ, ‘ತವರು’ ಅಭ್ಯರ್ಥಿ ಬಿಜೆಪಿಯ ಜೆ. ಶಾಂತಾ ಅವರಿಗೆ ಇಲ್ಲಿ ಹೀನಾಯ ಸೋಲಾಗಿದೆ.

ಈ ಸೋಲು – ಗೆಲುವುಗಳು ಕೇವಲ ಕಣದಲ್ಲಿದ್ದ ಅಭ್ಯರ್ಥಿಗಳ ಫಲಿತಾಂಶ ಮಾತ್ರವಲ್ಲ, ಇವರ ಹಿಂದಿದ್ದ ಪಕ್ಷಗಳ ಮುಖಂಡ ಸೋಲು – ಗೆಲುವುಗಳೂ ಕೂಡಾ. ಬಳ್ಳಾರಿಯಲ್ಲಿ ಉಗ್ರಪ್ಪ ಗೆಲುವಿನ ಮೂಲಕ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಪ್ರತಿಷ್ಠೆ ಕೂಡಾ ಗೆದ್ದಿದೆ. ಶಾಂತಾ ಸೋಲಿನ ಮೂಲಕ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರಿಗೆ ತೀವ್ರ ಮುಖಭಂಗವಾಗಿದೆ.

‘ಬಿಜೆಪಿ ಆತ್ಮಾವಲೋಕನಕ್ಕೆ ಸಕಾಲ’:

ಬಿಜೆಪಿ ಹೀನಾಯ ಸೋಲಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌, “ಆತ್ಮಾವಲೋಕನಕ್ಕೆ ಇದು ಸಕಾಲ” ಎಂದು ಟ್ವೀಟ್‌ ಮಾಡಿದ್ದಾರೆ. ಈ ಉಪ ಚುನಾವಣೆಯ ಸೋಲಿನಿಂದಾದರೂ ಪಕ್ಷದ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬ ಮಾತನ್ನು ಸುರೇಶ್‌ ಕುಮಾರ್‌ ಅವರ ಟ್ವೀಟ್‌ ಧ್ವನಿಸುತ್ತಿದೆ.

ಬಿಜೆಪಿ ಕೈ ಹಿಡಿದ ಶಿವಮೊಗ್ಗ:

ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿದ್ದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ಕೇಸರಿ ಪಕ್ಷದ ಮರ್ಯಾದೆ ಉಳಿಸಿದೆ. ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಬಿ.ವೈ. ರಾಘವೇಂದ್ರ ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕೂಡಾ ಬಿಜೆಪಿ ಭರ್ಜರಿ ಗೆಲುವನ್ನೇನೂ ಕಂಡಿಲ್ಲ. ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಇಲ್ಲಿ ಸೋಲು - ಗೆಲವು ನಿರ್ಧಾರವಾಗಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ತಗ್ಗಿಸಲು ಹಾಗೂ ಎಸ್‌. ಬಂಗಾರಪ್ಪ ಅವರ ಪ್ರಭಾವ ಜೆಡಿಎಸ್‌ನ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ, ಹತ್ತಿರಹತ್ತಿರ 5 ಲಕ್ಷ ಮತಗಳನ್ನು ಪಡೆದರೂ ಗೆಲುವು ಮಧು ಬಂಗಾರಪ್ಪ ಕೈ ತಪ್ಪಿದೆ. ಮಧು ಬಂಗಾರಪ್ಪ ಅವರು ಗೆದ್ದಿದ್ದ ವಿಧಾನಸಭಾ ಕ್ಷೇತ್ರ ಸೊರಬದಲ್ಲೇ ಅವರಿಗೆ ಹಿನ್ನಡೆಯಾಗಿದೆ. ಈಡಿಗ - ಒಕ್ಕಲಿಗ ಜಾತಿ ಸಮೀಕರಣವೂ ಇಲ್ಲಿ ಜೆಡಿಎಸ್‌ಗೆ ಗೆಲುವು ತಂದುಕೊಡುವಲ್ಲಿ ವಿಫಲವಾಗಿದೆ.

ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸ ಹೊಂದಿದ್ದ ಬಿಜೆಪಿ ಒಂದು ಕಡೆಗೆ ಸೋಲು ಹಾಗೂ ಮತ್ತೊಂದು ಕಡೆ ಗೆಲುವು ಕಂಡಿದೆ. ಆದರೆ, ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಗೆ ಒಲಿದಿರುವುದು 2019ರ ಲೋಕಸಭಾ ಚುನಾವಣೆಯ ‘ದಿಕ್ಸೂಚಿ’ಯಾಗಿದೆ.