samachara
www.samachara.com
‘ಸರಕಾರದ ಸುಪರ್ದಿಗೆ ಧರ್ಮಸ್ಥಳ’: ಇದು ಲೆಫ್ಟ್‌ ವರ್ಸಸ್‌ ರೈಟ್‌ ಅಲ್ಲ, ಫೈಟ್ ವಿತ್‌ ಇನ್‌ ದಿ ರೈಟ್!
COVER STORY

‘ಸರಕಾರದ ಸುಪರ್ದಿಗೆ ಧರ್ಮಸ್ಥಳ’: ಇದು ಲೆಫ್ಟ್‌ ವರ್ಸಸ್‌ ರೈಟ್‌ ಅಲ್ಲ, ಫೈಟ್ ವಿತ್‌ ಇನ್‌ ದಿ ರೈಟ್!

ಇವರ ಧರ್ಮಕ್ಕೆ ಸಂಬಂಧವೇ ಇಲ್ಲದ ಹಿಂದೂ ಧಾರ್ಮಿಕ ಕ್ಷೇತ್ರವನ್ನು ಸರಕಾರದ ಸುಪರ್ದಿಗೆ ತರಬೇಕು ಎಂಬ ಹೋರಾಟಗಳು ತೀವ್ರಗೊಂಡಿವೆ. ಇದರ ಮುಂಚೂಣಿಯಲ್ಲಿರುವವರು ಕಮ್ಯೂನಿಷ್ಟರೂ ಅಲ್ಲ; ಕ್ರೈಸ್ತ ಮಿಷನರಿಗಳೂ ಅಲ್ಲ; ಬದಲಿಗೆ ಅಪ್ಪಟ ಹಿಂದೂಗಳು.

ಇದು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ; ಹೆಸರು ಶ್ರೀ ಕ್ಷೇತ್ರ ಧರ್ಮಸ್ಥಳದ ಮುಂದುವರಿದ ಕತೆ. ಹಿಂದೂ ಧಾರ್ಮಿಕ ಕೇಂದ್ರವಾಗಿರುವ ಇದರ ಆಡಳಿತ ಜೈನ ಸಮುದಾಯದವರ ಕೈಯಲ್ಲಿದೆ. ಧರ್ಮಾಧಿಕಾರಿ ಎಂದು ಕರೆಯಲ್ಪಡುವ ಇಲ್ಲಿನ ಹಾಲಿ ಮುಖ್ಯಸ್ಥರು ಡಾ.ಡಿ. ವೀರೇಂದ್ರ ಹೆಗ್ಗಡೆ. ಭಾರತದ ಸಂವಿಧಾನದ ಪ್ರಕಾರ ಇವರದ್ದು ಅಲ್ಪಸಂಖ್ಯಾತ ಸಮುದಾಯ. ಇದೀಗ ಇವರ ಧರ್ಮಕ್ಕೆ ಸಂಬಂಧವೇ ಇಲ್ಲದ ಹಿಂದೂ ಧಾರ್ಮಿಕ ಕ್ಷೇತ್ರವನ್ನು ಸರಕಾರದ ಸುಪರ್ದಿಗೆ ತರಬೇಕು ಎಂಬ ಹೋರಾಟಗಳು ತೀವ್ರಗೊಂಡಿವೆ. ಇದರ ಮುಂಚೂಣಿಯಲ್ಲಿರುವವರು ಕಮ್ಯೂನಿಷ್ಟರೂ ಅಲ್ಲ; ಕ್ರೈಸ್ತ ಮಿಷನರಿಗಳೂ ಅಲ್ಲ; ಬದಲಿಗೆ ಅಪ್ಪಟ ಹಿಂದೂಗಳು.

ಲಭ್ಯ ಇರುವ ದಾಖಲೆಗಳ ಪ್ರಕಾರ, ಕರ್ನಾಟಕದ ಅತ್ಯಂತ ಶ್ರೀಮಂತ ದೇವಸ್ಥಾನ ಧರ್ಮಸ್ಥಳ. ಮುಜುರಾಯಿ ಇಲಾಖೆ ಆಡಳಿತಕ್ಕೆ ಒಳಪಡುವ ದೇವಸ್ಥಾನಗಳಲ್ಲೇ ನಂಬರ್‌ 1 ಸ್ಥಾನದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ 2013-14 ರಲ್ಲಿ 68 ಕೋಟಿ ರೂಪಾಯಿ ಆದಾಯ ದಾಖಲಿಸುವಾಗ, ಇದೇ ಧರ್ಮಸ್ಥಳದ ಧರ್ಮಾಧಿಕಾರಿಗಳು ತಮ್ಮ ದೇವಸ್ಥಾನಕ್ಕೆ 127.75 ಕೋಟಿ ರೂಪಾಯಿ ಆದಾಯವಿದೆ ಎಂದು ಲೆಕ್ಕಪತ್ರ ಸಲ್ಲಿಸಿದ್ದರು. ಅಂದ ಹಾಗೆ ಸೀಮಿತ ಪೂಜಾ ಶುಲ್ಕಗಳನ್ನು ಸ್ವೀಕರಿಸಿಯೂ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ 2017-18ರ ಹೊತ್ತಿಗೆ 96 ಕೋಟಿ ರೂಪಾಯಿ ದಾಟಿದೆ. ಅಂದರೆ ಒಂದೂವರೆ ಪಟ್ಟು ಏರಿಕೆಯಾಗಿದೆ. ಇದೇ ಲೆಕ್ಕಾಚಾರವನ್ನು ಇಟ್ಟುಕೊಂಡರೆ ಇವತ್ತಿಗೆ ಧರ್ಮಸ್ಥಳದ ಆದಾಯ 200 ಕೋಟಿ ರೂಪಾಯಿ ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದೂ ಅವರದೇ ಲೆಕ್ಕಗಳ ಪ್ರಕಾರ. ಹೆಗ್ಗಡೆಯವನ್ನು ವಿರೋಧಿಸುತ್ತಿರುವವರು ದೇವಸ್ಥಾನದ ಆದಾಯ 400 ಕೋಟಿಗೂ ಮಿಕ್ಕಿದೆ ಎಂದು ವಾದಿಸುತ್ತಿರುವುದನ್ನೂ ಇಲ್ಲಿ ಸ್ಮರಿಸಬಹುದು.

ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಪೂರ್ತಿಯಾಗಿ ಭಕ್ತರು ಮತ್ತು ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗುತ್ತಿದೆ. ಆದರೆ ಧರ್ಮಸ್ಥಳದ್ದು ಹಾಗಾಗುತ್ತಿಲ್ಲ. ಯಾರಿಗೆ, ಎಲ್ಲಿ, ಹೇಗೆ ಬಳಕೆಯಾಗುತ್ತಿದೆ ಎಂಬ ವಿವರಗಳನ್ನು ಪಾರದರ್ಶಕತೆಯ ಬಗ್ಗೆ ಪಾಠ ಮಾಡುವ ವೀರೇಂದ್ರ ಹೆಗ್ಗಡೆಯವರು ಈವರೆಗೆ ಎಲ್ಲಿಯೂ ನೀಡಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಸೇರಬೇಕಾದ ಹಣ ಏನಾಗುತ್ತಿದೆ ಎಂಬ ಬಗ್ಗೆ ತಿಳಿಯುತ್ತಿಲ್ಲ.

ಇನ್ನು ಇದೇ ದೇವಸ್ಥಾನವನ್ನು ವೀರೇಂದ್ರ ಹೆಗ್ಗಡೆಯವರು ‘ಮನೆ ದೇವರು’ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಲೇ ‘ದಿ ಇನ್ಸ್‌ಟ್ಯೂಷನ್‌ ಅಟ್ ಧರ್ಮಸ್ಥಳ’ ಹೆಸರಿನಲ್ಲಿ ಪಾನ್‌ ಕಾರ್ಡ್‌ ಮಾಡಿಸಿಕೊಂಡು ಅದಕ್ಕೆ ತೆರಿಗೆ ವಿನಾಯ್ತಿ ಪಡೆದುಕೊಳ್ಳುತ್ತಿದ್ದಾರೆ. ಜತೆಗೆ ದೇವಸ್ಥಾನಕ್ಕೆ ಸಾರ್ವಜನಿಕರು ಭೇಟಿ ನೀಡಿ ಸೇವಾ ರೂಪದಲ್ಲಿ ಕಾಣಿಕೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1993 ಮತ್ತು ನಿಯಮಗಳು 2002ರ ಸೆಕ್ಷನ್‌ 53ರ ಪ್ರಕಾರ ಇಂಥಹ ದೇವಸ್ಥಾನಗಳು ಸಾರ್ವಜನಿಕ ದೇವಸ್ಥಾನಗಳಾಗುತ್ತವೆ. ಹೀಗಿದ್ದೂ ಈ ದೇವಸ್ಥಾನ ನೋಂದಣಿಗೊಂಡಿಲ್ಲ.

ಒಂದು ಕಡೆ ಸರಕಾರಕ್ಕೆ ಕನಿಷ್ಠ ತೆರಿಗೆಯನ್ನೂ ಪಾವತಿಸದೆ ಹುಂಡಿಯಲ್ಲಿ ಬಿದ್ದ ಅಷ್ಟೂ ಹಣವನ್ನು ಹೆಗ್ಗಡೆ ಕುಟುಂಬ ಬಾಚಿಕೊಳ್ಳುತ್ತಿದೆ. ಅದರ ಲೆಕ್ಕವನ್ನು ಸಾರ್ವಜನಿಕ ಮುಂದೆಯೂ ಇಡುತ್ತಿಲ್ಲ. ಈ ಕಾರಣಕ್ಕೆ ದೇವಸ್ಥಾನವನ್ನು ಸರಕಾರ ನೋಂದಣಿ ಮಾಡಿಕೊಳ್ಳಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ಈ ಕುರಿತು ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಸೋಮನಾಥ್‌ ನಾಯಕ್‌ ಅವರು ಸರಕಾರಕ್ಕೆ 2016ರ ಮೇ 2 ರಂದು ಪತ್ರ ಬರೆದು ದೇವಸ್ಥಾನವನ್ನು ನೋಂದಣಿ ಮಾಡುವಂತೆ ಒತ್ತಾಯಿಸಿದ್ದರು.

ಈ ಪತ್ರ ಹಾಗೂ ರಂಜನ್‌ ರಾವ್‌ ಯರ್ಡೂರು ಮುಜುರಾಯಿ ಸಚಿವರಿಗೆ ಮತ್ತು ಧಾರ್ಮಿಕ ದತ್ತಿ ಆಯುಕ್ತರಿಗೆ ಸಲ್ಲಿಸಿದ ಮನವಿಯ ಮೇರೆಗೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಏಪ್ರಿಲ್‌ 13, 2017ರಲ್ಲಿ ಪತ್ರವೊಂದನ್ನು ಬರೆಯುತ್ತಾರೆ. ಈ ಪತ್ರದಲ್ಲಿ ಅವರು ಬೆಳ್ತಂಗಡಿ ತಾಲೂಕು ಕೊಕ್ಕಡ ಹೋಬಳಿಯ ಧರ್ಮಸ್ಥಳ ಗ್ರಾಮದಲ್ಲಿ ಬರುವ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಧರ್ಮಸ್ಥಳವನ್ನು ನೋಂದಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡುತ್ತಾರೆ.

ಆದರೆ ಈ ಶಿಫಾರಸ್ಸಾಗಿ ಒಂದೂವರೆ ವರ್ಷ ಕಳೆದರೂ ಇನ್ನು ನೋಂದಣಿಗೊಂಡಿಲ್ಲ. ಸ್ವತಃ ಸರಕಾರದ ಅಧಿಕಾರಿಗಳಾದ ಸಹಾಯಕ ಆಯುಕ್ತರೇ ದೇವಸ್ಥಾನವನ್ನು ನೋಂದಣಿ ಮಾಡಿಕೊಳ್ಳುವಂತೆ ಆದೇಶ ನೀಡಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಧರ್ಮಸ್ಥಳ ದೇವಸ್ಥಾನವನ್ನು ನೋಂದಣಿ ಮಾಡಿಕೊಳ್ಳುವಂತೆ ಪುತ್ತೂರು ಸಹಾಯಕ ಆಯುಕ್ತರು ಮಾಡಿರುವ ಶಿಫಾರಸ್ಸು
ಧರ್ಮಸ್ಥಳ ದೇವಸ್ಥಾನವನ್ನು ನೋಂದಣಿ ಮಾಡಿಕೊಳ್ಳುವಂತೆ ಪುತ್ತೂರು ಸಹಾಯಕ ಆಯುಕ್ತರು ಮಾಡಿರುವ ಶಿಫಾರಸ್ಸು

ಇದೀಗ ಇದನ್ನೇ ಮುಂದಿಟ್ಟುಕೊಂಡು ಹಿಂದೂ ಧರ್ಮೀಯರೇ ‘ಹಿಂದೂ ಹಿತಚಿಂತನ ವೇದಿಕೆ’ ಹೆಸರಿನಲ್ಲಿ ಹೆಗ್ಗಡೆ ಕುಟುಂಬದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ದೇವಸ್ಥಾನವನ್ನು ಸರಕಾರ ನೋಂದಣಿ ಮಾಡಬೇಕು ಎಂಬ ಉದ್ದೇಶವನ್ನು ಹೋರಾಟ ಹೊಂದಿದೆ. ಜತೆಗೆ ಇತರ ಹಲವು ಬೇಡಿಕೆಗಳನ್ನೂ ಮುಂದಿಡಲಾಗಿದೆ.

ದೇವಸ್ಥಾನದ ಹೆಸರಿನಲ್ಲಿದ್ದ ಸುಮಾರು 1,050 ಎಕರೆ ಜಮೀನು ಹೆಗ್ಗಡೆ ಕುಟುಂಬದವರ ಹೆಸರಿನಲ್ಲಿದೆ. ಈ ಬಗ್ಗೆ ಕ್ರಿಮಿನಲ್‌ ಕೇಸ್‌ ಕೂಡ ದಾಖಲಾಗಿದ್ದು ಇದಕ್ಕೆ ವೀರೇಂದ್ರ ಹೆಗ್ಗಡೆ ಕಡೆಯವರು ತಡೆ ಪಡೆದುಕೊಂಡಿದ್ದಾರೆ. ಇದಲ್ಲದೆ ಮಂಜುನಾಥ ಸ್ವಾಮಿಯ ಭಕ್ತರಿಗೆ ಹೂದೋಟ ನಿರ್ಮಿಸಲು ಸರಕಾರ ಕೊಟ್ಟ 14.65 ಎಕರೆಯಲ್ಲಿ ಲಾಭದಾಯಕ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ನಿರ್ಮಿಸಲಾಗಿದೆ. ಇಲ್ಲಿ ಹೂದೋಟ ಮಾಡಬೇಕು ಎಂದು ವೇದಿಕೆಯವರು ಆಗ್ರಹಿಸಿದ್ದಾರೆ. ಇಷ್ಟಲ್ಲದೆ ಹಿಂದೂ ದೇವಳದಲ್ಲಿ ಹಿಂದು ಸಂಕೇತವಾದ ಭಗವಾಧ್ವಜವನ್ನು ಯಾಕೆ ಹಾಕಿಲ್ಲ ಎಂಬುದನ್ನೂ ಇವರು ಪ್ರಶ್ನಿಸಿದ್ದಾರೆ.

ವೇದಿಕೆಯ ಮಾಹಿತಿ ಪತ್ರ. 
ವೇದಿಕೆಯ ಮಾಹಿತಿ ಪತ್ರ. 

ವಿಶೇಷವೆಂದರೆ, ಆರ್‌ಎಸ್‌ಎಸ್‌ ಜತೆ ಗುರುತಿಸಿಕೊಂಡಿರುವ ಕೆಲವು ನಾಯಕರೂ ಈ ಹೋರಾಟದಲ್ಲಿದ್ದಾರೆ. ಬಹಿರಂಗವಾಗಿ ವೇದಿಕೆ ಜತೆ ಕಾಣಿಸಿಕೊಳ್ಳದಿದ್ದರೂ ದಕ್ಷಿಣ ಕನ್ನಡದ ಹಿರಿಯ ಆರ್‌ಎಸ್‌ಎಸ್‌ ನಾಯಕ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌, ವೀರೇಂದ್ರ ಹೆಗ್ಗಡೆ ವಿರೋಧಿ ನೆಲೆಯಲ್ಲಿ ನಿಂತಿದ್ದಾರೆ. ಒಂದು ಕಡೆ ಎರಡೆರಡು ಅತ್ಯಾಚಾರ, ಕೊಲೆ ಪ್ರಕರಣವನ್ನು ಎದುರಿಸುತ್ತಿರುವ ರಾಘವೇಶ್ವರ ಭಾರತೀ ಸ್ವಾಮಿ ಜತೆ ಗುರುತಿಸಿಕೊಂಡಿರುವ ಭಟ್ಟರು, ಇಲ್ಲಿ ಮಾತ್ರ ಹೆಗ್ಗಡೆಯವರ ‘ಧರ್ಮಸ್ಥಳ ರಿಪಬ್ಲಿಕ್‌’ ವಿರೋಧಿಸುತ್ತಿದ್ದಾರೆ.

ಆದರೆ ದೇಶದ ಪ್ರಮುಖ ಹಿಂದೂ ಸಂಘಟನೆಗಳು ಧರ್ಮಸ್ಥಳದ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳದೇ ಇರುವುದು ಸ್ಥಳೀಯ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಿನ್ನಲೆಯಲ್ಲಿ ಹಿಂದೂ ಸಂಘಟನೆಗಳು ತಮ್ಮ ನಿಲುವು ಸ್ಪಷ್ಟಗೊಳಿಸಬೇಕು ಮತ್ತು ದೇವಾಲಯದ ನೋಂದಣಿಯಾಗಬೇಕು ಎಂದು ಹಿಂದೂ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ. ಹೀಗಾಗಿ ಇದು ಲೆಫ್ಟ್‌ ವರ್ಸಸ್‌ ರೈಟ್ ತರಹದ ಹೋರಾಟವಲ್ಲ, ಬದಲಿಗೆ ಫೈಟ್‌ ವಿತ್‌ ಇನ್‌ ದಿ ರೈಟ್‌. ಈ ಕಾರಣಕ್ಕೆ ಕುತೂಹಲ ಮೂಡಿಸುತ್ತಿದೆ.