samachara
www.samachara.com
‘ಹೆದರಿಸಲು ಬರಬೇಡಿ’: ಅಮೆರಿಕಾದ ಟ್ರಂಪ್‌ಗೆ ಇರಾನ್‌ ಬಹಿರಂಗ ಎಚ್ಚರಿಕೆ, ಯಾಕೆ?
COVER STORY

‘ಹೆದರಿಸಲು ಬರಬೇಡಿ’: ಅಮೆರಿಕಾದ ಟ್ರಂಪ್‌ಗೆ ಇರಾನ್‌ ಬಹಿರಂಗ ಎಚ್ಚರಿಕೆ, ಯಾಕೆ?

ಈ ಬಾರಿ ತನ್ನದೇ ಆದ ಮಿತ್ರಕೂಟವನ್ನು ಬೆನ್ನಿಗಿಟ್ಟುಕೊಂಡಿರುವ ಇರಾನ್‌, ಟ್ರಂಪ್‌ ಅಬ್ಬರದ ಮುಂದೆ ಎದ್ದು ನಿಲ್ಲುತ್ತೇನೆ ಎಂದು ಗುಟುರು ಹಾಕಿದೆ. ತನ್ನ ಸಾಮಾರ್ಥ್ಯ ತೋರಿಸುತ್ತೇನೆ ಎಂದಿರುವ ಇರಾನ್‌ ಯುದ್ಧ ಕಸರತ್ತುಗಳನ್ನೂ ಆರಂಭಿಸಿದೆ.

ಹೊಂಬಣ್ಣದ ವಿಗ್, ಕೆಂಪು ಟೈ ಮತ್ತು ದೊಗಳೆ ನೀಲಿ ಸೂಟ್ ತೊಟ್ಟಿದ್ದ ಆ ದಢೂತಿ ವ್ಯಕ್ತಿ ಸ್ಟೇಜ್‌ ಹತ್ತಿದ. ಹತ್ತಿದವನೇ ಸುತ್ತ ನೆರೆದಿದ್ದ ಜನಸಂದಣಿಯನ್ನು ಉದ್ದೇಶಿಸಿ ಚುನಾವಣಾ ಭಾಷಣವೋ ಎಂಬಂತೆ ಪ್ರಚಾರ ಆರಂಭಿಸಿದ. ಆದರೆ ಇದೊಂದು ನೈಜ ಪ್ರಚಾರ ಸಭೆಯಾಗಿರಲಿಲ್ಲ ಅಷ್ಟೇ!

ಇದು ಇಷ್ಟಕ್ಕೇ ನಿಲ್ಲಲಿಲ್ಲ. ದಢೂತಿ ವ್ಯಕ್ತಿ ವಾಹನ ದಟ್ಟಣೆಯತ್ತ ನಗು ಬೀರಿದ. ಅವರತ್ತ ಕೈ ಬೀಸಿದ. ಅಷ್ಟೊತ್ತಿಗೆ ಸ್ಟೇಜ್‌ ಮೇಲಿದ್ದವನಿಗೆ ಸುದ್ದಿಯೊಂದನ್ನು ತಲುಪಿಸಲು ಮತ್ತೊಬ್ಬ ಸ್ಟೇಜ್‌ ಹತ್ತಿದ. ಈ ಎಲ್ಲಾ ಅಣಕು ಪ್ರದರ್ಶನಗಳು ನಡೆದಿದ್ದು ಅಮೆರಿಕಾದಲ್ಲಲ್ಲ. ಬದಲಿಗೆ ದೂರದ ಇರಾನ್‌ ರಾಜಧಾನಿ ತೆಹ್ರಾನ್‌ನಲ್ಲಿ ಹೀಗೊಂದು ದೃ‍ಶ್ಯಾವಳಿಗಳು ಭಾನುವಾರ ಕಳೆಗಟ್ಟಿತ್ತು. ಈ ಮೂಲಕ ಡೊನಾಲ್ಡ್‌ ಟ್ರಂಪ್‌ ಎಂಬ ಅಮೆರಿಕಾದ ಅಧ್ಯಕ್ಷರ ವಿಡಂಬನೆ ಅಲ್ಲಿ ಕಾಣಿಸಿತು.

ಅಲ್ಲಿ ನೆರೆದಿದ್ದ ಜನರು ಟ್ರಂಪ್‌ರನ್ನು ಎಷ್ಟು ಸಾಧ್ಯವೋ ಅಷ್ಟು ಮರ್ಯಾದೆ ತೆಗೆಯಲೇಬೇಕು ಎಂದು ನಿರ್ಧರಿಸಿದ್ದರು. ಅದಕ್ಕಾಗಿ ಅವರ ಮುಖಕ್ಕೆ ಹಿಟ್ಲರ್ ಮೀಸೆ ಅಂಟಿಸಿದ ಭಿತ್ತಿಪತ್ರಗಳನ್ನು ಹಿಡಿದಿದ್ದರು. ಕೆಎಫ್‌ಸಿ ಸೇರಿದಂತೆ ಅಮೆರಿಕಾ ಮೂಲದ ಕಂಪನಿಗಳ ವಿರುದ್ಧ ಸಮರ ಸಾರಿದ್ದರು. ಹೀಗೆ ಒಬ್ಬೊಬ್ಬರೂ ಒಂದೊಂದು ತೆರನಾಗಿ ತಮ್ಮ ವಿರೋಧವನ್ನು ದಾಖಲಿಸುತ್ತಿದ್ದರು. ಇಂಥಹದ್ದೊಂದು ಪ್ರತಿಭಟನೆ 39ನೇ ‘ವಿದ್ಯಾರ್ಥಿಗಳ ದಿನ’ ಸಂಭ್ರಮಾಚರಣೆಯಿಂದ ಕೆಲವೇ ಮೀಟರ್‌ಗಳ ದೂರದಲ್ಲಿ ನಡೆಯುತ್ತಿತ್ತು.

ಅದು ವಿದ್ಯಾರ್ಥಿಗಳ ದಿನ’:

ಪ್ರತಿ ವರ್ಷ ಇರಾನ್‌ ಸರಕಾರವೇ ‘ವಿದ್ಯಾರ್ಥಿಗಳ ದಿನ’ವನ್ನು ಆಚರಿಸುತ್ತದೆ. ತನ್ನ ಇತಿಹಾಸವನ್ನು ನೆನಪಿಸುವ ದಿನವದು. 1979, ನವೆಂಬರ್‌ 4ರಂದು ಅಯಾತೊಲ್ಲಾ ರುಹೊಲ್ಲಾ ಖೊಮೆನಿಯನ್ನು ಬೆಂಬಲಿಸಿದ್ದ ಯುವ ಸಮುದಾಯವೊಂದು ಅಮೆರಿಕಾದ ರಾಯಭಾರ ಕಚೇರಿಯ ಗೇಟುಗಳನ್ನು ಮುರಿದು ಒಳ ನುಗ್ಗಿ 52 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು. ಬರೋಬ್ಬರಿ 444 ದಿನ ಈ ಪ್ರಹಸನ ನಡೆದಿತ್ತು. ಅವತ್ತೇ ಅಮೆರಿಕಾದ ಜತೆಗಿನ ತೆಹ್ರಾನ್‌ ಸಂಬಂಧಗಳು ಸಂಪೂರ್ಣವಾಗಿ ನಿಂತು ಹೋಗಿದ್ದವು. ಅಮೆರಿಕಾ ಬೆಂಬಲಿತ ಶಾ ಆಡಳಿತ ಕೊನೆಯಾಗಿತ್ತು. ಪರಿಣಾಮ ಇರಾನ್‌ ‘ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌’ ಎಂದು ಮರುನಾಮಕರಣಗೊಂಡು ಹೊಸ ಅವತಾರದಲ್ಲಿ ಗುರುತಿಸಿಕೊಂಡಿತ್ತು.

1979, ನವೆಂಬರ್‌ 4 ರಂದು ತೆಹ್ರಾನ್‌ನಲ್ಲರುವ ಅಮೆರಿಕಾ ರಾಯಭಾರ ಕಚೇರಿಯೊಳಕ್ಕೆ ನುಗ್ಗಿದ್ದ ಇರಾನ್‌ ವಿದ್ಯಾರ್ಥಿಗಳ ದಂಡು
1979, ನವೆಂಬರ್‌ 4 ರಂದು ತೆಹ್ರಾನ್‌ನಲ್ಲರುವ ಅಮೆರಿಕಾ ರಾಯಭಾರ ಕಚೇರಿಯೊಳಕ್ಕೆ ನುಗ್ಗಿದ್ದ ಇರಾನ್‌ ವಿದ್ಯಾರ್ಥಿಗಳ ದಂಡು
/ವಿಕಿಪೀಡಿಯಾ

ಈ ವರ್ಷ ಮತ್ತೆ ಅದೇ ಹಳೆ ಅಮೆರಿಕಾ ರಾಯಭಾರ ಕಚೇರಿ ಇದ್ದ ಜಾಗದಲ್ಲಿ ಅಂದಿನ ಘಟನೆಯ ವರ್ಷಾಚರಣೆ ನಡೆಯಿತು. ಅದರ ಸಮೀಪವೇ ಅಮೆರಿಕಾ ಆರ್ಥಿಕ ದಿಗ್ಭಂಧನಗಳನ್ನು ಮರುವಿಧಿಸಲು ಇದ್ದ ಡೆಡ್‌ಲೈನ್‌ನ ಕೊನೆಯ ಗಂಟೆಗೂ ಮೊದಲು ಈ ಪ್ರತಿಭಟನೆ ನಡೆದಿತ್ತು. 2015ರಲ್ಲೊಮ್ಮೆ ಐತಿಹಾಸಿಕ ಬಹುರಾಷ್ಟ್ರೀಯ ಅಣು ಒಪ್ಪಂದದ ಹಿನ್ನೆಲೆಯಲ್ಲಿ 1979ರ ನಂತರ ಹೇರಿದ್ದ ಆರ್ಥಿಕ ನಿರ್ಬಂಧಗಳನ್ನು ಅಮೆರಿಕಾ ವಾಪಸ್ ಪಡೆದುಕೊಂಡಿತ್ತು. ಇದೀಗ ಸೋಮವಾರ ಮತ್ತೆ ಆ ನಿರ್ಬಂಧಗಳನ್ನು ಅಮೆರಿಕಾ ವಿಧಿಸಿದ್ದು, ಇರಾನ್‌ನಲ್ಲಿ ಟ್ರಂಪ್‌ ವಿರುದ್ಧ ಪ್ರತಿಭಟನೆಗಳು ತಾರಕಕ್ಕೇರಿವೆ. ಇದಕ್ಕೆ ಆಳವಾದ ಕಾರಣಗಳೂ ಇವೆ.

2015ರಲ್ಲಿ ಅಮೆರಿಕಾ ಆರ್ಥಿಕ ನಿರ್ಬಂಧಗಳನ್ನು ಹಿಂತೆಗೆದುಕೊಂಡ ನಂತರ ಇರಾನ್‌ ಅಣು ಒಪ್ಪಂದದ ಸುತ್ತ ಹಲವು ದೇಶಗಳನ್ನು ಒಳಗೊಂಡ ಸುದೀರ್ಘ ಅಂತರಾಷ್ಟ್ರೀಯ ಚರ್ಚೆಯೊಂದು ನಡೆಯುತ್ತಿತ್ತು. ಆದರೆ ಕಳೆದ ಮೇನಲ್ಲಿ ಏಕಾಏಕಿ ಈ ಚರ್ಚೆಯಿಂದ ದೂರ ಉಳಿದ ಟ್ರಂಪ್‌ ಏಕಪಕ್ಷೀಯವಾಗಿ ಇರಾನ್‌ ವಿರುದ್ಧ ಮುಗಿ ಬಿದ್ದಿದ್ದರು. ತಾವೇ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದರು. ಈ ಮೂಲಕ ಇರಾನ್‌ ಇತರ ರಾಷ್ಟ್ರಗಳ ಜತೆ ಬೆಳೆಸಿದ್ದ ಉತ್ತಮ ಸಂಬಂಧವೊಂದನ್ನು ತಿಂಗಳ ಒಳಗೆ ಮುರಿದು ಬೀಳುವಂತೆ ಮಾಡಿದ್ದರು.

ಮೇನಲ್ಲಿ ವಿಧಿಸಿದ ನಿರ್ಬಂಧಗಳನ್ನು ಒಂದು ತೂಕವಾದರೆ ಇದೀಗ ಸೋಮವಾರ ಎರಡನೇ ಸುತ್ತಿನ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಮೊದಲ ಸುತ್ತಿಗೆ ಹೋಲಿಸಿದರೆ ಇದು ಇರಾನ್‌ಗೆ ಮತ್ತಷ್ಟು ಹೊಡೆತ ನೀಡಲಿದೆ. ಸುಮಾರು 700 ವ್ಯಕ್ತಿಗಳು ಮತ್ತು ಸಂಸ್ಥೆಗಳು ನಿರ್ಬಂಧದ ಪಟ್ಟಿಯಲ್ಲಿವೆ. ಇದರಲ್ಲಿ ಶಿಪ್ಪಿಂಗ್‌ ಕಂಫನಿಗಳು, ತೈಲ ಕಂಪನಿಗಳು, ಪ್ರಮುಖ ಬ್ಯಾಂಕ್‌ಗಳು ಇದ್ದು ತನ್ನ ತೈಲವನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಕರಿ ಮಾಡಲೂ ಇದರಿಂದ ಇರಾನ್‌ಗೆ ಕಷ್ಟವಾಗಲಿದೆ. ಈ ಮೂಲಕ ದೇಶವೊಂದರ ಆರ್ಥಿಕ ಬೆನ್ನೆಲುಬುಗಳನ್ನೇ ಮುರಿಯಲು ಟ್ರಂಪ್‌ ಮುಂದಾಗಿದ್ದಾರೆ. 100 ದೊಡ್ಡ ದೊಡ್ಡ ಕಂಪನಿಗಳನ್ನೂ ಇರಾನ್‌ನಿಂದ ವಾಪಸ್‌ ಕರೆಸಿಕೊಳ್ಳಲಾಗುವುದು ಎಂದು ಅಮೆರಿಕಾದ ಸೆಕ್ರಟರಿ ಆಫ್‌ ಸ್ಟೇಟ್‌ ಮೈಕಲ್‌ ಪಾಂಪೇವ್‌ ಘೋಷಿಸಿದ್ದಾರೆ.

ನಮ್ಮನ್ನು ಬೆದರಿಸದಿರಿ:

ಇದರ ಬೆನ್ನಿಗೆ ಇರಾನ್‌ನಲ್ಲಿ ಅಮೆರಿಕಾ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ಜನ್ಮ ತಾಳಿದೆ. ಅದರ ರೂಪವೇ ಭಾನುವಾರದ ರ್ಯಾಲಿ. ಇದರಲ್ಲಿ ಭಾಗವಹಿಸಿದ ಜನರು ಮುಗಿಲೆತ್ತರಕ್ಕೆ ಕೇಳಿಸುವಂತೆ ‘ಅಮೆರಿಕಾಕ್ಕೆ ಸಾವಗಲಿ’ ಎಂದು ಶಾಪ ಹಾಕಿದ್ದಾರೆ.

ಇದೇ ಸಭೆಯಲ್ಲಿ ಮಾತನಾಡಿದ ಇರಾನ್‌ ಮೇಜರ್‌ ಜನರಲ್‌ ಮೊಹಮ್ಮದ್‌ ಅಲಿ ಜಫಾರಿ, “ನಾನು ಅಮೆರಿಕಾ ಮತ್ತು ಅದರ ವಿಲಕ್ಷಣ ಅಧ್ಯಕ್ಷರಿಗೆ ಒಂದು ಮಾತು ಹೇಳಲು ಇಚ್ಛಿಸುತ್ತೇನೆ,” ಎಂದೇ ಮಾತು ಆರಂಭಿಸಿದರು. “ಇರಾನ್‌ಗೆ ಬೆದರಿಗೆ ಹಾಕಬೇಡಿ. ನಿಮ್ಮ ಸೈನಿಕರ [ಮರುಭೂಮಿಯಲ್ಲಿನ] ಭಯಭೀತ ಅಳುವನ್ನು ನಾವು ಇನ್ನೂ ಕೇಳಿಸಿಕೊಳ್ಳುತ್ತಿದ್ದೇವೆ ... ಅಮೆರಿಕದ ಸಮಾಜದಲ್ಲಿ ಎಷ್ಟೋ ಮಂದಿ ನಿಮ್ಮ ಹಳೆಯ ಸೈನಿಕರು ಇಂದಿಗೂ ಪ್ರತಿ ದಿನವೂ ಖಿನ್ನತೆ ಮತ್ತು ಯುದ್ಧಭೂಮಿಯಲ್ಲಿ ಅವರು ಅನುಭವಿಸಿದ ಭೀತಿಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ನೀವು ಚೆನ್ನಾಗಿ ತಿಳಿದಿರುವಿರಿ.” ಹಾಗಾಗಿ ನಮ್ಮನ್ನು ಮಿಲಿಟರಿ ಮೂಲಕ ಬೆದರಿಸಬೇಡಿ ಎಂದು ಅವರು ಗುಡುಗಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ
/ಎಎಫ್‌ಪಿ

ಕಳೆದ ಒಂದು ವರ್ಷದಿಂದ ತಮ್ಮ ದೇಶದ ಮೇಲೆ ಆರ್ಥಿಕ ಯುದ್ಧವನ್ನು ಟ್ರಂಪ್‌ ಹೂಡಿದ್ದಾರೆ ಈ ಮೂಲಕ ದೇಶದ ಆರ್ಥಿಕತೆಯನ್ನು ಹಾಳುಗೆಡವುತ್ತಿದ್ದಾರೆ ಎಂದು ಇರಾನ್‌ ಆರೋಪಿಸುತ್ತಲೇ ಬಂದಿದೆ. ಅಮೆರಿಕಾದ ಈ ತೀರ್ಮಾನ ಹತಾಶ ಪ್ರಯತ್ನ ಎಂದು ಜಫಾರಿ ಕರೆದಿದ್ದಾರೆ. ‘ದೇಶ ಯಾವುದೇ ಹೊಡೆತಕ್ಕೂ ತತ್ತರಿಸುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಅವರು ಹತಾಶರಾಗಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಜಫಾರಿ ಆರೋಪಿಸಿದ್ದಾರೆ.

ಒಂದು ಕಡೆ ಸ್ವತಃ ಇರಾನ್‌ ಆರ್ಥಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ದೇಶದ ಕರೆನ್ಸಿ ಮೌಲ್ಯ ಪಾತಾಳಕ್ಕೆ ಇಳಿದಿದೆ. ಅಧ್ಯಕ್ಷ ಹಸನ್‌ ರೌಹಾನಿ ಆರ್ಥಿಕ ತಂಡ ಒಡೆದ ಮನೆಯಾಗಿದೆ. ಹಲವರನ್ನು ತಂಡದಿಂದ ವಜಾ ಮಾಡಲಾಗಿದೆ, ರಾಷ್ಟ್ರ ವ್ಯಾಪಿ ಬೆಲೆ ಏರಿಕೆ, ಆರ್ಥಿಕ ಹಿಂಜರಿತದ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಇಂಥಹ ಹೊತ್ತಲ್ಲಿ ಇರಾನ್‌ ಸರಕಾರವೇ ಅಮೆರಿಕಾ ವಿರುದ್ಧ ಇಳಿದಿದೆ.

ಹೀಗೊಂದು ನಿರ್ಧಾರದ ಬೆನ್ನಿಗೆ ಅಮೆರಿಕಾ ಮತ್ತು ಇರಾನ್‌ ಇನ್ನೆಂದೂ ಗೆಳೆಯರಾಗಿರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ಇರಾನ್‌ನಲ್ಲಿ ಕೇಳಿ ಬಂದಿವೆ. ಇದೇ ವೇಳೆ ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಖೊಮೇನಿ ‘ಅಮೆರಿಕಾದ ಪತನವನ್ನು ಕಾಣುತ್ತಿದ್ದೇವೆ’ ಎಂದಿದ್ದಾರೆ. ಇದೇ ಮಾತುಗಳನ್ನು ದೇಶದ ಜನರೂ ನಂಬಿಕೊಂಡಿದ್ದಾರೆ.

ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಅಲ್‌ ಖೊಮೇನಿ
ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಅಲ್‌ ಖೊಮೇನಿ
/ಟೈಮ್‌

ಆರ್ಥಿಕ ನಿರ್ಬಂಧಗಳ ಮೂಲಕ ಕತ್ತು ಹಿಸುಕಿ ಹಲವು ದೇಶಗಳನ್ನು ಮುಗಿಸಿದ ಇತಿಹಾಸ ಅಮೆರಿಕಾದ ಬಳಿಯಿದೆ. ಆದರೆ ಭಾರತವೂ, ಫ್ರಾನ್ಸ್‌, ಜರ್ಮನಿ, ಬ್ರಿಟನ್‌, ಚೀನಾ, ಜಪಾನ್‌, ದಕ್ಷಿಣ ಕೊರಿಯಾ ಹೀಗೆ ಒಂದಷ್ಟು ತನ್ನದೇ ಆದ ಮಿತ್ರಕೂಟವನ್ನು ಬೆನ್ನಿಗಿಟ್ಟುಕೊಂಡಿರುವ ಇರಾನ್‌ ಟ್ರಂಪ್‌ ಅಬ್ಬರದ ಮುಂದೆ ಎದ್ದು ನಿಲ್ಲುತ್ತೇನೆ ಎಂದು ಗುಟುರು ಹಾಕಿದೆ. ತನ್ನ ಸಾಮಾರ್ಥ್ಯ ತೋರಿಸುತ್ತೇನೆ ಎಂದಿರುವ ಇರಾನ್‌ ಯುದ್ಧ ಕಸರತ್ತುಗಳನ್ನೂ ಆರಂಭಿಸಿದೆ.

ಹೀಗೊಂದು ಸಂಕೀರ್ಣ ಯುದ್ಧದಲ್ಲಿ ಯಾರು ಜಯಶಾಲಿಯಾಗಲಿದ್ದಾರೆ? ಖೊಮೇನಿಯಾ? ಅಥವಾ ಟ್ರಂಪಾ? ಕಾಲವೇ ಇದಕ್ಕೆಲ್ಲಾ ಉತ್ತರ ನೀಡಲಿದೆ.