samachara
www.samachara.com
‘ಇನ್ ದಿ ನೇಮ್ ಆಫ್ ರಾಮ’: ನ್ಯಾಯಾಲಯದ ಅಂಗಳಕ್ಕೆ ಸ್ವಾಮಿಯ ‘ಸ್ಟಾರ್ ವಿಟ್ನೆಸ್‌’ ಅಭಿರಾಮ!
COVER STORY

‘ಇನ್ ದಿ ನೇಮ್ ಆಫ್ ರಾಮ’: ನ್ಯಾಯಾಲಯದ ಅಂಗಳಕ್ಕೆ ಸ್ವಾಮಿಯ ‘ಸ್ಟಾರ್ ವಿಟ್ನೆಸ್‌’ ಅಭಿರಾಮ!

ಇವು ಕಳೆದ ವಾರಾಂತ್ಯದಲ್ಲಿ ನಡೆದ ಬೆಳವಣಿಗೆಗಳು. ಹೆಸರಾಂತ ಮಠ ಹಾಗೂ ಪೀಠಾಧಿಪತಿ ಒಂದು ಕಾಲದ ಸಹವರ್ತಿ ಹಾಗೂ ಮಾಧ್ಯಮಗಳನ್ನು ಹತೋಟಿಗೆ ತೆಗೆದುಕೊಳ್ಳಲು ನಡೆಸಿದ ಕಾನೂನು ಹೋರಾಟದ ಸುದ್ದಿ- ಬರೀ ಸುದ್ದಿ ಅಷ್ಟೆ.

ಶ್ರೀಮದ್‌ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಜಿ

...ಹಾಗಂತ ಘನ ನ್ಯಾಯಾಲಯಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ರಾಮಚಂದ್ರಾಪುರ ಮಠದ ಪೀಠಾಧೀಪತಿಗಳು ವಾರಾಂತ್ಯದಲ್ಲಿ ಕಾನೂನು ಸಮರದಲ್ಲಿ ತಲ್ಲೀನರಾಗಿದ್ದರು.

ಅವರು, ಎರಡು ಅತ್ಯಾಚಾರ ಆರೋಪ ಪ್ರಕರಣಗಳು ಹಾಗೂ ಒಂದು ಆತ್ಮಹತ್ಯೆಗೆ ಪ್ರಚೋದನೆಗೆ ನೀಡಿದ ಆರೋಪ ಪ್ರಕರಣದಲ್ಲಿ ‘ಯಾರೂ, ಏನನ್ನೂ’ ಪ್ರಸಾರ, ಪ್ರಚಾರ ಮಾಡದಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಮೊದಲ ಹಂತದಲ್ಲೇ 10, ನಂತರ ಸುಮಾರು 45 ಮಾಧ್ಯಮಗಳು ಸದರಿ ಪ್ರಕರಣಗಳಲ್ಲಿ ಯಾವುದೇ ಯಾವುದೇ ಮಾನಹಾನಿ ಮಾಹಿತಿಯನ್ನು ಜನರಿಗೆ ಪ್ರಚಾರ ಮಾಡದಂತೆ ನ್ಯಾಯಾಲಯವನ್ನು ಕೋರಿದ್ದರು. ಅದಕ್ಕೆ ನ್ಯಾಯಾಲಯ ಒಪ್ಪಿಗೆಯನ್ನೂ ನೀಡಿದೆ ಎಂಬ ಮಾಹಿತಿ ಇದೆ.

‘ಸಮಾಚಾರ’ಕ್ಕೆ ಮಠದ ಪರ ವಕೀಲರು ಕಳುಹಿಸಿದ ದೂರಿನ ಪ್ರತಿಯಲ್ಲಿ, ಮಠ ಹಾಗೂ ಸ್ವಾಮಿ ನ್ಯಾಯಾಲಯದ ಮುಂದಿಟ್ಟ ಕೋರಿಕೆಗಳು. 
‘ಸಮಾಚಾರ’ಕ್ಕೆ ಮಠದ ಪರ ವಕೀಲರು ಕಳುಹಿಸಿದ ದೂರಿನ ಪ್ರತಿಯಲ್ಲಿ, ಮಠ ಹಾಗೂ ಸ್ವಾಮಿ ನ್ಯಾಯಾಲಯದ ಮುಂದಿಟ್ಟ ಕೋರಿಕೆಗಳು. 

“ಪ್ರಭಾವಿ ವ್ಯಕ್ತಿಗಳಿಗೆ, ಸಂಸ್ಥೆಗಳು ಕೆಳಹಂತದ ನ್ಯಾಯಾಲಯಗಳಿಗೆ ಹೋಗಿ ಮಾಧ್ಯಮಗಳ ವಿರುದ್ಧ, ಸರಕಾರಿ ಸಾಕ್ಷಿದಾರರ ವಿರುದ್ಧ ಸಾರ್ವಜನಿಕ ಮಾಹಿತಿ ಹಂಚದಂತೆ ತಡೆ ತಂದುಬಿಡುತ್ತಾರೆ. ನ್ಯಾಯಾಲಯಗಳೂ ಕೂಡ ಹೇಳಿಕೆ ದಾಖಲಿಸಿಕೊಳ್ಳದೆ ಅವಕಾಶ ನೀಡುತ್ತವೆ. ಪರಿಣಾಮ ಸಾರ್ವಜನಿಕರಿಗೆ ಮಹತ್ವದ ಬೆಳವಣಿಗೆಯ ಮಹತ್ವದ ಮಾಹಿತಿ ತಲುಪುವುದು ನಿಂತು ಹೋಗುತ್ತದೆ. ಪಂಬಾಜ್‌ನಲ್ಲಿ ಇಂತಹ ಕಾನೂನಿನ ಅವಕಾಶದ ವಿರುದ್ಧ ತೀರ್ಪು ಹೊರಬಿದ್ದಿದೆ ಎಂದು ಕೇಳಿದ್ದು ನೆನಪು. ಕರ್ನಾಟಕದಲ್ಲಿ ಮಾಧ್ಯಮ ಸಂಸ್ಥೆಗಳಾಗಲೀ, ಪತ್ರಕರ್ತರ ಬ್ಯಾನರ್‌ ಸಂಘಟನೆಗಳಾಗಲೀ ನ್ಯಾಯಾಲಯದ ಮೊರೆ ಹೋಗಬೇಕಿದೆ. ಇದು ಮಾಧ್ಯಮ ಸ್ವಾತಂತ್ರ್ಯ ಮಾತ್ರವಲ್ಲ, ವ್ಯಕ್ತಿ ಸ್ವಾತಂತ್ರ್ಯದ ಹರಣ,’’ ಎನ್ನುತ್ತಾರೆ ಕರ್ನಾಟಕ ಹೈಕೋರ್ಟ್‌ ಹಾಗೂ ಕಾನೂನು ಸಂಬಂಧಿತ ಸುದ್ದಿಗಳನ್ನು ದಿನ ಪತ್ರಿಕೆಯೊಂದಕ್ಕೆ ಬರೆದುಕೊಂಡು ಬಂದಿರುವ ಹಿರಿಯ ಪತ್ರಕರ್ತರೊಬ್ಬರು.

ಇನ್ನೊಂದೆಡೆ, ಶನಿವಾರ ತಮ್ಮ ಒಂದು ಕಾಲದ ಶಿಷ್ಯ, ನಂತರ ಸರಕಾರದ ಪರ ಸಾಕ್ಷಿದಾರನಾದ ಅಭಿರಾಮ್‌ ಗಣಪತಿ ಹೆಗಡೆ ವಿರುದ್ಧ ನ್ಯಾಯಾಲಯಕ್ಕೆ ‘ಒರಿಜಿನಲ್ ಸೂಟ್’ ಸಲ್ಲಿಸಿದ್ದಾರೆ. ಇದರ ಬೇಡಿಕೆಗಳೇನು ಎಂಬ ಮಾಹಿತಿ ಇನ್ನಷ್ಟೆ ಹೊರಬರಬೇಕಿದೆ.

37ನೇ ಎಸಿಎಂಎಂ ನ್ಯಾಯಾಲಯದಲ್ಲಿ ಶ್ರೀಮದ್‌.................................................................................. ಸ್ವಾಮಿಜಿ ಸಲ್ಲಿಸಿದ ಒರಿಜಿನಲ್ ಸೂಟ್‌ನ ಮಾಹಿತಿ. 
37ನೇ ಎಸಿಎಂಎಂ ನ್ಯಾಯಾಲಯದಲ್ಲಿ ಶ್ರೀಮದ್‌.................................................................................. ಸ್ವಾಮಿಜಿ ಸಲ್ಲಿಸಿದ ಒರಿಜಿನಲ್ ಸೂಟ್‌ನ ಮಾಹಿತಿ. 
/ಎಸಿಎಂಎಂ ನ್ಯಾಯಾಲಯಗಳ ವೆಬ್‌ಸೈಟ್‌. 

ಜಾಮೀನು ರದ್ದು ಕೋರಿ:

ಸುಮಾರು 15 ವರ್ಷದ ಹುಡುಗಿ ಮೇಲೆ ರಾಮಚಂದ್ರಾಪುರ ಮಠದ ತಮ್ಮ ಪೀಠದ ಮೇಲೆಯೇ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಶ್ರೀಮದ್‌ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಜಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಅದು ನಾನಾ ಮಾಧ್ಯಮಗಳಲ್ಲಿ ವರದಿಯಾದ ನಂತರ ಸ್ವಾಮಿ ಹೀಗೆ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ತನಿಖಾ ಸಂಸ್ಥೆ ತಮ್ಮ ವಿರುದ್ಧ ಹೊರಿಸಿರುವ ಆಪಾದನೆಗಳು ತಮ್ಮ ಮಾನಹಾನಿ ಮಾಡುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ. ಒಂದು ಕಡೆ ವಾರ್ತಾವಾಚಕರಿಂದ ಹಿಡಿದು ಹೆಂಚ್‌ಮನ್‌ವರೆಗೆ ತಮ್ಮ ವಿರೋಧಿ ಪಡೆಯನ್ನು ಗುರುತಿಸಿರುವ ಸ್ವಾಮಿಗಳು, ತಮ್ಮ ಒಂದು ಕಾಲದ ಶಿಷ್ಯನ ಮಾತಿಗೂ ಕತ್ತರಿ ಹಾಕಲು ನಿರ್ಧಸಿದ್ದಾರೆ. ಅದು ನ್ಯಾಯಾಲಯದ ಒಳಗೆ.

ಹೊರಗೆ, ಸರಕಾರದ ಪರ ಸಾಕ್ಷೀದಾರನಾಗಿರುವ ಅಭಿರಾಮ್ ಗಣಪತಿ ಹೆಗಡೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆಯ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಬೆದರಿಕೆಗಳೂ ಬಂದಿವೆ ಎಂದು ಅಭಿರಾಮ್‌ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸುತ್ತಿದ್ದು, ಆರೋಪಿಗಳು ಪ್ರಬಲರಾಗಿರುವುದರಿಂದ ಜಾಮೀನು ರದ್ದುಗೊಳಿಸುವಂತೆ ಕೋರಲಾಗಿದೆ.

ಅಭಿರಾಮ್‌ ಗಣಪತಿ ಹೆಗಡೆ ಅಫಿಡವಿಟ್‌. 
ಅಭಿರಾಮ್‌ ಗಣಪತಿ ಹೆಗಡೆ ಅಫಿಡವಿಟ್‌. 

26 ವರ್ಷದ ಅಭಿರಾಮ್ ತೇಜೋವಧೆ ಆರಂಭದ ನಂತರ ಆತನ ಕುಟುಂಬ ಕೂಡ ಈಗ ಅನಿವಾರ್ಯವಾಗಿ ಹೊರಬಂದಿದೆ. ಅಭಿರಾಮ್ ತಾಯಿ, ತ್ರಿವೇಣಿ ಹೆಗಡೆ, ‘ನನ್ನ ಮಗ ಸಂಸ್ಕಾರ ಕಲಿತಿದ್ದು ಮಠದ ವಾತಾವರಣದಲ್ಲಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇವರ ಕುಟುಂಬದ ಮೂಲಗಳ ಪ್ರಕಾರ, ಅಭಿರಾಮ್ ಕುಟುಂಬಸ್ಥರು ರಾಮಚಂದ್ರಾಪುರ ಮಠಕ್ಕೆ ಹೋಗಿ, ‘ತಮಗೆ ಶಾಪ ಹಾಕದಂತೆ’ ‘ತಪ್ಪು ಕಾಣಿಕೆ’ ಕಟ್ಟಿ ಬರುವ ಸಿದ್ಧತೆಯಲ್ಲಿದ್ದಾರೆ. ‘ಸಮಾಚಾರ’ ಜತೆ ಮಾತನಾಡಿದ್ ಅಭಿರಾಮ್, “ನಮ್ಮ ಸಮುದಾಯದಲ್ಲಿ ಊರಿಗೆ ಬಂದ ಸ್ವಾಮಿಗಳು ತಮ್ಮ ಕುಟುಂಬಕ್ಕೆ ತೀರ್ಥ ಕೊಡಲಿಲ್ಲ ಎಂದು ನ್ಯಾಯಾಲಯಕ್ಕೆ ಹೋಗಿರುವ ಇತಿಹಾಸ ಇದೆ. ಹೀಗಿರುವಾಗ, ನನ್ನ ಹಾಗೂ ಕುಟುಂಬದ ವಿರುದ್ಧ ರಕ್ತ ಸಂಬಂಧಿಗಳೇ ತಿರುಗಿ ಬೀಳುವುದರಲ್ಲಿ ಆಶ್ಚರ್ಯ ಏನಿಲ್ಲ,’’ ಎಂದರು.

‘ಇನ್ ದಿ ನೇಮ್ ಆಫ್ ರಾಮ’: ನ್ಯಾಯಾಲಯದ ಅಂಗಳಕ್ಕೆ ಸ್ವಾಮಿಯ ‘ಸ್ಟಾರ್ ವಿಟ್ನೆಸ್‌’ ಅಭಿರಾಮ!

“ನನಗೆ ಅಪ್ಪ, ಅಮ್ಮ, ಅಕ್ಕಂದಿರ ನೈತಿಕ ಬೆಂಬಲ ಇದೆ. ನಾನು ಸರಕಾರದ ಪರವಾಗಿ ಸಾಕ್ಷಿ ನುಡಿಯಲು ಒಪ್ಪಿಕೊಂಡವನು. ಅವರು ನನ್ನ ವಿರುದ್ಧ ಏನೇ ದಾಳಿ ನಡೆಸಿದರೂ ಅದು ಸರಕಾರದ ಅಧಿಕೃತ ಸಾಕ್ಷಿ ನಾಶ ಮಾಡುವ ಯತ್ನ ಅಷ್ಟೆ. ಎಷ್ಟೋ ಜನ ಭಕ್ತಿಯಿಂದಷ್ಟೆ ದಾಳಿಗೆ ಇಳಿದಿದ್ದಾರೆ. ಅವರಿಗೆ ಕಾನೂನಿನ ಅರಿವಿದ್ದಿದ್ದರೆ ಈ ಮಟ್ಟಕ್ಕೆ ಇಳಿಯುತ್ತಿರಲಿಲ್ಲ,’’ ಎಂದು ಹೇಳಿದರು.

ಸ್ವಾಮಿಜಿ ಕಡೆಯಿಂದ ತಮ್ಮ ವಿರುದ್ಧ ಸಲ್ಲಿಕೆಯಾದ ‘ಒರಿಜಿನಲ್ ಸೂಟ್‌’ ಬಗ್ಗೆ ಮಾತನಾಡಿದ ಅಭಿರಾಮ್, “ಕೊನೆಗೂ ಮುಖಾಮುಖಿ ಹೀಗಾಯಿತು. ಸತ್ಯ ಗೆಲ್ಲಲಿ,’’ ಎಂದರು.

ಈ ಸುದ್ದಿಗಾಗಿ ಶ್ರೀಮದ್‌ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಸ್ವಾಮಿಜಿಯನ್ನು ಸಂಪರ್ಕಿಸಲು ‘ಸಮಾಚಾರ’ ಪ್ರಯತ್ನಿಸಿತಾದರೂ, ಅವರು ಮಾತಿಗೆ ಲಭ್ಯರಾಗಲಿಲ್ಲ.