ಲಿಟ್‌ಫೆಸ್ಟ್ ದುಡ್ಡು ಕಲ್ಲಡ್ಕ ಶಾಲೆಗೆ ಡೈವರ್ಟು: ನಂಬಿ, ಇದು ಎಸ್‌.ಎಲ್. ಭೈರಪ್ಪರ ಹಠಾತ್ ನಿರ್ಧಾರ! 
COVER STORY

ಲಿಟ್‌ಫೆಸ್ಟ್ ದುಡ್ಡು ಕಲ್ಲಡ್ಕ ಶಾಲೆಗೆ ಡೈವರ್ಟು: ನಂಬಿ, ಇದು ಎಸ್‌.ಎಲ್. ಭೈರಪ್ಪರ ಹಠಾತ್ ನಿರ್ಧಾರ! 

ಇಷ್ಟೂ ದಿನ ‘ಸಾಹಿತ್ಯಲೋಕ’ವನ್ನು ಹೀಗಳೆಯುತ್ತ ಬಂದ ಕರ್ನಾಟಕದ ಬಲಪಂಥೀಯರು ಮಂಗಳೂರಿನಲ್ಲಿ ಸಾಹಿತ್ಯೋತ್ಸವ ಆಯೋಜಿಸುವ ಮೂಲಕ ಅಧಿಕೃತ ಪರಿಚಾರಿಕೆ ಆರಂಭಿಸಿದ್ದಾರೆ. 

‘ಮಂಗಳೂರು ಸಾಹಿತ್ಯೋತ್ಸವ’ದ ಹೆಸರಿನಲ್ಲಿ ಬಂದರು ನಗರಿ ಮಂಗಳೂರಿನಲ್ಲಿ ಬಲಪಂಥೀಯ ಬುದ್ಧಿಜೀವಿಗಳು ತಮ್ಮ ಮಾದರಿಯ ಪರಿಚಾರಿಕೆಯನ್ನು ಜನರಿಗೆ ಪರಿಚಯಿಸಿದ್ದಾರೆ. ಕಳೆದ ಎರಡು ದಿನಗಳ ಕಾಲ ನಡೆದ ಲಿಟ್‌ ಫೆಸ್ಟ್‌ನಲ್ಲಿ ಹಿರಿಯ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅವರಿಗೆ ಜೀವಮಾನದ ಸಾಧನೆಗಾಗಿ ಒಂದು ಲಕ್ಷ ರೂಪಾಯಿಯ ಪ್ರಶಸ್ತಿಯನ್ನು ಆಯೋಜಕರು ನೀಡಿದರು. ಈ ಪ್ರಶಸ್ತಿಯ ಮೊತ್ತವನ್ನು ಭೈರಪ್ಪ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರಕ್ಕೆ ದಾನ ಮಾಡಿದರು ಎಂಬುದು ಹೈಲೈಟ್‌.

ಮಂಗಳೂರು ಲಿಟರೇಚರ್‌ ಫೌಂಡೇಷನ್‌ ಹೆಸರಿನಲ್ಲಿ ಕಾರ್ಯಕ್ರಮ ನಡೆಯಿತಾದರೂ, ಇಂತಹದೊಂದು ಅದ್ದೂರಿ ಸಾಹಿತ್ಯ ಪರಿಚಾರಿಕೆಯ ಹಿನ್ನೆಲೆಯಲ್ಲಿ ಇದ್ದದ್ದು ಆರ್‌ಎಸ್‌ಎಸ್‌. ಸಹಜವಾಗಿಯೇ ಈ ಬಲಪಂಥೀಯ ವಿಚಾರ ಪ್ರಾಯೋಜಿತ ಸಾಹಿತ್ಯೋತ್ಸವದಲ್ಲಿ ಗಂಭೀರ ಸಾಹಿತ್ಯ ಚರ್ಚೆ ಬಿಟ್ಟು, ಹಿಂದೂವಾದವನ್ನು ಕರಾವಳಿಯಲ್ಲಿ ಗಟ್ಟಿಗೊಳಿಸುವ ಪ್ರಯತ್ನದ ಮಾತುಕತೆಗಳು ನಡೆದಿದೆ. ಭಾರತೀಯ ಸಂಸ್ಕೃತಿಯೇ ದೇಶದ ಎಲ್ಲಾ ಕಡೆಯಲ್ಲೂ ಇರುವುದು ಎಂದು ಹೇಳುವ ಮೂಲಕ ಭೈರಪ್ಪ ಬಹುಸಂಸ್ಕೃತಿಯ ಬಹುತ್ವದ ಭಾರತವನ್ನು ಏಕಸಂಸ್ಕೃತಿಯ ‘ರಾಷ್ಟ್ರ’ವಾದದ ಕಡೆಗೆ ಎಳೆಯುವ ಮಾತನ್ನಾಡಿದ್ದಾರೆ. ಈ ಮೂಲಕ ಹಿಂದೂ ಚಿಂತನೆ ಮಾತ್ರ ಶ್ರೇಷ್ಠ ಎಂಬ ‘ಶ್ರೇಷ್ಠತೆಯ ವ್ಯಸನ’ ಇಲ್ಲೂ ಮುಂದುವರಿದಿದೆ.

“ದಕ್ಷಿಣ ಕನ್ನಡಕ್ಕೆ ಎಡಪಂಥೀಯ ಚಿಂತನೆ ಬೇಕಿಲ್ಲ. ಎಡಪಂಥೀಯ ಚಿಂತನೆ ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೇ ಅಪಾಯ” ಎಂದಿರುವ ಭೈರಪ್ಪ ಮತ್ತೊಮ್ಮೆ ತಮ್ಮ ‘ಹಿರಿತನ’ದ ಅಸಹಿಷ್ಣುತೆಯನ್ನು ಹೊರಹಾಕಿದ್ದಾರೆ. ಎಡಪಂಥೀಯ ಚಿಂತನೆ ಬೇಡ ಎನ್ನುವ ಮೂಲಕ ದಕ್ಷಿಣ ಕನ್ನಡದಲ್ಲಿ ಬಲಪಂಥೀಯ ಚಿಂತನೆಯನ್ನು ಗಟ್ಟಿಗೊಳಿಸಬೇಕು ಎಂಬ ತಮ್ಮ ಸಾಹಿತ್ಯದ ಮೂಲತತ್ವವನ್ನು ಭೈರಪ್ಪ ಈ ವೇದಿಕೆ ಮೂಲಕ ಹೊರಹಾಕಿದ್ದಾರೆ.

ಕಳೆದ ವರ್ಷ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರ ಶ್ರೀರಾಮ ಶಾಲೆಗೆ ಕೊಲ್ಲೂರು ದೇವಾಲಯದಿಂದ ನೀಡಲಾಗುತ್ತಿದ್ದ ಹುಂಡಿ ಕಾಸನ್ನು ನಿಲ್ಲಿಸಲಾಗಿತ್ತು. ಶ್ರೀರಾಮ ಶಾಲೆ ಅನುದಾನ ರಹಿತ ಶಾಲೆಯಾಗಿದ್ದು, ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಕೊಲ್ಲೂರು ದೇವಾಲಯದಿಂದ ಈ ಶಾಲೆಗೆ ಅನುದಾನ ನೀಡುವುದು ಸರಿಯಲ್ಲ ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಇದನ್ನೇ ಚುನಾವಣೆಯ ವಿಷಯವಾಗಿಸಿಕೊಂಡಿದ್ದ ಬಿಜೆಪಿ ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ವಿರುದ್ಧವಾಗಿ ಬಿಸಿಯೂಟದ ವಿಚಾರವನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡಿತ್ತು. ಮಕ್ಕಳ ಬಾಯಲ್ಲಿ ಸರಕಾರವನ್ನು ಬೈಸಿತ್ತು.

ಆದರೆ, ಹೊಸ ಸರಕಾರ ಬಂದ ನಂತರ ಈ ಶಾಲೆಗೆ ರಾಜ್ಯ ಸರಕಾರದ ಅಕ್ಷರ ದಾಸೋಹ ಯೋಜನೆಯಡಿಯಲ್ಲೇ ಬಿಸಿಯೂಟಕ್ಕೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಲಿಟ್‌ ಫೆಸ್ಟ್‌ಗೂ ಮುನ್ನಾ ಶ್ರೀರಾಮ ಶಾಲೆಗೆ ಭೇಟಿ ನೀಡಿದ್ದ ಭೈರಪ್ಪ ಸಮಾರಂಭದಲ್ಲಿ ಮಾತನಾಡುತ್ತಾ, “ಶಾಲೆಗೆ ನೀಡುತ್ತಿದ್ದ ಊಟ ಕಸಿದುಕೊಂಡ ಸರಕಾರ ದೊಡ್ಡ ತಪ್ಪು ಮಾಡಿದೆ. ಆ ಶಾಲೆ ನೋಡಿದ ಕೂಡಲೇ ಸಹಾಯ ಮಾಡಬೇಕು ಎಂಬ ಮನಸ್ಸಾಯಿತು. ಆದರೆ, ಚೆಕ್‌ ಬುಕ್‌ ತಂದಿರಲಿಲ್ಲ. ಹೀಗಾಗಿ ನನಗೆ ಸನ್ಮಾನ ಮಾಡಿ ನೀಡಿರುವ ಚೆಕ್‌ನ ಮೊತ್ತವನ್ನು ಕಲ್ಲಡ್ಕ ಶಾಲೆಗೆ ನೀಡುತ್ತೇನೆ” ಎಂದು ಹೇಳಿದರು. ಭೈರಪ್ಪ ತಾವು ಹಠಾತ್ ತೆಗೆದುಕೊಂಡ ನಿರ್ಧಾರ ಇದು ಬಿಂಬಿಸುವ ಪ್ರಯತ್ನವನ್ನೂ ಮಾಡಿದರು.

ಈ ಹಿಂದೆ ಅವರಿಗೆ ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಬಂದ ಸಂದರ್ಭದಲ್ಲಿ ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಭೈರಪ್ಪ ಅವರಿಗೆ 5 ಲಕ್ಷ ರೂಪಾಯಿಯ ನಗದು ಬಹುಮಾನ ಘೋಷಿಸಿತ್ತು. ಈ ಬಹುಮಾನದ ಹಣವನ್ನು ಕನ್ನಡ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಬಳಸಿ ಎಂದು ಭೈರಪ್ಪ ಹೇಳಿದ್ದರು. ಆದರೆ, ಆಗ ಅತಂತ್ರವಾಗಿದ್ದ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಸರಕಾರ ಈ ಹಣವನ್ನು ಏನು ಮಾಡಿತೋ ಇಂದಿಗೂ ಗೊತ್ತಿಲ್ಲ.

ಇದೆಲ್ಲಾ ಏನೇ ಇರಲಿ, ಇಷ್ಟೂ ದಿನ ‘ಸಾಹಿತ್ಯಲೋಕ’ವನ್ನು ಹೀಗಳೆಯಲು ನಿಂತಿದ್ದ ಕರ್ನಾಟಕದ ಬಲಪಂಥೀಯರು ಮಂಗಳೂರಿನಲ್ಲಿ ಸಾಹಿತ್ಯೋತ್ಸವ ಆಯೋಜಿಸುವ ಮೂಲಕ ತಮ್ಮದೇ ಮಾದರಿಯ ಸಾಹಿತ್ಯ ‘ಪರಿಚಾರಿಕೆ’ಗೆ ಇಳಿದಿದ್ದಾರೆ.